ಪ್ರಧಾನಿ ಮೋದಿಯವರ ತೆರಿಗೆ ಭಯೋತ್ಪಾದನೆ | Vartha Bharati- ವಾರ್ತಾ ಭಾರತಿ

--

ಪ್ರಧಾನಿ ಮೋದಿಯವರ ತೆರಿಗೆ ಭಯೋತ್ಪಾದನೆ

ಭಾಗ-1

ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಇದ್ದರೆ ಜನ ನೆಮ್ಮದಿಯಿಂದಿರುತ್ತಾರೆ, ಮೋದಿಯವರು ದೇಶದ ಪ್ರಧಾನಿಯಾದ ಮೇಲೆ ಜನರು ಕಟ್ಟುವ ತೆರಿಗೆ ಪ್ರಮಾಣ ಹೆಚ್ಚುತ್ತಾ ಹೋಗಿ 2020-21ರ ವೇಳೆಗೆ ಶೇ.75ಕ್ಕೆ ತಲುಪಿದೆ. ಕಾರ್ಪೊರೇಟ್ ಕುಳಗಳು ಕೇವಲ ಶೇ.25 ರಷ್ಟನ್ನು ಪಾವತಿಸುತ್ತಿವೆ. ಈ ತೆರಿಗೆ ಪದ್ಧತಿ ಸದ್ಯಕ್ಕೆ ಬದಲಾಗುವ ಹಾಗೆ ಕಾಣುತ್ತಿಲ್ಲ.

ಮಹಾಭಾರತದಲ್ಲಿ ಭೀಷ್ಮ ಧರ್ಮರಾಯನಿಗೆ ಬೋಧಿಸುವ ತೆರಿಗೆ ನೀತಿಯ ಪ್ರಕಾರ, ‘ರಾಜನು ತೋಟವನ್ನು ಕಾಯುವ ಮಾಲಿಯಂತಿರಬೇಕೆ ಹೊರತು ಇದ್ದಿಲನ್ನು ಮಾರುವವನಂತಾಗಬಾರದು. ಹಣ್ಣಿನ ಮರಗಳನ್ನು ಕಡಿದು ಇದ್ದಿಲು ಮಾರುವವನು ಜನಪೀಡಕ ರಾಜನೆನ್ನಿಸಿಕೊಳ್ಳುತ್ತಾನೆ.ಆಕಳನ್ನು ಪ್ರೀತಿಯಿಂದ ಸಾಕುವ ಗೋವಳಿಗನು ನವಿರಾಗಿ ಹಾಲು ಕರೆದುಕೊಳ್ಳುವಂತೆ ತೆರಿಗೆ ಇರಬೇಕು. ಹಾಲು ಕರೆಯುವ ನೆಪದಲ್ಲಿ ರಕ್ತ ಹೀರಿಕೊಂಡರೆ ಹಸು ಮತ್ತು ಕರುಗಳೆರಡೂ ಮರಣ ಹೊಂದುತ್ತವೆ. ಕರುವಿಗೂ ಹಾಲು ಸಿಗುವಂತಾದರೆ ಅದು ಮುಂದೆ ಎತ್ತಾಗಿ ಅಥವಾ ಹಸುವಾಗಿ ರಾಜ್ಯದ ಸಂಪತ್ತನ್ನು ಹೆಚ್ಚಿಸುತ್ತದೆ. ಇಲ್ಲದಿದ್ದರೆ ತೆರಿಗೆ ಮೂಲಗಳೆಲ್ಲ ಬತ್ತಿ ಹೋಗಿ ರಾಜ್ಯ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ತೆರಿಗೆಯು, ದುಂಬಿಯು ಹೂವಿನಿಂದ ಮಕರಂದವನ್ನು ಹೀರುವ ರೀತಿಯಲ್ಲಿರಬೇಕು. ಇದರಿಂದ ಹೂವು ಫಲ ಕಟ್ಟುತ್ತದೆ ಜೇನು ಸಂತತಿಯನ್ನೂ ಹೆಚ್ಚಿಸಿಕೊಳ್ಳುತ್ತದೆ’ ಎನ್ನುತ್ತಾನೆ.

 ಕವಿ ಕುಮಾರವ್ಯಾಸ ತನ್ನ ಗದುಗಿನ ಭಾರತದ ಸಭಾಪರ್ವದಲ್ಲಿ ‘‘ಫಲವಹುದು ಕೆಡಲೀಯದೆ ಅಳಿದುಂಬಿಪರಿಮಳವ ಕೊಂಬಂದದಲೆ ನೀನು ಆಳು ಇಳೆಯ’’, ಕರವನು ತೆಗೆ ಪ್ರಜೆಯ ನೋಯಿಸದೆ ಎಂದು ನಾರದನಿಂದ ಧರ್ಮರಾಯನಿಗೆ ಹೇಳಿಸುವಾಗ ಭೀಷ್ಮ ನೀತಿಯ ನೆರಳು ಕುಮಾರವ್ಯಾಸನಲ್ಲೂ ಕಾಣುತ್ತದೆ.

ಮಾತೆತ್ತಿದರೆ ರಾಮಾಯಣ, ಮಹಾಭಾರತದ ಹೆಸರುಗಳನ್ನು ಪ್ರಸ್ತಾಪಿಸುವ ಮೋದಿಯವರು ಮತ್ತು ಅವರ ತಂಡದವರು ಈ ಮಹಾಕಾವ್ಯಗಳನ್ನು ನಿಜಾರ್ಥದಲ್ಲಿ ಓದಿ ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮಹಾಕಾವ್ಯಗಳ ಹೆಸರನ್ನು ಬಾಯಿ ಚಟಕ್ಕೆ ಮಾತ್ರ ಬಳಸಿ ದೇಶದ ಜನರಿಗೆ ಟೋಪಿ ಹಾಕಲು ಉಪಯೋಗಿಸಿದಂತಾಗುತ್ತದೆ.

ಆಧುನಿಕ ಸಂದರ್ಭದಲ್ಲಿ ಉಳ್ಳವರಿಂದ ತೆರಿಗೆ ಸಂಗ್ರಹಿಸಿ ಇಲ್ಲದವರನ್ನು ಸಲಹುವ ತಾಯ್ತನವನ್ನು ಕಲ್ಯಾಣ ರಾಷ್ಟ್ರ ಎನ್ನಲಾಗುತ್ತದೆ. ಆಧುನಿಕ ರಾಷ್ಟ್ರಗಳ ಮೂಲ ಕಲ್ಪನೆಯೂ ಇದೇ ಆಗಿದೆ. ತನ್ನ ರಾಷ್ಟ್ರದ ಯಾವೊಬ್ಬ ಪ್ರಜೆಯೂ ಅನ್ನವಿಲ್ಲದೆ ಕೊರಗಬಾರದು. ಉದ್ಯೋಗವಿಲ್ಲದೆ ಸೊರಗಬಾರದು. ಆಸ್ಪತ್ರೆ, ಔಷಧಗಳಿಲ್ಲದೆ ನೋಯಬಾರದು. ಶಿಕ್ಷಣವಿಲ್ಲದೆ ಹಿಂದುಳಿಯಬಾರದು ಮತ್ತು ನೀರು, ವಸತಿ, ರಸ್ತೆ, ವಿದ್ಯುತ್, ಸಾರಿಗೆ ಮುಂತಾದವುಗಳಿಲ್ಲದೆ ಸಂಕಟಪಡಬಾರದು ಎಂಬ ಕಾರಣದಿಂದಲೇ ತೆರಿಗೆ ನೀತಿಯನ್ನು ರೂಪಿಸಲಾಗಿದೆ. ಹಾಗೆಂದು ಹೇಳಿ ಬಡವರು ತೆರಿಗೆ ಕಟ್ಟುವುದಿಲ್ಲವೆಂದು ಅರ್ಥವಲ್ಲ. ಬಡವರು ಖರೀದಿ ಮಾಡುವ ಬಹುತೇಕ ವಸ್ತುಗಳು, ಬೆಂಕಿ ಪೊಟ್ಟಣದಿಂದ ಬಟ್ಟೆಯವರೆಗೆ, ಔಷಧಿಯಿಂದ ಅಡುಗೆ ಎಣ್ಣೆಯವರೆಗೆ ತೆರಿಗೆ ಕಟ್ಟುತ್ತಾರೆ. ದೇಶದ ಆಡಳಿತ ಜನ ಕಲ್ಯಾಣದ ಕಡೆಗೆ ಇದ್ದರೆ ಬಡವರು ಕಟ್ಟುವ ತೆರಿಗೆ ಕಡಿಮೆಇರುತ್ತದೆ. ಉಳ್ಳವರು ಕಟ್ಟುವ ತೆರಿಗೆ ಪ್ರಮಾಣ ತುಸು ಹೆಚ್ಚಿರುತ್ತದೆ.

   ಆದರೆ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದ ತೆರಿಗೆ ನೀತಿಯು ಕಾರ್ಪೊರೇಟ್ ಬಂಡವಾಳಿಗರ ಪರವಾದ ನೀತಿಯಾಗಿ ಮಾರ್ಪಟ್ಟಿದೆ. ಸಾಮಾನ್ಯವಾಗಿ ತೆರಿಗೆಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳೆಂದು ಎರಡು ವಿಧವಾಗಿ ವಿಂಗಡಿಸಲಾಗಿದೆ. ಕಾರ್ಪೊರೇಟ್ ತೆರಿಗೆ, ಆದಾಯ ತೆರಿಗೆ, ಕಸ್ಟಮ್ಸ್ ಸುಂಕ ಮುಂತಾದವುಗಳನ್ನು ಪ್ರತ್ಯಕ್ಷ ತೆರಿಗೆಗಳೆಂದು ಗುರುತಿಸಲಾಗುತ್ತದೆ. ಜಿಎಸ್‌ಟಿ, ಸೇವಾ ತೆರಿಗೆ, ಕೇಂದ್ರ ವಿಧಿಸುವ ಎಕ್ಸೈಜ್ ಡ್ಯೂಟಿಗಳು, ವಿವಿಧ ಸೆಸ್‌ಗಳನ್ನು ಪರೋಕ್ಷ ತೆರಿಗೆಗಳೆಂದು ಸಂಗ್ರಹಿಸಲಾಗುತ್ತದೆ. ಯಾವ ದೇಶದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳಲ್ಲಿ ಪ್ರತ್ಯಕ್ಷ ತೆರಿಗೆಗಳ ಸಂಗ್ರಹ ಹೆಚ್ಚಾಗಿರುತ್ತದೊ ಆ ದೇಶದ ಆರ್ಥಿಕತೆ ತುಸು ಆರೋಗ್ಯಕರವಾಗಿರುತ್ತದೆ. ಪರೋಕ್ಷ ತೆರಿಗೆಗಳ ಭಾರ ಹೆಚ್ಚದೆ, ಉತ್ತಮ ಆಹಾರ, ಉದ್ಯೋಗ, ಶಿಕ್ಷಣ, ವಸತಿ ವ್ಯವಸ್ಥೆಯ ಸ್ಥಿತಿ ಉತ್ತಮವಾಗಿರುತ್ತದೋ ಮತ್ತು ಆರ್ಥಿಕ ಸುರಕ್ಷತೆಯ ಜೊತೆಗೆ ಸಾಮಾಜಿಕ ರಕ್ಷಣೆಯನ್ನು ತನ್ನ ದೇಶದ ಜನರಿಗೆ ಒದಗಿಸುತ್ತದೋ ಅಂತಹ ಆಡಳಿತವು ಕಲ್ಯಾಣ ರಾಷ್ಟ್ರವಾಗುವುದರ ಕಡೆಗೆ ನಡೆಯುತ್ತದೆ. ಆದರೆ ಭಾರತದಲ್ಲಿ ಇಂದು ಶೇ.75 ರಷ್ಟು ತೆರಿಗೆಯನ್ನು ಪರೋಕ್ಷ ತೆರಿಗೆಯ ರೂಪದಲ್ಲಿ ಜನರಿಂದ ವಸೂಲಿ ಮಾಡಲಾಗುತ್ತಿದೆ. ಕಾರ್ಪೊರೇಟ್ ಬಂಡವಾಳಿಗರು ಮತ್ತು ಆದಾಯ ತೆರಿಗೆ ಪಾವತಿದಾರರಿಂದ ಶೇ.25 ರಷ್ಟನ್ನು ಮಾತ್ರ ವಸೂಲಿ ಮಾಡಲಾಗುತ್ತಿದೆ.

ನರೇಂದ್ರ ಮೋದಿಯವರ ಬಿಜೆಪಿ ಸರಕಾರ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಇಡೀ ದೇಶ ಅಭಿವೃದ್ಧಿಯಲ್ಲಿ ಮಾತ್ರವಲ್ಲ, ಅನೇಕ ವಿಚಾರಗಳಲ್ಲಿ ರಾಹುಗ್ರಸ್ತವಾಗಿದೆ. ರಾಜ್ಯಗಳಿಗೆ ಅವರ ಹಕ್ಕುಗಳ ರೀತ್ಯಾ ನೀಡಬೇಕಾದ ಹಣವನ್ನು ನೀಡುತ್ತಿಲ್ಲ. ಮತ್ತೊಂದು ಕಡೆ ದೇಶದ ಜನರು ಕೈಯಲ್ಲಿ ಹಣ ಇಲ್ಲದೆ, ಉದ್ಯೋಗವಿಲ್ಲದೆ ನಿರಂತರ ಅನಿಶ್ಚಿತತೆಗಳಲ್ಲಿ ನರಳುತ್ತಿದ್ದಾರೆ. ಬಡವರ ಮೇಲೆ ಬೇಕಾಬಿಟ್ಟಿ ತೆರಿಗೆಗಳನ್ನು ಕೇಂದ್ರ ಸರಕಾರ ವಿಧಿಸುತ್ತಿದೆ. ಮನಮೋಹನ್ ಸಿಂಗ್‌ಅವರು ಅಧಿಕಾರದಲ್ಲಿದ್ದಾಗ ಇಡೀ ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಗಳಲ್ಲಿ ಭಾರತ 5ನೇ ಸ್ಥಾನದಲ್ಲಿತ್ತು. ಆದರೆ 2020ರ ಜಿಡಿಪಿ ಬೆಳವಣಿಗೆಯನ್ನು ಆಧರಿಸಿ ಕೌಶಿಕ್ ಬಸು ಮುಂತಾದ ಅರ್ಥಶಾಸ್ತ್ರಜ್ಞರು ವಿಶ್ವದ 193 ದೇಶಗಳಲ್ಲಿ ಭಾರತ 164 ನೇ ಸ್ಥಾನಕ್ಕೆ ಕುಸಿದಿದೆ ಎಂದು ಅಂದಾಜು ಮಾಡಿದ್ದಾರೆ. ನಮ್ಮ ಪಕ್ಕದಲ್ಲೇ ಇರುವ ಬಾಂಗ್ಲಾದೇಶದ ತಲಾವಾರು ಜಿಡಿಪಿ ಶೇ. 4 ರಷ್ಟು ಬೆಳವಣಿಗೆ ಹೊಂದಿದೆ. ಬಾಂಗ್ಲಾದಲ್ಲಿ ತಲಾವಾರು ಜಿಡಿಪಿ 1,888 ಡಾಲರ್ ಇದೆ. ಪ್ರಸ್ತುತ ವರ್ಷದಲ್ಲಿ ಭಾರತದ ತಲಾವಾರು ಜಿಡಿಪಿ 1,877 ಡಾಲರ್‌ಗೆ ಕುಸಿದಿದೆ. 2014 ರಲ್ಲಿ ಬಾಂಗ್ಲಾದೇಶಕ್ಕಿಂತ ಸುಮಾರು 40 ಪಟ್ಟು ಮುಂದೆ ಇದ್ದ ದೇಶದ ಆರ್ಥಿಕತೆ ನರೇಂದ್ರ ಮೋದಿಯವರ ಅಪಕ್ವ, ಕಾರ್ಪೊರೇಟ್ ಪರ ಆರ್ಥಿಕ ನೀತಿಗಳಿಂದಾಗಿ ನೆಲ ಕಚ್ಚುವಂತಾಗಿದೆ.

ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದ ಮೇಲೆ ಬೆಲೆಗಳೆಲ್ಲ ಜಾಸ್ತಿಯಾಗಿವೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ದರಗಳಿಲ್ಲ. ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಸಿಗುತ್ತಿಲ್ಲ. ಅಂಬಾನಿ, ಅದಾನಿ, ವಿಲ್‌ಮಾರ್ ಮುಂತಾದ ಕಂಪೆನಿಗಳು ದಾಸ್ತಾನು ಮಾಡಿ ಕೃತಕವಾಗಿ ಬೆಲೆ ಹೆಚ್ಚಿಸುತ್ತಿವೆ. ಹೋದ ವರ್ಷ ಉತ್ತಮ ಮಳೆಯಾಯಿತು. ಒಳ್ಳೆ ಬೆಳೆ ಬಂದಿದೆ. ಆದರೂ ಯಾಕೆ ಬೆಲೆಗಳು ಹೀಗೆ ಹೆಚ್ಚುತ್ತಿವೆ. ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರುವುದಾದರೆ, ರೈತರಿಗೆ ಯಾಕೆ ಉತ್ತಮ ಬೆಲೆ ಕೊಡಿಸುತ್ತಿಲ್ಲ ನೀವು? ಅಂದರೆ ಮೋದಿಯವರ ಪಟಾಲಂ ರೈತರ ಆದಾಯ ಹೆಚ್ಚು ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಮೂಗಿಗೆ ತುಪ್ಪ ಸವರುತ್ತಲೆ ಇದ್ದಾರೆ. ಆದರೆ ಅಂಬಾನಿ, ಅದಾನಿ ಮುಂತಾದವರು ಕ್ಷಿಪಣಿಯ ವೇಗದಲ್ಲಿ ಜನರ ಸಂಪತು್ತ ಬಳೆದು ರಾಶಿ ಹಾಕಿಕೊಳ್ಳುತ್ತಿದ್ದಾರೆ.

 ನರೇಂದ್ರ ಮೋದಿಯವರ ಸರಕಾರ ದೇಶದ ಜನರನ್ನು ‘ಹಮಾರ ಆದ್ಮಿ’ ಎಂದು ನೋಡುವ ಬದಲು ದುಶ್ಮನ್‌ಗಳ ರೀತಿಯಲ್ಲಿ ನೋಡುತ್ತಿರುವುದು ನಿಧಾನಕ್ಕೆ ಜನರಿಗೆ ಈಗೀಗ ಅರ್ಥವಾಗುತ್ತಿದೆ. ಈ ಅದಾನಿ, ಅಂಬಾನಿಗಳಾದರೂ ದೇಶದಲ್ಲಿ ಕೈಗಾರಿಕೆಗಳನ್ನೇನಾದರೂ ನಡೆಸುತ್ತಿದ್ದಾರಾ ಎಂದರೆ ಖಂಡಿತ ಇಲ್ಲ. ಅವರು ಒಬ್ಬರಿಂದ ಖರೀದಿಸಿ ಇನ್ನೊಬ್ಬರಿಗೆ ಮಾರುವ ದಲ್ಲಾಳಿಗಳಂತೆ ಕೆಲಸ ಮಾಡುತ್ತಿದ್ದಾರೆ. ಈ ದೇಶದ ಜನ 300 ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಲಕ್ಷಾಂತರ, ಕೋಟ್ಯಂತರ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆದು ಅಸಂಖ್ಯಾತ ಜನ ಹುತಾತ್ಮರಾಗಿ ಸ್ವಾತಂತ್ರವನ್ನು ಗಳಿಸಿಕೊಂಡರು. ಕಷ್ಟಪಟ್ಟು ದೇಶದಲ್ಲಿ ಸಾರ್ವಜನಿಕ ಕಂಪೆನಿ, ಉದ್ದಿಮೆಗಳನ್ನು ಕಟ್ಟಿದ್ದರು. ಈಗ ಇವುಗಳ ಮೇಲೆ ಬಿಜೆಪಿಯ ಕೆಟ್ಟ ಕಣ್ಣು ಬಿದ್ದಿದೆ. ಕಣ್ಣಿಗೆ ಕಂಡ ದೇಶದ ಸಂಪತ್ತನ್ನೆಲ್ಲಾ ಮಾರಿಕೊಳ್ಳುತ್ತಿದೆ. ಈ ದೇಶದ ಸಂಪತ್ತು ಜನರಿಗೆ ಸೇರಿದ್ದು ಎಂಬ ವಿಶಾಲ ನಿಲುವಿನಿಂದಾಗಿ ನವರತ್ನಗಳಂತಹ ಅಸಂಖ್ಯಾತ ಸರಕಾರಿ ಸ್ವಾಮ್ಯದ ರೈಲ್ವೆ, ಬಂದರು ಮತ್ತು ಇತರ ಅನೇಕ ಕಂಪೆನಿಗಳನ್ನು, ಬ್ಯಾಂಕ್‌ಗಳನ್ನು ಹಿಂದಿನ ಸರಕಾರಗಳು ಕಟ್ಟಿ ನಿಲ್ಲಿಸಿದವು. ಅವೆಲ್ಲವನ್ನೂ ಮೋದಿಯವರ ಬಿಜೆಪಿ ಸರಕಾರ ಬಿಡಿಗಾಸಿಗೆ ಖಾಸಗಿಯವರಿಗೆ ಮಾರಿಕೊಳ್ಳುತ್ತಿದೆ. ಇದರ ಜೊತೆಗೆ ಕಾರ್ಪೊರೇಟ್ ಬಂಡವಾಳಿಗರಿಗೆ ತೆರಿಗೆ ಕಡಿಮೆ ಮಾಡಿ ಅದರ ಭಾರವನ್ನು ಜನರ ಮೇಲೆ ಹೇರಲಾಗುತ್ತಿದೆ.

 ಮನಮೋಹನ್‌ಸಿಂಗ್ ಅವರು 2004ರಲ್ಲಿ ಪ್ರಧಾನಿಯಾಗುವ ಮೊದಲು ಕೇಂದ್ರ ಸರಕಾರವು ಜನರಿಂದ ಶೇ.72 ರಷ್ಟು ಮತ್ತು ಕಾರ್ಪೊರೇಟ್ ಬಂಡವಾಳಿಗರಿಂದ ಶೇ.28 ರಷ್ಟು ತೆರಿಗೆಯನ್ನು ಸಂಗ್ರಹಿಸುತ್ತಿತ್ತು. ಆದರೆ 2010 ಕ್ಕೆ ಬರುವ ವೇಳೆಗೆ ಮನಮೋಹನ್‌ಸಿಂಗ್‌ರು ಜನರಿಂದ ಶೇ.58 ರಷ್ಟು ಮತ್ತು ಕಾರ್ಪೊರೇಟ್ ಕಂಪೆನಿಗಳಿಂದ ಶೇ.40 ರಷ್ಟು ತೆರಿಗೆಯನ್ನು ಸಂಗ್ರಹ ಮಾಡುವ ಸ್ಥಿತಿಗೆ ತಂದರು. ಅವರು ಅಧಿಕಾರದಿಂದ ಇಳಿದಾಗಲೂ ತೆರಿಗೆ ಸಂಗ್ರಹಣೆಯಲ್ಲಿ ಪರೋಕ್ಷ ತೆರಿಗೆ ಶೇ.63 ಮತ್ತು ಪ್ರತ್ಯಕ್ಷ ತೆರಿಗೆ ಶೇ.37ರಷ್ಟು ಇತ್ತು.

  ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಇದ್ದರೆ ಜನ ನೆಮ್ಮದಿಯಿಂದಿರುತ್ತಾರೆ, ಮೋದಿಯವರು ದೇಶದ ಪ್ರಧಾನಿಯಾದ ಮೇಲೆ ಜನರು ಕಟ್ಟುವ ತೆರಿಗೆ ಪ್ರಮಾಣ ಹೆಚ್ಚುತ್ತಾ ಹೋಗಿ 2020-21ರ ವೇಳೆಗೆ ಶೇ.75ಕ್ಕೆ ತಲುಪಿದೆ. ಕಾರ್ಪೊರೇಟ್ ಕುಳಗಳು ಕೇವಲ ಶೇ.25 ರಷ್ಟನ್ನು ಪಾವತಿಸುತ್ತಿವೆ. ಈ ತೆರಿಗೆ ಪದ್ಧತಿ ಸದ್ಯಕ್ಕೆ ಬದಲಾಗುವ ಹಾಗೆ ಕಾಣುತ್ತಿಲ್ಲ. 15ನೇ ಹಣಕಾಸು ಆಯೋಗವು ಅಂದಾಜು ಮಾಡಿರುವಂತೆ 2024-25ಕ್ಕೆ ಕಾರ್ಪೊರೇಟ್ ತೆರಿಗೆ ಸಂಗ್ರಹದ ಗುರಿ ಕೇವಲ ಶೇ. 34.75ರಷ್ಟು ಹೆಚ್ಚಾಗುತ್ತದೆ. ಅದೇ ಸಂದರ್ಭದಲ್ಲಿ ಜನರು ಪಾವತಿಸುವ ಜಿಎಸ್‌ಟಿ ಯು ಶೇ.45.48ರಷ್ಟು ಹಾಗೂ ಪೆಟ್ರೋಲ್, ಡೀಸೆಲ್ ಮುಂತಾದವುಗಳ ಮೇಲೆ ವಿಧಿಸುತ್ತಿರುವ ಸುಂಕಗು ಶೇ.62 ರಷ್ಟು ಹೆಚ್ಚಾಗುತ್ತವೆ.

ಇಂಥ ತೆರಿಗೆ ನೀತಿಯನ್ನು ಅನುಸರಿಸುತ್ತಿರುವ ಮೋದಿಯವರು ದೇಶದ ಜನರನ್ನು ನೆಮ್ಮದಿಯಾಗಿರುವಂತೆ ನೋಡಿಕೊಳ್ಳಲು ಸಾಧ್ಯವೇ? ದೇಶದ ಜನರ ಕೈಯಲ್ಲಿ ಯಾವ ಕಾರಣಕ್ಕೂ ಒಂದು ಪೈಸೆ ಹಣ ಉಳಿಯದಂತೆ ದೋಚಿಕೊಳ್ಳುವುದು ಇವರ ಉದ್ದೇಶವಾಗಿದೆ. ನೋಟ್‌ಬ್ಯಾನ್, ಜಿಎಸ್‌ಟಿ ಮತ್ತು ಕೊರೋನದಿಂದಾಗಿ ಜನರು ಬರ್ಬಾದಾಗುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕವು ದೇಶವನ್ನು ಆವರಿಸಿ ಜನರು ಅನ್ನ, ನೀರಿಗೂ ಪರದಾಡುವ ಸ್ಥಿತಿಯಲ್ಲಿದ್ದರೆ ಅದಾನಿ, ಅಂಬಾನಿ ಮುಂತಾದ ಕಾರ್ಪೊರೇಟ್ ಬಂಡವಾಳಿಗರು ಸುಮಾರು 12.5 ಲಕ್ಷ ಕೋಟಿಯಷ್ಟು ಸಂಪತ್ತನ್ನು ಹೆಚ್ಚಿಸಿಕೊಂಡರು. ದೇಶದ ಬಡವರು, ಮಧ್ಯಮ ವರ್ಗದವರು ಬಳಸುವ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್‌ಗಳ ಬೆಲೆ ಏರಿಕೆಯಾಗಿ ಜನರ ಬದುಕನ್ನು ನರಕದಂತೆ ಸುಡುತ್ತಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಸೇರಿ ಕೊರೋನ ಅವಧಿಯಲ್ಲೂ ನಮ್ಮ ರಾಜ್ಯದ ಜನರಿಂದ 2020-21ರಲ್ಲಿ ಸುಮಾರು ರೂ. 45 ಸಾವಿರ ಕೋಟಿಗೂ ಹೆಚ್ಚಿನ ಸುಂಕವನ್ನು ಡೀಸೆಲ್ ಮತ್ತು ಪೆಟ್ರೋಲ್ ಎರಡರಿಂದಲೇ ದೋಚಿಕೊಂಡಿವೆ. 2014 ರಿಂದ ಇದುವರೆಗೆ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್‌ಗಳ ಬಾಬತ್ತಿನಿಂದ 20.5 ಲಕ್ಷ ಕೋಟಿ ರೂ.ಗಳನ್ನುಸಂಗ್ರಹಿಸಿದೆ. ನಮ್ಮ ರಾಜ್ಯವೊಂದರಿಂದಲೇ ಕೇಂದ್ರ ಸರಕಾರವು ಸುಮಾರು 1.20 ಲಕ್ಷ ೋಟಿ ರೂ.ಗಳನ್ನು ದೋಚಿಕೊಂಡಿದೆ.

ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್‌ಗಳಿಂದ ಲೀಟರೊಂದರ ಮೇಲೆ 60-65 ರೂ.ಗಳನ್ನು ವಸೂಲು ಮಾಡುತ್ತಿದ್ದೀರಾ ಅದನ್ನು ಕಡಿಮೆ ಮಾಡಿ ಎಂದರೆ ಪ್ರಧಾನಿಯವರು ಉಸಿರು ಬಿಡುತ್ತಿಲ್ಲ. ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೊರೋನ ನಿರ್ವಹಿಸಲು ಹಣ ಬೇಕು ಹಾಗಾಗಿ ಬೆಲೆಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪೆನಿಗಳು ದೇಶದ ಜನರನ್ನು ಹುರಿದು ಮುಕ್ಕುತ್ತಿವೆ. ಅವರು ಲಕ್ಷ ಲಕ್ಷ ಕೋಟಿಗಳನ್ನು ಸಂಪಾದಿಸಿದ್ದಾರೆ. ಅವರ ಸಂಪತ್ತಿನ ಮೇಲೆ ಕೇವಲ ಶೇ.5 ರಷ್ಟು ತೆರಿಗೆ ವಿಧಿಸಿದರೆ ಸಾಕು ಜನರ ಮೇಲಿನ ತೆರಿಗೆ ಭಾರವನ್ನು ಅರ್ಧದಷ್ಟು ಇಳಿಸಬಹುದು ಎಂದರೆ ಬಿಜೆಪಿಯವರು ಬಾಯಿಗೆ ಬೀಗ ಹಾಕಿಕೊಳ್ಳುತ್ತಾರೆ. ಇಲ್ಲ ಸುಳ್ಳು ಹೇಳಲು ಪ್ರಾರಂಭಿಸುತ್ತಾರೆ.

   ಪ್ರಧಾನಿ ಮೋದಿಯವರು ದೇಶದ ತೆರಿಗೆ ಭಯೋತ್ಪಾದನೆಯನ್ನು ಅಂತ್ಯ ಕಾಣಿಸುತ್ತೇವೆ ಎನ್ನುತ್ತಾರೆ. ಯಾವ, ಯಾರ ಮೇಲಿನ ತೆರಿಗೆ ಭಯೋತ್ಪಾದನೆ ಬಗ್ಗೆ ಮೋದಿಯವರು ಮಾತನಾಡುತ್ತಿದ್ದಾರೆ? ಜನರಲ್ಲಿರುವ ಕಡೆಯ ಪೈಸೆಯನ್ನೂ ಕಿತ್ತುಕೊಳ್ಳುವುದು ತೆರಿಗೆ ಭಯೋತ್ಪಾದನೆ ಅಲ್ಲವೇ? ಜನರನ್ನು ಕಾರ್ಪೊರೇಟ್ ಬಂಡವಾಳಿಗರು ದೋಚಿ ಅವರ ಬದುಕನ್ನು, ದೇಶದ ಆರ್ಥಿಕತೆಯನ್ನು ಬರ್ಬಾದು ಮಾಡುತ್ತಿರುವುದು ಆರ್ಥಿಕ ಭಯೋತ್ಪಾದನೆಯಲ್ಲವೇ? ಮೋದಿಯವರು ಪ್ರಧಾನಿಯಾಗಿರುವುದು ಕೇವಲ 100-200 ಜನ ಬಂಡವಾಳಿಗರ ಹಿತ ಕಾಯುವುದಕ್ಕ್ಕೋ ಅಲ್ಲ 136 ಕೋಟಿ ಜನರ ಬದುಕನ್ನು ಸುಧಾರಿಸಲಿಕ್ಕೋ ಎಂಬುದನ್ನು ಅವರು ದೇಶದ ಜನರೆದುರು ಸ್ಪಷ್ಟಪಡಿಸಬೇಕು. ಕೊರೋನ ಔಷಧಗಳ ಮೇಲೂ ಜಿಎಸ್‌ಟಿ ವಿಧಿಸುತ್ತಿರುವುದು ಯಾವ ಜನರ ಹಿತ ಕಾಯುವುದಕ್ಕೆ? ಪರೋಕ್ಷವಾಗಿ ಮೋದಿಯವರು ಅದಾನಿ, ಅಂಬಾನಿಗಳು ಮತ್ತಿತರ ಬಂಡವಾಳಿಗರ ಮೇಲಿನ ತೆರಿಗೆಯನ್ನು ಇನ್ನೂ ಕಡಿಮೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ತೆರಿಗೆ ಭಯೋತ್ಪಾದನೆ ಮುಂತಾದ ಮಾತುಗಳು ಯಾವಾಗಲೂ ಬರುವುದು ಕಾರ್ಪೊರೇಟ್‌ಗಳ ಬಾಯಿಂದಲೇ. ಪಾಪ ಜನರೆಂದೂ ಇಂಥ ಮಾತುಗಳನ್ನು ಬಳಸಿಲ್ಲ. 5 ರೂ.ಗೆ ಸಿಗುತ್ತಿದ್ದ ಉಪ್ಪು 25 ರೂ. ಆದಾಗ ತೆರಿಗೆ ಭಯೋತ್ಪಾದನೆ ಅಂದಿದ್ದರೆ? ಆದರೆ ಮೋದಿಯವರು ಕಾರ್ಪೊರೇಟ್‌ಗಳು ಬಳಸುತ್ತಿದ್ದ ಭಾಷೆಯನ್ನು ದೇಶದ ಪ್ರಧಾನಿಯಾಗಿ ಬಳಸತೊಡಗಿದ್ದಾರೆ. ಹಾಗಾಗಿ ಅವರು ಯಾರ ಪ್ರಧಾನಿ ಎಂಬ ಗಂಭೀರವಾದ ಅನುಮಾನಗು ದೇಶದ ಜನರಿಗೆ ಬರಲಾರಂಭಿಸಿವೆ.

ಮೋದಿಯವರ ಪಾಲಿಸಿಗಳು ಒಂದೊಂದಾಗಿ ಅದಾನಿ, ಅಂಬಾನಿ ಮುಂತಾದ ಗುಜರಾತ್ ಮೂಲದ ಬಂಡವಾಳಿಗರ ಪರವಾಗುತ್ತಿವೆ. ಇದರಿಂದಾಗಿ ಗುಜರಾತು ಸೇರಿದಂತೆ ದೇಶದ ಕೋಟ್ಯಾನುಕೋಟಿ ದುಡಿಯುವ ಜನರ ಉಣ್ಣುವ ಅನ್ನದ ತಟ್ಟೆ ಖಾಲಿಯಾಗುತ್ತಿದೆ. ಮೋದಿಯವರು ಜನರ ಪರವಾಗಿದ್ದರೆ ಕೊರೋನ ಕಾಲದಲ್ಲಿ ಕಾರ್ಪೊರೇಟ್‌ಗಳ ಮೇಲೆ ತೆರಿಗೆ ಹಾಕಿ ಅಮೆರಿಕ, ಯುರೋಪಿನ ದೇಶಗಳು ಮಾಡಿದಂತೆ ಜನರಿಗೆ ನೆರವಾಗುತ್ತಿರಲಿಲ್ಲವೇ? ನಮ್ಮಲ್ಲಿ ಅತ್ಯಂತ ಅಗತ್ಯವಾಗಿ ಮಾಡಬೇಕಾದ ಬೆಲೆ ಏರಿಕೆಯನ್ನು ತಡೆಗಟ್ಟುತ್ತಿರಲಿಲ್ಲವೇ?

ಈಗಲೂ ಕೆಲವರು ಮೋದಿಯವರನ್ನು ಕುರುಡಾಗಿ ಸಮರ್ಥಿಸುತ್ತಾರೆ. ಮೋದಿಯವರ ಆರ್ಥಿಕ ನೀತಿಗಳು ಚೆನ್ನಾಗಿವೆ ಎಂದು ವಾಟ್ಸ್‌ಆ್ಯಪ್ ಯೂನಿವರ್ಸಿಟಿ ಹೇಳಿದ ಮಾತುಗಳನ್ನು ಕೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ. ಜನರು ಕಟ್ಟಿದ ಪ್ರತಿ ರೂ.ಯೂ ದೇಶದ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂದು ಭಾವಿಸುವಷ್ಟು ಮುಗ್ಧತೆ ಅವರಲ್ಲಿದೆ. ಅಂಥ ಜನರು ಒಮ್ಮೆಯಾದರೂ ಈ ದೇಶಕ್ಕೆ ಕಷ್ಟ ಬಂದಿದ್ದು ಏಕೆ ಎಂದು ಕೇಳಿಕೊಳ್ಳುತ್ತಿಲ್ಲ. ಮುಗ್ಧರೊಳಗೆ ಈ ಪ್ರಶ್ನೆ ಹುಟ್ಟಿದರೆ ತಕ್ಷಣ ಪಾಕಿಸ್ತಾನ, ನೆಹರೂ ಎಂದು ಹೇಳಿ ಬಡವರ ಪ್ರಶ್ನೆಯ ದಿಕ್ಕುಗಳ್ನೇ ಬದಲಾಯಿಸಿ ಮರೆಸಿ ಬಿಡುತ್ತಾರೆ.

 ದೇಶದ ಜನರು ಕಟ್ಟಿದ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ? ಎಂಬ ಪ್ರಶ್ನೆ ತುಸುವಾದರೂ ಸಾಮಾನ್ಯಜ್ಞಾನ ಇರುವವರಿಗೆ ಹುಟ್ಟುವುದು ಸಹಜ. ಎಲ್ಲಿಗೆ ಹೋಗುತ್ತಿದೆ ಗೊತ್ತೆ? ಇಂದು ದೇಶವು ಸಂಗ್ರಹಿಸಿದ ಪ್ರತಿ 100 ರೂ.ಯಲ್ಲಿ 45 ರೂ. ಸಾಲ ತೀರಿಸುವುದಕ್ಕೆ ಖರ್ಚಾಗುತ್ತಿದೆ. ಹಾಗೆಂದರೆ ಇದು ಕಾಂಗ್ರೆಸ್ ಮುಂತಾದ ಸರಕಾರಗಳು ಮಾಡಿದ್ದ ಸಾಲಕ್ಕೆ ಬಡ್ಡಿ ಕಟ್ಟಲಾಗುತ್ತಿದೆ ಎಂದು ಬಿಜೆಪಿ ನಾಯಕರು ಜನರ ಮೆದುಳು ತೊಳೆದುಬಿಡುತ್ತಾರೆ.

ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದ 2014 ರ ಮಾರ್ಚ್‌ವರೆಗೆ 67 ವರ್ಷಗಳ ಆಡಳಿತದಲ್ಲಿ ಮಾಡಿದ್ದ ಸಾಲ 53.11 ಲಕ್ಷ ಕೋಟಿ ರೂ.ಗಳು. ಆದರೆ 2014ರ ಜೂನ್‌ನಿಂದ 2021ರ ವೇಳೆಗೆ 7 ವರ್ಷದಲ್ಲಿ ಮಾಡಿದ ಸಾಲ 82.7 ಲಕ್ಷ ಕೋಟಿ ರೂ.. ಈ ಎರಡೂ ಸೇರಿ ಈ ವರ್ಷದ ಅಂತ್ಯಕ್ಕೆ 135.87 ಲಕ್ಷ ಕೋಟಿಗಳಾಗುತ್ತವೆ. ಇದರ ಜೊತೆಗೆ ಅದಾನಿ ಮುಂತಾದ ಕೆಲ ಪರಮಾಪ್ತ ಕಾರ್ಪೊರೇಟ್ ಬಂಡವಾಳಿಗರ ಸುಮಾರು 11 ಲಕ್ಷ ಕೋಟಿಗಳಷ್ಟು ಸಾಲವನ್ನು ಎನ್‌ಪಿಎ (ವಸೂಲಾಗದ ಸಾಲ) ಎಂದು ಘೋಷಿಸಲಾಗಿದೆ. 2018 ರಿಂದ ಈಚೆಗೆ ಕಳೆದ ನಾಲ್ಕು ವರ್ಷಗಳಲ್ಲಿ 7 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ರೈಟ್ ಆಫ್ (ಮನ್ನಾ?) ಮಾಡಲಾಗಿದೆ.

ಎನ್‌ಪಿಎ ಆದ ಹಣದಲ್ಲಿ ಅದಾನಿಯದೆ ಸುಮಾರು 4.5 ಲಕ್ಷ ಕೋಟಿ ರೂ.ಗಳಷ್ಟಿದೆ ಎಂದು ಬಿಜೆಪಿಯ ಹಿರಿಯ ನಾಯಕರಾದ ಸುಬ್ರಮಣಿಯನ್ ಸ್ವಾಮಿಯವರೇ ಹೇಳಿದ್ದಾರೆ. ಅವರ ಪ್ರಕಾರ, “Trapeze artist Adani now owes Rs. 4.5 lakh crores as NPA to banks. .. Yet his wealth is doubling every two years since 2016. why can’t he repay the banks? may be like with the six airports he has bought he might soon buy out all  the banks he owes money”.  ಎಂದು ಜನವರಿ 15 ರಂದು ಟ್ವೀಟ್ ಮಾಡಿದ್ದಾರೆ. ದೇಶದ ಎಲ್ಲ ಬ್ಯಾಂಕುಗಳ ಹಣವನ್ನು ಅದಾನಿ ನುಂಗದೆ ಬಿಡುವುದಿಲ್ಲ ಎಂಬ ಸುಬ್ರಮಣಿಯನ್ ಸ್ವಾಮಿಯವರ ಮಾತುಗಳು ಪ್ರಧಾನಿ ಮೋದಿಯವರಿಗೆ ಕೇಳಿಸಿವೆಯೇ? ಕೇಳಿಸಿದರೂ ಸಹ ದೇಶ ಹಾಳಾದರೂ ತಮ್ಮ ಪರಮಾಪ್ತರು ಉದ್ಧಾರವಾದರೆ ಸಾಕು ಎಂದು ಸುಮ್ಮನಿರುವುದು ಏಕೆ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top