ವಿವೇಕ ಇಲ್ಲದ ವ್ಯವಸ್ಥೆ : ಆನಂದ ಕಾಣದ ಜನತೆ | Vartha Bharati- ವಾರ್ತಾ ಭಾರತಿ

--

ವಿವೇಕ ಇಲ್ಲದ ವ್ಯವಸ್ಥೆ : ಆನಂದ ಕಾಣದ ಜನತೆ

ವಿವೇಕಾನಂದರ ಜನ್ಮದಿನಾಚರಣೆಯನ್ನು ಯುವ ಜನೋತ್ಸವ ಎಂದು ಆಚರಿಸುವ ಮುನ್ನ ಆತ್ಮಾವಲೋಕನ ಅವಶ್ಯ ಎನಿಸುವುದಿಲ್ಲವೇ? ಯಾವ ಯುವಪೀಳಿಗೆಗಾಗಿ ಈ ಆಚರಣೆ? ಹರಿದ್ವಾರದ ಧರ್ಮ ಸಂಸತ್ತಿನಲ್ಲಿ ನೆರೆದಿದ್ದ ಯುವಸ್ತೋಮಕ್ಕೋ ಅಥವಾ ತ್ರಿಶೂಲ ದೀಕ್ಷೆ ಪಡೆದ ಯುವ ಪಡೆಗಳಿಗೋ? ಅಥವಾ ಹಸಿವು, ನಿರುದ್ಯೋಗದ ಅನಿಶ್ಚಿತತೆಯ ತೂಗುಗತ್ತಿಯ ಕೆಳಗೆ ಜೀವನ ಸವೆಸುತ್ತಿರುವ ಭಾರತದ ಕೋಟ್ಯಂತರ ಯುವ ಜನತೆಗೋ?

ವಿವೇಕಾನಂದರ ಜನ್ಮದಿನ ಎಂದರೆ ನಮ್ಮ ರಾಜಕಾರಣಿಗಳಿಗೆ, ವಿಶೇಷವಾಗಿ ಹಿಂದುತ್ವವನ್ನು ಹಿಂಬಾಲಿಸುತ್ತಿರುವ ಎಲ್ಲ ರಾಜಕಾರಣಿಗಳಿಗೆ ಮೈ ನವಿರೇಳುತ್ತದೆ. ಸಿಂಹವಾಣಿ, ದಿವ್ಯವಾಣಿ, ದಿಟ್ಟವಾಣಿ ಎಂದೆಲ್ಲಾ ಮುಖಸ್ತುತಿ ಮಾಡುವ ಮೂಲಕ ವಿವೇಕಾನಂದರನ್ನು ಇಂದು ಚಾಲ್ತಿಯಲ್ಲಿರುವ ಹಿಂದುತ್ವ ರಾಜಕಾರಣದ ಕೇಂದ್ರ ಬಿಂದುವಾಗಿ ಪ್ರತಿಷ್ಠಾಪಿಸಲಾಗುತ್ತದೆ. ವಿವೇಕಾನಂದರನ್ನು ಯುವಪೀಳಿಗೆಯ ಸ್ಫೂರ್ತಿ ಮತ್ತು ಮಾರ್ಗದರ್ಶಕ ಎಂದು ಪರಿಭಾವಿಸುತ್ತಲೇ ದೇಶದ ಯುವ ಜನತೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಯುವ ಜನತೆ, ವಿಶೇಷವಾಗಿ ಶತಮಾನದ ಪೀಳಿಗೆ ಎಂದೇ ಹೇಳಲಾಗುವ ಹದಿಹರೆಯದ ಜನಸಮೂಹಕ್ಕೆ ಒಂದು ನಿರ್ದಿಷ್ಟ ಋಜು ಮಾರ್ಗವನ್ನು ರೂಪಿಸುವ ನಿಟ್ಟಿನಲ್ಲಿ ವಿವೇಕಾನಂದರು ಎಷ್ಟರ ಮಟ್ಟಿಗೆ ನೆರವಾಗುತ್ತಾರೆ ಎಂಬ ಚರ್ಚೆಯ ನಡುವೆಯೇ, ಇದೇ ಯುವ ಪೀಳಿಗೆಯ ಮಿದುಳಿನಲ್ಲಿ ವಿಷಬೀಜ ಬಿತ್ತುವ ಕೈಂಕರ್ಯವೂ ನಡೆಯುತ್ತಿರುವುದನ್ನು ಗಮನಿಸಬೇಕಿದೆ.

ವಿವೇಕರು ಯುವ ಜನತೆಗೆ ನೀಡಿದ ಸಂದೇಶವಾದರೂ ಏನು? ಈ ಸಂದೇಶವನ್ನು ಅವರು ಯಾವ ನೆಲೆಯಲ್ಲಿ ನಿಂತು ನೀಡಿದ್ದರು? ಯಾರನ್ನು ಉದ್ದೇಶಿಸಿ ನೀಡಿದ್ದರು? ಈ ವಿವೇಕ ವಾಣಿ ಅದರ ಮೂಲ ಭೂಮಿಕೆಯಿಂದ ಕಳಚಿಕೊಂಡು ಮತ್ತಾವುದೋ ವಿಚ್ಛಿದ್ರಕಾರಕ ಸೈದ್ಧಾಂತಿಕ ನೆಲೆಗಳಲ್ಲಿ ಏಕೆ ಸ್ಥಾಪನೆಯಾಗಿದೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ ಹೋದರೆ ಬಹುಶಃ ನಾವು ವಿವೇಕಾನಂದರನ್ನು ಮತ್ತೆ ಮತ್ತೆ ಸಮಾಧಿ ಸ್ಥಿತಿಗೆ ತಲುಪಿಸುತ್ತಲೇ ಉಳಿದು ಹೋಗುತ್ತೇವೆ. ಇಂದಿನ ಯುವ ಪೀಳಿಗೆಗೆ ಏನು ಬೇಕಿದೆ ಎಂಬ ಪ್ರಶ್ನೆಗೆ ಉತ್ತರ ಬಹಳ ಸುಲಭ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇಡೀ ಜಗತ್ತನ್ನು ಅಂಗೈಯಲ್ಲಿ ಹಿಡಿದು ನೋಡುತ್ತಿರುವ ಈ ಪೀಳಿಗೆಯ ಭವಿಷ್ಯ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ನಮ್ಮನ್ನು ತಬ್ಬಿಬ್ಬುಗೊಳಿಸುತ್ತದೆ. ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ವಿವೇಕ ವಾಣಿ ಇಂದು ಅನೇಕ ಅಪಭ್ರಂಶಗಳೊಡನೆ ಹರಿದಾಡುವುದು ಸಹಜವಾಗಿಯೇ ಕಾಣುತ್ತದೆ. ವಾಟ್ಸ್‌ಆ್ಯಪ್ ವಿಶ್ವವಿದ್ಯಾನಿಲಯದ ವಿದ್ವಾಂಸರು ಅವರ ವಿವೇಕದ ಮಾತುಗಳನ್ನು ತಮ್ಮ ಮತೀಯ ರಾಜಕಾರಣಕ್ಕೆ ತಕ್ಕಂತೆ ಪರಿಷ್ಕರಿಸಿಕೊಳ್ಳುತ್ತಾ ಹೊಸ ವ್ಯಾಖ್ಯಾನಗಳನ್ನು ಬರೆಯಲು ತೊಡಗಿರುತ್ತಾರೆ. ವಿವೇಕಾನಂದರ ‘‘ಏಳಿ ಜಾಗೃತರಾಗಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ’’ ಎನ್ನುವ ಕರೆ ಅಂದಿನ ಯುವ ಪೀಳಿಗೆಗೆ ನೀಡಿದ ಕರೆಯಾಗಿತ್ತು. ಇದು ಮೂಲತಃ ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ನಡೆಯುತ್ತಿದ್ದ ಸಂಘರ್ಷದ ನೆಲೆಯಲ್ಲಿ ನೀಡಿದ ಒಂದು ವಿವೇಕಯುತ ಸಂದೇಶ. ಹಾಗೆಯೇ ತಮ್ಮ ಕಾಲಘಟ್ಟದಲ್ಲೂ ಭಾರತೀಯ ಸಮಾಜದಲ್ಲಿ ತಾಂಡವಾಡುತ್ತಿದ್ದ ಅಸ್ಪಶ್ಯತೆ ಮತ್ತು ಜಾತಿ ದೌರ್ಜನ್ಯಗಳ ವಿರುದ್ಧ ತಳಸಮುದಾಯಗಳಿಗೆ ನೀಡಿದ ಸಂದೇಶ ಎಂದು ಅರ್ಥೈಸಬಹುದು. 19ನೆಯ ಶತಮಾನದಲ್ಲಿ ನಾರಾಯಣಗುರು, ಮುನ್ನಾತ್ತು ಪದ್ಮನಾಭನ್, ಕೆ.ಕೇಳಪ್ಪನ್, ವಿ.ಟಿ. ಭಟ್ಟಾಧಿರಿಪ್ಪಾದ್ ಮುಂತಾದ ಸಮಾಜ ಸುಧಾರಕರ ಅವಿರತ ಪರಿಶ್ರಮದ ಫಲವಾಗಿ ಕೇರಳದಲ್ಲಿ ಬೇರೂರಿದ್ದ ಜಾತಿ ತಾರತಮ್ಯಗಳು ಕ್ಷೀಣಿಸುತ್ತಿದ್ದರೂ, ವಿವೇಕಾನಂದರಿಗೆ ಅಲ್ಲಿ ಜಾತಿ ವಿಷಬೀಜಗಳು ಇನ್ನೂ ಹಸನಾಗಿರುವುದು ಕಂಡುಬಂದಿದ್ದರಿಂದಲೇ ಅವರು ಕೇರಳವನ್ನು ‘‘ಹುಚ್ಚರ ಅಥವಾ ಅವಿವೇಕಿಗಳ ಆಶ್ರಯತಾಣ’’ ಎಂದು ಬಣ್ಣಿಸಿದ್ದರು. ಈ ಅವಿವೇಕವನ್ನು ಹೋಗಲಾಡಿಸುವುದೂ ವಿವೇಕಾನಂದರ ಚಿಂತನಾವಾಹಿನಿಯ ಪ್ರಮುಖ ಅಂಶವಾಗಿತ್ತು ಎನ್ನುವುದನ್ನು ಜಾಣ್ಮೆಯಿಂದ ಮರೆಮಾಚುತ್ತಲೇ ಅವರನ್ನು ಹಿಂದೂ ಪುನರುತ್ಥಾನದ ಸಂತನನ್ನಾಗಿ ಬಿಂಬಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಕೇರಳದಲ್ಲಿ ವಿವೇಕರು ಅಂದು ಕಂಡ ಅವಿವೇಕ ಇಂದು ಭಾರತದ ಪ್ರತಿಯೊಂದು ರಾಜ್ಯದಲ್ಲೂ ತಾಂಡವಾಡುತ್ತಿರುವುದನ್ನು ಮನಗಾಣದಿದ್ದರೆ ಯುವ ಪೀಳಿಗೆಗೆ ಯಾವ ಸಂದೇಶ ನೀಡಲು ಸಾಧ್ಯ?

 ‘‘ಆತ್ಮವಿಶ್ವಾಸವನ್ನು ಹೊಂದಿರಿ ಜಗತ್ತು ನಿಮ್ಮ ಕಾಲಡಿ ಇರುತ್ತದೆ’’ ಎಂಬ ವಿವೇಕರ ವಾಣಿಯನ್ನು ಇಂದಿನ ಯುವ ಪೀಳಿಗೆ ಹೇಗೆ ಅರ್ಥೈಸಬೇಕು? ಯಾವ ಜಗತ್ತನ್ನು ತಮ್ಮ ಕಾಲಡಿಯಲ್ಲಿ ಕಾಣಲು ಯುವ ಜನತೆ ತವಕಿಸಬೇಕು? ತಂತ್ರಜ್ಞಾನದ ಮೂಲಕ ತಮ್ಮ ಅಂಗೈಯಲ್ಲೇ ಇಡೀ ವಿಶ್ವವನ್ನು ಕಾಣುತ್ತಿರುವ ಯುವ ಪೀಳಿಗೆಗೆ ತಮ್ಮ ಭವಿಷ್ಯದ ದಿನಗಳನ್ನು ಕರಾಳ ಕೂಪಕ್ಕೆ ದೂಡುತ್ತಿರುವ ಶಕ್ತಿಗಳು ಯಾವುದು ಎಂದು ಅರ್ಥವಾಗದೆ ಹೋದರೆ ಅವರು ವಿವೇಕರ ಈ ವಾಣಿಯನ್ನು ಹೇಗೆ ಪರಿಭಾವಿಸಲು ಸಾಧ್ಯ? ಆತ್ಮನಿರ್ಭರಭಾರತ ಎಂಬ ಒಂದು ಭ್ರಮೆ ಇಡೀ ಯುವ ಪೀಳಿಗೆಯನ್ನು ಆವರಿಸಿದೆ. ಈ ನವ ಭಾರತದಲ್ಲಿ ಮುಂದಿಡಲಾಗುವ ಪ್ರತಿಯೊಂದು ಹೆಜ್ಜೆಯೂ ಅನಿಶ್ಚಿತತೆಯಿಂದ ಕೂಡಿರುತ್ತದೆ. ಏಕೆಂದರೆ ಆಳುವ ವರ್ಗಗಳು, ಆಡಳಿತ ವ್ಯವಸ್ಥೆ ತನ್ನ ಸಾಮಾಜಿಕ ಕರ್ತವ್ಯಗಳಿಂದ ವಿಮುಖವಾಗಿ, ವ್ಯಾಪಾರಿ ಧೋರಣೆಯನ್ನು ತಾಳುತ್ತಿದೆ. ಯುವ ಪೀಳಿಗೆಯ ಭವಿಷ್ಯದ ಕನಸುಗಳು ಇಂದು ಆಳುವವರ ಕಾಲಡಿಯಲ್ಲಿರುವುದನ್ನು ಮನಗಾಣಬೇಕಲ್ಲವೇ? ಶಿಕ್ಷಣ ನಮ್ಮ ಹೊಣೆ ಅಲ್ಲ, ಆರೋಗ್ಯ ಕಾಳಜಿ ನಮ್ಮ ಹೊರೆ ಅಲ್ಲ ಎಂದು ಘಂಟಾಘೋಷವಾಗಿ ಹೇಳುವ ಒಂದು ಆಡಳಿತ ವ್ಯವಸ್ಥೆಯನ್ನು ಇದೇ ಯುವ ಪೀಳಿಗೆಯೇ ಅನುಮೋದಿಸುತ್ತಿದೆ. ‘‘ಯುವ ಪೀಳಿಗೆಯೇ ಭವಿಷ್ಯದ ಮಾನವ ಕುಲ, ನಿಮ್ಮ ಕ್ರಿಯೆಯಲ್ಲಿ ಇರಬಹುದಾದ ಆಶಯಗಳಿಗೆ ಗಮನ ನೀಡಿ, ನೀವು ಉತ್ತಮ ಮಾನವರಾಗಿ ರೂಪುಗೊಳ್ಳುವಿರಿ’’ ಎಂಬ ವಿವೇಕಾನಂದರ ಸಂದೇಶ ಇಂದು ಹೆಚ್ಚು ಪ್ರಸ್ತುತ ಎನಿಸುತ್ತದೆ. ಆದರೆ ಈ ಸಂದೇಶ ನೀಡಿದ ಶತಮಾನದ ನಂತರವೂ ನಾವು ಮಾನವತೆಯ ನೆಲೆಗಳಿಗಾಗಿ ಶೋಧ ನಡೆಸುತ್ತಿದ್ದೇವೆ. ಯುವಮನಸ್ಸುಗಳಲ್ಲಿ ಜಾತಿ ದ್ವೇಷ, ಕೋಮು ದ್ವೇಷ, ಮತಾಂಧತೆ ಮತ್ತು ಸ್ವಾರ್ಥಪರತೆಯನ್ನು ಬಿತ್ತುತ್ತಲೇ ತಮ್ಮ ಅಧಿಕಾರ ಪೀಠಗಳನ್ನು ಸಂರಕ್ಷಿಸುತ್ತಿರುವ ರಾಜಕೀಯ ನಾಯಕತ್ವ ಯುವ ಪೀಳಿಗೆಯನ್ನು ಅಕ್ಷರಶಃ ಚುನಾವಣಾ ಬಂಡವಾಳದ ಉತ್ಪಾದನೆಗೆ ಕಚ್ಚಾವಸ್ತುಗಳನ್ನಾಗಿ ಮಾಡಿಬಿಟ್ಟಿದೆ. ಹಿಂದೂ ಧರ್ಮದ ಪುನರುತ್ಥಾನವನ್ನು ವಿವೇಕಾನಂದರ ಸಂದೇಶಗಳಲ್ಲಿ ಕಾಣುವ ಮುನ್ನ ಇತ್ತೀಚೆಗೆ ನಡೆದ ಧರ್ಮ ಸಂಸತ್ತಿನ ವೇದಿಕೆಯಲ್ಲಿ ವಿವೇಕರನ್ನು ಇಟ್ಟು ನೋಡಲು ಸಾಧ್ಯವೇ ಎಂದು ಯೋಚಿಸಬೇಕಿದೆ. ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಮುಸಲ್ಮಾನರ ಸಾಮೂಹಿಕ ನರಮೇಧಕ್ಕೆ ಕರೆ ನೀಡಿರುವುದನ್ನು ಯುವಕರಿಗೆ ಹೇಗೆ ತಲುಪಿಸಬೇಕು? ಬುಲ್ಲಿ ಬಾಯ್ಸೆ, ಸುಲ್ಲಿ ಡೀಲ್ಸ್, ಲಿಬರಲ್ ಡೋಗೆ ಮುಂತಾದ ಜಾಲತಾಣಗಳಲ್ಲಿ ಮುಸ್ಲಿಮ್ ಮಹಿಳೆಯರನ್ನು ಹರಾಜು ಹಾಕುವ ವಿಚ್ಛಿದ್ರಕಾರಕ ಮನಸ್ಸುಗಳು ಇಂದಿನ ಯುವ ಪೀಳಿಗೆಯೇ ಆಗಿದೆಯಲ್ಲವೇ? ಬಂಧನಕ್ಕೊಳಗಾದ ನಾಲ್ಕೈದು ಯುವಕರನ್ನು ದೂಷಿಸುತ್ತಾ, ಅವರನ್ನು ಸಮಾಜಘಾತುಕರ ಪಟ್ಟಿಗೆ ಸೇರಿಸುವ ಮುನ್ನ, ಈ ಪೀಳಿಗೆಯಲ್ಲಿ ಇಂತಹ ವಿಧ್ವಂಸಕ ಮನಸ್ಥಿತಿಯನ್ನು ಬಿತ್ತಲು ಕಾರಣರಾದವರತ್ತ ಒಮ್ಮೆ ನೋಡಬೇಕಲ್ಲವೇ? ಮತೀಯ ದ್ವೇಷ ಮನುಷ್ಯನನ್ನು ಕ್ರೂರ ಮೃಗಗಳಿಗಿಂತಲೂ ಹೀನಾಯವಾದ ಪರಿಸ್ಥಿತಿಗೆ ದೂಡುತ್ತದೆ ಎಂದು ನಿರೂಪಿಸಲು ಇದಕ್ಕಿಂತಲೂ ಉತ್ತಮ ನಿದರ್ಶನ ಬೇಕಿಲ್ಲ.

ಆದರೆ ಈ ಯುವ ಪೀಳಿಗೆ ಏಕೆ ಹೀಗಾಗಿದೆ? ರಾಜಕೀಯ ಪರಿಭಾಷೆಯಲ್ಲಿ ‘‘ಯುವ ರಾಜಕಾರಣ ’’ವನ್ನೇ ಪ್ರತಿನಿಧಿಸುವ ನಾಯಕರು ಇಂದು ‘‘ಗುಂಡಿಟ್ಟು ಕೊಲ್ಲಿ’’ ಎನ್ನುವ ಸಂದೇಶವನ್ನು ನಿರ್ಭಿಡೆಯಿಂದ ರವಾನೆ ಮಾಡುತ್ತಲೇ ಇದ್ದಾರೆ. ದಿಲ್ಲಿಯ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಅವರಿಂದ ಕರ್ನಾಟಕದ ಯತ್ನಾಳ್, ಸಿ.ಟಿ.ರವಿ ಅವರವರೆಗೆ ಗುಂಡಿಟ್ಟು ಕೊಲ್ಲುವ ಪರಂಪರೆಗೆ ತಾತ್ವಿಕ ಭೂಮಿಕೆಯನ್ನು ಒದಗಿಸಲಾಗುತ್ತಿದೆ. ಧರ್ಮ ಸಂಸತ್ತಿನಲ್ಲಿ ಸಾಮೂಹಿಕ ನರಮೇಧಕ್ಕೆ ನೀಡುವ ಕರೆಗೆ ಕನಿಷ್ಠ ಪ್ರತಿಕ್ರಿಯಿಸಬೇಕಾದ ದೇಶದ ಪ್ರಧಾನಿ ದಿವ್ಯ ಮೌನ ವಹಿಸುತ್ತಾರೆ. ಇನ್ನು ಈ ರಾಜಕೀಯ ನಾಯಕರ ಹೇಳಿಕೆಗಳು ಸ್ವಾಭಾವಿಕ ಎನಿಸುವಷ್ಟು ಮಟ್ಟಿಗೆ ಸಾರ್ವತ್ರೀಕರಣಕ್ಕೊಳಗಾಗಿಬಿಟ್ಟಿದೆ. ಉಡುಪಿ, ಮಂಗಳೂರಿನಲ್ಲಿ ಯುವ ಪೀಳಿಗೆಯ ಕೈಗೆ ತ್ರಿಶೂಲ, ಲಾಂಗು, ಮಚ್ಚುಗಳನ್ನು ದೀಕ್ಷೆಯ ರೂಪದಲ್ಲಿ ನೀಡುವುದನ್ನು ‘‘ ಕ್ರಿಯೆ ಪ್ರತಿಕ್ರಿಯೆ ’’ ಪ್ರಮೇಯದೊಂದಿಗೆ ಸಹಿಸಿಕೊಳ್ಳುವ ಒಂದು ಆಡಳಿತ ವ್ಯವಸ್ಥೆ ‘‘ಯುವ ಪೀಳಿಗೆಯೇ ಭವಿಷ್ಯದ ಮಾನವ ಕುಲ’’ ಎಂಬ ವಿವೇಕ ವಾಣಿಯನ್ನು ಹೇಗೆ ಅರ್ಥಮಾಡಿಕೊಳ್ಳುತ್ತದೆ?

ಭಾರತದ ಯುವ ಪೀಳಿಗೆ, ಶತಮಾನದ ಪೀಳಿಗೆ ಇಂದು ಯಾವ ಹಾದಿಯಲ್ಲಿ ಸಾಗಬೇಕು? ಸಮ ಸಮಾಜದ ಕನಸಿನೊಂದಿಗೆ, ಸಮಾನತೆಯ ಆಶಯದೊಂದಿಗೆ, ಭ್ರಾತೃತ್ವ ಮತ್ತು ಸೌಹಾರ್ದದ ಭರವಸೆಯ ಕಿರಣಗಳನ್ನು ಹಿಂಬಾಲಿಸಿ ನಡೆಯಬೇಕಾದ ಯುವ ಜನತೆಗೆ ಇಂದು ಅಸಮಾನತೆಯೇ ತಾಂಡವಾಡುತ್ತಿರುವ ಅರ್ಥವ್ಯವಸ್ಥೆ ಎದುರಾಗಿದೆ. ವಿವೇಕರಿಗೆ 19ನೇಯ ಶತಮಾನದಲ್ಲಿ ಕಂಡ ‘‘ ಅವಿವೇಕಿಗಳ ಆಶ್ರಯತಾಣ ’’ ಇಂದು ಕರ್ನಾಟಕದ ಕೊಪ್ಪಳದಲ್ಲಿ ಕಾಣುತ್ತಿದೆ. ಹಲ್ಲೆಗೊಳಗಾಗುತ್ತಿರುವ ಕೊರಗ ಸಮುದಾಯದ ಬವಣೆಯಲ್ಲಿ ಕಾಣುತ್ತಿದೆ. ‘‘ಭವಿಷ್ಯದಲ್ಲಿನ ನನ್ನ ಭರವಸೆ ಯುವ ಪೀಳಿಗೆಯ ಬೌದ್ಧಿಕ ಶಕ್ತಿ ಮತ್ತು ಲಕ್ಷಣಗಳಲ್ಲಿ ಅಡಗಿದೆ, ತಮ್ಮ ಅಂತಃಶಕ್ತಿಗೆ ಬದ್ಧರಾಗಿರುವ ಮೂಲಕ ಯುವ ಪೀಳಿಗೆ ದೇಶದ ಒಳಿತಿಗಾಗಿ ಬದ್ಧತೆ ಪ್ರದರ್ಶಿಸಬೇಕಿದೆ’’ ಎಂಬ ವಿವೇಕಾನಂದರ ಸಂದೇಶವನ್ನು ಮತಾಂಧತೆಗೆ, ಮತೀಯ ದ್ವೇಷಕ್ಕೆ, ಜಾತಿ ಶ್ರೇಷ್ಠತೆ ಮತ್ತು ಅಸ್ಪೃಶ್ಯತೆಯ ಆಚರಣೆಗೆ ಬದ್ಧರಾಗುತ್ತಿರುವ ಯುವ ಪೀಳಿಗೆಗೆ ಹೇಗೆ ತಲುಪಿಸುವುದು? ನಿತ್ಯ ಅತ್ಯಾಚಾರಕ್ಕೊಳಗಾಗುತ್ತಿರುವ ಹರೆಯದ ಯುವತಿಯರು, ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗುವ ಸ್ವಾತಂತ್ರವನ್ನೂ ಕಳೆದುಕೊಂಡು ಗೌರವಹತ್ಯೆಯ ಹೆಸರಿನಲ್ಲಿ, ಲವ್ ಜಿಹಾದ್ ಹೆಸರಿನಲ್ಲಿ ಹತ್ಯೆಗೀಡಾಗುತ್ತಿರುವ ಮಹಿಳೆಯರು, ಮತೀಯ ರಾಜಕಾರಣಕ್ಕೆ ಬಲಿಯಾಗುತ್ತಿರುವ ಕೇರಳದ ವಿದ್ಯಾರ್ಥಿ ಸಮುದಾಯದ ಯುವಕರು ಈ ಬೃಹತ್ ಸಮೂಹಕ್ಕೆ ವಿವೇಕಾನಂದರನ್ನು ಹೇಗೆ ತಲುಪಿಸುವುದು? ‘‘ಎಂದಿಗೂ ದುರ್ಬಲರಾಗಬೇಡಿ, ಬಲಿಷ್ಠರಾಗಿ, ನಿಮ್ಮ್ಮೆಳಗೆ ಅಪಾರ ಶಕ್ತಿ ಅಡಗಿದೆ, ನಿಮ್ಮ ಭವಿಷ್ಯವನ್ನು ನೀವೇ ನಿರ್ಧರಿಸುತ್ತೀರಿ’’ ಎಂದು ವಿವೇಕಾನಂದರು ಹೇಳುತ್ತಾರೆ. ಬಲಿಷ್ಠರಾಗುವುದು, ಆತ್ಮಬಲ ವೃದ್ಧಿಸಿಕೊಳ್ಳುವುದು ಎಂದರೆ ಏನರ್ಥ? ಅನ್ಯ ಮತ ದ್ವೇಷಕ್ಕೆ ಬಲಿಯಾಗಿ ಲಾಂಗು, ಮಚ್ಚು, ತ್ರಿಶೂಲಗಳನ್ನು ಹಿಡಿದು ಸಾಮೂಹಿಕ ನರಮೇಧಕ್ಕೆ ಸಿದ್ಧರಾಗುವುದೇ?

ವಿವೇಕಾನಂದರು ಈ ‘‘ಬಲ’’ವನ್ನು ಕುರಿತು ಹೇಳಿದ್ದರೇ? ತಮ್ಮದೇ ಸಮುದಾಯಕ್ಕೆ ಸೇರಿದ ಅಪ್ರಾಪ್ತ ವಯಸ್ಕ ಯುವತಿ ತಮ್ಮವರಿಂದಲೇ ಅತ್ಯಾಚಾರಕ್ಕೊಳಗಾದಾಗ, ಹತ್ಯೆಗೀಡಾದಾಗ ವಿಚಲಿತವಾಗದ ಯುವ ಮನಸ್ಸುಗಳು, ಅದೇ ಯುವತಿ ಮತ್ತೊಂದು ಮತಕ್ಕೆ ಸೇರಿದ ಯುವಕನೊಡನೆ ಓಡಾಡಿದರೆ ವ್ಯಗ್ರವಾಗುವುದಾದರೂ ಏಕೆ? ಇಂತಹ ಯುವತಿಯರ ಮೇಲೆ ನಡುರಸ್ತೆಯಲ್ಲೇ ದಾಳಿ ನಡೆಸಲು, ಹತ್ಯೆ ಮಾಡಲು, ಥಳಿಸಲು ಪ್ರೇರೇಪಣೆ ನೀಡುವ ಚಿಂತನಾ ವಾಹಿನಿಯಾದರೂ ಯಾವುದು? ಈ ಚಿಂತನಾ ವಾಹಿನಿಗಳನ್ನು ಪೋಷಿಸಿ, ಸಂರಕ್ಷಿಸಿ, ಬೆಳೆಸುವ ವಿಚ್ಛಿದ್ರಕಾರಿ ಶಕ್ತಿಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಂಡವಾಳದಂತೆ ಬಳಸಿಕೊಳ್ಳುವ ರಾಜಕೀಯ ಪಕ್ಷಗಳು ಯುವ ಜನೋತ್ಸವದಲ್ಲಿ ಯಾವ ಸಂದೇಶ ನೀಡಲು ಸಾಧ್ಯ?

ಬಡತನ, ಹಸಿವು, ಅನಿಶ್ಚಿತ ಭವಿಷ್ಯ, ಸಾಮಾಜಿಕಾರ್ಥಿಕ ಅಭದ್ರತೆ ಇವುಗಳ ನಡುವೆಯೇ ಯುವ ಪೀಳಿಗೆಯನ್ನು ಸಲಹುತ್ತಿರುವ ಒಂದು ಕ್ರೂರ ಆಡಳಿತ ವ್ಯವಸ್ಥೆ, ಈ ಯುವ ಸಮೂಹದ ಭವಿಷ್ಯತ್ತಿಗೆ ಆಶಾದಾಯಕವಾದ ಮಾರ್ಗಗಳನ್ನು ರೂಪಿಸುವ ಸಾಂಸ್ಕೃತಿಕ ನೆಲೆಗಳನ್ನೂ ತನ್ನ ಮತೀಯ ದ್ವೇಷದ ಬೀಜ ಬಿತ್ತನೆ ಮೂಲಕ ಮಲಿನಗೊಳಿಸುತ್ತಿದೆ. ವಿವೇಕಾನಂದರ ಜನ್ಮದಿನಾಚರಣೆಯನ್ನು ಯುವ ಜನೋತ್ಸವ ಎಂದು ಆಚರಿಸುವ ಮುನ್ನ ಈ ಆತ್ಮಾವಲೋಕನ ಅವಶ್ಯ ಎನಿಸುವುದಿಲ್ಲವೇ? ಯಾವ ಯುವಪೀಳಿಗೆಗಾಗಿ ಈ ಆಚರಣೆ? ಹರಿದ್ವಾರದ ಧರ್ಮ ಸಂಸತ್ತಿನಲ್ಲಿ ನೆರೆದಿದ್ದ ಯುವಸ್ತೋಮಕ್ಕೋ ಅಥವಾ ತ್ರಿಶೂಲ ದೀಕ್ಷೆ ಪಡೆದ ಯುವ ಪಡೆಗಳಿಗೋ? ಅಥವಾ ಹಸಿವು, ನಿರುದ್ಯೋಗದ ಅನಿಶ್ಚಿತತೆಯ ತೂಗುಗತ್ತಿಯ ಕೆಳಗೆ ಜೀವನ ಸವೆಸುತ್ತಿರುವ ಭಾರತದ ಕೋಟ್ಯಂತರ ಯುವ ಜನತೆಗೋ?. ವಿವೇಕ ಮತ್ತು ವಿವೇಚನೆ ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆಯಲ್ಲಿ ಈ ಆತ್ಮಾವಲೋಕನ ಸಾಧ್ಯವಾಗದೆ ಹೋದರೆ ವಿವೇಕಾನಂದರನ್ನು ಸ್ಮರಿಸದೆ ಇರುವುದೇ ಒಳಿತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top