ಭೂಸುಧಾರಣೆಗಳ ಬಳಿಕ ಕೋಮುವಾದ ಹೆಚ್ಚಿತು
-

Photo: Frontline
2009,ಸೆ.10ರಂದು ಹಿಂದು ಸಂಘಟನೆಗಳಿಗೆ ಸೇರಿದ ‘ಗೋರಕ್ಷಕ’ರನ್ನು ಜೊತೆಯಲ್ಲಿಟ್ಟುಕೊಂಡಿದ್ದ ಪೊಲೀಸರು ವಯಸ್ಸಾದ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಮಂಗಳೂರಿನ ನೇತ್ರಾವತಿ ಸೇತುವೆಯ ಮೇಲೆ ತಡೆಹಿಡಿದಿದ್ದರು. ಅದರಲ್ಲಿದ್ದ ಮುಹಮ್ಮದ್ ಮುಸ್ತಫಾ ಮತ್ತು ಮುಹಮ್ಮದ್ ಆಸಿಫ್ ಎಂಬ ಯುವಕರನ್ನು ಪೊಲೀಸರು ಬೆನ್ನಟ್ಟಿದಾಗ ಅವರು ತಪ್ಪಿಸಿಕೊಳ್ಳಲು ಸೇತುವೆಯಿಂದ ನದಿಗೆ ಹಾರಿದ್ದರು,ಆದರೆ ಅವರು ಬದುಕುಳಿಯಲಿಲ್ಲ.
ಈ ಸಾವುಗಳ ಕುರಿತು ಪ್ರಶ್ನೆಗಳೆದ್ದಿದ್ದವು. ಆದರೆ ಮುಸ್ತಫಾ ಮತ್ತು ಆಸಿಫ್ ಪೊಲೀಸರಿಗೆ ಶರಣಾಗುವುದಕ್ಕಿಂತ ನದಿಗೆ ಜಿಗಿಯುವ ಅಪಾಯಕ್ಕೇ ಆದ್ಯತೆ ನೀಡಿದ್ದರು ಎಂಬುದು ಘಟನೆಯನ್ನು ವರದಿ ಮಾಡಿದ್ದ ಪತ್ರಕರ್ತ ನವೀನ್ ಸೂರಿಂಜೆ ಅವರ ಊಹೆ . ಅಂದು ನೇತ್ರಾವತಿ ರಕ್ತದೊಂದಿಗೆ ಹರಿದಿದ್ದಳು ಎಂದು ಹೇಳುವ ಸೂರಿಂಜೆ ಪ್ರಕಾರ ಯುವಕರ ಆ ದುರದೃಷ್ಟಕರ ನಿರ್ಧಾರಕ್ಕೆ ಭಯ ಕಾರಣವಾಗಿತ್ತು.
ಇದು ಕಳೆದ 15 ವರ್ಷಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ಸಂಭವಿಸಿರುವ ಹಲವಾರು ಆಘಾತಕಾರಿ ಕೋಮು ಘಟನೆಗಳಲ್ಲಿ ಮೊದಲನೆಯದಾಗಿತ್ತು. ಈ ಎಲ್ಲ ಘಟನೆಗಳನ್ನು ಸೂರಿಂಜೆಯವರ ‘ನೇತ್ರಾವತಿಯಲ್ಲಿ ನೆತ್ತರು’ ಕೃತಿಯಲ್ಲಿ ವಿವರಿಸಲಾಗಿದೆ. ಕನಿಷ್ಠ ಎರಡು ದಶಕಗಳಿಂದಲೂ ‘ಅನೈತಿಕ ಪೊಲೀಸ್ಗಿರಿ’ ಮತ್ತು ‘ಗೋರಕ್ಷಣೆ’ಯ ಹೆಸರಿನಲ್ಲಿ ದಾಂಧಲೆಗಳಿಂದಾಗಿ ಕುಖ್ಯಾತವಾಗಿರುವ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಬೆಂಕಿ ಸದಾ ಹೊಗೆಯಾಡುತ್ತಲೇ ಇದೆ. ಕರಾವಳಿ ಕರ್ನಾಟಕವು ಹಿಂದುತ್ವ ಪ್ರಯೋಗಶಾಲೆಯಾಗಿ ಹೊರಹೊಮ್ಮಿರುವುದಕ್ಕೆ ಕಾರಣಗಳನ್ನು ವಿವರಿಸಿರುವ ಹಲವಾರು ಲೇಖನಗಳು ಈ ಹಿಂದೆ ಪ್ರಕಟವಾಗಿವೆ. ತರಗತಿಗಳಲ್ಲಿ ಹಿಜಾಬ್ ಧರಿಸುವಿಕೆ ಮತ್ತು ದೇವಸ್ಥಾನಗಳ ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಕುರಿತು ಇತ್ತೀಚಿನ ವಿವಾದಗಳೂ ದಕ್ಷಿಣ ಕನ್ನಡ ಮತ್ತು ನೆರೆಯ ಉಡುಪಿ ಜಿಲ್ಲೆಯಲ್ಲಿಯೇ ಹುಟ್ಟಿಕೊಂಡಿದ್ದವು.
ಸೂರಿಂಜೆಯವರ ವರದಿಗಾರಿಕೆಯು ಹಿಂದುತ್ವ ಕಾರ್ಯಕರ್ತರು ಪ್ರಚಾರಗಳ ಮೂಲಕ ಸೃಷ್ಟಿಸಿರುವ ನಿರೂಪಣೆಗಳಲ್ಲಿಯ ಹಲವಾರು ಪೊಳ್ಳುಗಳನ್ನು ಬಯಲಿಗೆಳೆದಿದೆ. ಉದಾಹರಣೆಗೆ, ‘ಹಿಂದು ನಾವೆಲ್ಲ ಒಂದು’ ಎಂಬ ಬಾಯಿಮಾತಿನ ಘೋಷಣೆಗಳನ್ನು ಕೂಗುತ್ತಿರುವ ಹಿಂದು ಬಲಪಂಥೀಯ ಸಂಘಟನೆಗಳಲ್ಲಿ ಜಾತಿ ಶ್ರೇಣಿಯು ವ್ಯಾಪಕವಾಗಿರುವುದನ್ನು ಅವರು ತೋರಿಸುತ್ತಾರೆ. ಅವರ ವರದಿಗಾರಿಕೆಯು ‘ಲವ್ ಜಿಹಾದ್’ನಿಂದ ಹಿಡಿದು ಹೆಚ್ಚು ಅಪಾಯಕಾರಿಯಾದ ಕೊೆ ಆರೋಪಗಳಿಗೆ ಯುವ ಮುಸ್ಲಿಮರನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿರುವುದನ್ನು ಹಾಗೂ ಅನೈತಿಕ ಪೊಲೀಸ್ಗಿರಿ ಮತ್ತು ‘ಜಾನುವಾರು ರಕ್ಷಣೆ’ಯಲ್ಲಿ ತೊಡಗಿಕೊಂಡಿರುವ ಹುಂಬ ಶಕ್ತಿಗಳ ದ್ವಂದ್ವತೆಯನ್ನೂ ಬಯಲಿಗೆಳೆದಿದೆ.
ಸೂರಿಂಜೆಯವರ ವರದಿಗಾರಿಕೆಯು ಇಂತಹ ಘಟನೆಗಳಲ್ಲಿ ಪೊಲೀಸರ ಸಹಭಾಗಿತ್ವವವನ್ನೂ ಎತ್ತಿ ತೋರಿಸಿದೆ. ತಾನು ಒದಗಿಸಿದ್ದ ಸಾಕ್ಷಾಧಾರಗಳ ಆಧಾರದಲ್ಲಿ ದಂಡನೆಗೆ ಗುರಿಯಾದ ಪೊಲೀಸ್ ಅಧಿಕಾರಿಗಳನ್ನು ಅವರು ಹೆಸರಿಸಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಹಿಜಾಬ್ ವಿವಾದಕ್ಕೂ ಇತಿಹಾಸವಿದೆ,ಏಕೆಂದರೆ 2009ಕ್ಕೂ ಮೊದಲೇ ಪ್ರದೇಶದಲ್ಲಿಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿ ಮೊದಲ ಆದೇಶವು ಹೊರಬಿದ್ದಿತ್ತು.
2012,ನ.7ರಂದು ಮಂಗಳೂರಿನ ಹೊರವಲಯದ ಹೋಮ್‌ಸ್ಟೇ ಒಂದರ ಮೇಲೆ ನಡೆದಿದ್ದ ಕುಪ್ರಸಿದ್ಧ ದಾಳಿಯ ವರದಿಗಾರಿಕೆ ಮತ್ತು ಅದರ ಪರಿಣಾಮಗಳಿಗೆ ಕೃತಿಯ ಕೆಲವು ಅಧ್ಯಾಯಗಳು ಮೀಸಲಾಗಿವೆ. ಆ ಪ್ರಕರಣದಲ್ಲಿ ಸೂರಿಂಜೆಯವರನ್ನು ಆರೋಪಿಗಳ ಪೈಕಿ ಓರ್ವರಾಗಿ ಹೆಸರಿಸಲಾಗಿತ್ತು ಮತ್ತು ನಾಲ್ಕೂವರೆ ತಿಂಗಳ ಕಾಲ ಬಂಧನದಲ್ಲಿರಿಸಲಾಗಿತ್ತು. ಹೋಮಸ್ಟೇಯಲ್ಲಿದ್ದ ಯುವಕ-ಯುವತಿಯರ ಗುಂಪು ಅನೈತಿಕತೆಯಲ್ಲಿ ತೊಡಗಿದ್ದಾರೆಂದು ಆರೋಪಿಸಿ ಹಿಂದು ಬಲಪಂಥೀಯ ಕಾರ್ಯಕರ್ತರ ಗುಂಪು ಅವರ ಮೇಲೆ ಹಲ್ಲೆ ನಡೆಸಿತ್ತು. ಸೂರಿಂಜೆ ಸ್ಥಳದಲ್ಲಿ ಹಾಜರಿದ್ದ ಮೊದಲ ಪತ್ರಕರ್ತರಾಗಿದ್ದರು.
ಘಟನೆಯ ಪ್ರಮುಖ ವೀಡಿಯೊ ದೃಶ್ಯಾವಳಿಯೊಂದಿಗೆ ಅವರ ತ್ವರಿತ ವರದಿಯನ್ನು ರಾಷ್ಟ್ರಮಟ್ಟದ ಟಿವಿ ವಾಹಿನಿಗಳು ಪ್ರಸಾರಿಸಿದ್ದವು. ಇದು ಅವರ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಕಾರಣವಾಗಿತ್ತು. ಅವರ ವಿರುದ್ಧ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ.
‘ಆ್ಯಕ್ಟಿವಿಸ್ಟ್ ಪತ್ರಕರ್ತ’ಎಂದು ತನ್ನನ್ನು ಬಣ್ಣಿಸಿಕೊಳ್ಳುವ 37ರ ಹರೆಯದ ನವೀನ್ ಸೂರಿಂಜೆ ಕಸ್ತೂರಿ ನ್ಯೂಸ್ 24 ಮತ್ತು ಸುದ್ದಿ ಟಿವಿಗೆ ಸೇರುವ ಮುನ್ನ ಮಂಗಳೂರಿನಲ್ಲಿ ಉಷಾಕಿರಣ ಮತ್ತು ಕರಾವಳಿ ಅಲೆಯಂತಹ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಮಂಗಳೂರಿನಿಂದ ಸುಮಾರು 30 ಕಿ.ಮೀ.ಅಂತರದಲ್ಲಿರುವ ಸೂರಿಂಜೆ ಮೂಲದ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಗೊಂಡಿದ್ದು, ಬಿಟಿವಿ ನ್ಯೂಸ್ ಕನ್ನಡ ಸುದ್ದಿವಾಹಿನಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸಂದರ್ಶನದ ಕೆಲವು ಆಯ್ದ ಭಾಗಗಳು ಇಲ್ಲಿವೆ:
ಈ ಕೃತಿಯನ್ನು ರಚಿಸುವ ನಿಮ್ಮ ಉದ್ದೇಶವೇನು?
-ನಾನು ಹಲವಾರು ವರ್ಷಗಳಿಂದಲೂ ಕರಾವಳಿ ಕರ್ನಾಟಕದಿಂದ ವರದಿಗಾರಿಕೆ ಮಾಡುತ್ತಿದ್ದೇನೆ ಮತ್ತು ಈ ಪ್ರದೇಶದಲ್ಲಿಯ ಕೋಮು ಘಟನೆಗಳ ಕುರಿತು ಮಹತ್ವದ ದೃಷ್ಟಿಕೋನವನ್ನು ಕ್ರೋಡಿಕರಿಸಿಕೊಂಡಿದ್ದೇನೆ. ಕರಾವಳಿ ಕರ್ನಾಟಕದಲ್ಲಿ ಕೋಮು ಘಟನೆಗಳನ್ನು ದಾಖಲಿಸುವುದು ಮಾತ್ರವಲ್ಲ, ಉದಾಹರಣೆಗಳು ಮತ್ತು ಸಾಕ್ಷಾಧಾರಗಳೊಂದಿಗೆ ಹಿಂದುತ್ವ ಶಕ್ತಿಗಳೊಂದಿಗೆ ಪೊಲೀಸರ ಶಾಮೀಲಾತಿಯನ್ನು ತೋರಿಸುವುದೂ ಈ ಕೃತಿಯನ್ನು ರಚಿಸುವಲ್ಲಿ ನನ್ನ ಮುಖ್ಯ ಉದ್ದೇಶವಾಗಿತ್ತು.
ಇವು ನಾನು ಕಣ್ಣಾರೆ ಕಂಡು ದಾಖಲಿಸಿಕೊಂಡ ಘಟನೆಗಳಾಗಿವೆ. ಉದಾಹರಣೆಗೆ 2008ರಲ್ಲಿ ಚರ್ಚ್ಗಳ ಮೇಲಿನ ಕುಖ್ಯಾತ ದಾಳಿಗಳಲ್ಲಿ ಹಿಂದುತ್ವ ಗುಂಪುಗಳೊಂದಿಗೆ ಪೊಲೀಸರೂ ಭಾಗಿಯಾಗಿದ್ದರು. ಮಿಲಾಗ್ರಿಸ್ ಚರ್ಚ್ ಮಾತ್ರ ಇದಕ್ಕೆ ಹೊರತಾಗಿತ್ತು,ಅದರ ಮೇಲಿನ ದಾಳಿಗಳನ್ನು ಹಿಂದುತ್ವ ಗುಂಪುಗಳೇ ಖುದ್ದಾಗಿ ನಡೆಸಿದ್ದವು. ಕರಾವಳಿ ಕರ್ನಾಟಕದಲ್ಲಿ ಹಿಂದುತ್ವ ಗುಂಪುಗಳಿಗೆ ಮುಕ್ತ ಅವಕಾಶವನ್ನು ಏಕೆ ನೀಡಲಾಗಿದೆ? ಪೊಲೀಸರ ಬಹುಸಂಖ್ಯಾತ ಮನಃಸ್ಥಿತಿ ಇದಕ್ಕೆ ಕಾರಣವಾಗಿದೆ.
ಕರಾವಳಿ ಕರ್ನಾಟಕದವರೇ ಆಗಿರುವ ಬಿಜೆಪಿ ವಕ್ತಾರ ಗಣೇಶ ಕಾರ್ಣಿಕ್ ಅವರೇ ಶೇ.60ರಷ್ಟು ಪೊಲೀಸರು ಆರೆಸ್ಸೆಸ್‌ನಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಮುಸ್ಲಿಮ್ ಕೋಮುವಾದಿ ಗುಂಪುಗಳೂ ಸಕ್ರಿುವಾಗಿವೆ. ಈ ಗುಂಪುಗಳ ಸದಸ್ಯರ ಹಿಂಸಾಚಾರ ಮತ್ತು ಅನೈತಿಕ ಪೊಲೀಸ್ಗಿರಿಯ ಘಟನೆಗಳನ್ನು ಕೆಲವೇ ಗಂಟೆಗಳಲ್ಲಿ ನಿಯಂತ್ರಿಸಲಾಗುತ್ತದೆ,ಆದರೆ ಹಿಂದುತ್ವ ಗುಂಪುಗಳನ್ನು ಒಳಗೊಂಡ ಘಟನೆಗಳು ನಿಯಂತ್ರಣವನ್ನು ಮೀರಲು ಅವಕಾಶ ನೀಡಲಾಗುತ್ತದೆ. ಪೊಲೀಸ್ ಪಡೆಯಲ್ಲಿನ ಬಹುದೊಡ್ಡ ವರ್ಗವು ಹಿಂದುತ್ವ ಪರಿಕಲ್ಪನೆಯ ಬಗ್ಗೆ ಸಹಾನುಭೂತಿುನ್ನು ಹೊಂದಿದೆ ಎನ್ನುವುದನ್ನು ತೋರಿಸಲು ನನ್ನ ವರದಿಗಾರಿಕೆಯ ಆಧಾರದಲ್ಲಿ ಮನವರಿೆಯಾಗುವ ಸಾಕ್ಷಾಧಾರಗಳನ್ನು ನಾನು ಒದಗಿಸಿದ್ದೇನೆ.
ಕೋಮು ಘಟನೆ ಸಂಭವಿಸಿದಾಗೆಲ್ಲ ಮುಸ್ಲಿಮ್ ವ್ಯಕ್ತಿಯನ್ನು,ಆತನ ವಿರುದ್ಧ ಯಾವುದೇ ದೂರು ಇಲ್ಲದಿದ್ದರೂ, ಬಲಿಪಶುವನ್ನಾಗಿ ಮಾಡಲಾಗುತ್ತದೆ. ಪೊಲೀಸರು ಅಮಾಯಕ ಮುಸ್ಲಿಮರನ್ನು ಬಂಧಿಸಿದ್ದ ಮತ್ತು ಚಿತ್ರಹಿಂಸೆ ನೀಡಿದ್ದ ಹಲವಾರು ಪ್ರಕರಣಗಳನ್ನು ನಾನು ಗುರುತಿಸಿದ್ದೇನೆ.
ಕರಾವಳಿ ಕರ್ನಾಟಕದಲ್ಲಿ ಬೆಳೆದಿರುವ ನೀವು ಪರಿಸ್ಥಿತಿಯು ಯಾವಾಗಲೂ ಕೋಮು ಉದ್ವಿಗ್ನತೆಯಿಂದ ಕೂಡಿರುತ್ತದೆ ಅಥವಾ ಇದು ಇತ್ತೀಚಿನ ಬೆಳವಣಿಗೆಯಾಗಿದೆ ಎಂದು ಭಾವಿಸಿದ್ದೀರಾ?
-1990ರ ದಶಕದಲ್ಲಿ ನಾನು ಶಾಲೆಯಲ್ಲಿ ಓದುತ್ತಿದ್ದಾಗ ಕೋಮು ಘರ್ಷಣೆಗಳು ನಡೆಯುತ್ತಿದ್ದುದು ನನಗೆ ನೆನಪಿದೆ,ಆದರೆ ಅದು ಪ್ರದೇಶದಾದ್ಯಂತ ಸಂಕೀರ್ಣ ಮತ್ತು ಆಳವಾಗಿದ್ದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳಿಗೆ ಹರಡಿರಲಿಲ್ಲ. ಕೋಮು ಘಟನೆಗಳು ಎಂದಿಗೂ ಗೆಳೆತನಗಳನ್ನು ಬಾಧಿಸಿರಲಿಲ್ಲ ಮತ್ತು ಅಂತರಧರ್ಮೀಯ ಸಾಮರಸ್ಯವಿತ್ತು. ನನ್ನ ತಂದೆ ನಮ್ಮ ಗದ್ದೆಗಳಲ್ಲಿ ಬೆಳೆದ ಸಿಹಿಗೆಣಸನ್ನು ನಮ್ಮ ಮನೆಗೆ ನಿಯಮಿತವಾಗಿ ಬರುತ್ತಿದ್ದ ಮುಸ್ಲಿಮರಿಗೆ ನೀಡುತ್ತಿದ್ದರು ಮತ್ತು ಮಕ್ಕಳಾಗಿದ್ದ ನಮಗೆ ಅವರು ಮುಸ್ಲಿಮರು ಎನ್ನುವುದೂ ಗೊತ್ತಿರಲಿಲ್ಲ. ಈಗ ಪರಿಸ್ಥಿತಿ ಎಷ್ಟೊಂದು ಹದಗೆಟ್ಟಿದೆಯೆಂದರೆ ನಾನು ನನ್ನ ಮುಸ್ಲಿಂ ಸ್ನೇಹಿತರನ್ನು ಮನೆಗೆ ಕರೆದೊಯ್ದಿಗ ಅವರನ್ನು ಅತಿಯಾಗಿ ಉಪಚರಿಸುವ ನನ್ನ ಅಮ್ಮ ಬಳಿಕ ನಿನ್ನ ಸ್ನೇಹಿತರು ‘ಇತರ’ ಮುಸ್ಲಿಮರಂತಿಲ್ಲ ಎಂದು ಹೇಳುತ್ತಾಳೆ.
ಸಾಂಸ್ಕೃತಿಕ ವಲಯದಲ್ಲಿಯೂ ಬದಲಾವಣೆಗಳಾಗಿವೆ. ಕರಾವಳಿ ಕರ್ನಾಟಕವು ಭೂತಗಳು ಅಥವಾ ದೈವಗಳ ವೈದಿಕವಲ್ಲದ ಆರಾಧನೆಗೆ ಹೆಸರಾಗಿದೆ ಎನ್ನುವುದು ನಿಮಗೆ ಗೊತ್ತಿರಬಹುದು. ಇದನ್ನು ನಮ್ಮ ಪೂರ್ವಜರ ಆರಾಧನೆಯ ಒಂದು ರೂಪ ಎಂದು ಬಣ್ಣಿಸಬಹುದು. ನನ್ನ ಬಾಲ್ಯದಲ್ಲಿ ಈ ಭೂತಗಳ ಮೆರವಣಿಗೆಗಳು ಮುಸ್ಲಿಮರ ಮನೆಗಳ ಬಳಿಯಿಂದ ಹಾದು ಹೋಗುತ್ತಿದ್ದವು ಮತ್ತು ಮುಸ್ಲಿಮರು ಭೂತಗಳಿಗಾಗಿ ಹಾಲು, ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನು ಇಟ್ಟಿರುತ್ತಿದ್ದರು. ಗ್ರಾಮದ ಮಸೀದಿಯ ಬಳಿ ನಿಲ್ಲುತ್ತಿದ್ದ ಭೂತವು ಪ್ರವಾದಿ ಮುಹಮ್ಮದ್‌ರೊಂದಿಗೆ ಮೌನ ಸಂವಾದ ನಡೆಸುತ್ತಿತ್ತು ಮತ್ತು ಅವರ ಗೌರವಾರ್ಪಣೆಯ ಬಳಿಕ ಅಲ್ಲಿಂದ ನಿರ್ಗಮಿಸುತ್ತಿತ್ತು. ಇವೆಲ್ಲವೂ ಈಗ ಗಣನೀಯವಾಗಿ ಕಡಿಮೆಯಾಗಿವೆ.
1970ರ ದಶಕದಲ್ಲಿ ಭೂಸುಧಾರಣೆ ಕಾಯ್ದೆ ಬಂದ ನಂತರ ಕರಾವಳಿ ಕರ್ನಾಟಕದಲ್ಲಿ ಕೋಮುವಾದದ ಬೆಳವಣಿಗೆಯನ್ನು ಗುರುತಿಸಬಹುದು. ಕೆಲವರ್ಗಗಳ ಗೇಣಿದಾರರು ತಾವು ಉಳುಮೆ ಮಾಡುತ್ತಿದ್ದ ಭೂಮಿಗಳ ಒಡೆತನವನ್ನು ಹೊಂದುವುದರೊಂದಿಗೆ ಜಾತಿ ಶ್ರೇಣಿಗಳಿಗೆ ವ್ಯತ್ಯಯವುಂಟಾಗುವ ಭೀತಿಯಿತ್ತು. ಇದೇ ವೇಳೆ ಗಲ್ಫ್ ದೇಶಗಳಲ್ಲಿ ದುಡಿಯುತ್ತಿದ್ದ ಮುಸ್ಲಿಮರ ಸಂಖ್ಯೆಯೂ ಹೆಚ್ಚತೊಡಗಿತ್ತು ಮತ್ತು ಅವರು ಸ್ವದೇಶಕ್ಕೆ ಕಳುಹಿಸುತ್ತಿದ್ದ ದುಡ್ಡಿನಿಂದಾಗಿ ಅವರ ಕುಟುಂಬಗಳ ಆರ್ಥಿಕ ಸ್ಥಿತಿಯು ಉತ್ತಮಗೊಂಡಿತ್ತು. ಇದು ಕರಾವಳಿ ಕರ್ನಾಟಕದಲ್ಲಿ ಕೋಮು ಘಟನೆಗಳ ಆರಂಭದ ಯುಗವಾಗಿತ್ತು. 1985ರಲ್ಲಿ ಉಡುಪಿಯಲ್ಲಿ ನಡೆದಿದ್ದ ಧರ್ಮಸಂಸತ್ನಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ನಿರ್ಣಯವ ನ್ನು ತೆಗೆದುಕೊಳ್ಳಲಾಗಿತ್ತು.
ನೀವು ನಿಮ್ಮನ್ನು ‘ಆ್ಯಕ್ಟಿವಿಸ್ಟ್ ಪತ್ರಕರ್ತ ’ಎಂದು ಬಣ್ಣಿಸಿಕೊಳ್ಳುತ್ತೀರಿ. ತನ್ನ ನಂಬಿಕೆಗಳಿಂದಾಗಿ ಹತ್ಯೆಯಾದ ಗೌರಿ ಲಂಕೇಶ್ ಅವರೂ ತನ್ನನ್ನು ಹೀಗೆಯೇ ಬಣ್ಣಿಸಿಕೊಂಡಿದ್ದರು. ನಿಮ್ಮ ಪಾಲಿಗೆ ಈ ನುಡಿಗಟ್ಟಿನ ಅರ್ಥವೇನು?
- ಪತ್ರಕರ್ತರು ತಮ್ಮನ್ನು ‘ವಸ್ತುನಿಷ್ಠ’ಎಂದು ಕರೆದುಕೊಂಡಾಗ ನಾನು ಯಾವಾಗಲೂ ಸಂದೇಹ ಪಡುತ್ತೇನೆ. ವಸ್ತುನಿಷ್ಠ ಪತ್ರಕರ್ತರಾಗುವುದರ ಅರ್ಥವೇನು? ಬಜರಂಗ ದಳದ ಸದಸ್ಯನೋರ್ವ ಬೀಚ್ನಲ್ಲಿ ಹಿಂದು-ಮುಸ್ಲಿಮ್ ಜೋಡಿಯನ್ನು ಥಳಿಸಿದಾಗ ನಾನು ಆ ಘಟನೆಯ ಎರಡೂ ಪಾರ್ಶ್ವಗಳನ್ನು ವರದಿ ಮಾಡಬೇಕೇ? ಇಂತಹ ಘಟನೆ ನಡೆದಾಗ ನಾನು ವ್ಯಕ್ತಿನಿಷ್ಠ ಪತ್ರಕರ್ತನಾಗಿರುತ್ತೇನೆ,ನಾನು ಅನೈತಿಕ ಪೊಲೀಸ್ಗಿರಿಯ ಬಲಿಪಶುಗಳ ಪರವಾಗಿರುತ್ತೇನೆ. ಏಕೆಂದರೆ ಅವರು ಮಾಡುತ್ತಿರುವುದರಲ್ಲಿ ಈ ದೇಶದ ಕಾನೂನು ಮತ್ತು ಸಂವಿಧಾನಕ್ಕೆ ಅನುಗುಣವಾಗಿ ಯಾವುದೇ ತಪ್ಪು ಇರುವುದಿಲ್ಲ.
ಪತ್ರಕರ್ತ ಅಧಿಕಾರ,ಶಕ್ತಿ ಮತ್ತು ಶೋಷಣೆಯ ವಿರುದ್ಧ ಜನತೆಯ ಪರವಾಗಿರಬೇಕು. ಕೈಕೈ ಹಿಡಿದುಕೊಂಡಿರುವ ಜೋಡಿಯನ್ನು ಯಾರಾದರೂ ಥಳಿಸಿದಾಗ ಆತ ಕ್ರಿಮಿನಲ್ ಕೃತ್ಯವನ್ನು ಮಾಡುತ್ತಿದ್ದಾನೆ ಮತ್ತು ಓರ್ವ ಪತ್ರಕರ್ತನಾಗಿ ಅದನ್ನು ವರದಿ ಮಾಡುವುದು ನನ್ನ ಕರ್ತವ್ಯ. ಹಲವಾರು ಪತ್ರಕರ್ತರು ಮಾಡುವಂತೆ ನಾನೇಕೆ ಕ್ರಿಮಿನಲ್ಗಳ ಪರವಾಗಿರಬೇಕು? ಅದುವೇ ವಸ್ತುನಿಷ್ಠ ಪತ್ರಿಕೋದ್ಯಮವಾಗಿದ್ದರೆ ನಾನು ವ್ಯಕ್ತಿನಿಷ್ಠ ಪತ್ರಕರ್ತ ಎಂದು ಕರೆಸಿಕೊಳ್ಳಲು ಬಯಸುತ್ತೇನೆ.
ಹಿಂದುತ್ವ ಗುಂಪುಗಳ ಚಟುವಟಿಕೆಗಳ ಕುರಿತು ನಿಮ್ಮ ನಿರಂತರ ವರದಿಗಾರಿಕೆಯಿಂದಾಗಿ ನಿಮಗೆ ಯಾವುದೇ ಬೆದರಿಕೆಗಳು ಬಂದಿದ್ದವೇ?
-ದೂರವಾಣಿಯಲ್ಲಿ ನನಗೆ ಎಷ್ಟು ಸಲ ಬೆದರಿಕೆಗಳನ್ನೊಡ್ಡಲಾಗಿತ್ತು ಎಂಬ ಲೆಕ್ಕವೇ ನನಗೆ ಮರೆತುಹೋಗಿದೆ. ಯಾರ್ಯಾರೋ ಕರೆ ಮಾಡಿ ನಾನು ಮುಸಲ್ಮಾನನಿಗೆ ಹುಟ್ಟಬೇಕಿತ್ತು ಎಂದು ಬೊಬ್ಬಿಡುತ್ತಾರೆ. ಶ್ರೀರಾಮ ಸೇನೆಯ ಸದಸ್ಯನೋರ್ವ ಪತ್ರಿಕಾಗೋಷ್ಠಿಯಲ್ಲಿ ನನಗೆ ಬಹಿರಂಗವಾಗಿಯೇ ಬೆದರಿಕೆಯನ್ನೊಡ್ಡಿದ್ದ. 2012ರಲ್ಲಿ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿಡಲಾಗಿತ್ತು. ಯಾವುದೇ ಸಂದರ್ಭದಲ್ಲಿಯೂ ನನಗೆ ದೈಹಿಕವಾಗಿ ಹಾನಿಯನ್ನು ಮಾಡಿಲ್ಲ. ನಾನು ಕರಾವಳಿ ಕರ್ನಾಟಕದ ಪ್ರಬಲ ಮೇಲ್ಜಾತಿಯಾಗಿರುವ ಬಂಟ ಸಮುದಾಯಕ್ಕೆ ಸೇರಿದ್ದೇನೆ ಮತ್ತು ನನ್ನ ಜಾತಿಯ ವಿಶೇಷತೆಯ ಬಗ್ಗೆ ನನಗೂ ಗೊತ್ತಿದೆ. ಬಹುಶಃ ಬಿಲ್ಲವ ಆಥವಾ ಕೆಳಜಾತಿಗೆ ಸೇರಿದ ಯಾರಾದರೂ ನನ್ನಂತೆ ವರದಿಗಾರಿಕೆ ಮಾಡುತ್ತಿದ್ದರೆ ತಪ್ಪಿಸಿಕೊಳ್ಳುವುದು ಸಾಧ್ಯವಿರುತ್ತಿರಲಿಲ್ಲ.
►ಹಿಂದುತ್ವದಲ್ಲಿ ಜಾತಿ
ನಿಮ್ಮ ಚರ್ಚೆಯಲ್ಲಿ ಜಾತಿಯನ್ನು ತಂದಿರುವದು ಆಸಕ್ತಿದಾಯಕವಾಗಿದೆ. ಹಿಂದುತ್ವ ಗುಂಪುಗಳಲ್ಲಿ ಜಾತಿ ಹೇಗೆ ಕೆಲಸ ಮಾಡುತ್ತದೆ?
-ಹಿಂದುತ್ವ ಗುಂಪುಗಳು ಎಲ್ಲ ಹಿಂದುಗಳಿಗೆ ಸಮಾನತೆಯಲ್ಲಿ ನಂಬಿಕೆಯನ್ನಿಟ್ಟಿವೆ ಎಂಬ ಪರಿಕಲ್ಪನೆಯು ಕಣ್ಣೊರೆಸುವ ತಂತ್ರವಾಗಿದೆ. ಅವು ಕಾರ್ಯಾಚರಿಸುವ ರೀತಿಯಲ್ಲಿ ಸ್ಪಷ್ಟವಾದ ಜಾತಿ ಶ್ರೇಣಿಯಿದೆ. ತಂತ್ರಗಾರರು ಮತ್ತು ನಾಯಕರು ಸಾಮಾನ್ಯವಾಗಿ ಬ್ರಾಹ್ಮಣರು ಮತ್ತು ಬಂಟರಾಗಿದ್ದರೆ ಮೊಗವೀರರು,ಇತರ ಹಿಂದುಳಿದ ಜಾತಿಗಳು ಮತ್ತು ದಲಿತರು ಕಾಲಾಳುಗಳಾಗಿದ್ದಾರೆ. ಅವರಿಗೆ ಹೊರಿಸಲಾಗಿರುವ ಜವಾಬ್ದಾರಿಗಳಲ್ಲಿ ಇದು ಸ್ಪಷ್ಟವಾಗಿದೆ. ಕರಾವಳಿ ಕರ್ನಾಟಕದಲ್ಲಿ ಯಾವುದೇ ಕೋಮು ಘಟನೆಯಲ್ಲಿ ಭಾಗಿಯಾಗಿದ್ದಕ್ಕೆ ಈವರೆಗೆ ಒಬ್ಬನೇ ಒಬ್ಬ ಬ್ರಾಹ್ಮಣ ವ್ಯಕ್ತಿಯ ಬಂಧನವಾಗಿಲ್ಲ.
ನಿಮಗೊಂದು ಉದಾಹರಣೆ ನೀಡುತ್ತೇನೆ. 2008ರ ಚರ್ಚ್ದಾಳಿಗಳ ಬಳಿಕ ವಿಹಿಂಪನ ಓರ್ವ ಬ್ರಾಹ್ಮಣ ನಾಯಕ ಹಾಗೂ ಹಿಂದುಳಿದ ಜಾತಿಗೆ ಸೇರಿದ ಬಜರಂಗ ದಳದ ಓರ್ವ ನಾಯಕ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿ ಚರ್ಚ್ ಮೇಲಿನ ದಾಳಿಗಳ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದರು. ಇಬ್ಬರೂ ಒಂದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು,ಆದರೆ ಹಿಂದುಳಿದ ಜಾತಿಯ ನಾಯಕನನ್ನು ಮಾತ್ರ ಬಂಧಿಸಲಾಗಿತ್ತು. ಬ್ರಾಹ್ಮಣ ನಾಯಕನನ್ನು ಮುಟ್ಟುವ ಗೋಜಿಗೇ ಪೊಲೀಸರು ಹೋಗಿರಲಿಲ್ಲ. ಹಿಂದುತ್ವದ ನೆಪದಲ್ಲಿ ತಾವು ಮೇಲ್ಜಾತಿಗಳಿಂದ ಶೋಷಣೆಗೆ ಒಳಗಾಗುತ್ತಿದ್ದೇವೆ ಎನ್ನುವುದನ್ನು ಕೆಳ ಜಾತಿಗಳು ಎಷ್ಟು ಬೇಗ ಅರಿತುಕೊಳ್ಳುತ್ತವೆಯೋ ಅಷ್ಟು ಅವುಗಳಿಗೆ ಒಳ್ಳೆಯದು. ಆದರೆ ಬಿಲ್ಲವ ಮತ್ತು ಮೊಗವೀರರಂತಹ ಕೆಲಜಾತಿಗಳು ಸಾಮಾಜಿಕ ಆಕಾಂಕ್ಷೆಗಳನ್ನು ಹೊಂದಿವೆ,ಅಂದರೆ ಈ ಎಲ್ಲ ವರ್ಷಗಳಲ್ಲಿ ಮಾನಸಿಕವಾಗಿ ಜಾತಿ ಕೀಳರಿಮೆಯನ್ನು ಅನುಭವಿಸಿರುವ ಅವರಿಗೆ ಈ ಸೀಮಿತ ಮನ್ನಣೆಯೂ ಸಾಕು.
ಜೈಲಿನಲ್ಲಿ ನಿಮ್ಮ ಅನುಭವ ಹೇಗಿತ್ತು? ಸುಳ್ಳು ಆರೋಪಗಳನ್ನು ಹೊತ್ತುಕೊಂಡು ಅಷ್ಟೆಲ್ಲ ತಿಂಗಳುಗಳನ್ನು ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಕಳೆದಿದ್ದ ಬಗ್ಗೆ ನೀವು ಕಹಿ ಭಾವನೆ ಹೊಂದಿದ್ದೀರಾ?
-ಜೈಲು ಒಂದು ಸಂಕುಚಿತ ಸಾಮಾಜಿಕ ಪಾಠವಾಗಿದೆ,ಹೀಗಾಗಿ ಪ್ರತಿಯೋರ್ವ ಪತ್ರಕರ್ತನೂ ಜೈಲಿನಲ್ಲಿ ಕೆಲ ಸಮಯ (ವಿಚಾರಣಾಧೀನ ಕೈದಿಯಾಗಿ ಅಥವಾ ಅಪರಾಧಿಯಾಗಿ ಅಲ್ಲ) ಕಳೆಯಬೇಕು ಎಂದು ನಾನು ಭಾವಿಸಿದ್ದೇನೆ. ಜೈಲಿನಲ್ಲಿ ನನ್ನ ಅವಧಿಯು ಶೈಕ್ಷಣಿಕವಾಗಿತ್ತು. ಧರ್ಮ ಮತ್ತು ಜಾತಿ ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ಇಲ್ಲಿ ನೀವು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಮಂಗಳೂರು ಜೈಲಿನಲ್ಲಿ ಹಿಂದು ವಾರ್ಡ್ ಮತ್ತು ಮುಸ್ಲಿಮ್ ವಾರ್ಡ್ ಎಂದು ಎರಡು ವಿಭಾಗಗಳಿವೆ ಮತ್ತು ಎಲ್ಲ ವಿಚಾರಣಾಧೀನ ಕೈದಿಗಳನ್ನು ಅವರ ಧರ್ಮಕ್ಕನುಗುಣವಾಗಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ.
ನನ್ನ ವರದಿಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದ ಹೆಚ್ಚಿನ ಜನರು ಹಿಂದುತ್ವ ಗುಂಪುಗಳಿಗೆ ಸೇರಿದ್ದವರಾಗಿದ್ದರಿಂದ ನನ್ನನ್ನು ಮುಸ್ಲಿಮ್ ವಿಭಾಗದಲ್ಲಿ ಇರಿಸಲಾಗಿತ್ತು. ಈ ಹಿಂದುತ್ವ ಗುಂಪುಗಳಿಗೆ ಸೇರಿದವರು ಜೈಲಿನ ಹಿಂದು ವಿಭಾಗದಲ್ಲಿದ್ದರು. ನಕ್ಸಲರೆಂಬ ಆರೋಪವನ್ನು ಹೊತ್ತಿದ್ದ ನಾಲ್ವರು ಮತ್ತು ಮುಸ್ಲಿಮ್ ಭೂಗತ ಪಾತಕಿಯೊಬ್ಬನ ಓರ್ವ ಶಾರ್ಪ್ ಶೂಟರ್ ಮಾತ್ರ ಮುಸ್ಲಿ ವಿಭಾಗದಲ್ಲಿದ್ದ ಇತರ ಹಿಂದುಗಳಾಗಿದ್ದರು. ನಾನು ಜೈಲಿನಲ್ಲಿದ್ದಾಗ ಸರಣಿ ಹಂತಕ ಸೈನೈಡ್ ಮೋಹನ ನನ್ನ ಪ್ಲೇಟ್ಗಳನ್ನು ಮತ್ತು ಬಟ್ಟೆಗಳನ್ನು ತೊಳೆಯುತ್ತಿದ್ದ.
ಕೃಪೆ: Frontline.thehindu.com
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.