ತೇಜಸ್ವಿ ಸೂರ್ಯ ʼಇಸ್ಲಾಮೋಫೋಬಿಕ್ ದಾಳಿʼಯ ಪರಿಣಾಮ: ವಾರ್ ರೂಂನಿಂದ ವಜಾಗೊಂಡಿದ್ದ 16 ಮಂದಿಯ ಈಗಿನ ಸ್ಥಿತಿಯೇನು? | Vartha Bharati- ವಾರ್ತಾ ಭಾರತಿ

--

ತೇಜಸ್ವಿ ಸೂರ್ಯ ʼಇಸ್ಲಾಮೋಫೋಬಿಕ್ ದಾಳಿʼಯ ಪರಿಣಾಮ: ವಾರ್ ರೂಂನಿಂದ ವಜಾಗೊಂಡಿದ್ದ 16 ಮಂದಿಯ ಈಗಿನ ಸ್ಥಿತಿಯೇನು?

ಬೆಂಗಳೂರು: ಒಬ್ಬ ಸಂಸದ ಮತ್ತು ಮೂವರು ಶಾಸಕರು ನಿಮ್ಮನ್ನು ಗುರಿ ಮಾಡಲು ನಿರ್ಧರಿಸಿದರೆ ಏನಾಗುತ್ತದೆ? ಪ್ರತಿ ಪ್ರಜೆಗಳ ಹಕ್ಕುಗಳನ್ನು ಎತ್ತಿಹಿಡಿಯುವುದಾಗಿ ಸಂವಿಧಾನದ ಮೇಲೆ ಪ್ರಮಾಣ ಮಾಡಿದ ಈ ಚುನಾಯಿತ ಪ್ರತಿನಿಧಿಗಳು ನೀವು ಮುಸ್ಲಿಮರು ಎಂಬ ಏಕೈಕ ಕಾರಣಕ್ಕೆ ಸುಳ್ಳುಸುದ್ದಿ ಮಾಡಲು ಹೊರಟರೆ ನಿಮ್ಮ ಜೀವನ ಏನಾಗುತ್ತದೆ? ಮೇ 4ರಂದು ಬಿಬಿಎಂಪಿ ಕೋವಿಡ್-19 ವಾರ್ ರೂಂನ ಮೇಲೆ ಮೂವರು ಶಾಸಕರ ಕುಮ್ಮಕ್ಕಿನಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಧಾವಿಸಿ ಅಲ್ಲಿ ಕೆಲಸ ಮಾಡುತ್ತಿದ್ದ 205 ಮಂದಿಯ ಪೈಕಿ 16 ಮಂದಿ ಮುಸ್ಲಿಮರನ್ನು ಮಾತ್ರ ಹೆಸರಿಸಿದ್ದರಿಂದ 16 ಮುಸ್ಲಿಂ ಯುವಕರ ಜೀವನ ಬುಡಮೇಲಾಗಿದೆ. 

ಜಾಣ್ಮೆಯಿಂದ ರೂಪಿಸಿದ ಯೋಜನೆಯಂತೆ ಸಂಸದರು ಅದೇ ದಿನ ಪತ್ರಿಕಾಗೋಷ್ಠಿ ನಡೆಸಿ ಬಿಬಿಎಂಪಿಯ ಬೆಡ್ ಬುಕ್ಕಿಂಗ್ ದಂಧೆಯನ್ನು ಬಹಿರಂಗಪಡಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನ ಜನತೆಗೆ, ಈ ಬೆಡ್ ದಂಧೆಯ ಹಿಂದೆ ಇರುವ ಉಗ್ರರು ಎಂಬ ಹಣೆಪಟ್ಟಿಯೊಂದಿಗೆ 16 ಮುಸ್ಲಿಮರ ಹೆಸರು ಸಿಗಲಾರಂಭಿಸಿತು.

ಈ ದಂಧೆಯೂ ಮುಸ್ಲಿಂ ಯುವಕರಿಗೂ ಯಾವ ಸಂಬಂಧವೂ ಇಲ್ಲ; ಎಫ್‍ಐಆರ್‍ನಲ್ಲಿ ಇವರ ಉಲ್ಲೇಖವೂ ಇಲ್ಲ. ಕೇವಲ 16 ಮಂದಿ ಮುಸ್ಲಿಮರ ಹೆಸರಿನ ಪಟ್ಟಿಯನ್ನು ಮಾತ್ರ ಏಕೆ ಬಹಿರಂಗಪಡಿಸಲಾಯಿತು ಎಂಬ ಬಗ್ಗೆ ಆರು ದಿನಗಳ ಬಳಿಕ ಕೇಳಿದಾಗ ತೇಜಸ್ವಿ ಸೂರ್ಯ ಬಳಿ ಉತ್ತರ ಇರಲಿಲ್ಲ. ಎರಡು ತಿಂಗಳ ಬಳಿಕವೂ ಈ ಯುವಕರು ಬಿಜೆಪಿ ನಾಯಕರ ಈ ನಾಟಕದ ಆಘಾತವನ್ನು ಅನುಭವಿಸುತ್ತಲೇ ಇದ್ದಾರೆ.

ಹದಿನಾರು ಮಂದಿಯ ಪೈಕಿ ಒಬ್ಬನನ್ನು ಮಾತ್ರ ಬಿಬಿಎಂಪಿ ವಾರ್‌ ರೂಂಗೆ ವಾಪಾಸು ಕರೆಸಿಕೊಳ್ಳಲಾಗಿದೆ. ಮೂವರು ಹೊಸ ಉದ್ಯೋಗ ಗಿಟ್ಟಿಸಿಕೊಂಡಿದ್ದು, ಇತರರು ಹತಾಶವಾಗಿ ಉದ್ಯೋಗಬೇಟೆ ಮುಂದುವರಿಸಿದ್ದಾರೆ. ಒಬ್ಬ ಯುವಕನಂತೂ ಈ ಆಘಾತವನ್ನು ಎದುರಿಸಲಾಗದೇ ಈ ಸಹವಾಸವೇ ಬೇಡ ಎಂಬ ಕಾರಣಕ್ಕೆ ಮುಂಬೈ ಸೇರಿದ್ದಾನೆ. ಹಲವು ಮಂದಿ ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿದ್ದು, ಕೆಲ ಮಂದಿಯಂತೂ ತಮ್ಮ ಪರಿಚಯ ಪತ್ರದಲ್ಲಿ ವಾರ್‌ ರೂಂ ಕೆಲಸದ ಅನುಭವವನ್ನು ಉಲ್ಲೇಖಿಸಲೂ ಹೆದರುವಂತಾಗಿದೆ. ಇವರಿಗೆ ಬೆಂಬಲದ ಮಹಾಪೂರವೇ ಹರಿದುಬಂದಿದ್ದರೂ, ಅವರಿಗೆ ಉದ್ಯೋಗ ನೀಡಲು ಯಾರೂ ಮುಂದೆ ಬಂದಿಲ್ಲ.

ಮೊದಲ ವ್ಯಕ್ತಿ: 40 ವರ್ಷ ವಯಸ್ಸು

ಭಾರತದ ಮೇಲೆ ಕೋವಿಡ್-19 ದಾಳಿ ನಡೆದ ಆರಂಭದಿಂದಲೂ ಅಂದರೆ 2020ರ ಜೂನ್‍ನಿಂದಲೂ 'ಎ' ಬಿಬಿಎಂಪಿ ನಿಯಂತ್ರಣ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2021ರ ಮೇ 4ರಂದು ಸಂಜೆ 4ಗಂಟೆಗೆ ತಮ್ಮ ಪಾಳಿಯ ಕರ್ತವ್ಯಕ್ಕಾಗಿ ವಾರ್ ರೂಂಗೆ ಬಂದಿದ್ದಾರೆ. ಆದರೆ ಬೆಂಗಳೂರಿಗರನ್ನು ಹತ್ಯೆ ಮಾಡಲು ಮುಂದಾಗಿರುವ ಉಗ್ರರು ಎಂಬ ಹೆಸರಿನಲ್ಲಿ 16 ಮಂದಿಯ ಪಟ್ಟಿ ಆಗಲೇ ಹರಿದಾಡುತ್ತಿತ್ತು. 

"ನನಗೆ ಭಯವಾಗಿತ್ತು. ಆ ವೇಳೆಗೆ ಏನು ನಡೆಯುತ್ತಿದೆ ಎಂದು ಅರ್ಥಮಾಡಿಕೊಳ್ಳಲೂ ಸಾಧ್ಯವಾಗಲಿಲ್ಲ. ಕರ್ತವ್ಯ ಮುಗಿಸಿ 11 ಗಂಟೆ ರಾತ್ರಿ ಮನೆಗೆ ತೆರಳಿದೆ. ಮರುದಿನ ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಲಾಯಿತು. ಅವರು ನಮ್ಮನ್ನು ಪ್ರಶ್ನಿಸಿ ಬಿಟ್ಟರು. ಹಲವು ದಿನಗಳ ಕಾಲ ನನಗೆ ನಿದ್ದೆ ಮಾಡಲೂ ಸಾಧ್ಯವಾಗಲಿಲ್ಲ. ನನ್ನನ್ನು ಏಕೆ ಗುರಿ ಮಾಡಲಾಗಿದೆ ಎನ್ನುವುದು ನನಗೆ ಅಚ್ಚರಿಯಾಗಿತ್ತು" ಎಂದು ಇಂಡೆಕ್ಸಿಂಗ್ ಡೆಸ್ಕ್ ನಲ್ಲಿ ಕೆಲಸ ಮಾಡುತ್ತಿದ್ದ 'ಎ' ವಿವರಿಸಿದರು.

ಕೆಲ ದಿನಗಳಲ್ಲಿ ಬೆಡ್ ಹಗರಣಕ್ಕೆ ಮತ್ತು ಈ ವ್ಯಕ್ತಿಗಳಿಗೆ ಯಾವ ಸಂಬಂಧವೂ ಇಲ್ಲ ಎನ್ನುವುದು ದೃಢಪಟ್ಟ ನಂತರ ದಕ್ಷಿಣ ವಾರ್ ರೂಂ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ಬಿಬಿಎಂಪಿಯಿಂದ ಗುತ್ತಿಗೆ ಪಡೆದ ಕ್ರಿಸ್ಟಲ್ ಇನ್ಫೋಸಿಸ್ಟಮ್ಸ್ ಮತ್ತು ಸರ್ವೀಸಸ್ ಎಂಬ ಕಂಪನಿಯನ್ನು ಎ ಸಂಪರ್ಕಿಸಿದೆ. "ನಾನು ವಿವಾಹಿತ; ಮಕ್ಕಳಿದ್ದಾರೆ. ನನ್ನ ಕುಟುಂಬ ಬೀದಿಗೆ ಬಿದ್ದಿದೆ. ವಾಪಾಸು ನನ್ನನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳಿ ಎಂದು ಬೇಡಿಕೊಂಡೆ. ಅವರು ವಾಪಾಸು ತೆಗೆದುಕೊಂಡರು" ಎಂದು ಎ ಹೇಳುತ್ತಾರೆ.

ಆದಾಗ್ಯೂ ಎ ಪಡೆಯುತ್ತಿದ್ದ ವೇತನ ಕಡಿತಗೊಳಿಸಲಾಗಿತ್ತು. "ಅದು ನನಗೆ ಹೆಚ್ಚು ನೋವು ನಿಡಲಿಲ್ಲ. ನನಗೆ ನೋವು ತಂದ ವಿಚಾರವೆಂದರೆ ನಮಗೆಲ್ಲ ಏನಾಯಿತು ಎನ್ನುವುದು. ನಮ್ಮ ತಪ್ಪೇನು?" ಎಂದು ಅವರು ಪ್ರಶ್ನಿಸುತ್ತಾರೆ.

ಇವರು ಬಿಬಿಪಿಎಂಯಿಂದ ವಾಪಾಸು ಉದ್ಯೋಗಕ್ಕೆ ನೇಮಕಗೊಂಡ ಏಕೈಕ ವ್ಯಕ್ತಿ. ಬಹುಶಃ ಇಡೀ ಗುಂಪಿನಲ್ಲಿ ಇವರು ಏಕೈಕ ವಿವಾಹಿತ ವ್ಯಕ್ತಿ ಹಾಗೂ ಒಂದು ವರ್ಷದಿಂದ ವಾರ್‍ರೂಂನಲ್ಲಿ ಕೆಲಸ ಮಾಡುತ್ತಿದ್ದವರು. ಇತರ ಇಬ್ಬರಿಗೆ ಅವರ ಮನೆಗಳಿಂದ ದೂರ ಇದ್ದ ವಾರ್ ರೂಂಗಳಲ್ಲಿ ಉದ್ಯೋಗ ನೀಡಲಾಯಿತು ಹಾಗೂ ಮತ್ತೊಬ್ಬರಿಗೆ ಲಸಿಕಾ ಕೇಂದ್ರದಲ್ಲಿ ಸಹಾಯ ಮಾಡುವಂತೆ ಸೂಚಿಸಲಾಗಿದೆ.

2ನೇ ವ್ಯಕ್ತಿ: 23 ವರ್ಷ

ಹನ್ನೆರಡನೇ ತರಗತಿಯನ್ನೂ ಪೂರ್ಣಗೊಳಿಸದ ʼಬಿʼ 2020ರ ಜೂನ್‍ನಲ್ಲಿ ವಾರ್‍ರೂಂ ಕಾಲ್‍ಸೆಂಟರ್ ಸೇರಿಕೊಂಡಿದ್ದ. ನಾಲ್ಕು ತಿಂಗಳ ಕಾಲ ಕೆಲಸ ಮಾಡಿದ ಬಳಿಕ ಕೆಲಸ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಕೆಲಸ ಬಿಡುವಂತೆ ಸೂಚಿಸಲಾಯಿತು. 2021ರ ಏಪ್ರಿಲ್‍ನಲ್ಲಿ ಎರಡನೇ ಬಾರಿ ಕೆಲಸಕ್ಕೆ ಸೇರಿಕೊಂಡ. ತೇಜಸ್ವಿ ದಾಳಿ ಮಾಡಿದಾಗ ಕೆಲಸಕ್ಕೆ ಮರುಸೇರ್ಪಡೆಗೊಂಡು 10 ದಿನಗಳಷ್ಟೇ ಆಗಿತ್ತು. ಬಿ ತಮ್ಮ ಹಾಗೂ ತಾಯಿಯ ಪೋಷಣೆ ಮಾಡಬೇಕಿತ್ತು. ಬಿಬಿಎಂಪಿ ಈತನಿಗೆ ನೀಡುತ್ತಿದ್ದ 13,000 ವೇತನ ಈ ಕುಟುಂಬದ ಪಾಲಿಗೆ ದೊಡ್ಡ ನೆರವಾಗಿತ್ತು.

"ನನ್ನ ಮಾವ ನಮಗೆ ಹಲವು ವರ್ಷಗಳಿಂದ ನೆರವು ನೀಡುತ್ತಿದ್ದರು. ನಾನು ಆದಾಯ ಪಡೆಯಲು ಆರಂಭವಾದರೆ ಕುಟುಂಬ ನಿರಾಳವಾಗುತ್ತದೆ ಎನ್ನುವುದು ನನ್ನ ಯೋಚನೆಯಾಗಿತ್ತು. ಆದರೆ ಅದು ತಪ್ಪೆನಿಸಿದೆ. ನಾನು ಅಲ್ಲಿ ಉದ್ಯೋಗ ಕಳೆದುಕೊಂಡೆ; ಬೇರೆಡೆ ಉದ್ಯೋಗ ಸಿಗುತ್ತಿಲ್ಲ" ಎಂದು ಅವರು ವಿವರಿಸುತ್ತಾನೆ.

ಇತರ ಎರಡು ಕಾಲ್‍ಸೆಂಟರ್‍ಗಳಲ್ಲಿ ಉದ್ಯೋಗ ಪಡೆಯಲು ಬಿ ಯತ್ನಿಸಿದ ಹಾಗೂ ವಾರ್‍ರೂಂ ಕೆಲಸದ ಅನುಭವವನ್ನು ತನ್ನ ಪರಿಚಯ ಪತ್ರದಲ್ಲಿ ಉಲ್ಲೇಖಿಸಿದ್ದ. "ಅವರು ಇದನ್ನು ನೋಡಿದಾಗ ಅವರು ವಿವರ ಕೇಳಿದರು. ಆ ಕಾರಣಕ್ಕೆ ನಾನು ಉದ್ಯೋಗ ಪಡೆಯಲು ಸಾಧ್ಯವಾಗಲಿಲ್ಲ ಎನಿಸಿತು. ಮುಂದಿನ ಬಾರಿ ನಾನು ಅದನ್ನು ಉಲ್ಲೇಖಿಸಲಿಲ್ಲ. ನನಗೆ ಈಗ ಉದ್ಯೋಗದ ಅಗತ್ಯತೆ ಇದ್ದು, ನಾನು ನನ್ನ ಅನುಭವವನ್ನು ಮರೆಮಾಚಬೇಕಾಗಿದೆ" ಎಂದು ಹೇಳುತ್ತಾನೆ.

ಇತರರು ನೆರವು ನೀಡಿದರೂ ಇತರ ಹಲವು ಮಂದಿ ಸ್ನೇಹಿತರು ತನ್ನನ್ನು ಪ್ರತ್ಯೇಕವಾಗಿ ನೋಡುತ್ತಾರೆ ಎಂದು ಬಿ ಬೇಸರಿಸುತ್ತಾನೆ. ಸಣ್ಣ ಡಾಟಾ ಎಂಟ್ರಿ ಅಪರೇಟರ್ ಗಳಾದ ನಮ್ಮಂಥವರನ್ನು ದೊಡ್ಡ ರಾಜಕೀಯ ಮುಖಂಡರು ಏಕೆ ಗುರಿ ಮಾಡುತ್ತಾರೆ ಎನ್ನುವುದೇ ಈತನಿಗೆ ಅಚ್ಚರಿ. "ನಾವು ಸಣ್ಣ ಜನ. ನಮ್ಮ ಜತೆ ಏಕೆ ರಾಜಕೀಯ ಮಾಡಬೇಕು? ನಮ್ಮ ದಿನಗೂಲಿಯಿಂದ ನಾವು ಜೀವನ ಸಾಗಿಸುತ್ತೇವೆ. ನಮ್ಮ ದಾರಿಗೆ ಏಕೆ ಅಡ್ಡಬರಬೇಕು?" ಎನ್ನುವುದು ಆತನ ಪ್ರಶ್ನೆ.

3ನೇ ವ್ಯಕ್ತಿ: 21 ವರ್ಷ

12ನೇ ತಗರತಿ ಓದಿರುವ ಸಿ ಬಿಪಿಓಗಳಲ್ಲಿ ಕೆಲಸ ಮಾಡುತ್ತಿದ್ದ. ಆದರೆ ನಿಯತವಾಗಿ ಉದ್ಯೋಗ ಇಲ್ಲದಿದ್ದರೂ, ತಂದೆ ಸಣ್ಣ ಜವಳಿ ಅಂಗಡಿ ನಡೆಸುತ್ತಿದ್ದ ಕಾರಣ ತಲೆ ಕೆಡಿಸಿಕೊಂಡಿರಲಿಲ್ಲ. ಅವರಿಗೆ ಬೆಂಬಲವಾಗಿ ತಾನು ಕಾರ್ಯ ನಿರ್ವಹಿಸದರೆ ಸಾಕು ಎಂಬ ಭಾವನೆ ಇತ್ತು. ಆದಾಗ್ಯೂ ಲಾಕ್‍ಡೌನ್‍ನಿಂದಾಗಿ ಅಂಗಡಿ ಮುಚ್ಚಲ್ಪಟ್ಟಾಗ ಅರೆಕಾಲಿಕ ಉದ್ಯೋಗಕ್ಕೆ ಸೇರಿಕೊಳ್ಳಲು ಮುಂದಾದ. ವಾರ್‍ರೂಂ ಕೆಲಸ ಒಳ್ಳೆಯದು ಎಂಬ ಸಲಹೆ ಸ್ನೇಹಿತರಿಂದ ಬಂತು. 

"ನಾನು ಕೆಲಸಕ್ಕೆ ಹೋಗುವುದು ತಂದೆಗೆ ಇಷ್ಟವಿರಲಿಲ್ಲ. ನನಗೆ ಸೋಂಕು ತಗುಲಬಹುದು ಎಂಬ ಭೀತಿ ಅವರಿಗಿತ್ತು. ಆದರೆ ಬಿಬಿಎಂಪಿಗೆ ಸಹಾಯ ಬೇಕಾಗಿದೆ; ನಾನು ಒಂದಷ್ಟು ಸೇವೆ ಮಾಡಬಹುದು ಎಂದು ಸ್ನೇಹಿತರು ಹೇಳಿದರು. ಸಂಬಳದ ಬಗ್ಗೆನಾನು ತಲೆ ಕೆಡಿಸಿಕೊಳ್ಳಲಿಲ್ಲ. ಜನರಿಗೆ ನೆರವಾಗಲು ನನಗೆ ಇದೊಂದು ಅವಕಾಶ ಎಂದು ನಾನು ಭಾವಿಸಿದ್ದೆ" ಎಂದು ಸಿ ಹೇಳುತ್ತಾರೆ.

ತೇಜಸ್ವಿ ದಾಳಿ ಮಾಡಿದಾಗ ಮೂರು ದಿನಗಳ ತರಬೇತಿಯೂ ಸೇರಿ ಸಿ ಉದ್ಯೋಗಕ್ಕೆ ಸೇರಿ ಕೇವಲ 10 ದಿನ ಆಗಿತ್ತು. ಆದರೆ ಬಿಜೆಪಿ ಮುಖಂಡರು ವಾರ್ ರೂಂಗೆ ಭೇಟಿ ನೀಡುವ ಮುನ್ನ ಮುಸ್ಲಿಂ ಉದ್ಯೋಗಿಗಳನ್ನು ಕಿತ್ತುಹಾಕುವಂತೆ ಬಿಬಿಎಂಪಿ ಮೇಲೆ ಒತ್ತಡ ಇತ್ತು ಎಂದು ಸಿ ಅಭಿಪ್ರಾಯಪಡುತ್ತಾರೆ.

"ವ್ಯವಸ್ಥಾಪಕರು ಧಾವಿಸಿ ಬಂದು ನಮ್ಮಿಬ್ಬರನ್ನೂ ಹೊರಹೋಗುವಂತೆ ಕೇಳಿದಾಗ ನಾನು ಸ್ನೇಹಿತರ ಜತೆ ಊಟ ಮಾಡುತ್ತಿದ್ದೆ. ನಾವು ಏಕೆ ಎಂದು ಕೇಳಿದಾಗ, ಇಲ್ಲಿ ಯಾವ ವ್ಯಕ್ತಿಗಳು ಬೇಡ ಎಂಬ ಪಟ್ಟಿಯನ್ನು ಬಿಜೆಪಿ ಶಾಸಕ ನೀಡಿದ್ದಾರೆ ಎಂದು ಹೇಳಿದರು. ತಕ್ಷಣಕ್ಕೆ ನಾವು ಹೊರಡಲಿಲ್ಲ. ಕೆಲ ಸಮಯದಲ್ಲಿ ತೇಜಸ್ವಿ ಪಟ್ಟಿ ಓದುತ್ತಿರುವುದು ಕೇಳಿಸಿತು. ನಮಗೆ ಭಯವಾಯಿತು ಹಾಗೂ ಮನೆಗೆ ಹೋದೆವು. ರಾತ್ರಿ ಪಾಳಿಯಲ್ಲಿದ್ದವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎನ್ನುವುದು ನಮಗೆ ಮರುದಿನ ತಿಳಿಯಿತು" ಎಂದು ಸಿ ವಿವರಿಸಿದರು.

ಇವರನ್ನು ಹೊರಗಟ್ಟಿದ ತೇಜಸ್ವಿಯನ್ನು ನಿರೂಪಕರು ಹೊಗಳುತ್ತಿರುವ ಕಾರ್ಯಕ್ರಮವನ್ನು ಮನೆಯವರೆಲ್ಲ ಗುಂಪಾಗಿ ಕುಳಿತು ನೋಡಿದ್ದನ್ನು ಸಿ ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ. "ಈ ಹಗರಣದಲ್ಲಿ ನಾವು ಆರೋಪಿಗಳು ಎಂದು ಅರ್ಥ ಮಾಡಿಕೊಳ್ಳಲೂ ನಮಗೆ ಸಾಧ್ಯವಾಗಲಿಲ್ಲ. ಆ ಬಳಿಕ ಕರೆಗಳು ಬರಲಾರಂಭಿಸಿದವು. ಹಲವು ಮಂದಿ ನನಗೆ ಬೆದರಿಕೆ ಹಾಕಿದರು ಹಾಗೂ ತಕ್ಷಣ ಉದ್ಯೋಗ ಬಿಡುವಂತೆ ಸೂಚಿಸಿದರು. ಹತಾಶೆಯಿಂದ ತಂದೆ ತಾಯಿ, ನಾನು ಉದ್ಯೋಗಕ್ಕೆ ಸೇರಿಕೊಂಡಿದ್ದೇಕೆ ಎಂದು ಪ್ರಶ್ನಿಸಿದರು"

ಆ ಬಳಿಕ ಒಳ್ಳೆಯ ಉದ್ಯೋಗಕ್ಕೆ ಸಿ ಪ್ರಯತ್ನಿಸಲೇ ಇಲ್ಲ. ಈ ಪರಿಸ್ಥಿತಿ ಆಘಾತ ತಾಳಲಾರದೇ ಮುಂಬೈಗೆ ತೆರಳಿ ಸಂಬಂಧಿಕರ ಜತೆ ಈಗ ವಾಸವಿದ್ದಾರೆ. ಸಿಯಂತೆ ಇತರ ಕೆಲವು ಕೂಡಾ ಬೆದರಿಕೆ ಕರೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಮೇ 4ರ ರಾತ್ರಿಯ ವೇಳೆಗೆ ವಾರ್‍ರೂಂನಲ್ಲಿದ್ದ 205 ಮಂದಿಯ ಪಟ್ಟಿ ಅವರ ಫೋನ್‍ನಂಬರ್ ಸಹಿತ ಸೋರಿಕೆಯಾಗಿತ್ತು.

ಗುಂಪಿನ ಇತರರಂತೆ ಪರಿಹಾರಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸುವ ಬಗ್ಗೆಯೂ ಸಿ ಯೋಚಿಸುತ್ತಿದ್ದಾರೆ. ಆದರೆ ಯಾವುದೇ ಪರಿಹಾರ ಗೆಲ್ಲಲು ಸಾಧ್ಯವಾಗದೇ ಕಾನೂನಾತ್ಮಕ ತೊಡಕಿನಲ್ಲಿ ಸಿಲುಕಿಕೊಳ್ಳಬಹುದು ಎಂಬ ಭೀತಿಯಿಂದ ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ.

4ನೇ ಮತ್ತು 5ನೇ ವ್ಯಕ್ತಿ: 27 ಮತ್ತು 20 ವರ್ಷದವರು

ಡಿ ಮತ್ತು ಸಹೋದರರು. ಡಿ ಬಿಕಾಂ ಪದವೀಧರ ಹಾಗೂ ಇ ಹನ್ನೆರಡನೇ ತರಗತಿ ಉತ್ತೀರ್ಣ. ಕುಟುಂಬ ಹಾಗೂ ಸ್ನೇಹಿತರು ಕೂಡಾ ಏನು ತಪ್ಪಾಯಿತು ಎಂದು ಕೇಳುತ್ತಿದ್ದುದರಿಂದ ಆರಂಭದಲ್ಲಿ ಪರಿಸ್ಥಿತಿ ತೀರಾ ಅಸ್ಥಿರವಾಗಿತ್ತು ಎಂದು ಡಿ ಹೇಳುತ್ತಾರೆ. "ಮೊದಲ ಅಲೆಯಲ್ಲಿ ಕೆಲ ದಿನಗಳ ಕಾಲು ನಾನು ವಾರ್‍ರೂಂನಲ್ಲಿ ಕೆಲಸ ಮಾಡಿದ್ದೆ. ಎರಡನೇ ಅಲೆ ಬಂದಾಗ, ನನ್ನ ಸಹೋದರ ಕೂಡಾ ನನ್ನ ಜತೆ ಅರ್ಜಿ ಹಾಕಿದ. ನಾವಿಬ್ಬರೂ ಉದ್ಯೋಗ ಕಳೆದುಕೊಂಡೆವು"

ಡಿ ಹಾಗೂ ಇಗೆ ಇತರ ಎಲ್ಲರಂತೆ 10 ದಿನಕ್ಕೆ 2500 ರೂಪಾಯಿ ವೇತನ ನೀಡಿ ಉದ್ಯೋಗ ತೊರೆಯುವಂತೆ ಸೂಚಿಸಲಾಯಿತು. ಉದ್ಯೋಗವನ್ನು ವಾಪಾಸು ನೀಡಲಾಗುತ್ತದೆ ಎಂದು ಬಿಬಿಎಂಪಿ ಹೇಳಿಕೊಂಡಿದ್ದರೂ, ಮೇ ಅಥವಾ ಜೂನ್‍ನಲ್ಲಿ ಅದು ಜಾರಿಯಾಗಲಿಲ್ಲ. ಆದರೆ ಜೂನ್ ಕೊನೆಯ ವೇಳೆಗೆ ವಾರ್‌ ರೂಂ ಮತ್ತಷ್ಟು ಸಂಕುಚಿತಗೊಂಡು ಹಲವು ಮಂದಿಯ ಅಗತ್ಯವಿಲ್ಲ ಎಂಬ ಕಾರಣಕ್ಕೆ ಉದ್ಯೋಗ ತೊರೆಯುವಂತೆ ಹಲವು ಮಂದಿಗೆ ಸೂಚಿಸಲಾಯಿತು.

"ನಾನೀಗ ಔಷಧಿ ವಿತರಿಸುವ ಸಣ್ಣ ಉದ್ಯೋಗ ಪಡೆದಿದ್ದೇನೆ. ಬಿಬಿಎಂಪಿ ಹಾಗೂ ಕ್ರಿಸ್ಟಲ್‍ಗೆ ಹಲವು ಬಾರಿ ನಾವಿಬ್ಬರೂ ಕರೆ ಮಾಡಿದರೂ, ಮರಳಿ ಉದ್ಯೋಗ ನೀಡಲೇ ಇಲ್ಲ" ಎಂದು ಇ ಹೇಳುತ್ತಾರೆ.

ಆರು ಮಂದಿಯ ಕುಟುಂಬಕ್ಕೆ ಇರುವ ಏಕೈಕ ಸಮಾಧಾನವೆಂದರೆ ಡಿಗೆ ತಾತ್ಕಾಲಿಕ ಉದ್ಯೋಗ ಸಿಕ್ಕಿದೆ. ಆದರೆ ಅದು ಎಷ್ಟು ಕಾಲದವರೆಗೆ ಎಂಬ ಆತಂಕವೂ ಜತೆಗೇ ಕಾಡುತ್ತಿದೆ. "ಒಂದು ಮಸೀದಿ ಎಲ್ಲ 16 ಮಂದಿಗೆ 10 ಸಾವಿರ ರೂಪಾಯಿ ನೀಡಿದೆ. ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ 5000 ರೂಪಾಯಿ ನೀಡಿದ್ದಾರೆ. ಕನಿಷ್ಠ ಡಿಗೆ ಉದ್ಯೋಗವಿದೆ. ಇತರ ಹಲವು ಮಂದಿಗೆ ಈ ಹಣ ಎರಡು ತಿಂಗಳಿಗಾಗುವಷ್ಟು ಪರಿಹಾರವನ್ನಷ್ಟೇ ನೀಡಿದೆ" ಎಂದು ಇ ಹೇಳುತ್ತಾರೆ.

6ನೇ ಮತ್ತು 7ನೇ ವ್ಯಕ್ತಿ: 23 ಮತ್ತು 21 ವರ್ಷ ವಯಸ್ಸು

ಎಫ್ ಮತ್ತು ಜಿ ಸಹೋದರರು. ಎಫ್ ಐಟಿ ಎಂಜಿನಿಯರ್ ಆದರೆ ಜಿ ಎಂಜಿನಿಯರಿಂಗ್ ವಿದ್ಯಾರ್ಥಿ. ಹಲವು ಚೀನಿ ಆ್ಯಪ್‍ಗಳನ್ನು ಭಾರತ ಸರ್ಕಾರ ನಿಷೇಧಿಸಿದಾಗ ಶೇರ್‍ಇಟ್‍ನಲ್ಲಿ ಕೆಲಸ ಮಾಡುತ್ತಿದ್ದ ಎಫ್ ಉದ್ಯೋಗ ಕಳೆದುಕೊಂಡರು. ತಂದೆ ನಿವೃತ್ತ ಚಾಲಕರಾಗಿದ್ದು, ವಾರ್‍ರೂಂನಲ್ಲಿ ಕೆಲಸ ಮಾಡಿದರೆ ಐದು ಮಂದಿಯ ಕುಟುಂಬಕ್ಕೆ ಒಂದಷ್ಟು ನೆರವಾಗಬಹುದು ಎಂದು ಸಹೋದರರು ನಿರ್ಧರಿಸಿದರು.

"ಈ ದುಃಸ್ವಪ್ನ ಕಳೆದು ಎರಡು ತಿಂಗಳ ಬಳಿಕ ಎರಡು ವಾರದ ಹಿಂದೆ ನನಗೆ ಉದ್ಯೋಗ ಸಿಕ್ಕಿದೆ. ಹಲವು ಕಡೆ ನಾನು ಕೆಲಸಕ್ಕೆ ಪ್ರಯತ್ನಿಸಿದೆ. ನಮ್ಮನ್ನು ಮರಳಿ ಉದ್ಯೋಗಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಮಾಧ್ಯಮ ವರದಿ ಮಾಡಿದ್ದರೂ, ಬಿಬಿಎಂಪಿ ಒಂದು ಬಾರಿಯೂ ಏನನ್ನೂ ಕೇಳಿಲ್ಲ" ಎಂದು ಎಫ್ ಹೇಳುತ್ತಾರೆ.

ಅಗೌರವಯುತವಾಗಿ ಉದ್ಯೋಗ ತೊರೆಯಲು ಸೂಚಿಸಿದಾಗ ಇಬ್ಬರಿಗೂ ತಲಾ 2000 ರೂಪಯಿ ನೀಡಲಾಗಿತ್ತು. ಈ ಉದ್ಯೋಗ ಪಡೆದ ಬಗ್ಗೆಯೂ ಜಿಗೆ ವಿಷಾದವಿದೆ. "ಅದನನು ನೆನೆಸಿಕೊಂಡರೆ ನನಗೆ ಕೆಲಸ ಇಲ್ಲದಿದ್ದರೂ ನಾವು ಉಳಿದುಕೊಳ್ಳಬಹುದಿತ್ತು. ಆದರೆ ನನಗೆ ಮನೆಯಲ್ಲಿ ಸುಮ್ಮನೆ ಕೂರುವ ಮನಸ್ಸು ಇರಲಿಲ್ಲ. ಹಲವು ಗಂಟೆಗಳನ್ನು ನಾನು ಪೊಲೀಸ್ ಠಾಣೆಯಲ್ಲಿ ಕಳೆದೆ. ನಾವು ರಮ್ಜಾನ್ ಉಪವಾಸ ಮಾಡುತ್ತಿದ್ದರೂ ನಮ್ಮ ಕಾಳಜಿ ಅವರಿಗೆ ಇರಲಿಲ್ಲ. ನಾನು ಕೇವಲ ವಿದ್ಯಾರ್ಥಿ. ಇದು ನನ್ನ ಅನುಭವ" ಎಂದು ಜಿ ಹೇಳುತ್ತಾರೆ.

8ನೇ ವ್ಯಕ್ತಿ: 25 ವರ್ಷ:

ಎಚ್ ಬಿಕಾಂ ಪದವೀಧರ. ಅವರ ಕುಟುಂಬದಲ್ಲಿ ಮೊದಲ ಪದವೀಧರ. ಸಹೋದರ 12ನೇ ತರಗತಿಗೆ ಓದು ನಿಲ್ಲಿಸಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದಾರೆ. 2021ರ ಏಪ್ರಿಲ್‍ನಲ್ಲಿ ಕಾಲ್‍ಸೆಂಟರ್‍ನಿಂದ ಮಾಸಿಕ 17 ಸಾವಿರ ವೇತನದ ಉದ್ಯೋಗದ ಆಫರ್ ಬಂದಿತ್ತು. ಇದೇ ವೇಳೆಗೆ ಬಿಬಿಎಂಪಿ ಉದ್ಯೋಗದ ಆಫರ್ ಕೂಡಾ ಬಂತು. "ವೇತನ ಕೇವಲ 13,500 ರೂಪಾಯಿ ಆಗಿತ್ತು. ಆದರೆ ಅಷ್ಟು ಸಾಕು; ನಾನು ಜನರಿಗೆ ಸಹಾಯ ಮಾಡಬಹುದು ಅಂದುಕೊಂಡೆ. ಆ ದಿನ ನನಗೆ 2900 ರೂಪಾಯಿ ನೀಡಿ ಕೆಲಸ ಬಿಡುವಂತೆ ಸೂಚಿಸಲಾಯಿತು. ಹೊಸ ಕೆಲಸ ಹುಡುಕುತ್ತಲೇ ಇದ್ದೇನೆ. ಆದರೆ ಯಾರೂ ನೀಡುತ್ತಿಲ್ಲ. ನಾವು ಮುಸ್ಲಿಮರು ಎಂಬ ಕಾರಣಕ್ಕೆ ನಮ್ಮನ್ನು ಗುರಿ ಮಾಡಲಾಗುತ್ತಿಲ್ಲ. ನಾವು ಈಗ ಅನುಭವಿಸುತ್ತಿದ್ದೇವೆ" ಎಂದು ಎಚ್ ಹೇಳುತ್ತಾರೆ.

9ನೇ ವ್ಯಕ್ತಿ: 18 ವರ್ಷ
ಒಂದು ವಿಷಯದಲ್ಲಂತೂ ಸ್ಪಷ್ಟವಾಗಿದ್ದಾನೆ. ಆತ ವಿಚಲಿತಗೊಂಡಿಲ್ಲ. "ನಾನೇನೂ ತಪ್ಪು ಮಾಡಿಲ್ಲ; ನಾನು ಏಕೆ ಭಯಪಡಬೇಕು" ಎನ್ನುವುದು ಆತನ ಪ್ರಶ್ನೆ. ಹನ್ನೆರಡನೇ ತರಗತಿ ಉತ್ತೀರ್ಣನಾಗಿರುವ ಐ, ತಾಯಿ ಜತೆಗೆ ವಾಸವಿದ್ದಾನೆ. ಮಾವ ಒಂದಷ್ಟು ಹಣಕಾಸು ನೆರವು ನೀಡಿದ್ದಾರೆ. "ನಾನು ಗಳಿಸಿದರೆ ತಾಯಿಗೆ ಒಂದಷ್ಟು ನೆರವಾಗಬಹುದು ಎನ್ನುವುದು ನನ್ನ ಯೋಚನೆಯಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅದು ನನಗೆ ಸಮಯ ಕಳೆಯಲು ಅಗತ್ಯವಾಗಿತ್ತು. ಆದರೆ ಅಲ್ಲಿಗೆ ಹೋಗಬಾರದಿತ್ತು ಎಂದು ಈಗ ಅನಿಸುತ್ತಿದೆ. ಎಲ್ಲವೂ ನಡೆದಿರುವುದು ನಾನು ಮುಸ್ಲಿಂ ಎಂಬ ಕಾರಣಕ್ಕಾಗಿ"
ಕಿರಾಣಿ ಅಂಗಡಿಯೊಂದರಲ್ಲಿ 400 ರೂಪಾಯಿ ದಿನಗೂಲಿಗೆ ಸೇರಿರುವ ಈತ ಸದ್ಯವೇ ಪದವಿ ತರಗತಿ ಸೇರುವ ಯೋಚನೆಯಲ್ಲಿದ್ದಾನೆ.

10ನೇ ವ್ಯಕ್ತಿ: 18 ವರ್ಷ

ಜೆ ಹನ್ನೆರಡನೇ ತರಗತಿ ಉತ್ತೀರ್ಣನಾಗಿದ್ದ. ಸಾಂಕ್ರಾಮಿಕ ಆರಂಭದ ವೇಳೆಗೆ ಈತನ ಕುಟುಂಬ ಸಂಕಷ್ಟದಲ್ಲಿತ್ತು. "ತಂದೆ ಆಟೊ ಚಾಲಕ ಹಾಗೂ ಲಾಕ್‍ಡೌನ್‍ನಿಂದಾಗಿ ಗಳಿಕೆ ತೀರಾ ಕಡಿಮೆಯಾಗಿತ್ತು. ಆದ್ದರಿಂದ ಅವರಿಗೆ ಸಹಾಯವಾಗುವ ನಿಟ್ಟಿನಲ್ಲಿ ನಾನು ಕೆಲಸಕ್ಕೆ ಸೇರಿಕೊಂಡೆ.

ಕೆಲಸ ಮಾಡಲು ಆರಂಭಿಸಿದ ಹತ್ತೇ ದಿನದಲ್ಲಿ ಇತರ ಎಲ್ಲರಂತೆ ಈತನನ್ನೂ ಉದ್ಯೋಗ ತೊರೆಯುವಂತೆ ಕೇಳಲಾಯಿತು. ಇದೀಗ ಜೆ ಸಿಇಟಿ ಪರೀಕ್ಷೆಗೆ ಸಜ್ಜಾಗುತ್ತಿದ್ದಾನೆ. ಪೊಲೀಸ್ ಠಾಣೆಗೆ ಭೇಟಿ ನೀಡಿರುವ ನೆನಪು ಈತನನ್ನು ಕಾಡುತ್ತಲೇ ಇದೆ.

11ನೇ ವ್ಯಕ್ತಿ: 22 ವರ್ಷ
ಬಿಬಿಎಂಪಿ ವಾರ್‍ರೂಂನಲ್ಲಿ ಉದ್ಯೋಗಕ್ಕೆ ನೇಮಿಸಿಕೊಳ್ಳಲಾಗುತ್ತಿದೆ ಎಂಬ ವಿಷಯ 2020ರ ಜೂನ್‍ನಲ್ಲಿ ಕೇಳಿಬಂದಾಗ ಎಲ್ ಇನ್ನೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಕೋರ್ಸ್‍ನ ಕೆಲ ಬಾಕಿ ವಿಷಯಗಳಲ್ಲಿ ಉತ್ತೀರ್ಣನಾಗಬೇಕಿತ್ತು. "ನಮ್ಮ ಸುತ್ತಲೂ ಜನ ಸಾಯುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಮನೆಯಲ್ಲಿ ಕುಳಿತಿದ್ದ ನನಗೆ ಅವರಿಗೆ ನೆರವಾಗುವ ಬಯಕೆ ಇತ್ತು. ಅದಕ್ಕೂ ಮುನ್ನ ನಾನೆಲ್ಲೂ ಕೆಲಸ ಮಾಡಿರಲಿಲ್ಲ. ಹಣಕಾಸು ವಿಚಾರದಲ್ಲಿ ಕುಟುಂಬಕ್ಕೆ ಯಾವ ತೊಂದರೆಯೂ ಇಲ್ಲದ ಕಾರಣ ನಾನು ಕೆಲಸ ಮಾಡಬೇಕಿರಲಿಲ್ಲ. ಆದರೆ ಸಮಾಜಕ್ಕೆ ನೆರವಾಗಬಹುದು ಎಂಬ ಕಾರಣಕ್ಕೆ ನಾನು ಈ ಅವಕಾಶಕ್ಕೆ ಧುಮುಕಿದೆ. ಆದರೆ ದಿಢೀರನೇ ನನ್ನ ಹೆಸರು ಉಗ್ರರ ಪಟ್ಟಿಯಲ್ಲಿ ಬಂತು. ನನಗೆ ಹೇಗಾಗಿರಬಹುದು ಎನ್ನುವುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ" ಎಂದು ಆತ ಪ್ರಶ್ನಿಸುತ್ತಾನೆ.

ಎಲ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದು, ಇನ್‍ಸ್ಟಾಗ್ರಾಂ ಹ್ಯಾಂಡಲ್‍ನಲ್ಲಿ ಚಿತ್ರಗಳನ್ನು ಅಪ್‍ಲೋಡ್ ಮಾಡುತ್ತಿದ್ದ. ಬಿಬಿಎಂಪಿ ಅಧಿಕಾರಿಗಳ ಜತೆ ಹೆಮ್ಮೆಯಿಂದ ನಿಂತಿದ್ದ ಕೆಲ ಚಿತ್ರಗಳನ್ನೂ ಕೊನೆಯದಾಗಿ ಆತ ಅಪ್‍ಲೋಡ್ ಮಾಡಿದ್ದ. ಆದರೆ ಆ ಘಟನೆಯ ಬಳಿಕ ಆ ಹ್ಯಾಂಡಲ್ ಬಳಸುತ್ತಿಲ್ಲ.

"ನನ್ನ ಏಕೈಕ ಸಮಾಧಾನವೆಂಧರೆ ನನ್ನನ್ನು ಬಲ್ಲವರು ನನ್ನನ್ನು ನಂಬಿದ್ದಾರೆ"

13ನೇ ವ್ಯಕ್ತಿ: 24 ವರ್ಷ

ಆಂಧ್ರಪ್ರದೇಶ ಮೂಲದ ಎಂ ಐಟಿಐ ಕೋರ್ಸ್ ಪೂರ್ಣಗೊಳಿಸಿದ್ದ. ಬೆಂಗಳೂರಿನಲ್ಲಿ ಅಜ್ಜಿ ಜತೆಗೆ ವಾಸವಾಗಿದ್ದ ಈತ ಉದ್ಯೋಗದ ಬೇಟೆಯಲ್ಲಿದ್ದಾಗ ಕ್ರಿಸ್ಟಲ್ 2020ರ ಜೂನ್‍ನಲ್ಲಿ ನೇಮಿಸಿಕೊಂಡಿತು. "ಮೇ 4ರಂದು ಉದ್ಯೋಗ ತೊರೆಯುವಂತೆ ಅವರು ಸೂಚಿಸಿದರು. ಕೆಲ ದಿನಗಳ ಬಳಿಕ ದೊಮ್ಮಲೂರು ಅಥವಾ ಆರ್‍ಟಿನಗರ ವಾರ್‍ರೂಂಗೆ ಸೇರಿಕೊಳ್ಳುವಂತೆ ಸೂಚಿಸಿದರು. ಆದರೆ ಅದು ಕಾರ್ಯಸಾಧು ಎನಿಸಲಿಲ್ಲ. ಏಕೆಂದರೆ ಅದು ನಾನು ವಾಸಿಸುತ್ತಿದ್ದ ಪ್ರದೇಶದಿಂದ ತೀರಾ ದೂರವಿತ್ತು ಹಾಗೂ ಪ್ರಯಾಣ ಕಠಿಣ ಎನಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಸ್ಟಲ್, ಕಾಲಕಾಲಕ್ಕೆ ಸರಿಯಾಗಿ ವೇತನ ಕೊಡುತ್ತಿರಲಿಲ್ಲ. ಆದ್ದರಿಂದ ಪೆಟ್ರೋಲ್ ಭರ್ತಿ ಮಾಡಿಕೊಳ್ಳುವುದು ಕೂಡಾ ಕಷ್ಟಸಾಧ್ಯವೆನಿಸಿದೆ" ಎಂದು ಹೇಳುತ್ತಾರೆ.

ಎಂ ಬಳಿ ಯಾವ ಉಳಿತಾಯವೂ ಇಲ್ಲ; ಆಂಧ್ರದಲ್ಲಿ ಫ್ಯಾಕ್ಟರಿ ಕೆಲಸ ಮಾಡುತ್ತಿರುವ ಪೋಷಕರನ್ನೇ ಅವಲಂಬಿಸಿದ್ದಾನೆ. "ಹೊಸ ಕೆಲಸ ಹುಡುಕುತ್ತಲೇ ಇದ್ದೇನೆ. ಆದರೆ ಯಾವುದೂ ಸಿಕ್ಕಿಲ್ಲ. ಎಲ್ಲ ರಾಜಕಾರಣಿಗಳು ಹಾಗೂ ಇತರರು ನಮಗೆ ನೆರವಾಘುವ ಭರವಸೆ ನೀಡಿದ್ದಾರೆ. ಅವರು ನನಗೆ ಉದ್ಯೋಗ ನೀಡುತ್ತಾರೆ ಎಂಬ ಭರವಸೆಯಲ್ಲಿದ್ದೇನೆ"

14ನೇ ವ್ಯಕ್ತಿ: 23 ವರ್ಷ

ಪದವೀಧರರಾಗಿರುವ 'ಎನ್' ಸಾಂಕ್ರಾಮಿಕ ಆರಂಭದ ವೇಳೆಗೆ ಉದ್ಯೋಗ ಕಳೆದುಕೊಂಡರು. ಖಾಸಗಿ ಶಾಲಾ ಶಿಕ್ಷಕರಾಗಿದ್ದ ತಂದೆ ಕೂಡಾ ಉದ್ಯೋಗ ಕಳೆದುಕೊಂಡಿದ್ದರು. ಇದರಿಂದಾಗಿ ಆರು ಮಂದಿಯ ಕುಟುಂಬ ತೀರಾ ಸಂಕಷ್ಟದಲ್ಲಿತ್ತು. 

"ಕುಟುಂಬಕ್ಕೆ ನೆರವಾಗುತ್ತದೆ ಎಂಬ ಕಾರಣಕ್ಕೆ ನಾನು ಉದ್ಯೋಗ ಸೇರಿಕೊಂಡೆ. ನಾನು ಕೆಲಸ ಬಿಡುವಂತೆ ಸೂಚಿಸಿದಾಗ ನಮಗೆ ಏಪ್ರಿಲ್ ತಿಂಗಳ ಕೆಲಸಕ್ಕಾಗಿ 2000 ದಿಂದ 3000 ರೂಪಾಯಿ ನೀಡಲಾಗಿತ್ತು. ಮೇ ತಿಂಗಳ ನಾಲ್ಕು ದಿನಕ್ಕೆ ಯಾವುದೇ ಹಣ ನೀಡಲಿಲ್ಲ" ಎಂದು ಎನ್ ಹೇಳುತ್ತಾರೆ.

ಜುಲೈ  6ರಂದು ಮಾರ್ಕೆಟಿಂಗ್ ಏಜೆಂಟ್ ಉದ್ಯೋಗ ಪಡೆದಿದ್ದೇನೆ. "ಬಿಬಿಎಂಪಿ ಕೆಲಸದ ಅನುಭವವನ್ನು ನಾನು ಎಲ್ಲೂ ಉಲ್ಲೇಖಿಸಲಿಲ್ಲ. ಆ ದಿನಕ್ಕೆ ಮೊದಲು ನಾನು ಪೊಲೀಸ್ ಠಾಣೆಯನ್ನೂ ಕಾಣಬೇಕಾಯಿತು. ಬಿಬಿಎಂಪಿ ನಮ್ಮಿಂದ ಪತ್ರವೊಂದಕ್ಕೆ ಸಹಿ ಮಾಡಿಸಿಕೊಂಡು ಉದ್ಯೋಗದ ಭರವಸೆ ನೀಡಿತ್ತು. ಆದರೆ ಏನೂ ಆಗಲೇ ಇಲ್ಲ"

15ನೇ ವ್ಯಕ್ತಿ: 22 ವರ್ಷ

ಹನ್ನೆರಡನೇ ತರಗತಿ ಉತ್ತೀರ್ಣನಾಗಿದ್ದ 'ಓ' ವಕೀಲರ ಕಚೇರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಸಾಂಕ್ರಾಮಿಕದ ವೇಳೆ ಕೆಲಸ ಕಳೆದುಕೊಂಡ. "2020ರ ಜುಲೈನಲ್ಲಿ ವಾರ್‍ರೂಂ ಸೇರಿಕೊಂಡೆ. ಇಂಡೆಕ್ಸಿಂಗ್‍ನಲ್ಲಿ ಕೆಲಸ ಮಾಡುತ್ತಿದ್ದೆ ಹಾಗೂ ಬಳಿಕ ಬೆಡ್ ಬ್ಲಾಕಿಂಗ್ ಹೊಣೆ ವಹಿಸಿದರು. ಅಲ್ಲಿ ಕೆಲಸ ಮಾಡಿದ ಅನುಭವ ಹೊಂದಿದವರ ಪೈಕಿ ನಾನೂ ಒಬ್ಬ. ಅದು ಸಂಭವಿಸಿದ ಬಗ್ಗೆ ನನಗೆ ತೀರಾ ಬೇಸರವಿದೆ" ಕುಟುಂಬ ಹಾಗೂ ಸ್ನೇಹಿತರಿಗೆ ಇದರಿಂದ ಆಘಾತವಾಯಿತು ಹಾಗೂ ಏಪ್ರಿಲ್ ತಿಂಗಳ ವೇತನ ಕೂಡಾ ಸಿಗಲಿಲ್ಲ ಎಂದು ಅವರು ಹೇಳುತ್ತಾರೆ.

16ನೇ ವ್ಯಕ್ತಿ: 25 ವರ್ಷ

ಬಿಬಿಎಂಪಿ ಯುದ್ಧ ಕೊಠಡಿಯನ್ನು ಗುರಿ ಮಾಡಲಾಗಿದೆ ಎನ್ನುವುದು 'ಪಿ'ಗೆ ಈಗ ಸ್ಪಷ್ಟವಾಗಿದೆ. "ಆರೋಪಿಗಳು ಪ್ರಮುಖವಾಗಿ ಬೊಮ್ಮನಹಳ್ಳಿ ವಾರ್‍ರೂಂನವರು. ಆ ಪೈಕಿ ಕೆಲವರು ಬಿಜೆಪಿ ಮುಖಂಡರ ಉದ್ಯೋಗಿಗಳು ಎಂಬ ಸುದ್ದಿಗಳನ್ನು ನಾನು ಓದಿದ್ದೇನೆ. ಗಮನವನ್ನು ಬೇರೆಡೆಗೆ ಸೆಳೆಯಲು ನಮ್ಮನ್ನು ಬಳಸಿಕೊಳ್ಳಲಾಯಿತು" ಎಂದು ಅವರು ಹೇಳುತ್ತಾರೆ. ಪಿ ಕುಟುಂಬದಲ್ಲಿ ನಾಲ್ಕು ಮಂದಿ ಇದ್ದು, ತಂದೆ ಅಡುಗೆ ಕೆಲಸ ಮಾಡುತ್ತಾರೆ. ಸಾಂಕ್ರಾಮಿಕದಿಂದಾಗಿ ಏನೂ ಕೆಲಸವಿಲ್ಲ. ಉದ್ಯೋಗದ ಬೇಟೆಯಲ್ಲಿದ್ದರೂ, ಸಾಂಕ್ರಾಮಿಕದ ಕಾರಣದಿಂದ ಯಾವ ಕೆಲಸವೂ ಸಿಕ್ಕಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

"ಇದಕ್ಕೂ ಮುನ್ನ ನಾನು ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಆ ಕೆಲಸದ ಅನುಭವವನ್ನು ಮಾತ್ರ ನಾನು ಉಲ್ಲೇಖಿಸುತ್ತೇನೆ. ಯಾರಾದರೂ ಒತ್ತಾಯಿಸಿದರೆ ಮಾತ್ರ ವಾರ್‍ರೂಂನ 10 ದಿನಗಳ ಅವಧಿಯ ಬಗ್ಗೆ ಹೇಳುತ್ತೇನೆ. ಆದರೆ ಆಗ ನನ್ನ ವಿರುದ್ಧ ತಾರತಮ್ಯ ಎಸಗುತ್ತಾರೆ. ಮಸೀದಿ ಸಮಿತಿ ಉದ್ಯೋಗದ ಭರವಸೆ ನೀಡಿದೆ. ಬಹುಶಃ ಅದು ಆಗಬಹುದು" ಎಂದು ವಿವರಿಸುತ್ತಾರೆ.

ಜೀವನಾಧಾರದ ಹಕ್ಕು ಉಲ್ಲಂಘನೆ

ವಕೀಲ ವಿನಯ್ ಶ್ರೀನಿವಾಸ ಹೇಳುವಂತೆ, ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಓದಿ ಹೇಳಿ ವಿಡಿಯೊವನ್ನು ಪಸರಿಸಲಾಗಿದೆ. ಇದು ಇವರ ಧೀರ್ಘಾವಧಿ ಉದ್ಯೋಗಾವಕಾಶಕ್ಕೆ ಧಕ್ಕೆ ಉಂಟು ಮಾಡಲಿದೆ. "ಸಂವಿಧಾನದ 19ನೇ ವಿಧಿ ಅನ್ವಯ ನೀಡಿರುವ ಅವರ ಜೀವನಾಧಾರದ ಹಕ್ಕನ್ನು ಚುನಾಯಿತ ಪ್ರತಿನಿಧಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಅವರ ಹೆಸರು ಬಹಿರಂಗಪಡಿಸಿ, ಅವರ ಬೆಂಬಲಿಗರು ವಿಡಿಯೊ ಹಾಗೂ ವಾಟ್ಸ್ ಆ್ಯಪ್ ಸಂದೇಶಗಳನ್ನು ಹರಿದು ಬಿಟ್ಟಿರುವುದು ಸಂವಿಧಾನದ ಮೂಲ ಆದರ್ಶಗಳ ಮೇಲೆ ನಡೆದ ದಾಳಿ. 

ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಮಾಡಿರುವ ಸಂಸದರು ಹಾಗೂ ಶಾಸಕರು ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುವ ಮೂಲಕ ಅದನ್ನು ಉಲ್ಲಂಘಿಸಿದ್ದಾರೆ. ಬಿಬಿಎಂಪಿ ಕೂಡಾ ಕೇವಲ ಮುಸ್ಲಿಮರು ಎಂಬ ಕಾರಣಕ್ಕೆ ಇವರ ಅರ್ಹ ಉದ್ಯೋಗಾವಕಾಶವನ್ನು ನಿರಾಕರಿಸಿದೆ. ಈ ಮೂಲಕ 14ನೇ ವಿಧಿ ಅನ್ವಯ ಸಮಾನತೆಯ ಹಕ್ಕನ್ನು ಉಲ್ಲಂಘಿಸಿದೆ. ಸಂವಿಧಾನದ 15ನೇ ವಿಧಿ ಅನ್ವಯ ನಿಷೇಧಿಸಲ್ಪಟ್ಟಿರುವ ಧಾರ್ಮಿಕ ತಾರತಮ್ಯ ಎಸಗಿದೆ ಹಾಗೂ ಸಂವಿಧಾನದ 16ನೇ ವಿಧಿಯ ಅನ್ವಯ ಖಾತರಿಪಡಿಸಿರುವ ಸಾರ್ವಜನಿಕ ಉದ್ಯೋಗದಲ್ಲಿ ತಾರತಮ್ಯ ಎಸಗಿದೆ. 

ಮೂಲಭೂತ ಹಕ್ಕುಗಳ ಉಲ್ಲಂಘನೆಯಿಂದ ಸಂತ್ರಸ್ತರಾದವರಿಗೆ ಮತ್ತು ತಾರತಮ್ಯಕ್ಕೆ ಒಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು ನ್ಯಾಯಾಲಯಗಳು ಹೇಳಿವೆ. ಅವರು ಅನುಭವಿಸಿದ ಅವಮಾನಕ್ಕೆ, ಉದ್ಯೋಗ ಕಳೆದುಕೊಂಡಿರುವುದಕ್ಕೆ ಮತ್ತು ಅವರ ಭವಿಷ್ಯಕ್ಕೆ ಧಕ್ಕೆ ಮಾಡಿರುವುದಕ್ಕೆ ಹಾಗೂ ಅವರ ಘನತೆಯ ಮೇಲೆ ನಡೆದ ದಾಳಿಗೆ ಬಿಬಿಎಂಪಿ ಪರಿಹಾರ ಒದಗಿಸಲೇಬೇಕು. ಹಾಗೆ ಮಾಡಿಲ್ಲ ಎಂದಾದರೆ ಬಿಬಿಎಂಪಿಗೆ ಹಾಗೂ ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಸಂವಿಧಾನ ಅಥವಾ ಕಾನೂನು ಏನೂ ಅಲ್ಲ ಎಂಬ ಅರ್ಥ.

ಇತರ ಹಲವು ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ, ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಭಾವನೆ ಬಂದಲ್ಲಿ, ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಅವಕಾಶವಿದೆ ಎಂದು ವಿನಯ್ ಹೇಳುತ್ತಾರೆ.

"ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂಬ ಊಳಿಗಮಾನ್ಯ ಕಾಲದಲ್ಲಿ ನಾವಿದ್ದೇವೆ. ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ವಿಷಯದಲ್ಲಿ, ಅವರನ್ನು ಅಧಿಕವಾಗಿ ಗುರಿ ಮಾಡುವ ಕಾರಣದಿಂದಾಗಿ ಅವರು ಪರಿಹಾರದ ಹಕ್ಕನ್ನು ಕೇಳಲು, ಸರ್ಕಾರದಿಂದ ಪರಿಹಾರ ಕೋರಲು ಮತ್ತು ಘನತೆಯ ಮೇಲಿನ ಹಲ್ಲೆಗೆ ಪರಿಹಾರ ಕೋರಲೂ ಭಯಪಡುವಂತಾಗಿದೆ. ಸಂಸದರು ಮತ್ತು ಶಾಸಕರ ಕ್ರಮ ಮುಸ್ಲಿಮರನ್ನು ಸಾರ್ವಜನಿಕ ಕ್ಷೇತ್ರದಿಂದ ಹೊರಗಿಡುವ ಗುರಿಯನ್ನು ಹೊಂದಿದೆ"

thenewsminute ತೇಜಸ್ವಿ ಸೂರ್ಯ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದು, ಅದು ದೊರಕಿದ ಬಳಿಕ ಅಪ್‍ಡೇಟ್ ಮಾಡಲಾಗುತ್ತದೆ.
 

ಕೃಪೆ: thenewsminute.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top