ಜಾತಿ ವ್ಯವಸ್ಥೆಯಲ್ಲಿ ಬಂದಿಯಾಗಿರುವ ಭಾರತದ ಜೈಲುಗಳು! | Vartha Bharati- ವಾರ್ತಾ ಭಾರತಿ

--

ಜಾತಿ ವ್ಯವಸ್ಥೆಯಲ್ಲಿ ಬಂದಿಯಾಗಿರುವ ಭಾರತದ ಜೈಲುಗಳು!

ವಾಸ್ತವವಾಗಿ ಹಲವು ರಾಜ್ಯಗಳ ಜೈಲು ನಿಯಮಾವಳಿಗಳ ಪುಸ್ತಕಗಳಲ್ಲಿ ಜಾತಿ ಆಧಾರಿತ ಕೆಲಸಕ್ಕೆ ಮಾನ್ಯತೆ ನೀಡಲಾಗಿದೆ. 19ನೇ ಶತಮಾನದ ವಸಾಹತು ಯುಗದಲ್ಲಿ ರಚನೆಯಾಗಿರುವ ನಿಯಮಾವಳಿಗಳು ಸುಧಾರಣೆಯನ್ನೇ ಕಂಡಿಲ್ಲ. ಈ ಪುಸ್ತಕಗಳಲ್ಲಿ ಜಾತಿ ಆಧಾರಿತ ಕೆಲಸಗಳ ಉಲ್ಲೇಖ ಮೊದಲು ಹೇಗಿತ್ತೋ ಈಗಲೂ ಹಾಗೇ ಇದೆ. ಪ್ರತಿಯೊಂದು ರಾಜ್ಯವು ತನ್ನದೇ ಆದ ಜೈಲು ನಿಯಮಾವಳಿ ಪುಸ್ತಕಗಳನ್ನು ಹೊಂದಿದೆಯಾದರೂ, ಅವುಗಳನ್ನು ಪ್ರಧಾನವಾಗಿ 1894ರ ಜೈಲು ಕಾಯ್ದೆಯ ಆಧಾರದಲ್ಲಿ ರಚಿಸಲಾಗಿದೆ.

ಆಳ್ವಾರ್ ಜಿಲ್ಲಾ ಜೈಲಿನಲ್ಲಿ ಅದು ಅಜಯ್ ಕುಮಾರ್‌ರ ಮೊದಲ ದಿನ. ಹಿಂಸೆ, ಹಳಸಿದ ಆಹಾರ, ಕೊರೆಯುವ ಚಳಿ ಮತ್ತು ಕಠಿಣ ಕೆಲಸಕ್ಕಾಗಿ ಅವರು ತನ್ನನ್ನು ತಯಾರಿ ಮಾಡಿಕೊಳ್ಳುತ್ತಿದ್ದರು. ಬಾಲಿವುಡ್ ಚಿತ್ರಗಳನ್ನು ನೋಡಿದ್ದ ಅವರಿಗೆ ಜೈಲಿನ ವಾಸ್ತವಾಂಶಗಳ ಬಗ್ಗೆ ಅರಿವಿತ್ತು. ವಿಚಾರಣಾಧೀನ ಕೈದಿ ವಿಭಾಗದಲ್ಲಿದ್ದ ಓರ್ವ ಪೊಲೀಸ್ ಕಾನ್‌ಸ್ಟೇಬಲ್, ‘‘ನಿನ್ನ ಹೆಸರು ಹೇಳು’’ ಎಂದರು.

ಅವರು ತನ್ನ ಹೆಸರು ಹೆಳಿದ ಕೂಡಲೇ, ‘‘ಯಾವ ಜಾತಿ?’’ ಎಂದು ಆ ಪೊಲೀಸ್ ಪೇದೆ ತಟಕ್ಕನೆ ಕೇಳಿದರು. ಒಂದು ಕ್ಷಣ ತಡವರಿಸಿದ ಅಜಯ್ ‘‘ರಜಕ’’ ಎಂದು ಹೇಳಿದರು. ಇದರಿಂದ ತೃಪ್ತಗೊಳ್ಳದ ಪೊಲೀಸ್, ‘‘ಬಿರಾದಾರಿ (ಉಪಜಾತಿ) ಹೇಳು’’ ಎಂದರು. ಈವರೆಗೆ ಅವರ ಜೀವನದಲ್ಲಿ ಯಾವತ್ತೂ ಮಹತ್ವ ಪಡೆಯದಿದ್ದ ಜಾತಿ (ಪರಿಶಿಷ್ಟ ಜಾತಿ) ಅವರ 97 ದಿನಗಳ ಜೈಲು ವಾಸವನ್ನು ರೂಪಿಸುತ್ತದೆ.

2016ರಲ್ಲಿ 18 ವರ್ಷದವರಾಗಿದ್ದ ಅಜಯ್ ಶೌಚಾಲಯಗಳನ್ನು ಸ್ವಚ್ಛ ಮಾಡಬೇಕಾಗಿತ್ತು, ವೆರಾಂಡಾವನ್ನು ಗುಡಿಸಬೇಕಾಗಿತ್ತು ಹಾಗೂ ನೀರು ಸಂಗ್ರಹಿಸುವುದು ಮತ್ತು ತೋಟದ ಕೆಲಸ ಸೇರಿದಂತೆ ಇತರ ಕೆಲಸಗಳನ್ನು ಮಾಡಬೇಕಾಗಿತ್ತು. ಅವರ ಕೆಲಸ ಬೆಳಗ್ಗೆ ಸೂರ್ಯ ಮೂಡುವ ಮೊದಲು ಆರಂಭಗೊಳ್ಳುತ್ತದೆ ಹಾಗೂ ಸಂಜೆ 5 ಗಂಟೆಯವರೆಗೆ ಮುಂದುವರಿಯುತ್ತದೆ. ‘‘ಜೈಲಿಗೆ ಬರುವ ಪ್ರತಿಯೊಬ್ಬ ಕೈದಿ ಈ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಒಂದರೆಡು ವಾರಗಳಲ್ಲಿ ಸ್ಪಷ್ಟವಾಯಿತು. ಶೌಚಾಲಯಗಳನ್ನು ತೊಳೆಯುವ ಕೆಲಸವನ್ನು ಆಯ್ದ ಕೆಲವರಿಗೆ ಮಾತ್ರ ನೀಡಲಾಗುತ್ತದೆ’’ ಎಂದು ಅವರು ಹೇಳುತ್ತಾರೆ.

‘‘ಅಲ್ಲಿನ ವ್ಯವಸ್ಥೆ ಸ್ಪಷ್ಟವಾಗಿತ್ತು. ಜಾತಿ ವ್ಯವಸ್ಥೆಯ ತಳದಲ್ಲಿರುವವರು ಸ್ವಚ್ಛತೆಯ ಕೆಲಸ ಮಾಡಬೇಕಾಗಿತ್ತು. ಅದಕ್ಕಿಂತ ಮೇಲಿನವರು ಅಡುಗೆ ಕೋಣೆಯ ಜವಾಬ್ದಾರಿಯನ್ನು ವಹಿಸುತ್ತಿದ್ದರು ಅಥವಾ ಇಲಾಖೆಯ ಕಾನೂನು ದಾಖಲೆಗಳ ಉಸ್ತುವಾರಿ ನೋಡುತ್ತಿದ್ದರು. ಶ್ರೀಮಂತರು ಮತ್ತು ಪ್ರಭಾವಿಗಳು ಏನೂ ಮಾಡುತ್ತಿರಲಿಲ್ಲ. ಈ ವ್ಯವಸ್ಥೆಗೂ ಓರ್ವ ಕೈದಿ ಮಾಡಿದ ಅಪರಾಧ ಅಥವಾ ಜೈಲಿನಲ್ಲಿ ಆತನ ವರ್ತನೆಗೂ ಯಾವುದೇ ಸಂಬಂಧವಿಲ್ಲ. ಇದೆಲ್ಲವೂ ಜಾತಿ ಆಧಾರಿತವಾಗಿತ್ತು’’ ಎಂದು ಅವರು ಹೇಳುತ್ತಾರೆ.

ಅವರನ್ನು ಜೈಲಿಗೆ ಕಳುಹಿಸಿ ನಾಲ್ಕು ವರ್ಷಗಳು ಆಗಿವೆ. ಅವರ ವಿರುದ್ಧ ಮಾಲಕ ಕಳ್ಳತನದ ಆರೋಪ ಹೊರಿಸಿದ್ದಾರೆ. ‘‘ಹೊಸದಾಗಿ ಪಡೆಯಲಾದ ಸ್ವಿಚ್‌ಬೋರ್ಡ್‌ಗಳ ಬಾಕ್ಸ್‌ಗಳು ವರ್ಕ್‌ಶಾಪ್‌ನಿಂದ ನಾಪತ್ತೆಯಾಗಿದ್ದವು. ನಾನು ಹೊಸದಾಗಿ ಸೇರಿದ ಉದ್ಯೋಗಿ ಮತ್ತು ಅತ್ಯಂತ ಕಿರಿಯ ಕೂಡ. ಮಾಲಕರು ನನ್ನ ಮೇಲೆ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ಒಪ್ಪಿಸಿದರು’’ ಎನ್ನುವುದನ್ನು ಅವರು ನೆನಪಿಸಿಕೊಂಡರು.

97 ದಿನಗಳನ್ನು ಜೈಲಿನಲ್ಲಿ ಕಳೆದ ಬಳಿಕ ಆಳ್ವಾರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರನ್ನು ದೋಷಮುಕ್ತಗೊಳಿಸಿತು. ಈಗ 22 ವರ್ಷದ ಅಜಯ್ ಮಧ್ಯ ದಿಲ್ಲಿಯ ಮಾಲ್ ಒಂದರಲ್ಲಿ ಇಲೆಕ್ಟ್ರೀಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.

ಜೈಲಿನಲ್ಲಿ ಕಳೆದ ಆ ದಿನಗಳು ತನ್ನ ಬದುಕನ್ನು ಬದಲಾಯಿಸಿದವು ಎಂದು ಅಜಯ್ ಹೇಳುತ್ತಾರೆ. ‘‘ರಾತ್ರೋರಾತ್ರಿ ನನ್ನನ್ನು ಕ್ರಿಮಿನಲ್ ಎಂಬುದಾಗಿ ಕರೆಯಲಾಯಿತು. ಬಳಿಕ ನನ್ನನ್ನು ಕೀಳು ಜಾತಿಯ ವ್ಯಕ್ತಿ ಎಂಬುದಾಗಿ ಕರೆಯಲಾಯಿತು’’ ಎಂದು ಅವರು ಹೇಳುತ್ತಾರೆ.

ಬಿಹಾರದ ಬಂಕ ಜಿಲ್ಲೆಯ ಸಂಭೂಗಂಜ್ ಬ್ಲಾಕ್‌ನ ನಿವಾಸಿಗಳಾದ ಅವರ ಕುಟುಂಬವು 1980ರ ದಶಕದಲ್ಲಿ ದಿಲ್ಲಿಗೆ ವಲಸೆ ಹೋಗಿತ್ತು. ಅವರ ತಂದೆ ದಿಲ್ಲಿಯ ಕೊರಿಯರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಸಹೋದರ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾರೆ.

‘‘ನಾವು ಧೋಬಿ ಜಾತಿಗೆ ಸೇರಿದವರು. ಆದರೆ, ನನ್ನ ಕುಟುಂಬದ ಯಾರೂ ಈವರೆಗೆ ಕುಲ ಕಸುಬಿನಲ್ಲಿ ತೊಡಗಿಸಿಕೊಂಡಿಲ್ಲ. ನನ್ನ ತಂದೆಯು ಉದ್ದೇಶಪೂರ್ವಕವಾಗಿಯೇ ನಗರದಲ್ಲಿ ವಾಸಿಸಲು ಬಯಸಿದ್ದರು. ಹಳ್ಳಿಯ ಕಠಿಣ ಜಾತಿ ಆಧಾರಿತ ತಾರತಮ್ಯಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದರು.’’

‘‘ಆದರೆ ಜೈಲಿನೊಳಗೆ ನನ್ನ ತಂದೆಯ ಉದ್ದೇಶಗಳು ವಿಫಲಗೊಂಡವು. ನಾನು ಇಲೆಕ್ಟ್ರೀಶಿಯನ್ ಆಗಿ ತರಬೇತಿ ಪಡೆದಿದ್ದೇನೆ. ಆದರೆ ಜೈಲಿನ ಒಳಗೆ ಅದೆಲ್ಲ ಗೌಣ. ಆ ಸ್ಥಳದಲ್ಲಿ ನಾನೊಬ್ಬ ಸ್ವಚ್ಛತಾ ಕೆಲಸಗಾರ ಅಷ್ಟೆ’’ ಎಂದು ಉತ್ತರ ದಿಲ್ಲಿಯಲ್ಲಿರುವ ತನ್ನ ಬಾಡಿಗೆ ಕೋಣೆಯಲ್ಲಿ ಕುಳಿತು ಮಾತನಾಡುತ್ತಾ ಅವರು ಹೇಳಿದರು.

‘‘ಎಲ್ಲದಕ್ಕಿಂತ ಹೆಚ್ಚು ನೋವಿನ ಸಂಗತಿಯೆಂದರೆ, ಸಂಪೂರ್ಣ ತುಂಬಿದ್ದ ಶೌಚಾಲಯ ಗುಂಡಿಯನ್ನು ಖಾಲಿ ಮಾಡಲು ಜೈಲಿನ ಕಾವಲುಗಾರ ನನ್ನನ್ನು ಕರೆದದ್ದು. ರಾತ್ರಿಯಿಂದ ಜೈಲಿನ ಶೌಚಾಲಯಗಳು ತುಂಬಿ ತುಳುಕುತ್ತಿದ್ದವು. ಆದರೆ, ಇದನ್ನು ಸರಿಪಡಿಸಲು ಜೈಲು ಅಧಿಕಾರಿಗಳು ಹೊರಗಿನಿಂದ ಯಾರನ್ನೂ ಕರೆಯಲಿಲ್ಲ. ಈ ಕೆಲಸವನ್ನು ನಾನು ಮಾಡಬೇಕೆಂದು ಜೈಲು ಅಧಿಕಾರಿಗಳು ಬಯಸುತ್ತಾರೆ ಎನ್ನುವುದನ್ನು ತಿಳಿದು ನನಗೆ ಆಘಾತವಾಯಿತು. ನಾನು ಕ್ಷೀಣವಾಗಿ ಪ್ರತಿಭಟಿಸಿದೆ. ‘ಈ ಕೆಲಸ ಮಾಡಲು ನನಗೆ ಗೊತ್ತಿಲ್ಲ’ ಎಂದು ಜೈಲು ಕಾವಲುಗಾರನಿಗೆ ಹೇಳಿದೆ. ಆದರೆ, ಜೈಲಿನಲ್ಲಿ ನನ್ನಷ್ಟು ಸಣ್ಣ ಮತ್ತು ತೆಳ್ಳಗಿನ ವ್ಯಕ್ತಿ ಬೇರೆ ಯಾರೂ ಇಲ್ಲ ಎಂದು ಅವನು ಹೇಳಿದ. ಅವನು ಧ್ವನಿ ಎತ್ತರಿಸಿ ಮಾತನಾಡಿದ. ನಾನು ಮಣಿದೆ’’ ಎಂದರು.

ಅಜಯ್ ತನ್ನ ಒಳಚಡ್ಡಿಯಲ್ಲೇ ಶೌಚಾಲಯದ ಗುಂಡಿನ ಮುಚ್ಚಳ ತೆರೆದು ಮಲಮೂತ್ರವಿದ್ದ ಗುಂಡಿಗೆ ಇಳಿದರು. ‘‘ಆ ದುರ್ನಾತಕ್ಕೆ ನಾನು ಅಲ್ಲೇ ಸಾಯುತ್ತೇನೆ ಎಂದು ಭಾವಿಸಿದೆ. ನಾನು ಜೋರಾಗಿ ಕೂಗಿದೆ. ಕಾವಲುಗಾರನಿಗೆ ಏನು ಮಾಡಬೇಕೆಂದು ಗೊತ್ತಾಗದೆ ನನ್ನನ್ನು ಮೇಲೆ ಎಳೆಯುವಂತೆ ಇತರ ಕೈದಿಗಳಿಗೆ ಸೂಚಿಸಿದನು’’ ಎಂದರು.

ಮಲಗುಂಡಿಯನ್ನು ಕೈಗಳಿಂದ ಸ್ವಚ್ಛ ಮಾಡುವುದನ್ನು ಮೂರು ದಶಕಗಳ ಹಿಂದೆಯೇ ಭಾರತದಲ್ಲಿ ನಿಷೇಧಿಸಲಾಗಿತ್ತು. ಹಾಗೂ ಶೌಚಗುಂಡಿಗಳನ್ನು ಶುಚಿಗೊಳಿಸಲು ಮಾನವರನ್ನು ಬಳಸುವುದನ್ನು ‘ಶೌಚಗುಂಡಿಗಳನ್ನು ಕೈಯಿಂದ ಶುಚಿಗೊಳಿಸಿದಂತೆ’ ಎಂಬುದಾಗಿ ಪರಿಗಣಿಸುವ ನಿಟ್ಟಿನಲ್ಲಿ 2013ರಲ್ಲಿ ಈ ಕಾಯ್ದೆಗೆ ತಿದ್ದುಪಡಿಯನ್ನೂ ತರಲಾಯಿತು. ಅಜಯ್ ಏನು ಮಾಡಬೇಕೆಂದು ಜೈಲಿನ ಕಾವಲುಗಾರರು ಬಯಸಿದ್ದರೋ ಅದು ಕ್ರಿಮಿನಲ್ ಅಪರಾಧವಾಗಿದೆ.

‘‘ಈ ಘಟನೆಯ ಬಗ್ಗೆ ಯೋಚಿಸಿದಾಗಲೆಲ್ಲ ನಾನು ಹಸಿವನ್ನೇ ಕಳೆದುಕೊಳ್ಳುತ್ತೇನೆ’’ ಎಂದು ಅವರು ಹೇಳುತ್ತಾರೆ. ‘‘ರಸ್ತೆಯಲ್ಲಿ ಓರ್ವ ಸ್ವಚ್ಛತಾ ಕೆಲಸಗಾರ ಅಥವಾ ಕಸ ಗುಡಿಸುವವರನ್ನು ನೋಡಿದಾಗಲೆಲ್ಲ ನನಗೆ ಕರುಣೆಯುಂಟಾಗುತ್ತದೆ. ಈ ದೃಶ್ಯವು ನನ್ನದೇ ಅಸಹಾಯಕತೆಯನ್ನು ನನಗೆ ನೆನಪಿಸುತ್ತದೆ’’ ಎಂದರು.

ಇದು ಆಘಾತಕಾರಿ ಎಂದನಿಸಬಹುದು. ಆದರೆ ಇದು ಅಸಾಮಾನ್ಯ ಪ್ರಕರಣವೇನಲ್ಲ. ಜೈಲಿನಲ್ಲಿ ಎಲ್ಲವೂ ವ್ಯಕ್ತಿಯ ಜಾತಿಯಿಂದ ನಿರ್ಧಾರಗೊಳ್ಳುತ್ತದೆ ಎಂದು ಅವರು ಹೇಳುತ್ತಾರೆ. ಜೈಲಿನಲ್ಲಿ ಕೈದಿಯೋರ್ವ ಯಾವ ರೀತಿ ಜೀವಿಸುತ್ತಿದ್ದಾನೆ ಎನ್ನುವುದನ್ನು ನೋಡಿಯೇ ಆತ ಯಾವ ಜಾತಿ ಎನ್ನುವುದನ್ನು ನಾನೀಗ ಹೇಳಬಲ್ಲೆ ಎಂದು ಅವರು ಹೇಳಿದರು.

ಅಜಯ್ ವಿಚಾರಣಾಧೀನ ಕೈದಿಯಾಗಿದ್ದರು. ಅವರಿಗೆ ಜೈಲಿನಲ್ಲಿ ಕೆಲಸ ಮಾಡುವುದರಿಂದ ವಿನಾಯಿತಿ ಇತ್ತು. ಅಪರಾಧ ಸಾಬೀತುಗೊಂಡ ಕೈದಿಗಳು ಜೈಲಿನಲ್ಲಿ ಕೆಲಸ ಮಾಡುತ್ತಾರೆ. ಆದರೆ, ಅಪರಾಧ ಸಾಬೀತುಗೊಂಡ ಕೈದಿಗಳು ವಿಚಾರಣಾಧೀನ ಕೈದಿಗಳ ಜೈಲಿನಲ್ಲಿ ಕಡಿಮೆ ಸಂಖ್ಯೆಯಲ್ಲಿರುವುದರಿಂದ ಅಜಯ್‌ರಂತಹ ವಿಚಾರಣಾಧೀನ ಕೈದಿಗಳಿಂದ ಜೈಲಿನ ಅಧಿಕಾರಿಗಳು ಉಚಿತ ಕೆಲಸ ಮಾಡಿಸಿಕೊಳ್ಳುತ್ತಾರೆ.

ನಿಯಮಗಳೇ ಜಾತಿವಾದಿಯಾದಾಗ

ವಾಸ್ತವವಾಗಿ ಹಲವು ರಾಜ್ಯಗಳ ಜೈಲು ನಿಯಮಾವಳಿಗಳ ಪುಸ್ತಕಗಳಲ್ಲಿ ಜಾತಿ ಆಧಾರಿತ ಕೆಲಸಕ್ಕೆ ಮಾನ್ಯತೆ ನೀಡಲಾಗಿದೆ. 19ನೇ ಶತಮಾನದ ವಸಾಹತು ಯುಗದಲ್ಲಿ ರಚನೆಯಾಗಿರುವ ನಿಯಮಾವಳಿಗಳು ಸುಧಾರಣೆಯನ್ನೇ ಕಂಡಿಲ್ಲ. ಈ ಪುಸ್ತಕಗಳಲ್ಲಿ ಜಾತಿ ಆಧಾರಿತ ಕೆಲಸಗಳ ಉಲ್ಲೇಖ ಮೊದಲು ಹೇಗಿತ್ತೋ ಈಗಲೂ ಹಾಗೇ ಇದೆ. ಪ್ರತಿಯೊಂದು ರಾಜ್ಯವು ತನ್ನದೇ ಆದ ಜೈಲು ನಿಯಮಾವಳಿ ಪುಸ್ತಕಗಳನ್ನು ಹೊಂದಿದೆಯಾದರೂ, ಅವುಗಳನ್ನು ಪ್ರಧಾನವಾಗಿ 1894ರ ಜೈಲು ಕಾಯ್ದೆಯ ಆಧಾರದಲ್ಲಿ ರಚಿಸಲಾಗಿದೆ.

ಈ ಜೈಲು ನಿಯಮಾವಳಿಗಳ ಪುಸ್ತಕಗಳಲ್ಲಿ ಪ್ರತಿಯೊಂದು ಚಟುವಟಿಕೆಯನ್ನು ವಿವರವಾಗಿ ಬರೆಯಲಾಗಿದೆ. ಆಹಾರದ ಪ್ರಮಾಣ ಮತ್ತು ಪ್ರತಿ ಕೈದಿಗೆ ನೀಡಬೇಕಾಗುವ ಸ್ಥಳದಿಂದ ಹಿಡಿದು, ನಿಯಮ ಉಲ್ಲಂಘಿಸುವ ಕೈದಿಗೆ ನೀಡಬೇಕಾಗಿರುವ ಶಿಕ್ಷೆಗಳ ಬಗ್ಗೆಯೂ ವಿವರವಾಗಿ ಬರೆಯಲಾಗಿದೆ.

ಎಲ್ಲ ರಾಜ್ಯಗಳ ಜೈಲು ಪುಸ್ತಕಗಳು ಪ್ರತಿ ದಿನ ಮಾಡಬೇಕಾದ ಕೆಲಸಗಳ ಬಗ್ಗೆ ವಿವರಗಳನ್ನು ನೀಡುತ್ತವೆ. ‘ಶುದ್ಧ-ಅಶುದ್ಧ’ ಮಾನದಂಡದಲ್ಲಿ ಕೆಲಸಗಳನ್ನು ವಿಂಗಡಿಸಲಾಗುತ್ತದೆ. ಶುದ್ಧವೆಂದು ಪರಿಗಣಿಸಲಾದ ಕೆಲಸಗಳನ್ನು ಮೇಲ್ಜಾತಿಯವರು ಮಾಡುತ್ತಾರೆ. ಜಾತಿ ವ್ಯವಸ್ಥೆಯಲ್ಲಿ ಕೆಳಗಿರುವವರು ಅಶುದ್ಧವೆಂದು ಪರಿಗಣಿಸಲಾಗುವ ಕೆಲಸಗಳನ್ನು ಮಾಡುತ್ತಾರೆ.

ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ಜೈಲುಗಳ ನಡವಳಿಕೆಗಳ ಸುಧಾರಣೆಗಳಲ್ಲಿ ‘ಧಾರ್ಮಿಕ ಅಭಿಪ್ರಾಯ ಅಥವಾ ಜಾತಿಗಳ ಪ್ರಾಮುಖ್ಯವನ್ನೂ’ ಪರಿಗಣಿಸಲಾಗಿದೆ. ‘ಜೈಲಿನ ಎಲ್ಲ ವಿಷಯಗಳಲ್ಲಿ ಧಾರ್ಮಿಕ ಸಲಹೆಗಳು ಮತ್ತು ಜಾತಿಯಿಂದ ಬರುವ ಗೌರವಗಳಿಗೆ ಬೆಲೆ ನೀಡಬೇಕು’ ಎಂದು ಜೈಲು ಸುಧಾರಣೆಗೆ ಸಂಬಂಧಿಸಿದ ಪ್ರತ್ಯೇಕ ಅಧ್ಯಾಯವೊಂದು ಹೇಳುತ್ತದೆ. ಧಾರ್ಮಿಕ ಸಲಹೆಗಳು ಮತ್ತು ಜಾತಿಯಿಂದ ಬರುವ ಗೌರವಕ್ಕೆ ಜೈಲಿನ ನಿಯಮಾವಳಿಗಳಲ್ಲಿ ಎಷ್ಟು ಪ್ರಾಮುಖ್ಯತೆ ನೀಡಬೇಕು ಎನ್ನುವುದನ್ನು ಜೈಲಿನ ಆಡಳಿತ ನಿರ್ಧರಿಸುತ್ತದೆ.

ಮಧ್ಯ ಪ್ರದೇಶದ ಜೈಲು ನಿಯಮಾವಳಿಗಳ ಪುಸ್ತಕಕ್ಕೆ ಕೆಲವು ವರ್ಷಗಳ ಹಿಂದೆ ತಿದ್ದುಪಡಿ ಮಾಡಲಾಗಿತ್ತು. ಆದರೆ ಕೈಯಿಂದ ಶೌಚಗುಂಡಿ ಶುಚಿ ಮಾಡುವ ಕೆಲಸವನ್ನು ಜಾತಿ ಆಧಾರಿತ ವ್ಯವಸ್ಥೆಯಲ್ಲೇ ಮುಂದುವರಿಸಿಕೊಂಡು ಬರಲಾಗಿದೆ. ಶೌಚಾಲಯಗಳಲ್ಲಿ ಮಾನವ ಮಲವನ್ನು ನಿರ್ವಹಿಸುವ ಜವಾಬ್ದಾರಿ ಮೆಹ್ತಾರ್ ಕೈದಿಗಳದ್ದು ಎಂದು ಅದು ಹೇಳುತ್ತದೆ.

ಹರ್ಯಾಣ ಮತ್ತು ಪಂಜಾಬ್ ರಾಜ್ಯದ ಜೈಲುಗಳ ನಿಯಮ ಪುಸ್ತಕಗಳಲ್ಲಿಯೂ ಇದೇ ಮಾದರಿಯ ಆಚರಣೆಗಳು ಕಾಣಸಿಗುತ್ತವೆ. ಇಲ್ಲಿ ಗುಡಿಸುವವರು, ಕ್ಷೌರಿಕರು, ಅಡುಗೆಯವರು, ಆಸ್ಪತ್ರೆ ಸಹಾಯಕ ಸಿಬ್ಬಂದಿ ಹಾಗೂ ಇತರ ಕೆಲಸಗಾರರನ್ನು ಜಾತಿ ಆಧಾರದಲ್ಲಿ ನೇಮಿಸಲಾಗುತ್ತದೆ. ಯವುದೇ ಒಂದು ಜೈಲಿನಲ್ಲಿ ನಿಯಮಿತ ಕೆಲಸಗಳನ್ನು ಮಾಡಲು ನಿರ್ದಿಷ್ಟ ಜಾತಿಯ ಕೈದಿಗಳು ಸಿಗದಿದ್ದರೆ ಸಮೀಪದ ಜೈಲುಗಳಿಂದ ಅವರನ್ನು ಕರೆತರಲಾಗುತ್ತದೆ.

ಕೈದಿಗಳ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಸರಕಾರೇತರ ಸಂಘಟನೆ ‘ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್’ (ಸಿಎಚ್‌ಆರ್‌ಐ)ನ ಪ್ರೊಗ್ರಾಮ್ ಆಫೀಸರ್ ಸಬೀಕಾ ಅಬ್ಬಾಸ್ ಇತ್ತೀಚೆಗೆ ಪಂಜಾಬ್ ಮತ್ತು ಹರ್ಯಾಣದ ಜೈಲುಗಳಿಗೆ ಭೇಟಿ ನೀಡಿದಾಗ ಅಲ್ಲಿನ ಪರಿಸ್ಥಿತಿಯನ್ನು ಕಂಡು ಬೆಚ್ಚಿಬಿದ್ದರು. ‘‘ತಮಗೆ ಜೈಲುಗಳಲ್ಲಿ ಜಾತಿ ಆಧಾರದಲ್ಲಿ ಕೆಲಸಗಳನ್ನು ನೀಡಲಾಗುತ್ತದೆ ಎಂಬುದಾಗಿ ಪುರುಷ ಮತ್ತು ಮಹಿಳಾ ಕೈದಿಗಳು ಹೇಳಿದರು. ಕೆಲವರು ಬಡತನ ಹಾಗೂ ಕುಟುಂಬ ಸದಸ್ಯರಿಂದ ಆರ್ಥಿಕ ನೆರವು ಲಭಿಸದ ಕಾರಣಕ್ಕಾಗಿ ಇಂತಹ ಕೆಲಸಗಳನ್ನು ಮಾಡುವ ಬಲವಂತಕ್ಕೆ ಗುರಿಯಾದರು. ಆದರೆ ಈ ಕೈದಿಗಳು ಕೂಡ ಮುಖ್ಯವಾಗಿ ಹಿಂದುಳಿದ ಜಾತಿಗಳ ಗುಂಪುಗಳಿಂದ ಬಂದವರು’’ ಎಂದು ಸಬೀಕಾ ಹೇಳುತ್ತಾರೆ.

ಅವರು ಹರ್ಯಾಣ ಮತ್ತು ಪಂಜಾಬ್‌ನ ಕಾನೂನು ಸೇವೆಗಳ ಪ್ರಾಧಿಕಾರಗಳ ಪರವಾಗಿ ಸಂಶೋಧನಾ ಕೆಲಸ ಮಾಡುತ್ತಿದ್ದಾರೆ. ಅವರು ಜೈಲು ವ್ಯವಸ್ಥೆಯನ್ನು ಬಾಧಿಸುತ್ತಿರುವ ಹಲವಾರು ವಿಷಯಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ‘‘ವಿಚಾರಣಾಧೀನ ಕೈದಿಗಳಿಗೆ ಜೈಲಿನಲ್ಲಿ ಕೆಲಸ ಮಾಡುವುದರಿಂದ ವಿನಾಯಿತಿ ನೀಡಲಾಗಿದೆಯಾದರೂ, ಜೈಲಿನ ಪ್ರಸಕ್ತ ವ್ಯವಸ್ಥೆಯು ಇಂತಹ ಕೆಲಸಗಳನ್ನು ಮಾಡುವಂತೆ ಅವರನ್ನು ಬಲವಂತಪಡಿಸುತ್ತದೆ. ಹರ್ಯಾಣ ಮತ್ತು ಪಂಜಾಬ್ ಎರಡೂ ರಾಜ್ಯಗಳ ಹೆಚ್ಚಿನ ಜೈಲುಗಳಲ್ಲಿ ಗುಡಿಸುವ ಮತ್ತು ಸ್ವಚ್ಛತೆಯ ಹುದ್ದೆಗಳು ಹಲವು ವರ್ಷಗಳಲ್ಲಿ ಖಾಲಿ ಬಿದ್ದಿರುವುದನ್ನು ನಾವು ಗಮನಿಸಿದ್ದೇವೆ. ಹಾಗಾಗಿ, ಇಂತಹ ಕೆಲಸಗಳನ್ನು ಕೆಳ ಜಾತಿಯ ಕೈದಿಗಳಿಂದ ಮಾಡಿಸಲಾಗುತ್ತದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ.’’ ಎಂದು ಅವರು ಹೇಳುತ್ತಾರೆ.

ಇತರ ಹಲವು ರಾಜ್ಯಗಳ ಜೈಲುಗಳಲ್ಲಿ ವಸಾಹತು ಕಾಲದ ನಿಯಮಗಳೇ ಮುಂದುವರಿಯುತ್ತಿವೆ ಎಂದು ಹೇಳಿದ ಅವರು, ‘‘ಪಂಜಾಬ್ ರಾಜ್ಯದ ನಿಯಮಾವಳಿ ಪುಸ್ತಕದಲ್ಲಿ ಸುಧಾರಣೆಗಳು ಬಂದಿವೆ’’ ಎಂದು ಹೇಳುತ್ತಾರೆ. ‘‘ಪಂಜಾಬ್‌ನಲ್ಲಿ ಜೈಲು ನಿಯಮಾವಳಿಗಳ ಪುಸ್ತಕಕ್ಕೆ 1996ರಲ್ಲಿ ಕೊನೆಯ ಬಾರಿಗೆ ತಿದ್ದುಪಡಿಗಳನ್ನು ತರಲಾಗಿದೆ. ಆದರೆ ಜಾತಿ ಆಧಾರಿತ ವಿಧಿಗಳನ್ನು ಇನ್ನೂ ಕೈಬಿಟಿ್ಟಲ್ಲ’’ ಎಂದು ಅವರು ಹೇಳುತ್ತಾರೆ.

► ತಿರುನೆಲ್ವೇಲಿ ಜೈಲಿನ ಜಾತಿವಾರು ವಾರ್ಡ್‌ಗಳು

ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಪಾಳಯಂಕೊಟ್ಟೈ ಸೆಂಟ್ರಲ್ ಜೈಲಿನ ಜಾತಿ ಆಧಾರಿತ ವ್ಯವಸ್ಥೆಯ ಬಗ್ಗೆ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಆ ಜೈಲಿನಲ್ಲಿ ಶಿಕ್ಷೆಗೆ ಒಳಗಾದ ಸೆಲ್ವಂ ವಿವರಿಸುತ್ತಾರೆ. ಆರಂಭದಲ್ಲಿ 1994ರಲ್ಲಿ ವಿಚಾರಣಾಧೀನ ಕೈದಿಯಾಗಿ ಅವರು ಆ ಜೈಲಿನಲ್ಲಿ 75 ದಿನಗಳನ್ನು ಕಳೆದರು. ನಾಲ್ಕು ವರ್ಷಗಳ ಬಳಿಕ ಅವರ ವಿರುದ್ಧದ ಆರೋಪ ಸಾಬೀತಾಗಿ ಅವರಿಗೆ ಜೀವಾವಧಿ ಶಿಕ್ಷೆಯಾಯಿತು. 1998ರಲ್ಲಿ ಅವರು ಮತ್ತೆ ಅದೇ ಜೈಲಿಗೆ ಹೋದರು.

ಸೆಲ್ವಂ ಹೇಳುತ್ತಾರೆ: ‘‘ಆಗ ಜೈಲು ಬೇರೆಯೇ ಆಗಿತ್ತು. ಅಲ್ಲಿನ ವಾರ್ಡ್ ಗಳಿಗೆ ಹೊಸದಾಗಿ ಜಾತಿ ಆಧಾರದಲ್ಲಿ ಹೆಸರಿಡಲಾಗಿತ್ತು. ವಿಚಾರಣಾಧೀನ ವಿಭಾಗದಲ್ಲಿ ತೇವಾರ್, ನಾಡಾರ್, ಪಲ್ಲಾರ್ ಸೇರಿದಂತೆ ಪ್ರತಿಯೊಂದು ಜಾತಿಗಳಿಗೆ ಪ್ರತ್ಯೇಕ ವಿಭಾಗಗಳಿದ್ದವು.’’ ಸೆಲ್ವಂ ಕೊಲ್ಲರ್ (ಬಡಗಿ) ಜಾತಿಗೆ ಸೇರಿದವರು. ‘‘ಜೈಲಿನ ಅಧಿಕಾರಿಗಳು ಕೆಲವು ಜಾತಿಗಳನ್ನು ಸಂಘರ್ಷದಲ್ಲಿ ತೊಡಗಿರುವ ಜಾತಿಗಳು ಎಂಬುದಾಗಿ ಗುರುತಿಸಿದ್ದಾರೆ ಹಾಗೂ ಆ ಜಾತಿಯ ಕೈದಿಗಳನ್ನು ಪ್ರತ್ಯೇಕವಾಗಿ ಇಡುತ್ತಾರೆ. ಉಳಿದವರನ್ನು ಅವರವರ ಜಾತಿಗಳಿಗೆ ಸೇರಿದ ಸ್ಥಳಗಳಲ್ಲಿ ಇಡುತ್ತಾರೆ’’ ಎಂದು ಅವರು ಹೇಳುತ್ತಾರೆ.

ಜಾತಿ ಪ್ರಾಬಲ್ಯಕ್ಕೆ ಅನುಗುಣವಾಗಿ ಬರಾಕ್‌ಗಳನ್ನು ವಿಂಗಡಿಸಲಾಗಿತ್ತು. ಒಬಿಸಿ ಗುಂಪಿಗೆ ಸೇರಿದ ತೇವಾರ್‌ಗಳು ದಕ್ಷಿಣ ತಮಿಳುನಾಡು ಭಾಗದಲ್ಲಿ ಪ್ರಭಾವಿಗಳು. ಅವರನ್ನು ಜೈಲಿನ ಕ್ಯಾಂಟೀನ್, ಗ್ರಂಥಾಲಯ ಮತ್ತು ಆಸ್ಪತ್ರೆಯ ಸಮೀಪದಲ್ಲಿ ಇರಿಸಲಾಗಿದೆ. ಇನ್ನೊಂದು ಒಬಿಸಿ ಗುಂಪಾಗಿರುವ ನಾಡಾರ್‌ರನ್ನು ಅದರ ಪಕ್ಕದ ಬ್ಲಾಕ್‌ನಲ್ಲಿರಿಸಲಾಗಿದೆ. ದೂರದಲ್ಲಿರುವ ಪಲ್ಲಾರ್ ಬ್ಲಾಕ್‌ನಲ್ಲಿ ದಲಿತ ಸಮುದಾಯಕ್ಕೆ ಸೇರಿದವರನ್ನು ಇರಿಸಲಾಗುತ್ತದೆ. ಆದರೆ, ಈ ವ್ಯವಸ್ಥೆ ವಿಚಾರಣಾಧೀನ ಕೈದಿಗಳ ವಿಭಾಗದಲ್ಲಿ ಮಾತ್ರ ಚಾಲ್ತಿಯಲ್ಲಿದೆ. ಈ ವಿಭಜನೆಯು ಶಿಕ್ಷೆಗೊಳಗಾದವರ ವಿಭಾಗದಲ್ಲಿ ಅಷ್ಟಾಗಿ ಗೋಚರಿಸುವುದಿಲ್ಲ. ಇದಕ್ಕೊಂದು ಕಾರಣವೂ ಇದೆ.

‘‘ಜೈಲುಗಳಲ್ಲಿ ಅಧಿಕಾರಿಗಳು ಕೈದಿಗಳೊಂದಿಗೆ ಕಠೋರವಾಗಿ ವರ್ತಿಸುತ್ತಾರೆ. ಆದರೆ ವಿಚಾರಣಾಧೀನ ಕೈದಿಗಳ ಮೇಲೆ ಅವರು ಹೆಚ್ಚಿನ ಬಲ ಪ್ರಯೋಗ ನಡೆಸುವುದಿಲ್ಲ. ಯಾಕೆಂದರೆ ಈ ಕೈದಿಗಳು ನ್ಯಾಯಾಲಯಕ್ಕೆ ದೂರು ನೀಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಅವರು ಎಚ್ಚರಿಕೆಯಿಂದಿರುತ್ತಾರೆ. ಶಿಕ್ಷೆಗೊಳಗಾದವರು ನ್ಯಾಯಾಲಯದೊಂದಿಗೆ ಹಾಗೂ ಹೊರಜಗತ್ತಿನೊಂದಿಗೆ ಸುಲಭದಲ್ಲಿ ಸಂಪರ್ಕ ಹೊಂದಲು ಸಾಧ್ಯವಿಲ್ಲ. ಹಾಗಾಗಿ, ಅಲ್ಲಿ ಜಾತಿ ವ್ಯವಸ್ಥೆಯನ್ನು ಪೋಷಿಸಿಕೊಂಡು ಬರಲಾಗುತ್ತಿದೆ’’ ಎಂದು ಕೈದಿಗಳ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವ ಸರಕಾರೇತರ ಸಂಘಟನೆ ಗ್ಲೋಬಲ್ ನೆಟ್‌ವರ್ಕ್ ಫಾರ್ ಇಕ್ವಾಲಿಟಿಯ ಸ್ಥಾಪಕ ಹಾಗೂ ವಕೀಲ ಕೆ.ಆರ್. ರಾಜ ಹೇಳುತ್ತಾರೆ.

ಈ ಪದ್ಧತಿಯು ಯಾವುದೇ ಸಾರ್ವಜನಿಕ ಆಕ್ರೋಶವಿಲ್ಲದೆ ಒಂದು ದಶಕಕ್ಕೂ ಹೆಚ್ಚಿನ ಕಾಲ ಮುಂದುವರಿಯಿತು. 2011ರಲ್ಲಿ ಮದ್ರಾಸು ಹೈಕೋರ್ಟ್‌ನ ಮದುರೈ ಪೀಠದಲ್ಲಿ ವಕೀಲರಾಗಿರುವ ಅಳಗುಮಣಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದರು. ‘‘ನನ್ನ ಕಕ್ಷಿದಾರನೊಬ್ಬನನ್ನು ಹುಡುಕಿಕೊಂಡು ಜೈಲಿಗೆ ಹೋಗಿದ್ದಾಗ ಅಲ್ಲಿನ ಕಾವಲುಗಾರನು ಕಕ್ಷಿದಾರನ ಜಾತಿ ಕೇಳಿದರು. ನನಗೆ ಜಾತಿ ಗೊತ್ತಿರಲಿಲ್ಲ. ಹಾಗಾಗಿ, ನನ್ನ ಕಕ್ಷಿದಾರನನ್ನು ಹುಡುಕಲು ಕಾವಲುಗಾರನಿಗೆ ಅಸಾಧ್ಯವಾಯಿತು. ಆಗಲೇ ನನಗೆ ಗೊತ್ತಾಗಿದ್ದು ಅಲ್ಲಿ ಜಾತಿ ಆಧಾರಿತ ವ್ಯವಸ್ಥೆ ಆಳವಾಗಿ ಬೇರು ಬಿಟ್ಟಿದೆ ಎಂದು.’’

ಈ ಪದ್ಧತಿ ಅಸಾಂವಿಧಾನಿಕ. ಆದರೆ ಅದನ್ನು ವರ್ಷಗಳ ಅವಧಿಯಲ್ಲಿ ಸಕ್ರಮಗೊಳಿಸಲಾಗಿತ್ತು. ಈ ವಿಷಯವನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಂಡು ತಕ್ಷಣ ಪರಿಹಾರ ನೀಡುವುದು ಎಂಬುದಾಗಿ ಅವರು ನಂಬಿದ್ದರು. ಆದರೆ, ಈ ವಿಷಯದಲ್ಲಿ ಜೈಲು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ಜೈಲಿನಲ್ಲಿ ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡಲು ಕೈದಿಗಳನ್ನು ಪ್ರತ್ಯೇಕಿಸುವುದೊಂದೇ ಪರಿಹಾರ ಎಂದು ವಾದಿಸಿದರು. 

ಈ ವಾದವನ್ನು ನ್ಯಾಯಾಲಯ ಸ್ವೀಕರಿಸಿತು ಹಾಗೂ ಮೊಕದ್ದಮೆಯನ್ನು ತಳ್ಳಿ ಹಾಕಿತು. ಇದರೊಂದಿಗೆ, ತಾರತಮ್ಯಕರ ವಿಧಾನವೊಂದು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಏಕೈಕ ಪ್ರಾಯೋಗಿಕ ವಿಧಾನ ಎಂಬ ಸಂದೇಶವೊಂದು ಹೊರಬಿತ್ತು. 

► ಬಿಹಾರ ಜೈಲು ನಿಯಮಾವಳಿ ಪುಸ್ತಕದಿಂದ...

ಬಿಹಾರದ ಜೈಲು ಪುಸ್ತಕದ ‘ಆಹಾರ ತಯಾರಿ’ ವಿಭಾಗವು ಹೀಗೆ ಆರಂಭಗೊಳ್ಳುತ್ತದೆ: ‘ಆಹಾರದ ಗುಣಮಟ್ಟ, ಸರಿಯಾಗಿ ಆಹಾರವನ್ನು ತಯಾರಿಸುವುದು ಮತ್ತು ಅದನ್ನು ಸರಿಯಾದ ಪ್ರಮಾಣದಲ್ಲಿ ವಿತರಿಸುವುದು ಮಹತ್ವದ್ದಾಗಿದೆ’. ಜೈಲಿನಲ್ಲಿ ಆಹಾರ ತಯಾರಿಸುವ ವಿಧಾನಗಳು ಮತ್ತು ಅಳತೆಗಳ ಬಗ್ಗೆ ಅದು ಹೀಗೆ ವಿವರಿಸುತ್ತದೆ: ‘ಯಾವುದೇ ‘ಎ’ ದರ್ಜೆಯ ಬ್ರಾಹ್ಮಣ ಅಥವಾ ಸಾಕಷ್ಟು ಮೇಲ್ಜಾತಿಯ ಓರ್ವ ಹಿಂದೂ ಕೈದಿ ಅಡುಗೆಯವನಾಗಿ ನೇಮಕಗೊಳ್ಳಲು ಅರ್ಹನಾಗುತ್ತಾನೆ.’ ಅದು ಮುಂದುವರಿದು ಹೀಗೆ ಹೇಳುತ್ತದೆ: ‘ಜೈಲಿನಲ್ಲಿ ಯಾವುದೇ ಮೇಲ್ಜಾತಿಯ ಕೈದಿಯಿದ್ದರೆ ಹಾಗೂ ಈಗ ಇರುವ ಅಡುಗೆಯವರು ತಯಾರಿಸಿದ ಆಹಾರವನ್ನು ಆತ ತಿನ್ನದಿದ್ದರೆ ಆತನನ್ನೇ ಅಡುಗೆಯಾಳಾಗಿ ನೇಮಿಸಬೇಕು ಹಾಗೂ ಆತನು ಎಲ್ಲರಿಗೂ ಆಹಾರ ತಯಾರಿಸಬೇಕು. ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲು ಯಾವುದೇ ಸಂದರ್ಭದಲ್ಲಿ ಕೈದಿಗಳಿಗೆ ಅವಕಾಶ ನೀಡಬಾರದು. ಆದರೆ ನಿಯಮದಲ್ಲಿ ಅವಕಾಶ ಇರುವ ನಿರ್ದಿಷ್ಟ ವಿಭಾಗದ ಕೈದಿಗಳಿಗೆ ತಮ್ಮ ಆಹಾರವನ್ನು ತಾವೇ ತಯಾರಿಸಲು ಅವಕಾಶ ನೀಡಬಹುದಾಗಿದೆ.’

ಅಧಿಕೃತ ಪುಸ್ತಕದಲ್ಲಿ ಮುದ್ರಿಸಿ ಮರೆಯುವ ನಿಯಮಗಳು ಇವಲ್ಲ. ಭಾರತೀಯ ಉಪಖಂಡದಲ್ಲಿ ಸರ್ವವ್ಯಾಪಿಯಾಗಿರುವ ಜಾತಿ ಪದ್ಧತಿ ಒಂದಕ್ಕಿಂತ ಹೆಚ್ಚಿನ ವಿಧಗಳಲ್ಲಿ ತನ್ನ ಅಸ್ತಿತ್ವವನ್ನು ತೋರಿಸುತ್ತಿದೆ. ತಾವು ಹುಟ್ಟಿದ ಜಾತಿಯ ಆಧಾರದಲ್ಲಿ ತಮ್ಮಿಂದ ಜೈಲಿನಲ್ಲಿ ಕೆಳ ದರ್ಜೆಯ ಕೆಲಸಗಳನ್ನು ಮಾಡಿಸಲಾಗುತ್ತದೆ ಎಂಬುದಾಗಿ ಹಲವು ಕೈದಿಗಳು ಹೇಳಿದ್ದಾರೆ. ಕೆಳ ದರ್ಜೆಯ ಕೆಲಸಗಳನ್ನು ಮಾಡುವುದರಿಂದ ತಮಗೆ ವಿನಾಯಿತಿ ನೀಡಿರುವುದು ತಮ್ಮ ಹಕ್ಕು ಹಾಗೂ ಹೆಮ್ಮೆಯ ವಿಷಯ ಎಂಬುದಾಗಿ ಬ್ರಾಹ್ಮಣರು ಮತ್ತು ಇತರ ಮೇಲ್ಜಾತಿಯ ಕೈದಿಗಳು ಪರಿಗಣಿಸಿದರೆ, ಇತರರು ತಮ್ಮ ಪರಿಸ್ಥಿತಿಗೆ ಜಾತಿ ಪದ್ಧತಿಯನ್ನು ದೂರುತ್ತಾರೆ.

‘‘ನಿಮ್ಮ ಸರಿಯಾದ ಸ್ಥಾನಮಾನವನ್ನು ಜೈಲು ಹೇಳುತ್ತದೆ’’ ಎಂದು ಮಾಜಿ ಕೈದಿ ಪಿಂಟು ಹೇಳುತ್ತಾರೆ. ಅವರು 10 ವರ್ಷಗಳನ್ನು ಜುಬ್ಬಾ ಸಾಹ್ನಿ ಭಾಗಲ್ಪುರ ಸೆಂಟ್ರಲ್ ಜೈಲಿನಲ್ಲಿ ಕಳೆದರೆ, ಕೆಲವು ತಿಂಗಳುಗಳನ್ನು ಮೋತಿಹಾರಿ ಸೆಂಟ್ರಲ್ ಜೈಲಿನಲ್ಲಿ ಕಳೆದಿದ್ದಾರೆ. ಪಿಂಟು ಕ್ಷೌರಿಕ ಸಮುದಾಯಕ್ಕೆ ಸೇರಿದವರು. ಅವರು ಜೈಲಿನಲ್ಲಿ ಕಳೆದ ಅವಧಿಯುದ್ದಕ್ಕೂ ಕ್ಷೌರಿಕನಾಗಿಯೇ ಕೆಲಸ ಮಾಡಿದರು.

ಬಿಹಾರ ಜೈಲು ನಿಯಮಾವಳಿಗಳ ಪುಸ್ತಕವೂ ಕೆಲಸದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಗುಡಿಸುವ ಕೆಲಸಗಾರರನ್ನು ಹೇಗೆ ಆರಿಸಬೇಕು ಎನ್ನುವುದನ್ನು ಅದು ಈ ರೀತಿಯಾಗಿ ವಿವರಿಸುತ್ತದೆ: ‘ಗುಡಿಸುವವರನ್ನು ಮೆಹ್ತಾರ್ ಅಥವಾ ಹರಿ ಜಾತಿಯಿಂದ ಆರಿಸಬೇಕು. ತಮ್ಮ ಬಿಡುವಿನ ಅವಧಿಯಲ್ಲಿ ಗುಡಿಸುವ ಕೆಲಸ ಮಾಡುವ ಚಂಡಾಲ ಅಥವಾ ಇತರ ಕೆಳ ಜಾತಿಯವರನ್ನೂ ಈ ಕೆಲಸಕ್ಕೆ ನೇಮಿಸಬಹುದಾಗಿದೆ. ಅಥವಾ ಯಾರಾದರೂ ಸ್ವ ಇಚ್ಛೆಯಿಂದ ಈ ಕೆಲಸವನ್ನು ಮಾಡಲು ಮುಂದೆ ಬರಬಹುದಾಗಿದೆ’. ಈ ಎಲ್ಲ ಮೂರು ಜಾತಿಗಳು ಪರಿಶಿಷ್ಟ ಜಾತಿ ಅಡಿಯಲ್ಲಿ ಬರುತ್ತವೆ.

ಕಾಲದಿಂದ ಕಾಲಕ್ಕೆ ಜೈಲಿನ ನಿಯಮಾವಳಿಗಳು ಕೊಂಚ ಬದಲಾವಣೆಗೆ ಒಳಪಟ್ಟಿವೆ. ಹಲವು ಸಂದರ್ಭಗಳಲ್ಲಿ ಸಾರ್ವಜನಿಕ ಆಕ್ರೋಶ ಅಥವಾ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ಮಧ್ಯ ಪ್ರವೇಶಗಳ ಬಳಿಕ ಬದಲಾವಣೆಗಳು ಸಂಭವಿಸಿದರೆ, ಕೆಲವು ಸಲ ರಾಜ್ಯಗಳೇ ಬದಲಾವಣೆಗಳ ಅಗತ್ಯವನ್ನು ಮನಗಂಡಿವೆ. ಆದರೆ, ಹೆಚ್ಚಿನ ರಾಜ್ಯಗಳಲ್ಲಿ ಜಾತಿ ಆಧಾರಿತ ಕೆಲಸದ ವ್ಯವಸ್ಥೆ ಚಾಲ್ತಿಯಿರುವುದನ್ನು ಉಪೇಕ್ಷಿಸಲಾಗಿದೆ.

► ರಾಜಸ್ಥಾನದ ಜೈಲು ನಿಯಮಗಳು

ರಾಜಸ್ಥಾನದ ಜೈಲು ಪುಸ್ತಕದಲ್ಲಿ ಬರೆದಿರುವ ರೀತಿಯಂತೆಯೇ ಜೈಲಿನಲ್ಲಿ ಅಜಯ್‌ಗೆ ಅನುಭವವಾಗಿದೆ. ಈ ಜೈಲಿನಲ್ಲಿ ಅಡುಗೆ ಮಾಡುವುದು ಮತ್ತು ವೈದ್ಯಕೀಯ ಸೇವೆಗಳನ್ನು ನೀಡುವುದು ಮೇಲ್ಜಾತಿಯ ಕೆಲಸಗಳೆಂಬುದಾಗಿ ಪರಿಗಣಿಸಲಾಗಿದೆ. ಅದೇ ರೀತಿ, ಗುಡಿಸುವುದು ಮತ್ತು ಸ್ವಚ್ಛತಾ ಕೆಲಸಗಳನ್ನು ನೇರವಾಗಿ ಕೆಳ ಜಾತಿಗಳಿಗೆ ನೀಡಲಾಗುವುದು.

ಅಡುಗೆ ವಿಭಾಗದ ಬಗ್ಗೆ ಜೈಲು ಪುಸ್ತಕ ಹೀಗೆ ಹೇಳುತ್ತದೆ:

‘ಯಾವುದೇ ಬ್ರಾಹ್ಮಣನನ್ನು ಅಥವಾ ಸಾಕಷ್ಟು ಮೇಲ್ಜಾತಿಯ ಹಿಂದೂ ಕೈದಿಯನ್ನು ಅಡುಗೆಯಾಳಾಗಿ ನೇಮಿಸಬೇಕು’.

ಕೈದಿಗಳ ಕಾಯ್ದೆಯ 59(12) ಪರಿಚ್ಛೇದದಲ್ಲಿ ಹಾಗೂ ಜೈಲು ಪುಸ್ತಕದ ‘ಉದ್ಯೋಗ, ಸೂಚನೆಗಳು ಮತ್ತು ಕೈದಿಗಳ ನಿಯಂತ್ರಣ’ ಎಂಬ 10ನೇ ಭಾಗದಲ್ಲಿ ಹಿಗೆ ಬರೆಯಲಾಗಿದೆ:

‘ಕೈದಿಗಳು ವಾಸಿಸುವ ಜಿಲ್ಲೆಯಲ್ಲಿ ಯಾವ ಸಂಪ್ರದಾಯವಿದೆಯೋ ಅದರ ಪ್ರಕಾರ ಅಥವಾ ಕೈದಿಗಳ ವೃತ್ತಿಯನ್ನು ಆಧರಿಸಿ ಗುಡಿಸುವವರನ್ನು ನೇಮಿಸಬೇಕು. ಅವರು ತಮ್ಮ ಬಿಡುವಿನ ವೇಳೆಯಲ್ಲಿ ಈ ಕೆಲಸ ಮಾಡಬೇಕು. ಅದೂ ಅಲ್ಲದೆ, ಈ ಕೆಲಸವನ್ನು ಮಾಡಲು ಯಾರು ಬೇಕಾದರೂ ಮುಂದೆ ಬರಬಹುದು. ಓರ್ವ ಕೈದಿ ವೃತ್ತಿಪರ ಗುಡಿಸುವ ಕೆಲಸಗಾರನ ಹೊರತು ಇತರ ಯಾರನ್ನೂ ಈ ಕೆಲಸ ಮಾಡುವಂತೆ ಬಲವಂತಪಡಿಸುವಂತಿಲ್ಲ.’

ಆದರೆ, ‘ಗುಡಿಸುವ ಸಮುದಾಯ’ದ ವ್ಯಕ್ತಿಗಳಿಂದ ಒಪ್ಪಿಗೆ ಪಡೆಯುವ ವಿಷಯದಲ್ಲಿ ಈ ನಿಯಮವು ಮೌನವಾಗಿದೆ.

ಮುಖ್ಯವಾಗಿ ಪುರುಷರನ್ನೇ ಗಮನದಲ್ಲಿರಿಸಿಕೊಂಡು ಜೈಲಿನ ನಿಯಮಗಳನ್ನು ರೂಪಿಸಲಾಗಿದೆ. ಮಹಿಳೆಯರ ಜೈಲುಗಳಲ್ಲೂ ಇದೇ ಮಾದರಿಯ ನಿಯಮಗಳಿವೆ. ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ನಿಯಮಗಳನ್ನು ರೂಪಿಸಲಾಗಿಲ್ಲ.

ರಾಜಸ್ಥಾನದ ಜೈಲು ನಿಯಮಾವಳಿ ಪುಸ್ತಕದಲ್ಲಿ ಹೀಗೆ ಬರೆಯಲಾಗಿದೆ: ‘ಸೂಕ್ತ ಜಾತಿಯ ಮಹಿಳಾ ಕೈದಿಗಳು ಸಿಗದಿದ್ದಲ್ಲಿ, ಇಬ್ಬರು ಅಥವಾ ಮೂವರು ವಿಶೇಷವಾಗಿ ಆಯ್ಕೆ ಮಾಡಲಾದ ಮೆಹ್ತಾರ್ ಪುರುಷ ಕೈದಿಗಳನ್ನು ಅಡುಗೆ ಕೋಣೆಯೊಳಗೆ ಸಂಬಳ ಪಡೆಯುವ ನೌಕರನೊಬ್ಬ ಕರೆದುಕೊಂಡು ಹೋಗಬಹುದಾಗಿದೆ.’

ಇಲ್ಲಿ ಮೆಹ್ತಾರ್ ಎಂದರೆ ಸ್ವಚ್ಛತಾ ಕೆಲಸದಲ್ಲಿ ತೊಡಗಿಕೊಂಡಿರುವ ಜಾತಿಯ ಜನರು.

ವೈದ್ಯಕೀಯ ಸೇವೆಗಳನ್ನು ನೀಡುವ ಕೆಲಸಗಾರರ ಬಗ್ಗೆ ಪುಸ್ತಕ ಹೀಗೆ ಹೇಳುತ್ತದೆ: ‘ಉತ್ತಮ ಜಾತಿಯ ಇಬ್ಬರು ಅಥವಾ ಮೂವರು ದೀರ್ಘಾವಧಿ ಕೈದಿಗಳಿಗೆ ತರಬೇತಿ ನೀಡಿ ಅವರನ್ನು ಆಸ್ಪತ್ರೆ ಸಹಾಯಕರನ್ನಾಗಿ ನೇಮಿಸಬೇಕು.’ 

‘‘ನಾವು ಧೋಬಿ ಜಾತಿಗೆ ಸೇರಿದವರು. ಆದರೆ, ನನ್ನ ಕುಟುಂಬದ ಯಾರೂ ಈವರೆಗೆ ಕುಲ ಕಸುಬಿನಲ್ಲಿ ತೊಡಗಿಸಿಕೊಂಡಿಲ್ಲ. ನನ್ನ ತಂದೆಯು ಉದ್ದೇಶಪೂರ್ವಕವಾಗಿಯೇ ನಗರದಲ್ಲಿ ವಾಸಿಸಲು ಬಯಸಿದ್ದರು. ಹಳ್ಳಿಯ ಕಠಿಣ ಜಾತಿ ಆಧಾರಿತ ತಾರತಮ್ಯಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದರು.’’

‘‘ಆದರೆ ಜೈಲಿನೊಳಗೆ ನನ್ನ ತಂದೆಯ ಉದ್ದೇಶಗಳು ವಿಫಲಗೊಂಡವು. ನಾನು ಇಲೆಕ್ಟ್ರೀಶಿಯನ್ ಆಗಿ ತರಬೇತಿ ಪಡೆದಿದ್ದೇನೆ. ಆದರೆ ಜೈಲಿನ ಒಳಗೆ ಅದೆಲ್ಲ ಗೌಣ. ಆ ಸ್ಥಳದಲ್ಲಿ ನಾನೊಬ್ಬ ಸ್ವಚ್ಛತಾ ಕೆಲಸಗಾರ ಅಷ್ಟೆ’’

- ಮಾಜಿ ಕೈದಿ ಅಜಯ್

‘‘ವಿಚಾರಣಾಧೀನ ಕೈದಿಗಳಿಗೆ ಜೈಲಿನಲ್ಲಿ ಕೆಲಸ ಮಾಡುವುದರಿಂದ ವಿನಾಯಿತಿ ನೀಡಲಾಗಿದೆಯಾದರೂ, ಜೈಲಿನ ಪ್ರಸಕ್ತ ವ್ಯವಸ್ಥೆಯು ಇಂತಹ ಕೆಲಸಗಳನ್ನು ಮಾಡುವಂತೆ ಅವರನ್ನು ಬಲವಂತಪಡಿಸುತ್ತದೆ. ಹರ್ಯಾಣ ಮತ್ತು ಪಂಜಾಬ್ ಎರಡೂ ರಾಜ್ಯಗಳ ಹೆಚ್ಚಿನ ಜೈಲುಗಳಲ್ಲಿ ಗುಡಿಸುವ ಮತ್ತು ಸ್ವಚ್ಛತೆಯ ಹುದ್ದೆಗಳು ಹಲವು ವರ್ಷಗಳಲ್ಲಿ ಖಾಲಿ ಬಿದ್ದಿರುವುದನ್ನು ನಾವು ಗಮನಿಸಿದ್ದೇವೆ. ಹಾಗಾಗಿ, ಇಂತಹ ಕೆಲಸಗಳನ್ನು ಕೆಳ ಜಾತಿಯ ಕೈದಿಗಳಿಂದ ಮಾಡಿಸಲಾಗುತ್ತದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ.’’

- ಸಬೀಕಾ ಅಬ್ಬಾಸ್, ಕೈದಿಗಳ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಸರಕಾರೇತರ ಸಂಘಟನೆ ‘ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್’ (ಸಿಎಚ್‌ಆರ್‌ಐ)ನ ಪ್ರೊಗ್ರಾಮ್ ಆಫಿಸರ್

(ನಾಳೆಯ ಸಂಚಿಕೆಗೆ)

ಕೃಪೆ: thewire.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top