ಬಡತನ ರೇಖೆಯ ಮರುವ್ಯಾಖ್ಯಾನದ ಅಗತ್ಯವಿದೆ
-

ಇತ್ತೀಚೆಗೆ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ವೇತನ ಮತ್ತು ಭತ್ತೆಯನ್ನು ಹೆಚ್ಚಿಸಲು ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ತೆಗಳ(ತಿದ್ದುಪಡಿ)ಮಸೂದೆ 2022 ಹಾಗೂ ಕರ್ನಾಟಕ ವಿಧಾನ ಮಂಡಲದವರ ಸಂಬಳಗಳು, ನಿವೃತ್ತಿ ವೇತನ ಮತ್ತು ಭತ್ತೆಗಳ(ತಿದ್ದುಪಡಿ) ಮಸೂದೆ 2022 ಎಂಬೆರಡು ಪ್ರತ್ಯೇಕ ಮಸೂದೆಗಳನ್ನು ಯಾವುದೇ ಚರ್ಚೆಗೊಳಪಡಿಸದೆ ಅಂಗೀಕರಿಸಲಾಗಿದೆ. ಈ ಎರಡು ಮಸೂದೆಗಳನ್ನು ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವರು ಮಸೂದೆಗಳ ಅಂಗೀಕಾರಕ್ಕೆ ನೀಡಿದ ಸಬೂಬನ್ನು ಓದಿ ಮರುಕ ಉಂಟಾಯಿತು!. ಅವರ ಪ್ರಕಾರ 2015ರಿಂದ ರಾಜ್ಯ ಸರಕಾರ ಮುಖ್ಯಮಂತ್ರಿ, ಶಾಸಕರ ವೇತನ ಮತ್ತು ಭತ್ತೆಗಳನ್ನು ಹೆಚ್ಚಿಸಿಲ್ಲ. ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಮನೆ ಬಾಡಿಗೆ ಮತ್ತು ಇತರ ವೆಚ್ಚಗಳು ಹೆಚ್ಚಾಗಿವೆ. ಇದರಿಂದ ಶಾಸಕರು ಕಷ್ಟಪಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕೊರೋನ, ಹಣದುಬ್ಬರ, ಅತಿವೃಷ್ಟಿ-ಅನಾವೃಷ್ಟಿ ಮೊದಲಾದ ತೊಂದರೆಗಳಿಂದ ನಾಡಿನ ಜನತೆ ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಭದಲ್ಲಿ, ಜನರ ಬವಣೆಗಳಿಗೆ ಸ್ಪಂದಿಸಬೇಕಿದ್ದ ಜನಪ್ರತಿನಿಧಿಗಳು ಸ್ವಹಿತರಕ್ಷಣೆಗೆ ಮುಂದಾಗಿರುವುದನ್ನು ನಾಡಿನ ಜನತೆ ಮನಗಾಣಬೇಕು. ಐಷಾರಾಮಿ ಜೀವನವನ್ನು ಅನುಭವಿಸುವ ರಾಜಕಾರಣಿಗಳೇ ಕಷ್ಟದಲ್ಲಿದ್ದಾರೆಂದಾದರೆ, ಹೊತ್ತು ಕೂಳಿಗೂ ಹೋರಾಡುತ್ತಿರುವ ನಿರ್ಗತಿಕ ಜನಗಳ ಬದುಕೇನು ಎಂಬುದನ್ನು ಆಲೋಚಿಸಬೇಕಿದೆ. ಪ್ರಸ್ತುತ ಸನ್ನಿವೇಶಗಳನ್ನು ಆಧರಿಸಿ ಬಡತನ ರೇಖೆಯ ವ್ಯಾಖ್ಯಾನವನ್ನು ಮರು ವ್ಯಾಖ್ಯಾನಿಸಿ ಬಡಜನರ ಬದುಕಿಗೆ ಆಸರೆಯಾಗುವಂತಹ ಕಾನೂನುಗಳನ್ನು ಜಾರಿಗೊಳಿಸಬೇಕಿದೆ.
ಸಾಮಾನ್ಯವಾಗಿ ದೈನಂದಿನ ಬದುಕಿಗೆ ಅತ್ಯಗತ್ಯವಾದ ನೀರು, ಆಹಾರ, ಬಟ್ಟೆ ಮತ್ತು ವಸತಿ ಮೊದಲಾದ ಮೂಲ ಸೌಕರ್ಯಗಳ ಅಭಾವವನ್ನು ಎದುರಿಸುತ್ತಿರುವುದನ್ನು ಬಡತನ ಎಂದು ಕರೆಯಲಾಗುತ್ತದೆ. ಈ ಎರಡು ಮಸೂದೆಗಳು ಜಾರಿಯಾದಲ್ಲಿ ಮಂತ್ರಿಗಳ ವೇತನ ಮತ್ತು ಭತ್ತೆಯು ಶೇ.50 ರಿಂದ ಶೇ.60ಕ್ಕೆ ಹೆಚ್ಚಾಗುವುದಲ್ಲದೆ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 92.40 ಕೋಟಿ ಹೊರೆ ಬೀಳಲಿದೆ. ಅಲ್ಲದೆ, ಮಂತ್ರಿಗಳ ವೇತನಕ್ಕಿಂತಲೂ ಅವರ ಭತ್ತೆಗಳೇ ಅಧಿಕವಾಗಿರುವುದು ವಿಶೇಷ. ಭಾರತದ ಇತಿಹಾಸವನ್ನು ಗಮನಿಸಿದಾಗ ದಾದಾಬಾಯಿ ನವರೋಜಿಯವರು ತಮ್ಮ ಪುಸ್ತಕ ‘ಬಡತನ ಮತ್ತು ಭಾರತದಲ್ಲಿ ಬ್ರಿಟಿಷೇತರ ಆಡಳಿತ’ದಲ್ಲಿ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಸ್ವಾತಂತ್ರಾನಂತರದ ದಿನಗಳಲ್ಲಿ ವಿ.ಎಂ.ದಂಡೇಕರ್ ಮತ್ತು ಎನ್. ರಾತ್‌ರವರು, ವೈ.ಕೆ. ಅಲಘ್‌ರವರ ಸಮಿತಿ (1979) ತಮ್ಮದೇ ಮಾನದಂಡವನ್ನು ಆಧರಿಸಿ ಶಿಫಾರಸು ಮಾಡಿದ್ದರು. ಹಾಗೆಯೇ, ಡಿ.ಟಿ. ಲಕಡ್ವಾಲ ಸಮಿತಿ(1993), ಸುರೇಶ್ ತೆಂಡುಲ್ಕರ್ ಸಮಿತಿ (2009), ಸಿ. ರಂಗರಾಜನ್ ಸಮಿತಿ (2012)ಗಳು ತಮ್ಮದೇ ರೀತಿಯ ಶಿಫಾರಸು ಮಾಡಿವೆ. ಆದರೆ, ನಾವಿಲ್ಲಿ ತಿಳಿಯಬೇಕಾಗಿರುವುದು ಬಡತನವನ್ನು ಕೇವಲ ಜನರು ಸೇವಿಸುವ ಪೌಷ್ಟಿಕ ಆಹಾರದಿಂದ ಅಳೆಯುವುದು ಎಷ್ಟು ಸೂಕ್ತವೆಂದು. ಜಾಗತೀಕರಣದಿಂದಾಗಿ ಜನರ ಅವಶ್ಯಕತೆಗಳು ಬದಲಾಗಿವೆ. ಅಂದರೆ, ಒಂದು ಕುಟುಂಬಕ್ಕೆ ಸ್ಕೂಟರ್, ಟೆಲಿಫೋನ್, ರೆಫ್ರಿಜರೇಟರ್‌ಗಳು ಅತ್ಯವಶ್ಯಕವಾಗಿವೆ. ನಮ್ಮನ್ನಾಳುವ ಸರಕಾರಗಳು ಇವುಗಳನ್ನು ಪರಿಗಣಿಸಿ ಬಡತನ ರೇಖೆಯ ಪರಿಧಿಗೆ ಹೊರಗಿದ್ದಾರೆ ಎಂದು ಜನರಿಗೆ ಪಡಿತರ ವಿತರಿಸದೆ ಜನರ ಜೀವನದೊಂದಿಗೆ ಆಟವಾಡುತ್ತಿರುವುದನ್ನು ಕಾಣಬಹುದು.
ಒಟ್ಟಾರೆ, ಯೋಜನಾ ಆಯೋಗದ 2013ರ ವರದಿಯನ್ವಯ ದೇಶದ ಬಡತನವು 2004-05ರಲ್ಲಿ ಶೇ. 37 ಇದ್ದದ್ದು 2011-12ಕ್ಕೆ ಶೇ.22ಕ್ಕೆ ಇಳಿಕೆಯಾಗಿದೆ. ಅಂದರೆ, 1993-2005ರಲ್ಲಿ ಶೇ.0.74ರಷ್ಟಿದ್ದ ಬಡತನವು 2005-12ರಲ್ಲಿ ಶೇ.2.18ರಷ್ಟಕ್ಕೆ ಇಳಿದಿದೆ ಎಂಬುದು ತೆಂಡುಲ್ಕರ್ ಸಮಿತಿಯ ಶಿಫಾರಸು. ಕರ್ನಾಟಕದಲ್ಲಿ 2004-2005ರಲ್ಲಿ ಶೇ.33.4ರಷ್ಟಿದ್ದ ಬಡತನ ಸೂಚ್ಯಂಕವು 2011-2012ರಲ್ಲಿ ಶೇ.20.9ಕ್ಕೆ ಇಳಿಕೆಯಾಗಿದೆ. ಅಂದರೆ, ಶೇ.12.5ರಷ್ಟು ಬಡತನವು ಇಳಿಕೆಯಾಗಿದೆ ಎಂಬುದು ವರದಿಗಳ ಸಾರವಾಗಿದೆ. ಇಷ್ಟೆಲ್ಲಾ ಆಯೋಗಗಳು, ಸಮಿತಿಗಳ ವರದಿಗಳಿದ್ದರೂ ಬಡತನಕ್ಕೆ ಏಕರೂಪ ವ್ಯಾಖ್ಯಾನವನ್ನು ನೀಡುವಲ್ಲಿ ವಿಫಲವಾಗಿರುವುದು ವಿಪರ್ಯಾಸ.
ಕೊರೋನದಿಂದಾಗಿ ರಾಷ್ಟ್ರದ ಕೃಷಿ ಕ್ಷೇತ್ರ ತುಂಬಾ ತೊಂದರೆಯನ್ನು ಎದುರಿಸಿತು. ರೈತ ತಾನು ಉತ್ಪಾದಿಸಿದ ಬೆಳೆಗಳನ್ನು ಸಕಾಲಕ್ಕೆ ಮಾರುಕಟ್ಟೆಗೆ ಸಾಗಿಸಲು ವ್ಯವಸ್ಥಿತ ಸಾರಿಗೆ ಸೌಲಭ್ಯವಿಲ್ಲದೆ ಶೇ.60ರಷ್ಟು ಬೆಳೆ ನಾಶವನ್ನು ಎದುರಿಸಿದ್ದಾನೆ. ಅಲ್ಲದೆ, ಶೇ.10ರಷ್ಟು ರೈತರು ಕೊರೋನ ಸಂದರ್ಭದಲ್ಲಿ ಕೃಷಿಯನ್ನು ಮಾಡಿಲ್ಲ. ಇದರಿಂದಾಗಿ ಕೃಷಿ ಉತ್ಪನ್ನಗಳ ರಫ್ತಿನ ಪ್ರಮಾಣ ಶೇ.8ರಷ್ಟು ಕುಸಿತವಾಗಿದೆ. ದೇಶದ ವಾಣಿಜ್ಯ ವ್ಯವಹಾರಗಳ ಶೇ.53 ಕ್ಷೇತ್ರಗಳು ಕೊರೋನದಿಂದ ತತ್ತರಿಸಿರುವುದನ್ನು ಗಮನಿಸಬಹುದು. ದೇಶದ ನಿರುದ್ಯೋಗದ ಪ್ರಮಾಣವು ಶೇ.26ರಷ್ಟು ಹೆಚ್ಚಳವಾಗಿ ಜನಸಾಮಾನ್ಯರ ಬದುಕು ಬೀದಿಗೆ ಬಂದಿದೆ. ಸುಮಾರು 400 ಮಿಲಿಯನ್ ಅಸಂಘಟಿತ ವಲಯದ ಕಾರ್ಮಿಕ ವರ್ಗ ತೀವ್ರ ಬಡತನಕ್ಕೆ ತಳ್ಳಲ್ಪಟ್ಟಿದೆ. ಅಲ್ಲದೆ, ಶೇ.45 ಕುಟುಂಬಗಳು ಆದಾಯದ ಕುಸಿತವನ್ನು ಎದುರಿಸಿವೆ. ಕೈಗಾರಿಕೋದ್ಯಮಗಳು ಕಾರ್ಮಿಕರಿಗೆ ಸಂಬಳ ಮತ್ತು ಭತ್ತೆಗಳನ್ನು ಕಡಿತಗೊಳಿಸಿದ್ದಲ್ಲದೆ ಅನೇಕರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ.
ಇದಕ್ಕೆ ಪೂರಕವಾಗಿ ದಿನನಿತ್ಯದ ಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊರೋನದಿಂದಾಗಿ ಕೃಷಿ ಕ್ಷೇತ್ರದ ಉತ್ಪಾದನೆ ಕುಂಠಿತವಾಗಿ ಆಹಾರ ಪದಾರ್ಥಗಳ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಈ ಪರಿಸ್ಥಿತಿಯ ಲಾಭವನ್ನು ಮಧ್ಯವರ್ತಿಗಳು, ದಲ್ಲಾಳಿಗಳು ಹಾಗೂ ವರ್ತಕರು ಪಡೆದಿರುವುದನ್ನು ಕಾಣಬಹುದಾಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಹೆಚ್ಚಳವಾಗಿ ಜನರ ಬದುಕು ಮತ್ತಷ್ಟು ನಿಕೃಷ್ಟವಾಗಿದ್ದು ಶೋಚನೀಯ. ಕುಡಿಯುವ ನೀರು, ಗಾಳಿಗೂ ದೇಶದ ಜನತೆ ಅಧಿಕ ಬೆಲೆ ತೆರಬೇಕಾಗಿರುವ ಪರಿಸ್ಥಿತಿ ಎದುರಾಗಿದೆ. ಆದರೆ, ಜನಸಾಮಾನ್ಯರ ಬದುಕು ಕುಸಿತವನ್ನು ಕಂಡಿರುವ ಸಂದರ್ಭದಲ್ಲಿ ದೇಶದ ಶ್ರೀಮಂತರ ಸಂಪತ್ತು ಮತ್ತಷ್ಟು ಹೆಚ್ಚಾಗಿರುವುದು ಆಡಳಿತದಲ್ಲಿನ ವೈಫಲ್ಯವನ್ನು ತೋರುತ್ತದೆ. ವಿಶ್ವ ಅಸಮಾನತೆಯ ವರದಿ 2022ರ ಅನ್ವಯ ಭಾರತದ ಅಗ್ರ ಶೇ.10 ಜನರಲ್ಲಿ ದೇಶದ ಶೇ.57 ಸಂಪತ್ತು ಕ್ರೋಡೀಕರಣವಾಗಿದೆ. ಅಲ್ಲದೆ, ಶೇ.50 ಜನರಲ್ಲಿ ಕೇವಲ ಶೇ.13 ಸಂಪತ್ತಿದೆ ಎಂದು ತಿಳಿದು ಬಂದಿದೆ. ವಿಪರ್ಯಾಸವೆಂಬಂತೆ ಜಾಗತಿಕ ಹಸಿವಿನ ಸೂಚ್ಯಂಕದ 116 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 101ನೇ ಸ್ಥಾನದಲ್ಲಿದೆ. ಭಾರತದಲ್ಲಿನ ಶೇ.27.5 ಜನಸಂಖ್ಯೆ ತೀವ್ರತರವಾದ ಹಸಿವು, ಬಡತನದಿಂದ ಬಳಲುತ್ತಿದ್ದಾರೆಂಬುದು ನಾಚಿಕೆಗೇಡಿನ ಸಂಗತಿ. ಇದಕ್ಕೆಲ್ಲಾ ಮುಖ್ಯ ಕಾರಣ ನಮ್ಮಲ್ಲಿರುವ ಸ್ವಾರ್ಥ, ಸ್ವಜನ ಪಕ್ಷಪಾತ ಹಾಗೂ ದುರಾಡಳಿತವಾಗಿದೆ.
ಒಟ್ಟಾರೆ ದೇಶದ ಜನಸಂಖ್ಯೆಯು ಅನೇಕ ಹಿಂಜರಿತಗಳಿಂದ ನಲುಗಿರುವ ಸಂದರ್ಭದಲ್ಲಿ ಜನರ ಶ್ರೇಯೋಭಿವೃದ್ಧಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಆಳುವ ಸರಕಾರಗಳು ಕಲ್ಪಿಸಬೇಕಿದೆ. ಕುಡಿಯುವ ನೀರು, ಆಹಾರ ಪೂರೈಕೆ, ವಸತಿ ನಿರ್ಮಾಣ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಆರೋಗ್ಯ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಸುಧಾರಣೆಯನ್ನು ತರುವ ಅಗತ್ಯವಿದೆ. ಸರಕಾರದ ಕಲ್ಯಾಣ ಕಾರ್ಯಕ್ರಮಗಳಾದ ಪಡಿತರ ವಿತರಣೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ದೀನ ದಲಿತರ ಕಲ್ಯಾಣ ಯೋಜನೆಗಳು ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪುವಂತೆ ಆಡಳಿತದಲ್ಲಿ ದಕ್ಷತೆಯನ್ನು ತರಬೇಕಿದೆ. ಅತೀ ಶ್ರೀಮಂತರ ಆದಾಯಗಳ ಮೇಲೆ ಸಮರ್ಪಕ ತೆರಿಗೆ ನೀತಿಯನ್ನು ಜಾರಿಗೊಳಿಸಿದರೆ ದೇಶದ ಬಡತನವನ್ನು ಕೆಲವೇ ವರ್ಷಗಳಲ್ಲಿ ನಿರ್ಮೂಲನೆ ಮಾಡಬಹುದಾಗಿದೆ. ಅಲ್ಲದೆ, ಜನರ ಜೀವನಮಟ್ಟವನ್ನು ಆಧರಿಸಿ ರೂಪುಗೊಂಡಿದ್ದ ಮಂಡಲ್ ವರದಿ(1979), ಸಾಚಾರ್ ಸಮಿತಿ(2005), ನಾಗಮೋಹನ್‌ದಾಸ್ ಸಮಿತಿ(2018)ವರದಿಗಳನ್ನು ಜಾರಿಗೊಳಿಸುವತ್ತ ಯೋಚಿಸಬೇಕಿದೆ. ಪ್ರಸ್ತುತ ಜಾರಿಯಲ್ಲಿರುವ ಬಡತನ ರೇಖೆಯ ವ್ಯಾಖ್ಯಾನವನ್ನು ಮರು ಪರಿಶೀಲಿಸಿ ಅಗತ್ಯ ಕಾನೂನುಗಳನ್ನು ರೂಪಿಸದ ಹೊರತು ದೇಶದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲಾಗದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.