ರಾಷ್ಟ್ರೀಯ ಡೆಂಗಿ ಜಾಗೃತಿ ದಿನ- ಮೇ 16 | Vartha Bharati- ವಾರ್ತಾ ಭಾರತಿ

--

ಡೆಂಗ್ಯೂ ಜಾಗೃತಿ ದಿನ

ರಾಷ್ಟ್ರೀಯ ಡೆಂಗಿ ಜಾಗೃತಿ ದಿನ- ಮೇ 16

ಪ್ರತಿ ವರ್ಷ ಮೇ 16ರಂದು ಕೇಂದ್ರ ಆರೋಗ್ಯ ಮಂತ್ರಾಲಯ, ಭಾರತ ಸರಕಾರ ಇದರ ಆದೇಶದಂತೆ ಭಾರತದಾದ್ಯಂತ ರಾಷ್ಟ್ರೀಯ ಡೆಂಗ್ಯೂ ಜಾಗೃತಿ ದಿನ ಎಂದು ಆಚರಿಸಿ ಡೆಂಗ್ಯೂ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಡೆಂಗಿ ಜ್ವರ ಮತ್ತು ಕೋವಿಡ್ ಜ್ವರ ಎರಡರಲ್ಲೂ ಜ್ವರ, ತಲೆನೋವು, ಮೈಕೈನೋವು, ಸುಸ್ತು ಕಂಡುಬರುತ್ತದೆ. ಆದರೆ ಡೆಂಗಿ ಜ್ವರದಲ್ಲಿ ಗಂಟಲು ಕೆರೆತ, ಗಂಟಲು ನೋವು, ಶೀತ, ನೆಗಡಿ, ಕೆಮ್ಮು, ವಾಸನೆ ಮತ್ತು ರುಚಿ ಇಲ್ಲದಿರುವುದು ಕಂಡು ಬರುವುದಿಲ್ಲ. ಅದೇ ರೀತಿ ಡೆಂಗಿ ಜ್ವರದಲ್ಲಿ ಜಾಸ್ತಿ ವಾಂತಿ ಮತ್ತು ವಾಕರಿಕೆ ಇರುತ್ತದೆ. ಅತಿಯಾದ ಮುಂದುವರಿದ ಹಂತದಲ್ಲಿ ಡೆಂಗಿ ಜ್ವರ ಇರುವವರಲ್ಲಿ ವಸಡಿನಲ್ಲಿ ರಕ್ತ ಮತ್ತು ಮೆದುಳಿನಲ್ಲಿ ರಕ್ತಸ್ರಾವ ಕಂಡುಬರಬಹುದು. ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆ ಇರುವುದೇ ಇದಕ್ಕೆ ಮುಖ್ಯ ಕಾರಣ. ಆದರೆ ಕೋವಿಡ್ ಜ್ವರದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆ ಇರುವುದಿಲ್ಲ.

ಡೆಂಗಿ ಜ್ವರ ಯಾಕೆ, ಹೇಗೆ?

ಡೆಂಗಿ ಜ್ವರ ಮತ್ತು ಡೆಂಗಿ ರಕ್ತಸ್ರಾವ ಜ್ವರಗಳು ಉಷ್ಣವಲಯದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿಯಾದ, ತೀವ್ರ ಜ್ವರ ಲಕ್ಷಣದ ಒಂದು ರೋಗವಾಗಿದೆ. ಡೆಂಗಿ ಎಂಬ ವೈರಸ್ ಸೋಂಕುವಿನಿಂದ ಉಂಟಾಗುವ ಈ ಜ್ವರವು ‘ಏಡಿಸ್’ ಎಂಬ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಡೆಂಗಿ ಜ್ವರವು ಸಾಂಕ್ರಾಮಿಕ ರೋಗವಾಗಿರುತ್ತದೆ. ಈ ರೋಗಕ್ಕೆ ‘ಲಸಿಕೆ’ ಲಭ್ಯವಿಲ್ಲದ ಕಾರಣ, ರೋಗವನ್ನು ತಡೆಗಟ್ಟುವಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಸಾಮಾನ್ಯವಾಗಿ ರೋಗವನ್ನು ಹರಡುವ ‘ಏಡಿಸ್’ ಸೊಳ್ಳೆಯ ಸಂಖ್ಯೆಯನ್ನು ಕಡಿಮೆಗೊಳಿಸುವ ಮತ್ತು ಸೊಳ್ಳೆ ಕಡಿಯದಂತೆ ಎಚ್ಚರ ವಹಿಸಬೇಕಾಗುತ್ತದೆ. ಡೆಂಗಿ ಜ್ವರ ಗ್ರಾಮೀಣ ಪ್ರದೇಶದ ಜ್ವರವಾಗಿದ್ದು ನಗರ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತದೆ. ರೋಗದ ಲಕ್ಷಣಗಳು:

ಸಾಮಾನ್ಯವಾಗಿ ಸುಮಾರು ಶೇ.80ರಷ್ಟು ರೋಗಗಳಲ್ಲಿ ಸಣ್ಣಜ್ವರ ಕಾಣಿಸಿಕೊಳ್ಳಬಹುದು. ಕೇವಲ ಶೇ.5ರಿಂದ 10ರಷ್ಟು ರೋಗಿಗಳಲ್ಲಿ ವಿಪರೀತ ಹಠಾತ್ ಜ್ವರ, ಸ್ನಾಯು ನೋವು, ವಾಂತಿಬೇಧಿ, ಚರ್ಮ ತುರಿತ, ಹೊಟ್ಟೆನೋವು, ಗಂಟು ನೋವು ಮತ್ತು ವಸಡು, ಮೂಗುಗಳಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ವಿಪರೀತ ಸ್ನಾಯು ನೋವು ಮತ್ತು ಗಂಟು ನೋವಿರುವ ಕಾರಣ ಡೆಂಗಿ ಜ್ವರವನ್ನು ಬ್ರೇಕ್‌ಬೋನ್ ಜ್ವರ (Breakbone Fever) ಎಂದೂ ಕರೆಯಲಾಗುತ್ತದೆ. ಡೆಂಗಿ ಜ್ವರದ ಕಿಟಕಿ ಅವಧಿ(Window Period) ಅಂದರೆ ಸೊಳ್ಳೆ ಕಡಿತಕ್ಕೆ ಮತ್ತು ರೋಗದ ಲಕ್ಷಣ ಕಾಣಿಸಿಕೊಳ್ಳುವ ನಡುವಿನ ಅವಧಿ, ಸುಮಾರು 4ರಿಂದ 7 ದಿನಗಳು ಆಗಿರುತ್ತವೆ.

ಡೆಂಗಿ ಜ್ವರದ ಅವಧಿಯನ್ನು ಮೂರು ಹಂತಗಳಲ್ಲಿ ವಿವರಿಸಲಾಗಿದೆ.

1. Febrile ಅಥವಾ ಜ್ವರದ ಅವಧಿ

2. Critical ಅಥವಾ ತೀವ್ರತೆಯ ಅವಧಿ

3. Recovery ಅಥವಾ ಚೇತರಿಕೆಯ ಅವಧಿ

a) ಜ್ವರದ ಅವಧಿ ಅಥವಾ (Febrile Phase)

 ಈ ಅವಧಿ ಸಾಮಾನ್ಯವಾಗಿ 2ರಿಂದ 7ದಿನಗಳ ವರೆಗೆಇರಬಹುದು.ಈ ಅವಧಿಯಲ್ಲಿ ವಿಪರೀತ ಜ್ವರ ಅಂದರೆ 40ಡಿ.ಸೆ. (104 ಡಿ.ಫೆ) ಬರಬಹುದು. ಜೊತೆಗೆ ವಿಪರೀತ ಸ್ನಾಯು ನೋವು, ಕಣ್ಣಿನ ಸುತ್ತ ನೋವು, ತಲೆನೋವು, ಹೊಟ್ಟೆನೋವು ಮತ್ತು ಗಂಟುನೋವು ಬರಬಹುದು. ವಾಂತಿ ಮತ್ತು ವಾಂತಿ ಬಂದಂತೆ ಭಾಸವಾಗಬಹುದು. ಚರ್ಮದಲ್ಲಿ ವಿಪರೀತ ತುರಿಕೆ ಇದ್ದು, ಅಲ್ಲಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಚರ್ಮದಲ್ಲಿ ಅಲ್ಲಲ್ಲಿ ಕೆಂಪು ಚುಕ್ಕೆಗಳು ಕಾಣಿಸಿಕೊಳ್ಳಬಹುದು. ಬಾಯಿಯ ವಸಡುಗಳಲ್ಲಿ ಮತ್ತು ಮೂಗುಗಳಲ್ಲಿ ರಕ್ತಸ್ರಾವ ಆಗಬಹುದು. ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಬಹಳ ಕಡಿಮೆಯಾದಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗುವ ಸಾಧ್ಯತೆಯೂ ಇರುತ್ತದೆ.

b) ತೀವ್ರತೆಯ ಅವಧಿ ಅಥವಾ(Critical  Phase)

ಈ ಅವಧಿಯಲ್ಲಿ ರಕ್ತನಾಳಗಳಿಂದ ಪ್ಲಾಸ್ಮಾ ದ್ರವದ ಸೋರಿಕೆಯಾಗಿ ಎದೆಗೂಡು ಮತ್ತು ಅನ್ನನಾಳದ ಹೊಟ್ಟೆಯ ಭಾಗದಲ್ಲಿ ನೀರು ತುಂಬಿಕೊಳ್ಳಬಹುದು. ಪ್ಲಾಸ್ಮಾದ್ರವದ ಸೋರಿಕೆಯಿಂದಾಗಿ ರಕ್ತದ ಒತ್ತಡ ಕಡಿಮೆಯಾಗಿ, ಮೆದುಳು, ಕಿಡ್ನಿ ಮುಂತಾದ ಮುಖ್ಯ ಅಂಗಗಳಿಗೆ ರಕ್ತದ ಪೂರೈಕೆ ಕಡಿಮೆಯಾಗಿ ವಿಪರೀತ ವೈಕಲ್ಯ ಉಂಟಾಗಬಹುದು. ರಕ್ತದಒತ್ತಡ (Blood pressure) ಕಡಿಮೆಯಾಗಬಹುದು. ಇದನ್ನು ಡೆಂಗಿ ಶಾಕ್ ಸಿಂಡ್ರೋಮ್ ಎನ್ನುತ್ತಾರೆ. (Dengue Shok Syndrome) ಇದರ ಜೊತೆಗೆ ಅನ್ನನಾಳಗಳಲ್ಲಿ ರಕ್ತಸ್ರಾವವು ಉಂಟಾಗಬಹುದು. ಕೇವಲ ಶೇ.5ರಷ್ಟು ಡೆಂಗಿ ಜ್ವರದ ರೋಗಿಗಳಲ್ಲಿ ಮಾತ್ರ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಮಕ್ಕಳು ಮತ್ತು ಯುವಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ತೀವ್ರತೆಯ ಅವಧಿ ಒಂದರಿಂದ 2 ದಿನಗಳವರೆಗೆ ಮಾತ್ರ ಕಾಣಿಸಿಕೊಳ್ಳಬಹುದು.

c) ಚೇತರಿಕೆ ಅವಧಿ ಅಥವಾ (Recovery  Phase)

 ಈ ಅವಧಿ 2ರಿಂದ 3 ದಿನಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ರಕ್ತದಿಂದ ಹೊರಡುವ ಎಲ್ಲಾ ದ್ರವಗಳು ಪುನಃ ರಕ್ತಕ್ಕೆ ಸೇರಬಹುದು. ವಿಪರೀತ ತುರಿಕೆ ಮತ್ತು ಚರ್ಮದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ರೋಗಿಗಳಲ್ಲಿ ವಿಪರೀತ ಆಯಾಸ ಮತ್ತು ಸುಸ್ತು ಕಾಣಿಸಿಕೊಳ್ಳಬಹುದು. ರೋಗಿಗಳು ಬಹಳ ಬಳಲಿದಂತೆ ಮತ್ತು ಭ್ರಮಾ ಲೋಕದಲ್ಲಿದ್ದಂತೆ ಭಾಸವಾಗಬಹುದು.

ಹರಡುವುದು ಹೇಗೆ?

ಡೆಂಗಿ ಜ್ವರ, ‘ಡೆಂಗೆ’ ಎಂಬ ವೈರಾಣುವಿನಿಂದ ಉಂಟಾಗುತ್ತದೆ. ಈ ವೈರಾಣು ‘ಏಡಿಸ್’ ಎಂಬ ಸೊಳ್ಳೆಗಳ ಮುಖಾಂತರ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬನಿಗೆ ಹರಡುತ್ತದೆ. ಉಷ್ಣವಲಯದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಈ ಸೊಳ್ಳೆ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಹೆಚ್ಚಾಗಿ ಮುಂಜಾನೆ ಹೊತ್ತಿನಲ್ಲಿ ಮತ್ತು ಮುಸ್ಸಂಜೆ ಹೊತ್ತಿನಲ್ಲಿ ಕಚ್ಚುತ್ತದೆ. ಡೆಂಗಿ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗೆ ಕಡಿದ ಬಳಿಕ, ಸುಮಾರು 8ರಿಂದ 10ದಿನಗಳಲ್ಲಿ ಡೆಂಗೆ ವೈರಾಣುಗಳನ್ನು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿಸುತ್ತದೆ. ಏಡಿಸ್ ಸೊಳ್ಳೆ ಡೆಂಗೆ ವೈರಾಣುವಿನಿಂದ ಕೂಡಿದ್ದರೂ, ಸೊಳ್ಳೆಗೆ ಇದರಿಂದ ವ್ಯತಿರಕ್ತ ಪರಿಣಾಮವಾಗುವುದಿಲ್ಲ. ಏಡಿಸ್ ಸೊಳ್ಳೆ ಸಾಮಾನ್ಯವಾಗಿ ನಿಂತ ನೀರಲ್ಲಿ ಮೊಟ್ಟೆ ಇಡುತ್ತದೆ. ಮನೆ ಸುತ್ತಮುತ್ತ ಇರುವ ನೀರು ನಿಂತ ಜಾಗಗಳನ್ನು ಏಡಿಸ್ ಸೊಳ್ಳೆ ಬಯಸುತ್ತದೆ ಮತ್ತು ಮನುಷ್ಯ ರಕ್ತವನ್ನೇ ಹೆಚ್ಚಾಗಿ ಬಯಸುತ್ತದೆ. ಇದಲ್ಲದೆ ಡೆಂಗಿ ವೈರಾಣು, ರಕ್ತಪೂರಣದ (Blood Transfusion) ಮೂಲಕ ಮತ್ತು ಅಂಗಾಂಗ ಕಸಿಯ ಮುಖಾಂತರ ಹರಡುವ ಸಾಧ್ಯತೆಯೂ ಇರುತ್ತದೆ.

ತಡೆಗಟ್ಟುವುದು ಹೇಗೆ?

ಡೆಂಗಿ ವೈರಾಣುವಿಗೆ ಈ ವರೆಗೆ ಲಸಿಕೆಯನ್ನು ಕಂಡುಹಿಡಿಯಲಾಗಿಲ್ಲ. ಆ ಕಾರಣದಿಂದಲೇ, ಏಡಿಸ್ ಸೊಳ್ಳೆ ಕಡಿತವನ್ನು ತಡೆಗಟ್ಟುವುದು ಮತ್ತು ಸೊಳ್ಳೆಗಳ ಸಂಖ್ಯೆ ಕಡಿಮೆ ಮಾಡುವತ್ತ ಎಲ್ಲರೂ ಗಮನ ಹರಿಸಬೇಕಾಗಿದೆ. 1. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹೆಚ್ಚಾಗಿ ನಿಂತ ನೀರಲ್ಲಿ ಏಡಿಸ್ ಸೊಳ್ಳೆ ಸಂತಾನೋತ್ಪತ್ತಿ ಮಾಡುತ್ತದೆ. ಹೂಕುಂಡಗಳಲ್ಲಿ. ಮನೆಯ ಛಾವಣಿಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು. ಮನೆಯ ಅಕ್ಕಪಕ್ಕ ನೀರು ಸರಾಗವಾಗಿ ಚಲಿಸುವ ರೀತಿಯಲ್ಲಿ ನೋಡಿಕೊಳ್ಳಬೇಕು.

2. ಮನೆಯ ಸುತ್ತಮುತ್ತ ಇರುವಂತಹ ಹಳೆ ಬಕೆಟ್ ಮತ್ತು ನೀರಿನ ಕ್ಯಾನ್‌ಗಳಲ್ಲಿ ಬೋರಲಾಗಿ ಹಾಕಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಇಂತಹ ನೀರು ತುಂಬುವ ವಸ್ತುಗಳನ್ನು ನೀರು ಬೀಳದಂತಹ ಸೂರಿನಡಿಯಲ್ಲಿ ಇಡಬೇಕು. ಹೂ ಕುಂಡಗಳ ಕೆಳಗಿರುವ ತಟ್ಟೆಗಳನ್ನು ತೆಗೆಯಬೇಕು. ಇಡಲೇ ಬೇಕಿದ್ದಲ್ಲಿ ಈ ತಟ್ಟೆಗಳನ್ನು ಚೆನ್ನಾಗಿ ತಿಕ್ಕಿ, ತೊಳೆದು ಸೊಳ್ಳೆಗಳ ತತ್ತಿಗಳು ಬೆಳೆಯದಂತೆ ನೋಡಿಕೊಳ್ಳಬೇಕು ಮತ್ತು ನೀರು ಶೇಖರಣೆ ಆಗದಂತೆ ನೋಡಿಕೊಳ್ಳಬೇಕು. ಹೂಕುಂಡಗಳಲ್ಲಿರುವ ಮಣ್ಣನ್ನು ಸಡಿಲವಾಗಿರುವಂತೆ ನೋಡಿಕೊಳ್ಳಬೇಕು. ಈ ಮಣ್ಣುಗಟ್ಟಿಯಾಗಿದ್ದಲ್ಲಿ ನೀರು ಸೋರಿ ಹೋಗುವುದಕ್ಕೆ ಅಡ್ಡಿಯಾಗಿ, ನೀರು ತುಂಬಿಕೊಂಡು ಸೊಳ್ಳೆಗಳನ್ನು ಆಕರ್ಷಿಸಬಹುದು. ಏಡಿಸ್ ಸೊಳ್ಳೆ ಶುದ್ಧವಾದ ತಿಳಿಯಾದ ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಮನೆಯಯೊಳಗೆ ಅಲಂಕಾರಕ್ಕಾಗಿ ಬಳಸುವ ಹೂದಾನಿಗಳ ನೀರನ್ನೂ ದಿನವೂ ಬದಲಿಸಬೇಕು ಮತ್ತು ಶುಭ್ರವಾಗಿ ಇಟ್ಟುಕೊಳ್ಳಬೇಕು.

3. ಉದ್ದ ತೋಳಿನ ಅಂಗಿ, ಕಾಲುಮುಚ್ಚುವ ಪ್ಯಾಂಟ್ ಮತ್ತು ಕಾಲು ಚೀಲ ಧರಿಸಿದಲ್ಲಿ ಸೊಳ್ಳೆಗಳಿಂದ ಕಡಿಸಿಕೊಳ್ಳುವ ಸಾಧ್ಯತೆ ಕಡಿಮೆಯಿರುತ್ತದೆ. ಮೈ ತುಂಬಾ ಬಟ್ಟೆ ಧರಿಸಿ ಆದಷ್ಟು ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಬೇಕು.

4. ಕಡ್ಡಾಯವಾಗಿ ಸೊಳ್ಳೆ ಪರದೆಯನ್ನು ಬಳಸಬೇಕು. ಹಗಲು ಹೊತ್ತು ವಿಶ್ರಮಿಸುವಾಗಲೂ ಸೊಳ್ಳೆಯ ಸಾಂದ್ರತೆ ಜಾಸ್ತಿ ಇರುವ ಪ್ರದೇಶಗಳಲ್ಲಿ ಸೊಳ್ಳೆ ಪರದೆ ಬಳಸುವುದು ಸೂಕ್ತ.

5. ಸೊಳ್ಳೆ ಮೈ ಮೇಲೆ ಕುಳಿತುಕೊಳ್ಳದೆ ಇರುವಂತಹಾ ಸೊಳ್ಳೆ ನಿರೋಧಕ ಅಥವಾ ವಿಕರ್ಷಕ ದ್ರಾವಣಗಳನ್ನು ಬಳಸಬಹುದು.

6. ಕಿಟಿಕಿ ಮತ್ತು ತೆರೆದ ಜಾಗಗಳಿಗೆ ನೆಟ್ ಬಳಸಿದಲ್ಲಿ ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆ ತಡೆಯಬಹುದು.

7. ಅತ್ಯಂತ ವಾಸನೆಯುಕ್ತ ಸಾಬೂನು ಮತ್ತು ಶೃಂಗಾರಯುಕ್ತ ದ್ರವ್ಯಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು. ಇವುಗಳು ಕೂಡಾ ಕೆಲವೊಮ್ಮೆ ಸೊಳ್ಳೆಗಳನ್ನು ಆಕರ್ಷಿಸಬಹುದು.

8. ಮನೆಯ ಸುತ್ತಮುತ್ತ ಇರುವ ನೀರಿನ ಶೇಖರಣೆಯಾಗುವ ಜಾಗಗಳನ್ನು ಕೀಟನಾಶಕ ಸೊಳ್ಳೆ ನಾಶಕ ದ್ರವ್ಯಗಳಿಂದ ಶುದ್ಧೀಕರಿಸಬೇಕು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು. ಮನೆಯೊಳಗಿನ ಮತ್ತು ಸುತ್ತಮುತ್ತಲಿನ ನೀರು ಸಂಗ್ರಹಿಸುವ ಮತ್ತು ಸಂಗ್ರಹವಾಗುವ ಎಲ್ಲಾ ವಸ್ತುಗಳಲ್ಲೂ ಶುಭ್ರವಾಗಿ, ಇಟ್ಟುಕೊಳ್ಳುಬೇಕು. ಮೂರು ದಿನಗಳಿಗೊಮ್ಮೆ ಸಂಗ್ರಹವಾದ ನೀರನ್ನು ಖಾಲಿ ಮಾಡಲೇಬೇಕು ಮತ್ತು ಸೊಳ್ಳೆ ಬೆಳೆಯದಂತೆ ನೋಡಿಕೊಳ್ಳಬೇಕು.

9. ಎಲ್ಲೆಂದರಲ್ಲಿ ಘನತ್ಯಾಜ್ಯಗಳನ್ನು ಎಸೆಯಬಾರದು. ವಿಶೇಷವಾಗಿ ಬಹುಮಹಡಿ ಕಟ್ಟಡಗಳಲ್ಲಿ ಘನತ್ಯಾಜ್ಯಗಳು, ನೀರಿನ ಸರಾಗ ಹರಿಯುವಿಕೆಗೆ ಅಡ್ಡಿಮಾಡಿ, ನೀರು ಸಂಗ್ರಹಕ್ಕೆ ಕಾರಣವಾಗಿ, ಸೊಳ್ಳೆಗಳ ಉತ್ಪತ್ತಿಗೆ ಪರೋಕ್ಷವಾಗಿ ಕಾರಣವಾಗುತ್ತದೆ. 10. ನಗರೀಕರಣ, ಕೈಗಾರೀಕರಣಗಳಿಂದಾಗಿ, ನಗರ ಪ್ರದೇಶಗಳಲ್ಲಿಯೂ ಸೊಳ್ಳೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ. ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡಿ, ಎಲ್ಲಿಯೂ ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣ ನಿರ್ಮಾಣವಾಗದಂತೆ ನೋಡುವ ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲೆ ಇದೆ.

ಚಿಕಿತ್ಸೆ ಹೇಗೆ?

ಜ್ವರ ಬಂದ ಕೂಡಲೇ ವೈದ್ಯರನ್ನು ಕಾಣಬೇಕು. (self medication) ಅಥವಾ ಸ್ವಯಂ ಮದ್ದುಗಾರಿಕೆ ಯಾವತ್ತೂ ಮಾಡಬಾರದು. ಯಾವಕಾರಣದಿಂದಲೂ (aspirin)ಗುಳಿಗೆ ತೆಗೆದುಕೊಳ್ಳಬಾರದು. ಸೊಳ್ಳೆಕಡಿತ ನಿಮ್ಮ ಗಮನಕ್ಕೆ ಬಂದಿದ್ದಲ್ಲಿ ವ್ಶೆದ್ಯರಿಗೆ ತಿಳಿಸಬೇಕು. ಸಾಮಾನ್ಯವಾಗಿ ಜ್ವರವನ್ನು, ವೈದ್ಯರ ಸೂಚನೆಯಂತೆ ಗುಣಪಡಿಸಿಕೊಳ್ಳಬೇಕು. ವಿಪರೀತ ಜ್ವರ, ತುರಿಕೆ, ತಲೆನೋವು, ರಕ್ತಸ್ರಾವವಿದ್ದಲ್ಲಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಬೇಕಾಗಬಹುದು. ಹೆಚ್ಚು ಹೆಚ್ಚು ದ್ರವಾಹಾರ ತೆಗೆದುಕೊಳ್ಳಬೇಕು. ಎಲ್ಲವನ್ನೂ ವೈದ್ಯರ ಸಲಹೆಯಂತೆ ನಡೆಯಬೇಕು. ವೈದ್ಯರ ಸಲಹೆ ಇಲ್ಲದೆ, ಸಾಮಾನ್ಯ ಜ್ವರ ಎಂದುಕೊಂಡು ಸ್ವಂತ ಮದ್ದುಗಾರಿಕೆ ಮಾಡುವುದು ಖಂಡಿತ ಸಹ್ಯವಲ್ಲ. ಬರೀ ಜ್ವರ ಎಂದು ಉದಾಸೀನ ತೋರಿದಲ್ಲಿ, ಜೀವಕ್ಕೆ ತೊಂದರೆಯಾಗಬಹುದು. ತೀವ್ರತೆಯ ಅವಧಿಯಲ್ಲಿ, ರಕ್ತದ ಒತ್ತಡ ಕಡಿಮೆಯಾದಲ್ಲಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಅತೀ ಅಗತ್ಯ. ಅದೇ ರೀತಿ ಪ್ಲೇಟ್‌ಲೇಟ್ (Platelet) ರಕ್ತಕಣಗಳ ಸಂಖ್ಯೆ ಕಡಿಮೆಯಾದಲ್ಲಿ ರಕ್ತಪೂರಣ (Blood Transfusion)ಅತೀ ಅಗತ್ಯ. ಒಟ್ಟಿನಲ್ಲಿ ಡೆಂಗಿ ಜ್ವರ ಉಳಿದ ಮಾಮೂಲಿ ಜ್ವರಕ್ಕಿಂತ ಭಿನ್ನವಾಗಿದ್ದು, ನುರಿತ ವೈದ್ಯರ ಸಲಹೆ. ಮಾರ್ಗದರ್ಶನ ಮತ್ತು ಚಿಕಿತ್ಸೆ ಅತೀ ಅಗತ್ಯ. ನಿರ್ಲಕ್ಷ ಮಾಡಿದ್ದಲ್ಲಿ ಜೀವಕ್ಕೆ ಸಂಚಕಾರ ಬರುವ ಸಾಧ್ಯತೆಯೂ ಇದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top