ಲೆಕ್ಕಪರಿಶೋಧನೆ ಸಮರ್ಪಕವಾಗಿಲ್ಲ: ರಾಜ್ಯ ವಕ್ಫ್ ಬೋರ್ಡ್ ನೂತನ ಅಧ್ಯಕ್ಷ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ | Vartha Bharati- ವಾರ್ತಾ ಭಾರತಿ

--

ಲೆಕ್ಕಪರಿಶೋಧನೆ ಸಮರ್ಪಕವಾಗಿಲ್ಲ: ರಾಜ್ಯ ವಕ್ಫ್ ಬೋರ್ಡ್ ನೂತನ ಅಧ್ಯಕ್ಷ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ

ಎನ್.ಕೆ.ಎಂ.ಶಾಫಿ ಸಅದಿ

‘ನಾನು ಅವರ ಅಭ್ಯರ್ಥಿ’ ಎಂದು ಹೇಳಲೇಬೇಕು’

►ವಾ.ಭಾ: ವಕ್ಫ್ ಬೋರ್ಡ್‌ನಲ್ಲಿರುವ ಎಲ್ಲ ಸದಸ್ಯರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಾಗಿರುತ್ತಾರೆಯೇ? ನೀವು ಬಿಜೆಪಿ ಸೇರಿದ್ದೀರಾ?

ಶಾಫಿ ಸಅದಿ: ನಾನು ಯಾವುದೇ ರಾಜಕೀಯ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಅದನ್ನು ವಿವಾದ ಮಾಡಲು ಕೆಲವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂದು ಹೇಳುತ್ತಾರೆ. ಒಂದು ವೇಳೆ ಇವತ್ತು ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಿದ್ದರೆ ನನ್ನನ್ನು ಕಾಂಗ್ರೆಸ್ ಎಂದು ಹೇಳುತ್ತಿದ್ದರು. ನಾನು ಬಿಜೆಪಿ ಪಕ್ಷದ ರಾಜ್ಯ ಸರಕಾರದ ನಾಮನಿರ್ದೇಶಿತ ಸದಸ್ಯನಾಗಿದ್ದೇನೆ. ಇದೀಗ ಅಧ್ಯಕ್ಷನಾಗಿರುವುದರಿಂದ ಸಚಿವರು ‘ನಾನು ಅವರ ಅಭ್ಯರ್ಥಿ’ ಎಂದು ಹೇಳಲೇಬೇಕು. ಅದನ್ನು ಹೇಳಲು ಅವರಿಗೆ ಅಧಿಕಾರವು ಇದೆ, ಅವರು ಹೇಳಿದ್ದು ಸರಿಯೂ ಇದೆ. ಏಕೆಂದರೆ ನಾವು ನಾಲ್ಕು ಮಂದಿ ಸರಕಾರದ ನಾಮನಿರ್ದೇಶಿತ ಸದಸ್ಯರು. ಜೊತೆಗೆ ಓರ್ವ ಮಹಿಳಾ ಅಧಿಕಾರಿಯೂ ಸರಕಾರದ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಆದುದರಿಂದ, ನಾನು ಸರಕಾರದ ಪ್ರತಿನಿಧಿ ಅಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿರುವುದು ಓರ್ವ ಕಾಂಗ್ರೆಸ್ ಸಂಸದರು, ಇಬ್ಬರು ಕಾಂಗ್ರೆಸ್ ಶಾಸಕರು ಮಾತ್ರ ರಾಜಕೀಯ ಪಕ್ಷದ ಹಿನ್ನೆಲೆಯುಳ್ಳವರು. ನಾನು ಸುನ್ನಿ ಉಲಮಾ ಕೋಟಾದಿಂದ, ಹಾಗೇಯೆ ಇನ್ನೋರ್ವರು ಶಿಯಾ ಉಲಮಾ ಕೋಟಾದಿಂದ, ಸಮಾಜ ಸೇವೆ ಕೋಟಾದಿಂದ ಮತ್ತೊಬ್ಬರು, ಅದೇ ರೀತಿ ಬಾರ್ ಕೌನ್ಸಿಲ್‌ನ ಮಾಜಿ ಸದಸ್ಯರ ಕೋಟಾದಿಂದ ಇನ್ನೊಬ್ಬರು ಸದಸ್ಯರಾಗಿ ಬಂದಿದ್ದಾರೆ. ನಾವು ಸರಕಾರಕ್ಕೆ ಹೃದಯಾಂತರಾಳದಿಂದ ಕೃತಜ್ಞರಾಗಿದ್ದೇವೆ.

ಬೆಂಗಳೂರು: ರಾಜ್ಯದ ವಕ್ಫ್ ಬೋರ್ಡ್‌ನ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಧಾರ್ಮಿಕ ವಿದ್ವಾಂಸ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ತಮ್ಮ ಭವಿಷ್ಯದ ಗುರಿಗಳು, ವಕ್ಫ್ ಸಂಸ್ಥೆಗಳ ಅಭಿವೃದ್ಧಿ, ಮುಸ್ಲಿಮ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ವಕ್ಫ್ ಬೋರ್ಡ್ ಯಾವ ರೀತಿ ಪಾತ್ರ ವಹಿಸಲಿದೆ ಎಂಬುದರ ಕುರಿತು ‘ವಾರ್ತಾಭಾರತಿ’ ಯೂಟ್ಯೂಬ್ ಚಾನೆಲ್ ಹಾಗೂ ಪತ್ರಿಕೆಗೆ ವಿಶೇಷ ಸಂದರ್ಶನ ನೀಡುವ ಮೂಲಕ ತಮ್ಮ ಆದ್ಯತೆಗಳನ್ನು ಜನರ ಮುಂದಿಟ್ಟಿದ್ದಾರೆ.

► ವಾ.ಭಾ: ರಾಜ್ಯ ವಕ್ಫ್ ಬೋರ್ಡ್‌ಗೆ ನೂತನವಾಗಿ ಅಧ್ಯಕ್ಷರಾಗಿ ಚುನಾಯಿತರಾಗಿರುವ ತಮ್ಮ ಮುಂದೆ ಇರುವ ಪ್ರಮುಖ ಆದ್ಯತೆಗಳೇನು?

ಶಾಫಿ ಸಅದಿ: ಆದ್ಯತೆಗಳನ್ನು ಈಗಾಗಲೇ ಜನರ ಮುಂದೆ ಇಟ್ಟಿದ್ದೇವೆ. ವಕ್ಫ್ ಬೋರ್ಡ್ ಮೂಲಕ ನಮ್ಮ ಸಮುದಾಯ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ಆ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಗರಿಷ್ಠ ಪ್ರಯತ್ನ ಮಾಡಲು ನಾವು ತೀರ್ಮಾನ ಮಾಡಿದ್ದೇವೆ. ಮೊದಲನೇಯದಾಗಿ, ನಮ್ಮ ವಕ್ಫ್ ಆಸ್ತಿಗಳ ಸರ್ವೇ ಕಾರ್ಯ ಮಾಡಬೇಕು. ಈಗಾಗಲೇ ಮೊದಲ ಹಂತದ ಸರ್ವೇ ಕಾರ್ಯ ಮುಗಿದಿದೆ. ಹೊಸದಾಗಿ ನೋಂದಣಿಯಾಗಿರುವ ಆಸ್ತಿಗಳಿಗೆ ಸಂಬಂಧಿಸಿದ ಎರಡನೇ ಸರ್ವೇ ಕಾರ್ಯ ಮುಗಿಸಬೇಕಿದೆ. ವಕ್ಫ್ ಸಂಸ್ಥೆಗಳ ಲೆಕ್ಕಪರಿಶೋಧನೆ ಸಮರ್ಪಕವಾಗಿ ನಡೆಯುತ್ತಿಲ್ಲ. ರಾಜ್ಯದಲ್ಲಿ 2 ಲಕ್ಷ ಕೋಟಿ ರೂ., 3 ಲಕ್ಷ ಕೋಟಿ ರೂ.ಮೌಲ್ಯದ ವಕ್ಫ್ ಆಸ್ತಿಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ವಕ್ಫ್ ಬೋರ್ಡ್‌ಗೆ ಈ ಸಂಸ್ಥೆಗಳಿಂದ ಬರುತ್ತಿರುವ ಮಾಸಿಕ ಕೊಡುಗೆ 4.80 ಕೋಟಿ ರೂ.ಗಳು ಮಾತ್ರ. ಒಂದೊಂದು ಸಂಸ್ಥೆ ಒಂದೊಂದು ರೀತಿಯಲ್ಲಿ ನಮಗೆ ಲೆಕ್ಕ ಸಲ್ಲಿಸುತ್ತಿವೆ. ಆದುದರಿಂದ, ಎಲ್ಲ ವಕ್ಫ್ ಸಂಸ್ಥೆಗಳ ಅಧೀನದಲ್ಲಿರುವ ಆಸ್ತಿಗಳ ಲೆಕ್ಕಪರಿಶೋಧನೆ ನಡೆಸಬೇಕು. ಜೊತೆಗೆ, ವಕ್ಫ್ ಆಸ್ತಿಗಳ ಅಭಿವೃದ್ಧಿ ಮಾಡಬೇಕು.

► ವಾ.ಭಾ: ವಕ್ಫ್ ಸುರಕ್ಷಾ ಯೋಜನೆ(ವಕ್ಫ್ ಆಸ್ತಿಗಳ ದಾಖಲೆ ಸಂಗ್ರಹ, ಡಿಜಿಟಲೀಕರಣ, ಒತ್ತುವರಿ ತೆರವು)ಯ ಪ್ರಗತಿ ಹೇಗಿದೆ?

ಶಾಫಿ ಸಅದಿ: ವಕ್ಫ್ ಆಸ್ತಿಗಳ, ಸಂಸ್ಥೆಗಳ ಮೂಲ ಆಸ್ತಿಗಳ ದಾಖಲೆಗಳ ಸಂರಕ್ಷಣೆ ಮತ್ತು ಅದರ ಗಣಕೀಕರಣ(ಡಿಜಿಟಲೈಸೇಷನ್) ಕಾರ್ಯ ನಡೆಯುತ್ತಿದೆ. ಒಟ್ಟು 57,456 ಆಸ್ತಿಗಳ ಪೈಕಿ 20,248 ಆಸ್ತಿಗಳ ಗಣಕೀಕರಣ ಆಗಿದೆ. ವಕ್ಫ್ ಆಸ್ತಿಗಳ ಬಾಡಿಗೆ/ಭೋಗ್ಯ ನಿಯಮಗಳು 2014(ತಿದ್ದುಪಡಿ 2019) ಇದನ್ನು ಅನುಷ್ಠಾನಗೊಳಿಸಬೇಕಿದೆ. ಇದರಿಂದ ನಮಗೆ ಕೋಟ್ಯಂತರ ರೂ.ಗಳ ಆದಾಯ ಬರಲು ಸಾಧ್ಯವಾಗುತ್ತದೆ. ಈಗ ನಮಗೆ ಬರುತ್ತಿರುವ 4.80 ಕೋಟಿ ರೂ.ಗಳಿಂದ ಏನು ಮಾಡಲೂ ಆಗುತ್ತಿಲ್ಲ. ಸರಕಾರದಿಂದ ವಕ್ಫ್ ಬೋರ್ಡ್ ನ ಸಿಬ್ಬಂದಿಗೆ ವೇತನ ಬರುತ್ತಿದೆ. 20 ಕೋಟಿ ರೂ.ಗಳನ್ನು ನಮಗೆ ನಿರ್ವಹಣೆಗಾಗಿ ಸರಕಾರ ನೀಡುತ್ತಿದ್ದು, ಅದರಲ್ಲಿ 12 ಕೋಟಿ ರೂ.ಗಳನ್ನು ನಾವು ಸಿಬ್ಬಂದಿಗೆ ವೇತನ ನೀಡಲು ವ್ಯಯ ಮಾಡಬೇಕಾಗುತ್ತದೆ. ಈಗಾಗಲೇ ನಮಗೆ 95 ಕೋಟಿ ರೂ.ಗಳು ಕಳೆದ ಸಾಲಿನ ಬಜೆಟ್‌ನಲ್ಲಿ ನೀಡಲಾಗಿದೆ. ಅದರ ಜೊತೆಗೆ 55 ಕೋಟಿ ರೂ.ಗಳನ್ನು ಇಮಾಮ್ ಹಾಗೂ ಮುಅದ್ದೀನ್‌ಗಳಿಗೆ ಸರಕಾರ ಗೌರವ ಧನ ನೀಡಿದೆ. ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ದೊಡ್ಡದಾದ ಅನುದಾನ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸೇರಿ ಬಜೆಟ್‌ನಲ್ಲಿ ನಮ್ಮ ಬೋರ್ಡ್‌ಗೆ 500 ಕೋಟಿ ರೂ. ಅನುದಾನ ಮೀಸಲಿಟ್ಟರೆ ಜನರ ನಿರೀಕ್ಷೆಯಂತೆ ಮುಂದುವರಿಯಬಹುದು.

► ವಾ.ಭಾ: ವಕ್ಫ್ ಆಸ್ತಿಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ಅದೇ ಹಣ ಸಮುದಾಯದ ಅಭಿವೃದ್ಧಿಗೆ ಸಾಕಾಗುವುದಿಲ್ಲವೇ?

ಶಾಫಿ ಸಅದಿ: ರಾಜ್ಯದಲ್ಲಿ ಒಟ್ಟು 32,192 ವಕ್ಫ್ ಸಂಸ್ಥೆಗಳಿವೆ. ಪಾರಂಪರಿಕ ಮುತವಲ್ಲಿಗಳ ಆಡಳಿತ ವಹಿಸಿಕೊಂಡಿರುವ ವಕ್ಫ್ ಸಂಸ್ಥೆಗಳು 5,812, ಆಡಳಿತ, ವ್ಯವಸ್ಥಾಪನಾ ಸಮಿತಿಯ ಮೂಲಕ ಆಡಳಿತದಲ್ಲಿರುವ ವಕ್ಫ್ ಸಂಸ್ಥೆಗಳು 27,168. ಮಂಡಳಿಯ ನೇರ ಆಡಳಿತದಲ್ಲಿ ಇರುವ ವಕ್ಫ್ ಸಂಸ್ಥೆಗಳು 204. ರಾಜ್ಯ ವಕ್ಫ್ ಬೋರ್ಡ್ ಒಂದು ಮೇಲ್ವಿಚಾರಣಾ ಸಂಸ್ಥೆ. ಈ ಒಟ್ಟು 32,192 ಸಂಸ್ಥೆಗಳಿಗೂ ಅದರದೇ ಆದ ಆಡಳಿತ ಸಮಿತಿಗಳಿವೆ. ಅವರಿಗೆ ಸ್ವಾತಂತ್ರ್ಯವಿದೆ. ನಮಗೆ ಬರುವ ಕೊಡುಗೆ ಅವರು ತೋರಿಸುವ ಆದಾಯದಲ್ಲಿನ ಶೇ.7ರಷ್ಟು ಮಾತ್ರ.

► ವಾ.ಭಾ: ನಿಮ್ಮ ಮೇಲೆ ಯಾವುದೇ ರೀತಿಯ ರಾಜಕೀಯ ಒತ್ತಡಗಳು ಇಲ್ಲವೇ?

ಶಾಫಿ ಸಅದಿ: ವಕ್ಫ್ ಸಂಸ್ಥೆ ರಾಜಕೀಯ ಒತ್ತಡಗಳಿಂದ ಮುಕ್ತವಾಗಿರಬೇಕು. ನನಗೆ ಕಾನೂನು ಸಚಿವ ಮಾಧುಸ್ವಾಮಿ, ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಶ್ವಾಸನೆ ನೀಡಿ, ಯಾವುದೇ ಒತ್ತಡಕ್ಕೆ ಒಳಗಾಗದೆ, ಸಂಕಷ್ಟದಲ್ಲಿರುವ ನಿಮ್ಮ ಸಮುದಾಯವನ್ನು ಮೇಲಕ್ಕೆತ್ತಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವೋ ಅದನ್ನು ಮಾಡಿ, ಸರಕಾರ ನಿಮ್ಮ ಮೇಲೆ ಯಾವುದೇ ಒತ್ತಡ ಹೇರಲ್ಲ ಎಂದು ತಿಳಿಸಿದ್ದಾರೆ.

ನನ್ನನ್ನು ವಕ್ಫ್ ಬೋರ್ಡ್‌ಗೆ ನಾಮನಿರ್ದೇಶನ ಮಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು ‘ಗುರುಗಳೇ ನೀವು ಬಿಜೆಪಿ ಪರವಾಗಿ ಕೆಲಸ ಮಾಡಿ ಎಂದು ನಾನು ಹೇಳುವುದಿಲ್ಲ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವಕ್ತಾರರಾಗಬೇಡಿ’ ಎಂದು ಹೇಳಿದ್ದಾರೆ.

► ವಾ.ಭಾ: ವಕ್ಫ್ ಬೋರ್ಡ್ ಮೂಲಕ ಯಾವ ರೀತಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತೀರಾ?

ಶಾಫಿ ಸಅದಿ: ನನ್ನ 18ನೇ ಪ್ರಾಯದಲ್ಲೇ ನಾನು ಸಮಾಜ ಸೇವೆ ಹಾಗೂ ಸಂಘಟನೆಯಲ್ಲಿ ತೊಡಗಿಕೊಂಡವನು. ರಾಜ್ಯದ 30 ಜಿಲ್ಲೆಗಳಿಗೂ ಓಡಾಡಿದ್ದೇನೆ. ಈ 20 ವರ್ಷಗಳಲ್ಲಿ ಮುಸ್ಲಿಮ್ ಸಮುದಾಯದ ಮಾಹಿತಿ, ಅವರ ಪ್ರಶ್ನೆಗಳು, ಸಮಸ್ಯೆಗಳು ನಮ್ಮ ಮುಂದಿವೆ. ಇಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂದು ಹೇಳುವ ಬದಲು ಸಮುದಾಯದ ಸಮಸ್ಯೆಗಳನ್ನು ನೋಡಬೇಕು. ವಕ್ಫ್ ಬೋರ್ಡ್ ಸಮರ್ಪಕವಾಗಿ ಕೆಲಸ ಮಾಡಿದರೆ, ಒತ್ತಡಕ್ಕೆ ಒಳಗಾದ, ತುಳಿತಕ್ಕೆ ಒಳಗಾದ, ಕಷ್ಟಕ್ಕೆ ಒಳಗಾದ, ಸಮಸ್ಯೆಗಳ ಪಾತಾಳದಲ್ಲಿ ಬಿದ್ದಿರುವ ನನ್ನ ಸಮುದಾಯವನ್ನು ಮೇಲಕ್ಕೆತ್ತಲು ಇಲ್ಲಿ ಸಾಧ್ಯ. ಅದಕ್ಕೆ ಸಹಕಾರ ಮಾಡಿರುವುದು ಇವತ್ತಿನ ಬಿಜೆಪಿ ಸರಕಾರ. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.

► ವಾ.ಭಾ: ಬಿಜೆಪಿಯವರು ಅಲ್ಪಸಂಖ್ಯಾತರ ಮೇಲೆ ಇಟ್ಟಿರುವ ಅಪನಂಬಿಕೆಗಳನ್ನು ಯಾವ ರೀತಿ ದೂರ ಮಾಡುತ್ತೀರಾ?

ಶಾಫಿ ಸಅದಿ: ಇಲ್ಲಿ ಬಿಜೆಪಿ ಸರಕಾರ ಇದೆ. ನಮಗೆ ಅನುಕೂಲಕರವಾದ ವಾತಾವರಣ ಇದೆ. ತಪ್ಪು ತಿಳುವಳಿಕೆ ಇರುವುದು ಯಾರ ನಡುವೆ?.

ಬಿಜೆಪಿಗೆ ಮುಸ್ಲಿಮರ ಬಗ್ಗೆ, ಮುಸ್ಲಿಮರಿಗೆ ಬಿಜೆಪಿ ಬಗ್ಗೆ ಅಪನಂಬಿಕೆಯಿದೆ. ಅದನ್ನು ಹೋಗಲಾಡಿಸಲು ಇವರಿಬ್ಬರ ನಡುವೆ ನಾನು ಏಕೆ ಒಂದು ಸೇತುವೆಯಾಗಿ ಕಾರ್ಯ ನಿರ್ವಹಿಸಬಾರದು? ಸರಕಾರಕ್ಕೆ ನಮ್ಮ ಸಮುದಾಯದ ವ್ಯವಸ್ಥೆಯನ್ನು ಯಾಕೆ ಮನದಟ್ಟು ಮಾಡಬಾರದು?.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಘಟನೆಯಾದಾಗ ಮುಸ್ಲಿಮರ ಬಗ್ಗೆ ಅಪನಂಬಿಕೆಗೆ ಒಳಗಾಗಿರುವ ಸಂಘಟನೆಯ ದೊಡ್ಡ ನಾಯಕರ ಜೊತೆ ನಾನು ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ಮಾಡಿ, ಅವರಿಗೆ ಗೋಹತ್ಯೆ, ಲವ್ ಜಿಹಾದ್, ಭಯೋತ್ಪಾದನೆ ವಿಚಾರದ ಕುರಿತು ಹೇಳಿದ್ದೇನೆ. ನೈತಿಕ ಪೊಲೀಸ್‌ಗಿರಿ ಅನ್ನೋದು ನಮ್ಮ ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿದೆ. ಜೊತೆಗೆ ಬಲವಂತದ ಮತಾಂತರಕ್ಕೂ ಇಸ್ಲಾಮ್‌ನಲ್ಲಿ ಅವಕಾಶ ಇಲ್ಲ. ನಾನು ರಾಜಕೀಯ ವಿಚಾರದಲ್ಲಿ ಸಮುದಾಯ ಹಾಗೂ ಸರಕಾರದ ನಡುವೆ ಸೇತುವೆಯಾಗುತ್ತೇನೆ ಎಂದು ಹೇಳಿಲ್ಲ. ಬದಲಾಗಿ ಧಾರ್ಮಿಕ ವಿಚಾರಗಳಲ್ಲಿ ಇರುವ ತಪ್ಪು ನಂಬಿಕೆಗಳನ್ನು ಬಗೆಹರಿಸಲು ಪ್ರಯತ್ನ ಪಡುತ್ತೇನೆ. ಮಂಗಳೂರಿನಲ್ಲಿ ನಮ್ಮ ಮುಸ್ಲಿಮ್ ಜಮಾಅತ್ ಮೂಲಕ ಕಾರ್ಯಕ್ರಮ ಏರ್ಪಡಿಸಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಹಿಂದೂ ಜಾಗರಣ ವೇದಿಕೆ, ವಿಎಚ್‌ಪಿ ಮುಖಂಡರು, ನಮ್ಮ ಸಮುದಾಯದ ಮುಖಂಡರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಮುಖಂಡರನ್ನು ಕರೆಸಿ ಚರ್ಚೆಗಳನ್ನು ಮಾಡುತ್ತೇವೆ.

► ವಾ.ಭಾ: ವಕ್ಫ್ ಆಸ್ತಿಗಳ ದುರುಪಯೋಗಕ್ಕೆ ಸಂಬಂಧಿಸಿದಂತೆ 2012ರಲ್ಲಿ ಅನ್ವರ್ ಮಾಣಿಪ್ಪಾಡಿ ನೀಡಿದ ವರದಿ ಬಗ್ಗೆ ಸರಕಾರ ಇನ್ನೂ ಏನು ಕ್ರಮ ಕೈಗೊಂಡಿಲ್ಲವಲ್ಲ?

ಶಾಫಿ ಸಅದಿ: ಅನ್ವರ್ ಮಾಣಿಪ್ಪಾಡಿ ವರದಿಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ನಾನೇ ಹಲವು ವೇದಿಕೆಗಳಲ್ಲಿ ಆಗ್ರಹಿಸಿದ್ದೇನೆ. ಯಡಿಯೂರಪ್ಪ ಸರಕಾರದಲ್ಲಿ ವರದಿಯನ್ನು ಸದನದಲ್ಲಿ ಟೇಬಲ್ ಮಾಡಿತ್ತು. ಆಗಲೂ ವಕ್ಫ್ ಬೋರ್ಡ್‌ನ ಎಲ್ಲ ಸದಸ್ಯರೂ ಸ್ವಾಗತಿಸಿದ್ದರು. ಆದರೆ, ಕಾನೂನು ತಜ್ಞರು ಆ ವರದಿಯ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡಿದಾಗ ಆ ವರದಿಯು ಸಮರ್ಪಕವಾಗಿಲ್ಲ. ಆರೋಪಗಳಿಗೆ ಸಂಬಂಧಿಸಿದಂತೆ ಸಲ್ಲಿಸಬೇಕಿರುವ ದಾಖಲೆಗಳು ಇಲ್ಲ ಎಂದು ಹೇಳಿದ್ದಾರೆ.

ಸರಕಾರ 19 ಲಕ್ಷ ರೂ.ಗಳನ್ನು ನಮ್ಮ ಸಂಸ್ಥೆಗೆ ಅನುದಾನ ನಿಗದಿ ಮಾಡಿದೆ. ಇನ್ನೂ ಹಣ ಬಿಡುಗಡೆಯಾಗಿಲ್ಲ. ಆದರೆ, ಶಾಫಿ ಸಅದಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸುತ್ತಾರೆ. ಅವರ ಎಲ್ಲ ವರದಿಗಳು ಇದೇ ರೀತಿಯೇ? ಎಂದು ನನಗೆ ಸಂಶಯ ಕಾಡುತ್ತಿದೆ.ನಾನು ನನ್ನ ಮೇಲಿನ ಆರೋಪ ಆಧಾರರಹಿತ ಎಂದು ಸಾಬೀತು ಪಡಿಸಲು ದಾಖಲೆಗಳನ್ನು ನೀಡಿದ್ದೇನೆ. ವಕ್ಫ್ ಬೋರ್ಡ್ ಸಿಇಒ ಮೂರನೇ ವ್ಯಕ್ತಿ ಮೂಲಕ ಸ್ಥಳಪರಿಶೀಲನೆ ಮಾಡಿಸಿದ್ದಾರೆ. ಅವರು ಅಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲು 60 ಲಕ್ಷ ರೂ. ಗಳ ಅಗತ್ಯವಿದೆ ಎಂದು ವರದಿ ನೀಡಿದ್ದಾರೆ. ಅದೇ ರೀತಿ ಮಾಣಿಪ್ಪಾಡಿ ದೂರಿನ ಹಿನ್ನೆಲೆಯಲ್ಲಿ ಸರಕಾರ ನನಗೆ ಶೋಕಾಸ್ ನೋಟಿಸ್ ನೀಡಿತ್ತು. ಅದಕ್ಕೆ ಉತ್ತರ ನೀಡಿದ್ದೇನೆ. ಸರಕಾರದ ಕಾರ್ಯದರ್ಶಿ ಈ ಬಗ್ಗೆ ತನಿಖೆ ಮಾಡಿ ನನಗೆ ಕ್ಲೀನ್‌ಚಿಟ್ ನೀಡಿದ್ದಾರೆ.

► ವಾ.ಭಾ: ರಾಜ್ಯದಲ್ಲಿ ಒತ್ತುವರಿಯಾ ಗಿರುವ ವಕ್ಫ್ ಆಸ್ತಿಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಯಾವ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತದೆ?

ಶಾಫಿ ಸಅದಿ: ವಕ್ಫ್ ಆಸ್ತಿಗಳ ಒತ್ತುವರಿಯಾಗಿರುವುದು ನಿಜ. ಅವುಗಳನ್ನು ವಾಪಸ್ ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ವಕ್ಫ್ ಆಸ್ತಿಗಳ ಒತ್ತುವರಿ ವಿಚಾರದಲ್ಲಿ ಯಾರೂ ಕೂಡ ಕೂಲಂಕಷವಾಗಿ ಚರ್ಚೆ ಮಾಡುತ್ತಿಲ್ಲ. ಶೇ.50ರಷ್ಟು ಒತ್ತುವರಿ ಸರಕಾರದಿಂದಲೇ ಆಗಿದೆ. ನಮ್ಮ ಎಲ್ಲ ಪ್ರತಿನಿಧಿಗಳು ಸರಕಾರದ ಭಾಗವಾಗಿದ್ದರು. ಒತ್ತುವರಿ ಕಳೆದ 50 ವರ್ಷಗಳಿಂದ ಆಗಿದೆ. ಆಗ ಯಾಕೆ ಸರಕಾರದಲ್ಲಿ ಕೂತು ಮಾತನಾಡಿಲ್ಲ. ಈ ವಿಚಾರದಲ್ಲಿ ಕಾನೂನು ಸಚಿವರು, ಸಿಎಂ ಜೊತೆ ಚರ್ಚೆ ಮಾಡಿದ್ದೇವೆ, ಅವರು ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ.

► ವಾ.ಭಾ: ಈವರೆಗೆ ವಕ್ಫ್ ಬೋರ್ಡ್ ಮುಸ್ಲಿಮ್ ಸಮುದಾಯಕ್ಕೆ ಮಾಡಿರುವುದಾದರೂ ಏನು?

ಶಾಫಿ ಸಅದಿ: ಇಷ್ಟು ವರ್ಷ ವಕ್ಫ್ ಬೋರ್ಡ್‌ನಲ್ಲಿ ನಡೆಯುತ್ತಿದ್ದ ತುಷ್ಟೀಕರಣ, ಓಲೈಕೆಯಿಂದ ಹಿಂದುಳಿದ್ದಿದ್ದೇವೆ. ಒಂದು ಪಕ್ಷದವರು ಯಾರನ್ನು ಬೇಕು ಅವರನ್ನು ಇಲ್ಲಿ ನಾಮ ನಿರ್ದೇಶನ ಮಾಡುತ್ತಾರೆ. ಅಂತಹವರು ತಮ್ಮನ್ನು ನಾಮನಿರ್ದೇಶನ ಮಾಡಿದವರಿಗೆ ಕೃತಜ್ಞರಾಗಿರುತ್ತಾರೆ. ಅವರಿಗೆ ಇಲ್ಲಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಯಾರನ್ನು ಅಧ್ಯಕ್ಷ ಮಾಡಬೇಕು ಎಂದು ಅವರು ಹೇಳುತ್ತಾರೆ. ಒಂದು ಸಮಿತಿ, ಅಂಜುಮನ್‌ಗೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದನ್ನು ಅವರು ಹೇಳುತ್ತಾರೆ. ಸಂಪೂರ್ಣವಾಗಿ ರಾಜಕೀಯಮಯವಾಗಿರುತ್ತದೆ. ಅದನ್ನು ಮುಕ್ತಗೊಳಿಸುವ ಪ್ರಯತ್ನ ನಾವು ಈ ಬೋರ್ಡ್ ನಲ್ಲಿ ಮಾಡುತ್ತಿದ್ದೇವೆ.

► ವಾ.ಭಾ: ಬಡ ಮಕ್ಕಳ ಶಿಕ್ಷಣಕ್ಕಾಗಿ ವಕ್ಫ್ ಬೋರ್ಡ್‌ನಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ ನೂತನ ಶಿಕ್ಷಣ ನೀತಿಯ ಪ್ರಗತಿ ಹೇಗಿದೆ?

ಶಾಫಿ ಸಅದಿ: ಕಳೆದ 20 ವರ್ಷಗಳಿಂದ ನನ್ನ ನಾಯಕತ್ವದಲ್ಲಿ ನನ್ನ ಸಂಘಟನೆಯಡಿಯಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಸುಮಾರು 12 ಸಾವಿರ ಮಕ್ಕಳು ಮದ್ರಸಾ, ಶಾಲಾ-ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ನಮ್ಮ ಪ್ರಥಮ ಆದ್ಯತೆ. ಲೌಕಿಕ ಶಿಕ್ಷಣದ ಜೊತೆ ಧಾರ್ಮಿಕ ಶಿಕ್ಷಣವನ್ನು ನಾವು ನೀಡುತ್ತಿದ್ದೇವೆ. ಇದರಿಂದ, ಸಮಾಜ ಹಾಗೂ ದೇಶಕ್ಕೆ ಸೇವೆ ಸಲ್ಲಿಸಲು ಅನುವಾಗುವಂತೆ ಸಿದ್ಧಗೊಳಿಸುತ್ತಿದ್ದೇವೆ.

ಶಿಕ್ಷಣಕ್ಕೆ ಒತ್ತು, ಖಾಲಿ ಇರುವ ವಕ್ಫ್ ಜಾಗಗದಲ್ಲಿ ಶಾಲಾ, ಕಾಲೇಜುಗಳನ್ನು ನಿರ್ಮಿಸುವುದು ನಮ್ಮ ಆದ್ಯತೆ. ಸರಕಾರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದೇವೆ. ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯ ಸ್ಥಾಪನೆ ಸಾಧ್ಯವಾಗುತ್ತದೆ. ಬೆಳಗಾವಿ, ಬೆಂಗಳೂರು, ಮೈಸೂರಿನಲ್ಲಿ ನೂರಾರು ಎಕರೆ ವಕ್ಫ್ ಜಾಗ ಇದೆ. ಬೆಂಗಳೂರಿನ ಬೆಳ್ಳಳ್ಳಿಯಲ್ಲಿ 600 ಎಕರೆ ವಕ್ಫ್ ಜಾಗದಲ್ಲಿ ಒತ್ತುವರಿಯಾಗಿ ಉಳಿದಿರುವ 60-70 ಎಕರೆ, ಜೊತೆಗೆ ಜಿಗಣಿಯಲ್ಲಿ 702 ಎಕರೆ ಜಾಗ ಇದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top