-

ಬಿಬಿಎಂಪಿ ಚುನಾವಣೆ: ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಅನ್ಯಾಯ

-

ಸದ್ಯ, ಸರಕಾರ ಪಾಲಿಕೆಯ ವಾರ್ಡ್‌ಗಳನ್ನು ಮೀಸಲಾತಿಗೆ ಒಳಪಡಿಸಿರುವ ‘ರಾಜಕೀಯವಾಗಿ ಹಿಂದುಳಿದ ವರ್ಗಗಳು’ ಯಾವುವು? ಎಂಬುದನ್ನು ಸರಕಾರ ತಿಳಿಸುವ ಅಗತ್ಯ ಇದೆ. ಆದರೆ, ಇದಾವುದಕ್ಕೂ ಸರಕಾರ ಉತ್ತರಿಸದಿದ್ದರೆ ಅದರ ನಡೆ ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಹಾಗೊಂದು ವೇಳೆ ಸರ್ವೋಚ್ಚ ನ್ಯಾಯಾಲಯ ಆಕ್ಷೇಪಿಸಿದ್ದ ಪಟ್ಟಿ ಅನ್ವಯವೇ ಮೀಸಲಾತಿ ನಿಗದಿಪಡಿಸಿದ್ದಲ್ಲಿ, ಅದು ಆದೇಶದ ವಿರುದ್ಧವಾಗುತ್ತದೆ. ಅದಲ್ಲದೆ, ಆನಂತರದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ 2010ರ ನವೆಂಬರ್ 25ರಂದು, ನ್ಯಾ.ಜೆ.ಎಸ್.ಖೇಹರ್ ನೇತೃತ್ವದ ವಿಭಾಗೀಯ ಪೀಠ ನೀಡಿರುವ ತೀರ್ಪಿ(ರಾಜ್ಯ ಚುನಾವಣಾ ಆಯುಕ್ತ v/s ರಾಜ್ಯ ಸರಕಾರ ಮತ್ತು ಇತರರು)ಗೂ ಅದು ಸಮ್ಮತವಾಗುವುದಿಲ್ಲ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಪ್ರಜಾಪ್ರಭುತ್ವದ ನೀತಿ-ನಿಯಮದಂತೆ ನಡೆಯಬೇಕು. ಆದರೆ, ಸದ್ಯ ಅದು ನಡೆಯುವುದೇ ಅನಿಶ್ಚಯ ಎಂಬಂತಾಗಿದೆ! ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಕಾಲಮಿತಿಯೊಳಗೆ ಸರಕಾರ ಪಾಲಿಕೆಯ ವಾರ್ಡ್‌ಗಳನ್ನು ಪುನರ್ವಿಂಗಡಣೆ ಮಾಡಿ, ಮೀಸಲಾತಿಯನ್ನೂ ನಿಗದಿಪಡಿಸಿ ಅಧಿಸೂಚನೆಯನ್ನೂ ಹೊರಡಿಸಿದೆ. ಅಂದ ಮೇಲೆ ಚುನಾವಣೆ ನಡೆಯಬೇಕಲ್ಲವೇ? ಎಂಬ ಮಾತುಗಳು ಕೇಳಿಬರುವುದು ಸಹಜವೇ. ಆದರೆ, ವಿಂಗಡಣೆ ಮತ್ತು ಮೀಸಲಾತಿ ನಿಗದಿ ಮಾಡಿರುವುದು ಕಾನೂನು ಪರಿಮಿತಿಯೊಳಗಿಲ್ಲ ಎಂಬ ಟೀಕೆ ಮತ್ತು ತಕರಾರುಗಳೇ ಅನಿಶ್ಚಿತತೆಯ ಬಾಗಿಲುಗಳನ್ನು ತೆರೆದಿವೆ.

ಸರ್ವೋಚ್ಚ ನ್ಯಾಯಾಲಯ ನಿಂದನೆಯ ತೂಗುಕತ್ತಿ ಬೀಳುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ, ಸರಕಾರ ಆಗಸ್ಟ್ 3ರಂದು ಬೆಂಗಳೂರು ಪಾಲಿಕೆ ವ್ಯಾಪ್ತಿಯನ್ನು 243 ವಾರ್ಡ್ ಗಳನ್ನಾಗಿ ವಿಂಗಡಿಸಿ ಮೀಸಲಾತಿಯನ್ನೂ ನಿಗದಿಗೊಳಿಸಿ ಆದೇಶ ಹೊರಡಿಸಿ ಕೈತೊಳೆದುಕೊಂಡುಬಿಟ್ಟಿದೆ. ಆದೇಶದಂತೆ 113 ವಾರ್ಡ್ ಗಳನ್ನು ಮೀಸಲಾತಿಗೆ ಒಳಪಡಿಸಲಾಗಿದೆ.

ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಮಾಡಿರುವುದೆಲ್ಲವೂ ಮೇಲುನೋಟಕ್ಕೆ ಸರಿ ಎನಿಸಿದರೂ ಒಳಹೊಕ್ಕು ಪರಿಶೀಲಿಸಿದಾಗ ಹಿಂದುಳಿದ ವರ್ಗಗಳಿಗೆ ಸರಕಾರ ಎಸಗಿರುವ ಅನ್ಯಾಯ ಕಣ್ಣಿಗೆ ರಾಚುತ್ತದೆ.

ವಾರ್ಡ್ ವಿಂಗಡಣೆಯಿಂದ ಉಂಟಾಗಿರುವ ಪ್ರಮಾದಗಳತ್ತ ಗಮನವೀಯುವುದು ರಾಜಕೀಯ ಪಕ್ಷ ಮತ್ತು ಅವುಗಳ ಸ್ಪರ್ಧಾಳುಗಳಿಗೆ ಸಂಬಂಧಿಸಿದ ವಿಷಯ ಎಂದು ಗ್ರಹಿಸಿ ಈ ಲೇಖನವನ್ನು ಮೀಸಲಾತಿಯಿಂದಾಗಿರುವ ಪರಿಣಾಮಗಳಿಗಷ್ಟೇ ಸೀಮಿತಗೊಳಿಸಿದೆ.

ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಸುಮಾರು ಮೂರು ದಶಕಗಳ ಇತಿಹಾಸವಿದೆ. 1993ರಲ್ಲಿ ಸಂವಿಧಾನ ತಿದ್ದುಪಡಿ ಲಾಗಾಯ್ತಿನಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲಾಗಿದೆ. ಆದರೆ, ರಾಜಕೀಯ ಮೀಸಲಾತಿಗಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಕ್ರಮ ದೋಷ ಮುಕ್ತವಾಗಿರಲಿಲ್ಲ. ಸರಕಾರವು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಯುಕ್ತ ಕ್ರಮ ಅನುಸರಿಸದೆ, ಶಿಕ್ಷಣ ಮತ್ತು ಉದ್ಯೋಗ ದೃಷ್ಟಿಯಿಂದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವು ಎಂದು ಗುರುತಿಸಲಾಗಿದ್ದ ವರ್ಗಗಳನ್ನೇ ರಾಜಕೀಯವಾಗಿ ಹಿಂದುಳಿದ ವರ್ಗಗಳೆಂದೂ ಪರಿಗಣಿಸಿ, ಬೆರಳೆಣಿಕೆಯಷ್ಟೇ ಜಾತಿಗಳನ್ನು ಹೊರಗಿಟ್ಟು ಉಳಿದೆಲ್ಲಾ ಜಾತಿಗಳನ್ನೂ ಮೀಸಲಾತಿಗೆ ಒಳಪಡಿಸಿತು. ಈ ಕ್ರಮ ಯಾವ ಆಕ್ಷೇಪವಿಲ್ಲದೇ ಹಲವು ಚುನಾವಣೆಗಳಿಗೂ ಸಾಕ್ಷಿಯಾಯಿತು.

ಇಂತಿರಲು, ಸರ್ವೋಚ್ಚ ನ್ಯಾಯಾಲಯ 2010ರಲ್ಲಿ ಕೆ. ಕೃಷ್ಣಮೂರ್ತಿ ಪ್ರಕರಣದಲ್ಲಿ, ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ.50ರಷ್ಟಕ್ಕೆ ನಿಗದಿಗೊಳಿಸಿತು ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲನುವಾಗುವಂತೆ ಮೂರು ಮಜಲುಗಳ ಪರೀಕ್ಷೆ ಹಮ್ಮಿಕೊಳ್ಳುವಂತೆ ಸರಕಾರಕ್ಕೆ ಕಟ್ಟುನಿಟ್ಟಿನ ಅಪ್ಪಣೆಯನ್ನೂ ವಿಧಿಸಿತು. ಅಂದಿನ ಸರಕಾರ ಅವಸರದಲ್ಲಿ ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ.50ಕ್ಕೆ ಇಳಿಸಲು ಕ್ರಮಕೈಗೊಂಡಿತಷ್ಟೇ.ಆದರೆ, ಮತ್ತೊಂದು ಆದೇಶವಾದ ಮೂರು ಮಜಲಿನ ಪರೀಕ್ಷೆಗೆ ಮಾತ್ರ ಮುಂದಾಗಲಿಲ್ಲ ಎಂಬುದು ತಿಳಿದ ವಿಷಯವೇ.

ಸರಕಾರ 2012ರಲ್ಲಿ ಮಹಾನಗರ ಪಾಲಿಕೆಗಳಿಗೆ ವಿವಿಧ ಪ್ರವರ್ಗಗಳ ಮೀಸಲಾತಿಯನ್ನು ಆವರ್ತನೆ ಮೇಲೆ ನಿಗದಿಪಡಿಸುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಮತ್ತೆ ಅದನ್ನು ಪರಿಷ್ಕರಿಸಿ 2015ರಲ್ಲಿ ಮತ್ತೊಂದು ಆದೇಶವನ್ನು ಸರಕಾರ ಹೊರಡಿಸಿತು. ಈ ಮಾರ್ಗಸೂಚಿಗಳ ಅನ್ವಯ ಪಾಲಿಕೆಯ ವಾರ್ಡ್‌ಗಳನ್ನು ಮೀಸಲಾತಿಗೆ ಒಳಪಡಿಸಿ ಚುನಾವಣೆಯನ್ನು 2015ರಲ್ಲಿ ನಡೆಸಲಾಯಿತು. ಅದೇ ಮಾರ್ಗಸೂಚಿಗಳನ್ನು ಅನುಸರಿಸಿ ಪ್ರಸ್ತುತ 243 ವಾರ್ಡ್‌ಗಳಲ್ಲಿ 81 ವಾರ್ಡ್ ಗಳನ್ನು ಹಿಂದುಳಿದ ವರ್ಗಗಳಿಗೂ ಮತ್ತು 28 ವಾರ್ಡ್‌ಗಳನ್ನು ಪರಿಶಿಷ್ಟ ಜಾತಿಗಳಿಗೂ ಹಾಗೂ 4 ವಾರ್ಡ್‌ಗಳನ್ನು ಪರಿಶಿಷ್ಟ ಪಂಗಡಗಳಿಗೂ ಕಾಯ್ದಿರಿಸಲಾಗಿದೆ. ಹೀಗೆ ಒಟ್ಟು ವಾರ್ಡ್ ಗಳಲ್ಲಿ ಶೇಕಡಾವಾರು 46.50ರಷ್ಟು ವಾರ್ಡ್ ಗಳನ್ನು ಮಾತ್ರ ಮೀಸಲಾತಿಗೆ ಒಳಪಡಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸರಕಾರ ಒಟ್ಟಾರೆ ಮೀಸಲಾತಿಯ ಮಿತಿ ಶೇ.50ರಷ್ಟನ್ನು ಮೀರದಂತೆಯೂ ಮತ್ತು ಮೀಸಲಾತಿಗೊಳಪಡುವ ವರ್ಗಗಳ ದೃಷ್ಟಿಯಿಂದ ಶೇ.50 ರಷ್ಟಕ್ಕಿಂತ ಕಡಿಮೆಯಾಗದಂತೆಯೂ ನೋಡಿಕೊಳ್ಳಬೇಕಾದುದು ಸರಕಾರದ ಹೊಣೆ. ಆದುದರಿಂದ ಬೆಂಗಳೂರು ನಗರ ಪಾಲಿಕೆಯ ಒಟ್ಟು 243 ವಾರ್ಡ್‌ಗಳ ಪೈಕಿ 122 ಅಥವಾ 121 ವಾರ್ಡ್ ಗಳನ್ನು ಪ್ರಸ್ತುತ ಮೀಸಲಾತಿಗೊಳಪಡಿಸುವ ಅವಶ್ಯಕತೆ ಇತ್ತು.ಆದರೆ, ಮೀಸಲಾತಿಗೆ ಒಳಪಡಿಸಿರುವ ವಾರ್ಡ್ ಸಂಖ್ಯೆಗಳನ್ನು 113ಕ್ಕೆ ಸೀಮಿತಗೊಳಿಸಲಾಗಿದೆ. ಇಂತಹ ಕ್ರಮ ಅನುಸರಿಸಿದ ಪ್ರಯುಕ್ತ 8 ಅಥವಾ 9 ಸ್ಥಾನಗಳು ಮೀಸಲಾತಿಯಿಂದ ಹೊರಗುಳಿದಿವೆ. ಇಷ್ಟಕ್ಕೆಲ್ಲಾ ಸರಕಾರದ ಆದೇಶದಲ್ಲಿರುವ ದೋಷ ಪೂರಿತ ಮಾರ್ಗಸೂಚಿಗಳೇ ಕಾರಣವಾಗಿವೆ.

 ಸರಕಾರದ ಮಾರ್ಗಸೂಚಿಗಳಲ್ಲಿ ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಒಟ್ಟು ಜನಸಂಖ್ಯೆಯ, ಒಟ್ಟು ಸ್ಥಾನಗಳ ಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ವರ್ಗಗಳಿಗೆ (ಪ.ಜಾ ಮತ್ತು ಪ.ಪಂ)ಸ್ಥಾನಗಳನ್ನು ಹಾಗೂ ಹಿಂದುಳಿದ ವರ್ಗಗಳಿಗೆ 1/3ನೇ ಭಾಗದಷ್ಟು ಸ್ಥಾನಗಳನ್ನು ಮೀಸಲಿಡಬೇಕು ಎಂದು ಹೇಳಿದೆ. ಈ ಎರಡೂ ವರ್ಗಗಳ ಮೀಸಲಾತಿ ಸ್ಥಾನಗಳು ಒಂದು ವೇಳೆ ಶೇ.50ರ ಮಿತಿಗಿಂತ ಹೆಚ್ಚಿದ್ದಲ್ಲಿ, ಹಿಂದುಳಿದ ವರ್ಗಗಳ ಸ್ಥಾನಗಳನ್ನು ಕಡಿತಗೊಳಿಸಬೇಕು ಎಂದೂ ಹೇಳಿದೆ. ಈ ಮಾರ್ಗಸೂಚಿಗಳ ಅಳವಡಿಕೆಯ ನಿಮಿತ್ತ ಸದ್ಯ ಬೆಂಗಳೂರು ನಗರ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿಗಳಿಗೆ 28(ಶೇ.11.52)ಮತ್ತು ಪರಿಶಿಷ್ಟ ಪಂಗಡಗಳಿಗೆ 4 (ಶೇ.1.64)ಹಾಗೂ ಹಿಂದುಳಿದ ವರ್ಗಗಳಿಗೆ 81 (ಶೇ.33.33)ಸ್ಥಾನಗಳು, ಮೀಸಲಾತಿಗೆ ಒಳಪಟ್ಟ ಘೋಷಿತ ಸ್ಥಾನಗಳಾಗಿವೆ. ಪರಿಶಿಷ್ಟ ವರ್ಗಗಳ ಜನಸಂಖ್ಯೆ ಬೆಂಗಳೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ರಾಜ್ಯ ಸರಾಸರಿ ಪರಿಶಿಷ್ಟ ವರ್ಗಗಳ ಜನಸಂಖ್ಯೆಗಿಂತ ಗಣನೀಯವಾಗಿ ಕಡಿಮೆ ಇರುವ ಪ್ರಯುಕ್ತ, ಒಟ್ಟಾರೆ ಮೀಸಲಾತಿ ಶೇ.46.50ರ ಮಿತಿಯಲ್ಲಿಯೇ ಇದೆ. ಆದುದರಿಂದ ಹಿಂದುಳಿದ ವರ್ಗಗಳ ಸ್ಥಾನಗಳ ಸಂಖ್ಯೆಯನ್ನು ಕಡಿತಗೊಳಿಸಬೇಕಾದ ಪ್ರಮೇಯವೇ ಕಂಡುಬಂದಿಲ್ಲ. ಇಲ್ಲಿ ಒಟ್ಟು ಮೀಸಲಾತಿ ಶೇ.46.50ರಷ್ಟಕ್ಕೆ ಸೀಮಿತವಾಗಿರುವುದರಿಂದ ಅದನ್ನು, ಶೇ.50ರಷ್ಟಕ್ಕೇರಿಸಲು ಅವಕಾಶ ಖಂಡಿತ ಇದೆ.ಆದ್ದರಿಂದ, ಉಳಿದ ಶೇ 3.50ರಷ್ಟು ಅಂದರೆ 8 ಅಥವಾ 9 ಸ್ಥಾನಗಳನ್ನು ಹಿಂದುಳಿದ ವರ್ಗಗಳಿಂದ ತುಂಬಬೇಕು. ಅದಕ್ಕಾಗಿ ಸರಕಾರದ ಮಾರ್ಗಸೂಚಿಯಲ್ಲಿ ಸ್ವಲ್ಪಮಾರ್ಪಾಡು ಮಾಡುವ ಅವಶ್ಯಕತೆ ಇದೆ. ಹಾಗೊಂದು ವೇಳೆ, ಸರಕಾರ ಈ ಅಗತ್ಯ ಕ್ರಮಕ್ಕೆ ಮುಂದಾಗದಿದ್ದಲ್ಲಿ, ಹಿಂದುಳಿದ ವರ್ಗಗಳಿಗೆ ಅದು ಎಸಗುವ ಘೋರ ಅನ್ಯಾಯ.

ಹಿಂದುಳಿದ ವರ್ಗಗಳನ್ನು ‘ಎ’ ಮತ್ತು ‘ಬಿ’ ಎಂದು, ವರ್ಗಗಳಾಗಿ ವಿಭಾಗಿಸಿ 81 ವಾರ್ಡ್‌ಗಳನ್ನು ಮೀಸಲಾತಿಗೆ ಒಳಪಡಿಸಿರುವುದು ಕಂಡುಬಂದಿದೆ. ಈ ಹಿಂದೆ ಅಸ್ತಿತ್ವದಲ್ಲಿದ್ದ ಹಾಗೂ ‘ರಾಜಕೀಯವಾಗಿ ಹಿಂದುಳಿದ ವರ್ಗಗಳು’ ಎಂದೂ ನಿರ್ಣಯಿಸಿ ಪಟ್ಟಿ ಮಾಡಲಾಗಿದ್ದ ವರ್ಗಗಳನ್ನೇ ಪರಿಗಣಿಸಲಾಗಿದೆಯೋ ಅಥವಾ ನಿವೃತ್ತ ನ್ಯಾಯಮೂರ್ತಿ ಡಾ. ಭಕ್ತವತ್ಸಲ ಆಯೋಗದ ವರದಿ ಆಧರಿಸಿ ಹೊಸದಾಗಿ ಮಾಡಿರುವ ಪಟ್ಟಿಯನ್ನು ಅಳವಡಿಸಿಕೊಳ್ಳಲಾಗಿದೆಯೋ ಎಂಬುದನ್ನು ಸರಕಾರ ಸ್ಪಷ್ಟಪಡಿಸದೆ ಬಾಯಿ ಹೊಲಿದುಕೊಂಡು ಕುಳಿತಿದೆ. ಸರಕಾರದ ಈ ಅಸಹನೀಯ ಮೌನ ಕೆಲವೊಂದು ಸಂಶಯಗಳಿಗೆ ಎಡೆಮಾಡಿಕೊಟ್ಟಿರುವುದಂತೂ ನಿಜ. ಈ ಹಿನ್ನೆಲೆಯಲ್ಲಿ ಕೆಲ ಅಂತರಂಗದ ಅಂಶಗಳು ಪುನಃ ತೆರೆದುಕೊಳ್ಳುತ್ತವೆ.

ಕೃಷ್ಣಮೂರ್ತಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ಮತ್ತೊಂದು ಆದೇಶದಂತೆ ಮೂರು ಮಜಲಿನ ಪರೀಕ್ಷೆಯನ್ನು ಸರಕಾರ ಕೈಗೊಂಡು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಬೇಕಾಗಿದೆ. ಈ ನಿಟ್ಟಿನಲ್ಲಿ, ಸರಕಾರ ನಿವೃತ್ತ ನ್ಯಾಯಮೂರ್ತಿ ಡಾ. ಭಕ್ತವತ್ಸಲ ಆಯೋಗ ರಚಿಸಿ, 3 ತಿಂಗಳ ಅತ್ಯಲ್ಪಅವಧಿಯಲ್ಲಿ 3 ಮಜಲಿನ ಕಾರ್ಯ ಪೂರೈಸಿ ವರದಿಯನ್ನು ನೀಡಲು ಕಟ್ಟಪ್ಪಣೆ ವಿಧಿಸಿತ್ತು. ಆಯೋಗ 90 ದಿನಗಳವರೆಗೂ ಕಾಯದೆ ಕೇವಲ 46 ದಿನಗಳಲ್ಲಿಯೇ ವರದಿ ಸಲ್ಲಿಸಿ ಚಾರಿತ್ರಿಕ ದಾಖಲೆಯನ್ನೇ ಸೃಷ್ಟಿಸಿ ಬಿಟ್ಟಿದೆ! ಮಾಂತ್ರಿಕನೋರ್ವನನ್ನು ಆಯೋಗ ಮೈಮೇಲೆ ಆವಾಹಿಸಿಕೊಂಡು ವರದಿ ಸಿದ್ಧಪಡಿಸಿರಬಹುದೇನೋ ಎಂದು ಯಾರಿಗಾದರೂ ಅನಿಸುತ್ತದೆ. ಆಯೋಗ ವರದಿಯನ್ನು ಸರಕಾರಕ್ಕೆ ಸಲ್ಲಿಸಿರುವುದಷ್ಟೇ ತಿಳಿದುಬಂದಿರುವ ವಿಷಯ. ಆದರೆ, ವರದಿಯಲ್ಲೇನಿದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಸರಕಾರವೂ ಅದನ್ನು ಪ್ರಕಟಿಸುವ ಗೋಜಿಗೂ ಹೋಗಲೇ ಇಲ್ಲ. ಸರಕಾರ ಜನಸಾಮಾನ್ಯರ ಅವಗಾಹನೆಗೆ ತರದೆ ಅದನ್ನು ಜಾರಿಗೊಳಿಸುವ ತುರ್ತಾದರೂ ಏನು? ಎಂಬ ಪ್ರಶ್ನೆಯಂತೂ ಇದ್ದೇ ಇದೆ. ಇಷ್ಟಾದರೂ ವರದಿ ಪ್ರಕಟಿಸುವಂತೆ ರಾಜಕೀಯ ಪಕ್ಷಗಳಾಗಲಿ ಅಥವಾ ಹಿಂದುಳಿದ ವರ್ಗಗಳ ಅಗ್ರಣಿಗಳಾಗಲಿ ಒತ್ತಡ ತರದಿರುವುದು ಕೂಡಾ, ಸರಕಾರ ಮತ್ತು ರಾಜಕೀಯ ಪಕ್ಷಗಳ ನಡುವಿರುವ ನೈತಿಕತೆಗೆ ಹೊರತಾದ ಒಡಂಬಡಿಕೆ ಇರಬಹುದು ಎಂಬ ಗುಮಾನಿ ಕಾಡದಿರದು.

 ಸರ್ವೋಚ್ಚ ನ್ಯಾಯಾಲಯ, ಪ್ರಾಯೋಗಿಕ ದತ್ತಾಂಶಗಳನ್ನು ಕಟ್ಟುನಿಟ್ಟಿನ ಪರೀಕ್ಷೆಗೊಳಪಡಿಸಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಸ್ಪಷ್ಟ ಮಾತಿನಲ್ಲಿ ಹೇಳಿದೆ. ನ್ಯಾ.ಭಕ್ತವತ್ಸಲ ಆಯೋಗ ಈ ಅತ್ಯಲ್ಪ ಅವಧಿಯಲ್ಲಿ ದತ್ತಾಂಶಗಳನ್ನು ಹೇಗೆ ಸಂಗ್ರಹಿಸಿದೆ ಹಾಗೂ ಯಾವ ಮಾನದಂಡಗಳನ್ನು ಅನುಸರಿಸಿ ಆ ವರ್ಗಗಳನ್ನು ಗುರುತಿಸಿದೆ ಎಂಬುದೇ ಯಾರಿಗೂ ತಿಳಿದಿಲ್ಲ. ಸರಕಾರ ವರದಿಯನ್ನು ಸ್ವೀಕರಿಸಿದ ನಂತರ, ಮೊದಲಿಗೆ ವರದಿಯನ್ನು ಅಂಗೀಕರಿಸಬೇಕು ಮತ್ತು ಅದನ್ನು ಕಾರ್ಯನಿರ್ವಾಹಕ ಆದೇಶ ಹೊರಡಿಸುವುದರ ಮೂಲಕ ಜಾಹೀರು ಪಡಿಸಬೇಕು. ಆನಂತರವಷ್ಟೇ ಅವುಗಳನ್ನು ಮೀಸಲಾತಿಗೆ ಒಳಪಡಿಸಬೇಕು.ಆದರೆ ಸರಕಾರ ಮಾತ್ರ ಇದ್ಯಾವ ಪ್ರಕ್ರಿಯೆಗಳನ್ನು ಅನುಸರಿಸದೆ ಜನತೆಯನ್ನು ಕಗ್ಗತ್ತಲಿನಲ್ಲಿಟ್ಟಿದೆ. ಸದ್ಯ, ಸರಕಾರ ಪಾಲಿಕೆಯ ವಾರ್ಡ್‌ಗಳನ್ನು ಮೀಸಲಾತಿಗೆ ಒಳಪಡಿಸಿರುವ ‘ರಾಜಕೀಯವಾಗಿ ಹಿಂದುಳಿದ ವರ್ಗಗಳು’ ಯಾವುವು? ಎಂಬುದನ್ನು ಸರಕಾರ ತಿಳಿಸುವ ಅಗತ್ಯ ಇದೆ. ಆದರೆ, ಇದಾವುದಕ್ಕೂ ಸರಕಾರ ಉತ್ತರಿಸದಿದ್ದರೆ ಅದರ ನಡೆ ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಹಾಗೊಂದು ವೇಳೆ ಸರ್ವೋಚ್ಚ ನ್ಯಾಯಾಲಯ ಆಕ್ಷೇಪಿಸಿದ್ದ ಪಟ್ಟಿ ಅನ್ವಯವೇ ಮೀಸಲಾತಿ ನಿಗದಿಪಡಿಸಿದ್ದಲ್ಲಿ, ಅದು ಆದೇಶದ ವಿರುದ್ಧವಾಗುತ್ತದೆ. ಅದಲ್ಲದೆ, ಆನಂತರದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ 2010ರ ನವೆಂಬರ್ 25ರಂದು, ನ್ಯಾ.ಜೆ.ಎಸ್.ಖೇಹರ್ ನೇತೃತ್ವದ ವಿಭಾಗೀಯ ಪೀಠ ನೀಡಿರುವ ತೀರ್ಪಿ(ರಾಜ್ಯ ಚುನಾವಣಾ ಆಯುಕ್ತ vs ರಾಜ್ಯ ಸರಕಾರ ಮತ್ತು ಇತರರು)ಗೂ ಅದು ಸಮ್ಮತವಾಗುವುದಿಲ್ಲ. ಉಚ್ಚ ನ್ಯಾಯಾಲಯ ರಾಜ್ಯ ಸರಕಾರ ಸಿದ್ಧಪಡಿಸಿರುವ ಹಿಂದುಳಿದ ವರ್ಗಗಳ ಪಟ್ಟಿಯನ್ನು, ಅಂದು ಯಾರೂ ಪ್ರಶ್ನಿಸಿರುವುದಿಲ್ಲ ಎಂಬ ಅಂಶವನ್ನು ಒತ್ತಿ ಹೇಳಿದೆ ಮತ್ತು ಪಟ್ಟಿಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಸೇರಿರುವುದರಿಂದ, ಅವು ಹೊಂದಿರುವ ರಾಜಕೀಯ ಪ್ರಾತಿನಿಧ್ಯದ ದತ್ತಾಂಶ(2010 ರ ಅವಧಿ)ಗಳನ್ನು ತೀರ್ಪಿನಲ್ಲಿ ದಾಖಲಿಸಿದೆ. ಆ ಪ್ರಕಾರ, ವಿಧಾನಸಭೆಯಲ್ಲಿ ಲಿಂಗಾಯತ-57 ಮತ್ತು ಒಕ್ಕಲಿಗ -43 ಸದಸ್ಯರು ಹಾಗೂ ವಿಧಾನಪರಿಷತ್‌ನಲ್ಲಿ ಲಿಂಗಾಯತ-24 ಮತ್ತು ಒಕ್ಕಲಿಗ -13 ಸದಸ್ಯರು, ಹಾಗೆಯೇ ಜಿಲ್ಲಾ ಪಂಚಾಯತ್‌ಗಳಲ್ಲಿ (ಒಟ್ಟು 863) ಲಿಂಗಾಯತ- 254 ಮತ್ತು ಒಕ್ಕಲಿಗ-187 ಸದಸ್ಯರೂ ಸ್ಥಾನ ಪಡೆದುಕೊಂಡು, ಆ ಜಾತಿಗಳು ಹೊಂದಿರುವ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ರಾಜಕೀಯವಾಗಿ ಆಧಿಪತ್ಯ ಪಡೆದುಕೊಂಡಿವೆ ಎಂಬ ಅಂಶವನ್ನು ನ್ಯಾಯಾಲಯ ತೀರ್ಪಿನಲ್ಲಿ ದಾಖಲಿಸಿ, ಈ ರೀತಿ ಅಭಿಪ್ರಾಯಪಟ್ಟಿದೆ -‘... It would be legitimate for the state government to exclude all the known accepted and acclaimed 'politically advanced' castes from the list of backward classes for the purpose of reservation in the ensuing elections.

ಉಚ್ಚ ನ್ಯಾಯಾಲಯ ಈ ರೀತಿ ನಿರ್ಣಯಾತ್ಮಕ ಅಭಿಪ್ರಾಯ ನೀಡಿದ್ದರೂ, ನ್ಯಾ.ಭಕ್ತವತ್ಸಲ ಆಯೋಗ, ಇದಾವುದನ್ನೂ ಗಮನಿಸದಿರುವುದು ವಿಷಾದ ತರುವ ಸಂಗತಿ. ಆಯೋಗ ಯಾರದೋ ಮರ್ಜಿಗೆ ಒಳಗಾಗಿ ಕಾಲಕಾಲಕ್ಕೆ ನ್ಯಾಯಾಲಯಗಳು ನೀಡಿರುವ ತೀರ್ಪಿನ ಅಂಶಗಳನ್ನು ಮನಗಾಣದೆ ವರದಿ ನೀಡಿರುವ ಸಾಧ್ಯತೆಯೂ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಇಷ್ಟೆಲ್ಲಾ ಲೋಪದೋಷಗಳನ್ನು ಇಟ್ಟುಕೊಂಡು ಬಿಬಿಎಂಪಿಯ ಚುನಾವಣೆಗಾಗಿ ವಾರ್ಡ್‌ಗಳ ಮೀಸಲಾತಿ ಯನ್ನು ನಿಗದಿಪಡಿಸಿರುವುದು, ಪ್ರಾಮಾಣಿಕವಾಗಿ ಚುನಾವಣೆ ನಡೆಸುವುದಕ್ಕಲ್ಲ ಎಂಬುದು ಸಾಮಾನ್ಯನಿಗೂ ಅರ್ಥವಾಗದ ವಿಷಯವೇನಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top