ಜೋಗ ಜಲಪಾತಕ್ಕೆ ಓದುಗರ ಮೈ ಮನ ಒಡ್ಡಿಸುವ ಕತೆಗಾರ: ಬಿ.ಸಿ. ದೇಸಾಯಿ | Vartha Bharati- ವಾರ್ತಾ ಭಾರತಿ

--

ಜೋಗ ಜಲಪಾತಕ್ಕೆ ಓದುಗರ ಮೈ ಮನ ಒಡ್ಡಿಸುವ ಕತೆಗಾರ: ಬಿ.ಸಿ. ದೇಸಾಯಿ

ಕನ್ನಡ ಸಣ್ಣಕತೆಗಳ ಜಗತ್ತು ತುಂಬಾ ವಿಸ್ತಾರವಾದುದು. ಪಂಜೆ, ಕೆರೂರು, ಬಾಗಲೋಡಿ, ಕೊರಡ್ಕಲ್, ಮಾಸ್ತಿ, ಕುವೆಂಪು, ಆನಂದ, ಭಾರತೀಪ್ರಿಯ,ಅಶ್ವತ್ಥ, ಕೊಡಗಿನ ಗೌರಮ್ಮ, ಚದುರಂಗ, ಯಶವಂತ ಚಿತ್ತಾಲರು, ಯು.ಆರ್.ಅನಂತ ಮೂರ್ತಿ, ಲಂಕೇಶ್, ಕೆ.ಸದಾಶಿವ, ಖಾಸನೀಸ, ಶಾಂತರಸ, ಬೆಸಗರಹಳ್ಳಿ ರಾಮಣ್ಣ, ತೇಜಸ್ವಿ, ವೀಣಾ ಶಾಂತೇಶ್ವರ, ವೈದೇಹಿ, ಬಾನು ಮುಷ್ತಾಕ್, ಸಾರಾ, ಕಟ್ಪಾಡಿ, ಬೋಳುವಾರು, ಕುಂ.ವಿ. ನೀರಮಾನ್ವಿ, ನುಗಡೋಣಿ, ಮೊಗಳ್ಳಿ, ಹುಳಿಯಾರ್, ಕೇಶವ ಮಳಗಿ, ಗುರುಪ್ರಸಾದ್ ಕಾಗಿನೆಲೆ, ಒಬ್ಬರು ಇಬ್ಬರೆ ಅತ್ಯಂತ ಫಲವತ್ತಾದ ಬೆಳೆಯನ್ನು ಕನ್ನಡ ಕಥಾ ಜಗತ್ತು ಹೊಂದಿದೆ.

 ಈ ಸಮೃದ್ಧ ಕಥಾ ಜಗತ್ತಿನಲ್ಲಿ ಕೆಲವು ಕತೆಗಾರರನ್ನು ಒಂದು ತಲೆಮಾರಷ್ಟೇ ನೆನಪಿಸಿಕೊಳ್ಳುತ್ತದೆ. ಉಳಿದಂತೆ ಆ ಕತೆಗಾರರು ಮರೆತೇ ಹೋಗುತ್ತಾರೆ. ಹೀಗೆ ಕನ್ನಡ ಓದುಗ ಜಗತ್ತಿನಲ್ಲಿ ಮರೆತು ಹೋಗಿರುವ ವಿಶಿಷ್ಟ ಕತೆಗಾರ ಬಾಪು ಸಾಹೇಬ ದೇಸಾಯಿ ಯಾ ಬಿ.ಸಿ. ದೇಸಾಯಿ ಅವರು. ನಮ್ಮ ತಲೆಮಾರಿನವರಿಗೆ ಬಹುಶಃ ಪರಿಚಯವೇ ಇಲ್ಲದ ಕತೆಗಾರ ಬಿ.ಸಿ. ದೇಸಾಯಿ ಅವರು.

 ‘ಸಾವು ಮತ್ತು ಇತರ ಕತೆಗಳು’ ಎಂಬ ಎಂಟು ಕತೆಗಳ ಒಂದು ಸಂಕಲನ, ‘ಹುಸಿ’ ಒಂದು ಕವನ ಸಂಕಲನ ಮತ್ತು ಅಮೂರ್ತತೆ ಮತ್ತು ಇತರ ಲೇಖನಗಳು, ಎರಡು ವಿಮರ್ಶಾ ಸಂಕಲನಗಳನ್ನು ಕನ್ನಡ ಸಾಹಿತ್ಯ ಜಗತ್ತಿಗೆ ಕೊಟ್ಟವರು ಬಿ. ಸಿ. ದೇಸಾಯಿ ಅವರು.

 ಸುಮಾರು ಆರೂವರೆ ಸಾವಿರ ಎಕರೆ ಜಮೀನು ಹೊಂದಿದ, ಸಾಲಹಳ್ಳಿಯ ಕೊಡುಗೈ ದೊರೆ ಎನಿಸಿಕೊಂಡಿದ್ದ ಚಂದೂರಾವ್ ದೇಸಾಯಿ ಅವರ ಒಬ್ಬನೇ ಮಗನಾಗಿ 1941ರ ಫೆಬ್ರವರಿ 24ರಂದು ಜನಿಸಿದ, ಬಾಪು ಸಾಹೇಬ ದೇಸಾಯಿ ರಾಮದುರ್ಗದ ಸ್ಟೇಟ್ ಹೈಸ್ಕೂಲಿನಿಂದ ಮೆಟ್ರಿಕ್ ಪಾಸಾಗಿ, ಕೊಲ್ಲಾಪುರಕ್ಕೆ ಮುಂದಿನ ವಿದ್ಯಾಭ್ಯಾಸಕ್ಕೆ ಹೋದವರು, ಓದಿನಲ್ಲಿ ಮುಂದಿದ್ದರು. ತಮ್ಮ ಇಂಗ್ಲಿಷ್ ಎಂ.ಎ. ಅಧ್ಯಯನದ ವೇಳೆಗಾಗಲೇ ಮಾರ್ಕ್ಸ್ ನಿಂದ ತೀವ್ರ ಪ್ರಭಾವಕ್ಕೆ ಒಳಗಾದರು. ಮಾರ್ಕ್ಸ್‌ವಾದ ಅತ್ಯಂತ ಮಹತ್ವದ ವಿಚಾರಧಾರೆಯಾಗಿದ್ದು ಅದನ್ನು ಅಲಕ್ಷಿಸಿ ಅಥವಾ ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣದಿಂದಾಗಿಯೇ ನಮ್ಮ ಇತಿಹಾಸದ ದುರಂತಗಳನ್ನು ತಿಳಿದುಕೊಳ್ಳಲಾಗದು ಎಂದು ನಂಬಿದ್ದರು.ಲೋಹಿಯಾರ ಕಡು ವಿರೋಧಿಯಾಗಿದ್ದ ಇವರು ಆ ವೇಳೆಗಾಗಲೆ ಜಗತ್ತಿನ ಶ್ರೇಷ್ಠ ಲೇಖಕರನ್ನೆಲ್ಲಾ ಓದಿಕೊಂಡಿದ್ದರು. ಎಂ.ಎ. ವಿದ್ಯಾಭ್ಯಾಸವನ್ನು ಅನಿವಾರ್ಯ ಕಾರಣಗಳಿಂದ ಮುಂದುವರಿಸಲಾರದೆ ಶಿಕ್ಷಣ ತೊರೆದು ಸಾಲಹಳ್ಳಿಗೆ ಮರಳಬೇಕಾಯಿತು.

ಆ ವೇಳೆಗಾಗಲೇ ದೇಸಾಯಿ ಮನೆತನಗಳು ಅವನತಿಯ ಹಾದಿ ಹಿಡಿಯುತ್ತಿದ್ದಂತೆ ಬಿ.ಸಿ. ದೇಸಾಯಿಯವರು ತಮ್ಮ ವಾಡೆಯನ್ನು ಮಾರಿ ತಮ್ಮ ಹೊಲದಲ್ಲೇ ಒಂದು ಪುಟ್ಟ ಮನೆ ಕಟ್ಟಿಸಿಕೊಂಡು ಅಲ್ಲೇ ವಾಸವಾದರು. ಮನೆಯ ಬಾಗಿಲಲ್ಲೇ ಒಂದು ದೊಡ್ಡ ಗ್ರಂಥಾಲಯವಿತ್ತು. ಜಗತ್ತಿನ ಶ್ರೇಷ್ಠ ಪುಸ್ತಕಗಳೆಲ್ಲಾ ಆ ಲೈಬ್ರರಿಯಲ್ಲಿ ಇದ್ದವು. ದೇಸಾಯಿ ಒಂದು ಕಾಲದಲ್ಲಿ ಧಣಿ ಆಗಿದ್ದವರು. ಆದರೆ ಅವರ ಮನೆಯ ಪಾರುಪತ್ಯ ವಹಿಸಿಕೊಂಡದ್ದು ಹಣಮಂತ ಎಂಬ ದಲಿತ. ಆತನಿಗೆ ತನ್ನ ಧಣಿ ದೇಸಾಯಿಯವರು ಎಂದರೆ ಪಂಚಪ್ರಾಣ. ಯಾಕೆಂದರೆ ಅಷ್ಟು ಹೃದಯವಂತರು ಬಿ.ಸಿ. ದೇಸಾಯಿಯವರು.

 ದೇಸಾಯಿಯವರಿಗೆ ಅವರು ಬರೆಯುವ ಕಾಲದಲ್ಲಿ ಗೆಳೆಯರಾಗಿದ್ದು ಚಂದ್ರಶೇಖರ ಕಂಬಾರರು. ಕಂಬಾರರು ಮತ್ತು ದೇಸಾಯಿಯವರ ಗೆಳೆತನ ಯಾವ ಮಟ್ಟದ್ದು ಎಂದರೆ, ಕಂಬಾರರು ತಾವು ಬರೆದ ನಾಟಕವನ್ನಾಗಲಿ, ಕವಿತೆಯನ್ನಾಗಲಿ ಮೊದಲು ಓದುತ್ತಿದ್ದುದು ಮತ್ತು ಅದನ್ನು ತಿದ್ದಿ, ಇದು ಹೀಗಿರಬೇಕಿತ್ತು ಎಂದು ವಿಮರ್ಶೆ ಮಾಡಿಯೋ ಇಲ್ಲ ಮೆಚ್ಚುಗೆ ವ್ಯಕ್ತಪಡಿಸಿದ ಮೇಲಷ್ಟೇ ಅದು ಮುದ್ರಣಕ್ಕೆ ಹೋಗುತ್ತ್ತಾ ಇದ್ದ್ದುದು. ಬಿ.ಸಿ. ದೇಸಾಯಿಯವರು ಹುಟ್ಟಾ ಶ್ರೀಮಂತರಾಗಿದ್ದರೂ ಅತ್ಯಂತ ಸರಳ ಜೀವಿ, ಅಷ್ಟೇ ನಮ್ರ ನಡವಳಿಕೆ ಆದರೆ ಆಕ್ರಮಣಶೀಲ ವ್ಯಕ್ತಿತ್ವ. ಅವರ ಪ್ರೀತಿಯ ಅಪ್ಪುಗೆಯಲ್ಲಿ, ಔದಾರ್ಯದ ಉರುಳಲ್ಲಿ ಅವರ ಬಳಿಗೆ ಹೋದವರನ್ನು ಸಿಕ್ಕಿಸಿ ಬಿಡುತ್ತಿದ್ದರು. ತಮ್ಮ ಕಡೆಯ ದಿನಗಳವರೆಗೂ ತಮ್ಮ ಊರಾದ ಸಾಲಹಳ್ಳಿ, ಹೆಚ್ಚೆಂದರೆ ಬೆಳಗಾವಿಗೆ ತಮ್ಮ ಸಾಹಿತ್ಯಿಕ ಮತ್ತದರ ಸಂಬಂಧಗಳನ್ನು ವಿಸ್ತರಿಸಿಕೊಂಡಿದ್ದರೇ ಹೊರತು ಅದರಿಂದಾಚೆಗೆ ಕಡೆಯವರೆಗೂ ವಿಸ್ತರಿಸಿಕೊಳ್ಳಲಿಲ್ಲ. ಎಂದೂ ಅಗ್ಗದ ಪ್ರಚಾರ ಬಯಸದ ಬಿ.ಸಿ. ದೇಸಾಯಿವರು 1990ರಲ್ಲಿ ತೀರಿಕೊಂಡರು.

ಬಿ.ಸಿ. ದೇಸಾಯಿಯವರು ತಮ್ಮ ನಲ್ವತ್ತೊಂಬತ್ತು ವರ್ಷಗಳ ಜೀವಿತಾವಧಿಯಲ್ಲಿ ಬರೆದದ್ದು ಒಟ್ಟು ಎಂಟು ಕತೆಗಳನ್ನಷ್ಟೆ. ಆ ಕತೆಗಳು 1984ರಲ್ಲಿ ಪ್ರಿಂಟರ್ಸ್ ಪ್ರಕಾಶನದ ವತಿಯಿಂದ ಪ್ರಕಟಗೊಂಡಿತು.

ತಮ್ಮ ಈ ಎಂಟು ಕತೆಗಳಿಂದಲೇ ಬಿ.ಸಿ. ದೇಸಾಯಿಯವರು ಕನ್ನಡದ ವಿಶಿಷ್ಟ, ವಿಕ್ಷಿಪ್ತ ಕತೆಗಾರ ಅನ್ನಿಸಿಕೊಂಡಿದ್ದಾರೆ.

 ಇವರ ಕತೆಗಳು ಹೊಸಗನ್ನಡದ ಟಿಪಿಕಲ್ ಸಿದ್ಧ ಮಾದರಿ ಕತೆಗಳಿಗಿಂತ ಭಿನ್ನ ಸ್ವರೂಪದವು. ಬಿ.ಸಿ. ದೇಸಾಯಿವರು ತೀವ್ರ ವಾಸ್ತವವಾದಿ ಕತೆಗಾರ. ಇವರ ಕತೆಗಳನ್ನು ಓದುತ್ತಿದ್ದರೆ, ನಮ್ಮ ಜೈನ ತೀವ್ರ ವಾಸ್ತವವಾದಿ ಕತೆಗಾರರು ಥಟ್ಟನೆ ನೆನಪಾಗುತ್ತಾರೆ. ಮನುಷ್ಯನನ್ನು ಸಹಜವಾಗಿ ರೂಪಿಸುವ ಶಕ್ತಿಗಳೆಂದರೆ ಕಾಮ, ಅಧಿಕಾರ, ಗರ್ವ, ಅಹಂಕಾರ, ಸಾವು ಇವುಗಳು ಇವರ ಎಲ್ಲಾ ಕತೆಗಳಲ್ಲೂ ಮತ್ತೆ ಮತ್ತೆ ಚರ್ಚಿತವಾಗುವಂತಹವು. ಇವರ ಕತೆಗಳಲ್ಲಿ ಬರುವ ಪಾತ್ರಗಳು ಬದುಕಿನ ಅನುಭವಕ್ಕೆ ತಮ್ಮನ್ನು ತಾವು ತೆತ್ತುಕೊಂಡು, ಆ ಅನುಭವದ ಮುಖಾಮುಖಿಯಲ್ಲಿ ಉಂಟಾಗುವ ಎಲ್ಲಾ ಬಗೆಯ ತಾಕಲಾಟಗಳಿಗೆ ಎದೆಗುಂದದೆ ಇರುವಂತಹವರು. ಮನುಷ್ಯನ ಶರೀರವನ್ನು ಇವರಷ್ಟು ತೀವ್ರವಾಗಿ ಶೋಧಿಸಹೊರಟ ಮತ್ತು ಮನುಷ್ಯನನ್ನು ಇಷ್ಟು ಮೂಲಭೂತ ಸ್ಥಿತಿಯಲ್ಲಿ ನೋಡಿದ ಮತ್ತೊಬ್ಬ ಕತೆಗಾರ ಕನ್ನಡದಲ್ಲಿ ಇಲ್ಲವೇನೋ ಅನ್ನಿಸುತ್ತದೆ.

 ಇವರ ಕತೆಗಳಲ್ಲಿ ಬರುವ ಹೆಣ್ಣಿನ ಪಾತ್ರಗಳಂತೂ ಕನ್ನಡದ ಸಣ್ಣ ಕಥಾ ಪರಂಪರೆಯ ವಿಶಿಷ್ಟ ಪಾತ್ರಗಳು. ಅವರ ‘ಗಂಟುಗಳು’ ಕತೆಯಲ್ಲೇ ಬರುವ ಸಂಗವ್ವ ಆಕೆ ತನ್ನ ಜನನೇಂದ್ರಿಯ ಒಂದನ್ನು ಬಿಟ್ಟು ಪೂರ್ತಿ ಗಂಡಸಾಗಿದ್ದಳು. ‘ಸಾವು’ ಕತೆಯಲ್ಲಿನ ಸಂಗವ್ವನಾಗಲಿ, ‘ಗರ್ದಿ ಗಮ್ಮತ್ತು’ ಕತೆಯ ಕುಮುದ ಪಾತ್ರವಾಗಲಿ, ‘ಬಲಾತ್ಕಾರ’ ಕತೆಯ ಮಿಸ್ ಅಭಾದೇವಿ ಮತ್ತು ನಿರೂಪಕನ ಹೆಂಡತಿ ‘ನೀನು’ ಆಗಲಿ ಈ ಒಂದೊಂದು ಪಾತ್ರಗಳು ಮನುಷ್ಯ ಬದುಕಿನ ಕಾಮ, ನೈತಿಕತೆ, ಋಜುತ್ವ ಇವುಗಳ ಆಳಕ್ಕಿಳಿದು ಅನೇಕ ಸೂಕ್ಷ್ಮಪ್ರಶ್ನೆಗಳನ್ನು ಕೇಳುವಂತಹವು.

ಇವರ ಮೊದಲ ಪ್ರಕಟಿತ ಕತೆ ‘ಬಲಾತ್ಕಾರ’. ದಾಂಪತ್ಯದಲ್ಲಿ ಹೆಣ್ಣಿನ ಸುಖದ ಹುಡುಕಾಟಗಳ ಬಗೆಗಳು ಎಂತಹವು ಎಂಬುದನ್ನು, ಕತೆಯ ನಿರೂಪಕನ ಗೊಂದಲಗಳ ಮೂಲಕ ಹಾಗೂ ಆತನ ಹೆಂಡತಿ ಮತ್ತು ಆತ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕಿ ಆಭಾದೇವಿಯ ಸುಖದ ಹುಡುಕಾಟದಲ್ಲಿ ಬಲಿಪಶುವಾಗುತ್ತಿರುವ ಆತ, ಆತನಂತಹ ಗಂಡುಗಳ ಮೇಲಿನ ಬಲಾತ್ಕಾರದ ಆಕ್ರಮಣಶೀಲತೆಯನ್ನು ಕಟ್ಟಿಕೊಡುತ್ತದೆ.

‘ದುಷ್ಟ’ ಕತೆಯಂತೂ ಕೊಲ್ಹಾಪುರ ಸಂಸ್ಥಾನದ ದೇಸಗತಿ ಊರಿಗೆ ಹೊಸದಾಗಿ ಬಂದ ಶಾಣ್ಯ ಮಾಸ್ತರಾದ ನಿಂಗಣ್ಣ ಆ ಊರಿಗೆ ಬುದ್ಧಿಯಾಗಿ, ಬಾಯಾಗಿ ಅಗಾಧ ಬುದ್ಧಿವಂತಿಕೆಯಿಂದ ಇಡೀ ದೇಸಗತಿಯ ಕಾರ್ಯಭಾರದ ಸೂತ್ರಧಾರನಾಗುತ್ತಾನೆ.

ಹೀಗೆ ಇಡೀ ಊರಿನ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದ ಮಾಸ್ತರರ ಗರ್ವಕ್ಕೆ ಒಮ್ಮೆ ಊರಿನಲ್ಲಿ ನಡೆಯುವ ಲಕ್ಕವ್ವನ ದೇವರು ಮೈಮೇಲೆ ಬರುವ ಪ್ರಸಂಗದಿಂದ ಭಂಗ ಉಂಟಾಗುತ್ತದೆ. ಆಗ ಮಾಸ್ತರರರಿಂದ ಊರಿನ ಜನ ದೂರಾಗುತ್ತಾರೆ. ಮಾಸ್ತರರನ್ನು ಕಂಡರೆ ದೆವ್ವ ಕಂಡಂತೆ ಜನ ಗಡಗಡಿಸಿ ದೂರಾಗುತ್ತಾರೆ. ಕಡೆಗೆ ಮಾಸ್ತರರೊಂಗೆ ಯಾರೂ ಇಲ್ಲದಂತಾಗಿ ಮಾಸ್ತರರು ಒಂಟಿಯಾಗುತ್ತಾರೆ. ಒಂದು ದಿನ ಊರ ದೊಡ್ಡ ಆಲದ ಮರದ ಕೆಳಗೆ ದಂಗುಬಡಿದವರಂತೆ ಕೂತು ತನ್ನ ನಡವಳಿಕೆ, ಊರವರ ಪ್ರತಿಕ್ರಿಯೆ ಇವುಗಳ ಕುರಿತು ಯೋಚಿಸುತ್ತಾ ಹೋದ ಹಾಗೆ ಅವರಿಗೆ ಸತ್ಯದ ಅರಿವು ಆಗುತ್ತದೆ. ಆ ಊರನ್ನು ಬಿಟ್ಟು ಹೊರಡುತ್ತಾರೆ. ಮುಂದೆ ಆ ಊರಿಗೆ ಯಾವುದೇ ಮಾಸ್ತರ ಬರಲಿ ಮಾಸ್ತರ ಅಂದ್ರೆ ಊರಿನ ಅತಿದಡ್ಡ ಎತ್ತು ಎನ್ನುವ ಹಾಗೆ ಆಗುತ್ತೆ.

ಹೀಗೆ ಮನುಷ್ಯನೊಬ್ಬನ ಸಾಹಸ ಮತ್ತು ಆತನ ಅಹಂಕಾರಕ್ಕೆ ಬಿದ್ದ ಪೆಟ್ಟು ಮತ್ತು ಅದರಿಂದ ಕಂಡ ಸತ್ಯವನ್ನು ಬೆಳಗಾವಿಯ ಜವಾರಿ ಕನ್ನಡದಲ್ಲಿ ವಿವರಗಳ ಮೂಲಕ ಕಟ್ಟಿಕೊಡುವ ‘ದುಷ್ಟ’ ಕತೆ ವಿಶೇಷವಾದದ್ದು.

 ‘ಸಾವು’ ಬಿ. ಸಿ. ದೇಸಾಯರ ಅತ್ಯಂತ ಮಹತ್ವದ ಕತೆ. ಈ ಕತೆ ಬಹು ಮುಖ್ಯವಾಗಿ ಹಣಕ್ಕಾಗಿ, ಮಹತ್ವಾಕಾಂಕ್ಷೆಗಾಗಿ, ಅಧಿಕಾರಕ್ಕಾಗಿ ಮನುಷ್ಯನ ಒಳಗಡೆಯೇ ನಡೆಯುವ ಹೋರಾಟ, ಆ ಹೋರಾಟದಲ್ಲಿ ಕಂಡ ಅನುಭವದ ಸತ್ಯಕ್ಕೆ ಮುಖಾಮುಖಿಯಾಗುವ ಸಂದರ್ಭದಲ್ಲಿನ ದಿಗಿಲು, ಹತಾಶೆ ಇವುಗಳ ತಳಕ್ಕೆ ಹೋಗಿ ಎದುರಾಗುವಾಗಿನ ಭಾವಗಳನ್ನು ದೇಸಾಯಿ ಯವರು ಅತ್ಯಂತ ಕಲಾತ್ಮಕವಾಗಿ ಕಟ್ಟಿದ್ದಾರೆ.

 ‘ಅಧಿಕಾರ ಗಿಧಿಕಾರ ಇತ್ಯಾದಿ’ ಕತೆಯೂ ಕೂಡ ಮನುಷ್ಯನಿಗೆ ಅಧಿಕಾರದ ಮೇಲಿಂದ ಬರುವ ಗರ್ವ ಸೊಕ್ಕು, ಆ ಅಧಿಕಾರದ ಸೊಕ್ಕನ್ನು ‘ಕಾಮ’ದ ಮೇಲಿನ ಆಸೆಯಿಂದಲೇ ಮುರಿಯುವುದಕ್ಕೆ ಹೊರಡುವ ಪೊಲೀಸನೊಬ್ಬನ ಪ್ರಜಾಪ್ರಭುತ್ವವಾದಿ ನಿಲುವನ್ನು ಹೇಳುತ್ತದೆ.

  ‘ಗಂಟುಗಳು’ ಮತ್ತು ಈ ಕತೆ ಮನುಷ್ಯ ಸಂಬಂಧಗಳಲ್ಲಿನ ಬಿರುಕುಗಳನ್ನು, ಅದರಲ್ಲೂ ಗಂಡು - ಹೆಣ್ಣಿನ ಸಂಬಂಧಗಳಲ್ಲಿನ ವಿಷಮತೆಗಳು, ಅದರಲ್ಲೂ ದಾಂಪತ್ಯದೊಳಗಿನ ವಿಷಮತೆಗಳನ್ನು ಅದರಿಂದ ಕಂಡ ಸತ್ಯ, ಅವುಗಳ ಸಂಕೀರ್ಣತೆಯನ್ನು ಮನಶಾಸ್ತ್ರೀಯ ಹಿನ್ನೆಲೆಯಲ್ಲಿ ಚರ್ಚಿಸುತ್ತದೆ.

‘ಗರ್ದಿ ಗಮ್ಮತ್ತು’ ಕತೆಯು ನಿರೂಪಕನ ತಂಗಿ ಕುಮುದ ಮತ್ತು ಆಕೆಯ ಗಂಡನಿಂದ ತಿರಸ್ಕೃತಳಾಗಿ ತವರು ಮನೆಗೆ ಬಂದಾಗ, ನಿರೂಪಕ ತನ್ನ ತಂಗಿಯ ಸ್ವಭಾವದ ಮೂಲ ಹುಡುಕುತ್ತಾ ಹೊರಟು ಕಡೆಗೆ ಮನುಷ್ಯ ಪ್ರಜ್ಞೆಯಲ್ಲಿ ಬದುಕಿನ ಕಾಮ, ಸಂಬಂಧ, ಪಾತ್ರ, ಇತಿಹಾಸ, ಆರ್ಥಿಕತೆ , ಸಾಂಸ್ಥಿಕ ರಾಜಕಾರಣ ಇವೆಲ್ಲಾ ಒಂದಾಗಿ,ಯಾವ್ಯಾವುದೋ ರೂಪ ತಾಳಿ ಕುಮುದಳ ಪ್ರಜ್ಞೆಯಲ್ಲಿ ಕಡೆಗೆ ಸ್ಫೋಟಗೊಳ್ಳುವ ಬಗೆಯನ್ನು ಮತ್ತು ಇವೆಲ್ಲವುಗಳಿಂದ ಬಿಡಿಸಿಕೊಂಡು ಸಾಮಾನ್ಯನಾಗಿ ಬದುಕುವ ಬಗೆಯನ್ನು ಶೋಧಿಸುತ್ತದೆ.

  ‘ನನ್ನದನ್ನೂದೆಲ್ಲಾ’ ಕತೆಯು ಕುರುಬರ ಹಣಮಂತ ಮತ್ತು ಗಂಗವ್ವನ ಸುತ್ತಲೇ ಹೆಣೆದ ಕತೆ. ಅಷ್ಟೇನೂ ಸುಂದರಿಯಲ್ಲದ ಆದರೆ ಗಂಡನ್ನು ಸೆಳೆಯುವ ಗಂಗವ್ವ, ತಂದೆಯಂತಿದ್ದ ಊರಿನ ಗೌಡ ಚನ್ನಪ್ಪನೂ ಆಕೆಯ ಬಗ್ಗೆ ಪ್ರಚೋದಿತನಾಗುವ, ಆದರೆ ಅದನ್ನು ಅಭಿವ್ಯಕ್ತಮಾಡಲಾಗದೆ ಒದ್ದಾಡುವ ತೊಳಲಾಟ. ಶೆಟ್ಟರ ಬಸವಣ್ಣಿಯು ಗಂಗವ್ವನ ಜೊತೆಗಿನ ಸಂಬಂಧ ಗೌಡ ಮತ್ತು ಗಂಡ ಹಣಮಂತನಿಗೆ ಗೊತ್ತಾಗಿ ಗೌಡ ಶೆಟ್ಟಿಯ ಮೇಲೆ ಸೇಡು ತೀರಿಸಿಕೊಳ್ಳುವಂತೆ ಆತನಿಗೆ ಹಣದ ದಂಡ ಹಾಕಿದಾಗ, ಆ ಹಣ ಹಣಮಂತನಿಗೆ ಸಿಕ್ಕು, ಜಮೀನು ಇಲ್ಲದ ಹಣಮಂತ ಜಮೀನಿನ ಒಡೆಯನಾಗುತ್ತಾನೆ. ಮಡದಿಯ ಈ ಸಂಬಂಧ ವಿಷಯ ಮರೆಯುತ್ತಾನೆ. ಕಡೆಗೊಂದು ದಿನ, ದಿನಾ ಕನಸಲ್ಲಿ ಬಂದು ಕಾಡಿಸುತ್ತಿದ್ದ ಗಂಗವ್ವನ ಹಾದರ ಸಂಬಂಧದ ವಿಷಯದಿಂದ ಸಿಟ್ಟಿಗೊಳಗಾಗಿ ಗಂಗವ್ವನ ಮೇಲೆ ಬಿದ್ದು ಅವಳನ್ನು ಕೂಡುತ್ತಾನೆ, ಆಗ ಗಂಗವ್ವನ ಮಾರಿ ಮೇಲಿದ್ದ ನಗು ಕಂಡು ಕಡೆಗೆ ತಾನು ಕೂಡಿದ್ದರ ಬಗ್ಗೆ ಅಸಹ್ಯ ಪಟ್ಟುಕೊಂಡು ಊರ ದೇವಳದಲ್ಲಿ ಸಾಯುತ್ತಾನೆ.

ಗಂಡು-ಹೆಣ್ಣಿನಲ್ಲಿರುವ ಕಾಮದ ನೈತಿಕತೆಯ ಬಗೆಗೆ ಪ್ರಶ್ನೆಗಳನ್ನು ಎತ್ತುವ, ಕಾಮದ ಬಗೆಗಿನ ಸಾಂಪ್ರದಾಯಿಕ ಅರ್ಥದ ನೆಲೆಗಳನ್ನು ಛಿದ್ರಗೊಳಿಸುವ ಈ ಕತೆ ವಿಶೇಷವಾದದ್ದು. ಈ ಕತೆ ದೇವನೂರರ ‘ಮಾರಿಕೊಂಡವರು’ ಕತೆಯನ್ನು ನೆನಪಿಸುತ್ತದೆ.

ದೇಸಾಯಿಯವರ ಕತೆಗಳ ಬಗ್ಗೆ ಇಲ್ಲಿಯವರೆಗೂ ಲಂಕೇಶರು, ಕಂಬಾರರು, ನಟರಾಜ ಹುಳಿಯಾರರು ಮತ್ತು ಕತೆಗಾರ ಕೇಶವ ಮಳಗಿಯವರನ್ನು ಬಿಟ್ಟರೆ ಉಳಿದ ಇನ್ನಾವ ವಿಮರ್ಶಕರಾಗಲಿ, ಕತೆಗಾರರಾಗಲಿ ಎಲ್ಲೂ ಬರೆದದ್ದಾಗಲಿ ಇಲ್ಲ. ಕನ್ನಡದ ಇಂತಹ ವಿಶಿಷ್ಟ ಕತೆಗಾರನ ಕತೆಗಳನ್ನು ನಮ್ಮ ತಲೆಮಾರಿಗೆ ಸಿಗುವ ಹಾಗೆ ಮಾಡಿದ್ದು ಎಂಟು ವರ್ಷಗಳ ಹಿಂದೆ ನುಡಿ ಪುಸ್ತಕ ಪ್ರಕಾಶನದ ರಂಗನಾಥನ್ ಅವರು. ಅವರಿಗೆ ಅದೆಷ್ಟು ಕೃತಜ್ಞತೆಗಳನ್ನು ಹೇಳಿದರೂ ಕಡಿಮೆಯೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top