-

ಶಿವಸೇನೆಯ ಇತಿಹಾಸ

-

ಭಾಗ - 2

ಶಿವಸೇನೆ ಸ್ಥಾಪನೆಯಾಗಿರುವುದೇ ಅಡಾಲ್ಫ್ ಹಿಟ್ಲರನ ನಾಜಿ ಪಕ್ಷದ ಮಾದರಿಯಲ್ಲಿ. ಆರೆಸ್ಸೆಸ್‌ನ ಸಂಘಟನಾತ್ಮಕ ಸಂರಚನೆಯ ಮಾದರಿಯೂ ಇದೇ ಆಗಿದೆ. ಆದರೆ, ಆರೆಸ್ಸೆಸ್ ರಾಜಕೀಯ ಪಕ್ಷವಾಗಿರದೆ, ಸಂಘಟನೆಯಾಗಿಯೇ ಉಳಿದುಕೊಂಡು ಬಿಜೆಪಿಯನ್ನು ನಿಯಂತ್ರಿಸುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಶಿವಸೇನೆಯು ಪಕ್ಷದೊಳಗೆಯೇ ಒಬ್ಬ ವ್ಯಕ್ತಿ ಮತ್ತು ಒಂದು ಕುಟುಂಬದ ನಿಯಂತ್ರಣದಲ್ಲಿದ್ದು, ಸಕ್ರಿಯ ರಾಜಕಾರಣ ಮತ್ತು ಪಕ್ಷ ಸಂಘಟನೆ ಹೊರಗಿನವರಿಗೆ ಗೊತ್ತೇ ಆಗದಂತೆ ಬೇರೆಬೇರೆ ವಿಭಾಗಗಳಿವೆ.

ಶಿವಸೇನೆ ಕೋಮುವಿಭಜನೆ ಮಾಡಿ ರಾಜಕೀಯ ಲಾಭ ಪಡೆಯುವುದಕ್ಕಾಗಿ ಅನೇಕ ಹೊಸ ತಂತ್ರಗಳನ್ನು ಬಳಸುತ್ತಲೇ ಬಂದಿದೆ. ಕೋಮುಗಲಭೆ ಎಬ್ಬಿಸುವುದರಲ್ಲಿ ಶಿವಸೇನೆಯದ್ದು ಎತ್ತಿದ ಕೈ. 1970ರ ಮೇ ತಿಂಗಳಲ್ಲಿ ಭಿವಂಡಿ, ಮಹಾಡ್ ಮತ್ತು ಜಲ್‌ಗಾಂವ್‌ನಲ್ಲಿ ನಡೆದ ಭೀಕರ ಕೋಮುಗಲಭೆಯನ್ನು ಪ್ರಚೋದಿಸಿದ್ದು ತನಿಖಾ ಆಯೋಗದ ವರದಿಯಲ್ಲಿ ಸಾಬೀತಾಗಿತ್ತು. 1984ರಲ್ಲಿ ನಡೆದ ಭಿವಂಡಿ ಮತ್ತು ಮುಂಬೈ ಗಲಭೆಗಳಲ್ಲೂ ಶಿವಸೇನೆಯ ಪಾತ್ರವಿತ್ತು. 1992-93ರಲ್ಲಿ ನಡೆದ ಭೀಕರ ಕೋಮು ಗಲಭೆಯನ್ನು ಪ್ರಚೋದಿಸಿದ್ದು ಶಿವಸೇನೆಯೇ. 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಉರುಳಿಸಿದಂದು ಮಧ್ಯಾಹ್ನವೇ ಮುಂಬೈಯಲ್ಲಿರುವ ಅತ್ಯಂತ ದೊಡ್ಡ ಸ್ಲಮ್ ಧಾರಾವಿಯಲ್ಲಿ ದೇಶದಲ್ಲೇ ಮೊದಲ ‘‘ವಿಜಯೀ ಮೆರವಣಿಗೆ’’ ನಡೆದಿತ್ತು. ಪೈದೋಣಿ ಮುಂತಾದ ಹಲವು ಕಡೆ ಶಿವಸೈನಿಕರು ದೇವಾಲಯಗಳ ಗಂಟೆಗಳನ್ನು ನಿರಂತರವಾಗಿ ಬಾರಿಸಿದ್ದರು. ನಂತರ ನಡೆದ ಪೊಲೀಸ್ ಗೋಲಿಬಾರ್‌ಗಳಲ್ಲಿ ಸತ್ತವರು 80 ಶೇಕಡಾ ಮುಸ್ಲಿಮರು. ಮುಂಬೈ ಪೊಲೀಸ್ ಪಡೆಯಲ್ಲಿ ಶಿವಸೇನೆಯ ಪ್ರಭಾವವೂ ಸಾಕಷ್ಟಿದೆ. ಈ ತನಕ ಮಹಾರಾಷ್ಟ್ರದಲ್ಲಿ ನಡೆದ ಬಹುತೇಕ ಎಲ್ಲಾ ಕೋಮುಗಲಭೆಗಳಲ್ಲಿ ಶಿವಸೇನೆಯ ಪಾತ್ರವಿದೆ.

ಶಿವಸೇನೆ ಸ್ಥಾಪನೆಯಾಗಿರುವುದೇ ಅಡಾಲ್ಫ್ ಹಿಟ್ಲರನ ನಾಜಿ ಪಕ್ಷದ ಮಾದರಿಯಲ್ಲಿ. ಆರೆಸ್ಸೆಸ್‌ನ ಸಂಘಟನಾತ್ಮಕ ಸಂರಚನೆಯ ಮಾದರಿಯೂ ಇದೇ ಆಗಿದೆ. ಆದರೆ, ಆರೆಸ್ಸೆಸ್ ರಾಜಕೀಯ ಪಕ್ಷವಾಗಿರದೆ, ಸಂಘಟನೆಯಾಗಿಯೇ ಉಳಿದುಕೊಂಡು ಬಿಜೆಪಿಯನ್ನು ನಿಯಂತ್ರಿಸುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಶಿವಸೇನೆಯು ಪಕ್ಷದೊಳಗೆಯೇ ಒಬ್ಬ ವ್ಯಕ್ತಿ ಮತ್ತು ಒಂದು ಕುಟುಂಬದ ನಿಯಂತ್ರಣದಲ್ಲಿದ್ದು, ಸಕ್ರಿಯ ರಾಜಕಾರಣ ಮತ್ತು ಪಕ್ಷ ಸಂಘಟನೆ ಹೊರಗಿನವರಿಗೆ ಗೊತ್ತೇ ಆಗದಂತೆ ಬೇರೆಬೇರೆ ವಿಭಾಗಗಳಿವೆ. ಹೋರಾಡಲು, ಗಲಾಟೆ ಮಾಡಲು ಬೇರೆಯೇ ಜನರಿದ್ದು, ಇವರನ್ನು ಸೈನಿಕರು ಎಂದು ಕರೆಯಲಾಗುತ್ತದೆ. ಇವೆಲ್ಲವೂ ಸಾಮಾನ್ಯವಾಗಿ ಅಮೆರಿಕದ ಇಟಾಲಿಯನ್ ಮಾಫಿಯಾದ ಅನೌಪಚಾರಿಕ ಫ್ಯಾಮಿಲಿ ಸಂಘಟನೆಯಂತೆಯೇ ಇದೆ. ಆದರೆ, ಎಲ್ಲವೂ ಇಲ್ಲಿ ಗುಪ್ತ, ಗುಪ್ತ.

ಬಾಂದ್ರಾದ ಆರ್ಟಿಸ್ಟ್ಸ್ ಕಾಲನಿ ಅಥವಾ ಕಲಾನಗರದಲ್ಲಿರುವ, ಎತ್ತರದ ಕಾಂಪೌಂಡ್ ಗೋಡೆಯಿಂದ ಆವೃತ್ತವಾದ ಠಾಕ್ರೆ ಕುಟುಂಬದ ‘ಮಾತೋಶ್ರೀ’ ಎಂಬ ಮನೆಯಿಂದ ಹೊರಡುವ ಒಂದು ಆಜ್ಞೆಯು ಮಹಾರಾಷ್ಟ್ರದ ಯಾವುದೋ ಒಂದು ಹಳ್ಳಿಯಲ್ಲಿ ಕಾರ್ಯರೂಪಕ್ಕೆ ಬರಬಹುದು. ಪಕ್ಷದ ರಾಜಕೀಯ ಕೇಂದ್ರವಿರುವುದು ದಾದರ್‌ನ ಹೃದಯ ಭಾಗದಲ್ಲಿರುವ ‘ಸೇನಾಭವನ’ ಎಂಬ ಕೋಟೆಯಂತಹ ವಾಣಿಜ್ಯ ಸಂಕೀರ್ಣದಲ್ಲಿ. ಇದನ್ನು ನಿಜವಾದ ಕೋಟೆಯಂತೆ ಕಟ್ಟಲಾಗಿತ್ತು. ತ್ರಿಕೋನಾಕಾರದಲ್ಲಿ ಇರುವ ಇದರ ಅಕ್ಕಪಕ್ಕದ ಎರಡು ರಸ್ತೆಗಳಲ್ಲಿ ಬಾಡಿಗೆ ತರುವ ಅಂಗಡಿಗಳಿದ್ದರೆ, ಮೇಲಿನ ಅಂತಸ್ತುಗಳಲ್ಲಿ ಕಚೇರಿ. ಅಗಲ ಕಿರಿದಾದ ಈ ಕಚೇರಿಯ ಬಾಗಿಲು ದಾಟಿ ಅನುಮತಿ ಇಲ್ಲದೆ ಮೇಲೆ ಹೋಗುವುದು ಅಪರಿಚಿತರಿಗೆ ಬಿಡಿ, ಪೊಲೀಸರಿಗೂ ಅಸಾಧ್ಯ. ಈಗ ಇದನ್ನು ಗ್ಲಾಸ್ ಇತ್ಯಾದಿ ಅಳವಡಿಸಿ ಆಧುನೀಕರಣ ಮಾಡಲಾಗಿದೆ. ಕಾಂಗ್ರೆಸ್ ಆಡಳಿತವಿದ್ದ 1970ರ ದಶಕದಲ್ಲಿ ಇಂದು ನೂರಾರು ಕೋಟಿ ಬೆಲೆಬಾಳುವ ಈ ಪ್ರಮುಖ ಜಾಗ ಶಿವಸೇನೆಗೆ ಸಿಕ್ಕಿದ್ದು ಹೇಗೆಂಬುದೇ ನಿಗೂಢ.

ಪಕ್ಷದ ಅತ್ಯುನ್ನತ ಸ್ಥಾನದಲ್ಲಿ ಇರುವುದು ಸೇನಾ ಪ್ರಮುಖ್. ಇದಕ್ಕೆ ಚುನಾವಣೆ ಗಿನಾವಣೆ ಏನೂ ಇಲ್ಲ. ಇದು ವಂಶಪಾರಂಪರ್ಯ ಕೂಡಾ ಹೌದು. ಠಾಕ್ರೆ ತನಗೆ ತಾನೇ ಇಟ್ಟುಕೊಂಡಿದ್ದ ‘ಹಿಂದೂ ಹೃದಯ ಸಾಮ್ರಾಟ್’ ಎಂಬ ಬಿರುದೇ ಸರ್ವಾಧಿಕಾರಿ ಮನೋವೃತ್ತಿಯನ್ನು ತೋರಿಸುತ್ತದೆ. ಜೀವಂತ ಇರುವವರೆಗೆ ಬಾಳಾ ಠಾಕ್ರೆ, ಅವರ ಮರಣಾನಂತರ ಅಣ್ಣನ ಮಗ ರಾಜ್ ಠಾಕ್ರೆ ಬದಲು ಸ್ವಂತ ಮಗ ಉದ್ಧವ್ ಠಾಕ್ರೆ, ಈಗ ಅವರ ಮಗ ಆದಿತ್ಯ ಠಾಕ್ರೆ ‘ಸೇನಾ ಪ್ರಮುಖ್’ ಆಗಿದ್ದಾರೆ. ಇದರ ಅರ್ಥವೆಂದರೆ, ಆರೆಸ್ಸೆಸ್‌ನ ಸರಸಂಘಚಾಲಕ ಪದದಂತೆ ಅಥವಾ ಹಿಟ್ಲರ್‌ನ ‘ಫ್ಯುರರ್’ ಅಥವಾ ಅತ್ಯುನ್ನತ ಸುಪ್ರೀಂ ನಾಯಕ. ಬಾಳಾ ಠಾಕ್ರೆಯನ್ನು ಇಂಗ್ಲಿಷ್ ಮಾಧ್ಯಮಗಳು ಕರೆಯುತ್ತಿದ್ದುದೇ ಶಿವಸೇನಾ ಸುಪ್ರಿಮೋ ಎಂದೇ. ಆರೆಸ್ಸೆಸ್‌ನಂತೆ ಶಿವಸೇನೆಯಲ್ಲೂ ಹೋರಾಡುವವರು, ಸಾಯುವವರು, ಜೈಲಿಗೆ ಹೋಗುವವರು ಕೆಳಜಾತಿಗಳವರಾದರೂ, ನಾಯಕತ್ವ ಇರುವುದು ಬ್ರಾಹ್ಮಣರು ಮತ್ತು ಆಳುವ ವರ್ಗದ ಪಟ್ಟಾರೆ ಪ್ರಭುಗಳ ಕೈಯಲ್ಲಿ. ಮುಖ್ಯವಾಗಿ ಠಾಕ್ರೆ ಕುಟುಂಬ, ಶಿವಸೇನೆಯ ಮೊದಲ ಮುಖ್ಯಮಂತ್ರಿ ಮನೋಹರ ಜೋಶಿ, ಸುಧೀರ್ ಜೋಶಿ, ಬಲ್ವಂತ್ ಮಂತ್ರಿ, ಡಾಕ್ಟರ್ ಹೇಮಚಂದ್ರ ಗುಪ್ತೆ ಹೀಗೆ ಹಲವರನ್ನು ಗುರುತಿಸಬಹುದು. ಇವರಲ್ಲಿ ಗುಪ್ತೆ ಅವರು ಶಿವಸೇನೆಯ ಹಣದಾಹ ಮತ್ತು ಆತಿಯಾದ ಹಿಂಸಾಚಾರದ ಕಾರಣ ನೀಡಿ ನಂತರ ರಾಜೀನಾಮೆ ಕೊಟ್ಟರು.

ಅದೇ ರೀತಿಯಲ್ಲಿ ಶಿವಸೇನೆಯು ಹಿಂದುಳಿದ ಜಾತಿಗಳ ಕೆಲವು ನಾಯಕರನ್ನು ಕೂಡಾ ಬೆಳೆಸಿತು. ನಾರಾಯಣ ರಾಣೆ, ಲೀಲಾಧರ್ ಡಾಕೆ, ಭಾಯ್ ಶಿಂಗ್ರೆ, ವಿಜಯ ಗಾಂವ್ಕರ್, ವಾಮನರಾವ್ ಮಹಾಧಿಕ್, ಮಾಲಿ ಸಮುದಾಯದ ಛಗನ್ ಭುಜಬಲ್ ಮುಂತಾದವರನ್ನು ಹೆಸರಿಸಬಹುದು. ಆದರೆ ಅವರನ್ನು ಹೆಚ್ಚು ಬೆಳೆಯಲು ಬಿಡಲಿಲ್ಲ. ಭುಜಬಲ್ ಅವರು ಮೇಲ್ಜಾತಿ ಆಧಿಪತ್ಯವನ್ನು ಬಹಿರಂಗವಾಗಿ ವಿರೋಧಿಸಿ ಕಾಂಗ್ರೆಸ್ ಸೇರಿದರು.

ಆದರೂ, ಬಿಜೆಪಿಗಿಂತ ಮೊದಲೇ ಶಿವಸೇನೆಯು ದೊಡ್ಡ ಪ್ರಮಾಣದಲ್ಲಿ ಒಬಿಸಿ ಮತ್ತು ದಲಿತರನ್ನು ಇತರ ವಿಷಯಗಳನ್ನು ತೋರಿಸಿ ವಂಚಿಸುವುದರಲ್ಲಿ ಯಶಸ್ವಿಯಾಗಿದೆ. ಅದು ಎಲ್ಲವನ್ನೂ ಹಿಂದುತ್ವ, ಮರಾಠಿ ಭಾಷೆ ಮತ್ತು ಮರಾಠಾ ಸ್ವಾಭಿಮಾನದ ಛತ್ರದ ಅಡಿಯಲ್ಲಿ, ಛತ್ರಪತಿ ಶಿವಾಜಿಯ ಹೆಸರಿನ ಆಶ್ರಯದಲ್ಲಿ ಮರೆಸಿದೆ. ಈ ಬ್ರಾಹ್ಮಣ್ಯದ ಚಾತುರ್ಯವನ್ನೇ ಬಿಜೆಪಿಯು ಈಗ ದೊಡ್ಡ ಪ್ರಮಾಣದಲ್ಲಿ ದೇಶಾದ್ಯಂತ ಬಳಸುತ್ತಿದೆ. ಒಬಿಸಿಗಳಿಗೆ ಮೀಸಲಾತಿ ನೀಡಿದ್ದ ಮಂಡಲ್ ಆಯೋಗದ ವರದಿಯನ್ನು ಶಿವಸೇನೆ ವಿರೋಧಿಸಿತ್ತು. ಆದರೂ, ಒಬಿಸಿಗಳು ದೊಡ್ಡ ಪ್ರಮಾಣದಲ್ಲಿ ಶಿವಸೇನೆಯ ಹಿಂದಿದ್ದಾರೆ.

1970ರ ದಶಕದಲ್ಲಿ ಮರಾಠವಾಡ ವಿಶ್ವವಿದ್ಯಾನಿಲಯದ ಹೆಸರನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾನಿಲಯ ಎಂದು ಬದಲಿಸಲು ನಡೆದ ‘ನಾಮಾಂತರ’ ಆಂದೋಲನವನ್ನು ಶಿವಸೇನೆ ವಿರೋಧಿಸಿತ್ತು. ಆದರೂ ಸಾಕಷ್ಟು ಸಂಖ್ಯೆಯಲ್ಲಿ ದಲಿತರು ಶಿವಸೇನೆಯ ಹಿಂದಿದ್ದಾರೆ. ಶಿವಸೇನೆಯು ಮುಖ್ಯವಾಗಿ ಈಗ ಒಂದು ಬ್ರಾಹ್ಮಣ ನೇತೃತ್ವದ ಜಾತಿ ಮರಾಠಾ ಪಕ್ಷವಾಗಿದೆ. ಕುಣುಬಿ ಜಾತಿಯವರು ಹೆಚ್ಚಾಗಿ ಶಿವಸೇನೆಯ ಬೆಂಬಲಿಗರು.

ಮಹಾರಾಷ್ಟ್ರದ ಹಳ್ಳಿ ಹಳ್ಳಿಗಳಲ್ಲಿ ಶಿವಸೇನೆಯ ಶಾಖೆಗಳಿವೆ. ಇವುಗಳಿಗೆ ಒಬ್ಬ ಶಾಖಾ ಪ್ರಮುಖ್ ಇದ್ದು, ಮುಂಬೈಯಂತಹ ನಗರಗಳ ಬೀದಿ ಬೀದಿಗಳಲ್ಲಿ ಶಾಖೆಗಳಿವೆ. ಸ್ಥಳೀಯ ಗೂಂಡಾಗಳು ಇವುಗಳ ಸದಸ್ಯರಾಗಿರುತ್ತಾರೆ. ಇವರು ಸ್ಥಳೀಯರನ್ನು ಭಯದ ಮೂಲಕ ನಿಯಂತ್ರಣದಲ್ಲಿ ಇಡುತ್ತಾರೆ. ಸ್ಥಳೀಯ ವ್ಯಾಪಾರಿಗಳು, ಉದ್ಯಮಿಗಳಿಂದ ವಸೂಲಿ ಮಾಡುವ ಕೆಲಸವೂ ಇವರದ್ದೇ. ಗಣೇಶೋತ್ಸವ ಸಂದರ್ಭದಲ್ಲಂತೂ ಪ್ರತಿಯೊಂದು ಶಾಖೆಯೂ ಪೆಂಡಾಲ್ ಹಾಕಿ ಗಣೇಶನ ಮೂರ್ತಿ ಇಟ್ಟು ಚಂದಾ ವಸೂಲಿ ಮಾಡುತ್ತದೆ. ಜನರು ಭಯದಿಂದಲೇ ಮರುಮಾತಾಡದೇ ಚಂದಾ ನೀಡುತ್ತಾರೆ.

ದಾವೂದ್ ಇಬ್ರಾಹೀಂ ಸೇರಿದಂತೆ ‘ಮುಸ್ಲಿಮ್’ ಭೂಗತ ದೊರೆಗಳಿಗೆ ವಿರುದ್ಧವಾಗಿ, ರಮಾನಾಯ್ಕಿ, ಅರುಣ್ ಗಾವ್ಳಿಯಂತಹ ‘ಹಿಂದೂ’ ಗ್ಯಾಂಗ್‌ಸ್ಟರ್‌ಗಳನ್ನು ಶಿವಸೇನೆ ಬೆಳೆಸಿತ್ತು. ಶಿವಸೇನೆ ಬಾಲಿವುಡ್ ಮೇಲೆಯೂ ನಿಯಂತ್ರಣ ಹೊಂದಿತ್ತು. ಶಿವಸೇನೆಯನ್ನು ವಿರೋಧಿಸಿ ಚಿತ್ರ ನಿರ್ಮಾಣ ಮಾಡುವುದು, ಬಿಡುಗಡೆ ಮಾಡುವುದು ಅಸಾಧ್ಯವೇ ಆಗಿತ್ತು. ಶಿವಸೇನೆಯ ಇಂತಹ ಮಾಫಿಯಾ ಮುಖದ ಬಗ್ಗೆ ಹೇಳಲು ಹೊರಟರೆ ಅದೊಂದು ಪ್ರತ್ಯೇಕ ಕಥಾನಕವಾದೀತು.

ಪಾಕಿಸ್ತಾನವನ್ನು ವಿರೋಧಿಸಿ, ರಾಜಕೀಯ ಲಾಭಪಡೆಯಲು ನಿರಂತರ ಹವಣಿಸಿದ ಪಕ್ಷ ಶಿವಸೇನೆ. ಜನಪ್ರಿಯವಾಗಿರುವ ಕ್ರಿಕೆಟಿನೊಂದಿಗೆ ರಾಜಕೀಯ ಬೆರೆಸಿದರೆ ಲಾಭವಿದೆಯೆಂದು ಕಂಡುಕೊಂಡ ಶಿವಸೇನೆ, ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡುವುದನ್ನು ವಿರೋಧಿಸುತ್ತಾ ಬಂದಿದೆ. 1991ರ ಅಕ್ಟೋಬರ್‌ನಲ್ಲಿ ಅದು ಮುಂಬೈಯ ವಾಂಖೆಡೆ ಸ್ಟೇಡಿಯಂನ ಪಿಚ್ಚನ್ನು ರಾತ್ರೋರಾತ್ರಿ ಅಗೆದಿತ್ತು. ಪರಿಣಾಮವಾಗಿ ಆ ಟೆಸ್ಟ್ ಮಾತ್ರವಲ್ಲ, ಇಡೀ ಸರಣಿಯೇ ರದ್ದಾಗಿತ್ತು. 1998-99ರಲ್ಲಿ ಮುಂಬೈಯಲ್ಲಿ ನಡೆಯಬೇಕಿದ್ಧ ಪಾಕ್ ವಿರುದ್ಧದ ಟೆಸ್ಟ್ ಪಂದ್ಯ ಅಲ್ಲಿ ನಡೆಯದಂತೆ ಬಾಳಾ ಠಾಕ್ರೆ ಸೂಚನೆಯಂತೆ ಆಗಿನ ಮುಖ್ಯಮಂತ್ರಿ ಮನೋಹರ ಜೋಶಿ ತಡೆದಿದ್ದರು. ಬಿಜೆಪಿ ಇದನ್ನು ವಿರೋಧಿಸಿದರೂ, ಏನೂ ಮಾಡಲು ಸಾಧ್ಯವಾಗಿರಲಿಲ್ಲ. 1999ರಲ್ಲಿ ಶಿವಸೈನಿಕರು ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನ ಪಿಚ್ ಅಗೆದಿದ್ದರು. ಆದರೆ, ಟೆಸ್ಟ್ ನಡೆಯುವುದು ಖಾತರಿಯಾದಾಗ ಈ ವಿಷಕಾರಿ ಪಕ್ಷವು ಸ್ಟೇಡಿಯಂನಲ್ಲಿ ಪಂದ್ಯ ನಡೆಯುವಾಗ ವಿಷ ಸರ್ಪಗಳನ್ನು ಬಿಡುವುದಾಗಿ ಬೆದರಿಸಿತ್ತು. ಮಣಿಯದ ಬಿಸಿಸಿಐ, ದೇಶದಾದ್ಯಂತದಿಂದ 20 ಮಂದಿ ಸರ್ಪತಜ್ಞರನ್ನು ಕರೆಸಿ ಸ್ಟೇಡಿಯಂನಲ್ಲಿ ಇರಿಸಿತ್ತು. ಅನಿಲ್ ಕುಂಬ್ಳೆಯವರು ಒಂದೇ ಇನಿಂಗ್ಸ್‌ನಲ್ಲಿ ಎಲ್ಲಾ ಹತ್ತು ವಿಕೆಟ್ ಉರುಳಿಸಿ ವಿಶ್ವ ದಾಖಲೆ ಸರಿಗಟ್ಟಿದ್ದು ಇದೇ ಪಂದ್ಯದಲ್ಲಿ. ಅದೇ ವರ್ಷ ಪಾಕಿಸ್ತಾನದ ಜೊತೆ ಆಡುವುದನ್ನು ಪ್ರತಿಭಟಿಸಿ ಮುಂಬೈಯ ಬಿಸಿಸಿಐ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ಧ ಶಿವಸೈನಿಕರು 1983ರಲ್ಲಿ ಭಾರತ ಗೆದ್ದಿದ್ದ ವಿಶ್ವಕಪ್‌ಗೆ ಹಾನಿ ಮಾಡಿದ್ದರು. 2003ರಲ್ಲಿ ಮತ್ತೊಮ್ಮೆ ಆಗ್ರಾದಲ್ಲಿ ಪಿಚ್ಚಿಗೆ ಹಾನಿಮಾಡಿತು. ಮತ್ತೆ ಮತ್ತೆ ಪಾಕಿಸ್ತಾನದ ಜೊತೆ ಆಡುವುದನ್ನು ವಿರೋಧಿಸಿ ಪಾಕ್ ವಿರೋಧಿ ಸಮೂಹಸನ್ನಿಯನ್ನು ಜೀವಂತ ಇರಿಸಿತು. ಅದಲ್ಲದೆ, ಪಾಕ್ ಮೂಲದ ಕಲಾವಿದರು ಬಾಲಿವುಡ್ ಚಿತ್ರಗಳಲ್ಲಿ ನಟಿಸದಂತೆ, ಪ್ರಖ್ಯಾತ ಗಝಲ್ ಗಾಯಕ ಗುಲಾಂ ಅಲಿ ಸೇರಿದಂತೆ ಅನೇಕ ಪಾಕಿಸ್ತಾನಿ ಮೂಲದ ಕಲಾವಿದರು ಮುಂಬೈಯಲ್ಲಿ ಕಾರ್ಯಕ್ರಮ ನೀಡದಂತೆ ಶಿವಸೇನೆ ತಡೆದಿದೆ. ಐಪಿಎಲ್‌ನಲ್ಲಿ ಪಾಕ್ ಮೂಲದ ಆಟಗಾರರಿಗೂ ಅವಕಾಶ ನೀಡಬೇಕೆಂದು ಹೇಳಿದ್ದಕ್ಕೆ ಶಿವಸೇನೆ ಶಾರುಕ್ ಖಾನ್ ಅವರನ್ನು ಗುರಿ ಮಾಡಿತ್ತು.

ಬಹುಶಃ ದೇಶದಲ್ಲೇ ಮೊದಲ ಬಾರಿ ಅನೈತಿಕ ಪೊಲೀಸ್‌ಗಿರಿ ನಡೆಸಿದ್ದು ಕೂಡಾ ಶಿವಸೇನೆಯೇ. ಮುಂಬೈಯಲ್ಲಿ ಬಹುತೇಕ ಎಲ್ಲಾ ರಾಜ್ಯಗಳ ಜನರು ವಾಸಿಸುತ್ತಿದ್ದು, ಇಲ್ಲಿ ಅಂತರ್‌ರಾಜ್ಯ, ಅಂತರ್ಜಾತಿ, ಅಂತರ್ಧರ್ಮೀಯ ಪ್ರೇಮವಿವಾಹಗಳು ಸಾಮಾನ್ಯ. ಬಾಲಿವುಡ್ ಕೂಡಾ ಇದಕ್ಕೆ ಹೊರತಲ್ಲ. ಆದರೂ, ಶಿವಸೇನೆ ಆಗೊಮ್ಮೆ ಈಗೊಮ್ಮೆ ಇಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಸುತ್ತಾ ಬರುತ್ತಿತ್ತು. 2006ರ ಫೆಬ್ರವರಿ 14ರಂದು ಶಿವಸೈನಿಕರು ಎಲ್ಲೆಡೆ ವೆಲೆಂಟೈನ್ಸ್ ಡೇ ಆಚರಣೆಗಳ ಮೇಲೆ ಹಿಂಸಾತ್ಮಕ ದಾಳಿ ನಡೆಸಿದರು. ನಗರ ಹೊರವಲಯದ ನಲ್ಲಸೋಪಾರದಲ್ಲಂತೂ ಖಾಸಗಿ ಕಾರ್ಯಕ್ರಮವೊಂದಕ್ಕೆ ನುಗ್ಗಿದ ಶಿವಸೈನಿಕರು ಮಹಿಳೆಯರ ಮೈಮೇಲೆ ಕೈಹಾಕಿ ಅವಮಾನಿಸಿದರು. ಇದಕ್ಕಾಗಿ ನಂತರ ಬಾಳಾ ಠಾಕ್ರೆ ಕ್ಷಮೆ ಕೇಳಿದರೂ, ಇಂತಹ ಕಾರ್ಯಕ್ರಮಗಳಿಗೆ ಶಿವಸೇನೆಯ ವಿರೋಧ ಮುಂದುವರಿದೇ ಇದೆ.

ಮಾತೆತ್ತಿದರೆ ಗೂಂಡಾಗಿರಿ ನಡೆಸುವುದು ಹಳೆಯ ಚಾಳಿ. ಠಾಕ್ರೆಯವರ ಹಿರಿಯ ಸಹೋದ್ಯೋಗಿಯಾಗಿದ್ದ ಪತ್ರಕರ್ತ ಎಸ್.ಬಿ. ಕೋಲ್ಪೆಯವರು 70ರ ದಶಕದಲ್ಲಿ ದಲಿತರು ಮತ್ತು ಕಮ್ಯುನಿಸ್ಟರು ಇದ್ದ ಸಭೆಯಲ್ಲಿ ಮಾತನಾಡುತ್ತಿದ್ದಾಗ ಶಿವಸೈನಿಕರು ವೇದಿಕೆಗೆ ನುಗ್ಗಿ ಹಲ್ಲೆ ನಡೆಸಿದ್ದರು. ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ, ನಂತರ ಅಧ್ಯಕ್ಷರೂ ಆಗಿದ್ದ ಕೋಲ್ಪೆಯವರ ಮೇಲಿನ ಹಲ್ಲೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾದಾಗ ಠಾಕ್ರೆ ಸ್ವತಃ ಕಚೇರಿಗೆ ಬಂದು ಕ್ಷಮಾಪಣೆ ಕೇಳಿದ್ದರು. ಆದರೆ, ಶಿವಸೈನಿಕರ ಹಲ್ಲೆಯ ಚಾಳಿ ಮಾತ್ರ ಮುಂದುವರಿದೇ ಇತ್ತು.

2009ರ ನವೆಂಬರ್ 20ರಂದು ಶಿವಸೈನಿಕರು ಮುಂಬೈ ಮತ್ತು ಪುಣೆಯಲ್ಲಿ ಐಬಿಎನ್7 ಮತ್ತು ಐಬಿಎನ್ ಲೋಕ್‌ಮತ್ ಟಿವಿ ಚಾನೆಲ್‌ಗಳ ಕಚೇರಿಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದರು. ಐಬಿಎನ್‌ನ ಹಿರಿಯ ಸಂಪಾದಕ ರವೀಂದ್ರ ಅಂಬೇಕರ್ ಅವರಿಗೆ ಕೆನ್ನೆಗೆ ಹೊಡೆದ ಅವರು, ನಂತರ ಲೋಕ್‌ಮತ್ ಸಂಪಾದಕ ನಿಖಿಲ್ ವಾಗ್ಳೆ ಅವರ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು. ಸಚಿನ್ ತೆಂಡುಲ್ಕರ್ ಕುರಿತು ಆಡಿದ ಮಾತಿಗಾಗಿ ಬಾಳಾ ಠಾಕ್ರೆಯನ್ನು ಟೀಕಿಸಿದ್ದೇ ಈ ಕೃತ್ಯಕ್ಕೆ ಕಾರಣವಾಗಿತ್ತು. ತೆಂಡುಲ್ಕರ್ ಎಷ್ಟೇ ಜನಪ್ರಿಯರಾಗಿದ್ದರೂ ತನ್ನ ಎದುರು ಏನೂ ಅಲ್ಲ ಎಂದು ಶಿವಸೇನೆಗೆ ತೋರಿಸಬೇಕಾಗಿತ್ತು. ಈ ಹಿಂಸಾತ್ಮಕ ಘಟನೆಗೆ ಶಿವಸೇನೆ ಕ್ಷಮೆಯನ್ನೂ ಕೇಳಲಿಲ್ಲ.

ಶಿವಸೇನೆಯು ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ಕೈಬಿಡಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಲೇ ಬಂದಿದೆ. ಅಖಂಡ ಭಾರತದ ಪ್ರತಿಪಾದನೆಯನ್ನು ಮಾಡುತ್ತಾ ಬಂದಿದೆ. ಅದರ ಇನ್ನೊಂದು ನಿಲುವು ಎಂದರೆ, ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಿಂದೂ ಮಹಿಳೆಯರು ಕನಿಷ್ಠ ಐದು ಮಕ್ಕಳನ್ನು ಹೆರಬೇಕು ಎಂಬುದು. ಅಲ್ಲದೆ, ಅದು ಬುರ್ಖಾವನ್ನೂ ಕೂಡಾ ನಿರಂತರ ವಿರೋಧಿಸುತ್ತಾ ಬಂದಿದೆ. ಶಿವಸೇನೆಯ ಒಂದು ಸ್ಥಾಯಿಗುಣವೆಂದರೆ: ಸಾಂಪ್ರದಾಯಿಕ ಹಿಂದುತ್ವಕ್ಕಿಂತಲೂ ಆಳವಾದ ಮುಸ್ಲಿಮ್ ದ್ವೇಷ.

ಶಿವಸೇನೆಗೆ ಇನ್ನೊಂದು ಮುಖವೂ ಇದೆ. ಮಹಾರಾಷ್ಟ್ರದ ಎಲ್ಲೆಡೆ ಘರ್ಜಿಸುವ ಹುಲಿಯ ಮುಖ ಹೊತ್ತ ಆ್ಯಂಬುಲೆನ್ಸ್‌ಗಳನ್ನು ಕಾಣಬಹುದು. ಆಗಾಗ ರಕ್ತದಾನ ಶಿಬಿರಗಳನ್ನು ನಡೆಸುವ ಅದು, ಒಂದೇ ದಿನ 27,000 ಬಾಟಲಿ ರಕ್ತ ಸಂಗ್ರಹ ಮಾಡಿದ್ದಕ್ಕೆ ಗಿನ್ನೆಸ್ ದಾಖಲೆ ಹೊಂದಿದೆ. ತಾನು ಸಮಾಜ ಸೇವೆ ಮಾಡುತ್ತಿರುವುದಾಗಿ ತೋರಿಸಿಕೊಳ್ಳುವುದು ಮತ್ತು ಪ್ರಚಾರ ಪಡೆಯುವುದು ಇದರ ಹಿಂದಿರುವ ಉದ್ದೇಶ.

ಪ್ರಚಾರ ಕಲೆಯನ್ನು ಶಿವಸೇನೆಯಿಂದ ಕಲಿಯಬೇಕು. ಮಹಾರಾಷ್ಟ್ರದ ಯಾವುದೇ ಹಳ್ಳಿಗೆ ಹೋದರೂ ಅಲ್ಲಿನ ಗೋಡೆಗಳಲ್ಲಿ ಘರ್ಜಿಸುವ ಹುಲಿಯ ಬಣ್ಣದ ಚಿತ್ರವನ್ನು ಶಿವಸೇನಾ ಎಂಬ ಹೆಸರಿನೊಂದಿಗೆ ಕಾಣಬಹುದು. ಕೆಲವೊಮ್ಮೆ ಗೋಡೆಗಳಲ್ಲಿ ಶಿವಸೇನೆಯ ಘೋಷಣೆಗಳು ಮತ್ತು ಠಾಕ್ರೆಯ ವ್ಯಂಗ್ಯಚಿತ್ರಗಳ ನಕಲನ್ನೂ ಕಾಣಬಹುದಾಗಿತ್ತು. ಮುಂಬೈಯ ಬೀದಿಗಳಲ್ಲಿ ನಡೆಯುವಾಗ ಏಕಾಏಕಿಯಾಗಿ ಠಾಕ್ರೆಯ ಕಂಚಿನ ಕಂಠ ನಿಮ್ಮ ಪಕ್ಕದಲ್ಲೇ ಮೊಳಗಿದರೆ ಆಶ್ಚರ್ಯಪಡಬೇಕಾಗಿಲ್ಲ. ಕಾರಿನಲ್ಲಿ ಚಿಕ್ಕ ಮೈಕ್ ಕಟ್ಟಿ ಠಾಕ್ರೆ ಭಾಷಣದ ಕ್ಯಾಸೆಟ್‌ಗಳನ್ನು ಹಾಕುವುದು ಸಾಮಾನ್ಯ. ಇದು ಕೂಡಾ ಹಿಟ್ಲರ್ ಅನುಸರಿಸುತ್ತಿದ್ದ ತಂತ್ರ. ಠಾಕ್ರೆಗೆ ಒಲಿದಿದ್ದ ಮಂತ್ರಮುಗ್ಧಗೊಳಿಸುವ ಪ್ರಚೋದನಕಾರಿ ಭಾಷಣ ಕಲೆಯನ್ನು ಶಿವಸೇನೆ ಚೆನ್ನಾಗಿ ಬಳಸಿಕೊಂಡಿತು.

ಹಿಂದುತ್ವ ಮತ್ತು ಪ್ರಾದೇಶಿಕತೆಯ ಅಮಲನ್ನು ಶಿವಸೇನೆಯಷ್ಟು ಸಮರ್ಥವಾಗಿ ಬಳಸಿಕೊಂಡ ಪಕ್ಷ ಬೇರೊಂದಿಲ್ಲ. ಬಿಜೆಪಿಯೊಂದಿಗೆ ಕೈಜೋಡಿಸಿ ತನ್ನ ನೆಲೆಯನ್ನು ಕರಗಿಸುತ್ತಾ ಬರುವ ತನಕ ಮರಾಠಿಯಾಗಿರುವುದು ಎಂದರೆ ಹಿಂದೂವಾಗಿರುವುದು, ಹಿಂದೂ ಆಗಿರುವುದು ಎಂದರೆ ಶಿವಸೇನೆಯವರಾಗಿರುವುದು ಎಂಬ ಭಾವನೆಯನ್ನು ಮೂಡಿಸಲು ಶಿವಸೇನೆ ಸಫಲವಾಗಿತ್ತು. ಈ ರೀತಿಯ ಹಲವಾರು ಭಾವನಾತ್ಮಕ ಒಳಸುಳಿಗಳು ಎಂದರೆ, ಅಂಡರ್ ಕರೆಂಟನ್ನು ಶಿವಸೇನೆ ಹರಿಯಬಿಟ್ಟಿತ್ತು. ಪ್ರತಿಯೊಂದು ಘಟನೆಯನ್ನು ಶಿವಸೇನೆಯ ಹಿಂದುತ್ವ ಮತ್ತು ಮರಾಠಿತನದ ಚೌಕಟ್ಟಿನಲ್ಲಿ ಬಿಂಬಿಸುವ ಕಲೆ ಶಿವಸೇನೆಗೆ ಕರಗತವಾಗಿತ್ತು.

ಇದಕ್ಕೆ ಕಾರಣ: ಬಾಳಾ ಠಾಕ್ರೆಯವರು ಎಸ್. ಸದಾನಂದ ಎಂಬವರ ಮಾಲಕತ್ವದಲ್ಲಿದ್ದ ‘ಫ್ರೀ ಪ್ರೆಸ್ ಜರ್ನಲ್’ ಎಂಬ ಉದಾರವಾದಿ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದದ್ದು. ಅಲ್ಲಿ ಅವರಿಗೆ ಹೆಸರು ಬಂದಿತ್ತು ಮಾತ್ರವಲ್ಲ; ಹೆಸರಾಂತ ಪತ್ರಕರ್ತರು ಮತ್ತು ರಾಜಕಾರಣಿಗಳ ಪರಿಚಯವಾಗಿತ್ತು. ಅಲ್ಲಿ ಪಡೆದ ಸಂವಹನ ಕಲೆಯನ್ನು ಅವರು ಮುಂದೆ ಪಕ್ಷಕಟ್ಟಿ ಬೆಳೆಸುವುದರಲ್ಲಿ ತುಂಬಾ ಚೆನ್ನಾಗಿ ಬಳಸಿಕೊಂಡರು.

ಶಿವಸೇನಾ ಪ್ರಮುಖ್ ಆಗುವುದಕ್ಕಿಂತ ಮೊದಲು ಅವರ ವ್ಯಕ್ತಿತ್ವ ಹೇಗಿತ್ತು? ಹಲವು ಕೋಮುಗಲಭೆಗಳನ್ನು ನಡೆಸಿದ, ಹಲವಾರು ಭೂಗತ ದೊರೆಗಳನ್ನು ಬೆಳೆಸಿ, ಬಳಸಿದ, ಬಾಲಿವುಡ್ ಅನ್ನು ನಿಯಂತ್ರಿಸಿದ, ಮುಂಬೈ ಮತ್ತು ಠಾಣೆ ಜಿಲ್ಲೆಗಳಲ್ಲಿ ವಸ್ತುಶಃ ಸಮಾನಾಂತರ ಸರಕಾರವೇ ಆಗಿ ಮೆರೆದ ಬಾಳಾ ಠಾಕ್ರೆ ಮಹಾ ಧೈರ್ಯಶಾಲಿಯಾಗಿದ್ದರೆ? ಎಂದರೆ, ಇಲ್ಲ ಅನ್ನುತ್ತಾರೆ ಅವರ ಹಳೆಯ ಕಾಲದ ಒಡನಾಡಿಗಳು. ಆತನೊಬ್ಬ ಮಹಾ ಪುಕ್ಕಲು ಮನುಷ್ಯ ಎಂದಿದ್ದಾರೆ, ಅವರ ಹಿರಿಯ ಸಹೋದ್ಯೋಗಿಯೂ, ಫ್ರೀ ಪ್ರೆಸ್ ಜರ್ನಲ್‌ನ ಮುಖ್ಯ ವರದಿಗಾರರೂ, ಸ್ವಾತಂತ್ರ್ಯದ ಬಳಿಕ ಭಾರತದಲ್ಲಿ ನಡೆದ ಮೊದಲ ಕೋಮುಗಲಭೆಯನ್ನು ಜೀವ ಬೆದರಿಕೆಯ ನಡುವೆಯೂ ವ್ಯಾಪಕವಾಗಿ ವರದಿ ಮಾಡಿ, ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರ ವೈಯಕ್ತಿಕ ಅಭಿನಂದನೆಗೆ ಪಾತ್ರರಾಗಿದ್ದ ಎಸ್.ಬಿ. ಕೋಲ್ಪೆಯವರು. ಅವರು ತಿಳಿಸಿದಂತೆ, ಒಮ್ಮೆ ಮುಂಬೈಯ ಮುಸ್ಲಿಮ್ ಬಾಹುಳ್ಯದ ಡೋಂಗ್ರಿ ಪ್ರದೇಶದಲ್ಲಿ ಕೋಮುಗಲಭೆ ನಡೆದಾಗ ಕೋಲ್ಪೆ, ಎಂ.ವಿ. ಕಾಮತ್ ಮುಂತಾದ ಪತ್ರಕರ್ತರು ಒಮ್ಮೆ ಅಲ್ಲಿ ಸುತ್ತಾಡಿ ಬರೋಣ ಎಂದು ಹೊರಟು ಠಾಕ್ರೆಯನ್ನೂ ಕರೆದರಂತೆ. ಆಗ ಠಾಕ್ರೆ, ‘‘ನಾನು ಬರುವುದಿಲ್ಲ, ನೀವೂ ಹೋಗಬೇಡಿ, ಕೊಂದುಗಿಂದು ಬಿಟ್ಟಾರು’’ ಎಂದರಂತೆ. ಅವರು ಹೋಗಿ ಬಂದು ವರದಿ ಮಾಡಿದರೂ ಠಾಕ್ರೆ ಮಾತ್ರ ಕಚೇರಿ ಬಿಟ್ಟು ಹೊರ ಬರಲಿಲ್ಲವಂತೆ.

ಪಕ್ಷ ಸ್ಥಾಪನೆಯ ಮೊದಲ ಹೆಜ್ಜೆಯಾಗಿ ಅವರು ಆರಂಭಿಸಿದ್ದು ‘ಮಾರ್ಮಿಕ’ ಎಂಬ ಮರಾಠಿ ಪತ್ರಿಕೆಯನ್ನು. ಅದರಲ್ಲಿ ಹರಿತವಾದ ಮತ್ತು ವಿವಾದಾಸ್ಪದ ವ್ಯಂಗ್ಯಚಿತ್ರಗಳು ಮತ್ತು ನಿಂದನಾತ್ಮಕ ರಾಜಕೀಯ ವಿಡಂಬನೆಗಳೂ ತುಂಬಿರುತ್ತಿದ್ದವು. ಈ ಪತ್ರಿಕೆ ತಕ್ಷಣವೇ ಜನಪ್ರಿಯವಾಗಿ ಮರಾಠಾ ಸ್ವಾಭಿಮಾನವನ್ನು ಕೆಣಕುವುದೇ ಅಲ್ಲದೆ, ನಿಧಾನವಾಗಿ ಮುಸ್ಲಿಮರ ವಿರುದ್ಧ ಕೋಮುವಿಷವನ್ನೂ, ವಲಸಿಗರ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತೀಯರ ವಿರುದ್ಧ ದ್ವೇಷವನ್ನೂ ಬೆಳೆಸುವುದರಲ್ಲಿ ಯಶಸ್ವಿಯಾಯಿತು. ಈ ಪತ್ರಿಕೆಯಲ್ಲಿ ಮರಾಠಿಯೇತರ ಸರಕಾರಿ ಮತ್ತು ಇತರ ಅಧಿಕಾರಿಗಳ ಫೋನ್ ನಂಬರುಗಳನ್ನು ಪ್ರಕಟಿಸಿ, ಫೋನ್ ಮಾಡಿ ಸತಾಯಿಸುವಂತೆ ಪ್ರಚೋದಿಸಲಾಗುತ್ತಿತ್ತು.

ತನ್ನ ಪಕ್ಷದ ಪ್ರಚಾರಕ್ಕಾಗಿ ಶಿವಸೇನೆ ಮುಖವಾಣಿ ‘ಸಾಮ್ನಾ’ ಎಂಬ ಮರಾಠಿ ಪತ್ರಿಕೆಯನ್ನು 1989ರ ಜನವರಿ 23ರಂದು ಆರಂಭಿಸಿತು. ಮಧ್ಯಾಹ್ನ ಪ್ರಕಟವಾಗುವ ‘ದೋಪಹರ್ ಕಾ ಸಾಮ್ನಾ’ ಎಂಬ ಹಿಂದಿ ಆವೃತ್ತಿಯೂ ಇತ್ತು. ಶಿವಸೇನೆಗೆ ಇರುವ ಹಣಬಲದ ಕಾರಣದಿಂದ ಸುಂದರ ಮುದ್ರಣದೊಂದಿಗೆ ಬೇಗನೆ ಜನಪ್ರಿಯವಾಯಿತು. ಪ್ರಚೋದನಕಾರಿ ಮತ್ತು ವಿವಾದಾಸ್ಪದ ಸಂಪಾದಕೀಯ ಮತ್ತು ಲೇಖನಗಳಿಂದ ಇದು ಕೂಡಾ ಸಮಾಜದಲ್ಲಿ ಕೋಮುವಿಷವನ್ನು ಹರಡುತ್ತಿದ್ದು, ಶಿವಸೇನೆಯ ನಿಲುವಿಗೆ ಅನುಗುಣವಾಗಿ ಕಾಲಕಾಲಕ್ಕೆ ತನ್ನ ನಿಲುವನ್ನೂ ಬದಲಿಸಿದೆ. ಅಲ್ಲದೆ ಶಿವಸೇನೆಗೆ ದೇಣಿಗೆ ನೀಡುವುದಕ್ಕೆ ಈ ಪತ್ರಿಕೆಯಲ್ಲಿ ಜಾಹೀರಾತು ನೀಡುವುದೂ ಒಂದು ವಿಧಾನವಾಯಿತು. 1993ರ ತನಕವೂ ಬಾಳಾ ಠಾಕ್ರೆಯೇ ಇದರ ಸಂಪಾದಕರಾಗಿದ್ದರು. ಈಗಲೂ ಸ್ಥಾಪಕ ಸಂಪಾದಕ ಎಂದು ಪತ್ರಿಕೆಯಲ್ಲಿ ಅವರ ಹೆಸರಿದೆ. ನವೆಂಬರ್ 27, 2019ರ ತನಕ ಉದ್ಧವ್ ಠಾಕ್ರೆ ಅದರ ಸಂಪಾದಕರಾಗಿದ್ದರು. ಅವರು ಮುಖ್ಯಮಂತ್ರಿ ಆದ ನಂತರ ಈಗ ರಶ್ಮಿ ಠಾಕ್ರೆ ಅದರ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ.

ಜನಪ್ರಿಯತೆ ಪಡೆಯಲು ಶಿವಸೇನೆ ಅನುಸರಿಸಿದ ಇನ್ನೊಂದು ವಿಧಾನ ಎಂದರೆ ಹೆಸರು ಬದಲಿಸುವುದು. ಇದೀಗ ಬಿಜೆಪಿಗೆ ಚಟವಾಗಿದ್ದರೆ, ಶಿವಸೇನೆ ಅದನ್ನು ಮೊದಲೇ ಆರಂಭಿಸಿತ್ತು. ಉದಾಹರಣೆಗೆ ‘ಬಾಂಬೆ’ ಎಂಬುದನ್ನು ‘ಮುಂಬೈ’ ಎಂದು ‘ಪೂನಾ’ ಇದ್ದುದನ್ನು ‘ಪುಣೆ’ ಎಂದು ಬದಲಿಸಲು ಅದು ದೊಡ್ಡ ಹೋರಾಟವನ್ನೇ ನಡೆಸಿತು. ಕೊನೆಗೆ ಅದರ ಒತ್ತಡದಿಂದಾಗಿ 1995ರಲ್ಲಿ ‘ಮುಂಬೈ’ ಎಂಬ ಹೆಸರು ಆಧಿಕೃತವಾಯಿತು. ಇದು ಒಂದು ಅಂತರ್‌ರಾಷ್ಟ್ರೀಯ ಸುದ್ದಿಯಾಯಿತು.

ಭಾರತೀಯ ಸಂಸ್ಕೃತಿ, ಹಿಂದೂ ಸಂಸ್ಕೃತಿ ಎಂದು ಸದಾ ಜಪ ಮಾಡುವ ಶಿವಸೇನೆ ನಿಧಿ ಸಂಗ್ರಹಿಸಲು ಅಮೆರಿಕನ್ ಪಾಪ್ ಗಾಯಕ ಮೈಕೆಲ್ ಜಾಕ್ಸನ್ ಅವರು ಭಾರತದಲ್ಲಿ ನಡೆಸಿದ ಏಕೈಕ ಲೈವ್ ಕಾರ್ಯಕ್ರಮವನ್ನು ಆಯೋಜಿಸಿತ್ತು ಎಂದರೆ ಅನೇಕರಿಗೆ ಆಚ್ಚರಿಯಾದೀತು. 1996ರಲ್ಲಿ ನಡೆದ ಈ ಕಾರ್ಯಕ್ರಮ 2,70,000 ಉದ್ಯೋಗ ಸೃಷ್ಟಿಗಾಗಿ ಎಂದು ಪ್ರಚಾರ ಮಾಡಲಾಗಿತ್ತು.

ನಿರುದ್ಯೋಗಿ ಯುವಕರಿಗೆ ಬೇರೆಯೇ ಒಂದು ಐಡೆಂಟಿಟಿ ನೀಡಿ, ಅವರ ಮರಾಠಾ, ಮರಾಠಿ ಸ್ವಾಭಿಮಾನವನ್ನು ಕೆಣಕಿ ಅದನ್ನು ಹಿಂದುತ್ವದೊಂದಿಗೆ ಸಮೀಕರಿಸಿ ಶಿವಸೇನೆ ಬೆಳೆದ ರೀತಿಯನ್ನು ಈಗ ಬಿಜೆಪಿ ಅನುಸರಿಸಲು ಆರಂಭಿಸಿದೆ. ಬಿಜೆಪಿಯು ಫ್ರಿಂಜ್ ಎಲಿಮೆಂಟ್ಸ್ ಎಂದು ಕರೆಯುವ ಪುಂಡು ಹಿಂದುತ್ವಕ್ಕೆ ಮಾದರಿಯಾಗಿರುವುದು ಶಿವಸೇನೆಯೇ ಎನ್ನಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top