ನಾನು, ಗೌರಿ ಮಾತನಾಡುತ್ತಿದ್ದೇನೆ....!! | Vartha Bharati- ವಾರ್ತಾ ಭಾರತಿ

--

ಇಂದು ಗೌರಿ ಲಂಕೇಶ್ ದುಷ್ಕರ್ಮಿಗಳಿಗೆ ಬಲಿಯಾದ ದಿನ

ನಾನು, ಗೌರಿ ಮಾತನಾಡುತ್ತಿದ್ದೇನೆ....!!

ಹೌದು, ನಾನು ಗೌರಿ!

ಅಪ್ಪನ ಸಾವಿನ ಸುದ್ದಿ ಕೇಳಿ ದೂರದ ದಿಲ್ಲಿಯಿಂದ ಗುಬ್ಬಚ್ಚಿ ಮರಿಯಂತೆ ಹಾರಿ ಬಂದಿದ್ದೆ. ಹಾಗೆ ಬಂದ ನಾನು ಮರಳಿ ಹಾರಿ ಹೋಗುವುದು ಕಷ್ಟವೆನ್ನುವುದು ನನಗೆ ಗೊತ್ತಿತ್ತು. ಯಾಕೆಂದರೆ ‘ಲಂಕೇಶರ ಮಗಳು’ ಎನ್ನುವ ಹೊಣೆಗಾರಿಕೆ ನನ್ನ ಕೊರಳಿಗೆ ಅದಾಗಲೇ ಉರುಳಿನಂತೆ ಸುತ್ತಿಕೊಂಡಿತ್ತು. ಸ್ವತಂತ್ರವಾಗಿ ನಾನು ಯೋಚಿಸಿದಂತೆ ಬರೆಯುವ, ಬದುಕುವ ನನ್ನ ಗಯ್ಯಿಳಿ ಲೋಕಕ್ಕೆ ಮತ್ತೆ ಹಾರಿ ಹೋಗುವುದು ಸಾಧ್ಯವಿರಲಿಲ್ಲ. ನನ್ನ ಮುಂದಿರುವ ಅತಿ ದೊಡ್ಡ ಸವಾಲು ನನ್ನ ‘ಅಪ್ಪ’ನೇ ಆಗಿದ್ದರು. ಅವರ ಗಾಂಭೀರ್ಯ, ಅವರ ವಿದ್ವತ್ತು, ಅವರ ರಾಜಕೀಯ ದೂರದೃಷ್ಟಿ, ಅವರ ಪ್ರಬುದ್ಧತೆ, ಎಂದಿಗೂ ಒಲಿಯದ ಅವರ ವ್ಯವಹಾರದ ‘ಲೆಕ್ಕಾಚಾರ’ ಇವೆಲ್ಲವನ್ನು ನಿಭಾಯಿಸುವ ದೊಡ್ಡದೊಂದು ಭಾರ ನನ್ನ ಕೊರಳ ಕುಣಿಕೆಯ ಜೊತೆಗಿತ್ತು..

ನನ್ನ ಬಾಳ ಸಂಗಾತಿಯ ಜೊತೆಗೂ ಹೆಚ್ಚು ಸಮಯ ಏಗಲಾರದ ನನ್ನ ಪುಟ್ಟ ಹೆಗಲ ಮೇಲೆ ಇದೀಗ ನನ್ನ ಬದುಕಿನ ಜೊತೆಗೆ ಎಂದೆಂದೂ ಹೊಂದಾಣಿಕೆಯಾದ ಅಪ್ಪನ ಬದುಕು ಇದ್ದಕ್ಕಿದ್ದಂತೆಯೇ ಏರಿ ಬಿಟ್ಟಿತ್ತು. ಅಪ್ಪನಿಗಿಂತಲೂ ಭಯ ಬೀಳಿಸಿದ್ದು ಅಪ್ಪನ ಜೊತೆಗಿದ್ದ ಅವರ ಪ್ರಬುದ್ಧ ಶಿಷ್ಯರು. ಅವರ ಅರಿವು, ಅಪ್ಪನಿಂದ ಅವರು ಪಡೆದುಕೊಂಡ ತಿಳಿವು, ಭಾಷೆ, ಅವರ ಜೀವನಾನುಭವ, ಅಪ್ಪನ ನೀಳ ನೆರಳಿನಂತೆ ನನ್ನ ಮುಂದೆ ಓಡಾಡುತ್ತಾ ನನ್ನನ್ನು ಅವರು ಓರೆಗಣ್ಣಲ್ಲಿ ಅಳೆದ ರೀತಿ. ನನಗೆ ನಾನೇ ಒಳಗೊಳಗೆ ಅಂಜಿಕೊಳ್ಳುತ್ತಾ ಅಪ್ಪನ ಕಚೇರಿಯೊಳಗೆ ಹೆಜ್ಜೆಯಿಟ್ಟೆ. ನಾನೆಲ್ಲವನ್ನೂ ಹೊಸದಾಗಿ ಆರಂಭಿಸಬೇಕಾಗಿತ್ತು. ಒಂದು ಎಳೆ ಮಗು ಮೊತ್ತ ಮೊದಲು ಅ...ಆ .... ಬರೆಯುವಂತೆಕನ್ನಡದ ನನ್ನ ಮೊತ್ತ ಮೊದಲ ಸಂಪಾದಕೀಯವನ್ನು ಬರೆದೆ. ಕನ್ನಡ ತಿಳಿದವರಿಂದ ಅದನ್ನು ತಿದ್ದಿಸಿದೆ. ಆ ಸಂಪಾದಕೀಯದೊಳಗಿರುವ ಸರಳತೆಯೇ ಓದುಗರನ್ನು ಸೆಳೆಯಿತು. ಅದು ನನಗೆ ಅಪಾರ ಧೈರ್ಯವನ್ನು ಕೊಟ್ಟಿತು. ಇದೇ ಸಂದರ್ಭದಲ್ಲಿ, ನನ್ನ ಸುತ್ತಲಿದ್ದವರೆಲ್ಲ ಇನ್ನೂ ‘ಲಂಕೇಶ್ ಪತ್ರಿಕೆ’ಯನ್ನೇ ಬಯಸುತ್ತಿದ್ದರು. ಅಪ್ಪ ಇಲ್ಲದೆ ಲಂಕೇಶ್ ಪತ್ರಿಕೆಯನ್ನು ತರುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದೂ. ಮೊತ್ತ ಮೊದಲು ನಾನು ಆ ಭಾರವನ್ನು ಕಳಚಿಕೊಳ್ಳಬೇಕಾಗಿತ್ತು. ‘ಲಂಕೇಶ್’ ಪತ್ರಿಕೆಯನ್ನು ನನ್ನ ಸ್ವಭಾವಕ್ಕೆ ಪೂರಕವಾದ್ಖ ‘ಗೌರಿ ಲಂಕೇಶ್’ ಪತ್ರಿಕೆಯಾಗಿಸುವುದೊಂದೇ ಅದಕ್ಕಿರುವ ಮಾರ್ಗ. ಈ ನಿಟ್ಟಿನಲ್ಲಿ ನಾನು ಲಂಕೇಶರ ಜೊತೆಗಿದ್ದ ಎಲ್ಲರ ಜೊತೆಗೂ ನಿಷ್ಠುರ ಕಟ್ಟಿಕೊಳ್ಳುವುದು ಅನಿವಾರ್ಯವಾಯಿತು. ಆ ನಿಷ್ಠುರತೆ ಪತ್ರಿಕೆಯನ್ನೇ ಅಂತಿಮವಾಗಿ ಎರಡು ಭಾಗವಾಗಿಸಿತು. ಇದು ನನ್ನ ಪಾಲಿಗೆ ಅನಿವಾರ್ಯವೂ ಆಗಿತ್ತು.

ನಾನು ಅಪ್ಪನ ‘ಮುಸ್ಸಂಜೆ ಕಥಾಪ್ರಸಂಗ ಕಾದಂಬರಿಯ’ ರಂಗವ್ವನಂತೆ ಒಂದಿಷ್ಟು ಗಯ್ಯಳಿ. ತಪ್ಪುಗಳನ್ನು ನೋಡುತ್ತಾ ಅವುಗಳನ್ನು ರೂಪಕ ಭಾಷೆಯಲ್ಲಿ ವಿಶ್ಲೇಷಿಸುವುದು ಸಾಧ್ಯವಿರಲಿಲ್ಲ. ಅಪ್ಪನಿಗೆ ಪತ್ರಿಕೋದ್ಯಮದ ಭಾಷೆಯಷ್ಟೇ ಅಲ್ಲ, ನಾಟಕ, ಕಾವ್ಯ, ಕಾದಂಬರಿ, ಕತೆ ಈ ಎಲ್ಲ ಭಾಷೆಗಳೂ ಸಿದ್ಧಿಸಿದ್ದವು. ಅವೆಲ್ಲವನ್ನೂ ಸಂದರ್ಭಕ್ಕೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದರು. ತನಗೆ ಸರಿಕಾಣದ್ದನ್ನು ವಿವಿಧ ಮಾಧ್ಯಮಗಳ ಮೂಲಕ ಓದುಗರನ್ನು ತಲುಪಿಸುವ ಚಾಕಚಕ್ಯತೆ ಅವರಿಗಿತ್ತು. ಆದರೆ ನನಗೆ ಆ ಸೌಲಭ್ಯಗಳಿರಲಿಲ್ಲ. ಆದುದರಿಂದ ನಾನು ಏನು ಬರೆದರೂ, ಏನು ಮಾತನಾಡಿದರೂ ಅದಕ್ಕೆ ಒಂದು ಅರ್ಥ ಮಾತ್ರ ಇರುತ್ತಿತ್ತು. ಜೊತೆಗೆ, ಅಪ್ಪನಂತೆ ಆಳ ನೋಡಿ ನೀರಿಗಿಳಿಯುವ ಪ್ರಬುದ್ಧತೆ ನನಗಿರಲಿಲ್ಲ. ‘ಇದು ತಪ್ಪು’ ಎನ್ನುವುದನ್ನು ಜೋರಾಗಿ ಹೇಳುವುದಷ್ಟೇ ನನಗೆ ಗೊತ್ತು. ವರ್ತಮಾನದ ಶತ್ರುಗಳನ್ನು ನಾನು ನೇರವಾಗಿ ಎದುರಿಸುತ್ತಿದ್ದೆ. ಅಪ್ಪ ತನ್ನ ಶತ್ರುಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲೂ, ನಾಟಕ, ಸಿನೆಮಾ, ವಿಮರ್ಶೆ ಇತ್ಯಾದಿಗಳನ್ನು ರಕ್ಷಾ ಕವಚವಾಗಿ ಬಳಸಿಕೊಳ್ಳುತ್ತಿದ್ದರು. ಅಂತಹ ಯಾವ ಯುದ್ಧಕವಚವೂ ಇಲ್ಲದೆ ನಾನು ಪತ್ರಿಕೆಯ ಜೊತೆಗೆ ಬೀದಿ ಹೋರಾಟಕ್ಕೆ ಇಳಿದಿದ್ದೆ. ಮೊದಲೇ ಹೇಳಿದ್ದೆ. ಅಪ್ಪನಂತೆ ನಾನು ವ್ಯವಹಾರವನ್ನು ಕಲಿತಿಲ್ಲ. ಆದುದರಿಂದಲೇ ‘ಗೌರಿ ಲಂಕೇಶ್’ ಆರ್ಥಿಕ ಮುಗ್ಗಟ್ಟಿನೊಂದಿಗೇ ಆರಂಭವಾಯಿತು ಮತ್ತು ಆ ಮುಗ್ಗಟ್ಟು ಉದ್ದಕ್ಕೂ ಮುಂದುವರಿಯಿತು. ತನ್ನ ಸಹದ್ಯೋಗಿಗಳ ಮಾರ್ಗದರ್ಶನ, ಮುತ್ಸದ್ದಿತನ ಪತ್ರಿಕೆಗೆ ಒಂದಿಷ್ಟು ಆರ್ಥಿಕ ಚೈತನ್ಯವನ್ನು ನೀಡಿತು.

ಪತ್ರಿಕೆ ಮತ್ತು ಸಾರ್ವಜನಿಕ ಹೋರಾಟಗಳ ನಡುವೆ ಯಾವ ಅಂತರವೂ ಉಳಿದಿರಲಿಲ್ಲವಾದುದರಿಂದ, ವಿವಿಧ ಸಾಮಾಜಿಕ ಹೋರಾಟಗಾರರೂ ಪತ್ರಿಕೆಗೆ ಹೆಗಲು ನೀಡಿದರು. ಪತ್ರಿಕೆಯೊಳಗೆ ‘ಬೋಧನೆ-ಪ್ರಚೋದನೆ’ಯೇನೋ ಇತ್ತು. ರಂಜನೆಗೆ ಅಲ್ಲಿ ಅವಕಾಶವೇ ಇರಲಿಲ್ಲ. ಕೋಮು ಸೌಹಾರ್ದ ವೇದಿಕೆಯ ನೇತೃತ್ವದಲ್ಲಿ ಹಮ್ಮಿಕೊಂಡ ಬೇರೆ ಬೇರೆ ಹೋರಾಟಗಳಲ್ಲಿ ಪತ್ರಿಕೆ ನೇರ ಪಾತ್ರವನ್ನು ವಹಿಸಿತು. ಬಾಬಾಬುಡಾನ್ ಗಿರಿ ಹೋರಾಟದಲ್ಲಿ ಜೈಲಿನಲ್ಲೇ ಕೂತು ಸಂಪಾದಕೀಯವನ್ನು ಬರೆದೆ. ಅಪ್ಪನ ಕಾಲದಲ್ಲಿ ಕೋಮುವಾದಿಗಳು ಇಷ್ಟೊಂದು ಬಿಗಡಾಯಿಸಿರಲಿಲ್ಲ. ಆದರೆ ನನ್ನ ಕಾಲದಲ್ಲಿ ಸಂಘಪರಿವಾರದವರು ಪೂರ್ಣ ಪ್ರಮಾಣದಲ್ಲಿ, ಬೀದಿ ಮಾರಿಗಳಾಗಿ ಹರಡಿಕೊಂಡು ಬಿಟ್ಟಿದ್ದರು. ವಿಪರ್ಯಾಸವೆಂದರೆ ಅಪ್ಪನ ಜೊತೆಗೆ ಗುರುತಿಸಿಕೊಂಡಿದ್ದ ಹಲವರು ಸಂಘಪರಿವಾರ ಭಾಷೆಯಲ್ಲಿ ಮಾತನಾಡಲು ಶುರು ಹಚ್ಚಿದ್ದರು. ಅಪ್ಪ ಅತಿಯಾಗಿ ಪ್ರೀತಿಸಿದ ಅಜಿತನೂ ಸೇರಿದಂತೆ. ಒಮ್ಮಿಮ್ಮೆ ನನಗೆ ಭಯವಾಗುತ್ತಿತ್ತು. ಇಲ್ಲಿ ನಾನು ಒಂಟಿ ಅನ್ನಿಸಿ ಬಿಡುತ್ತಿತ್ತು. ಇವೆಲ್ಲವನ್ನು ಬಿಟ್ಟು ದಿಲ್ಲಿ ಸೇರಿಕೊಂಡು ಬಿಡೋಣ ಅನ್ನಿಸುತ್ತಿತ್ತು. ಆದರೂ ಹುಲಿ ಸವಾರಿ ಮಾಡಿಯಾಗಿತ್ತು. ಇಳಿಯುವುದು ಅಷ್ಟು ಸುಲಭವಿರಲಿಲ್ಲ. ಯಾವಾಗ ಸಾಕೇತ್ ರಾಜ್ ಎಂಬ ಅಪ್ಪಟ ಮನುಷ್ಯನ ಭೀಕರ ಹತ್ಯೆಯಾಯಿತೋ ಆಗ ನಾನು ಸುಮ್ಮನಿರುವಂತಿರಲಿಲ್ಲ. ನಾನು ಕಾಡಿನಲ್ಲಿರುವ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಅಗತ್ಯವನ್ನು ಮನಗಂಡೆ. ಜನರ ನಡುವೆ ಬೆರೆತು ಪ್ರಭುತ್ವದ ವಿರುದ್ಧ ಹೋರಾಡಲು ಅಪಾರ ಶಕ್ತಿಯಿರುವ ಯುವಕರು ಕಾಡು ಸೇರಿ, ಪೊಲೀಸರ ಕೋವಿಗಳಿಗೆ ಚಿಟ್ಟೆಗಳಂತೆ ಸುಟು್ಟ ಹೋಗುತ್ತಿರುವುದು ನನ್ನನ್ನು ಕಂಗೆಡಿಸಿತು. ದೊರೆಸ್ವಾಮಿಯಂತಹ ಹಿರಿಯರ ನೇತೃತ್ವವನ್ನು ಪಡೆದು, ಕಾಡೊಳಗಿರುವ ನಮ್ಮ ಯುವ ಸಮೂಹವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಶುರುವಾಯಿತು. ಅಷ್ಟರಲ್ಲಾಗಲೆ, ನನ್ನನ್ನು ನಕ್ಸಲ್ ಬೆಂಬಲಿಗಳು, ನಕ್ಸಲೀಯರ ಪರವಾಗಿರುವವಳು ಎಂದು ಅಪ್ಪನ ಜೊತೆಗಿದ್ದವರೇ ಟೀಕಿಸಿ, ನನ್ನ ಉದ್ದೇಶವನ್ನು ಕೆಡಿಸತೊಡಗಿದ್ದರು. ನಾನು ಅಂಜಲಿಲ್ಲ. ಹಲವು ತರುಣರು ಮುಖ್ಯವಾಹಿನಿಗೆ ಬಂದರು. ಕರ್ನಾಟಕದ ವಿವಿಧ ಚಳವಳಿಗಳು ಮರು ಜೀವ ಪಡೆಯಲು ಇದು ಕಾರಣವಾಯಿತು. ವೇಮುಲಾ ಆತ್ಮಹತ್ಯೆ ಮುಂದೆ ದೂರದ ದಿಲ್ಲಿಯಲ್ಲಿರುವ ಜೆಎನ್‌ಯುನಲ್ಲಿ ವಿದ್ಯಾರ್ಥಿ ಸಮೂಹದ ನಡುವೆ ದೊಡ್ಡ ಹೋರಾಟದ ಕಿಚ್ಚೊಂದನ್ನು ಹಚ್ಚಿತು.

ನನ್ನ ಹೋರಾಟದ ಪಯಣದಲ್ಲಿ ಒಬ್ಬ ಸೋದರ ದೂರವಾದರೇನಂತೆ, ಕನ್ನಯ್ಯ, ಜಿಗ್ನೇಶ್, ಉಮರ್ ಖಾಲಿದ್‌ನಂತಹ ತಮ್ಮಂದಿರು ಹತ್ತಿರವಾದರು. ನನ್ನ ಹೋರಾಟದ ಹಾದಿಯಲ್ಲಿ ಕಲ್ಲು ಮುಳ್ಳುಗಳು ಮಾತ್ರವಲ್ಲ, ತೋಳಗಳು, ರಣಹದ್ದುಗಳೂ ಆ ಹಾದಿಯಲ್ಲಿ ಹೊಂಚಿಕೂತಿದ್ದವು. ಸಿಬ್ಬಂದಿಗೆ ನೀಡುವುದಕ್ಕೆ ನನ್ನ ಬಳಿ ಹಣವಿರಲಿಲ್ಲ. ನನ್ನ ಇನ್ಶೂರೆನ್ಸ್ ಹಣವನ್ನು ಕ್ಲೇಮ್ ಮಾಡಿ ವೇತನ ಕೊಡಬೇಕಾದ ಸ್ಥಿತಿ. ಹೀಗೊಮ್ಮೆ ಬೆಂಗಳೂರಿನ ಬೃಹತ್ ಪತ್ರಕರ್ತ ನನಗೆ ಆಹ್ವಾನ ನೀಡಿದ್ದರು. ಅಲ್ಲಿಗೆ ಹೋಗಿದ್ದೆ. ಆತನ ಟೇಬಲ್ ಮೇಲೆ ಪಿಸ್ತೂಲ್ ನೋಡಿದೆ. ನಗು ಬಂತು. ನನ್ನ ಸುತ್ತ ನೂರಾರು ಶತ್ರುಗಳನ್ನು ಸೃಷ್ಟಿಸಿಕೊಂಡೂ ಒಮ್ಮೆಯೂ ಪಿಸ್ತೂಲ್ ಕುರಿತಂತೆ ಯೋಚಿಸಿದವಳಲ್ಲ ನಾನು. ಇದೇ ಸಂದರ್ಭದಲ್ಲಿ ಯಾವುದೋ ಯೋಜನೆ ಯೊಂದನ್ನು ನನ್ನ ಮುಂದಿಟ್ಟು ಆತ ಆರ್ಥಿಕ ಆಮಿಷವನ್ನು ನೀಡಿದ್ದ. ನಾನು ನಯವಾಗಿಯೇ ತಿರಸ್ಕರಿಸಿದ್ದೆ. ಪತ್ರಕರ್ತನೊಬ್ಬ ಭಾಷಾ ಪ್ರೌಢಿಮೆಯನ್ನು ಹೊಂದಿರಲೇ ಬೇಕು ಎನ್ನುವ ನಿಯಮವನ್ನು ಮೀರಿ ನಾನು ಗೌರಿ ಲಂಕೇಶ್ ಪತ್ರಿಕೆಯನ್ನು ಯಶಸ್ವಿಯಾಗಿ ತಂದೆ. ಅದೇ ಸಂದರ್ಭದಲ್ಲಿ, ಸಾಮಾಜಿಕ ಹೋರಾಟಗಾರ್ತಿಯೊಬ್ಬಳು ಅತ್ಯುತ್ತಮ ಭಾಷಣಗಾರ್ತಿಯಾಗಿರಲೇಬೇಕು ಎನ್ನುವ ನಿಯಮವನ್ನೂ ಮೀರಿಬಿಟ್ಟೆ. ವರ್ತಮಾನ ಸುಮಧುರ, ರೋಚಕ ಭಾಷಣಕ್ಕಾಗಿ ಹಾತೊರೆಯುವ ಸ್ಥಿತಿಯಲ್ಲಿಲ್ಲ ಎನ್ನುವುದು ನನಗೆ ಸ್ಪಷ್ಟವಾಗಿತ್ತು. ಅಂತಹ ಭಾಷಣಗಳು ನನ್ನನ್ನು ಇನ್ನೊಬ್ಬ ಸಂಘಪರಿವಾರದ ನಾಯಕನಿಗೆ ಪರ್ಯಾಯ ನಾಯಕಿಯಾಗಿಯಷ್ಟೇ ಬೆಳೆಸುತ್ತಿತ್ತು. ಭಾಷಣ ಮಾಡಲು ಗೊತ್ತಿಲ್ಲದೆ ಇರುವುದೇ ನನ್ನ ಅರ್ಹತೆಯಾಗಿ ಬಿಟ್ಟಿತು. ನಡು ಬೀದಿಯಲ್ಲಿ ಅಮಾಯಕನೊಬ್ಬ ಬರ್ಬರವಾಗಿ ಹಲ್ಲೆ ಗೀಡಾಗುತ್ತಿರುವಾಗ ಅವನು ನಮ್ಮಿಂದ ನಿರೀಕ್ಷಿಸುವುದು ಪ್ರಗಲ್ಭ ಭಾಷಣವನ್ನಲ್ಲ, ವಿದ್ವತ್ತನ್ನಲ್ಲ. ‘ನಿಲ್ಲಿಸಿ’ ಎನ್ನುವ ಒಂದೇ ಒಂದು ಶಬ್ಬ ನಮ್ಮ ಬಾಯಿಯಿಂದ ಮೊಳಗಿದರೆ ಅಥವಾ ನಮ್ಮ ಲೇಖನಿಯಿಂದ ಉದುರಿದರೆ ಅದನ್ನು ವರ್ತಮಾನ ಆಲಿಸುತ್ತದೆ. ನಿಲ್ಲಿಸಿ ಅಥವಾ ಬೇಡ ಎನ್ನುವುದು ಇಂದಿನ ದಿನಗಳಲ್ಲಿ ಒಂದು ಪದ ಅಥವಾ ಒಂದು ವಾಕ್ಯ ಮಾತ್ರವಲ್ಲ, ಅದೊಂದು ಪೂರ್ಣ ಲೇಖನ. ದೇಶಾದ್ಯಂತ ಹಿಂದೂ ಮತ್ತು ಮುಸ್ಲಿಮ್ ಮೂಲಭೂತವಾದಿಗಳ ಅತಿಕ್ರಮಣಗಳಿಗೆ ನಾನು ‘ನಿಲ್ಲಿಸಿ’ ಎಂದೆ. ‘ಇದೆಲ್ಲ ಸಾಕು’ ಎಂದೆ. ನನಗೆ ಶರಣ ಚಳವಳಿಯ ವಚನಕಾರರ ಭಾಷೆ ಅಪಾರಧೈರ್ಯವನ್ನು ತುಂಬುತ್ತಿತ್ತು. 12ನೇ ಶತಮಾನದಲ್ಲೇ ಅವರದೆಷ್ಟು ಸರಳವಾಗಿ ಮಾತನಾಡುತ್ತಿದ್ದರು? ಜನಸಾಮಾನ್ಯರ ಎದೆಯನ್ನು ನೇರವಾಗಿ ಹೊಕ್ಕುವ ರೀತಿಯಲ್ಲಿ. ಹೀಗಿರುವಾಗ, ನಾವೇಕೆ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ನೇರವಾಗಿ ಮಾತನಾಡಬಾರದು? ಖಂಡಿಸಬೇಕಾದಲ್ಲಿ ಖಂಡಿಸಿ, ಪ್ರತಿಭಟಿಸಬೇಕಾದಲ್ಲಿ ಪ್ರತಿಭಟಿಸಬಾರದು? ಭಾಷಾ ಪ್ರೌಢಿಮೆ, ವಾಸ್ತವಕ್ಕೆ ಬೆನ್ನು ಕೊಡುವ ಒಂದು ಮಾರ್ಗವಾಗಿ ಬಳಕೆಯಾಗುತ್ತಿರುವುದನ್ನು ನಾನು ಅದಾಗಲೇ ಕಂಡಿದ್ದೆ.

ಲಿಂಗಾಯತ ಧರ್ಮ ಚಳವಳಿ ಆರಂಭವಾದ ಕಾಲ ಅದು. ನಾನು ಜಾತಿಯನ್ನು ಮೀರಿದ್ದರೂ ಆ ಚಳವಳಿಗೆ ಬೆಂಬಲವನ್ನು ನೀಡಿದೆ.ಲಿಂಗಾಯತ ಧರ್ಮವನ್ನು, ಶರಣ ಚಳವಳಿಯ ಉದ್ದೇಶವನ್ನು ಕುಲಗೆಡಿಸಿದ್ದ ವೈದಿಕರ ವಿರುದ್ಧ ಕಟುವಾಗಿ ಬರೆದೆ. ವೇದಿಕೆಯಲ್ಲಿ ಕಟುವಾಗಿ, ನೇರವಾಗಿ ಮಾತನಾಡಿದೆ. ಆರೆಸ್ಸೆಸ್‌ನ ಹಿಂದಿರುವ ವೈದಿಕ ಶಕ್ತಿ ಹೇಗೆ ನಿಧಾನಕ್ಕೆ ಭಾರತೀಯ ಸಂಸ್ಕೃತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ ಎಂದು ಎಚ್ಚರಿಸಿದೆ. ಲಿಂಗಾಯತ ಧರ್ಮ ಚಳವಳಿಯು ಕರ್ನಾಟಕದಲ್ಲಿ ಸಾಂಸ್ಕೃತಿಕ ಜಾಗೃತಿಯೊಂದನ್ನು ಸೃಷ್ಟಿಸಿತ್ತು. ಇದೇ ಸಂದರ್ಭದಲ್ಲಿ ಗೌರಿ ಲಂಕೇಶ್ ಪತ್ರಿಕೆಯ ದೆಸೆಯಿಂದ ಮೈತುಂಬಾ ಕೇಸುಗಳನ್ನು ಜಡಿಸಿಕೊಂಡಿದ್ದೆ. ಅವುಗಳು ನನ್ನನ್ನು ಸರಪಳಿಗಳಂತೆ ಸುತ್ತಿಕೊಂಡಿದ್ದವು. ಜೊತೆಗಿದ್ದವರಲ್ಲಿ ಹಲವರು ಒಬ್ಬೊಬ್ಬರಾಗಿ ಬಿಟ್ಟು ದೂರ ಸರಿಯತೊಡಗಿದ್ದರು. ಒಂದು ರೀತಿಯಲ್ಲಿ, ಕೋರ್ಟು ಕೇಸುಗಳಿಗೆ ಹೋರಾಡುವುದಕ್ಕೂ ನನ್ನ ಬಳಿ ಆರ್ಥಿಕ ಚೈತನ್ಯವಿರಲಿಲ್ಲ. ಇನ್ನು ಪತ್ರಿಕೆಯ ಸ್ಥಿತಿಯಂತೂ ಇನ್ನಷ್ಟು ಚಿಂತಾಜನಕ. ನಾನು ಸಿಗರೇಟನ್ನು ಸೇದುತ್ತಿರಲಿಲ್ಲ. ಬದಲಿಗೆ ಸಿಗರೇಟು ನನ್ನನ್ನು ನಿಧಾನಕ್ಕೆ ಸೇದುತ್ತಿತ್ತು. ಆರೋಗ್ಯ ತೀರಾ ಹದಗೆಡುತ್ತಿತ್ತು. ವರ್ತಮಾನದ ಹೋರಾಟಗಳು ನನ್ನ ಕಣ್ಣೆದುರೇ ವಿಫಲಗೊಳ್ಳುವುದನ್ನೂ ಕಾಣುತ್ತಾ ಆಗಾಗ ಖಿನ್ನಳಾಗುತ್ತಿದ್ದೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ದೊಡ್ಡ ಅಭಿಯಾನವೇ ನಡೆಯುತ್ತಿತ್ತು. ನನ್ನ ವಿರುದ್ಧ ಮಾತನಾಡುತ್ತಿದ್ದವರೆಲ್ಲರೂ ತರುಣರು. ಅವರೆಲ್ಲರಲ್ಲಿ ನನಗೆ ನನ್ನ ತಮ್ಮಂದಿರೇ ಕಾಣಿಸುತ್ತಿದ್ದರು. ದಾರಿ ತಪ್ಪಿದ ಹುಡುಗರವರು. ಅವರನ್ನು ಕೆಲವು ಶಕ್ತಿಗಳು ಬಳಸಿಕೊಳ್ಳುತ್ತಿವೆ. ನನ್ನನ್ನು ನಿಂದಿಸುತ್ತಿದ್ದ ಯುವಕರನ್ನು ಪ್ರೀತಿಯಿಂದಲೇ ಮಾತನಾಡಿಸುತ್ತಾ ಅವರಿಗೆ ಅರ್ಥೈಸುವ ಗರಿಷ್ಠ ಪ್ರಯತ್ನವನ್ನು ಮಾಡಿದೆ.

ಇಷ್ಟೆಲ್ಲ ಬರೆದ ಮೇಲೆ, ಇನ್ನೇನು ನೀವು ನಿರೀಕ್ಷಿಸುತ್ತೀರಿ? ನನ್ನ ಕೊನೆಯ ದಿನಗಳ ಬಗ್ಗೆ? ಅಥವಾ ನನ್ನ ಕೊನೆಯ ಕ್ಷಣಗಳ ಬಗ್ಗೆ? ನನಗೆ ಗುಂಡಿಕ್ಕಿದವರು ನನ್ನ ದಾರಿ ತಪ್ಪಿದ ಮಕ್ಕಳು. ಅವರ ಗುಂಡುಗಳು ನನ್ನನ್ನು ಸಾಯಿಸಲಾರವು ಎನ್ನುವುದು ನಿಮಗೆ ಗೊತ್ತಿದೆ. ಇದನ್ನೆಲ್ಲ ಓದುತ್ತಿರುವ ನೀವಷ್ಟೇ ನನ್ನನ್ನು ಸಾಯಿಸಬಲ್ಲಿರಿ. ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳುವ ಮೂಲಕ, ಅನ್ಯಾಯದ ವಿರುದ್ಧ ವೌನ ತಾಳುವ ಮೂಲಕ, ಬೀದಿ ಹಿಂಸೆಯನ್ನು ವೌನವಾಗಿ ಒಪ್ಪಿಕೊಳ್ಳುವ ಮೂಲಕ, ಸುತ್ತ ನಡೆಯುತ್ತಿರುವ ಸಂವಿಧಾನ ವಿರೋಧಿ, ಜೀವವಿರೋಧಿ ಚಟುವಟಿಕೆಗಳಿಗೆ ಜಾಣಕುರುಡರಾಗುವ ಮೂಲಕ ನನ್ನನ್ನು ನೀವು ಹಂತಹಂತವಾಗಿ ಸಾಯಿಸಬಲ್ಲಿರಿ. ಕೊಲೆಗಾರ ಇನ್ನೆಲ್ಲೋ ಇಲ್ಲ. ನಿಮ್ಮ ನಿಮ್ಮ ಎದೆಯೊಳಗೇ ಬಚ್ಚಿಟ್ಟುಕೊಂಡಿರಬಹುದು. ಜಾಗೃತೆ. ಈ ನಿಮ್ಮ ಗೌರಿಯನ್ನು ಅವನಿಂದ ಬದುಕಿಸಿಕೊಳ್ಳಿ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top