ಕೋರೆಗಾಂವ್ ಕದನ-ಪೇಶ್ವೆಗಳ ಪತನ: ದೇಶದ್ರೋಹಿಗಳು ಯಾರು? | Vartha Bharati- ವಾರ್ತಾ ಭಾರತಿ

--

ಕೋರೆಗಾಂವ್ ಕದನ-ಪೇಶ್ವೆಗಳ ಪತನ: ದೇಶದ್ರೋಹಿಗಳು ಯಾರು?

ಆಧುನಿಕ ಪರಿಭಾಷೆಯಲ್ಲಿ ಸ್ವಾತಂತ್ರ, ಸಮಾನತೆ, ಬಂಧುತ್ವಗಳು ಫ್ರೆಂಚ್ ಕ್ರಾಂತಿಯ ಹೊಸ ಪರಿಭಾಷೆಗಳು ಎಂದು ಪರಿಭಾವಿಸುವುದು ಇಂದಿನ ಲೋಕರೂಢಿ ಯಾದರೂ ಇದರ ಬೇರುಗಳು ಶ್ರಮಿಕ ಮೂಲ ನಿವಾಸಿಗಳ ಬುಡಗಟ್ಟು ಪರಂಪರೆಯಲ್ಲಿ ಸಾಂಸ್ಕೃತಿಕವಾಗಿ ಹರಡಿಕೊಂಡಿದೆ. ಅದು ಕೆಲವೆಡೆ ಇಂದಿಗೂ ಸ್ವಾತಂತ್ರ ಸಮಾನತೆ-ಬಂಧುತ್ವದ ಪರಿಕಲ್ಪನೆಯಲ್ಲೇ ತನ್ನ ಆಚಾರ ವಿಚಾರಗಳಿಂದ ತಮ್ಮದಾದ ಅನನ್ಯತೆಯ ಸಂಸ್ಕೃತಿಯನ್ನು ಬೆಸೆಯುತ್ತಲೇ ಇದೆ. ಅಲ್ಲಿ ತಮ್ಮ ಮಾನವ ಘನತೆಗೆ ಧಕ್ಕೆ ಬರುವ ಸ್ವಾತಂತ್ರದ ರಕ್ಷಣೆಯ ಮೌಲ್ಯವಾಗುತ್ತದೆ. ಅವರಿಗೆ ತಮ್ಮ ರಕ್ಷಣೆಗೆ ತಾವು ಸಿದ್ಧರಾಗುವುದು ಬದ್ಧರಾಗುವುದು ಕರ್ತವ್ಯ ಎಂದಾಗುತ್ತದೆ. ಆಗ ಒಂದು ಸಂಸ್ಕೃತಿ ಇನ್ನೊಂದು ಸಂಸ್ಕೃತಿಗೆ ಕೀಳು ಅಲ್ಲಾ, ಮೇಲೂ ಅಲ್ಲ ಎಂಬ ವಿಚಾರವೇ ವಿವೇಕವಾಗುತ್ತದೆ. ಇಂತಹ ಒಂದು ಸ್ವಾತಂತ್ರದ ಒಳಗುದಿ ಕೋರೆಗಾಂವ್ ಕದನದ ಗರ್ಭದಲ್ಲಿ ಅಡಗಿದೆ.

‘ಕೋರೆಗಾಂವ್’ ಇದು ಮಹಾರಾಷ್ಟ್ರಾಂತರ್ಗತ ಪುಣೆ ಪರಿಸರದ ಒಂದು ಪ್ರದೇಶ, ಪುಣೆಯ ಶನಿವಾರವಾಡದ ನಿವಾಸಿಗಳಾದ ಪೇಶ್ವೆಶಾಹಿಗಳ ಕೊನೆಯ ಪ್ರಭು ಎರಡನೆಯ ಬಾಜಿರಾಯನಿಗೂ, ಬ್ರಿಟಿಷರಿಗೂ ನಡೆದ ನಿರ್ಣಾಯಕ ಕದನದಲ್ಲಿ ಬಾಜಿರಾಯನ ಪೇಶ್ವೆಶಾಹಿ ಪತನಗೊಂಡು, ಅಲ್ಲಿ ಬ್ರಿಟಿಷರ ಬಾವುಟ ‘ಯೂನಿಯನ್ ಜ್ಯಾಕ್’ ಹಾರಾಡಿದ್ದು 1817ರಲ್ಲಿ.

ಅಂದು ನೇರವಾಗಿ ರಾಜಕೀಯ ಕಾದಾಟ ನಡೆದದ್ದು ಪುಣೆಯ ಸಾಮಂತ ಶಾಹಿ ಪೇಶ್ವೆಗಳಿಗೂ ಮತ್ತು ವಿದೇಶಿ ವಸಾಹತುಶಾಹಿ ಬ್ರಿಟಿಷರಿಗೂ, ಆದರೆ ಅಂದು ಬಿಡುಗಡೆಯ ನಿಟ್ಟುಸಿರು ಬಿಟ್ಟವರು ಮಾತ್ರ ಅಂದಿನ ಕದನ ಕಲಿಗಳಾದ ದಲಿತರು. ಅವರು ಬ್ರಿಟಿಷರ ಸೈನ್ಯದಲ್ಲಿದ್ದು ಶನಿವಾರವಾಡದ ಮನುವಾದಿ ರಾಜಕಾರಣಕ್ಕೆ ಗತಿ ಕಾಣಿಸಿದ ವೀರ ಯೋಧರು!

ಇಲ್ಲೇ ಒಂದು ಮಹತ್ವದ ಚರ್ಚೆ ತೆರೆದುಕೊಳ್ಳುತ್ತದೆ. ಇಲ್ಲಿಂದ ಕದನದಲ್ಲಿ ದೇಶದ್ರೋಹಿಗಳು ಯಾರು? ಪುಣೆಯ ಮೂಲ ನಿವಾಸಿಗಳನ್ನು ಬಗ್ಗು ಬಡಿದು ಅವರ ಮಾನವ ಘನತೆಯನ್ನೇ ವಿಧ್ವಂಸಗೊಳಿಸಿದ ಮೂಲತಃ ವಲಸಿಗರಾದ ಪೇಶ್ವ್ವೆಗಳೆ? ಅಥವಾ ಪ್ರಪಂಚವನ್ನೇ ಸರಕು ಸಂಸ್ಕೃತಿಗೆ ದಬ್ಬಿದ ಬ್ರಿಟಿಷ್ ವಸಾಹತುಶಾಹಿಗಳೆ? ಅಥವಾ ಸ್ವದೇಶಿ ಪೇಶ್ವೆಗಳಿಗೆ ಸಡ್ಡು ಹೊಡೆದು ಬ್ರಿಟಿಷರಿಗೆ ಬಲವಾಗಿ ನಿಂತು ತಮ್ಮ ಬಿಡುಗಡೆಯ ದಾರಿ ಹುಡುಕಿದ ದಲಿತರೇ?

ಸ್ಥಳೀಯ ದಲಿತರ ದೀರ್ಘಕಾಲೀನ ಸ್ವಾತಂತ್ರದ ತುಡಿತವೊಂದು ಅಭಿವ್ಯಕ್ತಗೊಂಡು ‘ದೇಶಿ-ವಿದೇಶಿ’ ರಾಜಕೀಯ ಭಾವುಕತೆಯನ್ನು ಧಿಕ್ಕರಿಸಿ ವೈಚಾರಿಕತೆಯ ಕಾವು ನೀಡಿದ ಒಂದು ಮಹತ್ವದ ಚಾರಿತ್ರಿಕ ಘಟನೆಯೇ ಕೋರೆಗಾಂವ್ ಕದನ. ಇದರ ಹಿನ್ನೆಲೆ ಮತ್ತು ಮುನ್ನೆಲೆಗಳ ಹಲವು ಚಾರಿತ್ರಿಕ ಕಂಪನಗಳಿಗೆ ಕಾರಣವಾಯಿತು.

ಇದೇ ಮುಂದೆ ಕ್ರಾಂತಿ ಜ್ಯೋತಿಗಳಾದ ಜ್ಯೋತಿಬಾ ಫುಲೆ (1827-1890) ಮತ್ತು ಸಾವಿತ್ರಿಬಾಯಿ ಫುಲೆ (1831-1897) ಇವರಿಗೆ ಅರಿವಿನ ದೀವಿಗೆಯಾಯಿತು. ಅಲ್ಲಿಂದಲೇ ಸ್ವಾತಂತ್ರದ ಬೆಳಕು-ಬೆರಗೂ ಜೊತೆಯಾಗಿ ಕೃಷಿ ಮೂಲದ ಬಲಿರಾಯನನ್ನೂ, ಶ್ರಮ ಮೂಲದ ಶಿವರಾಯನನ್ನೂ, ಸ್ವಾತಂತ್ರ ಪ್ರೇಮದ ತುಕಾರಾಮನನ್ನೂ ಶೋಧಿಸಿ ಲೋಕ ಮುಖಕ್ಕೆ ಪರಿಚಯಿಸುವ ಚಾರಿತ್ರಿಕ ವಿನ್ಯಾಸವಾಗತೊಡಗಿತು.

ಹಾಗೆ ನೋಡಿದರೆ ಚಿತ್ಪಾವನ ಬ್ರಾಹ್ಮಣರೆಂದು ಕರೆಸಿಕೊಳ್ಳುವ ಪೇಶ್ವೆಗಳು ಮೂಲತಃ ಗ್ರೀಕರಾಗಿದ್ದು ಅವರು ಈಜಿಪ್‌ನಲ್ಲಿ ಗ್ರೀಕ್ ವಸಾಹತುಗಳ ಮೇಲ್ವಿಚಾರಕರಾಗಿದ್ದ ‘ಮೂರ್ತಿ’ ಪೂಜಕರು. ಮಾತೃ ಶಕ್ತಿಯ ಆರಾಧಕರು. ಈಜಿಪ್ಟಿನ ಮತೀಯ ರಾಜಕೀಯದಲ್ಲಿ ‘ಇಸ್ಲಾಂ’ ಪ್ರಬಲವಾದಾಗ ಅಲ್ಲಿಯ ಮತೀಯ ಹಲ್ಲೆಗೆ ಕಂಗೆಟ್ಟು ದಿಕ್ಕು ಕಾಣದ ಭಾರತದ ಪಶ್ಚಿಮ ಕರಾವಳಿಯ ಹರ್ನಾಯಿ, ದಾಬೋಲಿ, ಲದಫರ್ ತೀರಕ್ಕೆ ಬಂದು ಸೇರಿದ 58 ಕುಟುಂಬಗಳು ಮುಂದೆ ಶಿವಾರಾಧಕವಾಗಿ ಶೈವರಾದರತ್ತ ಪ್ರತಾಪ ವಿ. ಜೋಶಿ ಅವರು ಬೆಳಕು ಚೆಲ್ಲಿದ್ದಾರೆ. ಹಾಗಿರುವಾಗ ಈ ವಿದೇಶಿಗಳು ಸ್ವದೇಶಿಯರಾದ ಶೂದ್ರಾತಿಶೂದ್ರರನ್ನು ನಡೆಸಿಕೊಂಡ ಅಸ್ಪೃಶ್ಯತೆಯ ಪೇಶ್ವೆಶಾಹಿ ಚರಿತ್ರೆಗೆ ಕೋರೆಗಾಂವ್ ಕದನ ಕೊನೆ ಹಾಡಿದ್ದರಲ್ಲಿ ತಪ್ಪೇನಿದೆ?

ಎರಡನೇ ಬಾಜಿರಾಯನ ವಿಲಾಸಿ ಬದುಕು ಕೇವಲ ಶೂದ್ರಾತಿಶೂದ್ರರಿಗೆ ಮಾರಕವಾಗಿದ್ದುದು ಮಾತ್ರವಲ್ಲ ಬ್ರಾಹ್ಮಣ ಸ್ತ್ರೀಯರೂ ಆತನ ಖಯಾಲಿಗೆ ನಿತ್ಯ ಬಲಿಯಾದದ್ದರ ದಾರುಣ ಚರಿತ್ರೆಯಿದ್ದರೂ ಆತ ಹೇಗೆ ರಾಜ್ಯವಾಳಿದ ಎಂಬ ಸೋಜಿಗದ ಚಿತ್ರಣ ಮುಂದಿದೆ.

‘‘ಬಾಜಿರಾಯನ ರೀತಿ ನೀತಿಗಳು ದುಷ್ಟತೆಯಿಂದ ಕೂಡಿದ್ದು ಆತ ರಾಜ್ಯತ್ವಕ್ಕೆ ತೀರಾ ಅಯೋಗ್ಯನಾಗಿದ್ದ, ಆದ್ದರಿಂದ ಜನ ದಂಗೆ ಎದ್ದು ಅವನನ್ನು ಕೊಲ್ಲುತ್ತಿದ್ದರು. ಆದರೆ ಆತ ಬ್ರಾಹ್ಮಣ ಭೋಜನ, ದಾನ ಮತ್ತು ತನ್ನ ಜಾತಿ ಬಾಂಧವರನ್ನು ಸಂತೋಷಪಡಿಸಿದ್ದರಿಂದ ಬಹಳಷ್ಟು ವರ್ಷ ಆತ ರಾಜ್ಯವಾಳಿದ. ಇಲ್ಲವಾದರೆ ಯಾವತ್ತೋ ಆತ ಪದಭ್ರಷ್ಟನಾಗುತ್ತಿದ್ದ. ಬ್ರಾಹ್ಮಣರಲ್ಲದೆ ಬೇರಾರೂ ಅವನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಯಾರು ತಮ್ಮ ತಾಯಿಯ, ಸೋದರಿಯರ, ಸ್ತ್ರೀಯರ ಮಾನ ಮಾರಿ ಹಣ ಪಡೆದರೂ, ಅವರು ಇದು ತನ್ನ ಸಧ್ಭಾಗ್ಯ ಎಂದು ಹೇಳುತ್ತಿದ್ದರು.’’ ಮೇಲಿನ ವಿವೇಚನೆಯಲ್ಲಿ ಮೇಲ್ವರ್ಗದ ಜನ ತಮ್ಮ ಅಧಿಕಾರ ಉಳಿಸಲು ಪೇಶ್ವ್ವೆಗಳೊಡನೆ ನಡೆಸಿದ ಅಪವಿತ್ರ ಸಂಧಾನಗಳ ಸ್ಪಷ್ಟ ಸುಳಿವು ದೊರೆಯುತ್ತದೆ. ಆದರೆ ಅದೇ ಮೇಲ್ವರ್ಗ ಶೂದ್ರಾತಿಶೂದ್ರರನ್ನು ನಿರಂತರ ಹಿಂಸಿಸುತ್ತ ಅಮಾನವೀಯತೆಗೆ ಪ್ರತಿಕಾರದ ಧ್ವನಿಗಳೂ ದಲಿತರ ನಿಲುವಿನಲ್ಲಿದೆ. ಅವರು ಬ್ರಿಟಿಷರ ಸೈನ್ಯದಲ್ಲಿ ಸೇರಿ ಪೇಶ್ವಶಾಹಿಯನ್ನು ಬಗ್ಗು ಬಡಿದ ಕದನ ತಂತ್ರದಲ್ಲಿ ಇದು ನಿಶ್ಚಲವಾಗಿ ಗೋಚರಿಸುತ್ತದೆ.

ಪೇಶ್ವೆಗಳ ಪತನದ ಕಾರಣವನ್ನು ‘ಲೋಕಹಿತವಾದಿ’ ಅಂಕಣ ಖ್ಯಾತಿಯ ಸರದಾರ್ ಗೋಪಾಲ ಹರಿ ದೇಶ್‌ಮುಖ್ ಹೀಗೆ ದಾಖಲಿಸುತ್ತಾರೆ (1) ಬ್ರಾಹ್ಮಣರು ಯಾರ ಮಾತನ್ನೂ ಕೇಳುತ್ತಿರಲಿಲ್ಲ. (2) ಗರ್ವಿಷ್ಠರಾದ ಬ್ರಾಹ್ಮಣರು ಎಲ್ಲರನ್ನೂ ತುಚ್ಛರೆಂದು ಭಾವಿಸುತ್ತಾ ನಮಗಿಂತ ಬುದ್ಧಿವಂತರು ಯಾರಿದ್ದಾರೆ? ಎಂದರು. (3) ದೇವ-ಬ್ರಾಹ್ಮಣರ ನಿಕಟ ಸಂಬಂಧವಿದೆ. ಆದ್ದರಿಂದ ನಮ್ಮನ್ನು ದೇವರು ರಕ್ಷಿಸುತ್ತಾರೆ. ಎಂದು ಹೇಳುತ್ತಾ ಅವರು ವಿಲಕ್ಷಣವಾಗಿ ನಡೆಯುತ್ತಿದ್ದರು. (4) ಬ್ರಾಹ್ಮಣರಿಗೆ ಇತರ ವರ್ಣದವರ ಬಗ್ಗೆ ದ್ವೇಷವಿತ್ತು. (5) ಬ್ರಾಹ್ಮಣರು ಅನುಸಂಧಾನಕ್ಕೆ ಸಿದ್ಧರಿಲ್ಲ. (6) ಬ್ರಾಹ್ಮಣರ ಸ್ನಾನ ಸಂಧ್ಯಾತಿಗಳಿಂದ ರಾಜಕೀಯ ಕರ್ತವ್ಯ ಮತ್ತು ಪರಾಕ್ರಮ ಎರಡೂ ದೆಸೆಗೆಟ್ಟಿತು. (7) ಬ್ರಾಹ್ಮಣರ ತೊಂದರೆಗಳು ಅನೇಕ, ಆದ್ದರಿಂದ ಪ್ರವಾಸದಲ್ಲಿ ಅವರ ಕರ್ತವ್ಯಕ್ಕೆ ಧಕ್ಕೆಯಾಗುತ್ತಿತ್ತು. (8) ಬ್ರಾಹ್ಮಣರ ಒಲವು ನಿಲುವುಗಳು ಬಹಳ. (9) ಬ್ರಾಹ್ಮಣರು ತಮ್ಮವರನ್ನು ದ್ವೇಷಿಸುತ್ತಾರೆ; ಆದರೆ ಪರಕೀಯರ ಗುಲಾಮರಾಗುತ್ತಾರೆ. (10) ಬ್ರಾಹ್ಮಣರು ಸ್ವಾರ್ಥಕ್ಕೆ ಹೆಚ್ಚು ಗಮನ ಹರಿಸಿ ಇತರರಿಗೆ ತೊಂದರೆ ಕೊಡುತ್ತಾರೆ. (11) ‘ನಾವು ಬ್ರಾಹ್ಮಣರಾಗಿದ್ದೇವೆ. ನಮಗೆ ಯಾರಾದರೂ ಏನಾದರೂ ಮಾಡಿದರೆ ಅದು ಅಧರ್ಮ’ ಎಂದು ಬ್ರಾಹ್ಮಣರು ತಿಳಿಯುತ್ತಾರೆ.

ಈ ಬಗೆಯ ಕೂಪ ಮಂಡೂಕತ್ವವೇ ಪೇಶ್ವಶಾಹಿಯ ಪತನಕ್ಕೆ ಕಾರಣವೆಂದು ಲೋಕ ಹಿತವಾದಿ ಹೇಳಿದರೆ ನಾರಾಯಣ ವಿಷ್ಣು ಜೋಶಿಯವರು ‘‘ಜ್ಯೋತಿಷ್ಯ, ಮುಹೂರ್ತ, ಶುಭಾಶುಭ, ಶಕುನಾಪಶಕುನ, ವ್ರತ-ವೈಕಲ್ಯ, ನೇಮ ದಾನಧರ್ಮ ಇತ್ಯಾದಿ’’ ಭ್ರಮೆಗಳೇ ಅವರ ಪತನಕ್ಕೆ ಕಾರಣವೆಂದು ಹೇಳುತ್ತಾರೆ. ಮೇಲಿನ ವಿವೇಚನೆಗಳಲ್ಲಿ ಪೇಶ್ವೆಗಳ ಬ್ರಾಹ್ಮಣ್ಯದ ಪಾವಿತ್ರ್ಯತೆ ಮತ್ತು ಅದಕ್ಕೆ ಬೆಂಬಲವಾದ ಜಮೀನ್ದಾರಿ ಮೇಲ್ವರ್ಗದ ಬ್ರಾಹ್ಮಣ್ಯದ ನೀತಿ ಹಾಗೂ ಅಧಿಕಾರಶಾಹಿಯ ಬ್ರಾಹ್ಮಣ್ಯದ ರೀತಿಗಳು; ಮಾನವ ಘನತೆಯನ್ನೇ ಧಿಕ್ಕರಿಸಿದ ರಾಜಕೀಯ ವಿಪ್ಲವವಾಗಿ ಕೋರೆಗಾಂವ್ ಕದನ ಚರಿತ್ರೆಯಲ್ಲಿ ದಾಖಲಾಗುತ್ತದೆ. ಅದರ ಜೊತೆ ಶ್ರಮಿಕ-ಸಾಹಸಿ ದಲಿತರ ಬಂಡಾಯದ ನೆಲೆಗಳು ಸ್ಪಷ್ಟವಾಗುತ್ತದೆ.

ಎರಡನೇ ಬಾಜಿರಾಯ

ಪೇಶ್ವೆಗಳ ಪತನದ ಕುರಿತು ವಾಸುದೇವ ಖರೆ ಅವರ ವಿಶ್ಲೇಷಣೆಗೆ ಒಂದು ರಾಜಕೀಯ ಸಾಮಾಜಿಕ ಮಹತ್ವವಿದೆ. ಅವರೆನ್ನುವಂತೆ ‘‘ದೇಶಾಭಿಮಾನ ಶೂನ್ಯ. ಸಾಮೂಹಿಕ ಕೆಲಸಕ್ಕೆ ಅನರ್ಹ, ಸ್ವಾರ್ಥ ಸಾಧನೆಯ ಪ್ರವೃತ್ತಿ, ಆಲಸ್ಯ, ಹೆಳವತನ, ಇನ್ನೊಬ್ಬರ ಬಾವಿಯಲ್ಲಿ ನೀರು ಕುಡಿಯುವ ಪ್ರವೃತ್ತಿ ಇತ್ಯಾದಿಗಳಿಂದ ತುಂಬಿ ತುಳುಕುವ ಯಾವುದೇ ಪೌರಾತ್ಯ ರಾಷ್ಟ್ರಕ್ಕೆ, ಸುಧಾರಿತ ಪಾಶ್ಚಾತ್ಯ ರಾಷ್ಟ್ರದ ವಿರೋಧ ಪ್ರಾಪ್ತವಾದರೆ ಅದನ್ನು ತಡೆಯುವುದು ಅಸಾಧ್ಯ. ಹಿಂದೂಸ್ಥಾನವನ್ನು ಇಂಗ್ಲಿಷರು ಅಲ್ಲದಿದ್ದರೆ ಫ್ರೆಂಚರು ತೆಗೆದುಕೊಳ್ಳುತ್ತಿದ್ದರು.’’ ಅಬ್ಬಾ! ಛತ್ರಪತಿ ಶಿವಾಜಿಯ ಸ್ವಾತಂತ್ರದ ತುಡಿತ ಎಲ್ಲಿಂದ ಎಲ್ಲಿಗೆ ಮುಟ್ಟಿತು! ಹೀಗೇಕಾಯಿತು?

‘ಗತಿ’ ಶೂನ್ಯ ಮತ್ತು ‘ದಾರಿ’ ಶೂನ್ಯ ಪ್ರಭುತ್ವ ತನ್ನದೇ ವೈರುಧ್ಯಗಳಿಂದ ಹೇಗೆ ಪತನದ ಅಂಚಿಗೆ ಸರಿಯುತ್ತದೆ ಎನ್ನುವುದಕ್ಕೆ ಛತ್ರಪತಿ ಶಿವಾಜಿಯ ಚರಿತ್ರೆಗೇ ತಿರುಗಿ ಬಿದ್ದ ಪೇಶ್ವೆಗಳ ಚರಿತ್ರೆಯೆ ಜೀವಂತ ಸಾಕ್ಷಿಗಳಾಗಿವೆ. ಛತ್ರಪತಿ ಶಿವಾಜಿ ತನ್ನ ರಾಜಕೀಯ ಗತಿ ವಿಧಿಗಳಲ್ಲಿ ದಲಿತ ಮತ್ತು ಮತೀಯ ಅಲ್ಪಸಂಖ್ಯಾತರನ್ನು ಕಡೆಗಣಿಸದೆ ಅವರ ವಿಶ್ವಾಸ ಪಡೆದು ಅವರ ಒಳಿತಿಗಾಗಿ ಜಮೀನ್ದಾರಿ ಪದ್ಧತಿಯ ರದ್ದತಿಗೆ ಮನ ಮಾಡಿದ್ದೇ ಪರಂಪರೆಯ ಪ್ರಭುಗಳಿಗೆ ಮಹಾಪರಾಧವಾಯಿತು!

ಅದೇ ರೀತಿ ಟಿಪ್ಪು ಸುಲ್ತಾನನೂ ಜಮೀನ್ದಾರಿ ಪದ್ಧತಿಯ ರದ್ದತಿ ಮತ್ತು ಸ್ತ್ರೀ ಶಿಕ್ಷಣಕ್ಕೆ ಧ್ವನಿಯಾದದ್ದೇ ಪ್ರಭುತ್ವಕ್ಕೆ ನುಂಗಲಾರದ ತುತ್ತಾಯಿತು. ಇವೆರಡು ವ್ಯಕ್ತಿಗಳ ಬದುಕು ಮಣ್ಣಾಗುವ ಪಿತೂರಿಯನ್ನು ಅಧಿಕಾರಶಾಹಿ ಕೋಮುವಾದಿ ಶಕ್ತಿಗಳು ಯಾವ ಎಗ್ಗೂ ಇಲ್ಲದೆ ನಡೆಸಿತು. ಆದರೆ ಇಂತಹ ಸಹಜ ಚರಿತ್ರೆಯಿಂದ ಇಂದಿಗೂ ಜಾಗ್ರತರಾಗದ ನಾವು ಯಾವತ್ತೂ ವಸ್ತು ನಿಷ್ಠತೆಯಿಂದ ಗಾವುದ ಗಾವುದ ದೂರವಿದ್ದೇವೆ. ಮಾತ್ರವಲ್ಲ ಇಂದು ಶಿವಾಜಿಯನ್ನು ಕೇಸರೀಕರಣಕ್ಕೆ, ಟಿಪ್ಪುವನ್ನು ಇಸ್ಲಾಮೀಕರಣಕ್ಕೆ ಒಳಗಾಗಿಸಿದ್ದೇವೆ. ಇಲ್ಲಿ ಯಾರು ವಿದೇಶಿ? ಯಾರು ಸ್ವದೇಶಿ? ಎನ್ನುವ ಗೊಂದಲವೇ ಗೋಪುರವಾಗುತ್ತದೆ. ಇದು ನಿಲ್ಲುವುದೆಂದು?

ಶಿವಾಜಿ

ಹಾಗಾಗಿ ಅಧಿಕಾರಶಾಹಿಯು ಬಿತ್ತಿದ ಭಯ ಮತ್ತು ಭ್ರಮೆಯ ನಡುವೆ ಕೋರೆಗಾಂವ್ ಕದನದಲ್ಲಿ ದಲಿತರು ನಿರ್ವಹಿಸಿದ ಪಾತ್ರ ಇಂದು ನಮ್ಮ ಅಧ್ಯಯನಕ್ಕೆ ದಕ್ಕಬೇಕಾಗಿದೆ. ಜೊತೆಗೆ ಇಲ್ಲಿನ ಚರಿತ್ರೆಗಳಲ್ಲಿ ಸ್ವಾತಂತ್ರ, ಸಾಮಾಜಿಕ ನ್ಯಾಯ, ವೈಚಾರಿಕತೆ, ಸಮತೆ, ಲೋಕನಿಷ್ಠ ಇತ್ಯಾದಿ ಜನಪರ ನೆಲೆಗಳೆಷ್ಟು ಎನ್ನುವುದನ್ನು ವಿವೇಚಿಸಬೇಕಾಗಿದೆ. ಇದಕ್ಕೊಂದು ವಿವೇಚನಾರ್ಹ ದಾಖಲೆ ಇಂತಿದೆ :

‘‘ಮೊದಲಿಗೆ ಬಂದ ಮಿಶನರಿಗಳಿಗೆ ಸರಕಾರದ ಯಾವುದೇ ರೀತಿಯ ಸಹಾನುಭೂತಿ ಇರಲಿಲ್ಲ. ಇಷ್ಟೇ ಅಲ್ಲದೆ ಬ್ರಿಟಿಷ್ ಸರಕಾರಕ್ಕೆ ಅದರಲ್ಲಿ ವಿರೋಧವಿತ್ತು. ಇಂಗ್ಲಿಷರಿಗೆ ರಾಜ್ಯ ದೊರೆತದ್ದು ಬ್ರಾಹ್ಮಣರಿಂದ. ಆದ್ದರಿಂದ ಅವರು ಮಿಶನರಿಗಳ ಚಟುವಟಿಕೆಗಳಿಗೆ ಉತ್ತೇಜನ ನೀಡಿದರೂ ಇದು ಅಪಾಯಕಾರಿ ವಿಷಯವೆಂಬ ಸ್ಪಷ್ಟ ಸೂಚನೆ ಎಲ್ಪಿಷ್ಟನ್ ಅವರ ಪ್ರಸಿದ್ಧ ಮಿನಿಟ್ಸ್‌ನಲ್ಲಿ ಇದೆ.’’ ಈ ಮೇರೆಗೆ ಬ್ರಿಟಿಷರು ಇಲ್ಲಿನ ‘ಜಾತಿಬೇಧ’ ಮತ್ತು ‘ಮತಬೇಧ’ ಎರಡರ ವೈರುಧ್ಯವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡರು. ಅದರ ಅಪಾಯದ ಅರಿವಿದ್ದೂ ಹಾಗೆ ಮಾಡುತ್ತಾ ಅವರು ಶ್ರಮಿಕರನ್ನು ಅತಂತ್ರತೆಗೆ ತಳ್ಳಿದರು. ಇದು ಅದರ ಒಂದು ಮಗ್ಗುಲು.

‘‘1818ರ ನಡುವೆ ಪೇಶ್ವೆಗಳ ವಿರುದ್ಧ ಕೊನೆಯ ಯುದ್ಧ ಹವೇಲಿ ತಾಲೂಕಿನ ಕೋರೆಗಾಂವ್‌ದಲ್ಲಿ ನಡೆಯಿತು. ಅದರಲ್ಲಿ ಪೇಶ್ವೆಗಳ ಪ್ರಚಂಡ ಸೈನ್ಯವನ್ನು ಇಂಗ್ಲಿಷರ ಸೈನಿಕರು ಪರಾಭವಗೊಳಿಸಿದರು. ಆ ವೇಳೆ ಇಂಗ್ಲಿಷರ ಸೈನ್ಯದಲ್ಲಿ ಮಹರ್ ಸೈನಿಕರೇ ಪ್ರಮುಖರಾಗಿದ್ದರು. ಇವರು ಕೋರೆಗಾಂವ್ ಯುದ್ಧದಲ್ಲಿ ಪೇಶ್ವೆಗಳನ್ನು ಸೋಲಿಸಿ ಅವರನ್ನು ಪರಾಭವಗೊಳಿಸಿದರು’’ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ದಾಖಲಿಸಿದ್ದಾರೆ. ಈಗಲೂ ಇದಕ್ಕೆ ಪುಣೆಯ ಹವೇಲಿ ತಾಲೂಕಿನ ಕೋರೆಗಾಂವ್ ಬಳಿಯಿರುವ ಬ್ರಿಟಿಷರು ನಿಲ್ಲಿಸಿದ ‘ರಣಸ್ತಂಭ’ ಸಾಕ್ಷಿ ನುಡಿಯುತ್ತದೆ. ಹಾಗಿದ್ದರೆ ಇದರಲ್ಲಿ ಯಾವುದು ಸತ್ಯ?

ವಿದೇಶಿ ಬ್ರಿಟಿಷರನ್ನು ಗೆಲ್ಲಿಸಿದವರು ಬ್ರಾಹ್ಮಣರೇ? ದಲಿತರೇ? ಎರಡೂ ಸತ್ಯ! ಮೇಲ್ವರ್ಗದ ಬ್ರಾಹ್ಮಣರ ಪಿತೂರಿ ಅವರಿಗಿಂತ ಕೆಳಸ್ಥರದ ಚಿತ್ಪಾವನ ಬ್ರಾಹ್ಮಣರನ್ನು ಪರಾಭವಗೊಳಿಸುವಲ್ಲಿ ತೆರೆಯ ಮರೆಯಲ್ಲಿ ಕರಾಮತ್ತು ನಡೆಸಿತ್ತು. ಅದಕ್ಕೆ ಭಿನ್ನವಾಗಿ ಪೇಶ್ವೆಗಳ ಅಮಾನವೀಯ ಮನುವಾದಕ್ಕೆ ದಲಿತರು ತಿರುಗಿ ಬಿದ್ದು ಬ್ರಿಟಿಷರ ಗೆಲುವಿಗೆ ಕಾರಣರಾದರು!

ಕೊನೆಗೂ ಇಲ್ಲಿ ಗೆದ್ದವರಾರು? ನಿಜವಾಗಿ ಗೆದ್ದವರು ಛತ್ರಪತಿ ಶಿವಾಜಿಯನ್ನು ಅತಂತ್ರ ಗೊಳಿಸಿದ, ತುಕಾರಾಮರನ್ನು ದೆಸೆಗೆಡಿಸಿದ ದೇಶಪಾಂಡೆ, ದೇಶ್‌ಮುಖ್ ಮೊದಲಾದ ಪುರೋಹಿತರು, ಜಮೀನ್ದಾರರು, ಅಧಿಕಾರಶಾಹಿಗಳು, ಸೋತವರು ಮಾತ್ರ ಜ್ಯೋತಿಬಾ ವ್ಯಾಖ್ಯಾನಿಸಿದ ಶೂದ್ರಾತಿಶೂದ್ರರು. ಕೋರೆಗಾಂವ್‌ನ ಸೋಲಿನ ಹಿಂದಿನ ಕರಾಮತ್ತುಗಳು, ಚಿತ್ಪಾವನರು ಬ್ರಾಹ್ಮಣರೇ? ಅವರು ಸ್ವದೇಶಿಗಳೇ ಈ ಪ್ರಶ್ನೆ: ಇಂದು ಕೋಮುವಾದಿ ವಲಯದಲ್ಲಿ ಪ್ರಬಲರಾಗಿರುವ ಪುರೋಹಿತರು-ಜಮೀನ್ದಾರರು ಎತ್ತಿಕೊಂಡು ಕ್ಕೆಲದಲ್ಲೂ ಹೊಕ್ಕಾಡುತ್ತಲಿದ್ದಾರೆ. ಆದರೆ ಇದನ್ನು ತಡೆಯುವ ಜಾಗ್ರತ ಪ್ರಜ್ಞೆ ಅಂದೂ ಇತ್ತು. ಇಂದೂ ಇದೆ, ಇರಬೇಕು.

ಪುಣೆಯ ಶನಿವಾರವಾಡದ ನಿವಾಸಿಗಳಾದ ಪೇಶ್ವೆಶಾಹಿಗಳ ಕೊನೆಯ ಪ್ರಭು ಎರಡನೆಯ ಬಾಜಿರಾಯನಿಗೂ, ಬ್ರಿಟಿಷರಿಗೂ ನಡೆದ ನಿರ್ಣಾಯಕ ಕದನದಲ್ಲಿ ಬಾಜಿರಾಯನ ಪೇಶ್ವೆಶಾಹಿ ಪತನಗೊಂಡು, ಅಲ್ಲಿ ಬ್ರಿಟಿಷರ ಬಾವುಟ ‘ಯೂನಿಯನ್ ಜ್ಯಾಕ್’ ಹಾರಾಡಿದ್ದು 1817ರಲ್ಲಿ.ಅಂದು ನೇರವಾಗಿ ರಾಜಕೀಯ ಕಾದಾಟ ನಡೆದದ್ದು ಪುಣೆಯ ಸಾಮಂತ ಶಾಹಿ ಪೇಶ್ವೆಗಳಿಗೂ ಮತ್ತು ವಿದೇಶಿ ವಸಾಹತುಶಾಹಿ ಬ್ರಿಟಿಷರಿಗೂ, ಆದರೆ ಅಂದು ಬಿಡುಗಡೆಯ ನಿಟ್ಟುಸಿರು ಬಿಟ್ಟವರು ಮಾತ್ರ ಅಂದಿನ ಕದನ ಕಲಿಗಳಾದ ದಲಿತರು. ಅವರು ಬ್ರಿಟಿಷರ ಸೈನ್ಯದಲ್ಲಿದ್ದು ಶನಿವಾರವಾಡದ ಮನುವಾದಿ ರಾಜಕಾರಣಕ್ಕೆ ಗತಿ ಕಾಣಿಸಿದ ವೀರ ಯೋಧರು!

ಕೃಪೆ: ಜ್ಯೋತಿಬಾ ಬೆಳಕು-ಬೆರಗು

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top