ಆರೆಸ್ಸೆಸ್‌ನಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆ: ಎಚ್.ಡಿ.ಕುಮಾರಸ್ವಾಮಿ | Vartha Bharati- ವಾರ್ತಾ ಭಾರತಿ

--

''ಮೈತ್ರಿಸರಕಾರ ರಚನೆ ಅನಿವಾರ್ಯತೆ ಬಂದರೆ ಆ ಪ್ರಕ್ರಿಯೆಯಲ್ಲಿ ನಾನಿರುವುದಿಲ್ಲ''

ಆರೆಸ್ಸೆಸ್‌ನಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಅ.15: ‘2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತ ಬರದೆ ಕಾಂಗ್ರೆಸ್ ಅಥವಾ ಬಿಜೆಪಿ ಜೊತೆಗೆ ಸರಕಾರ ರಚನೆ ಮಾಡುವಂತಹ ಅನಿವಾರ್ಯ ಸ್ಥಿತಿ ಎದುರಾದರೆ ಆ ಪ್ರಕ್ರಿಯೆಯಲ್ಲಿ ನಾವು ಭಾಗಿಯಾಗುವುದಿಲ್ಲ. ಒಮ್ಮೆ ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿದರೆ, ಚುನಾವಣೆಗೆ ಮುನ್ನ ಜನತೆಗೆ ನೀಡಿದ ಎಲ್ಲ ವಾಗ್ದಾನಗಳನ್ನು ಈಡೇರಿಸುತ್ತೇವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ‘ವಾರ್ತಾಭಾರತಿ’ ಯೂಟ್ಯೂಬ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಮುಂದಿನ ಚುನಾವಣೆಗೆ ಪಕ್ಷದ ಸಿದ್ಧತೆ, ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ, ಆರೆಸ್ಸೆಸ್ ವಿರುದ್ಧದ ಹೇಳಿಕೆಯ ಹಿನ್ನೆಲೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಮೇಲೆ ಸಿಟ್ಟೇಕೆ, ಬಿಜೆಪಿ ಸರಕಾರದ ಮೇಲಿನ ಮಮಕಾರ, ಪ್ರಾದೇಶಿಕ ಅಸ್ಮಿತೆ ಉಳಿವಿಗೆ ಜೆಡಿಎಸ್‌ನ ಭವಿಷ್ಯದ ನಡೆಗಳು, ಅಧಿಕಾರಕ್ಕೆ ಬಂದರೆ ಶಿಕ್ಷಣ, ಆರೋಗ್ಯ ಸಹಿತ ಬಡತನ ನಿರ್ಮೂಲನೆಗೆ ತಮ್ಮ ಕ್ರಿಯಾಯೋಜನೆಗಳೇನು’ ಎಂಬ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

► ವಾರ್ತಾಭಾರತಿ: ಆರು ತಿಂಗಳಿಂದ ಬಿಡದಿಯನ್ನೇ ತಮ್ಮ ರಾಜಕೀಯ ಕಾರ್ಯಕ್ಷೇತ್ರ ಮಾಡಿಕೊಂಡಿರುವ ನೀವು, ಬೆಂಗಳೂರಿನಿಂದ ಇಲ್ಲಿಗೆ ತಮ್ಮ ವಾಸ್ತವ್ಯ ಬದಲಿಸಲು ಮೂಲ ಕಾರಣವೇನು?

ಕುಮಾರಸ್ವಾಮಿ: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಶೇ.10ರಿಂದ 15ರಷ್ಟು ಜನ ಉದ್ಯೋಗ ಕಳೆದುಕೊಂಡು ಬೆಂಗಳೂರು ತೊರೆದು ಹಳ್ಳಿಗಳನ್ನು ಸೇರಿದ್ದಾರೆ. ಹೀಗಾಗಿ ನಾನೂ ಬದಲಾವಣೆ ಮಾಡಿಕೊಂಡಿದ್ದು, ರಾಜಕೀಯ ಕಾರಣಕ್ಕಾಗಿ ಬಿಡದಿಯಲ್ಲೇ ವಾಸ್ತವ್ಯ ಹೂಡಿದ್ದೇನೆ. ಬೀದರ್ ಉಪಚುನಾವಣೆ ಸಂದರ್ಭದಲ್ಲಿ ಕೋವಿಡ್ ಕಾರಣಕ್ಕೆ ನಾನು ವಿಶ್ರಾಂತಿಗೆ ಬಂದಿದ್ದವನು ಇಲ್ಲೇ ವಾಸ್ತವ್ಯಕ್ಕೆ ತೀರ್ಮಾನಿಸಿದೆ. 1983-84ರಲ್ಲಿ ಖರೀದಿಸಿದ್ದ ಭೂಮಿಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು, ಕೃಷಿ ನನಗೆ ಮಾನಸಿಕ ನೆಮ್ಮದಿ ನೀಡಿದೆ. ಪಕ್ಷದ ರಾಜಕೀಯ ಚಟುವಟಿಕೆಗಳನ್ನು ಇಲ್ಲಿಂದಲೇ ನಡೆಸುತ್ತಿದ್ದು, ಪಕ್ಷ ಸಂಘಟನೆ ದೃಷ್ಟಿಯಿಂದ ಇತ್ತೀಚೆಗೆ ಬಿಡದಿಯಲ್ಲೇ ಪಕ್ಷದ ವಿಶೇಷ ಕಾರ್ಯಾಗಾರವನ್ನು ಮಾಡಲಾಗಿದೆ.

► ವಾ.ಭಾ: ಪಕ್ಷ ಹೊಸ ಹುರುಪಿನಲ್ಲಿದೆ, ನಿಮ್ಮದೊಂದು ರೈತರ ಪಕ್ಷ. ಕೇಂದ್ರದ ಮೂರು ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟ ಮತ್ತು ಇತ್ತೀಚೆಗೆ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿದ ಪ್ರಕರಣ ಬಗ್ಗೆ ನಿಮ್ಮ ಸ್ಪಷ್ಟ ನಿಲುವೇನು?

ಎಚ್‌ಡಿಕೆ: ಕೇಂದ್ರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ಸೇರಿದಂತೆ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಗೆ ನಮ್ಮ ಸ್ಪಷ್ಟ ವಿರೋಧವಿದೆ. ಆದರೆ, ಈ ವಿಚಾರದಲ್ಲಿ ಕೆಲ ಗೊಂದಲಗಳೂ ಇವೆ. ಉತ್ತರ ಭಾರತದ ಸ್ಥಿತಿಗೂ ಕರ್ನಾಟಕ ರಾಜ್ಯದ ಸ್ಥಿತಿಗೂ ವ್ಯತ್ಯಾಸಗಳಿವೆ. ವಾಸ್ತವ ಸ್ಥಿತಿಯನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಕಾರ್ಪೊರೇಟ್ ಕಂಪೆನಿಗಳ ಅನುಕೂಲಕ್ಕಾಗಿ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ ಎಂಬ ಸಂಶಯವಿದೆ. ಪ್ರಧಾನಿ ಮೋದಿ ರೈತ ಮುಖಂಡರ ಜೊತೆ ಸಭೆ ನಡೆಸಬೇಕಿತ್ತು. ನಾನು ಸಿಎಂ ಆಗಿದ್ದ ಅವಧಿಯಲ್ಲೇ ಏಳೆಂಟು ಸಭೆಗಳನ್ನು ರೈತ ಮುಖಂಡರ ಜತೆ ಮಾಡಿದ್ದೇನೆ. ರೈತರ ಮೇಲೆ ವಾಹನ ಹರಿಸಿದ ಪ್ರಕರಣದಲ್ಲಿ ಕೂಡಲೇ ಕೇಂದ್ರ ಸಚಿವರನ್ನು ವಜಾ ಮಾಡಬೇಕಿತ್ತು. ಘಟನೆಗೆ ಹರಿಯಾಣ ಮುಖ್ಯಮಂತ್ರಿ ಹೇಳಿಕೆಯೂ ಪ್ರಚೋದನೆ ನೀಡಿದೆ. ಕೋವಿಡ್ ಸಾಂಕ್ರಾಮಿಕ ಪೂರ್ಣಪ್ರಮಾಣದಲ್ಲಿ ಕಡಿಮೆಯಾದರೆ ಪಕ್ಷ ಈ ಹೋರಾಟಕ್ಕೆ ಧ್ವನಿಯಾಗಲಿದೆ.

► ವಾ.ಭಾ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) ಕುರಿತ ನಿಮ್ಮ ಹೇಳಿಕೆ, ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಬಿಜೆಪಿಯಿಂದ ಸುಪಾರಿ ಪಡೆದಿದೆ ಎಂಬ ಆರೋಪದ ಬಗ್ಗೆ ಏನು ಹೇಳ್ತೀರಿ?

  ಎಚ್‌ಡಿಕೆ: ಇತ್ತೀಚಿನ ದಿನಗಳಲ್ಲಿ ಆರೆಸ್ಸೆಸ್ ನಡವಳಿಕೆ ಮತ್ತು ಅದರ ಬೆಳವಣಿಗೆ ಕುರಿತು ‘ಸಂಘ’ದ ಪ್ರಚಾರಕರ ವಿಚಾರಗಳನ್ನು ಕೃತಿಯೊಂದರಲ್ಲಿ ಓದಿ ನಾನು ಆರೆಸ್ಸೆಸ್ ಬಗ್ಗೆ ಪ್ರಸ್ತಾಪಿಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆರೆಸ್ಸೆಸ್ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಪ್ರಧಾನಿ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಆಡಳಿತ ವ್ಯವಸ್ಥೆ ಮುನ್ನಡೆಸಿಕೊಂಡು ಹೋಗಲು ಮುಕ್ತ ಅವಕಾಶ ಇರಬೇಕು. ಆದರೆ, ವಾಸ್ತವದಲ್ಲಿ ಹಾಗೆ ಇಲ್ಲ. ಇದು ಸಂವಿಧಾನಕ್ಕೆ ಕೊಡಲಿ ಪೆಟ್ಟು ನೀಡಲಿದೆ ಎಂಬುದು ನನ್ನ ಅಭಿಪ್ರಾಯ. ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಬೇಕೆಂಬ ಉದ್ದೇಶಕ್ಕಾಗಿಯೇ ಎರಡೂ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಆದರೆ, ಉಪಚುನಾವಣೆಯಲ್ಲಿ ಮತಗಳ ಓಲೈಕೆ ಉದ್ದೇಶಕ್ಕಾಗಿ ನಾನು ಆರೆಸ್ಸೆಸ್ ವಿರುದ್ಧ ಹೇಳಿಕೆ ನೀಡಿಲ್ಲ.

 ► ವಾ.ಭಾ: ಯಾವುದೇ ಪುಸ್ತಕದ ಅಧ್ಯಯನ ನಮ್ಮ ಅರಿವು, ಜ್ಞಾನವನ್ನು ವಿಸ್ತರಿಸುತ್ತದೆ. ಆದರೆ, ಅವು ಅವರ ವಿಚಾರಧಾರೆಗಳು. ಅದು ಎಡ-ಬಲ ಏನೇ ಇರಲಿ. ಆದರೆ, ಆರೆಸ್ಸೆಸ್ ಬಗ್ಗೆ ನಿಮ್ಮ ಸ್ಪಷ್ಟ ನಿಲುವೇನು?

 ಎಚ್‌ಡಿಕೆ: 1925ರ ಆರೆಸ್ಸೆಸ್ ಈಗ ಉಳಿದಿಲ್ಲ. ಅದು ಸಂಪೂರ್ಣ ಬದಲಾಗಿದೆ. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಕಾಲದಿಂದ ಇಂದಿನ ವರೆಗೂ ಎಲ್ಲ ವಿಚಾರಗಳನ್ನು ಕೃತಿಯಲ್ಲಿ ಕ್ರೋಡೀಕರಿಸಿ ಸಂಘವನ್ನು ಸಮೀಪದಿಂದ ನೋಡಿದ ವ್ಯಕ್ತಿಗಳು ಕೃತಿಯನ್ನು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಆರೆಸ್ಸೆಸ್ ಇಂದು ದೇಶದ ಭದ್ರತೆಗೆ ಅನಾಹುತಕಾರಿಯಾಗಿದೆ. ‘ಹಿಂದೂ, ಹಿಂದುತ್ವ’ದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಇದರಿಂದ ಏನೂ ಆಗುವುದಿಲ್ಲ, ಸಮುದಾಯಗಳ ನಡುವೆ ಕಂದಕ ಸೃಷ್ಟಿಸಲಿದೆ. ಇದು ದೇಶದ ಆಂತರಿಕ ಭದ್ರತೆಯನ್ನು ಹಾಳು ಮಾಡಲಿದೆ.

► ವಾ.ಭಾ: ಬಿಜೆಪಿಯ ರಾಜಕೀಯ ಸ್ಪಷ್ಟತೆ, ಬದಲಾದ ರಾಜಕೀಯದ ಬಗ್ಗೆ ನಿಮ್ಮ ಅನಿಸಿಕೆಯೇನು?

ಎಚ್‌ಡಿಕೆ: ಬದಲಾವಣೆ ಜಗದ ನಿಯಮ. ಆದರೆ, ವಾಜಪೇಯಿ, ಅಡ್ವಾಣಿ ಕಾಲದ ಬಿಜೆಪಿಗೂ ಈಗಿನ ಬಿಜೆಪಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಚುನಾವಣೆಯಲ್ಲಿ ದೊಡ್ಡ ಮಟ್ಟದ ಹಣದ ಪ್ರಭಾವವೂ ಇದೆ. ಈ ಸ್ಥಿತಿಗೆ ಎಲ್ಲರೂ ಕಾರಣ. ಇದು ಬದಲಾಗಬೇಕಿದೆ. ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮವಹಿಸಬೇಕಾಗಿದೆ. ಸ್ವಾತಂತ್ರ ಬಂದು ಇಷ್ಟು ದಿನಗಳು ಕಳೆದರೂ ‘ಬಡತನ’ ಇನ್ನೂ ಸಮಾಜದಲ್ಲಿದೆ.

ಕೇವಲ ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚಿಸಿದರೆ ಮತ್ತು ‘ಜಿಡಿಪಿ’ ವೃದ್ಧಿಸಿದರೆ ಬಡತನ ನಿರ್ಮೂಲನೆ ಆಗುವುದಿಲ್ಲ. ಬಡತನ ಹೋಗಲಾಡಿಸಿ, ಜನರಲ್ಲಿ ಆರ್ಥಿಕ ಸದೃಢತೆ ತರಬೇಕಿದೆ. ಭ್ರಷ್ಟಾಚಾರ ತೊಡೆದು, ಕಪ್ಪು ಹಣ ತಂದು ದೇಶದ ಜನರಿಗೆ ಹಂಚುವ ವಾಗ್ದಾನ ನೀಡಿ ಬಿಜೆಪಿ ಅಧಿಕಾರಕ್ಕೆ ಬಂದರೂ ಆ ಕೆಲಸವನ್ನು ಇನ್ನೂ ಮಾಡಿಲ್ಲ. ಆದರೆ, ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಎಲ್ಲವನ್ನು ಮರೆಮಾಚುವ ಪ್ರಯತ್ನ ನಡೆಸಿದೆ.

► ವಾ.ಭಾ: ಆರೆಸ್ಸೆಸ್ ವಿರೋಧಿಸಿದರೆ ‘ಹಿಂದೂ’ಗಳನ್ನು ವಿರೋಧಿಸಿದಂತೆ ಎಂದು ಪ್ರಚಾರ ಮಾಡಲಾಗುತ್ತದೆ. ಈ ಕುರಿತು ನಿಮ್ಮ ಅನಿಸಿಕೆ?

 ಎಚ್‌ಡಿಕೆ: ಆರೆಸ್ಸೆಸ್ ವಿರೋಧಿಸುವವರು ಹಿಂದೂಗಳ ವಿರೋಧಿಗಳು, ಪಾಕಿಸ್ತಾನದ ಮೂಲದವರು ಎಂದು ಆರೆಸ್ಸೆಸ್, ಸಂಘ ಪರಿವಾರದವರು ಪ್ರಚಾರ ಮಾಡುವುದು ನಿಜ. ಆದರೆ, ಅವರು ಕೇವಲ ತೋರ್ಪಡಿಕೆಗೆ ಹಿಂದುತ್ವದ ಆಚರಣೆ ಮಾಡಿದರೆ, ನಾವು ನಮ್ಮ ಮನಸ್ಸಿನಿಂದ ಹಿಂದುತ್ವದ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಹಿಂದುತ್ವ ಆರೆಸ್ಸೆಸ್, ಸಂಘಪರಿವಾರದವರ ಪೇಟೆಂಟ್ ಖಂಡಿತ ಅಲ್ಲ. ಉಚಿತ ಶಿಕ್ಷಣ, ಆರೋಗ್ಯ, ಜನಸೇವೆ ಹೆಸರಿನಲ್ಲಿ ತಮ್ಮ ಹಿಂದುತ್ವದ ಪ್ರಚಾರದ ಮೂಲಕ ಜನರ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಿದೆ. ಆದರೆ, ಆರೆಸ್ಸೆಸ್‌ನವರ ಉಚಿತ ಶಿಕ್ಷಣ, ಆರೋಗ್ಯ ವ್ಯವಸ್ಥೆ ನಾನು ಎಲ್ಲಿಯೂ ಕಾಂಡಿಲ್ಲ. ಬದಲಿಗೆ ದೇಶದಲ್ಲಿನ ಶಾಂತಿ ಕದಡುವ ಕೆಲಸದಲ್ಲಿ ತೊಡಗಿದೆ.

► ವಾ.ಭಾ: ಸರಕಾರಿ ವ್ಯವಸ್ಥೆ ದುರ್ಬಲವಾದ ಕಾರಣ ಪರಿಸ್ಥಿತಿಯ ಲಾಭವನ್ನು ಆರೆಸ್ಸೆಸ್ ಸಹಿತ ಕೆಲ ಸಂಸ್ಥೆಗಳು ಪಡೆಯುತ್ತಿವೆ ಎಂದು ಅನ್ನಿಸುವುದಿಲ್ಲವೇ?

 ಎಚ್‌ಡಿಕೆ: ಖಂಡಿತ ಹೌದು. ಸರಕಾರಗಳು ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ಸೇರಿದಂತೆ ಉತ್ತಮ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕು. ಆಗ ಇಂತಹ ಅನ್ಯ ಶಕ್ತಿಗಳಿಗೆ ಸಮಾಜದಲ್ಲಿ ಅವಕಾಶ ಇರುವುದಿಲ್ಲ. ಬಡವ-ಶ್ರೀಮಂತ ಎಂಬ ಭೇದ-ಭಾವ ಇಲ್ಲದೆ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳು ಸಿಗಬೇಕು. ಆಗ ಮಾತ್ರವೇ ಬದಲಾವಣೆ ಸಾಧ್ಯ. ಜನಪ್ರತಿನಿಧಿಗಳು ಬದಲಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

► ವಾ.ಭಾ: ಅಧಿಕಾರಕ್ಕೆ ಬರಬೇಕೆಂಬ ಇಚ್ಛೆ ಹೊಂದಿದ್ದೀರಿ. ಆದರೆ, ಏನೇ ವಿಚಾರಗಳಿದ್ದರೂ ಕುಮಾರಸ್ವಾಮಿ, ದೇವೇಗೌಡ ಮಾತ್ರವೇ ಮಾತನಾಡಬೇಕಿದೆ, ನಿಮ್ಮಲ್ಲಿ ಬೇರೆ ನಾಯಕರಿಲ್ಲವೇ? ನಿಮ್ಮ ಪಕ್ಷದ ಪ್ರಚಾರದ ಪ್ರಯತ್ನ ಅಷ್ಟಾಗಿ ಕಾಣುತ್ತಿಲ್ಲ ಏಕೇ?

  ಎಚ್‌ಡಿಕೆ: ನಮ್ಮ ಪಕ್ಷದಲ್ಲಿರುವ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಎರಡು ದಿನಗಳ ಕಾರ್ಯಾಗಾರ ನಡೆಸಿದ್ದು ಮಿಷನ್-123 ಗುರಿ ಹಾಕಿಕೊಳ್ಳಲಾಗಿದೆ. ಮಹಿಳಾ ಘಟಕ, ಯುವ ಘಟಕಗಳ ಪುನಶ್ಚೇತನಕ್ಕೆ ಆಸ್ಥೆ ವಹಿಸಲಾಗಿದೆ. ರಾಜ್ಯದ 224 ಕ್ಷೇತ್ರಗಳಲ್ಲಿಯೂ ಮಹಿಳೆಯರ ಸಂಘಟನೆಗೆ ಆದ್ಯತೆ ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗಗಳ ಜನರ ಮನೆ-ಮನ ತಲುಪುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

►ವಾ.ಭಾ: ಆರ್‌ಜೆಡಿ. ಡಿಎಂಕೆ, ವೈಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ಸಹಿತ ಪ್ರಾದೇಶಿಕ ಪಕ್ಷಗಳು ಕುಟುಂಬದ ಹಿಡಿತದಲ್ಲಿವೆ, ಇಲ್ಲಿ ಬೇರೆಯವರಿಗೆ ಅವಕಾಶವಿಲ್ಲ ಎಂಬ ಮಾತಿದೆ, ಈ ಕುರಿತು ಏನು ಹೇಳುತ್ತಿರಿ?

  ಎಚ್‌ಡಿಕೆ: ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಲ್ಲಿಯೂ ಕುಟುಂಬ ರಾಜಕಾರಣ ಇದೆ. ಆದರೆ, ಜೆಡಿಎಸ್ ಮೇಲೆ ಮಾತ್ರ ಅಪವಾದ ಹೊರಿಸಲಾಗುತ್ತಿದೆ. ಜೆಡಿಎಸ್ ಹಲವು ಮಂದಿ ನಾಯಕರನ್ನು ಸೃಷ್ಟಿಸಿದೆ. ನಮ್ಮ ಪಕ್ಷ ಒಂದು ರೀತಿಯಲ್ಲಿ ‘ನಾಯಕರನ್ನು’ ತಯಾರಿಸುವ ಕಾರ್ಖಾನೆ ಇದ್ದಂತೆ ಎಂದು ಅವರೇ ಹೇಳುತ್ತಾರೆ. ಕೆಲವರು ತಮ್ಮ ವೈಯಕ್ತಿಕ ಹಿತಕ್ಕೆ ಪಕ್ಷಕ್ಕೆ ದ್ರೋಹ ಮಾಡಿದರೆ ನಾವು ಏನು ಮಾಡಲು ಸಾಧ್ಯ. ಈ ಕುರಿತು ನಾವು ಮತ್ತೊಮ್ಮೆ ಗಂಭೀರವಾಗಿ ಆಲೋಚಿಸುತ್ತೇವೆ.

► ವಾ.ಭಾ: ಪ್ರಾದೇಶಿಕ ಅಸ್ಮಿತೆ ಉಳಿವಿಗೆ ಡಿಎಂಕೆ, ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಇರುವ ಸ್ಪಷ್ಟತೆ ಜೆಡಿಎಸ್‌ನಲ್ಲಿ ಏಕೆ ಕಾಣಿಸುತ್ತಿಲ್ಲ (ಉದಾಹರಣೆಗೆ ಎನ್‌ಇಪಿ, ನೀಟ್, ಭಾಷೆ ಸಹಿತ ಇತರ ವಿಚಾರ..)?

  ಎಚ್‌ಡಿಕೆ: ರಾಜ್ಯದ ನೆಲ-ಜಲದ ವಿಚಾರದಲ್ಲಿ ಜೆಡಿಎಸ್‌ಗೆ ಇರುವ ಸ್ಪಷ್ಟತೆ ಬೇರೆ ಯಾವುದೇ ಪಕ್ಷಕ್ಕೂ ಇಲ್ಲ. ‘ಕನ್ನಡ ಮತ್ತು ಕನ್ನಡಿಗರಿಗೋಸ್ಕರವೇ ಆಡಳಿತ, ಅಧಿಕಾರ’ ಎಂಬುದು ನಮ್ಮ ಪಕ್ಷದ ಧ್ಯೇಯ. ಭಾಷೆ ವಿಚಾರದಲ್ಲಿಯೂ ನಾವು ಸ್ಪಷ್ಟ ನಿಲುವುನೊಂದಿಗೆ ಹೋರಾಟ ಮಾಡುತ್ತಿದ್ದೇವೆ. ಹಿಂದಿ ಹೇರಿಕೆ ವಿರುದ್ಧ ಮೊದಲು ಧ್ವನಿ ಎತ್ತಿದ್ದು ಜೆಡಿಎಸ್ ಪಕ್ಷ. ಪ್ರಾದೇಶಿಕ ಅಸ್ಮಿತೆಯ ಉಳಿವಿಗಾಗಿ 2023ರ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅಧಿಕಾರ ನೀಡಬೇಕೆಂದು ಜನರಲ್ಲಿ ಮನವಿ ಮಾಡುತ್ತಿದ್ದೇವೆ.

  ವಾ.ಭಾ: ಮುಂದಿನ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲೇ ಬೆಲೆ ಏರಿಕೆ, ಕೃಷಿ ಕಾಯ್ದೆಗಳ ತಿದ್ದುಪಡಿ, ಚರ್ಚೆ ಇಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಕುರಿತು ಜೆಡಿಎಸ್ ನಿಲುವೇನು?

  ಎಚ್‌ಡಿಕೆ: ಬಿಜೆಪಿಗೆ ಬಹುಮತ ಇದೆ ಎಂದು ಹಲವು ಕಾನೂನು ಜಾರಿಗೆ ತಂದಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ, ಎಪಿಎಂಸಿ ಮತ್ತು ಭೂ ಸುಧಾರಣೆ ತಿದ್ದುಪಡಿ ಕಾನೂನು ರದ್ದುಪಡಿಸಲಾಗುವುದು, ಚರ್ಚೆ ಇಲ್ಲದೆ ಎನ್‌ಇಪಿ ಜಾರಿ ಮಾಡಿದೆ. ಕಾನೂನು ಮಾಡಿದರೆ ಪ್ರಯೋಜನ ಆಗುವುದಿಲ್ಲ. ಅನುಷ್ಠಾನದಲ್ಲಿ ಲೋಪಗಳನ್ನು ಸರಿಪಡಿಸುವ ಅಗತ್ಯವಿದೆ. ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಜಾರಿಗೆ ಬಂದಿದೆ. ಇದು ಬಡಮಕ್ಕಳಿಗೆ ಅನುಕೂಲ ಆಗುವುದಕ್ಕಿಂತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ನೀಟ್‌ನಿಂದ ಸ್ಥಳೀಯ ಮಕ್ಕಳಿಗೆ ಅನ್ಯಾಯ ಆಗುತ್ತಿದೆ. ನಾವು ಅಧಿಕಾರಕ್ಕೆ ಬಂದರೆ ಇದನ್ನು ಸರಿಪಡಿಸುತ್ತೇವೆ.

 ► ವಾ.ಭಾ: ಜೆಡಿಎಸ್ ಪಕ್ಷದ ಮೂಲ ಸಿದ್ಧಾಂತ ಏನು?

 ಎಚ್‌ಡಿಕೆ: ಜೆಡಿಎಸ್ ಮೂಲ ಸಿದ್ಧಾಂತ ಬಡತನ ನಿರ್ಮೂಲನೆ. ನಮ್ಮ ಪಕ್ಷವನ್ನು ಜಾತ್ಯತೀತ ಪಕ್ಷ ಎಂದು ಹೇಳುತ್ತಾರೆ. ಜಾತಿಯ ಅಸಮಾನತೆ ಹೋಗಲಾಡಿಸಬೇಕಾದರೆ ಮೂಲದಲ್ಲಿ ಬಡತನ ನಿರ್ಮೂಲನೆ ಆಗಬೇಕು. ಶೋಷಣೆಯ ಸುಳಿಗೆ ಸಿಲುಕಿರುವ ಬಡ ಕುಟುಂಬಗಳ ಆರ್ಥಿಕತೆಗೆ ಶಕ್ತಿ ಬಂದರೆ ‘ಜಾತಿ’ ಹೋಗುತ್ತದೆ. ಜೊತೆಗೆ ಭೇದ-ಭಾವಕ್ಕೆ ಕಾರಣವಾದ ‘ಬಡತನ’ ಹೋಗುತ್ತದೆ. ಎಲ್ಲ ಪಕ್ಷಗಳು ಜಾತಿ ಆಧಾರದ ಮೇಲೆಯೆ ಟಿಕೆಟ್ ನೀಡುವ ಪರಿಪಾಠ ಹೋಗಬೇಕಿದೆ. ವ್ಯಕ್ತಿಯ ಸ್ವಸಾಮರ್ಥ್ಯವನ್ನು ಆಧರಿಸಿ ಟಿಕೆಟ್ ನೀಡಬೇಕು. ಈ ಪ್ರಯತ್ನವಾಗಿಯೇ ಉಪ ಚುನಾವಣೆಯಲ್ಲಿ ಅರ್ಹ ಮತ್ತು ಸಾಮರ್ಥ್ಯ ಇರುವವರಿಗೆ ಜೆಡಿಎಸ್ ಟಿಕೆಟ್ ನೀಡಿದೆ.

► ವಾ.ಭಾ: ಪ್ರತಿಪಕ್ಷ ನಾಯಕನ ಹುದ್ದೆ ‘ಮುಖ್ಯಮಂತ್ರಿ’ ಸ್ಥಾನಕ್ಕೆ ಸಮ(ಶಾಡೋ ಸಿಎಂ) ಎನ್ನಲಾಗುತ್ತದೆ. ಆದರೆ, ಆ ಸ್ಥಾನದ ಬಗ್ಗೆ ‘ಪುಟಗೋಸಿ’ ಪದ ಬಳಕೆ ಎಷ್ಟು ಸರಿ? ಸಿದ್ದರಾಮಯ್ಯರ ಮೇಲೆ ನಿಮಗೆ ಸಿಟ್ಟೇಕೆ?

  ಎಚ್‌ಡಿಕೆ: ನಾನು ಪ್ರತಿಪಕ್ಷ ನಾಯಕ ಸ್ಥಾನದ ಘನತೆ ಬಗ್ಗೆ ಮಾತನಾಡಿಲ್ಲ. ಸಿದ್ದರಾಮಯ್ಯನವರಿಗೆ ನಾನು ಆ ಪದ ಬಳಕೆ ಮಾಡಿದ್ದು. ದೇವೇಗೌಡರು ಆ ಸ್ಥಾನದಲ್ಲಿ 1973ರಲ್ಲಿ ಐತಿಹಾಸಿಕ ದಾಖಲೆಯಂತೆ ಕಾರ್ಯನಿರ್ವಹಿಸಿದ್ದಾರೆ. ಅಂದಿನ ನಾಯಕರ ಮೊಗು ಸಿದ್ದರಾಮಯ್ಯನವರಲ್ಲಿ ಕಾಣಿಸುತ್ತಿಲ್ಲ. ಪ್ರತಿಪಕ್ಷವಾಗಿ ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೇಡದ ವಿಚಾರಗಳನ್ನು ಚರ್ಚಿಸುವ ಮೂಲಕ ಅಧಿವೇಶನದಲ್ಲಿ ನಮಗೆ ಅವಕಾಶವನ್ನೇ ನೀಡುವುದಿಲ್ಲ. ಅಲ್ಲದೆ, ಬಿಜೆಪಿ ಆಡಳಿತದಲ್ಲಿನ ಭ್ರಷ್ಟಾಚಾರದ ವಿರುದ್ಧ ಒಂದೇ ಒಂದು ದಾಖಲೆ ಬಹಿರಂಗಪಡಿಸಿದ ಉದಾಹರಣೆಯೇ ಇಲ್ಲ. ಆದರೆ, ಅವರು(ಸಿದ್ದರಾಮಯ್ಯ) ಬಿಜೆಪಿಗಿಂತ ಜೆಡಿಎಸ್ ಮುಗಿಸುವ ಅಜೆಂಡಾ ಇಟ್ಟುಕೊಂಡಿದ್ದಾರೆ.

►  ವಾ.ಭಾ: ಸಿದ್ದರಾಮಯ್ಯ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ವಿರುದ್ಧ ವೈಯಕ್ತಿಕ ಹೇಳಿಕೆ ನೀಡುವುದು ಎಷ್ಟು ಸರಿ?

  ಎಚ್‌ಡಿಕೆ: ನಾನು ಯಾರ ಬಗ್ಗೆಯೂ ವೈಯಕ್ತಿಕ ಹೇಳಿಕೆ ನೀಡಿಲ್ಲ. ಸುಮಲತಾ ವಿರುದ್ಧವೂ ವೈಯಕ್ತಿಕ ಹೇಳಿಕೆ ನೀಡಿಲ್ಲ. ಕೆಆರ್‌ಎಸ್ ಬಿರುಕು ಬಿಟ್ಟಿದೆ ಎಂದ ಕಾರಣ ಅವರನ್ನೇ ಮಲಗಿಸಿ ಎಂದಿದ್ದೆ. ಮಾಧ್ಯಮಗಳು ಆ ವಿಚಾರಕ್ಕೆ ಹೆಚ್ಚು ಪ್ರಚಾರ ನೀಡಿದವು. ಆದರೆ, ನಿಷ್ಪಕ್ಷಪಾತವಾಗಿ ಮಾಧ್ಯಮಗಳು, ನ್ಯೂನತೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ.

► ವಾ.ಭಾ: ಪ್ರತಿ ಚುನಾವಣೆ ಬಂದಾಗಲೂ ಇದು ನನ್ನ ಕೊನೆಯ ಚುನಾವಣೆ ಎಂಬ ನಿಮ್ಮ ಹೇಳಿಕೆಯ ಹಿಂದಿನ ಕಾರಣವೇನು?

 ಎಚ್‌ಡಿಕೆ: ಮೂರು ಚುನಾವಣೆಯನ್ನು ನಾನು ಎದುರಿಸಿದ್ದೇನೆ. ಹೀಗಾಗಿ 2023ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಮಿಷನ್-123 ಗುರಿಯನ್ನು ಹಾಕಿಕೊಂಡಿದ್ದು, ಈಗಾಗಲೇ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಪ್ರಾದೇಶಿಕ ಪಕ್ಷಕ್ಕೆ ಸ್ಪಷ್ಟ ಜನಾದೇಶ ನೀಡಬೇಕೆಂದು ರಾಜ್ಯ ಮತದಾರರಲ್ಲಿ ಮನವಿ ಮಾಡುತ್ತಿದ್ದೇನೆ. ಒಂದು ಅವಧಿಗೆ ನಮಗೆ ಅಧಿಕಾರ ನೀಡಿದರೆ ಜನರಿಗೆ ನೀಡಿದ ವಾಗ್ದಾನವನ್ನು ಈಡೇರಿಸುತ್ತೇವೆ. ನಾವು ನೀಡಿದ ಭರವಸೆ ಈಡೇರಿಸದಿದ್ದರೆ ಇನ್ನೆಂದೂ ನಾವು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ.

 ► ವಾ.ಭಾ: ಯಾವುದೇ ವಿಚಾರವನ್ನು ಎಚ್‌ಡಿಕೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲ ಎಂಬ ಅಪವಾದಕ್ಕೆ ನಿಮ್ಮ ಪ್ರತಿಕ್ರಿಯೆ?

  ಎಚ್‌ಡಿಕೆ: ಮಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಇಬ್ಬರು ಅಮಾಯಕರು ಬಲಿಯಾದರು. ಆ ಪ್ರಕರಣದ ವೀಡಿಯೊ ಬಿಡುಗಡೆ ಮಾಡಿದ್ದೆ. ಅಲ್ಲದೆ, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ವಿತರಣೆಯನ್ನು ಮಾಡಿದೆ. ಆ ಬಳಿಕ ಸರಕಾರ 10 ಲಕ್ಷ ರೂ. ಪರಿಹಾರ ಪ್ರಕಟಿಸಿ, ನಂತರ ಘಟನೆಯಲ್ಲಿ ಪಾಲ್ಗೊಂಡಿದ್ದಾರೆಂದು ಅದನ್ನು ನೀಡಲಿಲ್ಲ. ಈ ಬಗ್ಗೆ ತನಿಖೆಯೂ ಆಗಲಿಲ್ಲ. ಕೋವಿಡ್ ಮಹಾಮಾರಿ ಕಾರಣ ಅದು ತೆರೆ ಮರೆಗೆ ಸರಿಯಿತು. ಈ ಘಟನೆಯ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರದ ವಿರುದ್ಧ್ದ ಸಮರ್ಥ ರೀತಿಯಲ್ಲಿ ಸದನದ ಒಳಗೆ-ಹೊರಗೆ ಹೋರಾಟವನ್ನೇ ಮಾಡಲಿಲ್ಲ. ಬಿಜೆಪಿ ಭ್ರಷ್ಟಾಚಾರದ ಬಗ್ಗೆಯೂ ಅವರು ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ.

ಗೆಲುವು ನಮ್ಮದೇ:

 ► ವಾ.ಭಾ: ಮುಂದಿನ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡುವುದರ ಕುರಿತು?

  ಎಚ್‌ಡಿಕೆ: 2023ರ ಚುನಾವಣೆಯಲ್ಲಿ ಪ್ರಜ್ವಲ್ ಹಾಗೂ ನಿಖಿಲ್ ಒಗ್ಗೂಡಿ ಯುವ ಸಮೂಹ ಸಂಘಟನೆಗೆ ಮುಂದಾಗಿದ್ದು, ವಿಧಾನಸಭಾ ಚುನಾವಣೆಗೆ ಇನ್ನೂ 17 ತಿಂಗಳ ಕಾಲಾವಕಾಶವಿದೆ. ಮಂಡ್ಯ ಲೋಕಸಭೆಯಲ್ಲಿ ನಮ್ಮ ಪಕ್ಷಕ್ಕೆ 6 ಲಕ್ಷಕ್ಕೂ ಅಧಿಕ ಮತಗಳು ಬಂದಿವೆ. ಕಾಂಗ್ರೆಸ್, ಬಿಜೆಪಿ, ರೈತ ಸಂಘ ಸಹಿತ ಎಲ್ಲರೂ ಒಗ್ಗೂಡಿದರೂ ನಾವು ಸೋತಿದ್ದರೂ, ಹೆಚ್ಚಿನ ಮತಗಳು ನಮ್ಮ ಪಕ್ಷಕ್ಕೆ ಬಂದಿವೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

► ವಾ.ಭಾ: ಸಿಂದಗಿ ಮತ್ತು ಹಾನಗಲ್ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದು, ಗೆಲುವಿಗೆ ನಿಮ್ಮ ಕಾರ್ಯತಂತ್ರವೇನು?

ಎಚ್‌ಡಿಕೆ: ಜೆಡಿಎಸ್ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಅವಕಾಶ ನೀಡಿದೆ. ಸಿಂದಗಿ ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಿತ್ತು. ಎಂ.ಸಿ.ಮನಗೂಳಿ ನಿಧನದ ಹಿನ್ನೆಲೆಯಲ್ಲಿ ಅವರ ಪುತ್ರನನ್ನು ಕಾಂಗ್ರೆಸ್ ತನ್ನತ್ತ ಸೆಳೆದಿದೆ. ಹೀಗಾಗಿ ನಮ್ಮ ಕ್ಷೇತ್ರದ ಗೆಲುವಿನ ದೃಷ್ಟಿಯಿಂದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಆ ಕ್ಷೇತ್ರದಲ್ಲಿ 40 ಸಾವಿರ ಮುಸ್ಲಿಮ್ ಮತಗಳಿವೆ. ಅದೇ ರೀತಿಯಲ್ಲಿ ಹಾನಗಲ್ ಕ್ಷೇತ್ರದಲ್ಲಿ ಪಕ್ಷಕ್ಕೆ ಅವಕಾಶಗಳಿವೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಉದ್ದೇಶದಿಂದಲೇ ಅಭ್ಯರ್ಥಿಯನ್ನು ಹಾಕಲಾಗಿದೆ.

‘ನನಗೆ ಆರೆಸ್ಸೆಸ್ ಏನು ಎಂಬ ಸ್ಪಷ್ಟತೆ ಸಿಕ್ಕಿದೆ’

► ವಾ.ಭಾ: ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೀರಿ. ನಿಮಗೆ ಆರೆಸ್ಸೆಸ್, ಬಿಜೆಪಿ ಅಜೆಂಡಾಗಳ ಬಗ್ಗೆ ನಿಜಕ್ಕೂ ತಿಳುವಳಿಕೆ ಇಲ್ಲವೇ? ಆರೆಸ್ಸೆಸ್ ಬಗ್ಗೆ ಅರ್ಥ ಮಾಡಿಕೊಳ್ಳಲು ಇಷ್ಟು ದಿನಗಳ ಬೇಕಾಯಿತೇ?

  ಎಚ್‌ಡಿಕೆ: ನಾನು ಆರೆಸ್ಸೆಸ್ ವಿಚಾರಗಳ ಬಗ್ಗೆ ನಿಜಕ್ಕೂ ಗಮನ ಹರಿಸಿರಲಿಲ್ಲ. ಬಿಜೆಪಿಯೊಂದಿಗೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬಾಬಾಬುಡಾನ್ ಗಿರಿ ದತ್ತಪೀಠದ ವಿಚಾರದಲ್ಲಿ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಕಾನೂನು ಉಲ್ಲಂಘಿಸಿದ ಸಂದರ್ಭದಲ್ಲಿ ಅವರನ್ನು ಬಂಧಿಸಲು ಸೂಚನೆ ನೀಡಿದ್ದೆ. ಕಾನೂನು ಉಲ್ಲಂಘನೆ ಮಾಡಲು ಅವಕಾಶ ನೀಡಿರಲಿಲ್ಲ. 2008ರಿಂದ ಪಕ್ಷದ ಜವಾಬ್ದಾರಿ ವಹಿಸಿಕೊಂಡ ಬಳಿಕ ನಾನು ಮೂರು ಚುನಾವಣೆಯನ್ನು ಎದುರಿಸಿದ್ದು, ನನ್ನ ಭಾಷಣಕ್ಕೆ ಜನ ದೊಡ್ಡ ಸಂಖ್ಯೆಯಲ್ಲಿ ಸೇರಿದರೂ ಅವು ಮತಗಳಾಗಿ ಪರಿವರ್ತನೆ ಆಗುತ್ತಿಲ್ಲ. ಈಚೆಗೆ ಬಿಜೆಪಿ ಎಲ್ಲ ಕಡೆ ಅಧಿಕಾರಕ್ಕೆ ಬರುತ್ತಿದ್ದು, ಆ ಹಿನ್ನೆಲೆಯಲ್ಲಿ ಕುತೂಹಲಕ್ಕೆ ಆರೆಸ್ಸೆಸ್ ಹಿನ್ನೆಲೆಯ ಬಗ್ಗೆ ಅರಿಯಲು ಮುಂದಾದೆ. ತ್ರಿಪುರ ಸೇರಿ ಈಶಾನ್ಯ ರಾಜ್ಯಗಳಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವೇನು ಎಂಬುದನ್ನು ತಿಳಿಯಲು ಹೊರಟೆ. ಉತ್ತರ ಭಾರತದ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಆರೆಸ್ಸೆಸ್ ಪ್ರಭಾವ ಇಲ್ಲ. ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆಪಾದನೆ ಮಾಡಿ ಇವರು ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರ ನಿಂತಿಲ್ಲ. ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿಇದ್ದರೂ ಬಿಜೆಪಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದೆ. ದಲಿತ, ಆದಿವಾಸಿ, ಹಿಂದುಳಿದ ವರ್ಗಗಳ ಯುವಕರ ಭಾವನೆಗಳನ್ನು ಕೆರಳಿಸಿ ದೇಶ ಒಡೆಯುವ ವಿಷ ಬೀಜ ಬಿತ್ತುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಿದೆ. ಇದೀಗ ನನಗೆ ಆರೆಸ್ಸೆಸ್ ಏನು ಎಂಬ ಸ್ಪಷ್ಟತೆ ಸಿಕ್ಕಿದೆ. ಹಿಂದಿನ ಆರೆಸ್ಸೆಸ್ ಮತ್ತು ಇವತ್ತಿನ ಆರೆಸ್ಸೆಸ್ ಕಾನೂನು ಮತ್ತು ಕಾನೂನೇತರ ಚಟುವಟಿಕೆಗಳಲ್ಲಿ ಹೇಗೆ ತೊಡಗಿಕೊಂಡಿದೆ ಎಂಬುದರ ಅರಿವು ನನಗೆ ಆಗಿದೆ. ಹೀಗಾಗಿಯೇ ನಾನು ಆರೆಸ್ಸೆಸ್ ಕುರಿತು ಹೇಳಿಕೆ ನೀಡಿದ್ದೇನೆ.

‘ಪಕ್ಷವನ್ನು ಮುಗಿಸಲು ಹೊರಟವರಿಗೆ ಸ್ಪಷ್ಟ ಉತ್ತರ’

  ವಾ.ಭಾ: ಬಿಜೆಪಿ ಬೆಳೆಯಲು ಎಚ್‌ಡಿಕೆ ಕಾರಣ ಎನ್ನುವ ಆರೋಪವಿದೆ, ಇದಕ್ಕೆ ಏನು ಹೇಳುತ್ತಿರಿ?

 ಎಚ್‌ಡಿಕೆ: ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾಂಗ್ರೆಸ್ ಕಾರಣ. ನಾವು ನಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದೇವೆ. 2013ರಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು 5 ವರ್ಷ ಆಡಳಿತ ನಡೆಸಿದರೂ 2018ರ ಚುನಾವಣೆಯಲ್ಲಿ ಕಾಂಗ್ರೆಸ್ 78 ಸ್ಥಾನಕ್ಕೆ ಕುಸಿಯಿತು. ಬಿಜೆಪಿ 105 ಸ್ಥಾನಗಳನ್ನು ಗಳಿಸಿತು. ನಮ್ಮ ಪಕ್ಷವನ್ನು ಮುಗಿಸಲು ಹೊರಟವರಿಗೆ ಸ್ಪಷ್ಟ ಉತ್ತರ ನೀಡುವ ಮೂಲಕ ನಾವು ಇನ್ನೂ ದೃಢವಾಗಿ ಉಳಿದಿದ್ದೇವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಜೊತೆ ಸರಕಾರ ಮಾಡಿದ ಅನುಭವವಿದ್ದು, ಆ ಪಕ್ಷದೊಂದಿಗೆ ಅಧಿಕಾರಿ ಹಂಚಿಕೊಳ್ಳುವ ವ್ಯಾಮೋಹ ಇನ್ನು ನನಗೆ ಉಳಿದಿಲ್ಲ.

‘ಬಿಎಸ್‌ವೈ ಜೊತೆಗೆ ಸೇರುವ ಪ್ರಶ್ನೆಯೇ ಇಲ್ಲ’

  ವಾ.ಭಾ: ಮುಂದಿನ ಚುನಾವಣೆ ವೇಳೆಗೆ ಯಡಿಯೂರಪ್ಪ ಜೊತೆ ಸೇರಿ ಎಚ್‌ಡಿಕೆ ಹೊಸ ಪ್ರಾದೇಶಿಕ ಪಕ್ಷ ಕಟ್ಟಲಿದ್ದಾರೆಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ?

  ಎಚ್‌ಡಿಕೆ: ನಾನು ಯಡಿಯೂರಪ್ಪ ಜೊತೆ ಸೇರುವುದು ಖಂಡಿತ ಸಾಧ್ಯವಿಲ್ಲ. ನಾನು ಅವರ ವಿರುದ್ಧ ಹೋರಾಟ ಮಾಡಿಯೇ ಇಲ್ಲಿಗೆ ಬಂದಿದ್ದೇನೆ. ಅವರು ಅಧಿಕಾರ ಕಳೆದುಕೊಳ್ಳಲು ನಾನೇ ಮೂಲ ಕಾರಣ. ಅವರು ಅಧಿಕಾರದಿಂದ ಕೆಳಗೆ ಇಳಿಯುವ ಸಂದರ್ಭದಲ್ಲಿ ಅಪ್ಪ-ಮಕ್ಕಳನ್ನು ಮುಗಿಸಲು ನಾನು ಅಧಿಕಾರವನ್ನು ಬಳಸಿಕೊಂಡಿದ್ದೇನೆಂದು ಹೇಳಿದ್ದಾರೆ. ಹೀಗಿರುವಾಗ ನಾವು ಅವರ ಜೊತೆಗೆ ಸೇರುವ ಪ್ರಶ್ನೆ ಯಾವುದೇ ಸಂದರ್ಭದಲ್ಲಿಯೂ ಉದ್ಬವಿಸುವುದಿಲ್ಲ.

ಮಿಷನ್-123: ಇತ್ತೀಚೆಗೆ ಬಿಡದಿಯಲ್ಲೇ ಜೆಡಿಎಸ್ ಕಾರ್ಯಾಗಾರ ನಡೆಸಿದ್ದು, ಮುಂದಿನ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲಲು ‘ಮಿಷನ್-123’ ಗುರಿಯನ್ನು ಹಾಕಿಕೊಂಡಿದ್ದು, ಜೆಡಿಎಸ್ ಅಧಿಕಾರಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ಅಭ್ಯರ್ಥಿಗಳನ್ನು ಗುರುತಿಸಿ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಐದು ಅಂಶಗಳ ಕಾರ್ಯಕ್ರಮ ಘೋಷಣೆ ಮಾಡಿದ್ದು ಶಿಕ್ಷಣ, ಆರೋಗ್ಯ, ರೈತರನ್ನು ಸಾಲಗಾರರನ್ನಾಗಿ ಮಾಡದೆ ಅವರ ಬದುಕಿನಲ್ಲಿ ಬದಲಾವಣೆ ತರಬೇಕು, ಬಡವರಿಗೆ ಉದ್ಯೋಗ ಮತ್ತು ವಸತಿ ಸೌಲಭ್ಯ ಕಲ್ಪಿಸಲು ಬದ್ಧರಾಗಿದ್ದೇವೆ. ಹೀಗಾಗಿ ನಮಗೆ ಒಂದು ಬಾರಿ ಅಧಿಕಾರ ಕೊಡಿ ಎಂದು ರಾಜ್ಯದ ಮತದಾರರಲ್ಲಿ ಮನವಿ ಮಾಡುತ್ತಿದ್ದೇನೆ’.

ವಾರ್ತಾಭಾರತಿ ಪತ್ರಿಕೆ ಬಗ್ಗೆ ಶ್ಲಾಘನೆ:

`ವಾರ್ತಾಭಾರತಿ ಪತ್ರಿಕೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಹಾಗೂ ರಾಜ್ಯದಲ್ಲಿ ಅತ್ಯಂತ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿರುವ ಪತ್ರಿಕೆ. ನಾನು ಇದನ್ನು ನಿಮ್ಮನ್ನು ಮೆಚ್ಚಿಸಲು ಹೇಳುತ್ತಿಲ್ಲ. ಮಾಧ್ಯಮಗಳು ಸಮಾಜದಲ್ಲಿನ ನ್ಯೂನತೆಗಳನ್ನು ಸರಿಪಡಿಸುವ ಕೆಲಸವನ್ನು ಮಾಡಬೇಕು. ಆ ಕಾರ್ಯವನ್ನು ವಾರ್ತಾಭಾರತಿ ಅತ್ಯಂತ ಸಮರ್ಥವಾಗಿ ಮಾಡುತ್ತಿರುವುದಕ್ಕೆ ಅಭಿನಂದನೆಗಳು'
-ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top