ಮಾನವ ಹಕ್ಕುಗಳ ರಕ್ಷಣೆಯಲ್ಲಿ ಮಾಧ್ಯಮಗಳ ಜವಾಬ್ದಾರಿ | Vartha Bharati- ವಾರ್ತಾ ಭಾರತಿ

--

ಮಾನವ ಹಕ್ಕುಗಳ ರಕ್ಷಣೆಯಲ್ಲಿ ಮಾಧ್ಯಮಗಳ ಜವಾಬ್ದಾರಿ

ಸಮಾಜದ ಅಂಚಿನಲ್ಲಿರುವ ಜನರ ಹಕ್ಕುಗಳ ರಕ್ಷಣೆ ಮಾಧ್ಯಮಗಳ ಪ್ರಾಥಮಿಕ ಜವಾಬ್ದಾರಿಯಾಗಬೇಕು. ಅಂಚಿನಲ್ಲಿರುವ ಸಮುದಾಯಗಳು ಬಲಿಪಶುಗಳಾಗುವುದನ್ನು ತಪ್ಪಿಸಲು ನ್ಯಾಯಯುತ ಮತ್ತು ಪೂರ್ವಾಗ್ರಹ ರಹಿತವಾಗಿ ಮಾಧ್ಯಮಗಳು ವರ್ತಿಸಬೇಕಾಗಿದೆ. ಸ್ವಯಂ ನಿಯಂತ್ರಣ ಮತ್ತು ಸಾಂವಿಧಾನಿಕ ಚೌಕಟ್ಟಿನಲ್ಲಿ ತಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಗಳನ್ನು ಅರಿತುಕೊಂಡು ಕಾರ್ಯನಿರ್ವಹಿಸುವ ಮೂಲಕ ಮಾಧ್ಯಮಗಳು ಸಮಾಜದ ಸ್ವಾಸ್ಥ್ಯವನ್ನು ರಕ್ಷಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ.


ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಮಾನವ ಹಕ್ಕುಗಳ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತಿವೆ ಮತ್ತು ಮಾನವ ಹಕ್ಕುಗಳ ವ್ಯಾಪ್ತಿ ಮತ್ತು ಮಹತ್ವವನ್ನು ಮನವರಿಕೆ ಮಾಡಿಕೊಡುವಲ್ಲಿ ಮಾಧ್ಯಮಗಳು ಮಹತ್ವದ ಭೂಮಿಕೆಯನ್ನು ಹೊಂದಿವೆ. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಜನಸಾಮಾನ್ಯರ ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಾಗ ಅಥವಾ ಜನರು ಅವುಗಳಿಂದ ವಂಚಿತರಾಗುವ ಸಂದರ್ಭ ಎದುರಾದಾಗ ಮಾಧ್ಯಮಗಳು ಸಾರ್ವಜನಿಕರ ಪರವಾಗಿ ನಿಲ್ಲಬೇಕಲ್ಲದೆ ಮಾನವ ಹಕ್ಕುಗಳ ಕುರಿತು ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಕೆಲಸವನ್ನು ಕೂಡ ಮಾಡಬೇಕಾಗಿದೆ.

ಎಲ್ಲಾ ಮನುಷ್ಯರು ಹುಟ್ಟಿನಿಂದ ಘನತೆ ಮತ್ತು ಹಕ್ಕುಗಳ ವಿಷಯದಲ್ಲಿ ಸಮಾನ ಮತ್ತು ಯಾವುದೇ ತರಹದ ತಾರತಮ್ಯವಿಲ್ಲದೆ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ನಾಗರಿಕ ಸಮಾಜದಲ್ಲಿ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಗೌರವದಿಂದ ಕಾಣುವುದನ್ನು ಮಾನವ ಹಕ್ಕು ಎಂದು ಸರಳವಾಗಿ ಹೇಳಬಹುದು. ಭಾರತದ ಸಂವಿಧಾನವು ಖಾತರಿಪಡಿಸಿರುವ ಅಥವಾ ಅಂತರ್‌ರಾಷ್ಟ್ರೀಯ ಒಡಂಬಡಿಕೆಗಳಲ್ಲಿ ಒಪ್ಪಿಕೊಳ್ಳಲಾಗಿರುವ ಮತ್ತು ಭಾರತದಲ್ಲಿ ಜಾರಿಗೊಳಿಸಬಹುದಾದ ಜೀವನದ, ಸ್ವಾತಂತ್ರ್ಯದ, ಸಮಾನತೆ ಮತ್ತು ವ್ಯಕ್ತಿಯ ಘನತೆಯನ್ನು ಕಾಪಾಡುವ ಹಕ್ಕುಗಳನ್ನು ಮಾನವ ಹಕ್ಕುಗಳು ಎಂದು ವ್ಯಾಖ್ಯಾನಿಸಬಹುದು.

ವೈಯಕ್ತಿಕ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ, ಎಲ್ಲಾ ವಿಧದ ಶೋಷಣೆಯನ್ನು ಮೀರಿದ ಸಮಾನತೆ, ಅಸ್ಮಿತೆಯ ಗೌರವಯುತ ಗುರುತಿಸುವಿಕೆ ಹಾಗೂ ವ್ಯಕ್ತಿಯ ಖಾಸಗಿತನ ಎಂಬ ತತ್ವಗಳೇ ಭಾರತದ ಸಂವಿಧಾನದ ಚೌಕಟ್ಟುಗಳಾಗಿದ್ದು ನಮ್ಮ ಮೂಲಭೂತ ಹಕ್ಕುಗಳ ನೆಲೆಗಟ್ಟು ಕೂಡ ಇವುಗಳೇ ಆಗಿವೆ. ಆದರೂ ಸಮಾಜದ ಕೆಲ ವರ್ಗದ ಜನ ಹಕ್ಕುಗಳಿಂದ ವಂಚಿತರಾಗಿದ್ದು ಅವರು ಇಂದಿಗೂ ಪೂರ್ವಾಗ್ರಹ ಪೀಡಿತ ಕಲ್ಪನೆಗಳಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇಂತಹ ಪರೋಕ್ಷ ಬಂಧನದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ರೂಢಿಯಲ್ಲಿರುವ ಸಾಮಾಜಿಕ ಅನಿಷ್ಟಗಳ ಸಂಕೋಲೆಯಿಂದ ಮುಕ್ತರನ್ನಾಗಿ ಮಾಡಿದಾಗ ಮಾತ್ರ ಸ್ವತಂತ್ರ ಎಂಬ ಪದಕ್ಕೆ ನಿಜವಾದ ಅರ್ಥ ಬರುತ್ತದೆ.

ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವಲ್ಲಿ ಮತ್ತು ಪರಿಹರಿಸುವಲ್ಲಿ ಮಾಧ್ಯಮಗಳನ್ನು ಅಮೂಲ್ಯವಾದ ಮಿತ್ರರೆಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪರಿಗಣಿಸಿದೆ. ಮಾಧ್ಯಮಗಳು ಮಾನವ ಹಕ್ಕುಗಳ ರಕ್ಷಕರಾಗಲು ಸಂವೇದನಾಶೀಲತೆಯಿಂದ ಕೂಡಿರಬೇಕಾಗುತ್ತದೆ ಮತ್ತು ಪ್ರಚೋದನಕಾರಿ ಪತ್ರಿಕೋದ್ಯಮದಿಂದ ದೂರವಿರಬೇಕಾಗುತ್ತದೆ. ಇಲ್ಲದಿದ್ದರೆ ಸಂಬಂಧಪಟ್ಟ ವ್ಯಕ್ತಿಗಳಿಗೆ ಸಾಕಷ್ಟು ಹಾನಿಯನ್ನುಂಟು ಮಾಡುವ ಸಾಧ್ಯತೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹಾಳುಮಾಡುವ ಸಂಭವ ಹೆಚ್ಚಾಗಿರುತ್ತದೆ. ಜನ ಸಾಮಾನ್ಯರು ಇಂದು ಮಾಹಿತಿಗಾಗಿ ಹಲವು ಮಾಧ್ಯಮಗಳ ಮೇಲೆ ಅವಲಂಬಿತರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪತ್ರಿಕೆ ಸೇರಿದಂತೆ ಎಲ್ಲಾ ಮಾಧ್ಯಮಗಳು ಜನರಿಗೆ ಸುಲಭವಾಗಿ ದೊರೆಯುತ್ತಿವೆ. ಸ್ಮಾರ್ಟ್‌ಪೋನ್‌ಗಳ ಆಗಮನವಾದ ಮೇಲಂತೂ ಮೊಬೈಲ್ ಬಳಕೆದಾರರೆಲ್ಲರೂ ಒಂದು ರೀತಿಯ ಪತ್ರಕರ್ತರೇ ಆಗಿ ಹೋಗಿದ್ದಾರೆ. ಸಾಮಾಜಿಕ ಮಾಧ್ಯಮಗಳು ಸಂವಹನದ ಅಂತರವನ್ನು ಸಾಕಷ್ಟು ಕಡಿಮೆ ಮಾಡಿವೆ. ಅಗ್ಗದ ದರದಲ್ಲಿ ಮೊಬೈಲ್ ಡಾಟ ಮತ್ತು ಇಂಟರ್‌ನೆಟ್ ಸೌಲಭ್ಯ ದೊರಕಿದ ನಂತರ ಆನ್‌ಲೈನ್ ಪತ್ರಿಕೋದ್ಯಮ ಕೂಡ ಜನರ ಅವಿಭಾಜ್ಯ ಮಾಧ್ಯಮವಾಗಿ ಹೊರಹೊಮ್ಮಿತು. ಆನ್‌ಲೈನ್ ಪತ್ರಿಕೋದ್ಯಮದ ಹೆಚ್ಚಿನ ಭಾಗ ಸ್ವತಂತ್ರ ಪತ್ರಿಕೋದ್ಯಮದ ದಾರಿ ಹಿಡಿದಿದ್ದು ಓದುಗರ ಆಶ್ರಯವನ್ನೇ ಅವಲಂಬಿಸಿ ನೈಜ ಪತ್ರಿಕೋದ್ಯಮದ ತತ್ವಗಳನ್ನು ಕಾಪಾಡಿಕೊಂಡು ಹೋಗಲು ಶ್ರಮಿಸುತ್ತಿವೆ. ಮಾನವ ಹಕ್ಕುಗಳ ರಚನಾತ್ಮಕ ಬದಲಾವಣೆ ಮತ್ತು ಆಮೂಲಾಗ್ರವಾದ ಬೆಳವಣಿಗೆಯಲ್ಲಿ ಪತ್ರಿಕೆಗಳು ಸೇರಿದಂತೆ ಮಾಧ್ಯಮಗಳು ಬದಲಾವಣೆಯ ಏಜೆಂಟ್ ಆಗಿ ಕೆಲಸ ನಿರ್ವಹಿಸಬಲ್ಲವು. ಮಾಧ್ಯಮ ಅತ್ಯಂತ ಶಕ್ತಿಶಾಲಿ ಸಾಧನ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಶಕ್ತಿಗೆ ದೊಡ್ಡ ಜವಾಬ್ದಾರಿಗಳು ಕೂಡ ಇವೆ.

ಮುದ್ರಣ, ಇಲೆಕ್ಟ್ರಾನಿಕ್ ಮಾಧ್ಯಮ ಯಾವುದೇ ಇರಲಿ ಪತ್ರಕರ್ತರು ಆರ್ಟಿಕಲ್ 19 (1) (ಎ)ನಲ್ಲಿ ಉಲ್ಲೇಖಿಸಲಾಗಿರುವ ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕಾನೂನು ಅಂಶಗಳನ್ನು ತಿಳಿದುಕೊಳ್ಳಬೇಕು. ಮಾನವ ಹಕ್ಕುಗಳ ಸಮಸ್ಯೆಗಳ ವರದಿಯಲ್ಲಿ ಮಾಧ್ಯಮಗಳು ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿ ಸಾಧನಗಳಾಗಿವೆ. ಜನರಲ್ಲಿ ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸಿ, ಉಲ್ಲಂಘನೆಯ ಘಟನೆಗಳನ್ನು ಬಹಿರಂಗಪಡಿಸಿ, ತನಿಖೆ ಮಾಡಿ, ಸಂಘರ್ಷಗಳು ಮತ್ತು ಮಾನವ ಹಕ್ಕನ್ನು ರಕ್ಷಿಸುವ ಮಹತ್ವದ ಕಾರ್ಯವನ್ನು ಮಾಧ್ಯಮಗಳು ಮಾಡಬೇಕು ಆದರೆ ಇತರ ಸಂಸ್ಥೆಗಳಂತೆ ಮಾಧ್ಯಮಗಳೂ ಕೂಡ ತಮ್ಮದೇ ಆದ ನಿರ್ಬಂಧಗಳನ್ನು ಹೊಂದಿವೆ. ಕೆಲವೊಮ್ಮೆ ಮಾನವನ ಹಕ್ಕಿನ ಮಾನವೀಯ ಕೂಗುವಿಕೆಯನ್ನು ರಾಜಕೀಯ ಮತ್ತು ಆರ್ಥಿಕ ಅಂಶಗಳು ದಮನ ಮಾಡಿಬಿಡುವ ಆತಂಕಗಳು ಹಿಂದಿಗಿಂತ ಇಂದು ಹೆಚ್ಚಾಗಿ ಕಾಡುತ್ತಿವೆ.

ಬಡವರು, ದೀನ-ದಲಿತರು, ಮಹಿಳೆಯರು, ಬುಡಕಟ್ಟು ಜನ, ಗ್ರಾಮೀಣ ಪ್ರದೇಶದ ಜನ, ಅಸಂಘಟಿತ ವಲಯದ ಕಾರ್ಮಿಕರನ್ನು ಒಳಗೊಂಡಂತೆ ಸಮಾಜದ ಬಹುಜನ ವರ್ಗಗಳು ಎದುರಿಸುತ್ತಿರುವ ಬಹು ಮುಖ್ಯವಾದ ಸವಾಲುಗಳನ್ನು ಮತ್ತು ಸಮಸ್ಯೆಗಳನ್ನು ಪ್ರತಿನಿಧಿಸುವಲ್ಲಿ ಮಾಧ್ಯಮಗಳು ವಿಫಲವಾಗಿವೆ. ಈ ವಿಫಲತೆಯ ನಡುವೆ ಮಾನವ ಹಕ್ಕುಗಳ ರಕ್ಷಣೆಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಲು ಪ್ರಯತ್ನಿಸಿದ ಕೆಲವು ಪತ್ರಕರ್ತರು ಹಲ್ಲೆಗೊಳಗಾಗಿರುವುದನ್ನು ಮರೆಯಬಾರದು. ಇಂತಹ ಸಂದರ್ಭಗಳಲ್ಲಿ ಪತ್ರಕರ್ತರ ಸುರಕ್ಷತೆ ಕೂಡ ಮುಖ್ಯವಾಗುತ್ತದೆ.

ಸಂವಹನದ ಕೊರತೆಯಲ್ಲಿ ಮಾಹಿತಿಯ ಪ್ರಚಾರ ಸಾಧ್ಯವಿಲ್ಲ. ಒಳ್ಳೆಯ ಸಂವಹನದ ವಾತಾವರಣವನ್ನು ಸೃಷ್ಟಿಸಿ ಶಿಕ್ಷಣ, ವಿಜ್ಞಾನ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಸಾರ್ವತ್ರೀಕರಣಗೊಳಿಸುವುದು. ನ್ಯಾಯ ಹಾಗೂ ಸಮಾನತೆಯ ಹಕ್ಕು, ಜನಾಂಗ, ಲಿಂಗಭೇದ, ಭಾಷೆ, ಜಾತಿ ಅಥವಾ ಧರ್ಮದ ಭೇದವಿಲ್ಲದೆ ಜನಸಾಮಾನ್ಯರಲ್ಲಿ ಸಾರ್ವತ್ರಿಕವಾಗಿ ಗೌರವವನ್ನು ಉತ್ತೇಜಿಸುವ ಮೂಲಕ ಮಾನವ ಹಕ್ಕುಗಳ ರಕ್ಷಣೆ ಮಾಡಬೇಕಾಗಿದೆ. ಆದರೆ ಇದನ್ನು ಸಾಧಿಸುವುದು ಸುಲಭದ ಕೆಲಸವಲ್ಲ ಎಂದು ಅಭಿಪ್ರಾಯಪಟ್ಟಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಮಾಧ್ಯಮಗಳ ಮೂಲಕ ಮಾನವ ಹಕ್ಕುಗಳನ್ನು ಉತ್ತೇಜಿಸುವ ಜೊತೆಗೆ ರಕ್ಷಣೆ ಕೂಡ ಮಾಡಬಹುದು ಎಂದು ಅಭಿಪ್ರಾಯಪಟ್ಟಿದೆ. ಮಾಹಿತಿ ಮತ್ತು ಶಿಕ್ಷಣವನ್ನು ಪಸರಿಸುವ ಮೂಲಕ ಮಾಧ್ಯಮಗಳು ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಬಹುದು.
ಮಾನವ ಹಕ್ಕುಗಳ ಉಲ್ಲಂಘನೆಯ ಸಂದರ್ಭದಲ್ಲಿ ಮಾಧ್ಯಮಗಳು ಎಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದರೆ ಮಾಧ್ಯಮಗಳ ವರದಿಗಳ ಆಧಾರದ ಮೇಲೆಯೇ ಎಷ್ಟೋ ಪ್ರಕರಣಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಗಳು ದಾಖಲಿಸಿಕೊಂಡು ತನಿಖೆ ನಡೆಸಿರುವ ಉದಾಹರಣೆಗಳಿಗೇನೂ ಕಡಿಮೆಯಿಲ್ಲ. ಆದರೆ ಕೆಲವು ಪತ್ರಕರ್ತರು ಮತ್ತು ಮಾಧ್ಯಮಗಳು ಪ್ರಸರಣ ಮತ್ತು ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿ ಮಾನವ ಹಕ್ಕುಗಳಂತಹ ಸೂಕ್ಷ್ಮವಿಷಯಗಳನ್ನು ಬದಿಗೊತ್ತಿ ರಾಜಕೀಯ, ಅಪರಾಧ ಸೇರಿದಂತೆ ಜನಪ್ರಿಯ ಮತ್ತು ಆಕರ್ಷಕವಾದ ಸುದ್ದಿಗಳ ಪ್ರಸಾರ ಮತ್ತು ಪ್ರಕಟಣೆಗೆ ಮುಂದಾಗುತ್ತಿವೆ. ಪ್ರಸರಣ ಮತ್ತು ಟಿಆರ್‌ಪಿಯ ಜೊತೆಗೆ ಪತ್ರಕರ್ತರಾದವರು ತಮ್ಮ ಮೇಲಿರುವ ಸಾಮಾಜಿಕ ಜವಾಬ್ದಾರಿಯನ್ನೂ ಕೂಡ ಮರೆಯಬಾರದು.

ಭಾರತೀಯ ಮಾಧ್ಯಮಗಳಲ್ಲಿ ಇಂದು ನುರಿತ ಪತ್ರಕರ್ತರ ಕೊರತೆ ಎದ್ದು ಕಾಣುತ್ತಿದೆ. ಪರಿಣಾಮವಾಗಿ ಮಾನವ ಹಕ್ಕು ಕಾನೂನು, ಅವುಗಳ ರಚನೆ, ಸರಕಾರದ ಪಾತ್ರ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಿಳುವಳಿಕೆಯ ಕೊರತೆಯನ್ನು ಪತ್ರಕರ್ತರಲ್ಲಿ ಕಾಣಬಹುದು. ಇದು ಕೆಲವು ಪತ್ರಕರ್ತರು ಸಾಮಾಜಿಕ ಹೊಣೆಗಾರಿಕೆಯಿಂದ ವಿಮುಖರಾಗಲು ಮುಖ್ಯವಾದ ಕಾರಣವಾಗಿದೆ. ಆದ್ದರಿಂದ ಮಾಧ್ಯಮಗಳ ಆಡಳಿತ ಮಂಡಳಿ ತನ್ನ ಪತ್ರಕರ್ತರಿಗೆ ಸಾಮಾಜಿಕ ಅನಿಷ್ಟಗಳ ವಿರುದ್ಧ ಜನರನ್ನು ಅಣಿಗೊಳಿಸುವ, ಅಸಮಾನತೆಯನ್ನು ಹೋಗಲಾಡಿಸುವ ಮತ್ತು ಮಾನವ ಹಕ್ಕುಗಳ ವಿಷಯದಲ್ಲಿ ಸೂಕ್ತ ತರಬೇತಿಯನ್ನು ನೀಡಬೇಕಾಗಿದೆ. ಮಾಧ್ಯಮಗಳ ಜೊತೆಗೆ ಸರಕಾರದ ಏಜನ್ಸಿಗಳಾದ ವಾರ್ತಾ ಮತ್ತು ಪ್ರಚಾರ ಇಲಾಖೆ, ರಾಜ್ಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಗಳು ಕೂಡ ಇಂತಹ ತರಬೇತಿ ಕಾರ್ಯಾಗಾರಗಳನ್ನು ಪತ್ರಕರ್ತರಿಗೆ ಮುಖ್ಯವಾಗಿ ಪ್ರಾದೇಶಿಕ ಮಟ್ಟದಲ್ಲಿ ಏರ್ಪಡಿಸಬೇಕಾಗಿದೆ. ಆ ಮೂಲಕ ಪತ್ರಕರ್ತರನ್ನು ಸಮಾಜಮುಖಿಗಳಾಗಲು ಪ್ರೇರೇಪಿಸಬೇಕಾಗಿದೆ. ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿರುವ ಪತ್ರಿಕೋದ್ಯಮ ವಿಭಾಗಗಳು ತಮ್ಮ ಪಠ್ಯಕ್ರಮದಲ್ಲಿ ಇಂತಹ ಅಂಶಗಳನ್ನು ಅಳವಡಿಸಬೇಕಾಗಿರುವ ಜೊತೆಗೆ ಇವುಗಳ ಪ್ರಾಮುಖ್ಯತೆ ಮತ್ತು ವಿಷಯ ನಿರೂಪಣೆಯ ಕುರಿತು ಭವಿಷ್ಯದ ಪತ್ರಕರ್ತರಿಗೆ ಪರಿಣಾಮಕಾರಿಯಾಗಿ ಬೋಧಿಸಬೇಕಾಗಿದೆ.

ಎಷ್ಟೋ ಸಂದರ್ಭಗಳಲ್ಲಿ ಪತ್ರಕರ್ತರು ಮಾನವ ಹಕ್ಕುಗಳ ಉಲ್ಲಂಘನೆಯ ವರದಿಗಳನ್ನು ನಿಷ್ಪಕ್ಷಪಾತದಿಂದ ಮಾಡಿದ್ದರೂ ಕೆಲವು ಮಾಧ್ಯಮ ಸಂಸ್ಥೆಗಳ ಆಡಳಿತ ಮಂಡಳಿಗಳು ಅಥವಾ ಮಾಧ್ಯಮ ಸಂಸ್ಥೆಗಳ ಸೂಚನೆಗಳಿಗೆ ತಲೆಬಾಗುವ ಪತ್ರಿಕಾ ಸಂಪಾದಕರು ಅಥವಾ ಟಿವಿ ಮಾಧ್ಯಮಗಳ ಸಂಪಾದಕರು ಇಂತಹ ವರದಿಗಳನ್ನು ಪ್ರಕಟಿಸಲು ಅಥವಾ ಪ್ರಸಾರ ಮಾಡಲು ಹಿಂದೇಟು ಹಾಕುತ್ತಾರೆ. ಮಾಧ್ಯಮ ಸಂಸ್ಥೆಗಳ ಈ ಮನೋಭಾವ ಬದಲಾಗಬೇಕಾಗಿದೆ. ಮಾನವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಮತ್ತು ಅವುಗಳ ರಕ್ಷಣೆಯಲ್ಲಿ ಮತ್ತು ಪ್ರಚಾರದಲ್ಲಿ ಮಾಧ್ಯಮಗಳ ಜವಾಬ್ದಾರಿಯೂ ಇದೆ. ಏಕೆಂದರೆ ಜನರ ಹಕ್ಕುಗಳ ರಕ್ಷಣೆ ಮಾಡಬೇಕಾಗಿರುವುದೂ ಕೂಡ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾಲ್ಕನೆಯ ಅಂಗ ಎಂದು ಕರೆಸಿಕೊಳ್ಳುವ ಮಾಧ್ಯಮಗಳ ಹೊಣೆಯಾಗಿದೆ. ಜಾತಿ ಮತ್ತು ಧರ್ಮಗಳ ಗೋಜಲುಗಳಿಂದ ಹೊರಬಂದು ವ್ಯಯಕ್ತಿಕ ಘನತೆ, ಸಮಾನತೆ ಮತ್ತು ಮಾನವಹಕ್ಕುಗಳನ್ನು ಉತ್ತೇಜಿಸುವ ಮತ್ತು ಸಮರ್ಪಕವಾಗಿ ರೂಪಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಮಾಧ್ಯಮಗಳು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕೇವಲ ವರದಿ ಮಾಡಿದರೆ ಸಾಲದು. ಬದಲಾಗಿ ಉಲ್ಲಂಘನೆಯ ಹಿಂದಿನ ಕಾರಣಗಳನ್ನು, ಉಲ್ಲಂಘನೆಗೆ ಒಳಗಾದ ವ್ಯಕ್ತಿಯ ಸಾಮಾಜಿಕ ಸ್ಥಾನ ಮಾನಗಳನ್ನು ವಿಶ್ಲೇಷಣೆ ಮಾಡುವ ಜೊತೆಗೆ ಉಲ್ಲಂಘನೆಯ ಬಳಿಕ ಘಟನೆಯನ್ನು ಹಿಂಬಾಲಿಸಿ ವರದಿ ಮಾಡುವುದು ಮತ್ತು ವಿಶ್ಲೇಷಣೆ ಮಾಡುವುದೂ ಕೂಡ ಮುಖ್ಯ. ಇತ್ತೀಚೆಗೆ ಮಾಧ್ಯಮಗಳಲ್ಲಿ ಘಟನೆಗಳನ್ನು ಹಿಂಬಾಲಿಸಿ ಅದರ ಬೆಳವಣಿಗೆಯನ್ನು ವರದಿ ಮಾಡುವ ಮನೋಭಾವ ಕಡಿಮೆಯಾಗುತ್ತಿದೆ. ಇದು ಸರಿಯಲ್ಲ. ಯಾವುದೇ ಘಟನೆಯನ್ನು ವರದಿ ಮಾಡುವುದು ಮಾಧ್ಯಮಗಳ ಪ್ರಾಥಮಿಕ ಕರ್ತವ್ಯ ಅಷ್ಟೆ.

ಇದರ ಜೊತೆಗೆ ಘಟನೆಯ ನಂತರ ಅದು ಯಾವ ರೂಪು ಪಡೆಯುತ್ತದೆ? ಶೋಷಣೆಗೆ ಒಳಗಾದ ವ್ಯಕ್ತಿಗೆ ನ್ಯಾಯ ದೊರಕೀತೇ? ಇಲ್ಲದಿದ್ದರೆ, ಯಾಕೆ? ಈ ಎಲ್ಲಾ ವಿಷಯಗಳನ್ನು ವರದಿ ಮಾಡುವುದೂ ಅತ್ಯಂತ ಮುಖ್ಯವಾದ ಹಂತವಾಗಿದೆ. ಅಕಸ್ಮಾತ್ ಶೋಷಣೆಗೆ ಒಳಗಾದ ವ್ಯಕ್ತಿಗೆ ಸರಿಯಾದ ಪರಿಹಾರ ದೊರಕದೆ ಹೋದಲ್ಲಿ ಯಾವ ಹಂತದಲ್ಲಿ ತೊಡಕಾಯಿತು? ಎಂಬುದನ್ನು ವರದಿ ಮಾಡುವ ಮೂಲಕ ಶೋಷಣೆಗೆ ಒಳಗಾದ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡುವುದು ಮಾಧ್ಯಮಗಳ ಕರ್ತವ್ಯವಾಗಿದೆ. ಮಾನವ ಹಕ್ಕುಗಳ ಅನುಪಸ್ಥಿತಿಯಲ್ಲಿ ಸುಸ್ಥಿರ ಅಭಿವೃದ್ಧಿಯನ್ನಾಗಲಿ, ಸಾಮಾಜಿಕ ಅಸಮಾನತೆಯನ್ನಾಗಲಿ ಅಥವಾ ಸಾಮಾಜಿಕ ಸ್ವಾಸ್ಥ್ಯವನ್ನಾಗಲಿ ಕಾಪಾಡಿಕೊಂಡು ಹೋಗಲು ಸಾಧ್ಯವಿಲ್ಲ.

ದೇಶದ ಸಮಗ್ರತೆ, ವಿವಿಧ ಗುಂಪುಗಳ ನಡುವೆ ಸಹಿಷ್ಣುತೆ, ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳ ನಡುವೆ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗುವ ಮಾಹಿತಿ ಪೂರಕ ಶಿಕ್ಷಣವನ್ನು ಮಾಧ್ಯಮಗಳು ಜನರಿಗೆ ನೀಡುವುದು ಅವಶ್ಯಕ. ಕೆಲವು ಸಂದರ್ಭಗಳಲ್ಲಿ ಮಾಧ್ಯಮಗಳು ವೈದ್ಯನ ಪಾತ್ರವನ್ನು ನಿರ್ವಹಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಚಿಕಿತ್ಸೆಯನ್ನು ಕೂಡ ಒದಗಿಸಬೇಕಾಗುತ್ತದೆ. ನ್ಯಾಯೋಚಿತವಾದ, ಸಮತೋಲಿತವಾದ ಮತ್ತು ನಿಖರವಾದ ವರದಿ, ಅಂಕಣಗಳು, ಲೇಖನಗಳು, ಸಮಸ್ಯೆಗಳ ವಿಶ್ಲೇಷಣೆ, ಚರ್ಚೆ ಮುಂತಾದವುಗಳ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಶಕ್ತಿಯನ್ನು ಮಾಧ್ಯಮಗಳು ಹೊಂದಿವೆ. ಮಾನವ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭದಲ್ಲಿ ಆ ಕುರಿತು ಸಾರ್ವಜನಿಕ ಅಭಿಪ್ರಾಯವನ್ನು ಕ್ರೋಡೀಕರಿಸುವ ಮೂಲಕ ಮಾನವ ಹಕ್ಕುಗಳ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಬೇಕಾಗುತ್ತದೆ.

ಸಮಾಜದ ಅಂಚಿನಲ್ಲಿರುವ ಜನರ ಹಕ್ಕುಗಳ ರಕ್ಷಣೆ ಮಾಧ್ಯಮಗಳ ಪ್ರಾಥಮಿಕ ಜವಾಬ್ದಾರಿಯಾಗಬೇಕು. ಅಂಚಿನಲ್ಲಿರುವ ಸಮುದಾಯಗಳು ಬಲಿಪಶುಗಳಾಗುವುದನ್ನು ತಪ್ಪಿಸಲು ನ್ಯಾಯಯುತ ಮತ್ತು ಪೂರ್ವಾಗ್ರಹ ರಹಿತವಾಗಿ ಮಾಧ್ಯಮಗಳು ವರ್ತಿಸಬೇಕಾಗಿದೆ. ಸ್ವಯಂ ನಿಯಂತ್ರಣ ಮತ್ತು ಸಾಂವಿಧಾನಿಕ ಚೌಕಟ್ಟಿನಲ್ಲಿ ತಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಗಳನ್ನು ಅರಿತುಕೊಂಡು ಕಾರ್ಯನಿರ್ವಹಿಸುವ ಮೂಲಕ ಮಾಧ್ಯಮಗಳು ಸಮಾಜದ ಸ್ವಾಸ್ಥ್ಯವನ್ನು ರಕ್ಷಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top