ಮಂಡ್ಯದ ಮಾನವಂತ ಮಾದೇಗೌಡರನ್ನು ಮರೆಯುವುದುಂಟೆ? | Vartha Bharati- ವಾರ್ತಾ ಭಾರತಿ

--

ಮಂಡ್ಯದ ಮಾನವಂತ ಮಾದೇಗೌಡರನ್ನು ಮರೆಯುವುದುಂಟೆ?

 ► ಬಸವರಾಜು ಮೇಗಲಕೇರಿ

‘ಬುಡುದಿಲ್ಲ ಅಂದ್ರೆ ಬುಡುದಿಲ್ಲ..’- ಕಾವೇರಿ ಗಲಾಟೆ ಜೋರಾ ದಾಗ, ಗಲಾಟೆ-ಗಲಭೆಗಳಾದಾಗ, ರಸ್ತೆ-ರೈಲು ತಡೆಗಳಾಗಿ ಜನಜೀವನ ಅಸ್ತವ್ಯಸ್ತವಾದಾಗ, ಪರಿಸ್ಥಿತಿ ಕೈ ಮೀರಿ ಹೋದಾಗ- ಪರಿಹಾರ ಮತ್ತು ಪ್ರತಿಕ್ರಿಯೆಗಾಗಿ ಪತ್ರಕರ್ತರು ಮಂಡ್ಯದ ಮಾದೇಗೌಡರ ಮುಂದೆ ನಿಂತಾಗ- ಮೇಲಿನ ಮಾತು ಸಹಜವಾಗಿ, ಅವರ ಕರುಳಿನಿಂದ ಹೊರಬರುತ್ತಿತ್ತು. ಅದು ಬರಿ ಮಾತಲ್ಲ, ಕಾವೇರಿ ನೀರಿನೊಂದಿಗಿರುವ ಭಾವನಾತ್ಮಕ ಬಂಧ.

ಹಾಗೆ ನೋಡಿದರೆ ನೀರು ಪ್ರಕೃತಿ ಸಂಪತ್ತು. ಎಲ್ಲೋ ಬಿದ್ದು ಇನ್ನೆಲ್ಲೋ ಹರಿದು ಮತ್ತೆಲ್ಲೋ ಸೇರುವ ನೀರಿಗೆ ಕಟ್ಟೆಕಟ್ಟುವ, ನಮ್ಮದೆಂದು ಹಕ್ಕು ಚಲಾಯಿಸುವ, ಬಿಡುವುದಿಲ್ಲವೆಂದು ಹಠಕ್ಕೆ ಬೀಳುವ ಬಗೆ ಭಂಡತನವಾಗಿ ಕಾಣುತ್ತದೆ. ಆದರೆ ಕಾವೇರಿ ಕಣಿವೆಯ ಜನಕ್ಕೆ ಕಾವೇರಿ ನೀರು ಬರಿ ನೀರಲ್ಲ, ತಮ್ಮ ಬದುಕಿನ ಭಾಗ, ಜೀವನಾಡಿ, ತಾಯಿ, ದೇವರು. ಆ ಬಂಧಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಹಾಗಾಗಿಯೇ ಕಾವೇರಿ ರೈತ ಹಿತರಕ್ಷಣಾ ಸಮಿತಿಯ ಮುಖಂಡರಾದ ಮಾದೇಗೌಡರಲ್ಲಿ ‘ಬುಡುದಿಲ್ಲ..’ಎನ್ನುವ ಮಾತು ಕರುಳಿನ ಕೂಗಾಗಿ ಮಾರ್ದನಿಸುತ್ತದೆ.

ಇಂತಹ ಮಾದೇಗೌಡರು ಇನ್ನಿಲ್ಲ ಎನ್ನುವುದು ಮಂಡ್ಯಕ್ಕಷ್ಟೇ ಸೀಮಿತವಾದ ನಷ್ಟವಲ್ಲ, ಇಡೀ ನಾಡಿಗೇ ನಷ್ಟ. 93 ವರ್ಷಗಳ ತುಂಬುಜೀವನ ನಡೆಸಿದ ಮಾದೇಗೌಡರದು, 60 ವರ್ಷಗಳಿಗಿಂತಲೂ ಹೆಚ್ಚು ಕಾಲ ನಾಡಿನ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ಹಿರಿಜೀವದ ನಷ್ಟ. ಎಚ್.ಕೆ.ವೀರಣ್ಣಗೌಡ, ಕೆ.ವಿ.ಶಂಕರಗೌಡರ ಮಾನವಂತ ಪರಂಪರೆಯನ್ನು ಮುಂದುವರಿಸಿದವರು, ಮಂಡ್ಯದ ಮಣ್ಣಿಗೆ ಬೆಲೆ ಬರುವಂತೆ ಬದುಕಿದವರು.

1928ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುರುದೇವರಹಳ್ಳಿಯಲ್ಲಿ, ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಜಿ.ಮಾದೇಗೌಡರು, ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಮಂಡ್ಯದಲ್ಲಿ ಪಡೆದರು. 10 ವರ್ಷದ ಬಾಲಕನಾಗಿದ್ದಾಗಲೇ ಶಿವಪುರ ಧ್ವಜಸತ್ಯಾಗ್ರಹ ಸಭೆಯಲ್ಲಿ ಭಾಗವಹಿಸಿದ ಹೋರಾಟಗಾರರಿಗೆ ನೀರುಕೊಡುವ ಹುಡುಗನಾಗಿ; ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಕ್ರಾಂತಿಕಾರಕ ಬರಹಗಳ ಕರಪತ್ರ ಹಂಚುವ ಕಿರಿಯ ಹೋರಾಟಗಾರನಾಗಿ ಕಾಣಿಸಿಕೊಳ್ಳುವ ಮೂಲಕ ಮನಸ್ಸಿನೊಳಕ್ಕೆ ಮಹಾತ್ಮಾಗಾಂಧಿಯನ್ನು ಇಳಿಸಿಕೊಂಡಿದ್ದರು. ಬಾಲ್ಯದಲ್ಲಿಯೇ ನಾಡಿಗಾಗಿ, ಜನರಿಗಾಗಿ ಹೋರಾಟಕ್ಕಿಳಿಯುವ ಬಗೆಯನ್ನು ಭಿತ್ತಿಗಿಳಿಸಿಕೊಂಡಿದ್ದರು.

ಕಾಲೇಜು ಮೆಟ್ಟಿಲು ಹತ್ತಿದಾಗ ವಯೋಸಹಜ ಕ್ರೀಡೆ, ವಿದ್ಯಾರ್ಥಿ ಸಂಘಟನೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಓದುವುದರಲ್ಲಿ ಹಿಂದೆ ಬಿದ್ದು ಫೇಲಾದರು. ಹಾಗಂತ ಗೌಡರು ದಡ್ಡರೂ ಅಲ್ಲ, ಪ್ರತಿಭಾವಂತ ವಿದ್ಯಾರ್ಥಿಯೂ ಅಲ್ಲ. ಮಂಡ್ಯದ ಮಣ್ಣಿನ ಗುಣಕ್ಕೆ ಅನುಗುಣವಾಗಿ ಓದನ್ನು ನಿಭಾಯಿಸಿದವರು. ಮುಂದೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ, ಬೆಂಗಳೂರಿನಲ್ಲಿ ಲಾ ಪದವಿ ಮಾಡಿದರು. ಕಾನೂನು ಪದವಿ ಪಡೆದ ನಂತರ ಮಂಡ್ಯದಲ್ಲಿ ವಕೀಲಿಕೆ ಆರಂಭಿಸಿದರು. ಆ ವೃತ್ತಿಯಿಂದ ಸಾಮಾನ್ಯರ ಸಮಸ್ಯೆ ಪರಿಹರಿಸುವುದಕ್ಕೆ, ಸಮಾಜಕ್ಕೆ ಸೇವೆ ಸಲ್ಲಿಸುವುದಕ್ಕೆ ಸಾಧ್ಯವಿಲ್ಲ ಎನಿಸಿದಾಗ, ಹಿರಿಯರಾದ ಎಚ್.ಕೆ.ವೀರಣ್ಣಗೌಡ ಮತ್ತು ಕೆ.ವಿ.ಶಂಕರಗೌಡರ ಮಾರ್ಗದರ್ಶನದಂತೆ ಸಾಮಾಜಿಕ ಸೇವಾ ಕ್ಷೇತ್ರವಾದ ರಾಜಕಾರಣಕ್ಕೆ ಧುಮುಕಿದರು. 1959ರಲ್ಲಿ, ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ತಾಲೂಕು ಬೋರ್ಡ್ ಸದಸ್ಯರಾದರು.

ಮಂಡ್ಯ ಎಂದಾಕ್ಷಣ ಮಾದೇಗೌಡರು ಎನ್ನುವುದು ಎಷ್ಟು ಸಹಜವೋ ಅಷ್ಟೇ ಅವರ ಸಿಡುಕಿನ ಸ್ವಭಾವ, ಮೂಗಿನ ಮೇಲಿನ ಕೋಪವೂ ಜನಜನಿತ. ಅದೇ ಅವರ ದೌರ್ಬಲ್ಯವೂ ಕೂಡ. ಆದರೆ ನಿಸ್ವಾರ್ಥ ಸೇವೆ, ಅನಿಸಿದ್ದನ್ನು ಆಡುವ ನಿಷ್ಠುರ ನಡವಳಿಕೆ, ಯಾರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅವರ ಮುಲಾಜಿಗೆ ಒಳಗಾಗದ ಗುಣ ಅವರನ್ನು ಬೇರೆಯಾಗಿ ನೋಡುವಂತೆ ಮಾಡಿತ್ತು.ಬಡವರನ್ನು ಕಂಡರೆ ಕರುಣೆ, ಕೆಲಸಗಾರರನ್ನು ಕಂಡರೆ ಖುಷಿ, ಸೋಮಾರಿಗಳೆಂದರೆ ಸಿಟ್ಟು ತಟ್ ಅಂತ ವ್ಯಕ್ತವಾಗಿ ಬಿಡುತ್ತಿತ್ತು. ಭ್ರಷ್ಟಾಚಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಸಿಡಿದೇಳುತ್ತಿದ್ದರು. ಏಕವಚನ ದಲ್ಲಿಯೇ, ನಿಂತ ನಿಲುವಿನಲ್ಲಿಯೇ ಎಲ್ಲರೆದುರೇ ನೀರಿಳಿಸಿಬಿಡುತ್ತಿದ್ದರು. ಅಲ್ಲಿ ಗೌಡಿಕೆಯ ಗತ್ತಿತ್ತು, ಫ್ಯೂಡಲ್ ಗುಣವೂ ಗೋಚರಿಸುತ್ತಿತ್ತು.

ಇಂತಹ ಮಾದೇಗೌಡರು 1962ರಲ್ಲಿ ಮೊದಲ ಬಾರಿಗೆ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಒಂದಲ್ಲ, ಎರಡಲ್ಲ, ಸತತವಾಗಿ 6 ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎಂಬ ಹೆಸರು ಪಡೆದರು. 1980ರಲ್ಲಿ ಆರ್.ಗುಂಡೂರಾವ್ ಕ್ಯಾಬಿನೆಟ್‌ನಲ್ಲಿ ಗಣಿ, ಭೂ ವಿಜ್ಞಾನ ಮತ್ತು ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದರು. 1989 ಮತ್ತು 1991ರಲ್ಲಿ ಲೋಕಸಭಾ ಸದಸ್ಯರಾಗಿ, ಮಂಡ್ಯವನ್ನು ಪ್ರತಿನಿಧಿಸಿದರು.

ಮಾದೇಗೌಡರು ಸಚಿವರಾಗಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆ ಅವರ ಶಕ್ತಿ-ದೌರ್ಬಲ್ಯಗಳ ಅವಲೋಕನಕ್ಕೆ ಅವಕಾಶ ಮಾಡಿಕೊಡುತ್ತದೆ. ಮದ್ದೂರು ಮಾರ್ಗವಾಗಿ ಮಳವಳ್ಳಿಗೆ ಹೋಗುವಾಗ, ಮದ್ದೂರಿನ ರೈತರು ಸಚಿವ ಮಾದೇಗೌಡರ ಕಾರನ್ನು ತಡೆದು ನಿಲ್ಲಿಸಿ, ಬೆಳೆ ಒಣಗುತ್ತಿದ್ದರೂ ಕಾಲುವೆಗೆ ನೀರು ಬಿಡದ ಇಂಜಿನಿಯರ್ ಮೇಲೆ ದೂರು ಹೇಳುತ್ತಾರೆ. ಆ ತಕ್ಷಣವೇ ಗೌಡರು ಆ ಇಂಜಿನಿಯರ್ ಇದ್ದ ಜಾಗಕ್ಕೇ ಹೋಗಿ, ‘ನಾನು ಮಳವಳ್ಳಿಗೆ ಹೋಗಿ ವಾಪಸ್ ಬರುವುದರೊಳಗೆ ಕಾಲುವೆಯಲ್ಲಿ ನೀರು ಹರಿಯುತ್ತಿರಬೇಕು’ ಎಂದು ತಾಕೀತು ಮಾಡುತ್ತಾರೆ.ಅಷ್ಟೇ ಅಲ್ಲ, ವಾಪಸ್ ಹೋಗುವಾಗ ಪರಿಶೀಲಿಸುತ್ತಾರೆ. ಆದರೆ ಇಂಜಿನಿಯರ್ ನೀರು ಬಿಟ್ಟಿರಲಿಲ್ಲ. ಗೌಡರ ಪಿತ್ತ ನೆತ್ತಿಗೇರಿ, ರೈತರ ಎದುರೇ ಇಂಜಿನಿಯರ್ ಕಪಾಳಕ್ಕೆ ಬಾರಿಸುತ್ತಾರೆ. ಆ ಅಧಿಕಾರಿ ದಲಿತ ವರ್ಗಕ್ಕೆ ಸೇರಿದವರಾಗಿ, ಸಚಿವರ ವಿರುದ್ಧ ಪ್ರತಿಭಟನೆಗಳಾಗಿ, ಸದನದಲ್ಲಿ ಬಿಸಿ ಚರ್ಚೆಯಾಗಿ ಸಚಿವ ಸ್ಥಾನಕ್ಕೆ ಕಂಟಕವೂ ಎದುರಾಗುತ್ತದೆ. ಆದರೆ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಯೊಬ್ಬನ ಬೇಜವಾಬ್ದಾರಿತನಕ್ಕೆ ಮುಲಾಮು ಹಚ್ಚುವ ಸಚಿವರ ಕ್ರಮವನ್ನು ಸಮರ್ಥನೀಯ ಕಾರಣಗಳನ್ನಿಟ್ಟು ವಾದ ಮಂಡಿಸಿದಾಗ, ಮಾದೇಗೌಡರ ಕ್ರಮ ಸರಿ ಎನಿಸಿ ಪ್ರಕರಣವನ್ನು ಅಲ್ಲಿಗೇ ಕೈಬಿಡಲಾಗುತ್ತದೆ. ಆದರೆ ಒಬ್ಬ ಸರಕಾರಿ ಅಧಿಕಾರಿಯ ಮೇಲೆ ಕೈ ಮಾಡಿದ್ದು, ಗೌಡರ ಮುಂಗೋಪದ ಖಾತೆಗೆ ಜಮೆಯಾಗಿ ಜನಜನಿತವಾಗುತ್ತದೆ.

 ಮಾದೇಗೌಡರು ಮೊದಲಿನಿಂದಲೂ ಜನಸೇವೆಯತ್ತ ಒಲವುಳ್ಳವರು. ಜನಕೊಟ್ಟ ಅಧಿಕಾರವನ್ನು ಜನರ ಒಳಿತಿಗೆ ವಿನಿಯೋಗಿಸಬೇಕೆಂಬ ತುಡಿತವುಳ್ಳವರು. ಹಾಗಾಗಿಯೇ ಶಾಸಕರಾಗಿ, ಮಂತ್ರಿಯಾಗಿ, ಸಂಸದರಾಗಿ ಆಯ್ಕೆಯಾಗಿ ಅಧಿಕಾರವೆಂಬ ಅವಕಾಶ ದೊರೆತಾಗ ಮಂಡ್ಯ ಜಿಲ್ಲೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಇವತ್ತು ಭಾರತಿ ನಗರವನ್ನು ಇಲ್ಲಿ ಉಲ್ಲೇಖಿಸಬಹುದು.

60ರ ದಶಕದಲ್ಲಿ ಕಾಳಮುದ್ದನದೊಡ್ಡಿಯಲ್ಲಿ ಏನೂ ಇರಲಿಲ್ಲ. ಅಂತಹ ಬೆಂಗಾಡನ್ನು ಮಾದೇಗೌಡರು ಭಾರತಿ ನಗರವನ್ನಾಗಿ ಮಾರ್ಪಡಿಸಿದರು. ಮೊದಲಿಗೆ ಶಾಸಕರಾಗಿ ಆಯ್ಕೆಯಾದ ಅವಧಿಯಲ್ಲಿಯೇ ಕಾಳಮುದ್ದನದೊಡ್ಡಿಯಲ್ಲಿ, ರೈತರ ಆರ್ಥಿಕಾಭಿವೃದ್ಧಿಗಾಗಿ ಸಹಕಾರ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಮುಂದಾಗಿದ್ದರು. ಸಹಕಾರ ಕ್ಷೇತ್ರದಲ್ಲಿ ರೈತರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅಭಿವೃದ್ಧಿ ಹೊಂದುವ ಮಾರ್ಗವನ್ನು ತೋರಿಸಿಕೊಟ್ಟಿದ್ದರು. ನಂತರ ಶಿಕ್ಷಣ ಕ್ಷೇತ್ರದತ್ತ ಗಮನ ಹರಿಸಿ, ದೊಡ್ಡಿಯಲ್ಲಿ ಮೊದಲಿಗೆ ಪ್ರೌಢಶಾಲೆ ಸ್ಥಾಪಿಸಿದರು. ಅಂದು ಆ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಕೇವಲ 26. ಇಂದು ಅದು ಹತ್ತಾರು ಕೋರ್ಸ್‌ಗಳನ್ನು ಹೊಂದಿ, ಭಾರತಿ ಎಜುಕೇಷನ್ ಟ್ರಸ್ಟ್ ಎಂಬ ಬೃಹತ್ ಸಂಸ್ಥೆಯಾಗಿ ಬೆಳೆದು ಸಾವಿರಾರು ಜನಕ್ಕೆ ಉದ್ಯೋಗ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಇದಷ್ಟೇ ಅಲ್ಲದೆ ಗೌಡರು ಕಿರುಗಾವಲಿನಲ್ಲಿ ಪಿಯುಕಾಲೇಜು, ಹನುಮಂತನಗರದಲ್ಲಿ ಮಾದರಿ ಶಾಲೆಗಳನ್ನು ಸ್ಥಾಪಿಸಿದರು. ಹಾಗೆಯೇ ಮಂಡ್ಯ ಸಕ್ಕರೆ ಕಾರ್ಖಾನೆಗೆ ಸೇರಿದ ಹೊಸೂರಿನಲ್ಲಿದ್ದ 65 ಎಕರೆ ಜಾಗದಲ್ಲಿ, ಮಹಾತ್ಮಾ ಗಾಂಧಿ ಸ್ಮಾರಕ ಕ್ಷಯ ಮತ್ತು ಎದೆ ರೋಗಗಳ ಆಸ್ಪತ್ರೆ ಆರಂಭಿಸಿದರು. ಸಾಲದು ಎಂದು ಗುರುದೇವರಹಳ್ಳಿಯ ಸ್ವಂತ ಮನೆ, ತೋಟವನ್ನು ಸಾರ್ವಜನಿಕ ಆಸ್ಪತ್ರೆಯನ್ನಾಗಿ ಪರಿವರ್ತಿಸಿದರು. ಮದ್ದೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹನುಮಂತನಗರದಲ್ಲಿ ನ್ಯಾಚುರೋಪತಿ ಆಸ್ಪತ್ರೆಗಳನ್ನು ಕಟ್ಟಿ ಗ್ರಾಮೀಣ ಭಾಗದ ಜನರ ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟರು. ಇಲ್ಲೆಲ್ಲ ಕಾಣುವುದು ಗೌಡರ ಸಮಾಜಸೇವೆ ಎಂಬ ಗಾಂಧಿ ಮಾರ್ಗ.

ಮಾದೇಗೌಡರು ಬಾಲಕನಾಗಿದ್ದಾಗಲೇ ಗಾಂಧಿಯ ಗ್ರಾಮ ಭಾರತ ಕಲ್ಪನೆಗೆ, ಸರಳತೆಗೆ ಮಾರುಹೋಗಿದ್ದರು. ಆ ಕಾರಣದಿಂದಲೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಮೀಣ ಮಕ್ಕಳಿಗೆ ನೆರವಾದರು.ಅಷ್ಟೇ ಅಲ್ಲ, ಕಾಳಮುದ್ದನದೊಡ್ಡಿಗೂ ಗಾಂಧಿ ಕರೆತಂದು, ಗಾಂಧಿ ಭವನ ನಿರ್ಮಿಸಿ, ಹಳ್ಳಿಮಕ್ಕಳಲ್ಲಿ ಗಾಂಧಿ ಬಗ್ಗೆ ಪ್ರೀತಿ-ಗೌರವ ಮೂಡುವಂತೆ ಮಾಡಿದರು. ಮುಂದುವರಿದು, ಗಾಂಧಿ ಸ್ಮಾರಕ ಟ್ರಸ್ಟ್ ಸ್ಥಾಪಿಸಿ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡಿ, ಹಳ್ಳಿಗರು ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಕಲ್ಪಿಸಿಕೊಟ್ಟರು. ಇದಕ್ಕೂ ಸಮಾಧಾನವಾಗದ ಗೌಡರು, ಮಂಡ್ಯದಲ್ಲೊಂದು ಗಾಂಧಿ ಭವನ ನಿರ್ಮಿಸಿ, ಕರ್ನಾಟಕ ಸಂಘ ಸ್ಥಾಪಿಸಿ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿದರು.

 1960ರಿಂದಲೂ ಸಾರ್ವಜನಿಕ ಕ್ಷೇತ್ರದಲ್ಲಿ ದಣಿವರಿಯದೆ ದುಡಿಯುತ್ತಲೇ ಇದ್ದ ಮಾದೇಗೌಡರನ್ನು 4 ವರ್ಷಗಳ ಹಿಂದೆ ಭೇಟಿ ಮಾಡಿದಾಗ, 70ರ ದಶಕದ ರಾಜಕಾರ

ಣವನ್ನು, ದೇವರಾಜ ಅರಸು ಜೊತೆಗಿನ ಒಡನಾಟವನ್ನು, ವರುಣಾ ನಾಲೆಯ ಚಡ್ಡಿ ಮೆರವಣಿಗೆಯನ್ನು, ಕಬ್ಬನ್ ಪಾರ್ಕಿನಲ್ಲಿ ಜಮಾವಣೆಗೊಂಡ ರೈತರ ರ್ಯಾಲಿಯನ್ನು, ರೈತರ ಬಳಿಗೇ ಮುಖ್ಯಮಂತ್ರಿ ಬರುವಂತೆ ಮಾಡಿದ್ದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು. ಆಗಲೇ ಮಾತು ಕೊಂಚ ತೊದಲುತ್ತಿತ್ತು. ಸಮಕಾಲೀನರಾದ ಚೌಡಯ್ಯನವರ ಬಗ್ಗೆ ಕೇಳಿದಾಗ, ‘ಅವರ ಬಗ್ಗೆಯೂ ಮಾತನಾಡಿ, ಕುಡಿಯುದಿಲ್ಲ, ಭಾರೀ ಕ್ಲೀನ್ ಮನುಷ್ಯ, ನನಗೀ ಸಿಗರೇಟು, ದಿನಕ್ಕೆ ಎರಡು ಪೆಗ್ಗು ಬುಡುಕ್ಕಾಗುದಿಲ್ಲ’ ಎಂದು ಬಾಯ್ತುಂಬ ನಕ್ಕಿದ್ದರು.

ಹಾಗೆ ನೋಡಿದರೆ, ಮಾದೇಗೌಡರ ರಾಜಕಾರಣ 1995ರ ವರೆಗೆ ಯಾವುದೇ ಅಡೆತಡೆಗಳಿಲ್ಲದೆ ಸಲೀಸಾಗಿ ಸಾಗಿತ್ತು. ಯಾವಾಗ 1994ರಲ್ಲಿ ದೇವೇಗೌಡರು ಹಾಸನ ಜಿಲ್ಲೆ ಬಿಟ್ಟು ರಾಮನಗರದತ್ತ ಮುಖಮಾಡಿ ಮುಖ್ಯಮಂತ್ರಿಗಳಾದರೋ; 1996ರಲ್ಲಿ ಕೆ.ಆರ್.ಪೇಟೆ ಕೃಷ್ಣರ ಎದುರು ಮಾದೇಗೌಡರು ಲೋಕಸಭಾ ಚುನಾವಣೆಯಲ್ಲಿ ಸೋತರೋ; 1999ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರೋ; ದಳದಲ್ಲಿದ್ದ ಅಂಬರೀಶ್ ಕಾಂಗ್ರೆಸ್ ಸೇರಿ ಎಂಪಿಯಾಗಿ ಗೆದ್ದರೋ.. ಅಲ್ಲಿಂದ ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಹೊಸಗಾಳಿ ಬೀಸತೊಡಗಿತು, ಹಳಬರು ತೆರೆಮರೆಗೆ ಸರಿಯತೊಡಗಿದರು. ಹಾಗೆಯೇ ಮಾದೇಗೌಡರ ವರ್ಚಸ್ಸು ಕೂಡ ಕಡಿಮೆಯಾಗತೊಡಗಿತು. ಇದರ ಜೊತೆಗೆ ಮಗ ಮಧು ಮಾದೇಗೌಡರನ್ನು ರಾಜಕಾರಣದಲ್ಲಿ ನೆಲೆಗೊಳಿಸಲು, ತಮ್ಮ ಖಡಕ್ ಸ್ವಭಾವಕ್ಕೆ ವಿರುದ್ಧವಾಗಿ ವರ್ತಿಸಿ ಬದಲಾದ ಪರಿಸ್ಥಿತಿಗೂ ಒಗ್ಗಿಕೊಳ್ಳಬೇಕಾಯಿತು. ಚುನಾವಣಾ ಭ್ರಷ್ಟಾಚಾರಗಳ ಬಗ್ಗೆ ಬಾಯಿಬಿಡದೆ ಮೌನಕ್ಕೆ ಶರಣಾಗುವಂತಾಯಿತು. ಹಾಗಂತ ದೇವೇಗೌಡ ಮತ್ತು ಎಸ್.ಎಂ.ಕೃಷ್ಣರೊಂದಿಗೆ ರಾಜಿ ಮಾಡಿಕೊಂಡಿದ್ದಿಲ್ಲ. ಕಾಂಗ್ರೆಸ್ ನಿಷ್ಠೆ ಬಿಟ್ಟು ಬೇರೆ ಪಕ್ಷದತ್ತ ನೋಡಿದವರೂ ಅಲ್ಲ.

ಇದೆಲ್ಲ ರಾಜಕಾರಣಕ್ಕೆ ಸೀಮಿತವಾದ, ಎಲ್ಲ ರಾಜಕಾರಣಿಗಳ ಬದುಕಲ್ಲೂ ನಡೆಯುವಂತಹ ಸಹಜ ಏರಿಳಿತಗಳು.ಆದರೆ ಕಾವೇರಿ ಎಂದಾಕ್ಷಣ ಅದೇ ಮಾದೇಗೌಡರು, ಅದೇ ಕೆಚ್ಚಿನರಾಜಿ ರಹಿತ ಹೋರಾಟ. ಜೀವಜಲ ಕಾವೇರಿಗಾಗಿ ಗೌಡರು ಲೆಕ್ಕವಿಲ್ಲದಷ್ಟು ಹೋರಾಟ, ಸತ್ಯಾಗ್ರಹ, ರಸ್ತೆ ರೋಖೋ, ಜೈಲುವಾಸ ಅನುಭವಿಸಿದ್ದಾರೆ. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಪಕ್ಷದ ವಿರುದ್ಧವೇ ಸೆಟೆದು ನಿಂತಿದ್ದಾರೆ. ವೈಯಕ್ತಿಕ ಲಾಭ-ನಷ್ಟಗಳನ್ನು ಬದಿಗೊತ್ತಿದ್ದಾರೆ. ಇಂತಹ ನಿಷ್ಠುರ ಹೋರಾಟಗಾರನ ನಿರ್ಗಮನ, ಭವಿಷ್ಯದ ಕಾವೇರಿ ಹೋರಾಟಕ್ಕೊಂದು ಭಾರೀ ಹಿನ್ನಡೆ ಎನ್ನುವುದರಲ್ಲಿ ಅನುಮಾನವಿಲ್ಲ. ಮಾದೇಗೌಡರ ಹೋರಾಟದ ಬದುಕನ್ನು ಬಹಳ ಹತ್ತಿರದಿಂದ ಕಂಡಿರುವ ಮಂಡ್ಯದ ಹೊಸ ಪೀಳಿಗೆ, ಅವರ ರಾಜಿರಹಿತ ಹೋರಾಟವನ್ನು ಮೈಗೂಡಿಸಿಕೊಳ್ಳಬೇಕಾದ ತುರ್ತಿದೆ.

ಗೌಡರ ಕೃಷಿ ಕಾಳಜಿ, ಶಿಕ್ಷಣ ಪ್ರೀತಿ, ಸಹಕಾರತತ್ವ, ಗಾಂಧಿ ಮಾರ್ಗ, ನಿಸ್ವಾರ್ಥ ಸೇವೆ, ಸಾಮಾಜಿಕ ಪ್ರಜ್ಞೆ, ಸಂಘಟಿತ ಹೋರಾಟ ಅವರನ್ನು ರೈತಮಿತ್ರ, ಗ್ರಾಮಗಾಂಧಿ, ಅಪರಂಜಿ, ಹಳ್ಳಿ ರೂವಾರಿ ಎಂಬ ಬಿರುದುಗಳಿಗೆ ಪಾತ್ರರಾಗುವಂತೆ ಮಾಡಿದೆ. ಮೈಸೂರು ವಿವಿ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ. ಇಷ್ಟೆಲ್ಲ ಸಾಧನೆಗೈದ ಮಾದೇಗೌಡರು ಮಾತ್ರ, ‘ನಾನೇನ್ ಮಹಾ ಮಾಡಿರೋದು,ಜನಕ್ಕೆ ಇದು ಬೇಕಿತ್ತು ಅದಕ್ಕೆ ಮಾಡಿದೆ, ಅದೂ ಅವರ ಸಹಕಾರದಿಂದ ಮಾಡಿದ್ದು, ನಾನೇ ಜನರ ಋಣಭಾರದಲ್ಲಿದ್ದೇನೆ, ಅದನ್ನು ಎಂದಿಗೂ ತೀರಿಸಲಾಗದು’ ಎಂದು ಯಾವಾಗಲೂ ಹೇಳುತ್ತಿದ್ದರು. ಇಂತಹ ಮಾನವಂತ ಮಾದೇಗೌಡರು ಇಂದು ಭೌತಿಕವಾಗಿ ನಮ್ಮಿಂದಿಗೆ ಇಲ್ಲವಾಗಿರಬಹುದು, ಆದರೆ ಅವರ ಸಮಾಜಮುಖಿ ಸೇವಾಕಾರ್ಯಗಳು ಅವರನ್ನು ಎಲ್ಲ ಕಾಲಕ್ಕೂ ಜೀವಂತವಾಗಿಟ್ಟಿರುತ್ತವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top