ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿಲ್ಲ | Vartha Bharati- ವಾರ್ತಾ ಭಾರತಿ

--

ವಿಪಕ್ಷ ನಾಯಕ ಸಿದ್ದರಾಮಯ್ಯರೊಂದಿಗೆ ‘ವಾರ್ತಾಭಾರತಿ’ ವಿಶೇಷ ಸಂದರ್ಶನ

ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿಲ್ಲ

► ‘ಕೊರೋನ ಸಾವು ನೋವಿಗೆ ಸರಕಾರದ ವೆಫಲ್ಯ ಕಾರಣ’

ನಿರ್ಮಲಾ ಸೀತಾರಾಮನ್ ಬಹಿರಂಗ ಚರ್ಚೆಗೆ ಬರಲಿ

ಜನರಿಗೆ ಬಿಜೆಪಿಯವರು ತಪ್ಪು ಮಾಹಿತಿ ನೀಡುತ್ತಿದ್ದು, ಮೋದಿ ಸುಳ್ಳು ಹೇಳುತ್ತಿದ್ದಾರೆ. ಇದೀಗ ನಾನು ಹೇಳುವುದು ತಪ್ಪಿದ್ದರೆ ಹೇಳಲಿ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚರ್ಚೆಗೆ ಬರಲಿ. ನಾನು ಬಹಿರಂಗ ಚರ್ಚೆಗೆ ಸಿದ್ಧ. 2020-21ರ ರಾಜಸ್ವ ಕೊರತೆ ಮತ್ತು ತೆರಿಗೆಯಲ್ಲಿ ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ನೀಡಬೇಕಿದ್ದ ಪಾಲಿನಲ್ಲಿ ಆಗಿರುವ ಅನ್ಯಾಯ ಸರಿದೂಗಿಸಲು 15ನೇ ಹಣಕಾಸು ಆಯೊಗ ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಶಿಫಾರಸು ಮಾಡಿತ್ತು. ನಿರ್ಮಲಾ ಸೀತಾರಾಮನ್ ಆ ಅನುದಾನಕ್ಕೆ ಕಲ್ಲು ಹಾಕಿ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್ ತನ್ನನ್ನು ಆರಿಸಿ ಕಳಿಸಿರುವ ಕರ್ನಾಟಕಕ್ಕೆ ತಾನೇ ಮಾಡಿರುವ ಅನ್ಯಾಯವನ್ನು ಮುಚ್ಚಿಹಾಕಲು ವಾಸ್ತವಾಂಶವನ್ನು ತಿರುಚಿ ಜನತೆಯನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಇದು ಸುಳ್ಳೇ, ನನಗೆ ಮಾಹಿತಿ ಇಲ್ಲ ಎಂದು ಹೇಳುತ್ತಾರೆ. ಹಾಗಿದ್ದರೆ ಚರ್ಚೆಗೆ ಬರಲಿ.

 ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ 

ಬೆಂಗಳೂರು : ‘ನಾನೇ ಮುಂದಿನ ಮುಖ್ಯಮಂತ್ರಿ ಎಂದು ಎಲ್ಲೂ ಹೇಳಿಲ್ಲ.. ಯಾರೋ ಒಬ್ಬಿಬ್ಬರು ಹೇಳಿದರೆ ಅದು ಪಕ್ಷದ ತೀರ್ಮಾನ ಆಗುವುದಿಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

 ರವಿವಾರ ತಮ್ಮ ಬಿಡುವಿಲ್ಲದ ಕಾರ್ಯ ಒತ್ತಡದ ನಡುವೆಯೇ ‘ವಾರ್ತಾಭಾರತಿ’ ಯೂಟ್ಯೂಬ್ ಚಾನೆಲ್ ಮತ್ತು ಪತ್ರಿಕೆಗೆ ವಿಶೇಷ ಸಂದರ್ಶನ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ಕೇಂದ್ರ ಸರಕಾರಕ್ಕೆ ಹತ್ತು ಹಲವು ಪ್ರಶ್ನೆಗಳನ್ನು ಹಾಕಿರುವುದರ ಜೊತೆಗೆ, ಮುಂದಿನ ಮುಖ್ಯಮಂತ್ರಿ ಆಯ್ಕೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯಗಳು, ಮುಂಬರುವ ಚುನಾವಣೆಗೆ ಸಿದ್ಧತೆ ಸಹಿತ ತಮ್ಮ ಮನದಾಳದ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದು, ಪತ್ರಿಕೆ ಓದುಗರಿಗಾಗಿ ಸಂದರ್ಶನದ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ.

► ವಾ.ಭಾ: ಕಣ್ಣಿಗೆ ಕಾಣದ ಒಂದು ವೈರಾಣು ಇಡೀ ಮನುಷ್ಯ ಸಂಕುಲವನ್ನೇ ಕಂಗೆಡಿಸಿದೆ, ಪ್ರತಿರೋಧಕ್ಕಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವುದು, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುತ್ತಿದ್ದೇವೆ, ಈ ಬಗ್ಗೆ ಮೊದಲಿಗೆ ತಮ್ಮ ಅಭಿಪ್ರಾಯವೇನು?

►  ಸಿದ್ದರಾಮಯ್ಯ: ಸೋಂಕು ಹರಡುವ ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ-ರಾಜ್ಯ ಸರಕಾರಗಳಿಂದ ಸಾಧ್ಯವಿತ್ತು. ಸೂಕ್ತ ಮುಂಜಾಗ್ರತೆ ಮತ್ತು ಅಗತ್ಯ ಸಿದ್ಧತೆಯನ್ನು ಪ್ರಾಮಾಣಿಕವಾಗಿ ಮಾಡಿದ್ದರೆ ಸಾವು-ನೋವು ಕಡಿಮೆ ಮಾಡಲು ಸಾಧ್ಯವಿತ್ತು. ಎರಡನೇಅಲೆಯಲ್ಲಿ ಸರಕಾರಗಳ ಬೇಜವಾಬ್ದಾರಿ ಕಾರಣಗಳಿಂದ ಅತ್ಯಂತ ಹೆಚ್ಚು ಸಾವು-ನೋವಿಗಳಾಗಿವೆ. ಸರಕಾರ ನೀಡಿರುವ ಕೋವಿಡ್ ಸಾವಿನ ಅಂಕಿ-ಸಂಖ್ಯೆಗಳು ತಪ್ಪಿದೆ. ಸರಕಾರಿ ಆಸ್ಪತ್ರೆಗಳ ಸಾವಿನ ಲೆಕ್ಕವನ್ನಷ್ಟೇ ಇಟ್ಟಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ, ಮನೆಗಳಲ್ಲಿ ಮತ್ತು ಹಾಸಿಗೆ ಕೊರತೆಯಿಂದ ಆಗಿರುವ ಸಾವಿನ ಲೆಕ್ಕವನ್ನು ನೀಡಿಲ್ಲ. ಸುಮಾರು 35 ಸಾವಿರದಿಂದ 36 ಸಾವಿರದಷ್ಟು ಜನರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಅದರ ಹತ್ತು ಪಟ್ಟು ಅಂದರೆ ಸುಮಾರು 3.50ಲಕ್ಷದಷ್ಟು ಜನ ಸಾವನ್ನಪ್ಪಿದ್ದಾರೆ. ಇದನ್ನು ಕಡಿಮೆ ಮಾಡಲು ಸಾಧ್ಯವಿತ್ತು. ತಜ್ಞರು ಮೊದಲೇ ಮುನ್ನಚ್ಚರಿಕೆ ನೀಡಿದ್ದರೂ ಆಕ್ಸಿಜನ್, ಐಸಿಯು, ವೆಂಟಿಲೇಟರ್, ಔಷಧಿ ಸಹಿತ ಯಾವುದೇ ವ್ಯವಸ್ಥೆ ಮಾಡಿಕೊಳ್ಳಲಿಲ್ಲ. ಸರಕಾರದ ನಿರ್ಲಕ್ಷ, ಉದಾಸೀನತೆ ಹೆಚ್ಚು ಸಾವು ಸಂಭವಿಸಲಿಕ್ಕೆ ಮೂಲ ಕಾರಣ.

►  ವಾ.ಭಾ: ಕೋವಿಡ್ ಸಂಕಷ್ಟದಿಂದ ಒಂದು ಕಡೆ ಜನತೆ ಬದುಕು ಕಟ್ಟಿಕೊಳ್ಳಲು ಪರದಾಡುವ ಸಂದಿಗ್ಧ ಸಂದರ್ಭದಲ್ಲಿ ವಿಪಕ್ಷ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ? ಯಾರ ನೇತೃತ್ವದಲ್ಲಿ ಚುನಾವಣೆ ನಡೆಯಬೇಕೆಂದು ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳಿಗೆ ಇದು ಸೂಕ್ತ ಸಮಯವೇ?

 ಸಿದ್ದರಾಮಯ್ಯ: ‘ಮುಖ್ಯಮಂತ್ರಿ ಚರ್ಚೆಯೇ ಆಗಿಲ್ಲ. ಪಕ್ಷದಲ್ಲಿ ಯಾರೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಎಲ್ಲಿಯೂ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಇದು ಚರ್ಚೆಯ ವಿಷಯವೇ ಅಲ್ಲ. ಯಾರೋ ಒಬ್ಬಿಬ್ಬರು ತಮ್ಮ ಅಭಿಪ್ರಾಯಗಳನ್ನು ಹೇಳಿದರೆ ಅದನ್ನೇ ಪ್ರಮುಖ ಚರ್ಚೆ ಮಾಡುವ ಅಗತ್ಯವೇ ಇಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚರ್ಚೆ ಅಪ್ರಸ್ತುತ. ಇದಕ್ಕೆ ಕೆಲ ಮಾಧ್ಯಮಗಳು ರೆಕ್ಕೆಪುಕ್ಕ ಕೊಟ್ಟು ಅಪಪ್ರಚಾರ ನಡೆಸಿದವು. ಹೆಚ್ಚು ರಂಜಿತವಾಗಿ ಮಾಡಿದವು. ಇದೀಗ ನಾವು ಅಧಿಕಾರದಲ್ಲೇ ಇಲ್ಲ. ಚುನಾವಣೆಗೆ ಇನ್ನೂ ಎರಡು ವರ್ಷ ಕಾಲಾವಕಾಶವಿದೆ.ಯಾರೋ ಒಬ್ಬರು ಅಭಿಮಾನದಿಂದ ಹೇಳಿದ್ದನ್ನು ವಿಸ್ತರಿಸುವ ಅಗತ್ಯವಿಲ್ಲ. ನಾನು ಎಂದೂ ಆ ಬಗ್ಗೆ ಹೇಳಿಲ್ಲ. ನಾನು ಸೂಚನೆ ನೀಡಿದ ಬಳಿಕ ಯಾರೂ ಆ ಕುರಿತು ಪ್ರತಿಕ್ರಿಯೆ ನೀಡಿಲ್ಲ.

► ವಾ.ಭಾ: ‘ಪಕ್ಷದಿಂದ ಹೊರಗೆ ಹೋದವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ’ ಎಂಬ ನಿಮ್ಮ ಹೇಳಿಕೆ ಎಷ್ಟು ಸರಿ?

ಸಿದ್ದರಾಮಯ್ಯ:  ‘ವಿಧಾನಸಭೆ ಅಧಿವೇಶನದಲ್ಲಿ ಪಕ್ಷ ದ್ರೋಹ ಮಾಡಿ ಹೋದವರನ್ನು ಜಗತ್ತೇ ಪ್ರಳಯ ಆದರೂ ಯಾವುದೇ ಕಾರಣಕ್ಕೂ ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದೆ. ಆ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ ಎಂದು ಹೇಳಿದ್ದೇನೆ. ಈ ವಿಷಯ ಬಂದಾಗ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ. ಪಕ್ಷ ಎಲ್ಲರೂ ಸೇರಿದ್ದು.

►  ವಾ.ಭಾ: ಬೇರೆ ಪಕ್ಷಕ್ಕೆ ದ್ರೋಹ ಮಾಡಿ ಬಂದವರನ್ನು ಸೇರ್ಪಡೆ ಮಾಡಿಕೊಳ್ಳಬಹುದೇ? ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಅಡ್ಡಮತದಾನ ಮಾಡಿ ದ್ರೋಹ ಮಾಡಿದವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಸರಿಯೇ?

 ಸಿದ್ದರಾಮಯ್ಯ: ರಾಜ್ಯಸಭಾ ಚುನಾವಣೆಯಲ್ಲಿ ಕೆಲವರು ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದರು. ಆ ಬಳಿಕ ಅವರು ಪಕ್ಷಕ್ಕೆ ಅರ್ಜಿ ಹಾಕಿ ಪಕ್ಷದ ತತ್ವ, ಸಿದ್ಧಾಂತ ಮತ್ತು ನಾಯಕತ್ವವನ್ನು ಒಪ್ಪಿ ಬಂದಿದ್ದಾರೆ. ಆ ಪಕ್ಷದಲ್ಲಿ ದ್ರೋಹ ಮಾಡಿದ್ದ ಬಗ್ಗೆ ನನಗೆ ಗೊತ್ತಿಲ್ಲ. ಅನ್ಯ ಪಕ್ಷಗಳಿಂದ ಬರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಇದನ್ನೇ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಯಾರನ್ನು ಏಕಾಏಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ಪಕ್ಷಕ್ಕೆ ಬರಬಹುದು. ಪಕ್ಷದ ಸಿದ್ಧಾಂತ ಮತ್ತು ನಾಯಕತ್ವ ಒಪ್ಪಿಕೊಳ್ಳಬೇಕು. ಅರ್ಜಿ ಹಾಕಬಾರದು ಎಂದು ಹೇಳಿಲ್ಲ. ಅರ್ಜಿ ಹಾಕಿದವರನ್ನೆಲ್ಲ ಸೇರ್ಪಡೆ ಮಾಡಿಕೊಳ್ಳಬೇಕು ಎಂದೇನು ಇಲ್ಲ. ಯಾರಾದರೂ ಅರ್ಜಿ ಹಾಕಿದರೆ ಆ ಸಮಿತಿ ಪರಿಶೀಲನೆ ನಡೆಸಿ, ಹೈಕಮಾಂಡ್ ಸಮ್ಮತಿಸಿದರೆ ಮಾತ್ರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.

► ವಾ.ಭಾ: ಮುಂದಿನ ಮುಖ್ಯಮಂತ್ರಿ ವಿಚಾರ ಅಪ್ರಸ್ತುತ ಆದರೂ, ಸಿ.ಎಂ. ಇಬ್ರಾಹೀಂ ಮುಸ್ಲಿಮರು ರಾಜ್ಯದಲ್ಲಿ ಅತ್ಯಂತ ಹೆಚ್ಚಿದ್ದು, ನಮ್ಮ ಸಮುದಾಯಕ್ಕೂ ಒಂದು ಅವಕಾಶ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ, ಈ ಬಗ್ಗೆ ಏನು ಹೇಳುತ್ತೀರಿ?

ಸಿದ್ದರಾಮಯ್ಯ: ಕಾಂಗ್ರೆಸ್ ಪಕ್ಷ ಮಾತ್ರವೇ ಎಲ್ಲರಿಗೂ ಅವಕಾಶ ನೀಡುತ್ತಿದೆ. ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವ ಪಕ್ಷ. ರಾಜಸ್ಥಾನ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ನಾಲ್ಕೈದು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಪರಿಶಿಷ್ಟರು, ಮುಸ್ಲಿಮರು ಸೇರಿದಂತೆ ಅವಕಾಶ ವಂಚಿತ ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ಸಿಗಬೇಕು. ಆ ಸಮುದಾಯಗಳು ಕೇಳುವುದರಲ್ಲಿ ತಪ್ಪಿಲ್ಲ. ನಮ್ಮ ಸಮುದಾಯದವರು ಆಗಬೇಕೆಂದು ಬಯಸಿದರೂ ತಪ್ಪಲ್ಲ. ಅವಕಾಶ ವಂಚಿತರಿಗೆ ನ್ಯಾಯ ಸಿಗಬೇಕು. ಹೊಸದಾಗಿ ಆಯ್ಕೆಯಾದ ಶಾಸಕರು ತಮ್ಮ ಅಭಿಪ್ರಾಯ ಹೇಳಬೇಕು. ಅದನ್ನು ಆಧರಿಸಿ ಪಕ್ಷ ಅಂತಿಮವಾಗಿ ಸಿಎಂ ಅಭ್ಯರ್ಥಿ ತೀರ್ಮಾನ ಮಾಡಲಿದೆ.

►  ವಾ.ಭಾ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ 2015ರಲ್ಲಿ ತಮ್ಮ ಅವಧಿಯಲ್ಲಿ ನಡೆದಿದ್ದ ಸಾಮಾಜಿಕ ಶೈಕ್ಷಣಿಕ (ಜಾತಿ ಗಣತಿ) ಸಮೀಕ್ಷೆಯ ವರದಿ ಸೋರಿಕೆ ಆಯಿತೇ ವಿನಃ ಬಿಡುಗಡೆ ಆಗಲಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ.

ಸಿದ್ದರಾಮಯ್ಯ: ಜಾತಿ ಗಣತಿಯ ವರದಿ ಸೋರಿಕೆ ಆಗಿಲ್ಲ. ಅದು ಸಂಪೂರ್ಣ ಸುಳ್ಳು. ಮುಖ್ಯಮಂತ್ರಿ ಆಗಿದ್ದ ನನಗೆ ಈ ವರದಿ ಸೋರಿಕೆ ಬಗ್ಗೆ ಮಾಹಿತಿ ಇರಲಿಲ್ಲ. ಜಾತಿ ಸಮೀಕ್ಷೆ ಆಗಿತ್ತು. ಆ ವೇಳೆಗೆ ಚುನಾವಣೆ ಬಂತು. ಆನಂತರ ಮೈತ್ರಿ ಸರಕಾರ ಅಧಿಕಾರಕ್ಕೆ ಬಂತು. ಆ ಸರಕಾರ ವರದಿ ಸ್ವೀಕರಿಸದ ಹಿನ್ನೆಲೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ನೀಡಿದರು. ಆ ವರದಿಯನ್ನು ಸರಕಾರ ಒಪ್ಪಿಕೊಳ್ಳಬೇಕು ಮತ್ತು ಆ ವರದಿಯ ಶಿಫಾರಸನ್ನು ಅನುಷ್ಠಾನಕ್ಕೆ ತರಬೇಕು ಎಂಬುದು ನನ್ನ ಅಭಿಪ್ರಾಯ. ಇದರಿಂದ ಜಾತಿ, ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ನಿಖರ ಮಾಹಿತಿ ಸಿಗಲಿದೆ.

1931ರ ಬಳಿಕ ಈ ದೇಶದಲ್ಲಿ ಜಾತಿ ಆಧಾರಿತ ಸಮೀಕ್ಷೆಗಳನ್ನೇ ನಡೆಸಿಲ್ಲ. ಹೀಗಾಗಿಯೇ ಸುಪ್ರೀಂ ಕೋರ್ಟ್, ಹೈಕೋರ್ಟ್ ಮೀಸಲಾತಿ ಬಗ್ಗೆ ತೀರ್ಪುಗಳನ್ನು ನೀಡುವ ವೇಳೆ ನಿಖರ ಮಾಹಿತಿ ಎಲ್ಲಿದೆ ಎಂದು ಕೇಳಿವೆ. ಸಮೀಕ್ಷೆಯಿಂದ ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗಳ ಬಗ್ಗೆ ಗೊತ್ತಾಗಲಿದೆ. ಹಿಂದುಳಿದಿರುವಿಕೆಯನ್ನು ಗುರುತಿಸಲು ನೆರವಾಗಲಿದೆ. ಅನುದಾನ ಹಂಚಿಕೆ ವೇಳೆ ಸಮುದಾಯಗಳಿಗೆ ನ್ಯಾಯಕೊಡಲು ಸಾಧ್ಯವಾಗಲಿದೆ. ಆದ್ಯತೆ ನೀಡಬೇಕಾದರೂ ಅಗತ್ಯ ಮಾಹಿತಿ ಇರಬೇಕಾಗುತ್ತದೆ. ಕುರುಬರ ಸಂಖ್ಯೆ ಎಷ್ಟಿದೆ ಎಂದು ಯಾರಿಗೆಗೊತ್ತಿದೆ. ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರ ಮಾಹಿತಿ ಒಂದು ಅಂದಾಜಿನ ಮೇಲೆ ಹೇಳಬಹುದಷ್ಟೇ. ಅದು ಕರಾಕುವಾಕ್ಕಲ್ಲ. ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿ ಗೊತ್ತಿಲ್ಲ. ಹೀಗಾಗಿ ಜಾತಿವಾರು ಸಮೀಕ್ಷೆ ಆಗಬೇಕು. ಹೀಗಾಗಿಯೇ ನಾನು ಮಾಡಿದ್ದು. ಸರಕಾರ ವಿಧಾನ ಮಂಡಲದಲ್ಲಿ ವರದಿಯನ್ನು ಮಂಡಿಸಬೇಕು.

► ವಾ.ಭಾ: ನಿಮ್ಮ ಅವಧಿಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ ಸಹಿತ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದರೂ ಅಭಿವೃದ್ಧಿ ದೃಷ್ಟಿಯಿಂದ ಕ್ರಾಂತಿಕಾರಕ ಬದಲಾವಣೆಯನ್ನೇನು ತರಲಿಲ್ಲ ಈ ಕುರಿತು ನೀವು ಏನು ಹೇಳುತ್ತೀರಿ?

ಸಿದ್ದರಾಮಯ್ಯ: ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಕ್ರಾಂತಿಕಾರಕ ಅಲ್ಲವೇ? ಬಡ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ, ಅವರ ಸಬಲೀಕರಣ ಕ್ರಾಂತಿಕಾರಕ ಅಲ್ಲವೇ? ಒಣಭೂಮಿ ಬೇಸಾಯಕ್ಕೆ ಒತ್ತು ನೀಡುವ ‘ಕೃಷಿಭಾಗ್ಯ’ವನ್ನು ನೀವು ಯಾವ ರೀತಿಯಲ್ಲಿ ಅಭಿವೃದ್ಧಿಯಲ್ಲ ಎಂದು ಹೇಳುತ್ತೀರಿ. ಅಗ್ಗದ ದರದಲ್ಲಿ ಬಡವರಿಗೆ ಊಟ-ಉಪಾಹಾರ ನೀಡುವ ‘ಇಂದಿರಾ ಕ್ಯಾಂಟೀನ್’ ಒಳ್ಳೆಯ ಕೆಲಸ ಅಲ್ಲವೇ? ಹಾಲಿಗೆ ಪ್ರೋತ್ಸಾಹ ಧನ, ರೈತರ ಸಾಲಮನ್ನಾ ಮಾಡಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ರೂಪಿಸಿದ ‘ವಿದ್ಯಾಸಿರಿ’ ಜನಪರ ಅಲ್ಲವೇ? ಜನಪ್ರಿಯ ಕಾರ್ಯ ಕ್ರಮಗಳಷ್ಟೇ ಅಲ್ಲ, ಬಡವರ ಆರ್ಥಿಕ ಸಬಲೀಕರಣಕ್ಕಾಗಿ ರೂಪಿಸಿದ ಯೋಜನೆಗಳು.

► ವಾ.ಭಾ: ಕೇಂದ್ರ ಸಚಿವ ಸಂಪುಟ ಪುನರ್‌ರಚನೆಯಾಗಿದ್ದು ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ದಲಿತ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಇದು ಸಾಮಾಜಿಕ ನ್ಯಾಯ ಅಲ್ಲವೇ?

  ಸಿದ್ದರಾಮಯ್ಯ: ಸಾಮಾಜಿಕ ನ್ಯಾಯ ಎಂದರೆ ಕೇವಲ ತೋರ್ಪಡಿಕೆಗಾಗಿ ಮಂತ್ರಿ ಸ್ಥಾನ ನೀಡಿದರೆ ಆಗುವುದಿಲ್ಲ. ಸಾಮಾಜಿಕ ನ್ಯಾಯ ಅಂದರೆ ಆಚರಣಾತ್ಮಕವಾಗಿ ಇರಬೇಕು. ಈಗ ಇವರು ಮೀಸಲಾತಿ ಪರ ಇದ್ದಾರೆಯೇ? ಬಿಜೆಪಿ, ಆರೆಸ್ಸೆಸ್‌ಸೇರಿದಂತೆ ಸಂಘಪರಿವಾರದ ಯಾವುದೇ ಅಂಗ ಸಂಸ್ಥೆಯೂ ಮೀಸಲಾತಿಗೆ ಬದ್ಧ ಎಂದು ಹೇಳಲಿ. ಸಮಾನತೆ ಬರುವವರೆಗೂ, ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇರಬೇಕು ಎಂದು ಅವರು ಹೇಳಲಿ. ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇರಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಹೀಗಾಗಿ ಅವರು ಅದನ್ನು ಹೇಳಲು ಸಾಧ್ಯವೇ ಇಲ್ಲ. ಆದರೆ, ತೋರಿಕೆಗೆ ಹಾಗೇ ಹೇಳುತ್ತಾರೆ. ಮಂತ್ರಿ, ರಾಜ್ಯಸಭಾ ಎಂದು ತೋರ್ಪಡಿಕೆ ಮಾಡುತ್ತಾರೆ.

► ವಾ.ಭಾ: ‘ತೆರಿಗೆ ಭಯೋತ್ಪಾದನೆ’ ಕುರಿತು ವಾರ್ತಾಭಾರತಿ ಪತ್ರಿಕೆಗೆ ವಿಶೇಷ ಲೇಖನ ಬರೆದಿದ್ದೀರಿ? ಲೇಖನದಲ್ಲಿ ಈ ಸರಕಾರ ಬಂಡವಾಳ ಶಾಹಿಗಳ ಪರ ಎಂದು ಹೇಳಿದ್ದೀರಿ. ಆದರೆ, ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಈ ಸರಕಾರದ ಅವಧಿಯಲ್ಲಿ ಬಂದಿದ್ದಲ್ಲ. ಬಹಳ ಹಿಂದಿನಿಂದಲೂ ಇದ್ದಾರೆ. ಆಸ್ತಿ ಪ್ರಮಾಣ ಹೆಚ್ಚಾಗಿ ರಬಹುದು. ಆದರೆ, ಇದನ್ನು ತಾವು ಹೇಗೆ ವಿಶ್ಲೇಷಣೆ ಮಾಡ್ತೀರಿ?

 ಸಿದ್ದರಾಮಯ್ಯ: ನಾನು ಬಂಡವಾಳ ಶಾಹಿಗಳನ್ನು ನಾಶ ಮಾಡಿ ಎಂದು ಹೇಳಿಲ್ಲ. ತೆರಿಗೆ ಭಯೋತ್ಪಾದನೆ ಏಕೆ ಎಂದರೆ ಇಂದು ನೇರ ಮತ್ತು ಪರೋಕ್ಷ ತೆರಿಗೆ ವಿಧಿಸಲಾಗುತ್ತಿದೆ. ವಾಣಿಜ್ಯ, ಕಸ್ಟಮ್ಸ್ ಟ್ಯಾಕ್ಸ್ ನೇರ ತೆರಿಗೆ. ಜಿಎಸ್‌ಟಿ ಮತ್ತು ಮಾರಾಟ ತೆರಿಗೆ ಪರೋಕ್ಷ ತೆರಿಗೆ. ಆದರೆ, ಎಲ್ಲ ಕಾಲದಲ್ಲಿಯೂ ನೇರ ತೆರಿಗೆ ಹೆಚ್ಚಿದ್ದು, ಪರೋಕ್ಷ ತೆರಿಗೆ ಕಡಿಮೆ ಇರಬೇಕು. ಮುಂದುವರಿದ ರಾಷ್ಟ್ರಗಳಲ್ಲಿಯೂ ಹೀಗೆಯೇ ತೆರಿಗೆ ಇದೆ. ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ನೇರ ತೆರಿಗೆ ಕಡಿಮೆ ಮಾಡಿ, ಪರೋಕ್ಷ ತೆರಿಗೆ ಹೆಚ್ಚಳ ಮಾಡಲಾಗಿದೆ. ಪರೋಕ್ಷ ತೆರಿಗೆ ನೀಡುವವರು ಜನ ಸಾಮಾನ್ಯರು ಹಾಗೂ ಗ್ರಾಹಕರು. ಇದೀಗ ಜಿಎಸ್‌ಟಿ ಶೇ.28ರಷ್ಟು ಮಾಡಿದ್ದಾರೆ. ಕಾರ್ಪೊರೇಟ್ ಟ್ಯಾಕ್ಸ್ ಕಡಿಮೆ ಮಾಡಿದರೆ, ಏನೆಂದು ಅರ್ಥ ಮಾಡಿಕೊಳ್ಳಬೇಕು. ಆಮದು ತೆರಿಗೆ ಕಡಿಮೆ ಮಾಡಿ, ರಫ್ತು ತೆರಿಗೆ ಏರಿಕೆ ಮಾಡಿದರೆ ಹೇಗೇ? ಮೋದಿ ಅಚ್ಛೇದಿನ್ ಬರುತ್ತೇ ಎಂದು ಹೇಳಿದರು.

ಆದರೆ, ಮನಮೋಹನ್ ಸಿಂಗ್ ಆಡಳಿತದ ಅವಧಿಯಲ್ಲಿ ಡೀಸೆಲ್ ಮೇಲೆ ಲೀಟರ್‌ಗೆ ಕೇವಲ 4.35 ರೂ.ಗಳಿದ್ದ ತೆರಿಗೆ ಇದೀಗ 31.84 ರೂ.ಗಳಾಗಿದೆ. ಏಳು ವರ್ಷದಲ್ಲಿ ಪೆಟ್ರೋಲ್ ಲೀಟರ್‌ಗೆ 9.22 ರೂ.ಗಳಿಂದ 38.75 ರೂ.ಗಳಿಗೆ ಏರಿಕೆಯಾಗಿದೆ. ಇದು ಜನಸಾಮಾನ್ಯರ ಮೇಲೆ ಹೇರಿದ ಹೊರೆ ಅಲ್ಲವೇ. ಇದರಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಆಗುವುದಿಲ್ಲವೇ? ಇದನ್ನು ಕಡಿಮೆ ಮಾಡಿ ಎಂದು ನಾನು ಹೇಳಿದ್ದೇನೆ. ಏಳು ವರ್ಷದಲ್ಲಿ ಕೇಂದ್ರ ಸರಕಾರ ಕರ್ನಾಟಕ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ವಸೂಲಿ ಮಾಡಿರುವ ತೆರಿಗೆ 1.20 ಲಕ್ಷ ಕೋಟಿ ರೂ.ಗಳಷ್ಟು ಬಂದಿದೆ. ಜನರ ಕಷ್ಟ ಅರ್ಥಮಾಡಿಕೊಂಡು ಈಗಲಾದರೂ ಕೇಂದ್ರ ಸರಕಾರ ಕೂಡಲೇ ತೆರಿಗೆ ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಬೇಕು.

►  ವಾ.ಭಾ: ಮತ್ತೆ ರಾಜ್ಯಕ್ಕೆ ಬರುವುದಾದರೆ ಮುಂದಿನ ಎರಡು ವರ್ಷಗಳಲ್ಲಿ ಚುನಾವಣೆ ಇದೆ, ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷದಿಂದ ದೂರ ಸರಿದಿದೆ?

  ಸಿದ್ದರಾಮಯ್ಯ: ನೋಡಿ ಕಾಂಗ್ರೆಸ್ ಪಕ್ಷ ‘ಎಲ್ಲರನ್ನು ಒಳಗೊಳ್ಳುವ’ ತತ್ವದಲ್ಲಿ ನಂಬಿಕೆ ಇಟ್ಟಿದೆ. ಒಳಗೊಳ್ಳುವ ರಾಜಕೀಯ ಮಾಡುತ್ತಿದೆ. ಎಲ್ಲ ಸಮುದಾಯಗಳನ್ನು ಒಳಗೊಂಡಿದೆ. ನಾನು ಯಾವುದೇ ಒಂದು ಸಮುದಾಯಕ್ಕೆ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಲಿಲ್ಲ. ಅಹಿಂದಕ್ಕೆ ಸೀಮಿತವಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ ಒಂದೇ ಜಾತಿಗೆ ಅಲ್ಲ. ಮಾತೃಪೂರ್ಣ ಯೋಜನೆ ಒಂದೇ ಸಮುದಾಯಕ್ಕೆ ಅಲ್ಲ. ಎಲ್ಲ ಜಾತಿಯ ಬಡವರಿಗೆ ಯೋಜನೆ ರೂಪಿಸಿದ್ದು.

 ► ವಾ.ಭಾ: ಆಡಳಿತ ಪಕ್ಷದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ತೆರಿಗೆ, ಅಭಿವೃದ್ಧಿ ವಿಚಾರಗಳನ್ನಿಟ್ಟುಕೊಂಡು ಜನರಿಗೆ ತಲುಪಿಸಲು ಆಗುತ್ತಿಲ್ಲವೇಕೇ? ಮುಂದಿನ ಚುನಾವಣೆಯಲ್ಲಿ ನಿಮ್ಮ ಅಜೆಂಡಾವೇನು?

  ಸಿದ್ದರಾಮಯ್ಯ: ಹಲವು ಜನಪರ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದರೂ ಕಳೆದ ಚುನಾವಣೆಯಲ್ಲಿ ಸೋಲಾಗಲು ನಮ್ಮ ಕಾರ್ಯಕ್ರಮಗಳ ಪ್ರಚಾರ ಸರಿಯಾಗಿ ಆಗದೆ ಇರುವುದು ಮತ್ತು ಅಪಪ್ರಚಾರದಿಂದ ನಮಗೆ ಸೋಲಾಯಿತು. ಆಡಳಿತ ಪಕ್ಷದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಲಾಗುತ್ತದೆ. ಅಲ್ಲದೆ, ನಮ್ಮ ಅವಧಿಯಲ್ಲಿ ರೂಪಿಸಿದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಯಾವುದೇ ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆಗೆ ಹೋಗುವುದಿಲ್ಲ. ಎಲ್ಲರೂ ಸಮಾನರು ಮತ್ತು ಪರಧರ್ಮ ಸಹಿಷ್ಣುತೆ ನಮ್ಮ ಧ್ಯೇಯ.

►  ವಾ.ಭಾ: ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ಬೆನ್ನಲ್ಲೇ ಹೊಸ ‘ಸಹಕಾರಿ’ ಸಚಿವಾಲಯ ಸ್ಥಾಪಿಸಲಾಗಿದೆ. ತಮ್ಮ ಅಭಿಪ್ರಾಯ?

  ಸಿದ್ದರಾಮಯ್ಯ: ‘ಈವರೆಗೆ ಕೇಂದ್ರದಲ್ಲಿ ಸಹಕಾರಿ ಇಲಾಖೆ ಇರಲಿಲ್ಲ. ಇದೀಗ ಕೇಂದ್ರದಲ್ಲಿ ಸಹಕಾರಿ ಸಚಿವಾಲಯ ರಚನೆ ಮಾಡಿದ್ದಾರೆ. ಅದನ್ನು ಅಮಿತ್ ಶಾ ಅವರ ಕೈಗೆ ನೀಡಿದ್ದಾರೆ, ಅವರೊಬ್ಬ ಭಸ್ಮಾಸುರ.ಸಹಕಾರಿ ಚಳವಳಿಯನ್ನು ಎಲ್ಲಿ ಅವರು ಹಾಳು ಮಾಡಿ ಬಿಡುತ್ತಾರೆಯೋ ಎಂಬ ಭಯ. ಸಹಕಾರಿ ಚಳವಳಿಯನ್ನು ಹದಗೆಡಿಸಿದರೆ ಏನು ಮಾಡುವುದು. ನಮ್ಮ ಬದುಕಿನ ಎಲ್ಲ ಚಟುವಟಿಕೆಗಳಲ್ಲಿ ಸಹಕಾರಿ ಚಳವಳಿ ಅಡಗಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕಗಳ ಸಹಿತ ಎಲ್ಲ ಕ್ಷೇತ್ರಗಳನ್ನು ಸಹಕಾರಿ ಚಳವಳಿ ವ್ಯಾಪಿಸಿದೆ. ಅದನ್ನು ಹದಗೆಡಿಸಬಹುದೆಂಬ ಸಂಶಯವಿದೆ. ಅದನ್ನು ಅಮಿತ್ ಶಾ ಅವರಿಗೆ ವಹಿಸಿರುವುದೇಕೆ? ಅದರ ಅಗತ್ಯವೇನಿತ್ತು. ಅವರಿಗೆ ನೀಡಿದ್ದು ಏಕೆ ಬಹಿರಂಗಪಡಿಸಬೇಕು. ಅವರ ಲೋಕಕಲ್ಯಾಣ, ಜನಕಲ್ಯಾಣವೇನೆಂದು ಗೊತ್ತಾಗಲಿ’

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top