ಸ್ಥಳೀಯ ಸಂಸ್ಥೆ ಚುನಾವಣೆ: ಸುಪ್ರೀಂ ತೀರ್ಪು, ಮುಂದೇನು? | Vartha Bharati- ವಾರ್ತಾ ಭಾರತಿ

--

ಸ್ಥಳೀಯ ಸಂಸ್ಥೆ ಚುನಾವಣೆ: ಸುಪ್ರೀಂ ತೀರ್ಪು, ಮುಂದೇನು?

ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ, ಸರಕಾರವಾಗಲಿ ಅಥವಾ ರಾಜಕೀಯ ಪಕ್ಷಗಳ ನೇತಾರರೇ ಆಗಲಿ ಪಂಚಾಯತ್ ಚುನಾವಣೆ ಎದುರಿಸಲು ಹಿಂದೇಟು ಹಾಕುತ್ತಿರುವುದೇಕೆ ಎಂಬ ಮರ್ಮ ತಿಳಿಯುವುದು ಕಷ್ಟವೇನಲ್ಲ. ಅಧಿಕಾರ ಹಂಚಿಕೊಳ್ಳಲು ಇಷ್ಟ ಪಡದ ಇವರ ನಡವಳಿಕೆ ವಿಕೇಂದ್ರೀಕರಣದ ಮೂಲ ಸಿದ್ಧಾಂತಕ್ಕೆ ವಿರುದ್ಧವಾದುದಾಗಿದೆ. ಅಂತರಂಗದಲ್ಲಿ ಹುದುಗಿರುವ ಇಂತಹ ಹುನ್ನಾರಕ್ಕೆ ಹಿಂದುಳಿದ ವರ್ಗಗಳನ್ನು ಮುಂದೆ ತರುತ್ತಿರುವುದು ನೆಪವಷ್ಟೇ. ಸಾಂವಿಧಾನಿಕ ಪ್ರಕ್ರಿಯೆಗೆ ತೊಡರುಗಾಲು ಹಾಕುವುದೇ ಸರಕಾರದ ಉದ್ದೇಶವಾಗಿದ್ದಲ್ಲಿ, ಅದು ಪ್ರಜಾಧಿಪತ್ಯದ ವಿರೋಧಿ ನಿಲುವು.


 ಪ್ರಜಾಪ್ರಭುತ್ವದ ನೀತಿ- ನಿಯಮಗಳನ್ನು ಗಾಳಿಗೆ ತೂರಿ ಸ್ವೇಚ್ಛಾವೃತ್ತಿಯಾಗಿ ನಡೆದುಕೊಳ್ಳುತ್ತಿರುವ ರಾಜಕೀಯ ಪಕ್ಷಗಳಿಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಕೆಲ ದಿನಗಳ ಹಿಂದೆ ನೀಡಿರುವ ತೀರ್ಪು ಒಂದು ದೊಡ್ಡ ಪಾಠ. ಮೇಲಿಂದ ಮೇಲೆ ಸರ್ವೋಚ್ಚ ನ್ಯಾಯಾಲಯ ಬಾರುಕೋಲು ಬೀಸುತ್ತಿದ್ದರೂ ರಂಗೋಲಿ ಕೆಳಗೆ ತೂರುವ ಪ್ರಯತ್ನವನ್ನಂತೂ ರಾಜಕಾರಣಿಗಳು ಬಿಡುತ್ತಿಲ್ಲ. ರಾಜ್ಯಗಳ ಸ್ಥಳೀಯ ಸಂಸ್ಥೆಗಳಲ್ಲಿ ಏಕರೂಪದ ಆಡಳಿತ ವ್ಯವಸ್ಥೆ ತರುವ ಮತ್ತು ಅವುಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡುವ ಉದ್ದೇಶದಿಂದ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಅವಧಿ ಮೀರಿದ ಸ್ಥಳೀಯ ಸಂಸ್ಥೆಗಳಿಗೆ ಕಡ್ಡಾಯವಾಗಿ ಚುನಾವಣೆ ನಡೆಸುವುದು ಮತ್ತು ಪರಿಶಿಷ್ಟ ವರ್ಗಗಳೂ ಸೇರಿದಂತೆ ಹಿಂದುಳಿದ ವರ್ಗಗಳಿಗೆ ಹಾಗೂ ಮಹಿಳೆಯರಿಗೆ ಮೀಸಲಾತಿ ನೀಡುವುದು ಅಲ್ಲದೆ ಗ್ರಾಮೀಣ ಮತ್ತು ನಗರ ಭಾರತದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿಯೂ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಯಿತು.

ಸಂವಿಧಾನ ತಿದ್ದುಪಡಿ ಅನುಸಾರ, ವಿಶೇಷವಾಗಿ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಅವಕಾಶ ಕಲ್ಪಿಸುವ ದಿಸೆಯಲ್ಲಿ ಕರ್ನಾಟಕ ರಾಜ್ಯ ಕಾಯ್ದೆಗಳನ್ನು ರೂಪಿಸಿತು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವಾಗುವಂತೆ, ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗಾಗಿ ಪ್ರತ್ಯೇಕ ಪಟ್ಟಿ ಸಿದ್ಧಪಡಿಸುವ ಶ್ರಮ ತೆಗೆದುಕೊಳ್ಳದ ಸರಕಾರ, ಶಿಕ್ಷಣ ಮತ್ತು ಉದ್ಯೋಗ ದೃಷ್ಟಿಯಿಂದ ಸಿದ್ಧಪಡಿಸಿದ್ದ ಹಿಂದುಳಿದ ವರ್ಗಗಳ ಪಟ್ಟಿಯನ್ನೇ ರಾಜಕೀಯ ಉದ್ದೇಶಕ್ಕೂ ಅಳವಡಿಸಿಕೊಂಡು ಶೇ.56ರಷ್ಟು ಮೀಸಲಾತಿ ಕೋಟಾ ನಿಗದಿ ಮಾಡಿತು. ಮೀಸಲಾತಿ ಕೋಟಾ ಮಿತಿ ಹೆಚ್ಚಾಗಿದೆ ಎಂದು ಕೆ.ಕೃಷ್ಣಮೂರ್ತಿ ಎಂಬವರ ರಿಟ್‌ನ್ನು ಆಧರಿಸಿ ಸರ್ವೋಚ್ಚ ನ್ಯಾಯಾಲಯ ಮೀಸಲಾತಿ ಕೋಟಾ ಶೇ.50ರ ಮಿತಿಯಲ್ಲಿರಬೇಕು ಹಾಗೂ ರಾಜಕೀಯವಾಗಿ ಹಿಂದುಳಿದವರನ್ನು ಗುರುತಿಸಲು ಒಂದು ಸ್ವತಂತ್ರ ಮತ್ತು ಸಮರ್ಪಿತವಾದ ಆಯೋಗ ರಚಿಸಬೇಕು ಎಂದೂ ಸ್ಪಷ್ಟ ಆದೇಶವನ್ನು 2010ರಲ್ಲಿ ಹೊರಡಿಸಿತ್ತು. ಅಂದಿನ ಸರಕಾರ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕೋಟಾ ಮೀತಿಯನ್ನಷ್ಟೇ ಕಡಿಮೆಗೊಳಿಸಿ, ಆಯೋಗವನ್ನು ರಚಿಸುವ ಉಸಾಬರಿಗೆ ಮಾತ್ರ ಹೋಗಲಿಲ್ಲ. ನಂತರದಲ್ಲಿ, ಯಥಾಸ್ಥಿತಿಯಲ್ಲಿಯೇ ಸ್ಥಳೀಯ ಸಂಸ್ಥೆಗಳಿಗೆ ಹಲವು ಚುನಾವಣೆಗಳೂ ನಡೆದವು. ಆ ಅವಧಿಯಲ್ಲಿ ಆರು ಮಂದಿ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಂಡರು. ಏಳನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುವ ಬಸವರಾಜ್ ಬೊಮ್ಮಾಯಿಯವರು ನಿರ್ವಾಹವಿಲ್ಲದೇ ಆಯೋಗ ರಚಿಸಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ರಾಜ್ಯ ಚುನಾವಣಾ ಆಯೋಗದ ಮಾಜಿ ಆಯುಕ್ತರಾದ ಸಿ.ಆರ್.ಚಿಕ್ಕಮಠ ಅವರನ್ನು ಸದಸ್ಯರನ್ನಾಗಿ ಸರಕಾರ ನೇಮಕ ಮಾಡಿದೆ.
 
2010ರಲ್ಲಿಯೇ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದ್ದರೂ, ಆಯೋಗ ರಚಿಸಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಕುರಿತು ಆಸಕ್ತಿಯನ್ನು ಎಂದಿಗೂ ತೋರದಿದ್ದ ಕರ್ನಾಟಕ ಸರಕಾರ, ಸದ್ಯ ಆಯೋಗ ರಚಿಸಲು ಇರುವ ಹಿಂದಿನ ಪ್ರಬಲ ಕಾರಣ ಇದಾಗಿದೆ- 2021ರ ಮಾರ್ಚ್ ತಿಂಗಳಲ್ಲಿ, ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರಕಾರದ ನಿಲುವನ್ನು ಸರ್ವೋಚ್ಚ ನ್ಯಾಯಾಲಯ ಒಪ್ಪದೆ, 2010ರಲ್ಲಿ ಅದೇ ನ್ಯಾಯಾಲಯ ಆಜ್ಞಾಪಿಸಿರುವ, ಮೂರು ಹಂತದ ಪರಿಶೀಲನಾ ಕಾರ್ಯ ಕೈಗೊಂಡು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕು ಎಂದು ಆದೇಶಿಸಿತ್ತು. ನ್ಯಾಯಾಲಯದ ನಿರ್ದೇಶನವನ್ನು ಮಹಾರಾಷ್ಟ್ರ ಸರಕಾರ ಪಾಲಿಸದಿರಲು, ಸರ್ವೋಚ್ಚ ನ್ಯಾಯಾಲಯ ಮತ್ತೊಮ್ಮೆ ಡಿಸೆಂಬರ್ ತಿಂಗಳಲ್ಲಿ, ಒಂದೋ ಮೂರು ಹಂತದ ಪರಿಶೀಲನಾ ಕಾರ್ಯ ಕೈಗೆತ್ತಿಕೊಳ್ಳಿ ಅಥವಾ ಎಲ್ಲಾ ಹಿಂದುಳಿದ ವರ್ಗಗಳ ಸ್ಥಾನಗಳನ್ನೂ ಸಾಮಾನ್ಯ ಎಂದು ಪರಿಗಣಿಸಿ ಚುನಾವಣೆ ನಡೆಸಿ ಎಂದು ಮಹಾರಾಷ್ಟ್ರ ಸರಕಾರಕ್ಕೆ ಕಟ್ಟಾಜ್ಞೆ ವಿಧಿಸಿತು. ಹೀಗಿದ್ದಾಗ್ಯೂ ನ್ಯಾಯಾಲಯದ ಆದೇಶವನ್ನು ಅನುಸರಿಸದೆ ಮಹಾರಾಷ್ಟ್ರ ಸರಕಾರ ಕುಂಟು ನೆಪ ಮುಂದಿಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯದ ಮುಂದೆ ಚುನಾವಣೆ ನಡೆಸಲಾಗದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಯತ್ನಿಸಿತು. ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ ಸರಕಾರದ ವಿವರಣೆಯನ್ನು ಸುತಾರಾಂ ಒಪ್ಪದೆ 4.5.22ರ ತನ್ನ ಆದೇಶದಲ್ಲಿ ಸರಕಾರದ ವರ್ತನೆಯನ್ನು ‘‘ಸಂವಿಧಾನಬದ್ಧ ಕರ್ತವ್ಯದ ಪರಿತ್ಯಾಗ’’ ಮತ್ತು ‘‘ರಾಜ್ಯದಲ್ಲಿ ಕಾನೂನು ಕುಸಿತ’’ ಎಂದು ಕಟುವಾದ ಶಬ್ದಗಳಲ್ಲಿ ಖಂಡಿಸಿ, ಮುಂದಿನ ಎರಡು ವಾರಗಳಲ್ಲಿ ಚುನಾವಣೆ ಅಧಿಸೂಚನೆ ಹೊರಡಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಗಡುವು ವಿಧಿಸಿದೆ. ಹೀಗಾಗಿ ಚುನಾವಣೆ ನಡೆಸುವುದೊಂದೇ ಮಹಾರಾಷ್ಟ್ರ ಸರಕಾರಕ್ಕೆ ಉಳಿದಿರುವ ಮಾರ್ಗ.

ಈ ಮಧ್ಯೆ, ಮಧ್ಯಪ್ರದೇಶದ ಇಂತಹದೇ ಪ್ರಕರಣದಲ್ಲಿ 10.5.22ರಂದು, ಸರ್ವೋಚ್ಚ ನ್ಯಾಯಾಲಯದ ಅದೇ ತ್ರಿಸದಸ್ಯ ಪೀಠ, ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡಣೆ ಕಾರ್ಯ ಪೂರ್ಣವಾಗಿಲ್ಲ ಎನ್ನುವುದಾಗಲಿ ಅಥವಾ ತ್ರಿಸ್ತರ ಪರಿಶೀಲನಾ ಕಾರ್ಯ ನಿಮಿತ್ತ ಹಿಂದುಳಿದ ವರ್ಗಗಳಿಗೆ ಕ್ಷೇತ್ರ ಮೀಸಲಿರಿಸುವ ಕೆಲಸವಾಗಿಲ್ಲ ಎಂಬುದನ್ನೇ ಆಗಲಿ ಮುಂದಿಟ್ಟುಕೊಂಡು, ಅವಧಿ ಮೀರಿರುವ ಪಂಚಾಯತ್‌ಗಳಿಗೆ ಚುನಾವಣೆ ನಡೆಸದಿರುವುದು ಸಂವಿಧಾನ ವಿರೋಧಿ ಎಂಬ ಖಚಿತ ನಿಲುವನ್ನು ತಳೆದು, ತಕ್ಷಣವೇ ಚುನಾವಣೆ ಅಧಿಸೂಚನೆ ಹೊರಡಿಸಲು ಮಧ್ಯ ಪ್ರದೇಶವೂ ಸೇರಿದಂತೆ, ಅವಧಿ ಮೀರಿರುವ ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಬಾಕಿ ಇರುವ ಅಂತಹ ರಾಜ್ಯಗಳ ಚುನಾವಣಾ ಆಯೋಗಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಹಾಗೆಯೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕ್ಷೇತ್ರಗಳನ್ನು ಹೊರತುಪಡಿಸಿದಂತೆ, ಉಳಿದ ಎಲ್ಲಾ ಸಾಮಾನ್ಯ ಕ್ಷೇತ್ರಗಳಿಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅವಕಾಶ ನೀಡಲಡ್ಡಿಯಿಲ್ಲ ಎಂಬುದನ್ನೂ ರಾಜಕೀಯ ಪಕ್ಷಗಳಿಗೆ ಪೀಠ ಸ್ಪಷ್ಟಪಡಿಸಿರುವುದು ಮಹತ್ವ ಪಡೆದುಕೊಂಡಿದೆ (ಸುರೇಶ್ ಮಹಾಜನ್  ಮ.ಪ್ರ, ಡಿ 278/2022- ಪ್ಯಾರ -14).

ಮತ್ತೆ, ಸರ್ವೋಚ್ಚ ನ್ಯಾಯಾಲಯ ದಿನಾಂಕ 18.5.22 ರಂದು ಮಧ್ಯ ಪ್ರದೇಶ ಸರಕಾರದ ಅರ್ಜಿ ಮೇರೆಗೆ, ತನ್ನದೇ ದಿನಾಂಕ 10.5.22 ರ ಆದೇಶವನ್ನು ಪರಿಷ್ಕರಿಸಿ,ಹಿಂದುಳಿದ ವರ್ಗಗಳ ಆಯೋಗ ಮೂರು ಹಂತದ ಪರಿಶೀಲನಾ ಕಾರ್ಯ ಅನುಸರಿಸಿ ಸಿದ್ಧಪಡಿಸಿದ ಪರಿಷ್ಕೃತ ವರದಿಯನ್ನು ಒಪ್ಪಿ, ಒಂದು ವಾರದೊಳಗೆ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಹಿಂದುಳಿದ ವರ್ಗಗಳ ಹಿತದೃಷ್ಟಿಯಿಂದ ಈ ಆದೇಶ ಸ್ವಾಗತಾರ್ಹ.

ಸರ್ವೋಚ್ಚ ನ್ಯಾಯಾಲಯ ಖಚಿತ ನಿಲುವು ತಾಳಿದೆ ಎಂಬುದು ಸ್ಪಷ್ಟವಾಗಿದ್ದರೂ, ನ್ಯಾಯಾಲಯದ ಆದೇಶವನ್ನು, ಕರ್ನಾಟಕ ಸರಕಾರವು ಸದ್ಯ ಪಾಲನೆ ಮಾಡುವ ಹಾಗೆ ಕಂಡುಬರುತ್ತಿಲ್ಲ. ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂಬ ವಿಷಯವನ್ನು ಕಾನೂನು ಮಂತ್ರಿ ಹೇಳಿರುತ್ತಾರೆ. ಸ್ವತಂತ್ರ ಆಯೋಗ ರಚಿಸಿರುವ ವಿಷಯ ಮತ್ತು ಆಯೋಗದಿಂದ ತುರ್ತಾಗಿ ವರದಿ ಪಡೆದು ಮೀಸಲು ಕ್ಷೇತ್ರಗಳನ್ನು ಗುರುತಿಸಿ ಚುನಾವಣೆ ನಡೆಸುವ ಅಂಶಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವುದಾಗಿ ಅವರು ಹೇಳಿದ್ದಾರೆ. ವಿರೋಧ ಪಕ್ಷಗಳ ಮುಖಂಡರೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಬಾರದು ಎಂದು ಹೇಳಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ, ಸರಕಾರವಾಗಲಿ ಅಥವಾ ರಾಜಕೀಯ ಪಕ್ಷಗಳ ನೇತಾರರೇ ಆಗಲಿ ಪಂಚಾಯತ್ ಚುನಾವಣೆ ಎದುರಿಸಲು ಹಿಂದೇಟು ಹಾಕುತ್ತಿರುವುದೇಕೆ ಎಂಬ ಮರ್ಮ ತಿಳಿಯುವುದು ಕಷ್ಟವೇನಲ್ಲ. ಅಧಿಕಾರ ಹಂಚಿಕೊಳ್ಳಲು ಇಷ್ಟ ಪಡದ ಇವರ ನಡವಳಿಕೆ ವಿಕೇಂದ್ರೀಕರಣದ ಮೂಲ ಸಿದ್ಧಾಂತಕ್ಕೆ ವಿರುದ್ಧವಾದುದಾಗಿದೆ. ಅಂತರಂಗದಲ್ಲಿ ಹುದುಗಿರುವ ಇಂತಹ ಹುನ್ನಾರಕ್ಕೆ ಹಿಂದುಳಿದ ವರ್ಗಗಳನ್ನು ಮುಂದೆ ತರುತ್ತಿರುವುದು ನೆಪವಷ್ಟೇ. ಸಾಂವಿಧಾನಿಕ ಪ್ರಕ್ರಿಯೆಗೆ ತೊಡರುಗಾಲು ಹಾಕುವುದೇ ಸರಕಾರದ ಉದ್ದೇಶವಾಗಿದ್ದಲ್ಲಿ, ಅದು ಪ್ರಜಾಧಿಪತ್ಯದ ವಿರೋಧಿ ನಿಲುವು.

ಇಷ್ಟಾದರೂ, ಕರ್ನಾಟಕ ಸರಕಾರ ಪಟ್ಟುಬಿಡದೆ, ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ, ವಾರ್ಡ್ ಪುನರ್ವಿಂಗಡಣೆ ಮತ್ತು ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಸ್ಥಾನಗಳನ್ನು ನಿರ್ಣಯಿಸಲು ಎಂಟು ವಾರಗಳ ಸಮಯ ಕೋರಿ ಸಲ್ಲಿಸಿದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯದ ಪೀಠ ಒಪ್ಪಿಕೊಂಡಿದೆ ಹಾಗೂ ಆ ಎರಡೂ ಪ್ರಕ್ರಿಯೆಗಳನ್ನು, ಎಂಟು ವಾರಗಳಲ್ಲಿ ಪೂರ್ಣಗೊಳಿಸಿದ ನಂತರ, ಒಂದು ವಾರದೊಳಗೆ, ಚುನಾವಣಾ ಅಧಿಸೂಚನೆಯನ್ನು ಹೊರಡಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನವನ್ನೂ ದಿನಾಂಕ 20.5.22ರಂದು ನೀಡಿದೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ ಮುಖ್ಯಮಂತ್ರಿ, ಎರಡು ತಿಂಗಳಲ್ಲಿ ವಾರ್ಡ್ ಪುನರ್ವಿಂಗಡಣಾ ಕೆಲಸ ಪೂರ್ಣಗೊಳಿಸಿ, ಹೊಸದಾಗಿ ರಚಿಸಿರುವ ಆಯೋಗದಿಂದ ರಾಜಕೀಯವಾಗಿ ಹಿಂದುಳಿದ ವರ್ಗಗಳ ಪಟ್ಟಿಯನ್ನೂ ಪಡೆದು, ಆ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ ಚುನಾವಣೆ ನಡೆಸುವುದಾಗಿ ಹೇಳಿರುವುದಂತೂ ಅಚ್ಚರಿ ಉಂಟು ಮಾಡಿದೆ.

ದಿನಾಂಕ 16.5.22 ರಂದಷ್ಟೇ, ಸರಕಾರ ಆಯೋಗದ ಕಾರ್ಯವ್ಯಾಪ್ತಿ ಮತ್ತು ಅವಧಿಯನ್ನು ನಿಗದಿಗೊಳಿಸಿ ಆದೇಶಿಸಿದೆ (ಸಂಖ್ಯೆ:ಹಿಂವಕ 114 ಬಿಸಿ ಎ 2022 ದಿ :16.05.2022). ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಮೂರು ಹಂತದ ಪರಿಶೀಲನಾ ಕಾರ್ಯವನ್ನು ಆಯೋಗ ಮಾಡಬೇಕಿದೆ. ಸರಕಾರದ ಆದೇಶದಂತೆ ಆಯೋಗವು ಅಗತ್ಯವಾದ ಮಾಹಿತಿ ಮತ್ತು ಅಂಕಿ-ಅಂಶಗಳನ್ನು, ಕೇಂದ್ರ ಮತ್ತು ರಾಜ್ಯ ಸರಕಾರದ ಕಚೇರಿಗಳು, ಸಾರ್ವಜನಿಕ ಉದ್ಯಮಗಳು, ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಇತರ ಪ್ರಾಧಿಕಾರಗಳಿಂದ ಪಡೆದು ಪ್ರಾಯೋಗಿಕ ಅಂಕಿ-ಅಂಶಗಳನ್ನು ವಿಶ್ಲೇಷಿಸಿ, ರಾಜ್ಯದ ವಿವಿಧ ಭಾಗಗಳಿಗೆ ಅಧ್ಯಯನ ಭೇಟಿ ಕೈಗೊಂಡು ವರದಿ ಸಿದ್ಧಪಡಿಸಿ ಮೂರು ತಿಂಗಳ ಅವಧಿಯಲ್ಲಿ ಸಲ್ಲಿಸಲು ಸರಕಾರ ಸೂಚಿಸಿದೆ. ಆಯೋಗ ರಚಿಸಿ ಎರಡು ವಾರಗಳು ಕಳೆದರೂ, ಆಯೋಗ ತನ್ನ ಕೆಲಸ ಪ್ರಾರಂಭಿಸಲು ಕಚೇರಿ-ಸಿಬ್ಬಂದಿ ಮುಂತಾದ ಸೌಲಭ್ಯಗಳನ್ನು ಸರಕಾರ ಒದಗಿಸಿಲ್ಲ ಎಂದು ತಿಳಿದುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಆಯೋಗ, ಮುಖ್ಯಮಂತ್ರಿ ಹೇಳಿರುವಂತೆ ಎರಡು ತಿಂಗಳಲ್ಲಿ ವರದಿ ಸಲ್ಲಿಸಲು ಹೇಗೆ ಸಾಧ್ಯ? ಮಂತ್ರದಂಡ ಇದ್ದಲ್ಲಿ ಅದು ಸಾಧ್ಯವಾಗುತ್ತಿತ್ತೇನೋ?

ಹನ್ನೆರಡು ವರ್ಷಗಳ ಹಿಂದೆಯೇ, ಸರ್ವೋಚ್ಚ ನ್ಯಾಯಾಲಯ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಸ್ವತಂತ್ರ ಆಯೋಗವೊಂದನ್ನು ರಚಿಸಲು ಆದೇಶ ನೀಡಿದ್ದರೂ, ಸರಕಾರ ಅದನ್ನು ಕಾರ್ಯರೂಪಕ್ಕೆ ತಂದು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿ ಕೊಡಬಹುದಾಗಿತ್ತಲ್ಲವೇ? ಆಗೆಲ್ಲ ಜಾಣ ಮೌನ ವಹಿಸಿ, ಸದ್ಯ ಹಿಂದುಳಿದ ವರ್ಗಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಏಕೆ? ಸರ್ವೋಚ್ಚ ನ್ಯಾಯಾಲಯ 10.5.22ರ ಆದೇಶದಲ್ಲಿ, ಪರಿಶಿಷ್ಟ ವರ್ಗಗಳ ಮೀಸಲಾತಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳನ್ನೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳೇ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ಅಭ್ಯಂತರ ಇಲ್ಲ ಎಂದು ರಾಜಕೀಯ ಪಕ್ಷಗಳಿಗೆ ಕಿವಿಮಾತು ಹೇಳಿದೆ. ರಾಜಕೀಯ ಪಕ್ಷಗಳು ಹಾಗೇ ಮಾಡುತ್ತವೆಯೇ? ಮಾಡಿ ತೋರಿಸಲಿ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಬೇಕಾಗಿದೆ. ಈ ದಿಸೆಯಲ್ಲಿ ಚುನಾವಣಾ ಆಯೋಗ ಕಾರ್ಯಾರಂಭ ಮಾಡಿದೆ ಎಂದೂ ತಿಳಿದು ಬಂದಿದೆ. ಚುನಾವಣೆ ನಡೆಸುವಲ್ಲಿ ಇರುವ ತಡೆಯಾಜ್ಞೆಗಳನ್ನು ತೆರವುಗೊಳಿಸಲು ಆಯೋಗ ಶುರುವಿಟ್ಟುಕೊಂಡಿರುವ ಅಂಶ ಪತ್ರಿಕೆಗಳಲ್ಲಿ ವರದಿಯಾಗಿದೆ. ಸರ್ವೋಚ್ಚ ನ್ಯಾಯಾಲಯದ ನಿಂದನೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಚುನಾವಣಾ ಆಯೋಗ, ಚುನಾವಣೆ ನಡೆಸದೆ ಅನ್ಯ ಮಾರ್ಗವಿಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top