--

ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಒಂದು ಪತ್ರ

ಬಿಸಿಯೂಟದ ಬಿಸಿ ಆರದಿರಲಿ

‘ಅಕ್ಷಯಪಾತ್ರ ಫೌಂಡೇಶನ್’ ಎಂಬ ಸಂಸ್ಥೆಯೂ ಸೇರಿದಂತೆ ಇತರ ಎಲ್ಲಾ ಸಂಸ್ಥೆಗಳಿಗೆ ಧಾರ್ಮಿಕ ನಂಬಿಕೆ ಆಚರಣೆಯ ಆಧಾರದ ಮೇಲೆ ನೀಡಿರುವ ವಿನಾಯಿತಿಗಳನ್ನು ಕೂಡ ಹಿಂಪಡೆಯಬೇಕು ಹಾಗೂ ಸರಕಾರವು ಸೂಚಿಸಿರುವ ಆಹಾರಪಟ್ಟಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದೇವೆ.

ಮಾನ್ಯರೇ,

ನಾವು ಪೌಷ್ಟಿಕಾಂಶ ತಜ್ಞರು, ಸಾಮಾಜಿಕ ಹೋರಾಟಗಾರರು, ಸಂಶೋಧಕರು ಹಾಗೂ ವೈದ್ಯರನ್ನೊಳಗೊಂಡ ಒಂದು ಗುಂಪಾಗಿದ್ದು, ಕರ್ನಾಟಕದ ಕಾಳಜಿಯುಳ್ಳ ನಾಗರಿಕರಾಗಿದ್ದೇವೆ. ಕಳೆದ ಹಲವು ವರ್ಷಗಳಿಂದ ಮಕ್ಕಳ ಆಹಾರದ ಕುರಿತೂ ಕಾಳಜಿ ಹೊಂದಿದವರಾಗಿದ್ದೇವೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ಹಾಗೂ ಆಹಾರದ ಹಕ್ಕಿನ ಪ್ರಕರಣದಲ್ಲಿ ಭಾರತದ ಸುಪ್ರೀಂ ಕೋರ್ಟು ನೀಡಿರುವ ವಿವಿಧ ನಿರ್ದೇಶನಗಳಿಗನುಸಾರ (ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ ವರ್ಸಸ್ ಭಾರತ ಒಕ್ಕೂಟ ರಿಟ್ ಅರ್ಜಿ 196/2001) ಕರ್ನಾಟಕದಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ನೀಡುತ್ತಿರುವ ಆಹಾರದಲ್ಲಿ ಪೌಷ್ಟಿಕಾಂಶಗಳು ಕೂಡಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇವೆ.

1. ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ನೀಡುವುದು.

ಕರ್ನಾಟಕದಲ್ಲಿ ಮಧ್ಯಾಹ್ನದ ಬಿಸಿಯೂಟದ ಭಾಗವಾಗಿ ಮಕ್ಕಳಿಗೆ ಮೊಟ್ಟೆಯನ್ನು ನೀಡುವ ಸರಕಾರದ ನಿರ್ಧಾರ ಸ್ವಾಗತಾರ್ಹ ಕ್ರಮವಾಗಿದೆ. ಮಧ್ಯಾಹ್ನದ ಊಟದೊಂದಿಗೆ ಮೊಟ್ಟೆಯನ್ನು ಸೇರಿಸುವುದು ಶಾಲೆಗೆ ಹೋಗುವ ಮಕ್ಕಳು ಹಾಗೂ ಅವರ ಪೋಷಕರ ದೀರ್ಘಕಾಲದ ಬೇಡಿಕೆಯಾಗಿತ್ತು. ಊಟದೊಂದಿಗೆ ಮೊಟ್ಟೆಯನ್ನು ಸೇವಿಸುವುದು ಈಗಾಗಲೇ ಬಹುತೇಕ ಬೆಳೆಗಳಿಂದ ಕೂಡಿದ ಆಹಾರಕ್ಕೆ ಅಧಿಕ ಪೌಷ್ಟಿಕಾಂಶಗಳನ್ನು ಸೇರಿಸುತ್ತದೆ. ವರ್ಷಕ್ಕೆ 45 ಮೊಟ್ಟೆಗಳು ಎನ್ನುವ ನಿರ್ಧಾರ ಈಗಾಗಲೇ ಶಿಫಾರಸು ಮಾಡಿದ ವಾರಕ್ಕೆ 5 ಮೊಟ್ಟೆಗಳಿಗಿಂತ ಕಡಿಮೆಯಾಗಿದೆ. (ಅನುಬಂಧ 1). ಇದರ ಹೊರತಾಗಿ ಎಂಬಂತೆ, 9 ಹಾಗೂ 10ನೇ ತರಗತಿಗಳಲ್ಲಿ ಕಲಿಸುತ್ತಿರುವ ಮಕ್ಕಳು ಮೊಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಒಳಗೊಂಡಿರುವುದಿಲ್ಲ.

ಕೇಂದ್ರೀಕೃತ ಅಡುಗೆಮನೆಗಳನ್ನು ನಡೆಸುತ್ತಿರುವ ಹಲವು ಎನ್‌ಜಿಒಗಳು ಹಲವು ಧಾರ್ಮಿಕ ಕಾರಣಗಳನ್ನು ನೀಡಿ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ವಿರೋಧಿಸುತ್ತಿವೆ ಎಂಬುದನ್ನು ತಿಳಿದು ನಾವು ಕಳವಳಗೊಂಡಿದ್ದೇವೆ. ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 2017ರಲ್ಲಿ ನೀಡಿರುವ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಲ್ಲಿ ಸಿವಿಲ್ ಸೊಸೈಟಿ ಸಂಸ್ಥೆಗಳು (ಎನ್‌ಎಸ್‌ಒ) / ಸರಕಾರೇತರ ಸಂಘ ಸಂಸ್ಥೆ (ಎನ್‌ಜಿಒ)ಗಳ ಕಾರ್ಯನಿರ್ವಹಿಸುವಿಕೆ ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ ವೈಯಕ್ತಿಕ ಧಾರ್ಮಿಕ ನಂಬಿಕೆಗಳನ್ನು ಪಸರಿಸುವುದನ್ನು ನಿಷೇಧಿಸಲಾಗಿದೆ ಎಂಬುದನ್ನು ತಾವು ಗಮನಿಸಬೇಕು. (ಅನುಬಂಧ 2).

‘‘2.11 ಜಾತಿ, ಮತ ಹಾಗೂ ಧರ್ಮದ ಆಧಾರದ ಮೇಲೆ ಸಿಎಸ್‌ಒ/ಎನ್‌ಜಿಒಗಳು ತಾರತಮ್ಯವನ್ನು ಎಸಗಬಾರದು ಹಾಗೂ ಯಾವುದೇ ಧಾರ್ಮಿಕ ನಂಬಿಕೆಯನ್ನು ಪಸರಿಸಲು ಈ ಕಾರ್ಯಕ್ರಮವನ್ನು ಬಳಸಿಕೊಳ್ಳಬಾರದು.’’

ಈ ನಿಟ್ಟಿನಲ್ಲಿ ತಾವು ಈ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿಮ್ಮನ್ನು ವಿನಂತಿಸಿಕೊಳ್ಳುತ್ತಿದ್ದೇವೆ.

* ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮೊಟ್ಟೆಗಳನ್ನು ನೀಡುವುದನ್ನು 9 ಹಾಗೂ 10ನೇ ತರಗತಿಗಳ ಮಕ್ಕಳಿಗೂ ವಿಸ್ತರಿಸಬೇಕು ಹಾಗೂ ವಾರದ 5 ದಿನಗಳ ಕಾಲ ಮೊಟ್ಟೆಗಳನ್ನು ನೀಡಬೇಕು.

* ಈ ನಿಟ್ಟಿನಲ್ಲಿ ಯಾವುದೇ ಎನ್‌ಜಿಒ ಮಕ್ಕಳಿಗೆ ಮೊಟ್ಟೆ ವಿತರಿಸುವುದನ್ನು ವಿರೋಧಿಸಿದರೆ ಅಥವಾ ನಿರಾಕರಿಸಿದರೆ, ತಕ್ಷಣವೇ ಅವರ ಒಪ್ಪಂದವನ್ನು ರದ್ದುಪಡಿಸಬೇಕು. ಶಾಲೆಗಳಲ್ಲಿ ಅಡುಗೆಮನೆಗಳನ್ನು ನಿರ್ಮಿಸಲು / ಕಿಚನ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿದ್ದಲ್ಲಿ, ಸೂಚಿತ ನಿಯಮಗಳು ಹಾಗೂ ಗುಣಮಟ್ಟವನ್ನು ಪಾಲಿಸಿಕೊಂಡು ಮಧ್ಯಾಹ್ನದ ಬಿಸಿಯೂಟವನ್ನು ತಯಾರಿಸುವಂತೆ ಸ್ಥಳೀಯ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ತರಬೇತಿಯನ್ನು ನೀಡಬೇಕು.

2. ಗ್ರಾಮಾಂತರ ಪ್ರದೇಶಗಳಲ್ಲಿ ಕೇಂದ್ರೀಕೃತ ಅಡುಗೆಮನೆಗಳನ್ನು ಆರಂಭಿಸುವುದು ಕಾನೂನುಬಾಹಿರವಾಗಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಶಾಲಾಧಾರಿತ ಅಡುಗೆಮನೆಗಳನ್ನು ಕೇಂದ್ರೀಕೃತ ಅಡುಗೆಮನೆಗಳಿಗೆ ಹಸ್ತಾಂತರಿಸುವ ಯೋಜನೆಗಳಿವೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಸರಕಾರಿ ಶಾಲೆಗಳು ಹಾಗೂ ಸರಕಾರಿ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ನೀಡಬೇಕು ಎಂದು ಹೇಳುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಸೆಕ್ಷನ್ 5 (2013ರ ಸಂಖ್ಯೆ 20) (ಎನ್ ಎಫ್‌ಎಸ್‌ಎ 2013) ಕೇಂದ್ರೀಕೃತ ಅಡುಗೆಮನೆಗಳು ನಗರ ಪ್ರದೇಶಗಳಲ್ಲಿ ಮಾತ್ರ ಕಾರ್ಯನಿರ್ವಹಿಸಬೇಕು ಎಂಬುದನ್ನು ಸ್ಪಷ್ಟಪಡಿಸಿದೆ.

5(1) ಅನುಚ್ಛೇದ (ಬಿ) ಅಲ್ಲಿ ಒಳಗೊಂಡಿರುವ ನಿಬಂಧನೆಗಳಿಗೆ ಅನುಸಾರವಾಗಿ, 14 ವರ್ಷದ ವಯೋಮಾನದವರೆಗಿನ ಮಕ್ಕಳು ಈ ಕೆಳಗಿನ ಪೌಷ್ಟಿಕಾಂಶಗಳನ್ನು ಪಡೆಯಲು ಅರ್ಹತೆಯನ್ನು ಹೊಂದಿರುತ್ತಾರೆ, ಅವುಗಳನ್ನು ಹೆಸರಿಸುವುದಾದರೆ

(ಬಿ) ಅನುಸೂಚಿ 2ರಲ್ಲಿ ನೀಡಿರುವ ಪೌಷ್ಟಿಕಾಂಶ ಗುಣಮಟ್ಟವನ್ನು ಪೂರೈಸಲು, ಮಕ್ಕಳ ಪ್ರಕರಣದಲ್ಲಿ, ಅಂದರೆ 6ನೇ ತರಗತಿಯವರೆಗಿನ ಅಥವಾ 6 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತವಾಗಿ, ಪ್ರತಿದಿನ ಶಾಲಾ ರಜೆಯ ದಿನಗಳನ್ನು ಹೊರತುಪಡಿಸಿ, ಸ್ಥಳೀಯ ಸಂಸ್ಥೆಗಳು ನಡೆಸುವ ಎಲ್ಲಾ ಶಾಲೆಗಳಲ್ಲಿ, ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಲ್ಲಿ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಬೇಕು.

ಉಪ-ಸೆಕ್ಷನ್ (1)ರಲ್ಲಿನ ಅನುಚ್ಛೇದ (ಬಿ)ಯಲ್ಲಿ ಉಲ್ಲೇಖಿಸಲಾಗಿರುವ ಪ್ರತೀ ಶಾಲೆ ಮತ್ತು ಅಂಗನವಾಡಿಯು ಆಹಾರವನ್ನು ತಯಾರಿಸುವ, ಕುಡಿಯುವ ನೀರಿನ ಹಾಗೂ ನೈರ್ಮಲ್ಯದ ಸೌಲಭ್ಯಗಳನ್ನು ಹೊಂದಿರಬೇಕು.

ಕೇಂದ್ರ ಸರಕಾರವು ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಅಗತ್ಯಕ್ಕೆ ತಕ್ಕಂತೆ, ನಗರ ಪ್ರದೇಶಗಳಲ್ಲಿ ಆಹಾರವನ್ನು ತಯಾರಿಸಲು ಕೇಂದ್ರೀಕೃತ ಅಡುಗೆಮನೆಗಳ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013ರ ಮಾನದಂಡಗಳ ಪ್ರಕಾರ, ಗ್ರಾಮಾಂತರ ಪ್ರದೇಶಗಳಲ್ಲಿನ ಯಾವುದೇ ಶಾಲೆಯನ್ನೂ ಕೇಂದ್ರೀಕೃತ ಅಡುಗೆಮನೆ ವ್ಯವಸ್ಥೆಗೆ ನೀಡಬಾರದೆಂದು ಹಾಗೂ ಒಂದು ವೇಳೆ ಈಗಾಗಲೇ ಗ್ರಾಮಾಂತರ ಪ್ರದೇಶಗಳಲ್ಲಿನ ಶಾಲೆಗಳನ್ನು ಈ ವ್ಯವಸ್ಥೆಗೆ ನೀಡಲಾಗಿದ್ದರೆ, ಅದನ್ನು ಕೂಡಲೇ ಹಿಂಪಡೆದು, ಅಲ್ಲಿ ಶಾಲಾಧಾರಿತ ಅಡುಗೆ ಮನೆ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕೆಂದು ನಿಮ್ಮನ್ನು ಈ ಮೂಲಕ ಆಗ್ರಹಿಸುತ್ತಿದ್ದೇವೆ.

3. ನಗರ ಪ್ರದೇಶಗಳಲ್ಲಿನ ಶಾಲಾಧಾರಿತ ಅಡುಗೆ ಮನೆಗಳನ್ನು ದೊಡ್ಡ ಮಟ್ಟದಲ್ಲಿ ಹಸ್ತಾಂತರಿಸುತ್ತಿರುವುದು ಮಕ್ಕಳ ಪೌಷ್ಟಿಕಾಂಶ ಅರ್ಹತೆಗಳನ್ನು ದುರ್ಬಲಗೊಳಿಸುತ್ತಿದೆ.

ನಗರ ಪ್ರದೇಶಗಳಲ್ಲಿಯೂ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ರ ಸೆಕ್ಷನ್ (5) ಶಾಲಾಧಾರಿತ ಅಡುಗೆಮನೆಗಳನ್ನೇ ಬಳಸಬೇಕೆಂದು ಹೇಳುತ್ತದೆ. ಒಂದು ವೇಳೆ ಶಾಲಾಧಾರಿತ ಅಡುಗೆ ಮನೆಗಳನ್ನು ನಿರ್ಮಿಸಲು ಸ್ಥಳಾವಕಾಶದ ಕೊರತೆ ಎದುರಾದಲ್ಲಿ ಮಾತ್ರ ಕೇಂದ್ರೀಕೃತ ಅಡುಗೆಮನೆಗಳ ನೆರವನ್ನು ಪಡೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. (ಅನುಬಂಧ 2: ಎನ್‌ಜಿಒಗಳ ಕಾರ್ಯನಿರತಪಡಿಸುವುದರ ಕುರಿತ ಮಾರ್ಗಸೂಚಿಗಳು). ಇಲ್ಲಿ ನೀಡಿರುವ ಆದೇಶವನ್ನು ಪಾಲಿಸುವುದರ ಬದಲು, ನಾವು ಒಂದೇ ಸಮನೆ, ಅತಾರ್ಕಿಕವಾಗಿ ಶಾಲಾಧಾರಿತ ಅಡುಗೆಮನೆಗಳನ್ನು ಮುಚ್ಚಿ, ಅದರ ಬದಲಿಗೆ ಕೇಂದ್ರೀಕೃತ ಅಡುಗೆಮನೆಗಳನ್ನು ಬಳಸುವುದನ್ನು ಆರಂಭಿಸಿದ್ದೇವೆ. ಬೆಂಗಳೂರು ನಗರ ಜಿಲ್ಲೆಯನ್ನೇ ಉದಾಹರಣೆಗೆ ತೆಗೆದುಕೊಂಡರೆ, ಇಲ್ಲಿ ವಾರ್ಷಿಕ ಕಾರ್ಯ ಯೋಜನೆ ಹಾಗೂ ಬಜೆಟ್ 2019-2020 ರ ಪ್ರಕಾರ ಒಟ್ಟು ಇರುವ 2133 ಶಾಲೆಗಳ ಪೈಕಿ 2021 ಶಾಲೆಗಳಲ್ಲಿ (ಶೇ. 95) ಕೇಂದ್ರೀಕೃತ ಅಡುಗೆಮನೆಗಳು ಕಾರ್ಯನಿರ್ವಹಿಸುತ್ತಿವೆ. ಹೀಗೆ, ವಿನಾಯಿತಿ ನೀಡಲಾದ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು, ಪಾಲಿಸಬೇಕಾಗಿದ್ದ ಸಾಮಾನ್ಯ ನಿಯಮವನ್ನೇ ನಾವು ಮರೆತಿರುವಂತಿದೆ. ಈ ನೀತಿ ನಿರೂಪಣೆಗಳ ಫಲಿತಾಂಶವನ್ನು ಈ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಅನುಭವಿಸಬೇಕಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅನುಸೂಚಿ 2ರಲ್ಲಿ ಸೂಚಿಸಲಾಗಿರುವ ಹಾಗೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮೂಲಕ ಪೂರೈಸಬೇಕಾದ ಪೌಷ್ಟಿಕಾಂಶ ಅರ್ಹತೆಗಳನ್ನು ಇಲಾಖೆಯು ಕೇಂದ್ರೀಕೃತ ಅಡುಗೆಮನೆಗಳ ಮೇಲೆ ಬಹುತೇಕವಾಗಿ ಅವಲಂಬಿಸಿರುವ ಕಾರಣ ನಿರಾಕರಿಸಲಾಗುತ್ತಿದೆ. ಇದನ್ನು ನಾವು ಸರಕಾರಿ ಅಂಕಿ-ಅಂಶಗಳು, ವರದಿಗಳು, ಜೂನ್ 2019 ರಲ್ಲಿ ಕರ್ನಾಟಕದಾದ್ಯಂತ 5 ಜಿಲ್ಲೆಗಳಲ್ಲಿನ ಸುಮಾರು 30ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡುವ ಮೂಲಕ ನಾವು ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಈ ಕೆಳಗಿನಂತೆ ವಿವರಿಸುತ್ತಿದ್ದೇವೆ. (ವಿಸ್ತೃತ ವರದಿ ಅನುಬಂಧ 3ರಲ್ಲಿದೆ).

ಎ) ಸೇವನೆ ಹಾಗೂ ಆಹಾರ ಪೋಲಾಗುವುದು:

ಸಾಮಾನ್ಯವಾಗಿ, ಕೇಂದ್ರೀಕೃತ ಅಡುಗೆಮನೆಗಳ ಮೂಲಕ ಎನ್ ಜಿಒಗಳು ಪೂರೈಸುವ ಆಹಾರದ ಸೇವನೆಯು ಶಾಲಾಧಾರಿತ ಅಡುಗೆಮನೆಗಳಲ್ಲಿ ಸಿದ್ಧಪಡಿಸಿದ ಆಹಾರಕ್ಕಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಕೆಲವು ಶಾಲೆಗಳಲ್ಲಿ ಕೇಂದ್ರೀಕೃತ ಅಡುಗೆಮನೆಗಳ ಮೂಲಕ ಎನ್‌ಜಿಒಗಳು ಪೂರೈಸಿದ ಆಹಾರದ ಸೇವನೆಯ ಪ್ರಮಾಣ ಶೇ. 60ರಿಂದ ಶೇ. 80 ಪ್ರತಿಶತಕ್ಕಿಂತಲೂ ಕಡಿಮೆ ಇತ್ತು. ಈ ಆಹಾರವನ್ನು ಮಕ್ಕಳು ಕಡಿಮೆ ಪ್ರಮಾಣದಲ್ಲಿ ಸೇವಿಸಲು ಕಾರಣ ಇದಕ್ಕೆ ಬಳಕೆಯಾದ ಅಕ್ಕಿಯು ಕಳಪೆ ಗುಣಮಟ್ಟದ್ದಾಗಿರುವುದು, ರುಚಿ ಹಾಗೂ ತಾಜಾತನ ಇಲ್ಲದಿರುವುದು ಹಾಗೂ ಸಾಂಸ್ಕೃತಿಕ ಅಸಮಂಜಸತೆಯಿಂದ ಕೂಡಿರುವುದಾಗಿದೆ. ಶಾಲೆಗಳಿಗೆ ಪದೇ ಪದೇ ಹೋಗುವುದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಎನ್‌ಜಿಒಗಳು ಕ್ಷೀರಭಾಗ್ಯ ಯೋಜನೆಯಡಿ ಹಾಲನ್ನು ಹಾಗೂ ಅಕ್ಷರ ದಾಸೋಹದಡಿ ಮಧ್ಯಾಹ್ನದ ಬಿಸಿಯೂಟವನ್ನು ಸಮೀಕರಿಸುತ್ತಿದ್ದಾರೆ. ಇದು ಹಾಲು ಮತ್ತು ಊಟದ ಗುಣಮಟ್ಟವನ್ನು ಗುರುತರ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಭಾರತದ ನಿಯಂತ್ರಕರು ಹಾಗೂ ಮಹಾಲೇಖಪಾಲರು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಕುರಿತ ತಮ್ಮ ಪರ್ಫಾಮೆನ್ಸ್ ಆಡಿಟ್‌ನಲ್ಲಿ (2009-10 ರಿಂದ 2013-14) (ಅನುಬಂಧ 4) ರಲ್ಲಿ ಶಾಲೆಗಳ ಒಳಗೊಳ್ಳುವಿಕೆಯಲ್ಲಿ ಅತಿದೊಡ್ಡ ಎನ್‌ಜಿಒ ಆದ ಇಸ್ಕಾನ್ (ಅಕ್ಷಯಪಾತ್ರ ಫೌಂಡೇಶನ್) ನ ಕುರಿತು ಈ ರೀತಿ ದಾಖಲಿಸುತ್ತಾರೆ:

‘‘ಒಂದು ಊಟಕ್ಕೆ ನಿಗದಿಪಡಿಸಿದ ಅಂದರೆ 100/150 ಗ್ರಾಂನಷ್ಟು ಬೇಳೆಗಳಿಗಿಂತ ಕಡಿಮೆ ಬೇಳೆಗಳನ್ನು ಇಸ್ಕಾನ್ ಉಪಯೋಗಿಸಿದೆ. 2009-10ರಿಂದ 2013-14ವರೆಗಿನ ಅವಧಿಯಲ್ಲಿ ಆಹಾರ ಧಾನ್ಯಗಳನ್ನು ಉಪಯೋಗಿಸುವುದರ ಪ್ರಮಾಣ ಸತತವಾಗಿ ಇಳಿಕೆಯಾಗುತ್ತಲೇ ಇತ್ತು ಹಾಗೂ ಇದು 12.70 ಮತ್ತು 23.79 ರೊಳಗೆ ಮಾತ್ರ ಇದ್ದು, ಸೂಚಿತ ಕ್ಯಾಲೊರಿಗಳನ್ನು ಒಳಗೊಳ್ಳಲು ವಿಫಲವಾಗಿತ್ತು. ಸೂಚಿತ ಪ್ರಮಾಣದ ಆಹಾರ ಧಾನ್ಯಗಳನ್ನು ಒಳಗೊಂಡಿರುವ ಮಧ್ಯಾಹ್ನದ ಬಿಸಿಯೂಟವನ್ನು ನೀಡದಿರುವುದು ಮಕ್ಕಳಲ್ಲಿ ಪೌಷ್ಟಿಕಾಂಶ ಅಸಮಾನತೆ ಉಂಟಾಗಲು ಕಾರಣವಾಗಿದೆ.’’

ಮಕ್ಕಳು ಪೌಷ್ಟಿಕಾಂಶಯುಕ್ತ ಆಹಾರವನ್ನು ಸರಿಯಾಗಿ ಸೇವಿಸದಿರುವುದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013ರ ಅನುಸೂಚಿ 2ರಲ್ಲಿ ನಿಗದಿಪಡಿಸಲಾಗಿರುವ ಪ್ರೊಟೀನ್ ಹಾಗೂ ಕ್ಯಾಲೋರಿ ಅಗತ್ಯತೆಗಳನ್ನು ಉಲ್ಲಂಘಿಸಿದಂತಾಗುತ್ತದೆ. ನಾವು ಭೇಟಿ ನೀಡಿದ ಹಲವು ಶಾಲೆಗಳಲ್ಲಿ ನಮಗೆ ಕಂಡುಬಂದದ್ದೇನೆಂದರೆ, ಹಲವು ಶಾಲೆಗಳಲ್ಲಿ ಶಾಲಾಧಾರಿತ ಅಡುಗೆಮನೆಗಳನ್ನು ನಿರ್ಮಿಸಲು ಸೂಕ್ತ ಸ್ಥಳಾವಕಾಶ ಇರುವುದಲ್ಲದೆ, ಕೇಂದ್ರೀಕೃತ ಅಡುಗೆಮನೆ ವ್ಯವಸ್ಥೆಗೆಂದು ಎನ್‌ಜಿಒಗಳಿಗೆ ನೀಡುವುದಕ್ಕೂ ಮುಂಚಿತವಾಗಿ ಹಲವು ಶಾಲೆಗಳು ಶಾಲಾಧಾರಿತ ಅಡುಗೆ ಮನೆಗಳನ್ನು ನಿರ್ವಹಿಸುತ್ತಿರುತ್ತವೆ. ಆದ್ದರಿಂದ, ಅಡುಗೆಮನೆಗಳನ್ನು ನಿರ್ಮಿಸಲು ಸ್ಥಳಾವಕಾಶವನ್ನು ಹೊಂದಿರುವ ಶಾಲೆಗಳು ಹಾಗೂ ಈಗಾಗಲೇ ಅಡುಗೆಮನೆಯನ್ನು ಹೊಂದಿರುವ ಶಾಲೆಗಳನ್ನು ಮತ್ತೆ ಶಾಲಾಧಾರಿತ ಅಡುಗೆಮನೆ ವ್ಯವಸ್ಥೆಯಡಿ ತರಬೇಕು ಹಾಗೂ ಏಕಾಏಕಿ ಅವುಗಳನ್ನು ಎನ್ ಜಿಒಗಳಿಗೆ ನೀಡುವುದಕ್ಕೆ ಬದಲಾಗಿ ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ.

ಸೂಚಿತ ಆಹಾರಪಟ್ಟಿಯನ್ನು ಪಾಲಿಸದಿರುವುದು:

ಕಾಯ್ದೆಯು ಸೂಚಿಸುವ ಪೌಷ್ಟಿಕಾಂಶ ಗುಣಮಟ್ಟಗಳನ್ನು ಪಾಲಿಸದಿರುವುದರ ಹೊರತಾಗಿ, ಅನೇಕ ಎನ್‌ಜಿಒಗಳು ರಾಜ್ಯ ಮತ್ತು ಕೇಂದ್ರ ಸರಕಾರಗಳು ಸೂಚಿಸಿರುವ ನಿಯಮ ಮತ್ತು ನಿಬಂಧನೆಗಳನ್ನು ಅನುಸರಿಸದೆ ಒಪ್ಪಂದದ ಮಾರ್ಗಸೂಚಿಗಳನ್ನು ಧೈರ್ಯದಿಂದಲೇ ಉಲ್ಲಂಘಿಸುತ್ತಿವೆ. ಯೋಜನಾ ಮೌಲ್ಯಮಾಪನ ಮಂಡಳಿಯ ಸಭೆಯೊಂದು ಬೆಂಗಳೂರು (ನಗರ) ಹಾಗೂ ಧಾರವಾಡವನ್ನು ವಿಶೇಷವಾಗಿ ಗಮನವಹಿಸಬೇಕಾದ ಜಿಲ್ಲೆಗಳು (ಆಹಾರ ಧಾನ್ಯಗಳ ಅಸಮಂಜಸ ಉಪಯೋಗ ಹಾಗೂ ಕಡಿಮೆ ಮಕ್ಕಳನ್ನು ಒಳಗೊಂಡಿರುವುದು) ಎಂದು 2013 ರಲ್ಲಿ ವರದಿ ಮಾಡಿದೆ. (ಅನುಬಂಧ 5) ಇದರ ಬೆನ್ನಲ್ಲೇ ಆಂದಿನ ಕರ್ನಾಟಕದ ಸರಕಾರದ ಸಾರ್ವಜನಿಕ ಶಿಕ್ಷಣ ಆಯುಕ್ತರು ನೀಡಿದ ಹಲವು ಕಾರಣಗಳನ್ನು ಪರಾಮರ್ಶಿಸಿದ ನಂತರ ಸರಕಾರವು ಒಂದು ಆಹಾರಪಟ್ಟಿಯನ್ನು ನಿಗದಿಪಡಿಸಿತು.

‘‘ಕರ್ನಾಟಕದಾದ್ಯಂತ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ಆಹಾರವನ್ನು ಪೂರೈಸುತ್ತಿರುವ ಎನ್‌ಜಿಒಗಳು ಒಂದೇ ರೀತಿಯ ಆಹಾರವನ್ನು ಅಂದರೆ ಸ್ಥಳೀಯ ಆಹಾರ ಪದ್ಧತಿಯಂತೆ ವಿವಿಧ ಆಹಾರ ಸಾಮಗ್ರಿಗಳನ್ನು ಬಳಸದೆ ಒಂದೇ ರೀತಿಯ ತರಕಾರಿಗಳನ್ನು ಹಾಕಿ ಸಿದ್ಧಪಡಿಸಿದ ಆಹಾರವನ್ನೇ ಪ್ರತಿದಿನವೂ ನೀಡುತ್ತಿರುವುದು ಹಾಗೂ ತಮ್ಮ ಸಂಸ್ಥೆಗಳ ಆಹಾರ ಪದ್ಧತಿಯನ್ನು ಮಾತ್ರ ಬಳಸಿಕೊಂಡು ಮಕ್ಕಳಿಗೆ ಆಹಾರವನ್ನು ನೀಡುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಇದರಿಂದ ಮಕ್ಕಳು ಸಂತೋಷವಾಗಿ ಊಟ ಮಾಡದಿರುವುದು ಒಂದೆಡೆಯಾದರೆ, ಶಾಲಾ ಸಂಸ್ಥೆಗಳೂ ಈ ಆಹಾರಕ್ಕೆ ಅಸಮಧಾನವನ್ನು ವ್ಯಕ್ತಪಡಿಸಿವೆ. ಇದು ಮಾತ್ರವಲ್ಲದೆ, ಶಾಲೆಗಳಿಗೆ ಭೇಟಿಯ ವೇಳೆಯಲ್ಲಿ ಮಕ್ಕಳೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.’’

ಈ ಮೇಲಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಳಗೊಂಡಂತೆ, ಕರ್ನಾಟಕ ಸರಕಾರವು ಒಂದು ಆಹಾರಪಟ್ಟಿಯನ್ನು ಸಿದ್ಧಪಡಿಸಿತು. ಸರಕಾರದ ಈ ಅಧಿಸೂಚನೆಯ ಹೊರತಾಗಿಯೂ, ಕರ್ನಾಟಕದಲ್ಲಿ ಆಹಾರವನ್ನು ಪೂರೈಸುತ್ತಿರುವ ದೊಡ್ಡ ಎನ್ ಜಿಒಗಳಲ್ಲಿ ಒಂದಾಗಿರುವ ಅಕ್ಷಯ ಪಾತ್ರ ಫೌಂಡೇಶನ್, ತಮ್ಮ ಧಾರ್ಮಿಕ ನಂಬಿಕೆಗಳ ಕಾರಣ ಆಹಾರಪಟ್ಟಿಯನ್ನು ಪಾಲಿಸಲು ನಿರಾಕರಿಸಿದೆ. ಮೈಸೂರಿನಲ್ಲಿರುವ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆಯ ಅಧ್ಯಯನದ ಪ್ರಕಾರ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳು ಕಬ್ಬಿಣಾಂಶ ಮತ್ತು ಜಿಂಕ್ ಅಂಶವನ್ನು ಸಸ್ಯಾಧಾರಿತ ಆಹಾರಕ್ರಮದಿಂದ ಹೀರಿಕೊಳ್ಳುತ್ತವೆ ಎಂಬುದು ಸಾಬೀತಾಗಿದೆ. (ಅನುಬಂಧ-6)

{ಕರ್ನಾಟಕದಲ್ಲಿ ಶಾಲೆಗೆ ಹೋಗುತ್ತಿರುವ ವಯೋಮಾನದ ಮಕ್ಕಳಲ್ಲಿ ಈ ಎರಡು ಪೌಷ್ಟಿಕಾಂಶಗಳ ಕೊರತೆ ಅಧಿಕ ಪ್ರಮಾಣದಲ್ಲಿರುವುದು ಕಂಡು ಬಂದಿದೆ. ಇದೇ ರೀತಿ ಪ್ರಮುಖವಾಗಿ, ಸರಕಾರಿ ಶಾಲೆಗಳಲ್ಲಿ ಹಾಗೂ ಸರಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಶೇ. 94ರಷ್ಟು ಮಕ್ಕಳು ಎಸ್‌ಸಿ, ಎಸ್‌ಟಿ ಹಾಗೂ ಇತರ ಹಿಂದುಳಿದ ಸಮುದಾಯಗಳಿಗೆ ಸೇರಿದವರಾಗಿದ್ದು, ಅವರ ಸಾಂಪ್ರದಾಯಿಕ ಆಹಾರವು ಈರುಳ್ಳಿ, ಬೆಳ್ಳುಳ್ಳಿ ಹಾಗೂ ಮೊಟ್ಟೆಗಳಂತಹ ಆಹಾರ ಸಾಮಗ್ರಿಗಳನ್ನು ಯಥೇಚ್ಛವಾಗಿ ಒಳಗೊಂಡಿದೆ. (ಉಲ್ಲೇಖ: ಯುಡಿಐಎಸ್ ಇ ವರದಿ 2017-17 ಕರ್ನಾಟಕ}).

ಹೆಚ್ಚುವರಿಯಾಗಿ, ಸರಕಾರವು ನಿಗದಿಪಡಿಸಿರುವ ಆಹಾರಪಟ್ಟಿಯ ನಿಯಮಗಳನ್ನು ಪಾಲಿಸದಿರುವುದು ಕಳೆದ ಹಲವಾರು ವರ್ಷಗಳಿಂದ ಅಕ್ಷಯಪಾತ್ರ ಫೌಂಡೇಶನ್ ಸರಕಾರದೊಂದಿಗೆ ಮಾಡಿಕೊಂಡ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ. ಇದಕ್ಕೂ ಮಿಗಿಲಾಗಿ, ಈ ಮೇಲೆ ತಿಳಿಸಿದಂತೆ, ಇಲ್ಲಿ ವೈಯಕ್ತಿಕ ಧಾರ್ಮಿಕ ಆಚರಣೆಗಳನ್ನು ಪಾಲಿಸುವುದನ್ನು ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 2017ರಲ್ಲಿ ನೀಡಿರುವ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಲ್ಲಿ ಸಿವಿಲ್ ಸೊಸೈಟಿ ಸಂಸ್ಥೆಗಳು (ಎನ್‌ಎಸ್‌ಒ) / ಸರಕಾರೇತರ ಸಂಘ ಸಂಸ್ಥೆ (ಎನ್‌ಜಿಒ)ಗಳ ಕಾರ್ಯನಿರ್ವಹಿಸುವಿಕೆ ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ ನಿಷೇಧಿಸಲಾಗಿರುತ್ತದೆ.

ಆದ್ದರಿಂದ, ‘ಅಕ್ಷಯಪಾತ್ರ ಫೌಂಡೇಶನ್’ ಎಂಬ ಸಂಸ್ಥೆಯೂ ಸೇರಿದಂತೆ ಇತರ ಎಲ್ಲಾ ಸಂಸ್ಥೆಗಳಿಗೆ ಧಾರ್ಮಿಕ ನಂಬಿಕೆ ಆಚರಣೆಯ ಆಧಾರದ ಮೇಲೆ ನೀಡಿರುವ ವಿನಾಯಿತಿಗಳನ್ನು ಕೂಡ ಹಿಂಪಡೆಯಬೇಕು ಹಾಗೂ ಸರಕಾರವು ಸೂಚಿಸಿರುವ ಆಹಾರಪಟ್ಟಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದೇವೆ.

ಸಿಲ್ವಿಯಾ ಕರ್ಪಗಮ್

ಸಿದ್ಧಾರ್ಥ್ ಜೋಶಿ

ಫ್ರೊ. ಮೋಹನ್ ರಾವ್

ಸ್ವರ್ಣ ಭಟ್ 

ಡಾ. ವೀಣಾ ಶತ್ರುಘ್ನ

ಮಮತಾ ಯಜ್ಮಾನ್

ನಿರಂಜನಾರಾಧ್ಯ ವಿ.ಪಿ

ಅಶೋಕ್ ಕುಮಾರ್

ವಿದ್ಯಾ ದಿನಕರ್

(ಪೌಷ್ಟಿಕಾಂಶ ತಜ್ಞರು, ಸಾಮಾಜಿಕ ಹೋರಾಟಗಾರರು, ಸಂಶೋಧಕರು ಹಾಗೂ ವೈದ್ಯರ ಗುಂಪಿನ ಪರವಾಗಿ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top