-

ಹೆಲ್ತ್ ಐಡಿಯಿಂದ ಆರೋಗ್ಯ ಮಾಹಿತಿ ಮತ್ತು ಖಾಸಗಿತನ ಹರಣ

-

ಯಾರೊಬ್ಬರ ದೈಹಿಕ ಹಾಗೂ ವೈದ್ಯಕೀಯ ಮಾಹಿತಿಗಳನ್ನು ಪಡೆದುಕೊಳ್ಳುವ ಯಾ ಶೇಖರಿಸಿಟ್ಟುಕೊಳ್ಳುವ ಸಾಂವಿಧಾನಿಕ ಅಧಿಕಾರವಾಗಲೀ, ಅಗತ್ಯವಾಗಲೀ ಯಾವುದೇ ಸರಕಾರಕ್ಕಿಲ್ಲ. ಯಾವುದೇ ವೈದ್ಯನಾಗಲೀ, ಆರೋಗ್ಯ ಸೇವಾಸಂಸ್ಥೆಯಾಗಲೀ ಯಾವುದೇ ವ್ಯಕ್ತಿಯ ವೈಯಕ್ತಿಕ ಹಾಗೂ ವೈದ್ಯಕೀಯ (ದೈಹಿಕ, ಮಾನಸಿಕ) ಮಾಹಿತಿಯನ್ನು ಯಾರೊಬ್ಬರಿಗೂ ನೀಡುವಂತಿಲ್ಲ; ನ್ಯಾಯಾಲಯದ ಆದೇಶ, ವ್ಯಕ್ತಿಯಿಂದ ಸಮಾಜಕ್ಕೆ ಅಥವಾ ಅನ್ಯರಿಗೆ ತೀವ್ರ ಅಪಾಯವಾಗಬಲ್ಲಂಥ ಸೀಮಿತ ಸಂದರ್ಭಗಳನ್ನು ಬಿಟ್ಟರೆ ವೈದ್ಯಕೀಯ ಮಾಹಿತಿಯನ್ನು ಹೊರಹಾಕುವುದು ವೈದ್ಯಕೀಯ ವೃತ್ತಿ ಸಂಹಿತಿಗೆ ವಿರುದ್ಧವಾಗುತ್ತದೆ, ದಂಡನೀಯವಾಗುತ್ತದೆ.

ಆಗಸ್ಟ್ 2018ರಲ್ಲಿ ನೀತಿ ಆಯೋಗವು ರಾಷ್ಟ್ರೀಯ ಆರೋಗ್ಯ ಬಣವೆ (ನ್ಯಾಶನಲ್‌ಹೆಲ್ತ್ ಸ್ಟಾಕ್)ಎಂಬ ಹೊಸ ಯೋಜನೆಯ ಕರಡನ್ನು ಪ್ರಕಟಿಸಿತ್ತು. ಅದರ ನೀತ್ಯಾತ್ಮಕ ಮುಂದುವರಿಕೆಯಾಗಿ, ಭಾರತದ ನಾಗರಿಕರಿಗೆ ರಾಷ್ಟ್ರೀಯ ಆರೋಗ್ಯ ಗುರುತು ಚೀಟಿ - ಹೆಲ್ತ್ ಐಡಿ - ಯನ್ನು ನೀಡುವ ಯೋಜನೆಯನ್ನು ಸೆಪ್ಟಂಬರ್ 23ರಂದು ಮಾನ್ಯ ಪ್ರಧಾನಿಗಳು ಘೋಷಿಸಿದ್ದಾರೆ. ಇದರೊಂದಿಗೆ, 2017ರಿಂದೀಚೆಗೆ ಐದು ವರ್ಷಗಳಿಂದ ರೂಪುಗೊಳ್ಳುತ್ತಿದ್ದ ಆರೋಗ್ಯ ಸಂಬಂಧಿ ದತ್ತಾಂಶಗಳ ಕ್ರೋಡೀಕರಣ ಯೋಜನೆಗಳು ಕಾರ್ಯರೂಪಕ್ಕೆ ಬಂದಂತಾಗಿದೆ. ಆಯುಷ್ಮಾನ್ ಭಾರತ ಯೋಜನೆಯನ್ನು ನಿರ್ವಹಿಸುತ್ತಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದಡಿಯಲ್ಲಿ ಈ ಹೆಲ್ತ್ ಐಡಿ ಯೋಜನೆಯನ್ನು ತರಲಾಗಿದೆ.

ಈ ಗುರುತು ಚೀಟಿಯ ನಿಜಸ್ವರೂಪ ತಿಳಿಯಬೇಕಾದರೆ ಈ ಆರೋಗ್ಯ ಬಣವೆ(ನ್ಯಾಶನಲ್‌ಹೆಲ್ತ್ ಸ್ಟಾಕ್)ಯ ಕರಡನ್ನು ಓದಬೇಕು. ಅದರ ಮೊದಲ ಪುಟದಲ್ಲೇ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ. ವಿನೋದ್‌ಪೌಲ್ ಅವರು ರಾಷ್ಟ್ರೀಯ ಆರೋಗ್ಯ ಬಣವೆ(ನ್ಯಾಶನಲ್‌ಹೆಲ್ತ್ ಸ್ಟಾಕ್)ಯು ದೂರದರ್ಶಿತ್ವದ, ಗಣಕೀಯ ಚೌಕಟ್ಟಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಬಳಸಬಹುದೆಂದೂ, ಕ್ಷಿಪ್ರವಾದ, ವಿಚ್ಛಿದ್ರಕಾರಿಯಾದ ಬದಲಾವಣೆಗಳನ್ನೂ, ಅನಿರೀಕ್ಷಿತವಾದ ತಿರುವುಗಳನ್ನೂ ಕಾಣಲಿರುವ (ಆರೋಗ್ಯ) ಕ್ಷೇತ್ರಕ್ಕೆ ಅದು ಭವಿಷ್ಯದ ಮಾಹಿತಿ ತಂತ್ರಜ್ಞಾನದ ಮಾರ್ಗೋಪಾಯಗಳನ್ನು ಒದಗಿಸಲಿದೆ ಎಂದೂ ಬರೆದಿದ್ದಾರೆ.

 ಇದೇ ಕರಡಿನ ಎರಡನೇ ಪುಟದಲ್ಲಿ ನೀತಿ ಆಯೋಗದ ಮುಖ್ಯ ಆಡಳಿತಾಧಿಕಾರಿ ಅಮಿತಾಭ್‌ಕಾಂತ್ ಅವರು ಪ್ರಸ್ತಾವಿತ ಆರೋಗ್ಯ ಬಣವೆ(ನ್ಯಾಶನಲ್‌ಹೆಲ್ತ್ ಸ್ಟಾಕ್)ಯು ಶಕ್ತಿಶಾಲಿ ಸಾಧನ-ವಿಧಾನಗಳನ್ನು ಬಳಸಿ ಅಗಾಧ ಮಾಹಿತಿಯ ವಿಶ್ಲೇಷಣೆ,ಯಂತ್ರಕಲಿಕೆ, ಕೃತಕಬುದ್ಧ್ದಿ ಮತ್ತೆ, ಮತ್ತು ಮುಂದಕ್ಕೆ, ನೀತಿ ನಿರೂಪಣೆ ಮಾಡಬಲ್ಲ ಅತ್ಯಾಧುನಿಕ ಗಣಕೀಯ ಭಾಷೆಗಳನ್ನು ಅಭಿವೃದ್ಧಿ ಪಡಿಸುವವರೆಗೆ ಬೆಳೆಯಲಿದೆ ಎಂದೂ, ಆಮೂಲಕ, ಜನತೆ, ಹಣ ಮತ್ತು ಮಾಹಿತಿಗಳ ಹರಿವನ್ನು ಮರುವಿನ್ಯಾಸಗೊಳಿಸಿ, ಎಲ್ಲಾರಾಜ್ಯಗಳಿಗೆ ಮತ್ತು ಯೋಜನೆಗಳಿಗೆ ಆರೋಗ್ಯದ ವಿಚಾರದಲ್ಲಿ ಸಮಗ್ರವಾದ ತಳಹದಿಯನ್ನು ಒದಗಿಸಿ, ಆರೋಗ್ಯ ರಕ್ಷಣೆಯ ವೆಚ್ಚವನ್ನು ಗಣನೀಯವಾಗಿ ಇಳಿಸಿ, ನಗದುರಹಿತವಾಗಿಸಿ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದು ಬರೆದಿದ್ದಾರೆ. ಮತ್ತೀಗ ಪ್ರಧಾನಿಗಳು ಈ ಗುರುತು ಚೀಟಿಯನ್ನು ಉದ್ಘಾಟಿಸುತ್ತಾ, ಹದಿನಾಲ್ಕು ಅಂಕೆಗಳ ಈ ಗುರುತು ಚೀಟಿಯನ್ನು ಪಡೆಯುವುದು ಐಚ್ಛಿಕವಾಗಿದೆ, ಆಧಾರ್‌ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಗೆ ಅದನ್ನು ಜೋಡಿಸಲಾಗುತ್ತದೆ, ಆ ಖಾತೆಯಲ್ಲಿ ಎಲ್ಲಾ ಆರೋಗ್ಯ ದಾಖಲೆಗಳನ್ನು ಶೇಖರಿಸಿಟ್ಟು ದೇಶದಲ್ಲಿ ಎಲ್ಲಿ ಬೇಕಾದರೂ ತೆರೆದು ಬಳಸಬಹುದು, ಇದೊಂದು ಅದ್ಭುತ ಯೋಜನೆ, ಕೊರೋನ ಲಸಿಕೆಗೆ ಬಳಸಲಾಗುತ್ತಿರುವ ಕೋವಿನ್ ಆ್ಯಪ್ ಕೂಡ ಒಂದು ಮಹತ್ಸಾಧನೆ ಎಂದೆಲ್ಲ ಹೇಳಿದ್ದಾರೆ.

ಇವೆಲ್ಲವನ್ನೂ ಪರಿಗಣಿಸಿ ನೋಡಿದಾಗ ಈ ಯೋಜನೆಯು ಹಲವು ಆತಂಕಗಳನ್ನು ಹುಟ್ಟಿಸುತ್ತದೆ. ಎಲ್ಲೆಡೆಗಳಿಂದ ಎಳೆದು ಪಡೆಯುವ ಮಾಹಿತಿಯನ್ನು ಯಂತ್ರ ಕಲಿಕೆಯ ಕೃತಕ ಬುದ್ಧಿಮತ್ತೆಯಿಂದ ವಿಶ್ಲೇಷಿಸಿ, ಯಂತ್ರಗಳಿಂದಲೇ ನೀತಿ ನಿರೂಪಣೆ ಮಾಡಿಸಿ, ಸಂಸದೀಯ ಪ್ರಜಾಪ್ರಭುತ್ವವನ್ನು ಬೈಪಾಸ್ ಮಾಡುವುದು ಈ ಯೋಜನೆಯ ಎದ್ದು ಕಾಣುವ ಒಂದು ಸಾಧ್ಯತೆಯಾದರೆ, ಇನ್ನೊಂದೆಡೆ ದೇಶದ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಾಹಿತಿಯೂ, ಎಲ್ಲಾ ನಾಗರಿಕರ ಮಾಹಿತಿಯೂ ಆ ಬಣ(ನ್ಯಾಶನಲ್‌ಹೆಲ್ತ್ ಸ್ಟಾಕ್)ಯೊಳಗೆ ಸೇರಲಿವೆ; ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದಾಗಿದೆ; ಭವಿಷ್ಯದ ಮಾಹಿತಿ ತಂತ್ರಜ್ಞಾನವನ್ನು ಕಟ್ಟುವವರಿಗೆ ಒಪ್ಪಿಸಬಹುದಾಗಿದೆ; ಮತ್ತು ಆ ಮೂಲಕ, ಆರೋಗ್ಯ ಕ್ಷೇತ್ರವನ್ನು ಛಿದ್ರಗೊಳಿಸಿ, ಖಾಸಗಿದೈತ್ಯರ ಕೈಗಳಿಗೊಪ್ಪಿಸಿ, ಅಲ್ಲಿ ಅನಿರೀಕ್ಷಿತವಾದ ತಿರುವುಗಳನ್ನುಂಟು ಮಾಡಬಹುದಾಗಿದೆ.

ಗೋಪ್ಯತೆಯ ಪ್ರಶ್ನೆಗಳು

ಈ ಯೋಜನೆ ಈಗ ರಾಷ್ಟ್ರೀಯ ಗಣಕೀಕೃತ ಆರೋಗ್ಯ ಅಭಿಯಾನ- ನ್ಯಾಶನಲ್ ಡಿಜಿಟಲ್ ಹೆಲ್ತ್ ಮಿಶನ್ ಎಂಬ ರೂಪವನ್ನು ಧರಿಸಿ, ಅದರಡಿಯಲ್ಲಿ ಸಾಕಾರಗೊಂಡಿದೆ. ಇತ್ತೀಚೆಗೆ ಇದೇ ಅಭಿಯಾನದ ಅಡಿಯಲ್ಲಿ ಈ ಯೋಜನೆಯ ದತ್ತಾಂಶಗಳ ನಿರ್ವಹಣೆ ಹಾಗೂ ಖಾಸಗಿತನಗಳ ನೀತಿಯನ್ನೂ, ಸಮಾಲೋಚನಾ ಪತ್ರವನ್ನೂ ಪ್ರಕಟಿಸಲಾಗಿದ್ದು, ಅವು ಯೋಜನೆಯ ಒಟ್ಟು ಉದ್ದೇಶಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತುತ್ತಿವೆ.

ಹೆಲ್ತ್ ಐಡಿಯಡಿ ಇರುವ ಆರೋಗ್ಯ ಮಿಂದಾಖಲೆ (ಡಿಜಿಟಲ್ ಹೆಲ್ತ್‌ರೆಕಾರ್ಡ್)ಗಳು ಸರಕಾರದ ಸ್ವತ್ತಾಗಿರುತ್ತವೆ ಎಂದೂ, ಅವನ್ನು ಹೆಲ್ತ್ ಐಡಿಯನ್ನು ಹೊಂದಿರುವ ನಾಗರಿಕನಲ್ಲದೆ ಆರೋಗ್ಯ ಸೇವಾ ಸಂಸ್ಥೆಗಳು, ವೈದ್ಯರು, ಸಂಶೋಧನಾ ಸಂಸ್ಥೆಗಳು, ಔಷಧ ಸಂಸ್ಥೆಗಳು/ವಹಿವಾಟುಗಳು ಮತ್ತಿತರರು ನೋಡಬಹುದು ಮತ್ತು ಬಳಸಬಹುದು ಎಂದೂ ಈ ನೀತಿಯಲ್ಲಿ ಹೇಳಲಾಗಿದೆ. ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಆಧುನಿಕ ವೈದ್ಯಕೀಯ ಸಂಸ್ಥೆಗಳು ಮಾತ್ರವಲ್ಲ, ಆಯುಷ್‌ನಂತಹ ಬದಲಿ ಪದ್ಧತಿಗಳವರನ್ನೂ ಸೇರಿಸಲಾಗಿದೆ. ಈ ದಾಖಲೆಗಳ ಗೋಪ್ಯತೆಯ ರಕ್ಷಣೆಯ ಬಗ್ಗೆ ಈ ನೀತಿಯಲ್ಲಿ ಸ್ಪಷ್ಟವಾದ ಮಾಹಿತಿಯಿಲ್ಲ, ಅಂಥ ಕಾನೂನುಗಳೂ ಇದುವರೆಗೆ ಬಂದಿಲ್ಲ. ಅಂದರೆ ಈಗುರುತು ಚೀಟಿಯ ಮಿಂದಾಖಲೆಗಳ ಯೋಜನೆಯಿಂದಾಗಿ ಈ ದೇಶದ ನಾಗರಿಕರ ದೈಹಿಕ ಹಾಗೂ ವೈಯಕ್ತಿಕ ಆರೋಗ್ಯದ ವಿವರಗಳೆಲ್ಲವೂ ಸರಕಾರದ ಸ್ವತ್ತಾಗಿ, ಸರಕಾರದ ಮೂಲಕ ಖಾಸಗಿ ಕಂಪೆನಿಗಳ ಬಳಕೆಗೆ ಲಭ್ಯವಾಗಲಿವೆ, ಅವು ಈ ದಾಖಲೆಗಳನ್ನು ಬಳಸುವ ವಿಧಾನಗಳ ಬಗ್ಗೆ ಪಾರದರ್ಶಕತೆ ಇಲ್ಲ ಎಂದಾಗುತ್ತದೆ.

ಯಾರೊಬ್ಬರ ದೈಹಿಕ ಹಾಗೂ ವೈದ್ಯಕೀಯ ಮಾಹಿತಿಗಳನ್ನು ಪಡೆದುಕೊಳ್ಳುವ ಯಾ ಶೇಖರಿಸಿಟ್ಟುಕೊಳ್ಳುವ ಸಾಂವಿಧಾನಿಕ ಅಧಿಕಾರವಾಗಲೀ, ಅಗತ್ಯವಾಗಲೀ ಯಾವುದೇ ಸರಕಾರಕ್ಕಿಲ್ಲ. ಯಾವುದೇ ವೈದ್ಯನಾಗಲೀ, ಆರೋಗ್ಯ ಸೇವಾಸಂಸ್ಥೆಯಾಗಲೀ ಯಾವುದೇ ವ್ಯಕ್ತಿಯ ವೈಯಕ್ತಿಕ ಹಾಗೂ ವೈದ್ಯಕೀಯ (ದೈಹಿಕ, ಮಾನಸಿಕ) ಮಾಹಿತಿಯನ್ನು ಯಾರೊಬ್ಬರಿಗೂ ನೀಡುವಂತಿಲ್ಲ; ನ್ಯಾಯಾಲಯದ ಆದೇಶ, ವ್ಯಕ್ತಿಯಿಂದ ಸಮಾಜಕ್ಕೆ ಅಥವಾ ಅನ್ಯರಿಗೆ ತೀವ್ರ ಅಪಾಯವಾಗಬಲ್ಲಂಥ ಸೀಮಿತ ಸಂದರ್ಭಗಳನ್ನು ಬಿಟ್ಟರೆ ವೈದ್ಯಕೀಯ ಮಾಹಿತಿಯನ್ನು ಹೊರಹಾಕುವುದು ವೈದ್ಯಕೀಯ ವೃತ್ತಿ ಸಂಹಿತಿಗೆ ವಿರುದ್ಧವಾಗುತ್ತದೆ, ದಂಡನೀಯವಾಗುತ್ತದೆ. ಹಾಗಿರುವಾಗ ಖಾಸಗಿತನ ಹಾಗೂ ಗೋಪ್ಯತೆಗಳ ಕಾನೂನುಗಳಿಲ್ಲದೆ ಜನರ ವೈಯಕ್ತಿಕ, ವೈದ್ಯಕೀಯ ಮಾಹಿತಿಯನ್ನು ಸರಕಾರವು ಪಡೆಯುವಂತಿಲ್ಲ, ಜನರಾಗಲೀ, ವೈದ್ಯರಾಗಲೀ ಅವನ್ನು ಸರಕಾರಕ್ಕೆ ನೀಡುವಂತಿಲ್ಲ.

ಆಧುನಿಕ ವೈದ್ಯಕೀಯ ಸಂಸ್ಥೆಗಳು ಜನರಿಂದ ಪಡೆದ ಮಾಹಿತಿ, ನಡೆಸಿದ ಪರೀಕ್ಷೆಗಳು ಹಾಗೂ ನೀಡಿದ ಚಿಕಿತ್ಸೆಗಳ ವಿವರಗಳನ್ನು ಆಯುಷ್ ಚಿಕಿತ್ಸಕರು ನೋಡುವುದು ಕೂಡ ಸರಿಯಲ್ಲ, ಅದರ ಅಗತ್ಯವೂ ಇಲ್ಲ, ಅದು ಅಪಾಯಕಾರಿಯೂ ಆಗಬಹುದು. ಹಾಗೆಯೇ ಆಯುಷ್‌ಚಿಕಿತ್ಸಕರು ಈ ಆರೋಗ್ಯಮಿಂದಾಖಲೆ (ಡಿಜಿಟಲ್ ಹೆಲ್ತ್‌ರೆಕಾರ್ಡ್)ಗಳಲ್ಲಿ ವಿವರಗಳನ್ನು ಸೇರಿಸುವುದು ಅನಗತ್ಯ ಮಾತ್ರವಲ್ಲ, ಆರೋಗ್ಯ ದಾಖಲೆಗಳನ್ನು ಕಲುಷಿತಗೊಳಿಸಿ, ಗೊಂದಲಮಯವಾಗಿಸಬಹುದು.

ಆಧಾರ್ ಅಪಬಳಕೆ

ಕೊರೋನ ಲಸಿಕೆ ಪಡೆಯುವುದು ಕೂಡ ಐಚ್ಛಿಕವೆಂದು ಹೇಳಲಾಗಿತ್ತು, ಆದರೆ ಲಸಿಕೆಯಿಲ್ಲದಿದ್ದರೆ ಕಾಲೇಜಿಲ್ಲ, ಕಚೇರಿ-ನೌಕರಿಗೆ ಬರುವಂತಿಲ್ಲ, ಪರೀಕ್ಷೆಯಿಲ್ಲ, ಪಡಿತರವಿಲ್ಲ, ಪ್ರಯಾಣವಿಲ್ಲ ಎಂಬಿತ್ಯಾದಿಯಾಗಿ ಕಾಲೇಜು ವಿದ್ಯಾರ್ಥಿಗಳಿಂದ ತೊಡಗಿ, ಖಾಸಗಿಉದ್ಯೋಗಿಗಳು, ಸರಕಾರಿ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಒಂದಲ್ಲೊಂದು ನೆಪದಲ್ಲಿ ಹೆದರಿಸಿ, ಲಸಿಕೆಯನ್ನು ಚುಚ್ಚಲಾಯಿತು, ಲಸಿಕೆಯನೆಪದಲ್ಲಿ ಎಲ್ಲರ ಮೊಬೈಲ್ ಒಳಗೂ ಕೋವಿನ್ ಆ್ಯಪ್ ಹಾಕಿಸಿ, ಅದಕ್ಕೆ ಆಧಾರ್ ಲಗತ್ತಿಸಿ, ಓಟಿಪಿ- ಬೆರಳಚ್ಚು ಒತ್ತಿಸಿ, ಅವರೆಡನ್ನೂ ಖಾತರಿಪಡಿಸುವ ಕೆಲಸವೂ ಆಯಿತು. ಪ್ರಧಾನಿಗಳ ಚಿತ್ರಸಹಿತವಾದ ಲಸಿಕೆ ಸರ್ಟಿಫಿಕೇಟಿನಲ್ಲಿ ರಾಷ್ಟ್ರೀಯ ವಿಶಿಷ್ಟ ಆರೋಗ್ಯ ಗುರುತು ಸಂಖ್ಯೆ- ಯುನೀಕ್ ನ್ಯಾಶನಲ್ ಹೆಲ್ತ್ ಐಡಿ- ಯನ್ನು ಕೊಟ್ಟದ್ದೂ ಆಯಿತು. ಅಂದರೆ, ಐಚ್ಛಿಕವೆಂದು ಹೇಳಿದ್ದರೂ ಏನೇನೋ ನೆಪದಲ್ಲಿ ಒತ್ತಾಯಿಸಿ ಲಸಿಕೆಕೊಟ್ಟದ್ದು, ಅದಕ್ಕಾಗಿ ಕೋವಿನ್ ಆ್ಯಪ್ ಹಾಕಿಸಿದ್ದು, ಅದರೊಂದಿಗೆ ಆಧಾರ್‌ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಜೋಡಿಸಿದ್ದು, ಯಾವುದೇ ಒಪ್ಪಿಗೆಯಾಗಲೀ, ಸೂಚನೆಯಾಗಲೀ ಇಲ್ಲದೆ ಹೆಲ್ತ್‌ಐಡಿ ನೀಡಿದ್ದು ಎಲ್ಲವನ್ನೂ ನೋಡುವಾಗ ಈ ಹೆಲ್ತ್ ಐಡಿ ಮತ್ತು ಅದಕ್ಕೆ ಜೋಡಿಸಲ್ಪಡುವ ಆರೋಗ್ಯ ದಾಖಲೆಗಳ ಬಳಕೆಯು ಐಚ್ಛಿಕ ವಾಗಿರುತ್ತದೆ, ಈ ದಾಖಲೆಗಳ ಬಳಕೆಯು ಪಾರದರ್ಶಕವಾಗಿರುತ್ತದೆ, ಎಲ್ಲಾಗೋಪ್ಯತೆಯನ್ನು ಕಾಪಾಡಲಾಗುತ್ತದೆ ಎಂಬ ಖಾತರಿಯೇನು?

ಆಧಾರ್ ಯೋಜನೆಗೆ ಇದುವರೆಗೂ ನಮ್ಮ ಸಂಸತ್ತು ಅಂಗೀಕಾರ ನೀಡಿಲ್ಲ. ಮಾರ್ಚ್ 2016ರಲ್ಲಿ ತಂದ ಆಧಾರ್ ಕಾಯ್ದೆಯನುಸಾರ ಆಧಾರ್‌ಸಂಖ್ಯೆಯನ್ನು ಒಕ್ಕೂಟ ಸರಕಾರದ ಹಣದ ನೆರವಿನ ಸವಲತ್ತುಗಳನ್ನು ಪಡೆಯುವುದಕ್ಕೆ (ಪಡಿತರ, ಆಯುಷ್ಮಾನ್ ಭಾರತ ಸೇವೆ ಇತ್ಯಾದಿ) ಮತ್ತು ಪಾನ್ ಸಂಖ್ಯೆಗೆ ಜೋಡಿಸುವುದಕ್ಕೆ ಮಾತ್ರವೇ ಬಳಸಬೇಕೆಂದು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ. ಅದೇ ಆಧಾರ್ ಕಾಯ್ದೆಯ 2(ಕೆ)ಯಲ್ಲಿ ವ್ಯಕ್ತಿಯ ವೈದ್ಯಕೀಯ ಮಾಹಿತಿಯನ್ನು ಸಂಗ್ರಹಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ರಾಷ್ಟ್ರೀಯ ಆರೋಗ್ಯ ಮಿಂದಾಖಲೆ (ಡಿಜಿಟಲ್ ಹೆಲ್ತ್‌ರೆಕಾರ್ಡ್)ಗಳ ಯೋಜನೆಯಾಗಲೀ, ಹೆಲ್ತ್‌ಐಡಿ ಯೋಜನೆಯಾಗಲೀ ಅಧಿಕೃತ ನೀತಿಗಳಾಗಿ ಸಂಸತ್ತಿನ ಮುಂದೆ ಮಂಡಿತವಾಗಿಲ್ಲ, ಅನುಮೋದನೆಯನ್ನೂ ಪಡೆದಿಲ್ಲ. ಹೀಗೆ ಸಂಸತ್ತಿನ ಅನುಮೋದನೆಯಿಲ್ಲದೆ, ಯಾವುದೇ ಕಾನೂನಿನ ಆಧಾರವಿಲ್ಲದೆ, ಖಾಸಗಿತನದ ರಕ್ಷಣೆ ಹಾಗೂ ಗೋಪ್ಯತೆಯ ರಕ್ಷಣೆಗಳ ಬಗ್ಗೆಯೂ ಯಾವುದೇ ನಿಯಮಗಳಿನ್ನೂ ರೂಪಿತವಾಗದೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರೆ ಅದರ ಅರ್ಥವೇನು?

ಆದರೆ ಸಂಸತ್ತಿನ ಅನುಮೋದನೆಯಿಲ್ಲದಿದ್ದರೂ ಸರಕಾರವೇ ಆಧಾರ್ ಅನ್ನು ಎಲ್ಲೆಂದರಲ್ಲಿ ತಗಲಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಆಸ್ಪತ್ರೆಗಳಲ್ಲಿ ದಾಖಲಾಗುವುದಕ್ಕೆ, ಗರ್ಭಿಣಿಯರ ಸ್ಕಾನಿಂಗ್ ಪರೀಕ್ಷೆಗೆ, ಗರ್ಭಪಾತಮಾಡಿಸುವುದಕ್ಕೆ, ಆರೋಗ್ಯ ವಿಮೆ ಮತ್ತಿತರ ವಿಮೆಗಳಿಗೆ, ಮತ್ತೀಗ ಲಸಿಕೆ ಹಾಕಿಸುವುದಕ್ಕೆ ಆಧಾರ್ ನೀಡುವಂತೆ ಒತ್ತಾಯಿಸಲಾಗುತ್ತಿದೆ, ಜನರು ತೆಪ್ಪಗೆ ನೀಡುತ್ತಿದ್ದಾರೆ, ರೋಗಿಗಳ ಹಿತರಕ್ಷಕರಾಗಬೇಕಾದ ವೈದ್ಯರು ತೆಪ್ಪಗಿರುವುದಷ್ಟೇ ಅಲ್ಲ, ಈ ತಪ್ಪಿನಲ್ಲಿ ಸಹಕರಿಸುತ್ತಿದ್ದಾರೆ. ಯಾವ ಕಾನೂನಿನ ಆಧಾರವಿಲ್ಲದೆಯೇ ನಡೆಯುತ್ತಿರುವ ಈ ಕೆಲಸಗಳ ಜೊತೆಗೆ ಈಗ ಆರೋಗ್ಯ ಗುರುತು ಚೀಟಿಯ ಯೋಜನೆಯನ್ನೂ ಸೇರಿಸಲಾಗಿದೆ.

ಗೋಪ್ಯತೆಯಿಲ್ಲದೆ ಆರೋಗ್ಯ ಮಾಹಿತಿ ಪಡೆಯಲಾಗದು

ಭಾರತದಲ್ಲಿ ಸದ್ಯಕ್ಕೆ ದತ್ತಾಂಶ ಸುರಕ್ಷೆ ಕಾನೂನು ಎಂದರೆ ಮಾಹಿತಿ ತಂತ್ರಜ್ಞಾನ (ಸಕಾರಣ ಸುರಕ್ಷಾ ಕ್ರಮಗಳು ಮತ್ತು ಕಾರ್ಯವಿಧಾನಗಳು ಮತ್ತು ಸೂಕ್ಷ್ಮವೈಯಕ್ತಿಕ ದತ್ತಾಂಶ ಅಥವಾ ಮಾಹಿತಿ) ನಿಯಮಗಳು, 2011ರ ಅಡಿ ಬರುವ ನಿಯಮಗಳಾಗಿದ್ದು ಇದಕ್ಕೆ ಶಾಸನಾತ್ಮಕ ಆಧಾರ ಎಂದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000.

ವೈಯಕ್ತಿಕ ದತ್ತಾಂಶಗಳ ಸಂರಕ್ಷಣೆ ಮಸೂದೆ 2019ನ್ನು ಲೋಕಸಭೆಯಲ್ಲಿ 2019ರ ಡಿಸೆಂಬರ್‌ನಲ್ಲಿ ಮಂಡಿಸಲಾಗಿದ್ದು, ಅದಿನ್ನೂ ಸ್ಥಾಯಿ ಸಮಿತಿಯ ಪರಿಶೀಲನೆಯಲ್ಲಿದೆ. ಇಂತಹ ಸನ್ನಿವೇಶದಲ್ಲಿ ಜನರ ಆರೋಗ್ಯ-ವೈದ್ಯಕೀಯ ಮಾಹಿತಿಗಳನ್ನು ಯಾವುದೋ ಐಟಿ ಕಾಯ್ದೆಯ ಅಡಿಯಲ್ಲಿ ಕ್ರೋಡೀಕರಿಸಿ ವಿಮೆ, ಆರೋಗ್ಯ ಸೇವೆಯಂತಹ ವಾಣಿಜ್ಯ ಹಿತಾಸಕ್ತಿಗಳಿರುವ ವ್ಯವಸ್ಥೆಯ ಕೈಗೆಒಪ್ಪಿಸುವುದು ಅತ್ಯಂತ ಅಪಾಯಕಾರಿ ಸನ್ನಿವೇಶವಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ ಈ ರೀತಿ ಒಮ್ಮೆ ಡೇಟಾ ಹಸ್ತಾಂತರ ಆದ ಬಳಿಕ ಮುಂದೆ ತಪ್ಪಿನ ಅರಿವಾಗುವ ಸ್ಥಿತಿ ಬಂದರೂ ಆಗಿರುವ ಹಾನಿಯನ್ನು ಸರಿಪಡಿಸಲು ಸಾಧ್ಯವಾಗದು.

ವೈಯಕ್ತಿಕ ದತ್ತಾಂಶಗಳ ಕಾನೂನು ಜಾರಿಗೆ ಬರದೆ ಅದನ್ನು ಆಧರಿಸಿರುವ ಹತ್ತಾರು ದತ್ತಾಂಶ ಸಂಬಂಧಿ ಕಾನೂನುಗಳನ್ನು ಸಂಸದೀಯ ವ್ಯವಸ್ಥೆಯನ್ನು ಬೈಪಾಸ್ ಮಾಡಿ ಜಾರಿಗೆ ತರಲು ಹವಣಿಸುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ. ಬೇರೆ ದೇಶಗಳಲ್ಲೂ ಇಂತಹ ವ್ಯವಸ್ಥೆ ಇದೆ ಎಂದು ಬೊಟ್ಟು ಮಾಡುವ ಮೊದಲು ಡೇಟಾ ಸುರಕ್ಷೆಗಳಿಗೆ ಸಂಬಂಧಿಸಿ ಮುಂಚೂಣಿಯಲ್ಲಿವೆ ಎಂದು ಪರಿಗಣಿತವಾಗುವ ಯುರೋಪಿಯನ್ ಸಮುದಾಯ 2016 ರಲ್ಲೇ ವೈಯಕ್ತಿಕ ಡೇಟಾ ಸುರಕ್ಷೆ ಕಾನೂನನ್ನು ಅಂಗೀಕರಿಸಿದೆ (Regulation (EU) 2016/679 on the protection of personal data.) ಎಂಬುದನ್ನು ಗಮನಿಸಬೇಕು. ಅಮೆರಿಕದ ಆರೋಗ್ಯ ವ್ಯವಸ್ಥೆ ಕೂಡ ಇಂತಹ ಕಾಯ್ದೆಯೊಂದರ ಅಡಿಯೇ (The Health Information Probability and Accountability Act (HIPAA) ಕಾರ್ಯಾಚರಿಸುತ್ತಿದೆ ಎಂಬುದನ್ನು ಪರಿಗಣಿಸಬೇಕು. ಇಷ್ಟು ಸುರಕ್ಷೆ ಇದ್ದೂ, ಆ ದೇಶಗಳಲ್ಲಿ ದತ್ತಾಂಶ ಅಪ ಬಳಕೆಯ ಬಗ್ಗೆ ಚರ್ಚೆ ನಡೆದಿದೆ. ಭಾರತದಲ್ಲಿ ಇಂತಹ ಯಾವುದೇ ಸುರಕ್ಷಿತ ಕಾನೂನು ತಳಪಾಯ ಇಲ್ಲದೆ ನೇರವಾಗಿ ಆರೋಗ್ಯ ಡೇಟಾಗಳನ್ನು ಸಂಗಹಿಸುವುದು ತಪ್ಪಾಗುತ್ತದೆ.

ಪರಿಣಾಮಗಳು ಆಪತ್ಕಾರಿ

ಸರಕಾರವು ತನ್ನ ಸ್ವತ್ತಾಗಿಸಿಕೊಳ್ಳುವ ಕೋಟಿಗಟ್ಟಲೆ ಜನರ ವೈಯಕ್ತಿಕ, ವೈದ್ಯಕೀಯ ಮಾಹಿತಿಯನ್ನು ಯಂತ್ರ ಕಲಿಕೆಯ ಕೃತಕ ಬುದ್ಧಿಮತ್ತೆಯ ವಿಶ್ಲೇಷಣೆಗೊಳಪಡಿಸುವ ಆರೋಗ್ಯ ಬಣವೆ(ನ್ಯಾಶನಲ್‌ಹೆಲ್ತ್ ಸ್ಟಾಕ್)ಯ ಯೋಜನೆಯನ್ನು ಊಹಿಸಿಕೊಳ್ಳುವುದೇ ಭಯಾನಕವೆನಿಸುತ್ತದೆ. ಇಂಥ ಅಗಾಧ ಮಾಹಿತಿಯನ್ನು ವಿಶ್ಲೇಷಿಸಿ, ಯಂತ್ರಗಳಿಂದಲೇ ನೀತಿ ನಿರೂಪಣೆ ಮಾಡಿಸಿ, ಪ್ರಜಾಪ್ರಭುತ್ವವನ್ನೇ ನಾಶ ಮಾಡುವ ಅಪಾಯ ಒಂದೆಡೆಯಾದರೆ, ಜನರಿಗೆ ಆರೋಗ್ಯ ಸೇವೆಗಳನ್ನು ಅಥವಾ ಆರೋಗ್ಯ ವಿಮೆಯನ್ನು ಒದಗಿಸುವ ಯಾ ನಿರಾಕರಿಸುವ ನಿರ್ಧಾರಗಳನ್ನು ಇವೇ ಯಂತ್ರಗಳ ವಿಶ್ಲೇಷಣೆಗೆ ಒಪ್ಪಿಸುವ ಅಪಾಯವೂ ಇದೆ. ವಿಮಾ ಕಂಪೆನಿಗಳು ಈ ಮಾಹಿತಿಯನ್ನು ಪಡೆಯಲು ಸಾಧ್ಯವಾದರೆ ವ್ಯಕ್ತಿಯ ಆರೋಗ್ಯ ವಿಮೆಯ ಮೊತ್ತ ಹಾಗೂ ಅದರ ಕಂತಿನ ಮೊತ್ತವನ್ನು ತಮ್ಮಿಷ್ಟದಂತೆ ತಿದ್ದುವುದಕ್ಕೆ ಯಾ ನಿರಾಕರಿಸುವುದಕ್ಕೆ ಅವಕಾಶವಾಗಬಹುದು. ಅಷ್ಟೇ ಅಲ್ಲ, ಆಸ್ಪತ್ರೆಗಳಿಗೆ ದಾಖಲಾಗುವ ಸಂದರ್ಭಗಳಲ್ಲಿ ವಿಮೆಯ ಪಾವತಿಯ ನಿರ್ಧಾರಗಳನ್ನು ಈ ಕೃತಕ ಬುದ್ಧಿಮತ್ತೆಯ ಯಂತ್ರಗಳೇ ನಿರ್ವಹಿಸುವ, ಪ್ರಶ್ನಾತೀತವೆಂದು ಕಂಪೆನಿಗಳು ಹೇಳಿಕೊಳ್ಳಬಹುದಾದ, ಕ್ರಮಗಳೂ ಬರಬಹುದು.

ವಿಮೆ ಮತ್ತು ಬ್ಯಾಂಕ್‌ಗಳಿಗೆ ವ್ಯಕ್ತಿಗಳ ಆರೋಗ್ಯ ಮಾಹಿತಿಯು ಲಭ್ಯವಾಗುವಂತಿದ್ದರೆ ವಿಮೆಯ ಕಂತು, ವಿವಿಧ ಸಾಲಗಳ ಮೇಲಿನ ಬಡ್ಡಿಗಳ ಮೇಲೆ ಅವು ಪ್ರಭಾವ ಬೀರಬಹುದು, ಇವನ್ನೆಲ್ಲ ಲೆಕ್ಕ ಹಾಕುವುದಕ್ಕೂ ಯಾಂತ್ರಿಕ ವಿಶ್ಲೇಷಣೆಗಳ ಬಳಕೆಯಾಗಬಹುದು.

ವ್ಯಕ್ತಿಗಳ ಖಾಸಗಿ ಮಾಹಿತಿ ಮತ್ತು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಮಾಹಿತಿಯು ಸರಕಾರದ ಸ್ವತ್ತಾಗಿ, ಆ ಮೂಲಕ ಅನ್ಯರ ಪಾಲಾಗುವಾಗ ಈ ಶಕ್ತಿಗಳಿಗೆ ವ್ಯಕ್ತಿಗಳ ಖಾಸಗಿ ಜೀವನವನ್ನು ನಿಯಂತ್ರಿಸುವುದಕ್ಕೆ, ಬ್ಲಾಕ್‌ಮೇಲ್-ಸುಲಿಗೆ ಮಾಡುವುದಕ್ಕೆ ಎಲ್ಲಾ ರೀತಿಯ ಅವಕಾಶಗಳನ್ನು ಒದಗಿಸಬಹುದು.

ಆಸ್ಪತ್ರೆ ಹಾಗೂ ಆರೋಗ್ಯ ಸೇವೆಗಳವರಿಗೆ, ಔಷಧ ಸಂಶೋಧಕರು, ಉತ್ಪಾದಕರು ಮತ್ತು ಮಾರಾಟಗಾರರಿಗೆ ವೈಯಕ್ತಿಕ ವೈದ್ಯಕೀಯ ಮಾಹಿತಿಯನ್ನು ಒದಗಿಸುವುದರಲ್ಲೂ ಅನೇಕ ಅಪಾಯಗಳಿವೆ. ವ್ಯಕ್ತಿಯ ಫೋನ್‌ಗಳಿಗೆ ಆಯಾ ರೋಗಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗಳು, ಪರೀಕ್ಷಾಲಯಗಳು, ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಜಾಹೀರಾತುಗಳ ಪ್ರಚಾರಕ್ಕೆ ಇವು ಅನುಕೂಲವೊದಗಿಸಬಹುದು. ಈಗಾಗಲೇ ಆನ್‌ಲೈನ್ ಔಷಧ ಮಾರಾಟವು ವೇಗವಾಗಿ ಬೆಳೆಯುತ್ತಿದ್ದು, ಈ ಗುರುತು ಚೀಟಿಯ ಯೋಜನೆಯಿಂದ ಇಂಥ ಕಂಪೆನಿಗಳಿಗೆ ಸುಗ್ಗಿಯೇ ಆಗಬಹುದು.

ಕೊರೋನ ಕಾಲದಲ್ಲಿ ವೈದ್ಯರು ಹೆದರಿ ಮನೆಗಳಲ್ಲೇ ಉಳಿದು ಆನ್‌ಲೈನ್ ಸಲಹೆ ಹಾಗೂ ಚಿಕಿತ್ಸೆಗಳನ್ನು ನಡೆಸುವ ಪ್ರಯತ್ನಗಳು ಬೆಳೆದಿದ್ದವು. ಇನ್ನು ಈ ಇಂಟರ್‌ನೆಟ್ ಆರೋಗ್ಯ ದಾಖಲೆಯ ವ್ಯವಸ್ಥೆಯಲ್ಲಿ ಇಂಥ ಆನ್‌ಲೈನ್ ಸಮಾಲೋಚನೆಗಳನ್ನು ಹಾಗೂ ಚಿಕಿತ್ಸೆಗಳನ್ನು ನೀಡಲು ಬಗೆಬಗೆಯ ವೇದಿಕೆಗಳು ರೂಪುಗೊಳ್ಳಲಿವೆ. ಇವು ಆನ್‌ಲೈನ್ ಔಷಧ ಮಾರಾಟದ ಜೊತೆಗೂಡಿದಾಗ ಇಡೀ ಆರೋಗ್ಯ ಸೇವಾ ವ್ಯವಸ್ಥೆಯೇ ಛಿದ್ರಗೊಳ್ಳುವ ಹಾಗೂ ಜನರ ಆರೋಗ್ಯದ ಮೇಲೆ ಹಲಬಗೆಯ ವ್ಯತಿರಿಕ್ತ ಪರಿಣಾಮಗಳಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಆರೋಗ್ಯ ಸೇವೆಗಳನ್ನು ಕೇವಲ ವ್ಯಾಪಾರದ ಸರಕಾಗಿ, ಲಾಭದ ಮೂಲವಾಗಿ ನೋಡುವ ಈ ವ್ಯವಸ್ಥೆಯ ಎಲ್ಲಾ ಅಪಾಯಗಳನ್ನು ಮುಂಗಾಣುವುದು ಅತ್ಯಗತ್ಯವಾಗಿದೆ.

ಆರೋಗ್ಯ ಸೇವೆಗಳನ್ನು ಹೀಗೆ ವಿಚ್ಛಿದ್ರಗೊಳಿಸಿ, ಬದಲಿ ಪದ್ಧತಿಗಳನ್ನು ಆಧುನಿಕ ವೈದ್ಯಕೀಯ ಸೇವೆಗಳೊಂದಿಗೆ ಬೆರೆಸಿ, ಎಲ್ಲ ಬಗೆಯ ಗೊಂದಲಗಳನ್ನೂ ಹುಟ್ಟಿಸುವ ಈ ಆರೋಗ್ಯ ಚೀಟಿಯ ಯೋಜನೆಯ ಜೊತೆಗೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ಬದಲಿ ಪದ್ಧತಿಗಳನ್ನು ತೂರಿಸಿರುವುದು, ಆಧುನಿಕ ವೈದ್ಯಕೀಯ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದ ಎಂಸಿಐಯನ್ನು ನಿರ್ನಾಮ ಮಾಡಿ ಆಧುನಿಕ ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಯಲ್ಲಿ ಬದಲಿ ಪದ್ಧತಿಗಳ ಬೆರಕೆಗಳಿಗೂ, ಕಾರ್ಪೊರೇಟ್ ಶಕ್ತಿಗಳ ಭಾಗೀದಾರಿಕೆಗೂ ಅವಕಾಶ ನೀಡುವ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ತಂದಿರುವುದು ಎಲ್ಲವೂ ದೇಶದ ಆರೋಗ್ಯ ಸೇವೆಗಳನ್ನು ಲಾಭಕೋರ ಕಂಪೆನಿಗಳಿಗೆ ಒಪ್ಪಿಸಿ ಜನರನ್ನು ಗತಿಹೀನರಾಗಿ ಮಾಡುವ ಮಹಾ ಯೋಜನೆಯ ಭಾಗಗಳೇ ಆಗಿವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top