ಕಲಿಸದೆ ಪರೀಕ್ಷೆ ಮಾಡುವುದು ನೀಚತನ: ಡಾ.ವಿ.ಪಿ. ನಿರಂಜನಾರಾಧ್ಯ | Vartha Bharati- ವಾರ್ತಾ ಭಾರತಿ

--

ಕಲಿಸದೆ ಪರೀಕ್ಷೆ ಮಾಡುವುದು ನೀಚತನ: ಡಾ.ವಿ.ಪಿ. ನಿರಂಜನಾರಾಧ್ಯ

ಶಾಲೆ ಕೇವಲ ಕಲಿಕೆಗೆ ಜಾಗವಾಗಿರಲಿಲ್ಲ. ಬಿಸಿ ಊಟ, ರೋಗ ನಿರೋಧಕ ಮಾತ್ರೆ ನೀಡುತ್ತಾ ಮಕ್ಕಳನ್ನು ಮಾನಸಿಕವಾಗಿ ಸದೃಢಗೊಳಿಸಿ ಮನೆಯಾಗಿ ಶಾಲೆ ಮಕ್ಕಳಿಗೆ ಬಿಂಬಿತವಾಗಿತ್ತು. ಅವೆಲ್ಲವನ್ನ್ನೂ ವಂಚಿಸಿರುವ ಪರಿಣಾಮ ಇಂದು 9ರಿಂದ 10 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಈ ಎಲ್ಲ ಅನಾಹುತಗಳಿಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ.

- ಡಾ.ವಿ.ಪಿ. ನಿರಂಜನಾರಾಧ್ಯ, ಖ್ಯಾತ ಶಿಕ್ಷಣ ತಜ್ಞ

ಕೊರೋನ ಸಂದರ್ಭದಲ್ಲಿ ಕಳೆದೊಂದು ವರ್ಷದಿಂದ ಶಾಲೆಗಳು ಆರಂಭವಾಗದ ಕಾರಣ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಈ ನಡುವೆ ಆನ್‌ಲೈನ್ ತರಗತಿ, ಶುಲ್ಕ ಪಾವತಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡ ಸೇರಿ ಅನೇಕ ಸಮಸ್ಯೆಗಳನ್ನು ಶಿಕ್ಷಕ ವೃಂದ, ಪೋಷಕ ವರ್ಗ, ವಿದ್ಯಾರ್ಥಿ ಸಮೂಹ ಎದುರಿಸುತ್ತಿದೆ. ಈಗ ಮತ್ತೆ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ಮಕ್ಕಳ ಶೈಕ್ಷಣಿಕ ವರ್ಷದ ಗೊಂದಲದಲ್ಲಿ ಹೇಗೆ ಶುಲ್ಕ ಪಾವತಿಸುವುದು ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ. ಪರೀಕ್ಷೆಗಳನ್ನು ನಡೆಸುವ ಬಗ್ಗೆ ಶಿಕ್ಷಣ ಸಚಿವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಶಿಕ್ಷಣ ಕ್ಷೇತ್ರದ ಅನೇಕ ಪ್ರಶ್ನೆಗಳು, ಗೊಂದಲಗಳ ಕುರಿತು ಖ್ಯಾತ ಶಿಕ್ಷಣ ತಜ್ಞ, ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಸಮಾನ ಗುಣಮಟ್ಟದ ಶಾಲಾ ಶಿಕ್ಷಣ ಸಾರ್ವತ್ರೀಕರಣ ಕಾರ್ಯಕ್ರಮದ ಸೀನಿಯರ್ ಫೆಲೋ ಹಾಗೂ ಮುಖ್ಯಸ್ಥ ಡಾ.ವಿ.ಪಿ. ನಿರಂಜನಾರಾಧ್ಯ ಅವರೊಂದಿಗೆ ‘ವಾರ್ತಾಭಾರತಿ’ ಯುಟ್ಯೂಬ್ ಚಾನೆಲ್‌ಗಾಗಿ ಮಂಜುಳಾ ಮಾಸ್ತಿಕಟ್ಟೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

► ವಾ.ಭಾ.: ಶಾಲೆಯಿಂದ ಹೊರಗುಳಿದ ಮಕ್ಕಳ ಭವಿಷ್ಯದ ಗತಿಯೇನು?

ನಿ: ಕಳೆದೆರಡು ವರ್ಷಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆ ತರಲು, ಬಾಲ್ಯ ವಿವಾಹ, ಬಾಲಕಾರ್ಮಿಕರು, ಮಕ್ಕಳ ಕಳ್ಳ ಸಾಗಣೆ ತಡೆಗೆ ನಾವು ಮಾಡಿದ ಎಲ್ಲ ಪ್ರಯತ್ನಗಳು ಈಗ ಮಣ್ಣುಪಾಲಾಗಿವೆ.

 ಗ್ರಾಮೀಣ ತಳಮಟ್ಟದ ಸಂಶೋಧನೆ ಪ್ರಕಾರ ನಿರಂತರವಾಗಿ 15 ತಿಂಗಳು ಶಾಲೆ ಮುಚ್ಚಿದ ಕಾರಣ ಸಾವಿರಾರು ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ನೂರಾರು ಬಾಲ್ಯ ವಿವಾಹಗಳು ನಡೆದಿವೆ. ಮಕ್ಕಳ ಭಿಕ್ಷಾಟನೆ, ಮಕ್ಕಳ ಕಳ್ಳ ಸಾಗಾಣೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದು, ಇವೆಲ್ಲವೂ ದೊಡ್ಡ ಮಟ್ಟದಲ್ಲಿ ಮಕ್ಕಳನ್ನು ಶಾಲೆಯಿಂದ ದೂರ ಮಾಡಿವೆ. ಅದಕ್ಕಿಂತ ಹೆಚ್ಚಾಗಿ ಮಕ್ಕಳು ಸಂಪೂರ್ಣವಾಗಿ ಕಲಿಕೆಯನ್ನು ಮರೆತಿರುವುದರಿಂದ ಕಲಿಕೆಯ ನಷ್ಟ ಉಂಟಾಗಿದೆ. ಇದರಿಂದಲೇ ಭಾಷೆ, ಗಣಿತ, ಸಾಮರ್ಥ್ಯವನ್ನು ಮಕ್ಕಳು ಮರೆಯುವುದೇ ಅವರು ಶಾಲೆ ತೊರೆಯಲು ದೊಡ್ಡ ಕಾರಣ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ. ಅದಕ್ಕೆ ಶಿಕ್ಷಣ ಇಲಾಖೆ ವಿಶೇಷ ಕಾಳಜಿಯಿಂದ ಎಲ್ಲ ಮಕ್ಕಳನ್ನು ಶಾಲೆಗೆ ತರಲು ಕ್ರಮವಹಿಸಬೇಕು. ವಿವಿಧ ಬಗೆಯ ಯೋಜನೆಗಳ ಮೂಲಕ ಮಕ್ಕಳ ಕಲಿಕೆ ನಿರಂತರವಾಗಿ ನಡೆಯಲು ಕ್ರಮ ಅಗತ್ಯವಾಗಿದೆ. ಇದು ಸರಕಾರಕ್ಕಿರುವ ಬಹುದೊಡ್ಡ ಸವಾಲಾಗಿದೆ.

► ವಾ.ಭಾ.: ಸದ್ಯದ ಶೈಕ್ಷಣಿಕ ಗೊಂದಲದ ಬಗ್ಗೆ ತಮ್ಮ ಅಭಿಪ್ರಾಯವೇನು?

 ನಿ: ರಾಜ್ಯದಲ್ಲಿ ಶಿಕ್ಷಣ ವಲಯವೇ ಗೊಂದಲದ ಗೂಡಾಗಿದೆ. ಪಾಲಕರು ಮತ್ತು ಮಕ್ಕಳು ಆತಂಕಕ್ಕೊಳಗಾಗಿದ್ದಾರೆ. ಅವರಲ್ಲಿ ಮನೋಸ್ಥೈರ್ಯ ತುಂಬುವ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಯಾವುದೇ ಕೆಲಸವಾಗದ ಕಾರಣ ಇಡೀ ಶಿಕ್ಷಣ ಕ್ಷೇತ್ರ ಬಿಕ್ಕಟ್ಟಿನತ್ತ ಸಾಗುತ್ತಿದೆ.

ವಾ.ಭಾ.: ಪಿಯು ಪರೀಕ್ಷೆ ರದ್ದುಗೊಳಿಸಿ, ಎಸೆಸೆಲ್ಸಿ ಪರೀಕ್ಷೆ ನಡೆಸುವುದಾಗಿ ಎಲ್ಲರನ್ನು ಉತ್ತೀರ್ಣ ಮಾಡು ವುದಾಗಿ ಸಚಿವರು ಹೇಳುತ್ತಿದ್ದಾರೆ. ಆದರೆ ತೊಂದರೆ ತೆಗೆದುಕೊಂಡು ಪರೀಕ್ಷೆ ನಡೆಸುವುದಾದರೂ ಏಕೆ?

 ನಿ: ಇದು ಹಾಸ್ಯಾಸ್ಪದವಾಗಿದೆ. ಇಡೀ ದೇಶದಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮದಡಿಯ 10ನೇ ತರಗತಿ ಮಕ್ಕಳ ಪರೀಕ್ಷೆ ರದ್ದು ಮಾಡಿ ಅವರನ್ನು ಕೆಲವು ಮಾನದಂಡಗಳೊಂದಿಗೆ ತೇರ್ಗಡೆ ಮಾಡುತ್ತಿರುವಾಗ ನಮ್ಮ ರಾಜ್ಯದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಿರುವುದು ಹಾಸ್ಯಾಸ್ಪದ ಮತ್ತು ಸಂವಿಧಾನಾತ್ಮಕವಾಗಿ ಸರಿಯಿಲ್ಲ. ಸಂವಿಧಾನದ ಪರಿಚ್ಛೇದ 15 ಯಾವುದೇ ಬಗೆಯ ತಾರತಮ್ಯ ಇರಬಾರದೆಂದು ಹೇಳುತ್ತದೆ. ಆದರೆ ಶಿಕ್ಷಣ ಇಲಾಖೆ ತಾರತಮ್ಯ ಎಸಗುತ್ತಿದ್ದು, ಇದು ಅವಿವೇಕದ ನಿರ್ಧಾರವಾಗಿದೆ. ಈ ನಿರ್ಧಾರದ ಹಿಂದೆ ಯಾವುದೇ ತರ್ಕ, ಸ್ಪಷ್ಟತೆ ಇಲ್ಲ.

ಶಿಕ್ಷಣದ ಹಕ್ಕು ಜಾರಿಗೆ ತಂದ ನಂತರ ನಿರಂತರ ಮತ್ತು ವ್ಯಾಪಕ ವೌಲ್ಯವೌಪನವನ್ನು 1ರಿಂದ 9ನೇ ತರಗತಿ ಮಕ್ಕಳಿಗೆ ನಡೆಸಲಾಗುತ್ತದೆ. ಸಂಚಿತ ಸಾಧನೆ ಅಥವಾ 10 ವರ್ಷಗಳ ಸಂಚಿತ ಸಾಧನೆಯನ್ನು ಆಧಾರವಾಗಿಟ್ಟುಕೊಂಡು ಮಕ್ಕಳನ್ನು ಅಳೆಯಲು ಮಾನದಂಡಗಳಿರುವಾಗ ಅವರಿಗೆ ಪರೀಕ್ಷೆ ನಡೆಸಿ ಅವರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳುತ್ತೇವೆ ಎಂದರೆ ಇದು ನಿಜಕ್ಕೂ ವಿಷಾದನೀಯ. ಇದನ್ನು ಶೈಕ್ಷಣಿಕ ವಲಯದಲ್ಲಿ ಕೆಲಸ ಮಾಡುವ ಯಾರೂ ಒಪ್ಪಲು ಸಾಧ್ಯವಿಲ್ಲ.

► ವಾ.ಭಾ.:ಪರೀಕ್ಷೆ ನಡೆಸುವ ನಿರ್ಧಾರದ ಹಿಂದೆ ವ್ಯಾಪಾರಿ ಮನೋಭಾವ ಇದೆಯೇ?

 ನಿ: ಖಂಡಿತ ಅದನ್ನು ತಳ್ಳಿಹಾಕುವಂತಿಲ್ಲ. ಮಕ್ಕಳನ್ನು ಹೇಗೆ ತೇರ್ಗಡೆ ಮಾಡಬಹುದು ಎಂದು ಎಲ್ಲ ಸಾಧ್ಯತೆ ಬಗ್ಗೆ ನಾವು ಹೇಳುತ್ತಿದ್ದರೂ ಮೊಂಡುತನ ನೋಡಿದರೆ ಇದರಲ್ಲಿ ಲಾಭದ ದೃಷ್ಟಿ ಇರಬಹುದು. ಪರೀಕ್ಷಾ ಶುಲ್ಕ ಸಂಗ್ರಹವು ಇದರ ಹಿಂದಿದೆ ಎನ್ನಬಹುದು. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸುವ ಅವಕಾಶ ಕಲ್ಪಿಸುವ ಬದಲು ಪರೀಕ್ಷೆ ಅಸ್ತ್ರ ಬಳಸಿ ಅವರನ್ನು ಶಿಕ್ಷಣ ವ್ಯವಸ್ಥೆಯಿಂದ ಹೊರ ನೂಕುತ್ತಿರುವ ಕೆಲಸ ಮಾಡುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. 10ನೇ ತರಗತಿಯಲ್ಲಿ ಏನನ್ನು ಕಲಿಬೇಕು ಅದನ್ನು ಎಲ್ಲ ಮಕ್ಕಳಿಗೂ ಕಲಿಸಲು ಒತ್ತು ನೀಡಬೇಕಾಗಿದೆ. ಕೇವಲ ಪರೀಕ್ಷೆ ಮಾಡುವ ಮೂಲಕ ಅವರನ್ನು ಶಿಕ್ಷಣ ವ್ಯವಸ್ಥೆಯಿಂದ ದೂರ ಇಡುವಂತಹ ಕೆಲಸ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರಿಯಲ್ಲ.

► ವಾ.ಭಾ.: ಸಾಂದರ್ಭಿಕವಾಗಿ ಶಿಕ್ಷಣದಲ್ಲಿ ಸಮಾನತೆ ತರಲು ಕೊರೋನ ಒಂದು ರೀತಿಯಲ್ಲಿ ಕಾರಣವಾಯಿತೇ?

ನಿ: ಕೊರೋನ ಕೇವಲ ಸಾಂದರ್ಭಿಕ ಕಾರಣ ಮಾತ್ರ. ಎಲ್ಲ ಮಕ್ಕಳಲ್ಲಿ ಕಲಿಯಲು ಸಾಮರ್ಥ್ಯ ಇರುತ್ತದೆ. ನಾವು ನೀಡುವ ಬೆಂಬಲ, ಅವಕಾಶಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ 100 ಮಕ್ಕಳಲ್ಲಿ 5 ಮಕ್ಕಳು ಬಹಳ ಬುದ್ಧಿವಂತರು, 5 ಬಹಳ ದಡ್ಡರು. ಇನ್ನು 90 ಮಕ್ಕಳಿಗೆ ಯಾವ ರೀತಿಯ ಅವಕಾಶ ಕಲ್ಪಿಸುತ್ತೇವೆಯೋ ಅದರ ಮೇಲೆ ಅವರ ಬೆಳವಣಿಗೆ ಅವಲಂಬಿತವಾಗಿದೆ. 90 ಮಕ್ಕಳು ದಡ್ಡರಲ್ಲ. ಕೇವಲ 5 ಮಕ್ಕಳು ಮಾತ್ರ ಬುದ್ಧಿವಂತರಲ್ಲ. 90 ಮಕ್ಕಳನ್ನು ಪ್ರತಿಭಾವಂತರನ್ನಾಗಿಸಲು ನಾವು ಕ್ರಮ ಕೈಗೊಳ್ಳುತ್ತಿಲ್ಲ. 10ನೇ ತರಗತಿಯ ಮಕ್ಕಳ ಕಲಿಕೆಗೆ ಪೂರಕವಾಗಿ ಪ್ರಯತ್ನಗಳನ್ನು ಮಾಡಬೇಕಾಗಿತ್ತು. ಆದರೆ ನಾವು ಕಲಿಸಲು ಆಸಕ್ತಿ ವಹಿಸದೆ ಪರೀಕ್ಷೆ ಮಾಡಲಿಕ್ಕೆ ಎಲ್ಲ ರೀತಿಯ ಆಸಕ್ತಿ ವಹಿಸುತ್ತಿದ್ದೇವೆ. ತತ್ವಜ್ಞಾನಿ ನೋಮ್ ಚೋಮ್‌ಸ್ಕಿ ಹೇಳುತ್ತಾರೆ ‘ಕೇವಲ ಪರೀಕ್ಷೆ ಮಾಡಲು ಕಲಿಸುವುದು ಬಹಳ ಕೆಟ್ಟ ಕ್ರಮ’ ಅದನ್ನು ವಿಸ್ತರಿಸಿ ಹೇಳುವುದಾದರೆ ಕಲಿಸದೆ ಪರೀಕ್ಷೆ ಮಾಡುವುದು ನೀಚತನವಾಗಿದೆ.

► ವಾ.ಭಾ.: ಆನ್‌ಲೈನ್ ಶಿಕ್ಷಣದಲ್ಲಿರುವ ಗೊಂದಲಗಳ ಕುರಿತು ತಮ್ಮ ಅಭಿಪ್ರಾಯವೇನು?

 ನಿ: ಆನ್‌ಲೈನ್ ಶಿಕ್ಷಣದ ಪ್ರಮುಖ ಉದ್ದೇಶವನ್ನು ನಾವು ಪ್ರಶ್ನಿಸಬೇಕಾಗಿದೆ. ಶಿಕ್ಷಣದ ಮೂಲ ಉದ್ದೇಶ ಸಾಮಾಜೀಕರಣ. ಸಮಾಜದಲ್ಲಿ ಉತ್ತಮ ನಾಗರಿಕನನ್ನು ರೂಪಿಸುವುದು. ಮಕ್ಕಳಲ್ಲಿ ಮಾನವೀಯತೆ ಬೆಳೆಸುವುದು, ಮಕ್ಕಳು ಶಾಲೆಗೆ ಬಂದು ತರಗತಿಯಲ್ಲಿ ಕುಳಿತು ಎಲ್ಲರೊಂದಿಗೆ ಬೆರೆಯಬೇಕು. ಪ್ರೀತಿ, ವಾತ್ಸಲ್ಯ ಕಲಿಯಬೇಕು ಇದು ಸಾಮಾಜೀಕರಣ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಒಂದು ಪ್ರಕ್ರಿಯೆ. ಇದನ್ನು ತಂತ್ರಜ್ಞಾನ ಶಿಕ್ಷಣದಲ್ಲಿ ಕಾಣಲು ಅಸಾಧ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಸ್ವಲ್ಪ ಪೂರಕವೇ ಹೊರತು ಪರ್ಯಾಯವಲ್ಲ. ಶಿಕ್ಷಣವನ್ನು ನಾವು ಸಂಕುಚಿತಗೊಳಿಸಿದ್ದೇವೆ. ಶಿಕ್ಷಣ, ಮಾಹಿತಿಯ ವ್ಯತ್ಯಾಸವನ್ನು ತಿಳಿಯಬೇಕಾಗಿದೆ. ಮಾಹಿತಿಯನ್ನು ಹಂಚುವುದು, ಒದಗಿಸುವುದು ಶಿಕ್ಷಣ ಅಲ್ಲ. ಶಿಕ್ಷಣ ಒಂದು ಪ್ರಕ್ರಿಯೆ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಶಿಕ್ಷಣ ಸಹಕಾರಿಯಾಗಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿರುವಂತೆ ಭಾರತವನ್ನು ಸಮಾಜವಾದಿ, ಜಾತ್ಯತೀತ, ಸಾರ್ವಭೌಮ, ಗಣತಂತ್ರವನ್ನಾಗಿ ನಿರ್ಮಿಸುವುದೇ ನಮ್ಮ ಉದ್ದೇಶ. ಇದಕ್ಕೆ ಶಿಕ್ಷಣವೇ ಪ್ರಮುಖ ಸಾಧನವಾಗಿದೆ. ಶಿಕ್ಷಣದ ಮೂಲಕ ಭ್ರಾತೃತ್ವ, ಸಹಿಷ್ಣುತೆ, ಬಹುತ್ವ ಬೆಳೆಸಿದರೆ ಮಾತ್ರ ಭಾರತ ಸಮಾಜವಾದಿ, ಜಾತ್ಯತೀತ, ಸಾರ್ವಭೌಮ, ಗಣತಂತ್ರ ರಾಷ್ಟ್ರವಾಗಲು ಸಾಧ್ಯ. ಆದರೆ ಅಂತಹ ಶಿಕ್ಷಣವನ್ನು ನಮ್ಮಲ್ಲಿ ನೀಡಲಾಗುತ್ತಿಲ್ಲ. ಶಿಕ್ಷಣ ಇಂದು ವ್ಯಾಪಾರದ ವಸ್ತು, ಮಾಹಿತಿಯ ಸಾಧನ, ಅಂಕ ಗಳಿಕೆಗೆ, ಪ್ರತಿಷ್ಠೆಗೆ ವ್ಯವಸ್ಥೆ ನಡೆಸುವ ರೀತಿಯಾಗಿರುವುದು ದುರ್ದೈವ. ಮೆಕಾಲೆ ಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸಿದವರೇ, ಸಂಪೂರ್ಣ ಬದಲಾವಣೆ ತರಬೇಕು ಎಂದವರೇ ಅದನ್ನೇ ಮುಂದುವರಿಸುತ್ತಿರುವುದು ನಿಜಕ್ಕೂ ವಿಪರ್ಯಾಸ.

► ವಾ.ಭಾ.: ವಿದ್ಯಾಗಮ ರೀತಿಯಲ್ಲಿ ಯೋಜನೆ ರೂಪಿಸಿ ಸರಕಾರ ಶಿಕ್ಷಣ ನೀಡಬಹುದಿತ್ತಲ್ಲವೇ?

  ನಿ: ಖಂಡಿತ ಅದಕ್ಕೆ ಅನೇಕ ಅವಕಾಶಗಳಿದ್ದವು. ಕಳೆದ ವರ್ಷ ಆಗಸ್ಟ್‌ನಲ್ಲಿ ನಾವು ಶಾಲೆಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿದ್ದೇವು. ಏಕೆಂದರೆ ಮಕ್ಕಳಿಗೆ ಕೊರೋನ ರೋಗ ಬಾಧಿಸುವುದು ವಿರಳ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಪ್ರಮುಖ ಅಂಶವೆಂದರೆ ಕರ್ನಾಟಕದ 4 ಸಾವಿರ ಶಾಲೆಗಳಲ್ಲಿ 1ರಿಂದ 10 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 15 ಸಾವಿರ ಶಾಲೆಗಳಲ್ಲಿ 25ಕ್ಕಿಂತ ಕಡಿಮೆ, 23 ಸಾವಿರ ಶಾಲೆಗಳಲ್ಲಿ 50ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಪ್ರತಿ ಶಾಲೆಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಿ ಶಿಕ್ಷಣ ನೀಡಬಹುದಿತ್ತು. ಕಲಿಕೆಯ ನಿರಂತರತೆ ಸಾಧ್ಯವಿತ್ತು. ಅಂತಹ ಯಾವ ಪ್ರಯತ್ನವನ್ನ್ನೂ ಸರಕಾರ ಮಾಡಲಿಲ್ಲ. ಶಿಕ್ಷಕರ ಒತ್ತಡಕ್ಕೆ ಮಣಿದು ವಿದ್ಯಾಗಮವನ್ನು ನಿಲ್ಲಿಸಲಾಯಿತು. ಮಕ್ಕಳ ಕಲಿಕೆ, ಹಿತಾಸಕ್ತಿಗಿಂತ ರಾಜಕೀಯ, ವರ್ಚಸ್ಸು, ಕೆಲವೇ ವರ್ಗಗಳ ಹಿತ ಕಾಪಾಡುವುದು ಸರಕಾರಕ್ಕೆ ಮುಖ್ಯವಾಯಿತು. ಶಿಕ್ಷಣ ನೀಡುವುದು ಸರಕಾರದ ಉದ್ದೇಶವಾಗಲಿಲ್ಲ. ಶಾಲೆ ಕೇವಲ ಕಲಿಕೆಯ ಜಾಗವಾಗಿರಲಿಲ್ಲ. ಬಿಸಿ ಊಟ, ರೋಗ ನಿರೋಧಕ ಮಾತ್ರೆ ನೀಡುತ್ತಾ ಮಕ್ಕಳನ್ನು ಮಾನಸಿಕವಾಗಿ ಸದೃಢಗೊಳಿಸಿ ಶಾಲೆ ಮಕ್ಕಳಿಗೆ ಮನೆಯಾಗಿ ಬಿಂಬಿತವಾಗಿತ್ತು. ಅವೆಲ್ಲದರಿಂದ ವಂಚಿತರಾಗಿರುವ ಪರಿಣಾಮ ಇಂದು 9ರಿಂದ 10 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಎಲ್ಲ ಅನಾಹುತಗಳಿಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ.

►ವಾ.ಭಾ.: ಕೊರೋನ 3ನೇ ಅಲೆ ಬಗ್ಗೆ ಭಯ, ಚರ್ಚೆ ಆರಂಭವಾಗಿದ್ದು, ಮಕ್ಕಳಿಗೆ ಹೆಚ್ಚು ಅಪಾಯವೇ?

ನಿ: ಭಯ ಹುಟ್ಟಿಸುವ ಮೂಲಕ ಇಲ್ಲಿಯವರೆಗೆ ಅನೇಕ ತಪ್ಪುಗಳನ್ನು ಮಾಡಲಾಗಿದೆ. ಪ್ರಾರಂಭದಲ್ಲಿಯೇ ಕೊರೋನ ಬಗ್ಗೆ ಜನರಲ್ಲಿ ಸರಿಯಾದ ತಿಳುವಳಿಕೆ ಮೂಡಿಸಲಿಲ್ಲ. ಮೂರನೇ ಅಲೆ ಬಗ್ಗೆಯೂ ಅದೇ ನಡೆಯುತ್ತಿದೆ. ಕರ್ನಾಟಕದ ತಾಂತ್ರಿಕ ಸಲಹಾ ಸಮಿತಿಯಲ್ಲಿ ವಿಶೇಷ ತಂತ್ರಜ್ಞರು(ಡೋಮೈನ್ ಎಕ್ಸ್‌ಪರ್ಟ್ಸ್) ಇಲ್ಲದಿರುವುದೇ ದುರಂತವಾಗಿದೆ. ಮಕ್ಕಳ ತಜ್ಞರೊಂದಿಗೆ ನಾವು ಈಗಾಗಲೇ ಸಭೆ ಮಾಡಿದ್ದೇವೆ. 3ನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯ ಎಂದು ಯಾವುದೇ ಸಂಶೋಧನೆ ತಿಳಿಸಿಲ್ಲ. ಇವೆಲ್ಲವೂ ಊಹಾಪೋಹ ಎಂಬುದಾಗಿ ತಜ್ಞರು ಹೇಳಿದ್ದಾರೆ. 3ನೇ ಅಲೆ ಮಕ್ಕಳ ಮೇಲೆ ವಿಶೇಷ ಪರಿಣಾಮ ಬೀರುವುದಿಲ್ಲ. ಸಾಮಾನ್ಯವಾಗಿ ಮಕ್ಕಳಿಗೆ ಸೋಂಕು ತಗಲಿದರೂ ಅಗತ್ಯ ಚಿಕಿತ್ಸೆ ನೀಡಬೇಕು. ಇದರ ಬಗ್ಗೆ ಭಯ ಹುಟ್ಟಿಸುವುದರಲ್ಲಿ ಅರ್ಥವಿಲ್ಲ ಎಂದು ಇಂಡಿಯನ್ ಅಕಾಡಮಿ ಆಫ್ ಪಿಡಿಯಾಟ್ರಿಕ್ಸ್ ಸಂಸ್ಥೆ ತಿಳಿಸಿದೆ. ಔಷಧಿ, ಚಿಕಿತ್ಸೆ ಇದ್ದರೂ ಭಯ ಹುಟ್ಟಿಸುವುದು, ಭಯ ಪಡುವುದಾದರೂ ಏಕೆ ಎಂದು ವೈದ್ಯರು ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಶಾಲೆ ಆರಂಭಿಸಬಹುದು.

► ವಾ.ಭಾ.: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರು, ಸಿಬ್ಬಂದಿಗೆ ಸರಕಾರ ನೆರವಾಗಲಿಲ್ಲ ಏಕೆ?

 ನಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಸಿಬ್ಬಂದಿಗೆ ಸರಕಾರ ನೆರವಾಗಬೇಕಿತ್ತು. ಶಿಕ್ಷಣ ಹಕ್ಕು ಕಾಯ್ದೆ (2010)ಯಲ್ಲಿ ಈ ಶಿಕ್ಷಕರು, ಸಿಬ್ಬಂದಿಗೆ ಎಲ್ಲ ಸೌಲಭ್ಯ ನೀಡಬೇಕು ಎಂದು ಹೇಳಲಾಗಿದೆ. ಆದರೆ ಸರಕಾರ ಆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಿಲ್ಲ. ಅದು ಜಾರಿಯಾಗಿದ್ದರೆ ಖಾಸಗಿ ಶಿಕ್ಷಕರು ಇಂದು ಬೀದಿಗೆ ಬೀಳುತ್ತಿರಲಿಲ್ಲ. ಕೊರೋನ ಸಂದರ್ಭದಲ್ಲಿ ಈಗ ಅವರ ಸಂಕಷ್ಟಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇಷ್ಟು ವರ್ಷಗಳಲ್ಲಿ ನಾವು ಯಾರು ಈ ಕುರಿತು ಪ್ರಶ್ನಿಸಲೇ ಇಲ್ಲ. ಇನ್ನು ಮುಂದಾದರೂ ಸರಕಾರ ಅವರ ನೆರವಿಗೆ ಧಾವಿಸಬೇಕು.

► ವಾ.ಭಾ: ಈ ಕಾಲಘಟ್ಟ ಶಿಕ್ಷಣ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಕಾರಣವಾಗಲಿದೆಯೇ?

 ನಿ: ಬದಲಾವಣೆಗೆ ಇದು ಸಕಾಲ. ಕೋವಿಡ್ ಅನೇಕ ನಷ್ಟ ಮಾಡಿ ಸಕಾರಾತ್ಮಕ ಸೂಚನೆಗಳನ್ನು ಕೊಟ್ಟಿದೆ. ಸಾರ್ವಜನಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇದ್ದ ದೇಶಗಳು ಕೋವಿಡ್‌ನ್ನು ವಸ್ತುನಿಷ್ಠವಾಗಿ ಧೈರ್ಯವಾಗಿ ಎದುರಿಸಿದವು. ಈ ಸಂದೇಶವನ್ನು ನಾವು ಅನುಸರಿಸಬೇಕಾಗಿದೆ. ಸಂಪನ್ಮೂಲ ಕಡಿಮೆ ಮಾಡುವ ಮೂಲಕ ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆಗಳನ್ನು ದುರ್ಬಲಗೊಳಿಸಲಾಯಿತು. ಇದು ಖಾಸಗೀಕರಣದ ದೊಡ್ಡ ಹುನ್ನಾರವಾಗಿದೆ. ಕನಿಷ್ಠ ಆರೋಗ್ಯ, ಶಿಕ್ಷಣ, ಉದ್ಯೋಗ, ಮೂಲಭೂತ ಸೌಕರ್ಯ ನೀಡುವುದು ಸರಕಾರದ ಹೊಣೆ. ಇವೆಲ್ಲವನ್ನು ನೀಡದಿದ್ದರೆ ಸರಕಾರ ಏಕೆ ಬೇಕು ಎಂದು ಜನರೇ ಮುಂದೆ ಪ್ರಶ್ನಿಸಲಿದ್ದಾರೆ. ಅದಕ್ಕೆ ಇದು ಬದಲಾವಣೆಗೆ ಸಕಾಲ.

ರಾಜ್ಯದ ಎಲ್ಲ ಸರಕಾರಿ ಶಾಲೆಗಳನ್ನು ಕೇಂದ್ರೀಯ ಶಾಲೆಗಳ ಮಟ್ಟಕ್ಕೆ ಮೇಲ್ದರ್ಜೆಗೇರಿಸಿದರೆ ಯಾವ ಪಾಲಕರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವುದಿಲ್ಲ. ಶಿಕ್ಷಣದಲ್ಲಿ ಮೊದಲು ಸಮಾನತೆಯನ್ನು ಜಾರಿಗೊಳಿಸಬೇಕು. ಸಂವಿಧಾನವನ್ನು ಸಂಪೂರ್ಣ ಜಾರಿಗೊಳಿಸಲು ಕೋವಿಡ್ ಒಂದು ಅವಕಾಶ ನೀಡಿದ್ದು, ಅದನ್ನು ಎಲ್ಲರೂ ಬಳಸಿಕೊಂಡು ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿದರೆ ದೇಶದ ಭವಿಷ್ಯವೇ ಬದಲಾಗಲಿದೆ. ಈ ದೇಶದ ಭವಿಷ್ಯ ಶಾಲಾ ತರಗತಿಗಳಲ್ಲಿ ರೂಪುಗೊಳ್ಳುತ್ತದೆ ಎಂಬ ಕೊಠಾರಿ ಆಯೋಗದ ಘೋಷವಾಕ್ಯವನ್ನು ಸರಕಾರಗಳು ಇನ್ನಾದರೂ ಜಾರಿಗೊಳಿಸಬೇಕು.

ಸಂದರ್ಶನದ ವೀಡಿಯೊವನ್ನು ‘ವಾರ್ತಾಭಾರತಿ’ ಯುಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.

ಬರಹ ರೂಪ: ಬಾಲಕೃಷ್ಣ ಜಾಡಬಂಡಿ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top