‘‘ನನ್ನ ಹೆಸರೇ ಸ್ಟಾಲಿನ್’’ | Vartha Bharati- ವಾರ್ತಾ ಭಾರತಿ

--

ಸಿಪಿಎಂ ವಾರ್ಷಿಕ ಅಧಿವೇಶನದಲ್ಲಿ ಬಿಜೆಪಿಯನ್ನು ಎದುರಿಸಲು ಡಿಎಂಕೆ ನಾಯಕನಿಂದ ಮಾರ್ಗನಕ್ಷೆ

‘‘ನನ್ನ ಹೆಸರೇ ಸ್ಟಾಲಿನ್’’

‘‘ದ್ರಾವಿಡ ಪಕ್ಷಗಳು ಮತ್ತು ಕಮ್ಯುನಿಸ್ಟರ ನಡುವಿನ ಬಾಂಧವ್ಯವು ಕಳೆದ ಶತಮಾನದ ಆರಂಭದಿಂದಲೇ ಪ್ರಾರಂಭಗೊಂಡಿದೆ. ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ತಮಿಳಿಗೆ ಭಾಷಾಂತರಿಸಿದವರೇ ಪೆರಿಯಾರ್. ರಶ್ಯದ ಕ್ರಾಂತಿಕಾರರ ಹೆಸರುಗಳನ್ನು ಮಕ್ಕಳಿಗೆ ಇಡುವ ಪರಂಪರೆ ನಮ್ಮಲ್ಲಿ (ತಮಿಳರಲ್ಲಿ) ಇದೆ. ನನ್ನ ಹೆಸರೇ ಸ್ಟಾಲಿನ್. ನಮ್ಮ ಬಾಂಧವ್ಯವನ್ನು ಸಾಬೀತುಪಡಿಸಲು ಇದಕ್ಕಿಂತ ಹೆಚ್ಚಿನದನ್ನು ಹೇಳುವ ಅಗತ್ಯವಿದೆಯೇ?’’ ಎಂದು ತಮಿಳುನಾಡು ಮುಖ್ಯಮಂತ್ರಿ ಹೇಳಿದ್ದಾರೆ.

ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ 23ನೇ ಅಧಿವೇಶನದಲ್ಲಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿರುವ ‘‘ನನ್ನ ಹೆಸರೇ ಸ್ಟಾಲಿನ್’’ ಎಂಬ ಮಾತುಗಳು ಸಂಚಲನ ಹುಟ್ಟಿಸಿವೆ. ಇದು ಕಮ್ಯುನಿಸ್ಟ್ ಪಕ್ಷಗಳು ಮತ್ತು ದ್ರಾವಿಡ ಪಕ್ಷಗಳ ನಡುವಿನ ನೂತನ ಸೈದ್ಧಾಂತಿಕ ಬಾಂಧವ್ಯಕ್ಕೆ ನಾಂದಿ ಹಾಡಬಹುದು ಎಂಬುದಾಗಿ ಭಾವಿಸಲಾಗಿದೆ. ಭಾರತೀಯ ಜನತಾ ಪಕ್ಷವು ದೇಶಾದ್ಯಂತ ಪ್ರಾಬಲ್ಯ ಸಾಧಿಸುತ್ತಿರುವ ಹಾಗೂ ಭಾರತೀಯ ರಾಜಕಾರಣದಲ್ಲಿ ವೈವಿಧ್ಯತೆಯು ಕಡಿಮೆಗೊಳ್ಳುತ್ತಿರುವ ಸಮಯದಲ್ಲಿ ಈ ಬೆಳವಣಿಗೆಯು ಮಹತ್ವವನ್ನು ಪಡೆದುಕೊಂಡಿದೆ.

 ‘ಕೇಂದ್ರ-ರಾಜ್ಯ ಸಂಬಂಧಗಳು’ ಎಂಬ ವಿಷಯದ ಕುರಿತ ವಿಚಾರಸಂಕಿರಣವೊಂದರಲ್ಲಿ ಮಾತನಾಡಿದ ಅವರು, ಅಧಿಕಾರದ ಕೇಂದ್ರೀಕರಣ ನಡೆಸುತ್ತಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದರು. ಸ್ಟಾಲಿನ್ ತನ್ನ ಭಾಷಣವನ್ನು ಮಲಯಾಳಂನಲ್ಲಿ ಆರಂಭಿಸಿದಾಗ ಸಭಿಕರು ಹರ್ಷೋದ್ಗಾರಗೈದರು. ಬಳಿಕ, ನಿಧಾನವಾಗಿ ತಮಿಳಿಗೆ ಹೊರಳಿದರು. ದ್ರಾವಿಡ ಪಕ್ಷಗಳು ಮತ್ತು ಕಮ್ಯುನಿಸ್ಟರ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಸ್ಟಾಲಿನ್ ನೆನಪಿಸಿದರು. ಭಾರತೀಯ ಒಕ್ಕೂಟದಲ್ಲಿರುವ ರಾಜ್ಯಗಳಿಗೆ ಸಂವಿಧಾನ ನೀಡಿರುವ ಖಾತರಿಗಳನ್ನು ಪಡೆಯುವುದಕ್ಕಾಗಿ ಬೃಹತ್ ರಾಜಕೀಯ ಒಕ್ಕೂಟವೊಂದನ್ನು ನಿರ್ಮಿಸುವ ಪ್ರಸ್ತಾವವನ್ನು ಮುಂದಿಟ್ಟರು.

‘‘ದ್ರಾವಿಡ ಪಕ್ಷಗಳು ಮತ್ತು ಕಮ್ಯುನಿಸ್ಟರ ನಡುವಿನ ಬಾಂಧವ್ಯವು ಕಳೆದ ಶತಮಾನದ ಆರಂಭದಿಂದಲೇ ಪ್ರಾರಂಭಗೊಂಡಿದೆ. ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ತಮಿಳಿಗೆ ಭಾಷಾಂತರಿಸಿದವರೇ ಪೆರಿಯಾರ್. ರಶ್ಯದ ಕ್ರಾಂತಿಕಾರರ ಹೆಸರುಗಳನ್ನು ಮಕ್ಕಳಿಗೆ ಇಡುವ ಪರಂಪರೆ ನಮ್ಮಲ್ಲಿ (ತಮಿಳರಲ್ಲಿ) ಇದೆ. ನನ್ನ ಹೆಸರೇ ಸ್ಟಾಲಿನ್. ನಮ್ಮ ಬಾಂಧವ್ಯವನ್ನು ಸಾಬೀತುಪಡಿಸಲು ಇದಕ್ಕಿಂತ ಹೆಚ್ಚಿನದನ್ನು ಹೇಳುವ ಅಗತ್ಯವಿದೆಯೇ?’’ ಎಂದು ತಮಿಳುನಾಡು ಮುಖ್ಯಮಂತ್ರಿ ಹೇಳಿದರು.

ಸಿಪಿಎಮ್ ಪಕ್ಷದ ವಾರ್ಷಿಕ ಅಧಿವೇಶನ (ಕಾಂಗ್ರೆಸ್) ಎಪ್ರಿಲ್ 6ರಿಂದ 10ರವರೆಗೆ ಕೇರಳದ ಕಣ್ಣೂರಿನಲ್ಲಿ ನಡೆಯಿತು. ನಾಲ್ಕು ದಿನಗಳ ಅಧಿವೇಶನದ ವಿಚಾರಸಂಕಿರಣವೊಂದರಲ್ಲಿ ಸ್ಟಾಲಿನ್‌ರ ಉಪಸ್ಥಿತಿಯು ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ. ತಮಿಳುನಾಡಿನ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಡಿಎಂಕೆಯು ಎಡ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆಯಾದರೂ, 1967ರಲ್ಲಿ ಡಿಎಂಕೆ ಮೊದಲು ಅಧಿಕಾರಕ್ಕೆ ಬಂದಂದಿನಿಂದಲೂ ಈ ಪಕ್ಷಗಳು ಪರಸ್ಪರರನ್ನು ಟೀಕಿಸುತ್ತಾ ಬಂದಿವೆ.

ಕೇರಳದ ಎಡರಂಗ ಸರಕಾರ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿ ಸರಕಾರಗಳು ಕೇಂದ್ರ ಸರಕಾರದ ಅಧಿಕಾರ ಕೇಂದ್ರೀಕರಣ ಪ್ರವೃತ್ತಿಯನ್ನು ವಿರೋಧಿಸುವಲ್ಲಿ ಮುಂಚೂಣಿಯಲ್ಲಿವೆ. ಹಾಗಾಗಿ, ಸಿಪಿಎಂ ಪಕ್ಷದ ವಾರ್ಷಿಕ ಅಧಿವೇಶನದಲ್ಲಿ ಈ ಎರಡು ಶಕ್ತಿಗಳು ಜೊತೆಯಾಗಿರುವುದು, ಬಿಜೆಪಿ ವಿರುದ್ಧದ ದೀರ್ಘಾವಧಿ ಸೈದ್ಧಾಂತಿಕ ಮಿತ್ರಕೂಟವೊಂದು ರಚನೆಯಾಗುವ ಸಾಧ್ಯತೆಯೊಂದನ್ನು ತೆರೆದಿಟ್ಟಿದೆ.

‘‘ನಾವು ನೈಜ ಒಕ್ಕೂಟ ಭಾರತವೊಂದನ್ನು ಸೃಷ್ಟಿಸಬೇಕಾಗಿದೆ’’ ಎಂಬುದಾಗಿ ಈ ಸಂದರ್ಭದಲ್ಲಿ ಸ್ಟಾಲಿನ್ ಮನವಿ ಮಾಡಿದರು.

‘‘ನಮ್ಮ ಸಂವಿಧಾನದ ಸ್ಥಾಪಕರು ಏಕೈಕ ಹಾಗೂ ಏಕ ವ್ಯವಸ್ಥೆಯ ಸರಕಾರವೊಂದನ್ನು ಸ್ಥಾಪಿಸಲಿಲ್ಲ. ಅವರು ಅಧಿಕಾರಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ಅವುಗಳನ್ನು ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ತಿ ಪಟ್ಟಿಯಲ್ಲಿಟ್ಟರು. ಅದೂ ಅಲ್ಲದೆ, ಪಂಚಾಯತ್ ರಾಜ್ ಕಾಯ್ದೆ ಅಂಗೀಕಾರಗೊಂಡ ಬಳಿಕ, ಸ್ಥಳೀಯ ಸರಕಾರಗಳಿಗೆ ಹಕ್ಕುಗಳನ್ನು ನೀಡಲಾಯಿತು ಹಾಗೂ ಅಧಿಕಾರಗಳನ್ನೂ ಹಂಚಿಕೆ ಮಾಡಲಾಯಿತು. ಹಾಗಾಗಿ, ಹಳ್ಳಿಗಳು ಬೆಳೆಯಬೇಕು. ಹಳ್ಳಿಗಳು ಬೆಳೆದರೆ ರಾಜ್ಯಗಳು ಸಮೃದ್ಧಗೊಳ್ಳುತ್ತವೆ ಹಾಗೂ ರಾಜ್ಯಗಳು ಅಭಿವೃದ್ಧಿ ಹೊಂದಿದರೆ, ದೇಶವು ಸಂಪದ್ಭರಿತವಾಗುತ್ತದೆ’’ ಎಂದರು.

ಅವರು ತನ್ನ ಮುಂದಿನ ವಾಕ್ಯದಲ್ಲೇ ತನ್ನ ರಾಜಕೀಯ ಕಾರ್ಯಸೂಚಿಯನ್ನು ಸ್ಪಷ್ಟಪಡಿಸಿದರು. ‘‘ಕೇಂದ್ರ ಸರಕಾರವು ಭಾರತದ ಹಳ್ಳಿಗಳು ಮತ್ತು ರಾಜ್ಯಗಳ ಅಧಿಕಾರಗಳನ್ನು ಛಿದ್ರಗೊಳಿಸುತ್ತಿದೆ. ಇದು ಭಾರತೀಯ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ’’ ಎಂದರು.

‘‘ಭಾರತೀಯ ಸಂವಿಧಾನವು ನಿರೂಪಿಸಿರುವ ವ್ಯಾಪ್ತಿಯನ್ನು ಕೇಂದ್ರ ಸರಕಾರವು ಉಲ್ಲಂಘಿಸುತ್ತಿದೆ ಹಾಗೂ ಅದು ರಾಜ್ಯಗಳ ಅಧಿಕಾರಗಳನ್ನು ಒತ್ತುವರಿ ಮಾಡುತ್ತಿದೆ. ಬಿಜೆಪಿಯ ರಾಜಕೀಯ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಆ ಪಕ್ಷದ ರಾಜಕೀಯ ವಿರೋಧಿಗಳನ್ನು ಮೂಲೆಗುಂಪು ಮಾಡುವುದು ಇದರ ಉದ್ದೇಶವಾಗಿದೆ’’ ಎಂದರು.

‘‘ಹಿಂದೆ ಭಾರತವನ್ನು ಆಳಿರುವ ಬ್ರಿಟಿಷರು ಕೂಡ ಈಗ ಮಾಡಲಾಗುತ್ತಿರುವಂತೆ ಸರ್ವಶಕ್ತ ಏಕ ಸ್ವರೂಪದ ಸರಕಾರವೊಂದನ್ನು ರಚಿಸಲು ಉದ್ದೇಶಿಸಿರಲಿಲ್ಲ’’ ಎಂಬುದಾಗಿ ಸ್ಟಾಲಿನ್ ಹೇಳಿದರು.

‘‘1919ರ ಭಾರತ ಸರಕಾರ ಕಾಯ್ದೆಯಲ್ಲೂ, ಪ್ರಾಂತಗಳ ಸ್ವಯಮಾಡಳಿತಗಳು ಹೇಗಿರಬೇಕೆಂದರೆ, ಸ್ಥಳೀಯ ಪ್ರದೇಶಗಳು ಮತ್ತು ಪ್ರಾಂತಗಳ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಇಂಥ ಪ್ರಾಂತಗಳ ಏಕೀಕೃತ ರಚನೆಯ ಮೇಲೆ ಕೇಂದ್ರ ಸರಕಾರ ನಿಗಾ ಇಡಬೇಕು ಎಂಬುದಾಗಿಯೂ ಕಾಯ್ದೆ ಹೇಳಿತ್ತು’’ ಎಂದರು.

‘‘ರಾಜ್ಯಗಳು ಮತ್ತು ಸ್ಥಳೀಯ ಸರಕಾರಗಳ ಮೇಲೆ ನಿಯಂತ್ರಣ ಪಡೆಯುವುದಕ್ಕಾಗಿ, ಬ್ರಿಟಿಷರೂ ಮಾಡದ ರೀತಿಯಲ್ಲಿ ಅಧಿಕಾರಗಳನ್ನು ಕ್ರೋಡೀಕರಿಸುವ ಪ್ರವೃತ್ತಿಯನ್ನು ಕೇಂದ್ರ ಸರಕಾರವು ಹೊಂದಿದೆ’’ ಎಂದು ತಮಿಳುನಾಡು ಮುಖ್ಯಮಂತ್ರಿ ಹೇಳಿದರು.

ಮಹಾತ್ಮಾ ಗಾಂಧಿ ಮತ್ತು ಭಗತ್ ಸಿಂಗ್‌ರ ಮಾತುಗಳನ್ನು ಉಲ್ಲೇಖಿಸಿದ ಅವರು, ಸ್ವತಂತ್ರ ಭಾರತದಲ್ಲಿ ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು ವಿವರಿಸಿದರು.

‘‘ತಮ್ಮ ನಿವಾಸಿಗಳ ಕ್ಷೇಮಕ್ಕೆ ರಾಜ್ಯಗಳು ಜವಾಬ್ದಾರರು. ಇದನ್ನು ಖಾತರಿಪಡಿಸುವುದಕ್ಕಾಗಿ ಅವುಗಳು ಸಕ್ರಿಯವಾಗಿ ಶ್ರಮಿಸುತ್ತಿವೆ. ರಾಜ್ಯಗಳ ಮೇಲೆ ನಿಯಂತ್ರಣ ಸಾಧಿಸಿ ಅವುಗಳು ತಮ್ಮ ಮುಂದೆ ತೆವಳುವುದನ್ನು ನೋಡಲು ದಿಲ್ಲಿಯಲ್ಲಿರುವ ನಮ್ಮ ಆಡಳಿತಗಾರರು ಸಂತೋಷಪಡುತ್ತಾರಾದರೆ, ಅದು ಜನರಿಗೆ ಮಾಡುವ ವಿಶ್ವಾಸದ್ರೋಹವಲ್ಲವೇ? ಇದು ರಾಜ್ಯಗಳ ಮೇಲೆ ಸೇಡು ತೀರಿಸುವ ಕೃತ್ಯವಲ್ಲವೇ? ತಾವು ರಾಜ್ಯಗಳ ಮೇಲೆ ಸೇಡು ತೀರಿಸುತ್ತಿದ್ದೇವೆ ಎಂಬ ಭಾವನೆಯಲ್ಲಿ ಅವರು ಜನರ ಮೇಲೆ ಸೇಡು ತೀರಿಸುತ್ತಿದ್ದಾರೆ’’ ಎಂಬುದಾಗಿ ಸ್ಟಾಲಿನ್ ಹೇಳಿದರು. ಇದಕ್ಕೆ ಅವರು ಜಿಎಸ್‌ಟಿ ಹಾಗೂ ಯೋಜನಾ ಆಯೋಗ ಮತ್ತು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಗಳ ರದ್ದತಿಯ ಉದಾಹರಣೆಯನ್ನು ನೀಡಿದರು. ರಾಜ್ಯಗಳ ಸಂಪನ್ಮೂಲಗಳಲ್ಲಿ ಕಡಿತ ಮಾಡುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅವುಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ ಎಂದರು.

‘‘ಈಗ ಕಾನೂನುಗಳನ್ನು ಚರ್ಚೆಯಿಲ್ಲದೆಯೇ ಜಾರಿಗೊಳಿಸಲಾಗುತ್ತಿದೆ. ಸಂಸತ್ತಿನಲ್ಲಿ ಈಗ ವಿಶೇಷ, ಅರ್ಥಪೂರ್ಣ ಚರ್ಚೆಗಳು ನಡೆಯುತ್ತಿಲ್ಲ. ಅದೂ ಅಲ್ಲದೆ, ಕೇಳಲಾಗುವ ಯಾವುದೇ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುವುದಿಲ್ಲ. ತಾನು ಯಾರಿಗೂ ಉತ್ತರದಾಯಿತ್ವ ಹೊಂದಿಲ್ಲ ಎಂಬ ರೀತಿಯಲ್ಲಿ ದಿಲ್ಲಿಯ ಸರಕಾರ ವರ್ತಿಸುತ್ತಿದೆ. ಕೇಂದ್ರದ ಬಿಜೆಪಿ ಸರಕಾರವು ಈಗ ಯಾವುದೇ ತಡೆಯಿಲ್ಲದೆ, ಅಧಿಕಾರ ದಾಹಕ್ಕಾಗಿ ಕೆಲಸ ಮಾಡುತ್ತಿದೆ. ನಮ್ಮ ಹಳ್ಳಿಗಳಲ್ಲಿರುವ ಸಹಕಾರಿ ಸಂಘಗಳನ್ನೂ ನಿಯಂತ್ರಣಕ್ಕೆ ಪಡೆಯಲು ಅದು ಮುಂದಾಗಿದೆ’’ ಎಂದು ಡಿಎಂಕೆ ಮುಖ್ಯಸ್ಥ ಹೇಳಿದರು.

‘‘ಭಾರತದ ವೈವಿಧ್ಯತೆ, ಒಕ್ಕೂಟ ವ್ಯವಸ್ಥೆಯ ತತ್ವಗಳು, ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾನತೆ, ಭ್ರಾತೃತ್ವ, ರಾಜ್ಯಗಳ ಹಕ್ಕುಗಳು ಮತ್ತು ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸಲು ನಾವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು ಹಾಗೂ ಒಂದಾಗಬೇಕು’’ ಎಂದು ಸ್ಟಾಲಿನ್ ಮನವಿ ಮಾಡಿದರು.

‘‘ಕೆಂಪು ಸಲಾಮ್, ಕಾಮ್ರೇಡ್‌ಗಳೇ’’ ಎಂದು ಹೇಳುವ ಮೂಲಕ ತನ್ನ ಭಾಷಣವನ್ನು ಅವರು ಮುಕ್ತಾಯಗೊಳಿಸಿದರು.

ಕೃಪೆ:thewire.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top