ಶಾಲಾ ಪಠ್ಯಗಳು ಸಾಂಸ್ಕೃತಿಕ ಸಂಘರ್ಷದ ನೆಲೆಯಾಗದಿರಲಿ | Vartha Bharati- ವಾರ್ತಾ ಭಾರತಿ

--

ಶಿಕ್ಷಣ ಮತ್ತು ಪಠ್ಯಕ್ರಮದಲ್ಲಿ ರಾಜಕೀಯ ಕಾರ್ಯಸೂಚಿಗಳಿದ್ದರೆ ಸಮಾಜ ದಿಕ್ಕುತಪ್ಪುತ್ತದೆ.

ಶಾಲಾ ಪಠ್ಯಗಳು ಸಾಂಸ್ಕೃತಿಕ ಸಂಘರ್ಷದ ನೆಲೆಯಾಗದಿರಲಿ

ಶಾಲಾ ಕಾಲೇಜುಗಳ ಇತಿಹಾಸ ಮತ್ತು ಭಾಷಾ ಪಠ್ಯಗಳು-ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಭಾರತದ ಸಂವಿಧಾನದ ಆಶಯದಂತೆ ಬಹುತ್ವ ಹಾಗೂ ಸಮಾನತೆಯ ಧೋರಣೆಯನ್ನು ಪೋಷಿಸುವ ದೃಷ್ಟಿಯಿಂದ ರಚನೆಯಾಗಬೇಕು. ಏಕೆಂದರೆ ಈ ಪಠ್ಯಗಳೇ ಭವಿಷ್ಯದ ಭಾರತದ ಪ್ರಜೆಗಳನ್ನು ರೂಪಿಸುವ ಆಕರಗಳಾಗುತ್ತವೆ. ಈ ಹಿನ್ನೆಲೆಯಲ್ಲೇ ಶಾಲಾ ಪಠ್ಯಕ್ರಮಗಳು ಹಿಂದುತ್ವ ಅಥವಾ ಮತ್ಯಾವುದೇ ಸೀಮಿತ ರಾಷ್ಟ್ರೀಯತೆಯ ಕಾರ್ಯಸೂಚಿಗಳಾಗುವುದನ್ನು ವಿರೋಧಿಸಬೇಕಿದೆ. 


ರಾಜ್ಯದಲ್ಲಿ ಸೃಷ್ಟಿಯಾಗಿರುವ ಶಾಲಾ ಪಠ್ಯ ಪರಿಷ್ಕರಣೆಯ ವಿವಾದದ ಸಂದರ್ಭದಲ್ಲಿ ಸನ್ಮಾನ್ಯ ಶಿಕ್ಷಣ ಸಚಿವರು ಹೀಗೆ ಹೇಳುತ್ತಾರೆ ‘‘ಪಠ್ಯ ಪುಸ್ತಕಗಳು ನಮ್ಮ ದೇಶ, ನೆಲ, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಅಭಿಮಾನ ಮೂಡಿಸುವಂತಿರಬೇಕು. ನಮ್ಮ ದೇಶದಲ್ಲಿ ಆಗಿಹೋದ ಪುಣ್ಯಪುರುಷರು, ದಾರ್ಶನಿಕರು, ರಾಷ್ಟ್ರಭಕ್ತರು, ಸ್ವಾತಂತ್ರ್ಯ ಯೋಧರ ಕತೆ ವಿಚಾರಗಳನ್ನು ಪಠ್ಯಪುಸ್ತಕಗಳು ಒಳಗೊಂಡಿರಬೇಕು. ಇತಿಹಾಸದಲ್ಲಿ ಗತಿಸಿದ ಅನ್ಯಾಯ, ದಬ್ಬಾಳಿಕೆ, ಆಕ್ರಮಣಗಳಿಗೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಂತಿರಬೇಕು....’’ ಇತ್ಯಾದಿ. ಆರೆಸ್ಸೆಸ್ ಚಿಂತನಾ ಧಾರೆಯ ಪ್ರಮುಖರಲ್ಲೊಬ್ಬರಾದ ಡಾ. ಹೆಡಗೆವಾರ್ ಅವರ ಭಾಷಣವೊಂದನ್ನು ಪಠ್ಯದಲ್ಲಿ ಅಳವಡಿಸುವುದನ್ನು ಸಮರ್ಥಿಸಿಕೊಳ್ಳಲು ಶಿಕ್ಷಣ ಸಚಿವರು ಈ ಮಾತುಗಳನ್ನಾಡಿರುವುದು ಸ್ಪಷ್ಟ. ಇಲ್ಲಿ ‘ನಮ್ಮ ದೇಶದ ನೆಲ, ಭಾಷೆ, ಸಂಸ್ಕೃತಿ’ ಎಂಬ ಪದಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ನೆಲ ಒಂದೇ ಆದರೂ ಭಾರತ ಸಾವಿರಾರು ಭಾಷೆಗಳ ತವರು. ಹಾಗೆಯೇ ಅಸಂಖ್ಯಾತ ಸಂಸ್ಕೃತಿಗಳ ಕರ್ಮಭೂಮಿ. ದೇಶ ಎಂದರೆ ಕೇವಲ ಭೌಗೋಳಿಕ ಅಖಂಡತೆಯನ್ನು ಪ್ರತಿನಿಧಿಸುವ ಒಂದು ಭೂ ಪ್ರದೇಶ ಎಂಬ ಪರಿಕಲ್ಪನೆಯನ್ನೇ ಎತ್ತಿಹಿಡಿಯುವ ಸಾಂಪ್ರದಾಯಿಕ ಮನಸ್ಥಿತಿಯುಳ್ಳವರಿಗೆ ಈ ವ್ಯತ್ಯಾಸಗಳು ಅರ್ಥವಾಗುವುದು ಕಷ್ಟ. ನಿಜ, ಇಂದಿನ ಮಕ್ಕಳಿಗೆ ಗತ ಇತಿಹಾಸವನ್ನು ಪರಿಚಯಿಸುವುದು ಯಾವುದೇ ಒಂದು ಸಮಾಜದ ಆದ್ಯತೆಯಾಗಬೇಕು. ಆದರೆ ಈ ಇತಿಹಾಸದ ಪುಟಗಳಲ್ಲಿ ರಾರಾಜಿಸುವ ಕಲ್ಪಿತ ಅಥವಾ ಆರೋಪಿತ ವೈಭವಗಳನ್ನೇ ಪರಿಚಯಿಸುತ್ತಾ ಹೋದರೆ ಮಕ್ಕಳು ಬೌದ್ಧಿಕವಾಗಿ ಭ್ರಮಾಧೀನರಾಗುತ್ತಾರೆ. ವಿಷಯವನ್ನು ತಿಳಿದುಕೊಳ್ಳಬಲ್ಲರೇ ಹೊರತು, ಅವರ ಧಾರಣಾ ಶಕ್ತಿಯಾಗಲೀ, ಅಧ್ಯಯನ-ಸಂಶೋಧನೆಯ ಸಾಮರ್ಥ್ಯವಾಗಲೀ ಬೆಳೆಯುವುದಿಲ್ಲ.

ದಾಖಲಿತ ಇತಿಹಾಸದಲ್ಲಿರುವುದಕ್ಕಿಂತಲೂ ಆಚೆಗಿನ ಒಂದು ಪ್ರಪಂಚದಲ್ಲಿ ನಡೆದಿರಬಹುದಾದ ಅನ್ಯಾಯ, ದಬ್ಬಾಳಿಕೆ ಮತ್ತು ಆಕ್ರಮಣಗಳ ಬಗ್ಗೆ ಮಕ್ಕಳಿಗೆ ತಿಳಿಸುವುದು ಮುಖ್ಯ ಎಂದು ಸಚಿವರು ಹೇಳಿದ್ದಾರೆ. ನಿಜ ಆದರೆ ಅನ್ಯಾಯ, ದಬ್ಬಾಳಿಕೆ ಮತ್ತು ಆಕ್ರಮಣಗಳನ್ನು ನೋಡಲು ನಾವು ಬಳಸುವ ಮಸೂರಗಳು ಯಾವುದು? ಇದನ್ನು ಅಧ್ಯಯನ ಮಾಡುವ ಚಾರಿತ್ರಿಕ ದೃಷ್ಟಿಕೋನ ಎಂತಹುದು? ವೈಜ್ಞಾನಿಕ ತಳಹದಿಯ ಶಾಸನಾಧಾರಿತ ಇತಿಹಾಸ ಅಧ್ಯಯನಕ್ಕೂ, ‘ಆವರಣ’ದಂತಹ ಒಂದು ಕಲ್ಪಿತ ಚಾರಿತ್ರಿಕ ಕಾದಂಬರಿಗೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಭಾರತೀಯ ನೆಲದ ಶತಮಾನಗಳ ಇತಿಹಾಸದಲ್ಲಿ ಯಾರಿಂದ, ಯಾರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆದಿದೆ? ಯಾವ ಜನಸಮುದಾಯಗಳು ಶತಮಾನಗಳಿಂದ ಅನ್ಯಾಯಕ್ಕೊಳಗಾಗುತ್ತಿವೆ? ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲದ ಒಂದು ಜಾತಿ ಕೇಂದ್ರಿತ ಶ್ರೇಣೀಕೃತ ಸಮಾಜದಲ್ಲಿ ಈ ನೆಲದ ಒಂದು ಬೃಹತ್ ಜನಸಮೂಹ ಬದುಕುವ ಹಕ್ಕುಗಳೂ ಇಲ್ಲದೆ ಇದ್ದ ಇತಿಹಾಸಕ್ಕೆ ನಾವು ಸಾಕ್ಷಿಯಾಗಿದ್ದೇವೆ ಅಲ್ಲವೇ? ಪರಕೀಯರ ಆಕ್ರಮಣವನ್ನೇ ಕೇಂದ್ರ ಬಿಂದುವನ್ನಾಗಿಸಿಕೊಂಡು ಇತಿಹಾಸದ ಅಧ್ಯಯನ ಮಾಡಲಾಗುವುದಿಲ್ಲ. ಏಕೆಂದರೆ ಭಾರತಕ್ಕೆ ಹೊರಗಿನಿಂದ ಬಂದ ಮೊಗಲರು ಇದೇ ನೆಲದ ಸಂಸ್ಕೃತಿ, ವಾಸ್ತುಶಿಲ್ಪ, ಸಂಗೀತ, ಕಲೆ, ಸಾಹಿತ್ಯ ಮತ್ತು ಭಾಷಿಕ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ.

ಕ್ರಿ.ಶ. ಏಳನೇ ಶತಮಾನದಿಂದಲೇ ಭಾರತದಲ್ಲಿ ಸೂಫಿ ಸಂತರು ತಮ್ಮ ಸಮನ್ವಯ ಸಂಸ್ಕೃತಿಯ ಬೇರುಗಳನ್ನು ಬಿತ್ತಿದ್ದಾರೆ. ಉಪನಿಷತ್ತುಗಳನ್ನು ಮೊತ್ತಮೊದಲು ಸಂಸ್ಕೃತದಿಂದ ಅನ್ಯಭಾಷೆಗೆ ತರ್ಜುಮೆ ಮಾಡಿದ ಕೀರ್ತಿ ಮೊಗಲ್ ದೊರೆ ಶಹಜಹಾನ್ ಮತ್ತು ಅವನ ಮಗ ದಾರಾ ಶಿಕೋಹ್‌ಗೆ ಸಲ್ಲುತ್ತದೆ. ಈ ಅವಧಿಯಲ್ಲಿ ಉಪನಿಷತ್ತು ಮತ್ತು ಭಗವದ್ಗೀತೆಯನ್ನು ಪರ್ಷಿಯನ್ ಭಾಷೆಗೆ ತರ್ಜುಮೆ ಮಾಡಿದ ನಂತರವೇ ಪ್ರಾಚೀನ ಭಾರತದ ಬೌದ್ಧಿಕ ಚಿಂತನೆಗಳು ವಿಶ್ವದೆಲ್ಲೆಡೆ ಪ್ರಚಾರ ಪಡೆಯಲು ಸಾಧ್ಯವಾಗಿತ್ತು. ಈ ಇತಿಹಾಸವನ್ನು ನಮ್ಮ ಮಕ್ಕಳಿಗೆ ಹೇಳಬೇಕಲ್ಲವೇ? ಸಮಕಾಲೀನ ಚರಿತ್ರೆಯನ್ನೇ ಮಕ್ಕಳಿಗೆ ಬೋಧಿಸಬೇಕು ಎಂದಾದರೆ ಸಂತಾಲ್ ಬುಡಕಟ್ಟು ಜನರ ಹೋರಾಟ, ಬಿರ್ಸಾ ಮುಂಡಾ ನಡೆಸಿದ ಕ್ರಾಂತಿಕಾರಿ ಸಂಘರ್ಷ, ತೆಲಂಗಾಣ ರೈತರ ಹೋರಾಟ ಮತ್ತು ಚರಿತ್ರೆಯಲ್ಲಿ ಆಗಿಹೋಗಿರುವ ನೂರಾರು ಜನಾಂದೋಲನಗಳನ್ನು ಪರಿಚಯಿಸಬೇಕಲ್ಲವೇ? ಇತಿಹಾಸದಲ್ಲಿ ಆಗಿ ಹೋದ ಪುಣ್ಯಪುರುಷ, ದಾರ್ಶನಿಕರ ಪರಿಚಯ ಮಾಡಿಸುವುದೇ ಆದರೆ ಇಂದಿನ ಮಕ್ಕಳಿಗೆ ಶರತ್‌ಚಂದ್ರ ಚಟರ್ಜಿ, ಈಶ್ವರ ಚಂದ್ರ ವಿದ್ಯಾಸಾಗರ್, ರವೀಂದ್ರ ನಾಥ ಠಾಗೋರ್ ಮುಂತಾದ ಯುಗ ಪ್ರವರ್ತಕ ಚಿಂತಕರ ಜೀವನವನ್ನು ಪರಿಚಯಿಸಬೇಕು. ತಂತ್ರಜ್ಞಾನ ಯುಗದಲ್ಲಿ ಮುನ್ನುಗ್ಗುತ್ತಿರುವ ಭಾರತದ ಮಕ್ಕಳ ಮಿದುಳಿನಲ್ಲಿ ಗಣೇಶನಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿದಂತಹ ಕಪೋಲಕಲ್ಪಿತ ಅವೈಜ್ಞಾನಿಕ ಸರಕುಗಳನ್ನು ತುರುಕುವುದಕ್ಕಿಂತಲೂ, ಭಾರತಕ್ಕೆ ರಾಕೆಟ್ ತಂತ್ರಜ್ಞಾನ ಪರಿಚಯಿಸಿದ ಮತ್ತು ಮದ್ದು ಗುಂಡುಗಳ ಬಳಕೆಗೆ ನಾಂದಿ ಹಾಡಿದ ಟಿಪ್ಪು ಸುಲ್ತಾನನ ಚರಿತ್ರೆಯನ್ನು ಹೇಳುವುದು ಉಚಿತ ಅಲ್ಲವೇ? ಟಿಪ್ಪುಸುಲ್ತಾನನ ಮತಾಂಧತೆಯೇ ಮುಖ್ಯವಾಗುವುದಾದರೆ ಪೇಶ್ವೆ ಆಡಳಿತದಲ್ಲಿ, ಕೇರಳದ ಇತಿಹಾಸದಲ್ಲಿ ಅಸ್ಪೃಶ್ಯ ಸಮುದಾಯದ ಮೇಲೆ ದಬ್ಬಾಳಿಕೆ ನಡೆಸಿದ ಜಾತಿ ಶ್ರೇಷ್ಠತೆ ಮತ್ತು ಜಾತ್ಯಾಂಧತೆ ಏಕೆ ಮುಖ್ಯವಾಗಬಾರದು? ಈ ದೃಷ್ಟಿಯಿಂದ ನೋಡಿದರೆ ಭಾರತೀಯ ಇತಿಹಾಸದಲ್ಲಿ ಭವ್ಯ ಪರಂಪರೆ ಇರುವಂತೆಯೇ ಕರಾಳ ಅಧ್ಯಾಯಗಳೂ ಇವೆ. ಈ ಕರಾಳತೆಗೆ ಮುಖಾಮುಖಿಯಾಗಿ, ವಸಾಹತು ಆಳ್ವಿಕೆಯ ವಿರುದ್ಧವೂ ಹೋರಾಡುತ್ತಾ ಈ ದೇಶದ ಬಹುಸಂಖ್ಯಾತ ಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಚಾರಿತ್ರಿಕ ವ್ಯಕ್ತಿಗಳನ್ನು ಶಾಲಾ ಪಠ್ಯಗಳ ಮೂಲಕ ಮಕ್ಕಳಿಗೆ ಪರಿಚಯಿಸಬೇಕಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಪರಿಚಯಿಸುವಾಗಲೂ ಈ ಎಚ್ಚರ ನಮ್ಮಲ್ಲಿರಬೇಕಾಗುತ್ತದೆ.

ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಶ್ರೇಣೀಕೃತ ಜಾತಿ ವ್ಯವಸ್ಥೆಯ ನಿರ್ಮೂಲನೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಯಾವುದೇ ಚಿಂತಕರು ಈ ಸಂದರ್ಭದಲ್ಲಿ ಮುಖ್ಯವಾಗುತ್ತಾರೆ. ರಾಜಕೀಯ ಪಕ್ಷಗಳ ಸೈದ್ಧಾಂತಿಕ ನಿಲುವುಗಳನ್ನೂ ಮೀರಿದ ಒಂದು ಬಹುಸಾಂಸ್ಕೃತಿಕ ನೆಲೆಯನ್ನು ಸ್ಥಾಪಿಸುವುದು ಮತ್ತು ಕಾಪಾಡುವುದು ವರ್ತಮಾನದ ತುರ್ತು. ಚರಿತ್ರೆಯ ವಿಭಿನ್ನ ಕಾಲಘಟ್ಟಗಳಲ್ಲಿ ಸಂಭವಿಸಿರಬಹುದಾದಂತಹ ಚಾರಿತ್ರಿಕ ಪ್ರಮಾದಗಳಿಗೆ ರಾಜಕೀಯ ಕಾರಣಗಳಿರುವಂತೆಯೇ ಸಾಂಸ್ಕೃತಿಕ ಮತ್ತು ಮತಧಾರ್ಮಿಕ ಕಾರಣಗಳೂ ಇರುವುದನ್ನು ಇಂದಿನ ಕಾಲಘಟ್ಟದಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ. ಈ ಪ್ರಮಾದಗಳನ್ನು ಶೋಧಿಸುತ್ತಲೇ, ಭವಿಷ್ಯ ಭಾರತದಲ್ಲಿ ಇಂತಹ ಒಂದು ಸಾಂಸ್ಕೃತಿಕ ಕ್ರೌರ್ಯ ಮರುಕಳಿಸದಂತೆ, ರಾಜಕೀಯ ದಬ್ಬಾಳಿಕೆ, ಸಾಮಾಜಿಕ ನಿರ್ಬಂಧಗಳು, ಮತಧಾರ್ಮಿಕ ಶೋಷಣೆಗಳು ತಲೆದೋರದಂತೆ ಎಚ್ಚರ ವಹಿಸುವುದು ಇಂದು ಅತ್ಯವಶ್ಯವಾಗಿದೆ. ಇಂತಹ ಒಂದು ಸಮಾಜವನ್ನು ಕಟ್ಟಲು ಬೇಕಾದ ಬೌದ್ಧಿಕ ಆಲೋಚನೆಗಳೊಂದಿಗೆ, ಸಾಂಸ್ಕೃತಿಕ ಚಿಂತನೆಗಳೊಂದಿಗೆ ವರ್ತಮಾನದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕಿದೆ. ನಮ್ಮ ನೆಲ, ದೇಶ ಮತ್ತು ಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಬೇಕಾದರೆ, ಚರಿತ್ರೆಯ ಕರಾಳ ಅಧ್ಯಾಯಗಳನ್ನು ವಿಸ್ಮತಿಗೆ ಜಾರಲು ಬಿಡದೆ, ಈ ಅಧ್ಯಾಯಗಳ ಒಳಸುಳಿಗಳನ್ನು ಸಮಕಾಲೀನ ಸಂದರ್ಭದಲ್ಲಿ ವ್ಯಾಖ್ಯಾನಿಸುವ ಅವಶ್ಯಕತೆಯೂ ಇದೆ. ಹಾಗೆಯೇ ಈ ಸಾಮಾಜಿಕ-ಸಾಂಸ್ಕೃತಿಕ ಕ್ರೌರ್ಯವನ್ನು ಮೀರಿ ಮುನ್ನಡೆದು, ಒಂದು ಅಧುನಿಕ ನಾಗರಿಕ ದೇಶವಾಗಿ ರೂಪುಗೊಳ್ಳಲು ನೆರವಾದ ಮಹಾನ್ ದಾರ್ಶನಿಕರನ್ನು ಸ್ಮರಿಸುವ ಅವಶ್ಯಕತೆಯೂ ಇದೆ.

ಈ ನಿಟ್ಟಿನಲ್ಲಿ ನಮಗೆ ವಿವೇಕಾನಂದ, ಠಾಗೋರ್, ಅರಬಿಂದೋ ಅವರೊಂದಿಗೇ 19 ಮತ್ತು 20ನೇ ಶತಮಾನದ ಸಮಾಜ ಸುಧಾರಕರಾದ ಮಹಾತ್ಮಾ ಫುಲೆ, ಸಾವಿತ್ರಿ ಬಾಯಿ ಫುಲೆ, ನಾರಾಯಣಗುರು, ಅಯೋತಿ ದಾಸ್, ಪೆರಿಯಾರ್, ಅಂಬೇಡ್ಕರ್, ಗಾಂಧಿ ಮುಂತಾದವರೂ ಮುಖ್ಯರಾಗುತ್ತಾರೆ. ಈ ಎಲ್ಲ ಚಿಂತಕರು ತಾತ್ವಿಕವಾಗಿ ಹಿಂದೂ ಧರ್ಮವನ್ನು ಒಪ್ಪಿಕೊಂಡವರೇ ಆಗಿದ್ದರೂ, ಭಾರತದ ಬಹುಸಾಂಸ್ಕೃತಿಕ ನೆಲೆಗಳನ್ನು ಸುರಕ್ಷಿತವಾಗಿ ಮುಂದೊಯ್ಯಲು ಶ್ರಮಿಸಿದವರು ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಲು ಯತ್ನಿಸಿದವರು. ಈ ಚಿಂತಕರ ಬೋಧನೆಗಳನ್ನು ಮತ್ತು ಆಲೋಚನೆಗಳನ್ನು ಸಮಾಜಕ್ಕೆ ತಲುಪಿಸುವ ಮಹತ್ಕಾರ್ಯವನ್ನು ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಮಾಡಿದ್ದಾರೆ. ಕುವೆಂಪು, ಬೇಂದ್ರೆ ಅವರಿಂದ ಲಂಕೇಶ್, ದೇವನೂರು ಅವರವರೆಗೆ ಈ ಪ್ರಯತ್ನ ನಡೆದಿದೆ. ಭಾರತ ತನ್ನ ಬಹುತ್ವ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದರೆ ಈ ಪ್ರಯತ್ನಗಳನ್ನು ಮತ್ತು ಅದರ ಹಿಂದಿನ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಅವಶ್ಯಕತೆ ಇದೆ. ಹಾಗಾಗಿಯೇ ಶಾಲಾ ಪಠ್ಯಗಳಲ್ಲಿ ಈ ಚಿಂತನೆಗಳನ್ನು ಅಳವಡಿಸಲು ಕಾಲದಿಂದ ಕಾಲಕ್ಕೆ ಪ್ರಯತ್ನಿಸಲಾಗುತ್ತಿದೆ. ಇಲ್ಲಿ ಎಡಪಂಥೀಯತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಬದಲಾಗಿ ಸಮಕಾಲೀನ ಸಂದರ್ಭದಲ್ಲಿ ಅತ್ಯವಶ್ಯವಾದ ಬಹುಸಾಂಸ್ಕೃತಿಕ ಆಲೋಚನಾ ಕ್ರಮ ಮುಖ್ಯವಾಗುತ್ತದೆ. ಹೆಡಗೆವಾರ್ ಅವರ ಚಿಂತನೆಗಳು ಈ ದಿಕ್ಕಿನಲ್ಲಿ ಸಾಗುವುದಿಲ್ಲ ಎನ್ನುವುದು ನಿರ್ವಿವಾದಿತ ಅಂಶ. ವಿವಿಧ ಸಂಸ್ಕೃತಿಗಳ ಚಿಂತನಾವಾಹಿನಿಗಳಿಗೆ ಅವಕಾಶ ನೀಡುವ ಹಿಂದೂ ಧರ್ಮದ ಬದಲು, ಏಕ ಸಂಸ್ಕೃತಿಯನ್ನು ಕ್ರೋಡೀಕರಿಸುವ ಮತ್ತು ಭಾರತದ ನೆಲದಲ್ಲೇ ಕಾಣಬಹುದಾದ ಸಾಂಸ್ಕೃತಿಕ ನೆಲೆಗಳನ್ನು ನಿರಾಕರಿಸುವ ನಿಟ್ಟಿನಲ್ಲಿ ಹೆಡಗೆವಾರ್‌ಅವರ ಚಿಂತನೆಗಳು ಸಾಗುತ್ತವೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲೇ ಹೆಡಗೆವಾರ್ ಅವರ ಚಿಂತನೆಗಳು ಬಹುತ್ವ ಸಂಸ್ಕೃತಿಯಿಂದಾಚೆಗಿನ ಏಕಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಸಾಗಿದ್ದುದನ್ನೂ ಗಮನಿಸಬೇಕಲ್ಲವೇ ? ಈ ಹಿನ್ನೆಲೆಯಲ್ಲಿ ನೋಡಿದಾಗ ಹೆಡಗೆವಾರ್ ಅವರನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು ಉಚಿತವೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಹಾಗೆಯೇ ಕೆಲವು ಸಮಕಾಲೀನ ಸಾಹಿತಿಗಳ ಕತೆ, ಕವಿತೆಗಳನ್ನು ಪಠ್ಯದಿಂದ ಕೈಬಿಟ್ಟಿರುವುದು ಉಚಿತವೇ ಎಂದೂ ಪ್ರಶ್ನಿಸಬೇಕಾಗುತ್ತದೆ. ಈ ಎರಡೂ ಪ್ರಶ್ನೆಗಳನ್ನು ನಿಷ್ಕರ್ಷೆ ಮಾಡಬೇಕಾದರೆ, ಪಠ್ಯ ಪರಿಷ್ಕರಣೆಯ ಸಮಿತಿಯಲ್ಲಿ ಇತಿಹಾಸಕಾರರು, ಶಿಕ್ಷಣ ತಜ್ಞರು ಮತ್ತು ಎಲ್ಲ ರೀತಿಯ ಚಿಂತನೆಗಳನ್ನೂ ಪ್ರತಿನಿಧಿಸುವ ಸಾಹಿತಿಗಳು, ಚಿಂತಕರು ಇರಬೇಕಾಗುತ್ತದೆ. ಈ ಬೌದ್ಧಿಕ ಸಮತೋಲನವನ್ನು ಕಾಪಾಡಿಕೊಂಡೇ ರಾಜ್ಯ ಸರಕಾರ ಪಠ್ಯ ಪರಿಷ್ಕರಣ ಸಮಿತಿಯನ್ನು ರಚಿಸಬೇಕಿದೆ. ಪ್ರಸಕ್ತ ಸಮಿತಿಯಲ್ಲಿ ಈ ಕೊರತೆ ಎದ್ದು ಕಾಣುತ್ತದೆ.

ಬದಲಾಗಿ ಆಡಳಿತಾರೂಢ ಪಕ್ಷದ ಸೈದ್ಧಾಂತಿಕ ಚಿಂತನೆಗಳ ಪ್ರಾತಿನಿಧ್ಯ ವಹಿಸುವವರನ್ನು ಸಮಿತಿ ಒಳಗೊಂಡಿದೆ. ಸನ್ಮಾನ್ಯ ಶಿಕ್ಷಣ ಸಚಿವರು ಈ ಅಸಮತೋಲನವನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಚನೆ ಮಾಡಿದರೆ, ಬಹುಶಃ ಈಗ ಭುಗಿಲೆದ್ದಿರುವ ವಿವಾದವನ್ನು ಸರಿಪಡಿಸಲು ಸಾಧ್ಯ. ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರೇ ಹೇಳಿರುವಂತೆ ‘‘ಭಾಷೆಯ ಪಠ್ಯದ ಹೆಸರಿನಲ್ಲಿ ಸಿದ್ಧಾಂತ ಪ್ರಚಾರಕ್ಕೆ ಅವಕಾಶವಾಗಬಾರದು...’’. ಆದರೆ ಚಕ್ರತೀರ್ಥ ಅವರ ನೇತೃತ್ವದಲ್ಲಿ ಸಮಿತಿಯು ನೀಡಿರುವ ಶಿಫಾರಸುಗಳು ಈ ಮಾತುಗಳನ್ನೇ ಅಲ್ಲಗಳೆಯುವ ದಿಕ್ಕಿನಲ್ಲಿವೆ. ಶಾಲಾ ಕಾಲೇಜುಗಳ ಇತಿಹಾಸ ಮತ್ತು ಭಾಷಾ ಪಠ್ಯಗಳು -ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಭಾರತದ ಸಂವಿಧಾನದ ಆಶಯದಂತೆ ಬಹುತ್ವ ಹಾಗೂ ಸಮಾನತೆಯ ಧೋರಣೆಯನ್ನು ಪೋಷಿ ಸುವ ದೃಷ್ಟಿಯಿಂದ ರಚನೆಯಾಗಬೇಕು. ಏಕೆಂದರೆ ಈ ಪಠ್ಯಗಳೇ ಭವಿಷ್ಯದ ಭಾರತದ ಪ್ರಜೆಗಳನ್ನು ರೂಪಿಸುವ ಆಕರಗಳಾಗುತ್ತವೆ. ಈ ಹಿನ್ನೆಲೆಯಲ್ಲೇ ಶಾಲಾ ಪಠ್ಯಕ್ರಮಗಳು ಹಿಂದುತ್ವ ಅಥವಾ ಮತ್ಯಾವುದೇ ಸೀಮಿತ ರಾಷ್ಟ್ರೀಯತೆಯ ಕಾರ್ಯಸೂಚಿಗಳಾಗುವುದನ್ನು ವಿರೋಧಿಸಬೇಕಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top