ನೀವು ಪ್ರಧಾನಿಯ ಸುಳ್ಳುಗಳಿಗೆ ಅಂತ್ಯ ಹಾಡಿದ್ದರೆ ನೀವು ಭಾರತವನ್ನು ಸಂಕಟಗಳಿಂದ ರಕ್ಷಿಸಬಹುದಿತ್ತು | Vartha Bharati- ವಾರ್ತಾ ಭಾರತಿ

--

ಮೋದಿಯ ಮತದಾರರಿಗೊಂದು ಪತ್ರ

ನೀವು ಪ್ರಧಾನಿಯ ಸುಳ್ಳುಗಳಿಗೆ ಅಂತ್ಯ ಹಾಡಿದ್ದರೆ ನೀವು ಭಾರತವನ್ನು ಸಂಕಟಗಳಿಂದ ರಕ್ಷಿಸಬಹುದಿತ್ತು

Photo source: PTI

ಪ್ರಧಾನಿಯ ಶ್ರೀಮಂತ ಮತದಾರರೇ,

ನೀವೆಲ್ಲರೂ ಕ್ಷೇಮವೆಂದು ನಾವು ಪ್ರಾಮಾಣಿಕವಾಗಿ ಭಾವಿಸಿದ್ದೇವೆ. ಎಷ್ಟಾದರೂ ನಾವೆಲ್ಲ ಈಗಲೂ ಸತ್ತವರಿಗಾಗಿ ಶೋಕಿಸುತ್ತಿದ್ದೇವೆ. ಆದರೆ ಅದಕ್ಕಾಗಿ ನಾವು ವಾಸ್ತವದಲ್ಲಿ ಸತ್ತವರ ಮನೆಗಳಲ್ಲಿ ಇರಬೇಕಿಲ್ಲ. ಎಷ್ಟಾದರೂ ನಾವೆಲ್ಲ ನಮ್ಮ ಐಷಾರಾಮಿ ಅಪಾರ್ಟ್ಮೆಂಟ್ಗಳಲ್ಲಿ ಪ್ರತ್ಯೇಕವಾಗಿದ್ದು, ನಮ್ಮ ಕನಸುಗಳೊಂದಿಗೆ ಬದುಕುತ್ತಿದ್ದೇವೆ. ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕದ ಪರಿಣಾಮ ನಮ್ಮನ್ನು ಅಷ್ಟಾಗಿ ತಟ್ಟಿರಲಿಲ್ಲ. ನಾವು ಮನೆಯಿಂದಲೇ ಕೆಲಸ ನಿರ್ವಹಿಸಿದ್ದೆವು, ನೆಟ್ಫ್ಲಿಕ್ಸ್ ನೋಡುತ್ತಿದ್ದೆವು, ಆನ್ಲೈನ್ನಲ್ಲಿ ಶಾಪಿಂಗ್ ಮಾಡುತ್ತಿದ್ದೆವು, ಎಲ್ಲಿ ತೂಕ ಹೆಚ್ಚಾಗುತ್ತದೆಯೇ ಎಂದು ಚಿಂತಿಸುತ್ತಿದ್ದೆವು ಮತ್ತು ಅವಸರದಿಂದ ಹೇರಲಾಗಿದ್ದ ಲಾಕ್ ಡೌನ್ ನಿಂದಾಗಿ ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದ ವಲಸೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ನಾವಿದ್ದಲ್ಲಿದ್ದಲ್ಲಿಂದಲೇ ಕೊಂಚ ಕಳವಳವನ್ನು ವ್ಯಕ್ತಪಡಿಸಿದ್ದೆವು.

ಅದಾದ ನಂತರ ಈ ವರ್ಷ ಭೀಕರ ರೂಪದ ಕೋವಿಡ್ ಎರಡನೇ ಅಲೆಯು ಎಲ್ಲ ಅಡೆತಡೆಗಳನ್ನು ಭೇದಿಸಿತ್ತು. ಬಡವ-ಬಲ್ಲಿದರು ಎಂಬ ಭೇದವಿಲ್ಲದೆ ಎಲ್ಲರನ್ನೂ ಆಪೋಶನ ತೆಗೆದುಕೊಂಡಿದೆ. ಕೋವಿಡ್ ಭಾರತದಲ್ಲಿ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಆದರೆ ಹೆಚ್ಚಿನ ಸಾವುಗಳ ಸಂಖ್ಯೆಯು ಬಚ್ಚಿಟ್ಟಲ್ಪಟ್ಟಿರುವುದರಿಂದ ನಿಜವಾದ ಸಾವಿನ ಸಂಖ್ಯೆ ಬಹುಶಃ ನಮಗೆಂದಿಗೂ ಗೊತ್ತಾಗಲಿಕ್ಕಿಲ್ಲ.

ಭಾರತವು ಇಂತಹ ವಿಪತ್ತಿನ ಆಡುಂಬೊಲ ಹೇಗಾಯಿತು? ವೈರಸ್ ನಮ್ಮ ಸುರಕ್ಷಿತ ಬದುಕುಗಳ ಗೂಡುಗಳನ್ನು ಹೇಗೆ ಭೇದಿಸಿತ್ತು? ಅದು ಹೇಗೆ ನಮ್ಮ ವಿಶೇಷ ಹಕ್ಕುಗಳನ್ನು ಇಲ್ಲವಾಗಿಸಿತ್ತು ಮತ್ತು ಪರಮೋಚ್ಚ ನಾಯಕನ ಕಣ್ಮರೆಗೆ ಪ್ರಚೋದಿಸಿತ್ತು? ಹೇಗೆ ಆಮ್ಲಜನಕ ಮತ್ತು ಆಸ್ಪತ್ರೆ ಹಾಸಿಗೆಗಳಿಗಾಗಿ ಬಡ ಸಹಪ್ರಜೆಗಳೊಂದಿಗೆ ನಾವು ಸರದಿ ಸಾಲುಗಳಲ್ಲಿ ನಿಲ್ಲುವಂತೆ ಮಾಡಿತ್ತು? ಹೇಗೆ ನಾವು ಔಷಧಿಗಳು ಮತ್ತು ಲಸಿಕೆಗಳಿಗಾಗಿ ಪರದಾಡುವಂತೆ ಮಾಡಿತ್ತು?

ನಮ್ಮ ಸಾಮಾಜಿಕ ಮಾಧ್ಯಮಗಳು ನೀಡುತ್ತಿದ್ದ ಮಾಹಿತಿಗಳು ಹತಾಶೆಗಳಿಂದ ತುಂಬಿದ್ದವು. ಸಮೀಪದ ಮುಸ್ಲಿಂ ವ್ಯಾಪಾರಿಯಿಂದ ಆಮ್ಲಜನಕ ಸಿಲಿಂಡರ್ ಖರೀದಿಗೆ ನಾವು ಸಿದ್ಧರಾಗಿದ್ದೆವು. ನಮ್ಮ ಪೂರ್ವಾಗ್ರಹಗಳು, ಸಾರ್ವಜನಿಕ ಸಂಸ್ಥೆಗಳ ಕುರಿತು ನಮ್ಮ ತಿರಸ್ಕಾರ, ಪ್ರತಿಯೊಂದರ ಖಾಸಗೀಕರಣದಲ್ಲಿ ನಮ್ಮ ನಂಬಿಕೆ ಇವುಗಳಿಗೆಲ್ಲ ಏನಾಗಿದ್ದವು?

ಕನಿಷ್ಠ ಸಂಪರ್ಕ

‘ಕನಿಷ್ಠ ಸರಕಾರ,ಗರಿಷ್ಠ ಆಡಳಿತ’ಎಂದು ನಿಮ್ಮ ನಾಯಕ ಗುಡುಗಿದಾಗ ನೀವೆಲ್ಲ ಹುರಿದುಂಬಿಸಿದ್ದೀರಿ,ಅದು ಆಡಳಿತವು ದಕ್ಷತೆಯಿಂದ ಕೂಡಿತ್ತು ಎನ್ನುವುದಕ್ಕಾಗಿ ಅಲ್ಲ...ಆದರೆ ಸರಕಾರದೊಂದಿಗೆ ನಿಮ್ಮ ಸಂಪರ್ಕವು ವಾಹನ ಚಾಲನೆ ಪರವಾನಿಗೆ ಪಡೆಯುವುದು ಅಥವಾ ಅಪಾರ್ಟ್ಮೆಂಟ್ನ ನೋಂದಣಿಯಂತಹ ಕೆಲವು ಅಗತ್ಯಗಳನ್ನು ಹೊರತುಪಡಿಸಿ ಕನಿಷ್ಠವಾಗಿತ್ತು ಎನ್ನುವುದಕ್ಕಾಗಿ.

ನೀವೆಲ್ಲ ಗೇಟೆಡ್ ಕಮ್ಯುನಿಟಿಗಳಲ್ಲಿ ವಾಸವಿದ್ದೀರಿ. ನಿಮಗೆ ಜನರೇಟರ್ ಸೌಲಭ್ಯವು ಇದೆ ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯಗಳಿಗೆ ನೀವು ತಲೆ ಕೆಡಿಸಿಕೊಳ್ಳುವುದಿಲ್ಲ. ನೀವು ನಿಮ್ಮ ಮಕ್ಕಳನ್ನು ದುಬಾರಿ ಶಾಲೆಗಳಿಗೆ ಕಳುಹಿಸುತ್ತೀರಿ. ಉತ್ತಮ ಬದುಕಿಗಾಗಿ ಹಣವು ಖರೀದಿಸಬಲ್ಲ ಎಲ್ಲವನ್ನೂ ನೀವು ಖರೀದಿಸಿದಿರಿ ಮತ್ತು ಸಾರ್ವಜನಿಕ ಸಂಸ್ಥೆಗಳ ಮಾರಾಟಗಳನ್ನು ಪ್ರಶಂಸಿಸಿದಿರಿ. ಆರೋಗ್ಯ, ಪೌಷ್ಟಿಕತೆ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಸರಕಾರದ ಆರ್ಥಿಕ ನೆರವಿನ ಕೊರತೆ ಮಾಮೂಲಾಗಿದ್ದರೂ ನೀವು ಅದನ್ನು ಪ್ರಶ್ನಿಸಲಿಲ್ಲ ಅಥವಾ ಲಕ್ಷಾಂತರ ಮಕ್ಕಳೇಕೆ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಕೇಳಲಿಲ್ಲ.

ಪ್ರಿಯ ಮತದಾರರೇ,ನೀವು ಉಸಿರಿಗಾಗಿ ಒದ್ದಾಡುತ್ತಿದ್ದಾಗ ನಿಮ್ಮ ನಾಯಕ ಸೆಂಟ್ರಲ್ ವಿಸ್ತಾ ಯೋಜನೆ ಎಂಬ ದುರಂತದ ನೇತೃತ್ವ ವಹಿಸಿದ್ದರು ಮತ್ತು ಸಾರ್ವಜನಿಕ ಕ್ಷೇತ್ರದ ಕನಿಷ್ಠ ನಾಲ್ಕು ಉದ್ಯಮಗಳು ಬದರಿನಾಥ ದೇವಸ್ಥಾನಕ್ಕೆ 100 ಕೋ.ರೂ.ಗಳ ದೇಣಿಗೆ ನೀಡಿದ್ದವು. ತನ್ಮಧ್ಯೆ ಕೋವಿಡ್ ಲಸಿಕೆ ನೀಡಿಕೆಯು ರಾಜ್ಯ ಸರಕಾರಗಳೊಂದಿಗಿನ ವಾಲಿಬಾಲ್ ಆಟವಾಗಿಬಿಟ್ಟಿತ್ತು, ಅದೂ ಜಿಎಸ್ಟಿಯಲ್ಲಿನ ತಮ್ಮ ಪಾಲಿಗಾಗಿ ಕೇಂದ್ರ ಸರಕಾರವನ್ನು ಅವಲಂಬಿಸಿರುವ ರಾಜ್ಯ ಸರಕಾರಗಳು ತೀವ್ರ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವಾಗ.

ಪ್ರಿಯ ಮತದಾರರೇ, ನಮ್ಮ ಸಂವಿಧಾನದಂತೆ ಒಕ್ಕೂಟವಾದವು ಅನುಕೂಲಸಿಂಧು ವಸ್ತುವಲ್ಲ ಮತ್ತು ಅದು ಪರಸ್ಪರ ಸಹಕಾರಕ್ಕೆ ಒತ್ತು ನೀಡುತ್ತದೆ ಎನ್ನುವುದನ್ನು ನೀವು ಒಪ್ಪುತ್ತೀರಿ ಎಂದು ನಾವು ಆಶಿಸಿದ್ದೇವೆ. ಸಾರ್ವಜನಿಕ ಸಂಸ್ಥೆಗಳು ಹೀಗೆ ಕ್ಷೀಣಿಸಿದಾಗ ಅದು ಕೇವಲ ತಪ್ಪು ಆದ್ಯತೆಯ ಪ್ರಕರಣವಲ್ಲ, ಅದು ತನ್ನ ದಾರಿಯಲ್ಲಿರುವ ಎಲ್ಲವನ್ನೂ ಆಪೋಷನ ತೆಗೆದುಕೊಳ್ಳುತ್ತ ಸಾಗುವ ಪ್ರಜ್ವಲಿಸುವ ಕಾಡ್ಗಿಚ್ಚಿನ ಉಪಸ್ಥಿತಿಯನ್ನು ಸೂಚಿಸುತ್ತದೆ. ಕಾಡ್ಗಿಚ್ಚು ವಿವಿಧ ಜಾತಿಗಳ ಮರಗಳಲ್ಲಿ ಭೇದವನ್ನುಂಟು ಮಾಡುವುದಿಲ್ಲ, ಅದು ಎಲ್ಲವನ್ನೂ ನುಂಗುತ್ತದೆ. ದೌರ್ಬಲ್ಯಗಳನ್ನು ಮೂಲವಾಗಿಟ್ಟುಕೊಂಡು ಆರಂಭಗೊಳ್ಳಬಹುದಾದ ಬೆಂಕಿಯು ನಿಧಾನವಾಗಿ, ಆದರೆ ಖಂಡಿತವಾಗಿ ಎಲ್ಲ ವರ್ಗಗಳನ್ನು ಕಬಳಿಸುತ್ತದೆ ಮತ್ತು ಇದನ್ನು ನೀವು ಈಗಾಗಲೇ ಅನುಭವಿಸಿರಬಹುದು.

ಪ್ರಿಯ ಮತದಾರರೇ, ನಂಬಿ ಅಥವಾ ಬಿಡಿ. ಹೆಚ್ಚಿನ ಭಾರತಿಯರು ಕೇವಲ ಬಡವರಾಗಿರುವುದಕ್ಕೆ ನಿರಂತರ ಅವಮಾನವನ್ನು ಎದುರಿಸುತ್ತಿದ್ದಾರೆ ಮತ್ತು ನೀವು ನಿಮ್ಮದಾಗಿಸಿಕೊಂಡಿರುವ ಅಗತ್ಯಗಳಿಗಾಗಿ ಹೋರಾಡುತ್ತಿದ್ದಾರೆ. 2020ರಲ್ಲಿ ಕೇವಲ ನಾಲ್ಕು ಗಂಟೆಗಳ ಪೂರ್ವಸೂಚನೆಯೊಂದಿಗೆ ಕೆಟ್ಟದಾಗಿ ಯೋಜಿತ ಒಂದೇ ಒಂದು ಹೊಡೆತದಿಂದ ಲಾಕ್ ಡೌನ್ ಹೇರುವ ಮೂಲಕ ಪ್ರಧಾನಿ 50 ಕೋಟಿ ಜನರ ಬದುಕುಗಳು ಮತ್ತು ಜೀವನೋಪಾಯಗಳನ್ನು ಸಂಕಷ್ಟಕ್ಕೆ ತಳ್ಳಿದರು.

ಅಝೀಂ ಪ್ರೇಮ್ ಜಿ ವಿವಿಯ ವರದಿಯಂತೆ ಕಳೆದ ವರ್ಷವೊಂದರಲ್ಲೇ 23 ಕೋ.ಹೆಚ್ಚುವರಿ ಜನರು ಬಿಪಿಎಲ್ ವರ್ಗಕ್ಕೆ ತಳ್ಳಲ್ಪಟ್ಟಿದ್ದಾರೆ. ನಾಯಕನ ತಂತ್ರಜ್ಞಾನದ ಗೀಳು ಪಡಿತರ ಸಾಮಗ್ರಿಗಳು, ಪಿಂಚಣಿ ಮತ್ತು ವೇತನದ ಮೇಲೆ ಅವಲಂಬಿತರಾಗಿರುವ ಹಲವಾರು ಜನರು ಬಯೊಮೆಟ್ರಿಕ್ ವೈಫಲ್ಯಗಳು, ಇಂಟರ್ನೆಟ್ ಸಂಪರ್ಕ ಮತ್ತು ವಿದ್ಯುತ್ ಪೂರೈಕೆಯಲ್ಲಿ ಕೊರತೆಗಳಿಂದಾಗಿ ತಮ್ಮ ಹಕ್ಕುಗಳಿಂದ ವಂಚಿತರಾಗುವಂತೆ ಮಾಡಿದೆ. ಈ ತಂತ್ರಜ್ಞಾನಗಳು ಕೆಲಸ ಮಾಡುತ್ತಿದ್ದಾಗಲೂ ಕೋಟ್ಯಂತರ ಜನರು ತಮ್ಮ ವಾರದ ವೇತನವನ್ನು ಪಡೆಯಲು ದಿನದ ವೇತನವನ್ನು ಮರೆತು ಸರದಿ ಸಾಲಿನಲ್ಲಿ ಸಮಯ ವ್ಯಯಿಸಬೇಕಿದೆ.

2015 ಮತ್ತು 2020ರ ನಡುವೆ ಭಾರತದಲ್ಲಿ ಸಂಭವಿಸಿರುವ ನೂರಕ್ಕೂ ಅಧಿಕ ಸಾವುಗಳ ಪೈಕಿ ಹೆಚ್ಚಿನವು ತಾಂತ್ರಿಕ ದೋಷಗಳಿಂದ ಉಂಟಾಗಿವೆ, ಈ ತಾಂತ್ರಿಕ ದೋಷಗಳಿಂದಾಗಿ ಅವರಿಗೆ ಪಡಿತರ ಆಹಾರ ಸಾಮಗ್ರಿಗಳನ್ನು ನಿರಾಕರಿಸಲಾಗಿತ್ತು. ಮೇಲ್ವರ್ಗಗಳು ಕುರುಡಾಗಿ ತಂತ್ರಜ್ಞಾನದ ಹಿಂದೆ ಬಿದ್ದಿರುವುದನ್ನು ಎತ್ತಿ ತೋರಿಸಿದ್ದ ಸಾಮಾಜಿಕ ಕಾರ್ಯಕರ್ತ ನಿಖಿಲ್ ಡೇ ಅವರು ‘ವಿಮಾನವನ್ನು ಹತ್ತುವ ಪ್ರತಿಯೊಬ್ಬರಿಗೂ ಬಯೊಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸಬೇಕು ಎಂದು ವ್ಯಂಗ್ಯವಾಡಿದ್ದರು. ಸರಕಾರದ ಕೇಂದ್ರೀಕೃತ ಕೋ ವಿನ್ ಆ್ಯಪ್ನಲ್ಲಿ ಲಸಿಕೆ ಪಡೆಯಲು ಸ್ಲಾಟ್ಗಾಗಿ ಹತಾಶ ಹುಡುಕಾಟವು ಬಹುಶಃ ನಮಗೇನನ್ನಾದರೂ ಕಲಿಸಿರಬಹುದೇ? ಸಂಪೂರ್ಣವಾಗಿ ಅಲ್ಲದಿರಬಹುದು. ಶೇ.25ರಷ್ಟು ಲಸಿಕೆಗಳನ್ನು ಹೆಚ್ಚಿನ ದರಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಾಗಿಸಿರುವ ಸರಕಾರವು ಸಾರ್ವಜನಿಕ ಸೇವೆಗಳನ್ನು ನಾವು ಪಡೆಯುವುದನ್ನು ಮತ್ತೊಮ್ಮೆ ನಿರೋಧಿಸಿದೆ.

ಜೀವಗಳನ್ನು ಅಪಾಯದಲ್ಲಿ ತಳ್ಳುತ್ತಿದೆ

ಪ್ರಿಯ ಮತದಾರರೇ, ಈ ಎಲ್ಲ ವರ್ಷಗಳಲ್ಲಿ ನೀವು ಕಾಳಜಿ ವಹಿಸಿದ್ದರೆ ಭಾರತದ ಬೃಹತ್ ಭಾಗವು ಯಾವುದರ ವಿರುದ್ಧ ಹೋರಾಡುತ್ತಿದೆ ಎನ್ನುವುದನ್ನು ನೋಡಬಹುದಿತ್ತು. ತನ್ನ ಪಕ್ಷದ ಕಾರ್ಯಕರ್ತರು ಬೀಫ್ ಸೇವನೆಯ ಅಥವಾ ಸಾಗಾಣಿಕೆಯ ಆರೋಪದಲ್ಲಿ ಮುಸ್ಲಿಮರು ಮತ್ತು ದಲಿತರ ಮೇಲೆ ದಾಳಿ ನಡೆಸುತ್ತಿದ್ದಾಗ ಪ್ರಧಾನಿಯವರು ಮುಖವನ್ನು ತಿರುಗಿಸಿಕೊಂಡಿದ್ದರು. ಅವರ ಕೋಪವು ಅನ್ಯಾಯವನ್ನು ಪ್ರತಿಭಟಿಸುತ್ತಿದ್ದ ಸಾರ್ವಜನಿಕ ವಿವಿಗಳು ಮತ್ತು ವಿದ್ಯಾರ್ಥಿಗಳ ಮೇಲೆ ತಿರುಗಿತ್ತು. ನಂತರದ ಸರದಿ ಕಾರ್ಮಿಕರದ್ದಾಗಿತ್ತು, ಪ್ರಧಾನಿ ದೇಶದಲ್ಲಿಯ ಶೇ.86ರಷ್ಟು ಕರೆನ್ಸಿಯನ್ನು ಅಮಾನ್ಯಗೊಳಿಸುವ ಮೂಲಕ ಅವರನ್ನು ಗುರಿಯಾಗಿಸಿಕೊಂಡಿದ್ದರು. 2017ರಲ್ಲಿ ಜಾರಿಗೊಂಡ ಸರಕುಗಳು ಮತ್ತು ಸೇವೆಗಳ ತೆರಿಗೆಯು ಸಣ್ಣ ವ್ಯಾಪಾರಿಗಳ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸಿತು ಮತ್ತು ನಂತರದ ಕೆಲವು ಉಪಕ್ರಮಗಳು ನಿರಾಶ್ರಿತರು,ವಲಸಿಗರು ಮತ್ತು ರೈತರ ಜೀವಗಳನ್ನು ಅಪಾಯಕ್ಕೆ ತಳ್ಳಿದವು.

ಕೋವಿಡ್ ಮೊದಲ ಅಲೆಯು ಕ್ಷೀಣಿಸುತ್ತಿದ್ದಾಗ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಶೇ.50ರಷ್ಟು ಸಾಮರ್ಥ್ಯದೊಂದಿಗೆ ರೆಸ್ಟೋರಂಟ್ ಗಳು ಮತ್ತು ಮಾಲ್ಗಳು ಕಾರ್ಯಾಚರಿಸಲು ಅವಕಾಶವನ್ನು ನೀಡಲಾಯಿತು. ಆದರೆ ಪ್ರಿಯ ಮತದಾರರೇ, ಐದು ಲಕ್ಷ ಕೈದಿಗಳಿಗೆ ಮನೆಯಾಗಿರುವ ಭಾರತೀಯ ಜೈಲುಗಳು ತಮ್ಮ ಸಾಮರ್ಥ್ಯದ ಶೇ.118ರಷ್ಟು ಭರ್ತಿಯಾಗಿವೆ ಎನ್ನುವುದು ನಿಮಗೆ ಗೊತ್ತೇ? ಸರಕಾರದ ನೀತಿಗಳನ್ನು ಒಪ್ಪಲಿಲ್ಲ ಎಂಬ ಏಕೈಕ ಕಾರಣಕ್ಕೆ ಹಲವಾರು ಕೈದಿಗಳು ವಿಚಾರಣೆಯಿಲ್ಲದೆ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಅವರಲ್ಲಿ ಕೋವಿಡ್-19 ಲಕ್ಷಣಗಳಿಂದ ಮತ್ತು ಪಾರ್ಕಿನ್ಸನ್ಸ್ ಕಾಯಿಲೆಯಿಂದ ನರಳುತ್ತಿರುವ 84 ವರ್ಷದ ವಯೋವೃದ್ಧರೋರ್ವರು ಸೇರಿದ್ದಾರೆ, ಅವರಿಗೆ ನೀರು ಕುಡಿಯಲು ಅಗತ್ಯವಾಗಿರುವ ಸಿಪ್ಪರ್ ಕಪ್ ಅನ್ನೂ ನಿರಾಕರಿಸಲಾಗಿತ್ತು.

ಅನುಕಂಪದ ಬಗ್ಗೆ ಇಂತಹ ತಿರಸ್ಕಾರ ಮತ್ತು ದೇಶದ್ರೋಹ ಕಾನೂನುಗಳ ವಿವೇಚನೆಯಿಲ್ಲದ ಬಳಕೆಯು ಆಳುವವರ ಮುಂದೆ ಮಂಡಿಯೂರಿರುವ ನ್ಯಾಯಾಂಗದ ನೆರವಿನಿಂದ ‘ನನ್ನ ಸ್ನೇಹಿತರಿಗೆ ಎಲ್ಲವೂ ಮತ್ತು ಇತರರಿಗೆ ಕಾನೂನು’ ಎಂದು ಜಾನ್ ಮುಲ್ಲರ್ ಬಣ್ಣಿಸಿರುವ ತಾರತಮ್ಯದ ಕಾನೂನುಬದ್ಧತೆ ಎಂಬ ಕಲೆಯನ್ನು ಕರಗತ ಮಾಡಿಕೊಳ್ಳಲು ನಾಯಕನಿಗೆ ನೆರವಾಗಿವೆ.

ಪ್ರಿಯ ಮತದಾರರೇ, ನಿಮ್ಮ ಮೌನವು ನಾಯಕನಿಗೆ ವಿಶ್ವಾಸವನ್ನು ತುಂಬಿದೆ, ನಿಮ್ಮ ಅನುರೂಪತೆಯು ಅವರ ಅಹಂಕಾರವನ್ನು ಪೋಷಿಸಿದೆ, ನಿಮ್ಮ ಸಮ್ಮತಿಯು ಅವರಿಗೆ ರೆಕ್ಕೆಗಳನ್ನು ನೀಡಿವೆ. ಸಾಂವಿಧಾನಿಕ ಸಂಸ್ಥೆಗಳು ಕ್ಯಾನ್ಸರ್ಗ್ರಸ್ತವಾಗಿದ್ದರೆ ಪರಮೋಚ್ಚ ನಾಯಕ ನವಿಲುಗಳನ್ನು ಸಾಕುತ್ತಿದ್ದರು, ತಾನು ಮಾವಿನ ಹಣ್ಣನ್ನು ತಿಂದಿದ್ದು ಹೇಗೆ ಎನ್ನುವುದನ್ನು ವಿವರಿಸುತ್ತಿದ್ದರು, ಟಿವಿ ಕಾರ್ಯಕ್ರಮಕ್ಕಾಗಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಪ್ರಧಾನಿ ಒಂದರ ನಂತರ ಒಂದರಂತೆ ಸ್ತಬ್ಧಚಿತ್ರಗಳನ್ನೇರುತ್ತ ತನ್ನ ಅನುಭೂತಿ, ಆತ್ಮಸಾಕ್ಷಿ ಮತ್ತು ದಕ್ಷತೆಯ ಕೊರತೆಯನ್ನು ಬಿಂಬಿಸುತ್ತಿದ್ದರು.

ಆದರೆ ನೀವು ನಿಮ್ಮ ಭುಜಗಳನ್ನು ಕೊಡವಿಕೊಂಡು ಏನೂ ಆಗಿಯೇ ಇಲ್ಲ ಎಂಬಂತೆ ಮುಂದೆ ನಡೆದಿದ್ದೀರಿ. ಏಕೆಂದರೆ ನೀವು ಮುಸ್ಲಿಂ, ದಲಿತ, ಆದಿವಾಸಿ, ವಿದ್ಯಾರ್ಥಿ, ಕಾರ್ಮಿಕ, ಭಿನ್ನಮತೀಯ, ನಿರಾಶ್ರಿತ ಅಥವಾ ರೈತ ಆಗಿರಲಿಲ್ಲ. ದುರದೃಷ್ಟವಶಾತ್ ನೀವು ಬಿಕ್ಕಟ್ಟಿನ ಘಳಿಗೆಯನ್ನು ಎದುರಿಸಿದಿರಿ. ‘ನಂತರ ಅವರು ನನಗಾಗಿ ಬಂದರು ಮತ್ತು ನನ್ನ ಪರವಾಗಿ ಮಾತನಾಡಲು ಯಾರೂ ಉಳಿದಿರಲಿಲ್ಲ’ ಎಂಬ ಜರ್ಮನ್ ಪಾದ್ರಿ ಮಾರ್ಟಿನ್ ನೀಮಲ್ಲರ್ ಅವರ ಅಪ್ರತಿಮ ಕವನದ ಕೊನೆಯ ಸಾಲುಗಳು ನೆನಪಿವೆಯೇ?

ಪ್ರಿಯ ಮತದಾರರೇ, ನೀವು ಮೊದಲೇ ಪ್ರಧಾನಿಯ ಸುಳ್ಳುಗಳನ್ನು ಬಯಲಿಗೆಳೆದಿದ್ದರೆ,ನಿಮ್ಮ ಬೇಲಿಗಳಾಚೆಯ ವ್ಯಾಪಕ ಹತಾಶೆಯ ಬಗ್ಗೆ ಕಾಳಜಿ ವಹಿಸಿದ್ದರೆ, ಪೂರ್ವಾಗ್ರಹದ ರಾಜಕೀಯಕ್ಕೆ ಅಂತ್ಯ ಹಾಡಿದ್ದರೆ,ಕನಿಷ್ಠ ಸರಕಾರದ ಬದಲು ಉತ್ತರದಾಯಿ ಸರಕಾರಕ್ಕಾಗಿ ನೀವು ಕೇಳಿದ್ದಿದ್ದರೆ ಮಾತ್ರ ನೀವು ಭಾರತವನ್ನು ಅದರ ಸಂಕಟಗಳಿಂದ ರಕ್ಷಿಸಬಹುದಿತ್ತು.

ಆದರೆ ತಿದ್ದಿಕೊಳ್ಳಲು ಈಗಲೂ ಸಮಯವಿದೆ. ನೀವು ಮಹಾಭಾರತದಿಂದ ಕಲಿತುಕೊಳ್ಳಬೇಕಿದೆ. ಶಿಶುಪಾಲನ ಪಾಪಗಳು ನೂರು ದಾಟಿದಾಗ ಶ್ರೀಕೃಷ್ಣನ ತಾಳ್ಮೆಯು ಕೂಡ ಕಟ್ಟೆಯೊಡೆದಿತ್ತು. ನಾಯಕನ ಸಂಪನ್ನ ಮತದಾರರೇ, ನಿಮ್ಮ ಕೃಷ್ಣ ಘಳಿಗೆಯು ಬಂದಿದೆಯೇ?

ಸಯಂದೇಬ್ ಚೌಧುರಿ, ಪ್ರಾಧ್ಯಾಪಕರು,ಅಂಬೇಡ್ಕರ್ ವಿವಿ,ದಿಲ್ಲಿ

ಮತ್ತು ರಾಜೇಂದ್ರನ್ ನಾರಾಯಣನ್, ಪ್ರಾಧ್ಯಾಪಕರು,ಅಝೀಂ ಪ್ರೇಮ್ ಜಿ ವಿವಿ, ಬೆಂಗಳೂರು

ಕೃಪೆ: scroll.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top