--

ಇಂದು ಶಿಶುನಾಳ ಶರೀಫರ ಜನ್ಮದಿನ

ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫ

ಶಿಶುನಾಳ ಶರೀಫರಂತಹ ಸಂತರು ಈ ನಾಡಿಗೆ ಇಂದಿಗೂ ಪ್ರಸ್ತುತವಾಗಿರುವುದು ಅವರು ಸಾರಿದ, ತೋರಿದ, ಬೆಳೆಸಿದ, ಬೆಳಗಿಸಿದ, ಆಶಿಸಿದ ತತ್ವಗಳಿಂದ. ಐಕ್ಯತೆ ಹಾಗೂ ಸೌಹಾರ್ದವನ್ನು ಬೆಳೆಸಿಕೊಳ್ಳಲು ಅವರ ವೈಚಾರಿಕ ತತ್ವ ಪದಗಳು ನೀಡುವ ಕರೆ ಮಾರ್ದನಿಗೊಳ್ಳಲು ಶರೀಫಜ್ಜ ನಮಗೆ ಸದಾ ಸ್ಮರಣೀಯರಾಗುತ್ತಾರೆ.

ಕರ್ನಾಟಕವು ಶರಣರು, ದಾಸರು, ತತ್ತ್ವಪದಕಾರರು ಹಾಗೂ ಸರ್ವಧರ್ಮಿಯರು ಬದುಕಿ ಬಾಳಿದ ನಾಡು. ಇವರು ತಮ್ಮ ಬದುಕು, ಚಿಂತನೆ, ಸಾಹಿತ್ಯಗಳಿಂದ ಜನರ ಮೇಲೆ ಅಪಾರ ಪ್ರಭಾವ ಬೀರಿದರು. ಇವರಲ್ಲಿ ೧೯ನೆಯ ಶತಮಾನದ ಕಳಸದ ಗುರು ಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು ಪ್ರಮುಖರು. ಇವರಿಬ್ಬರ ಬದುಕು ಹಾಗೂ ಅವರ ತತ್ತ್ವಪದಗಳೂ, ಧಾರ್ಮಿಕ ಭಾವೈಕ್ಯತೆ, ಸಾಮರಸ್ಯದ ಸಮಾನತೆಗೆ ಅಪೂರ್ವ ನಿದರ್ಶನಗಳಾಗಿವೆ.

‘ಈಶ್ವರ ಅಲ್ಲಾ, ನೀನೇ ಎಲ್ಲಾ’ ಎಂದು ಬೋಧಿಸಿದವರು, ಆಚರಣೆಯಲ್ಲಿ ತಂದವರು ಹಾಗೂ ಸಾಧಿಸಿದವರು ಕಳಸದ ಗುರು ಗೋವಿಂದ ಭಟ್ಟರು ಹಾಗೂ ಅವರ ಶಿಷ್ಯರಾದ ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫರು. ಮಂದಿರ-ಮಸೀದಿ, ಪುರಾಣ-ಕುರಾನ್, ನಮನ-ನಮಾಝ್, ಅಲ್ಲಮ-ಅಲ್ಲಾ, ಜಂಗಮ-ಫಕೀರ, ಇವೆಲ್ಲಾ ಒಂದೇ, ಭಗವಂತನ ದರ್ಶನಕ್ಕೆ ನಾವು ಹಾಕಿಕೊಂಡ ವಿವಿಧ ಹಾದಿಗಳು ಎಂದು ತೋರಿಸಿದಂತಹ ದಾರ್ಶನಿಕರು ಕಳಸದ ಗುರು ಗೋವಿಂದ ಭಟ್ಟರು ಹಾಗೂ ಸಂತ ಶಿಶುನಾಳ ಶರೀಫರು.

ಗುರು ಗೋವಿಂದಭಟ್ಟರ ಶಿಷ್ಯರಾದ ಶರೀಫ ಸಾಹೇಬರು ಅನುಭಾವಿಗಳು. ಅವರು ಜನಿಸಿದ್ದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಒಂದು ಸಣ್ಣ ಹಳ್ಳಿ ಶಿಶುನಾಳ ಗ್ರಾಮದ ದೇವಕಾರ ಮನೆತನದಲ್ಲಿ. ಈ ಸಣ್ಣ ಗ್ರಾಮದ ಹಝರತ್ ಇಮಾಮ ಸಾಹೇಬರು ಹಾಗೂ ಹಜ್ಜುಮಾ ಎಂಬ ಮುಸ್ಲಿಮ್ ದಂಪತಿಗೆ ೧೮೧೯ನೆಯ ಜುಲೈ ೩ರಂದು ಶರೀಫರು ಜನಿಸಿದರು. ತಂದೆ ಹಝರತ್ ಇಮಾಮರು ಅಲ್ಲಾನ ಆದರ್ಶ ಭಕ್ತರು. ಸಮಾಜಸೇವೆ, ಸಮಾಜಕಲ್ಯಾಣ ಅವರ ಆದರ್ಶ ಜೀವನವಾಗಿತ್ತು.

ಹುಲಗೂರಿನ ಸಂತ ಸೈಯದ್ ಹಝರತ್ ಶಾ ಖಾದ್ರಿಯವರೇ ಅವರಿಗೆ ಮುಹಮ್ಮದ್ ಶರೀಫ ಎಂದು ಹೆಸರಿಟ್ಟರು. ಮುಂದೆ ಇದೇ ಹೆಸರು ಶಿಶುನಾಳ ಶರೀಫ ಎಂದು ಜನಪ್ರಿಯವಾಯಿತು. ‘ಶರೀಫ’ ಎಂಬ ಪಾರ್ಸಿ ಭಾಷೆಯ ಪದದ ಅರ್ಥ ‘ಉದಾತ್ತ ಧ್ಯೇಯ’ಗಳ ಅಥವಾ ‘ಉತ್ತಮ ಶೀಲ ಸ್ವಭಾವ’ ಹೊಂದಿ ಇತರರಿಂದ ಗೌರವಿಸಲ್ಪಡುವ ವ್ಯಕ್ತಿ. ಹೆಸರಿಗೆ ಅನ್ವರ್ಥರಾಗಿ ಬಾಳಿದ ಸಂತ ಶರೀಫರು ಇಂದಿಗೂ ಜನಮನದಲ್ಲಿ ನಿಲ್ಲಲು ಕಾರಣ ಅವರು ಏರಿದ ಸಾಧನೆಯ ಶಿಖರ. ಶಿಶುನಾಳದಲ್ಲಿಯೇ ತಮ್ಮ ಬಾಲ್ಯವನ್ನು ಕಳೆದ ಶರೀಫರ ಪ್ರಾಥಮಿಕ ಶಿಕ್ಷಣದ ವಿದ್ಯಾಭ್ಯಾಸವೂ ಸ್ಥಳೀಯ ಕನ್ನಡ ಕೂಲಿಮಠದಲ್ಲಿ ಪ್ರಾರಂಭವಾಯಿತು. ಮುಲ್ಕಿ ಪರೀಕ್ಷೆಯಲ್ಲಿ(ಮುಲ್ಕಿ ಅಂದರೆ ಇಂದಿನ ೭ನೇತರಗತಿ) ಉತ್ತೀರ್ಣರಾಗಿ ಶಿಶುನಾಳದ ಅಕ್ಕಪಕ್ಕದ ಗ್ರಾಮಗಳಾದ ಮಂಡಿಗನಾಳ, ಕ್ಯಾಲಕೊಂಡ, ಪಾಣಿಗಟ್ಟಿ, ಎರೆಬೂದಿಹಾಳ, ಗಂಜಳಗಳಲ್ಲಿ ಶಿಕ್ಷಕರಾಗಿ ಕೆಲವು ಕಾಲ ಕೆಲಸ ಮಾಡಿದರು. ಉರ್ದು ಹಾಗೂ ಮೋಡಿಗಳನ್ನು ಸ್ವಪ್ರಯತ್ನದಿಂದ ಕಲಿತರು. ಬಾಲ್ಯದಿಂದಲೂ ತಂದೆ ಅವರಿಗೆ ಬೋಧಿಸುತ್ತಿದ್ದ ರಾಮಾಯಣ, ಮಹಾಭಾರತಗಳೆಂದರೆ ತುಂಬಾ ಪ್ರೀತಿ. ಅಭಿನಯದಲ್ಲೂ ಅಸಕ್ತಿಯಿದ್ದುದರಿಂದ ರಾಮಾಯಣ, ಮಹಾಭಾರತ, ಅಲ್ಲಮಪ್ರಭು ಬಯಲಾಟಗಳಲ್ಲಿ ಪಾತ್ರವಹಿಸಿ ಪ್ರೇಕ್ಷಕರ ಕಣ್ಮನಗಳನ್ನು ತಣಿಸುತ್ತಿದ್ದರು. ಜಾತ್ರೆ, ಉತ್ಸವ ಮೊದಲಾದವುಗಳಲ್ಲಿ ಅನುಭಾವ ಕವಿಗಳಾದ ಸರ್ವಜ್ಞ, ನಿಜಗುಣಯೋಗಿ, ಸರ್ಪಭೂಷಣ ಶಿವಯೋಗಿಗಳ ಕಾವ್ಯವಾಚನ, ಶಾಸ್ತ್ರಪುರಾಣಗಳ ಶ್ರವಣ-ಮನನ, ಮುಹರಮ್ ಹಬ್ಬಗಳ ರಿವಾಯತ್ ರಚನೆ ಮತ್ತು ಹೆಜ್ಜೆ ಮೇಳ ಕುಣಿತ ಇವುಗಳ ಪ್ರಭಾವದಿಂದಾಗಿ ಆಧ್ಯಾತ್ಮಿಕ ವಿಷಯಗಳಲ್ಲಿ ಸೆಳೆತ, ಸಾಮಾಜಿಕ ಚಿಂತನೆಗಳು, ಜಾತ್ಯತೀತ ಮನೋಭಾವ ಇವೆಲ್ಲ ಶರೀಫರನ್ನು ಸಂತಕವಿಯನ್ನಾಗಿಸಿದವು. ಇವರು ಸೃಜಿಸಿದ ಕಾವ್ಯ ಜನರ ಹೃದಯದ ಭಾಷೆಯಾಗಿತ್ತು. ಮತ್ತೊಂದೆಡೆ ಮುಹರಮ್, ಅಲಾವಿ, ಕರ್ಬಲಾ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದರು. ಸರ್ವಧರ್ಮ ಸಮನ್ವಯತೆಯನ್ನು ಜನಸಾಮಾನ್ಯರಲ್ಲಿ ಸಾರಿದರು.

ಗುರುಗಳಲ್ಲಿ ಭಕ್ತಿ ಭಾವವನ್ನು ತೋರಿ ನಡೆಯುವವರನ್ನು ಗುರುಪಂಥದವರೆಂದು ಕರೆಯುತ್ತಾರೆ. ಕರ್ನಾಟಕದಲ್ಲೂ ಗುರುಗಳಿಗೆ ಅಗ್ರಸ್ಥಾನವಿದೆ. ಶರೀಫರೂ ಗುರುಕೃಪೆಯನ್ನು ಪಡೆಯಲು ಮಠ ಮಾನ್ಯಗಳಿಗೆ ಹೋಗುತ್ತಿದ್ದರು. ಗುರುವಿಗಾಗಿ ಶೋಧಿಸುತ್ತಿದ್ದ ಈ ಭಕ್ತ ಜೀವಕ್ಕೆ ದೇವರು ನೀಡಿದ ಫಲವೇ ‘ಗುರು ಗೋವಿಂದಭಟ್ಟರು’ ಎಂಬ ಆದರ್ಶ ಗುರುಗಳು.

ಗೋವಿಂದ ಭಟ್ಟರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಳಸ ಗ್ರಾಮದವರು. ತ್ರಿಕಾಲಜ್ಞಾನಿಗಳು, ವಿದ್ಯಾವಂತರು, ಅವಧೂತರೆಂದು ಖ್ಯಾತಿ ಪಡೆದವರು. ಸ್ವಜಾತಿಯನಲ್ಲದ ತಮ್ಮ ಮುಸಲ್ಮಾನ ಶಿಷ್ಯನಿಗೆ ಮುಕ್ತ ಹೃದಯದಿಂದ ವಿದ್ಯಾದಾನ ಮಾಡಿದರು. ಗುರುಶಿಷ್ಯರಿಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು.

‘‘ನನ್ನೊಳಗೆ ನಾ ತಿಳಕೊಂಡೆ

ಆಜ್ಞಾ ಪ್ರಕಾರ ನಡಕೊಂಡೆ

ಗುರೂಪದೇಶ ಪಡಕೊಂಡೆ     

ಗುರುಗೋವಿಂದನ ಪಾದಾ ಹಿಡಕೊಂಡೆ’’ ಎಂದು ಗುರುಗೋವಿಂದರಿಗೆ ಶರೀಫರು ಸಂಪೂರ್ಣ ಶರಣಾಗತರಾದರು.

ತಮ್ಮ ತತ್ವಪದಗಳುದ್ದಕ್ಕೂ ಅವರು ಗುರು ಗೋವಿಂದಭಟ್ಟರ ಸ್ಮರಣೆ ಮಾಡುವುದನ್ನು ಎಂದೂ ಮರೆಯಲಿಲ್ಲ. ಶರೀಫರು ತಮ್ಮ ಗುರು ಗೋವಿಂದರ ಆಚಾರ-ವಿಚಾರ, ನಡೆ-ನುಡಿ ಹಾಗೂ ಅವರ ದೈವಿಕ ಹಾಗೂ ಆಧ್ಯಾತ್ಮಿಕ ಶಕ್ತಿಗೆ ಮರುಳಾಗಿ

‘‘ಮಾಯಕ್ಕೆ ಮರುಳಾದೆನೋ ಸದ್ಗುರುನಾಥ

ಮಾಯಕ್ಕೆ ಮರುಳಾದನೋ

ಗುರುವರ ಗೋವಿಂದ ಪರಮಗಾರುಡಿಗ’’ ಎಂದು ಗುರುಗೋವಿಂದ ಭಟ್ಟರನ್ನು ಬಣ್ಣಿಸಿದ್ದಾರೆ.

ಗುರು ಶಿಷ್ಯರು ಯಾವಾಗಲೂ ಜೊತೆಯಾಗಿಯೇ ಇರುತ್ತಿದ್ದರು. ಇವರಿಬ್ಬರ ಸಂಬಂಧಕ್ಕೆ ಕೆಲವು ಬ್ರಾಹ್ಮಣರು ಗೋವಿಂದ ಭಟ್ಟರನ್ನು, ‘‘ಈ ಮುಸಲ್ಮಾನನು ನಿಮಗೆ ಬ್ರಾಹ್ಮಣನಂತೆ ಕಾಣುತ್ತಾನೆಯೇ? ಇವನಿಗೆ ವೇದಶಾಸ್ತ್ರ ಕಲಿಸಲು ಬ್ರಹ್ಮೋಪದೇಶವಾಗಿದೆಯೇ? ನಿಮಗೆ ಸ್ವಚ್ಛತೆ ಮತ್ತು ಸಾಮಾಜಿಕ ಸ್ಥಾನಮಾನದ ಪ್ರಜ್ಞೆ ಇದೆಯೇ!’’ ಎಂದು ಪ್ರಶ್ನಿಸಿದಾಗ ಭಟ್ಟರು ನಗುತ್ತಾ ‘‘ಈ ಹುಡುಗನಿಗಿಂತ ನಿಮ್ಮಲ್ಲಿ ಯಾರೂ ಸ್ವಚ್ಛರಿಲ್ಲ ಹಾಗೂ ದೊಡ್ಡ ಬ್ರಾಹ್ಮಣರಿಲ್ಲ!’’ ಎಂದು ತಮ್ಮ ಪವಿತ್ರ ಜನಿವಾರವನ್ನು ಶಿಷ್ಯನಿಗೆ ಹಾಕಿ ಶರೀಫರನ್ನು ಬಿಗಿದಪ್ಪಿದರು. ಭಾವೋದ್ವೇಗಕ್ಕೆ ಒಳಗಾದ ಶರೀಫರು ಗುರುಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, 

‘‘ಹಾಕಿದ ಜನಿವಾರವ ಸದ್ಗುರುನಾಥ

ಹಾಕಿದ ಜನಿವಾರವ’’ ಎಂದು ಗುರುಗಳನ್ನು ಕೊಂಡಾಡಿದರು.

ಗುರು ಶಿಷ್ಯರಿಬ್ಬರಿಗೂ ಅಂದಿನ ಸಮಾಜ ಬಹಿಷ್ಕಾರ ಹಾಕಿತ್ತು. ಹಾಳು ದೇವಾಲಯ ಮತ್ತು ಸಾರ್ವಜನಿಕ ಗುಡಿ ಗುಂಡಾರಗಳೇ ಅವರ ವಸತಿಸ್ಥಾನಗಳಾಗಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಗುರು ಗೋವಿಂದ ಭಟ್ಟರೂ ಸಹ ಬ್ರಾಹ್ಮಣರಿಂದ ಹಾಗೂ ಧರ್ಮಬಾಂಧವರಿಂದ ಬಂದ ವಿರೋಧವನ್ನು ಲೆಕ್ಕಿಸದೆ, ತಮಗೆ ಯೋಗ್ಯನಾದ ಶಿಷ್ಯ ದೊರೆತದ್ದಕ್ಕೆ ಆನಂದಿಸಿದರು. ಸ್ಫಟಿಕದಂತಹ ಗುಣ ಹೊಂದಿದ್ದ ಶರೀಫರು ನಿಷ್ಠುರ ಸ್ವಭಾವದವರಾದ್ದರಿಂದ ಯಾವ ದಾಕ್ಷಿಣ್ಯಗಳಿಗೂ ಒಳಗಾಗುತ್ತಿರಲಿಲ್ಲ. ಸಮಾಜದ ತಪ್ಪುನಡತೆಗಳನ್ನು ತೀಕ್ಷ್ಣವಾಗಿ ತಿದ್ದಿ ಮಾನವ ಕುಲದ ಹಿತವನ್ನು ಬಯಸುತ್ತಿದ್ದರು. ಶರೀರದ ಮೇಲಿನ ಸ್ಮತಿ ಪ್ರಜ್ಞೆಗಳನ್ನು ಕಳೆದುಕೊಂಡು ದೇವೋನ್ಮಾದದಲ್ಲಿ ಲೀನವಾಗುತ್ತಿದ್ದರು. ಸುತ್ತಲಿನ ಗ್ರಾಮಗಳಿಗೆ ಹೋಗಿ ಅಲ್ಲಿಯ ಜನರ ತಿಳಿವಳಿಕೆಯ ಮಟ್ಟದಲ್ಲಿ ಬೆರೆತು ಉಪದೇಶ ಮಾಡುತ್ತಿದ್ದರು.

ಈ ಗುರುಶಿಷ್ಯರ ಜೋಡಿ ಉತ್ತರ ಭಾರತದ ಸಂತ ಕಬೀರ ಹಾಗೂ ಅವರ ಗುರು ರಮಾನಂದರ ಜೋಡಿಯಂತೆ ಇದ್ದುದರಿಂದ ಶರೀಫರನ್ನು ‘‘ಕರ್ನಾಟಕದ ಕಬೀರ’’ ಎಂದೂ ಕರೆಯುತ್ತಾರೆ.

ಇವರ ಜೀವಿತ ಕಾಲದಲ್ಲಿ ಇವರ ರಚನೆಗಳು ಮುದ್ರಿತರೂಪದಲ್ಲಿ ಪ್ರಕಟವಾಗಲಿಲ್ಲ. ಆ ಸಮಯದಲ್ಲಿ ಅದಕ್ಕೆ ಅನುಕೂಲತೆಗಳೂ ಇರಲಿಲ್ಲ. ಕವಿಯ ಗೀತೆಗಳನ್ನು ಇತರರು ಬರೆದುಕೊಳ್ಳುವ ಅಥವಾ ಕಂಠಪಾಠ ಮಾಡಿಕೊಳ್ಳುವ ಪದ್ಧತಿಯೊಂದು ಇದ್ದಿರಬಹುದು ಎನ್ನುವುದಕ್ಕೆ ಶರೀಫರ ಕವಿತೆಗಳೇ ಸಾಕ್ಷಿ. ಅದೃಷ್ಟವಶಾತ್ ಈ ಹಾಡುಗಳನ್ನು ಬರೆದವರು, ಸಂರಕ್ಷಿಸಿದವರು, ಶರೀಫರ ಸಂಗಡಿಗ ಗುಡಗೇರಿಯ ಕುಂಬಾರ ಮುದುಕಪ್ಪ. ಶರೀಫರು ಅನುಭಾವ ಪದಗಳನ್ನು ಮೈಮರೆತು ಹಾಡುತ್ತಿರುವಾಗ ಆ ಹಾಡುಗಳನ್ನು ಬರೆದುಕೊಳ್ಳುತ್ತಿದ್ದರು ಹಾಗೂ ಕಬೀರರಿಗೆ ಆಪ್ತ ಶಿಷ್ಯರಾಗಿದ್ದ ಭಾಗೋದಾಸ್ ಹಾಗೂ ಧರ್ಮದಾಸ್ ಇವರು ಹಾಡುಗಳನ್ನು ಬರೆದು ಸಂರಕ್ಷಿಸಿದರು. ಇವರಿಬ್ಬರ ಸಾಹಿತ್ಯ ಎಲ್ಲರ ಬಾಯಲ್ಲಿಯೂ ನಲಿಯುತ್ತಿತ್ತು ಹಾಗೂ ಶ್ರೀಸಾಮಾನ್ಯರಲ್ಲಿಯೂ ಅತ್ಯಂತ ಜನಪ್ರಿಯರಾಗಿದ್ದವು. ಇಷ್ಟೆಲ್ಲ ಜನಪ್ರಿಯತೆ ಇದ್ದರೂ, ತಮ್ಮದೇ ಆದ ಯಾವುದೇ ಮತ, ಪಂಥಗಳನ್ನು ಹುಟ್ಟು ಹಾಕದೆ, ಸಮಾಜದಲ್ಲಿ ತಲೆದೋರುತ್ತಿದ್ದ ಧಾರ್ಮಿಕ ದೋಷಗಳು, ಅಂಧಶ್ರದ್ಧೆ ಹಾಗೂ ಮೂಢನಂಬಿಕೆಗಳನ್ನು ಕಟುವಾಗಿ ಟೀಕಿಸಿ, ಜನರ ಕಣ್ಣು ತೆರೆಸಿದರು.

ಶರೀಫರ ವಿವಾಹವು ಕುಂದಗೋಳದ ಫಕೀರ ಸಾಹೇಬರ ಜೇಷ್ಠ ಪುತ್ರಿ ಫಾತಿಮಾರೊಂದಿಗೆ ಆಯಿತು. ಶರೀಫರು ಪತ್ನಿ ಫಾತಿಮಾರ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿಯನ್ನು ಹೊಂದಿದ್ದರು.

‘‘ನನ್ನ ಹೇಣ್ತಿ ನೀ ನನ್ನ ಹೇಣ್ತಿ

ನಿನ್ನ ಹೆಸರೇನ್ಹೇಳಲೆ ಗುಣವಂತೆ’’ ಎಂದು ಫಾತೀಮಾರನ್ನು ಹಾಡಿ ಹೊಗಳಿದರು.

ಅನ್ಯೋನ್ಯ ದಾಂಪತ್ಯದಲ್ಲಿ ಹುಟ್ಟಿದ ಹೆಣ್ಣು ಕೂಸು ಲತೀಮಾ ಸ್ವಲ್ಪಕಾಲದ ನಂತರ ವಿಧಿವಶವಾಯಿತು. ಪ್ರೀತಿಯ ಪತ್ನಿ ಫಾತಿಮಾ ತವರೂರಾದ ಕುಂದಗೋಳದಲ್ಲಿ ಮರಣ ಹೊಂದಿದರು. ಅವರ ಅಂತ್ಯಕ್ರಿಯೆಗೆ ಮಾವ ಹೇಳಿ ಕಳಿಸಿದಾಗ ಶರೀಫರು ನೀಡಿದ ಉತ್ತರ ಅವರ ನಿರ್ಮೋಹ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ.

‘‘ಮೋಹದ ಹೆಂಡತಿ ತೀರಿದ ಬಳಿಕ

ಮಾವನಮನೆಯ ಹಂಗಿನ್ಯಾಕೋ’’

ಅಕ್ಕರೆಯ ಮಗಳು, ಪ್ರೀತಿಯ ಮಡದಿ ಸಾವು, ಶರೀಫರನ್ನು ಪಾರಮಾರ್ಥಿಕ ಜೀವನದೆಡೆಗೆ ಕೇಂದ್ರೀಕೃತಗೊಳಿಸಿತು.

ಗುರು ಶಿಷ್ಯರಿಬ್ಬರು ಒಬ್ಬರನ್ನೊಬ್ಬರು ಬಿಡದೆ ಶಿಶುನಾಳ-ಕಳಸದ ಸುತ್ತ ಮುತ್ತಲಿನ ಗ್ರಾಮಗಳು, ಅಲ್ಲಿಯ ಗ್ರಾಮದೇವತೆಗಳ ಹಾಗೂ ಇತರ ಗುಡಿಗಳ ದರ್ಶನ ಮಾಡುವುದು, ದಿನನಿತ್ಯ ನಡೆಯುವ ಘಟನೆಗಳನ್ನು ತಮ್ಮ ತತ್ತ್ವಪದಗಳಲ್ಲಿ ವಿವರಿಸಿ ಅದಕ್ಕೆ ಆಧ್ಯಾತ್ಮಿಕ ಹಿನ್ನೆಲೆಯನ್ನು ನೀಡುತ್ತಿದ್ದರು. ಈ ತತ್ವಪದಗಳು ಜನಸಾಮಾನ್ಯರ ಹೃದಯವನ್ನು ನೇರವಾಗಿ ತಟ್ಟುತ್ತಿದ್ದವು. ಕೋಡಗನ ಕೋಳಿ ನುಂಗಿತ್ತಾ, ಬಿದ್ದಿಯಬ್ಬೇ ಮುದುಕಿ, ಹಾವು ತುಳಿದೇನೆ, ಎಂಥ ಮೋಜಿನ ಕುದುರಿ, ಗುಡಿಯ ನೋಡಿರಣ್ಣ, ತರವಲ್ಲ ತಗೀ ನಿನ್ನ ತಂಬೂರಿ, ಏನ್ ಕೊಡ ಏನ್ ಕೊಡವಾ, ಸೋರುತಿಹುದು ಮನೆಯ ಮಾಳಿಗಿ, ಕುಂಬಾರಕೀ ಈಕಿ ಕುಂಬಾರಕೀ, ಗುಡು ಗುಡಿಯ ಸೇದಿ ನೋಡೋ ಮುಂತಾದ ತತ್ವಪದಗಳೂ ಇಂದಿಗೂ ಜನಸಾಮಾನ್ಯರ ಬಾಯಲ್ಲಿ ನಲಿಯುತ್ತಿವೆ. ಹೀಗೆ ತತ್ವಪದ ಹಾಡಿ ಬೋಧನೆ ಮಾಡಿದರು, ದಂಡಕ ಹೇಳಿ ದೇವಿ ದೇವತೆಯರನ್ನು ಸ್ತುತಿಸಿದರು. ಕಾಲಜ್ಞಾನ ನುಡಿದು ಎಲ್ಲರನ್ನೂ ಎಚ್ಚರಿಸಿದರು, ಲಾವಣಿ ಹೇಳಿ ನೀತಿ ಬೋಧಿಸಿದರು, ಹೋಳಿ ಹಾಡು ಹೇಳಿ ಭವ್ಯ ಚರಿತ್ರೆಯನ್ನು ವಿವರಿಸಿದರು ಹಾಗೂ ಮಂಗಳಾರತಿಯನ್ನು ಹಾಡಿ ಸರ್ವರಿಗೂ ಮಂಗಳವನ್ನು ಬಯಸಿದರು. ಆದ್ದರಿಂದಲೇ ಶರೀಫರು ಸರ್ವಜನರ ಸಂತರಾದರು.

ತಮ್ಮ ಗುರುಗಳ ದೇಹಾಂತವಾದ ವರ್ಷ ೧೮೭೦ ನಂತರ, ಶರೀಫರು ಮುಂದೆ ಪೂರ್ಣ ಪ್ರಮಾಣದ ಸಂಚಾರಿ ಶರಣರಾದರು.

ತಮ್ಮ ಗುರುಗಳಾದ ಗುರು ಗೋವಿಂದ ಭಟ್ಟರಂತೆ ಶರೀಫರು ಕೂಡ ತಮ್ಮ ಅಂತ್ಯಕಾಲ ಸಮೀಪವಾಗುತ್ತಿರುವುದನ್ನು ತಮ್ಮ ತ್ರಿಕಾಲ ಜ್ಞಾನ ಶಕ್ತಿಯಿಂದ ತಿಳಿದು ದಿವ್ಯ ಸ್ಫೂರ್ತಿಯುಂಟಾಗಿ.

‘‘ಬಿಡತೀನಿ ದೇಹ ಬಿಡತೇನಿ

ಕೊಡತೀನಿ ಭೂಮಿಗೆ..

ಶಿವಲೋಕದೊಳಗೆ ನಾ’’ ಎಂದು ತಿಳಿಸಿ ಬಾಳಿದ ಶರೀಫರು ಶಿಶುನಾಳ ಗ್ರಾಮದಲ್ಲಿ ೧೮೮೯ನೇ ಜುಲೈ ೩ರಲ್ಲಿ ದೇಹತ್ಯಾಗ ಮಾಡಿದರು. ಆ ದಿನವೇ ಅವರ ೭೦ನೇ ಹುಟ್ಟಿದ ದಿನವೂ ಆಗಿತ್ತು. ಶರೀಫರು ಪ್ರತೀ ಹೆಜ್ಜೆಯಲ್ಲೂ ಗುರು ಗೋವಿಂದಭಟ್ಟರನ್ನು ಅನುಸರಿಸುತ್ತಿದ್ದರು. ಗೋವಿಂದ ಭಟ್ಟರಂತೆ ತಾವು ಸಹ ೭೦ ವರ್ಷ ಜೀವಿಸಿದರು. ಅವರ ಅಂತ್ಯವೂ ಶಾಂತಿಯುತವಾಗಿತ್ತು ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಈಗ ಗದ್ದುಗೆ ಹಾಗೂ ಶರೀಫರ ಮತ್ತು ಗುರುಗೋವಿಂದಭಟ್ಟರ ಎರಡು ಶಿಲಾಮೂರ್ತಿಗಳಿದ್ದು, ಎರಡೂ ಧರ್ಮದ ಸಂಪ್ರದಾಯದಂತೆ ಪೂಜೆ ಹರಕೆ, ಕಾಯಿಕರ್ಪೂರ ಒಂದೆಡೆಯಾದರೆ, ನಮಾಜು, ಸಕ್ಕರೆ ನೈವೇದ್ಯ ಇನ್ನೊಂದೆಡೆ - ಹೀಗೇ ಎರಡೂ ಧರ್ಮದವರೂ ಭಕ್ತಿಯಿಂದ ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಬರುವ ಭಕ್ತರು ಯಾವುದೇ ಮತೀಯ ಭಾವನೆಗೆ ಒಳಗಾಗದೆ, ಜಾತ್ಯತೀತ ಮನೋಭಾವನೆಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಯಾವುದೇ ಧರ್ಮದ ಮಾದರಿಯಲ್ಲಿ ಶರೀಫರ ಗದ್ದುಗೆ ಇಲ್ಲದಿರುವುದು ಮತ್ತೊಂದು ವಿಶೇಷ.

ಭಾರತ ದೇಶವು ವಿವಿಧ ಧರ್ಮ, ಜಾತಿ, ಭಾಷೆಗಳ ಸಂಗಮ ಕ್ಷೇತ್ರ. ಪರಸ್ಪರ ಬಾಂಧವ್ಯವೊಂದೇ ಈ ದೇಶದ ಪ್ರಗತಿಮಂತ್ರ ಇಲ್ಲವಾದರೆ ದ್ವೇಷಾಗ್ನಿ ಹತ್ತಿ ಉರಿದು ನಾಡು ಕಾಡಾಗುತ್ತದೆ. ಮೃಗೀಯ ಭಾವನೆಗಳು ಹೆಚ್ಚಾಗಿ, ಶಾಂತಿ ಅಲ್ಲೋಲ ಕಲ್ಲೋಲವಾಗಿ, ದೇಶದಲ್ಲೆಲ್ಲಾ ಅರಾಜಕತೆ ಕಾಡುತ್ತದೆ. ಶಿಶುನಾಳ ಶರೀಫರಂತಹ ಸಂತರು ಈ ನಾಡಿಗೆ ಇಂದಿಗೂ ಪ್ರಸ್ತುತವಾಗಿರುವುದು ಅವರು ಸಾರಿದ, ತೋರಿದ, ಬೆಳೆಸಿದ, ಬೆಳಗಿಸಿದ, ಆಶಿಸಿದ ತತ್ವಗಳಿಂದ. ಐಕ್ಯತೆ ಹಾಗೂ ಸೌಹಾರ್ದವನ್ನು ಬೆಳೆಸಿಕೊಳ್ಳಲು ಅವರ ವೈಚಾರಿಕ ತತ್ವ ಪದಗಳು ನೀಡುವ ಕರೆ ಮಾರ್ದನಿಗೊಳ್ಳಲು ಶರೀಫಜ್ಜ ನಮಗೆ ಸದಾ ಸ್ಮರಣೀಯರಾಗುತ್ತಾರೆ.

ನಾನು ದೂರದರ್ಶನ ಚಂದನದ ನಿರ್ದೇಶಕನಾಗಿದ್ದಾಗ, ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದಭಟ್ಟರ ಜೀವನಾಧಾರಿತ ಧಾರಾವಾಹಿಯನ್ನು ‘ಈಶ್ವರ ಅಲ್ಲಾ ನೀನೇ ಎಲ್ಲಾ’ ಎಂಬ ಹೆಸರಿನಿಂದ ನಿರ್ಮಿಸಲು ಯಜಮಾನ್ ಎಂಟರ್‌ಪ್ರೈಸಸ್‌ನ ಶ್ರೀ ಹರಿಖೋಡೆಯವರನ್ನು ಪ್ರೇರೇಪಿಸಿ, ಮಾರ್ಗದರ್ಶನ ಮಾಡಿದ್ದನ್ನು ಇಲ್ಲಿ ನೆನೆಯುತ್ತಾ, ಈ ಧಾರಾವಾಹಿಯಲ್ಲಿ ಶರೀಫರ ಹಾಗೂ ಗುರು ಗೋವಿಂದಭಟ್ಟರ ಜೀವನದಲ್ಲಿ ಯಾವ ಯಾವ ಘಟನೆಗಳು ಯಾವ ಯಾವ ಊರು ಮತ್ತು ಸ್ಥಳಗಳಲ್ಲಿ ನಡೆದಿದ್ದವೋ, ಹಾಗೂ ಯಾವ ಘಟನೆಗಳು ಶರೀಫರ ಬಾಯಿಯಿಂದ ತತ್ವಪದಗಳು ಹೊರಹೊಮ್ಮಲು ಕಾರಣವಾದವೋ ಅದೇ ಊರು ಮತ್ತು ಅದೇ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿ ಧಾರಾವಾಹಿಗೆ ನೈಜತೆಯನ್ನು ತಂದದ್ದು ವಿಶೇಷವಾಗಿತ್ತು.  ರೇಣುಕಾ ಶರ್ಮಾ ಅವರ ನಿರ್ದೇಶನದೊಂದಿಗೆ ಮೂಡಿಬಂದ ಈ ಧಾರಾವಾಹಿ ಎಷ್ಟು ಜನಪ್ರಿಯವಾಗಿತ್ತೆಂದರೆ, ಧಾರಾವಾಹಿಯು ದೂರದರ್ಶನದಲ್ಲಿ ಪ್ರಸಾರವಾಗುವ ಸಮಯದಲ್ಲಿ ಒಬ್ಬರೂ ರಸ್ತೆಯಲ್ಲಿ ಓಡಾಡುತ್ತಿರಲಿಲ್ಲ ಹಾಗೂ ಒಂದು ವಾಹನವೂ ಸಹ ರಸ್ತೆಯ ಮೇಲೆ ಚಲಿಸುತ್ತಿರಲಿಲ್ಲ. ಕರ್ಫ್ಯೂ ರೀತಿಯಲ್ಲಿ ರಸ್ತೆಗಳು ಕಾಣುತ್ತಿದ್ದವು.  ಈ ಧಾರಾವಾಹಿ ಪ್ರಸಾರದಿಂದ ಶರೀಫರನ್ನು ಹಾಗೂ ಗುರು ಗೋವಿಂದ ಭಟ್ಟರನ್ನು ದೇಶ ವಿದೇಶಗಳಲ್ಲಿರುವ ಕನ್ನಡಿಗರು ಬಹಳ ಆಸಕ್ತಿ ಮತ್ತು ಶ್ರದ್ಧೆಯಿಂದ ತಿಳಿಯುವಂತಾಯಿತು ಎಂಬುದನ್ನು ಈ ಸಮಯದಲ್ಲಿ ಸ್ಮರಿಸಿಕೊಳ್ಳುತ್ತೇನೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top