-

ದ್ವೇಷ, ವಿಭಜನೆ ವ್ಯಾಪಕವಾಗಿರುವ ಈ ಕಾಲದಲ್ಲಿ ಆ ಹುತಾತ್ಮರ ಸ್ಮರಣೆ ಅತ್ಯಗತ್ಯ

ಅಬ್ದುಲ್ ಖಾದರ್ ಮತ್ತು ಪೆನಾಂಗ್-20 ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಕ್ಕೆ 2022ರಲ್ಲಿ ಏಕೆ ವಿಶೇಷ ಮಹತ್ವವಿದೆ ?

-

‘ಆಝಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ಭಾರತಕ್ಕೆ ಸ್ವಾತಂತ್ರ ಲಭಿಸಿದ 75 ವರ್ಷಗಳ ಬಳಿಕ ಸ್ವಾತಂತ್ರಕ್ಕಾಗಿ ಹೋರಾಡಿದ್ದ ಅನೇಕ ಅಜ್ಞಾತ ವೀರರನ್ನು ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಆದಾಗ್ಯೂ ಅಜ್ಞಾತರ ಮೇಲಿನ ಈ ಗಮನ ಕೇಂದ್ರೀಕರಣ ಮತ್ತು ತಿಳಿದಿರುವವರ ಬಗ್ಗೆ ಅಷ್ಟಾಗಿ ಗಮನ ಹರಿಸದಿರುವುದರ ಹಿಂದೆ ರಾಜಕೀಯವೂ ಅಡಗಿದೆ, ಆದರೆ ನಾವು ಅದನ್ನು ಕಡೆಗಣಿಸಬಹುದು. ನಾವು ವಸಾಹತುಶಾಹಿ ಆಡಳಿತದಿಂದ ಮುಕ್ತರಾಗಲು ತಮ್ಮ ಬಲಿದಾನ ನೀಡಿದ ಅನೇಕ ಅಜ್ಞಾತ ಪುರುಷರು ಮತ್ತು ಮಹಿಳೆಯರು ಇತಿಹಾಸದ ಪುಟಗಳಲ್ಲಿ ತಮ್ಮ ಸ್ಥಾನವನ್ನು ಪಡೆಯಲೇಬೇಕು ಮತ್ತು ಇದಕ್ಕಾಗಿ ವಿಶೇಷ ಪ್ರಯತ್ನವನ್ನು ಮಾಡುತ್ತಿರುವುದಕ್ಕೆ ನಾವು ಕೃತಜ್ಞರಾಗಿರಬೇಕು.

ಇದು ಅಂತಹ ಓರ್ವ ಹುತಾತ್ಮ ಮತ್ತು ಆತನ ಒಡನಾಡಿಗಳ ಕಥನವಾಗಿದೆ. ತಿರುವಾಂಕೂರಿನ ಅಬ್ದುಲ್ ಖಾದರ್ ಅವರ ಕಥೆಯನ್ನು ಅತ್ಯಂತ ವಿಶೇಷ ಕಾರಣಗಳಿಂದಾಗಿ ಭಾರತದಾದ್ಯಂತ ಮತ್ತೆ ಮತ್ತೆ ಹೇಳಬೇಕಿದೆ.

77 ವರ್ಷಗಳ ಹಿಂದೆ,1943,ಸೆ.9ರಂದು ಮದ್ರಾಸ್ ಜೈಲಿನಲ್ಲಿ ಗಲ್ಲುಗಂಬವನ್ನೇರುವುದನ್ನು ಕಾಯುತ್ತಿದ್ದ ಯುವಕ ತ್ರಿವಾಂಡ್ರಂ (ಈಗಿನ ತಿರುವನಂತಪುರ) ಸಮೀಪದ ವಕ್ಕಂ ಗ್ರಾಮದಲ್ಲಿದ್ದ ತನ್ನ ತಂದೆಗೆ ಪತ್ರವೊಂದನ್ನು ಬರೆದಿದ್ದ. 

‘ಪ್ರೀತಿಯ ಅಪ್ಪಾ,ದೇವರು ನನಗೆ ಶಾಂತಿಯುತ ಮತ್ತು ನೆಮ್ಮದಿಯ ಮನಸ್ಸನ್ನು ಕರುಣಿಸಿದ್ದಾನೆ. ನನ್ನ ಮತ್ತು ನಿಮ್ಮ ಈಗಿನ ಅಸಹಾಯಕತೆಯಲ್ಲಿ ನಾವು ದ್ವೇಷಿಸಬಾರದು ಅಥವಾ ವಿಚಲಿತರಾಗಬಾರದು. ಇದು ದೇವರ ಚಿತ್ತಕ್ಕೆ ಮಣಿದು ಸಂತೋಷದಿಂದ ಜೀವವನ್ನು ತ್ಯಾಗ ಮಾಡಬೇಕಾದ ಕ್ಷಣವಾಗಿದೆ.
  
ಪ್ರತಿಯೊಂದು ಪ್ರಾಣಿಯಂತೆ ಮನುಷ್ಯನೂ ಸಾಯುವುದು ವಿಧಿಲಿಖಿತವಾಗಿದ್ದರೂ ಆತ ತನ್ನ ಜೀವನಕ್ಕೆ ಒಂದು ಗುರಿ ಮತ್ತು ಅರ್ಥವನ್ನು ನೀಡಲು ಪಶುವಿನ ಮಟ್ಟಕ್ಕಿಂತ ಮೇಲಕ್ಕೇರುತ್ತಾನೆ. ಅವನು ಅದಕ್ಕೊಂದು ಸುಗಂಧ ಮತ್ತು ಉದ್ದೇಶವನ್ನು ನೀಡಲು ಪ್ರಯತ್ನಿಸುತ್ತಾನೆ;ಸಾಂದರ್ಭಿಕವಾಗಿ ಆತ ತನ್ನ ಆದರ್ಶಗಳಿಗೆ ಗಟ್ಟಿಯಾಗಿ ಅಂಟಿಕೊಂಡು ತನ್ನನ್ನೂ ಮರೆಯುತ್ತಾನೆ ಮತ್ತು ಸಾವಿಗೆ ಸವಾಲೊಡ್ಡುತ್ತಾನೆ. ಹೀಗಾಗಿ ಅವನು ಏನನ್ನೂ ಮಾಡಲೂ,ಯಾವುದೇ ಸಂದರ್ಭವನ್ನು ಪ್ರಾಮಾಣಿಕತೆಯಿಂದ ಮತ್ತು ನಿಸ್ವಾರ್ಥದಿಂದ ಎದುರಿಸಲು ಸಿದ್ಧನಾಗಿರುತ್ತಾನೆ. ಅವನು ತಕ್ಷಣ ಕ್ರಮವನ್ನು ಆರಂಭಿಸುತ್ತಾನೆ....’

ಈ ಯುವಕ ಮರುದಿನ ಅಂದರೆ 1943 ಸೆ.20ರ ಶುಕ್ರವಾರ ನಸುಕಿನಲ್ಲಿ ಗಲ್ಲಿಗೇರಿಸಲ್ಪಟ್ಟ ನಾಲ್ವರಲ್ಲಿ ಓರ್ವನಾಗಿದ್ದ. ಈ ಎಲ್ಲರೂ 20ರಿಂದ 30ರ ನಡುವಿನ ವಯೋಮಾನದವರಾಗಿದ್ದರು. ಅವರು ದೇಶದ ಸ್ವಾತಂತ್ರಕ್ಕಾಗಿ ಭೂಗತರಾಗಿ ಹೋರಾಡಲು ಆಗ ಮಲಯದಲ್ಲಿದ್ದ ಪೆನಾಂಗ್ನಿಂದ ಪ್ರಯಾಣಿಸಿ ಬ್ರಿಟಿಷರ ದಬ್ಬಾಳಿಕೆಯಲ್ಲಿದ್ದ ಭಾರತವನ್ನು ಪ್ರವೇಶಿಸಿದ್ದ 20 ಜನರ ಗುಂಪಿನ ಸದಸ್ಯರಾಗಿದ್ದರು. ಎಲ್ಲ 20 ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಬಳಿಕ ಅವರ ಪೈಕಿ ನಾಲ್ವರಿಗೆ ‘ದೊರೆಯ ವಿರುದ್ಧ ಯುದ್ಧವನ್ನು ಸಾರಿದ್ದಕ್ಕಾಗಿ ’ ಗಲ್ಲುಶಿಕ್ಷೆಯನ್ನು ವಿಧಿಸಲಾಗಿತ್ತು.
 
ಭಾರತದ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣ ನೀಡಿದ್ದ ಪುರುಷರು ಮತ್ತು ಮಹಿಳೆಯರ (ಈ ಪ್ರಕರಣದಲ್ಲಿ ಕೇವಲ ಪುರುಷರು) ಹಲವಾರು ಕಥೆಗಳ ನಡುವೆ ಇದು ಅಷ್ಟೊಂದು ಪ್ರಸಿದ್ಧಿ ಪಡೆದಿರದ ಕಥೆಯಾಗಿದೆ. ಇದು ಈಗ ದೇಶವನ್ನು ಆವರಿಸಿಕೊಂಡಿರುವ ನಕಲಿ ಮತ್ತು ಕೊಳಕು ರಾಷ್ಟ್ರವಾದವನ್ನು ಅಪಹಾಸ್ಯ ಮಾಡುವ ಕಥೆಯಾಗಿದೆ.

ಪೆನಾಂಗ್ ನಲ್ಲಿ ತರಬೇತಿ

1942ರ ಆರಂಭದಲ್ಲಿ ಜಪಾನೀಯರು ಬ್ರಿಟಿಷ್,ಫ್ರೆಂಚ್ ಮತ್ತು ಡಚ್ ವಸಾಹತುಶಾಹಿ ಶಕ್ತಿಗಳಿಂದ ಆಗ್ನೇಯ ಏಶ್ಯಾ ಪ್ರದೇಶವನ್ನು ವಶಪಡಿಸಿಕೊಂಡಾಗಿನಿಂದ ಈ ಕಥೆಯು ಆರಂಭಗೊಳ್ಳುತ್ತದೆ. ಇದಕ್ಕೂ ಮುನ್ನ ಕೆಲಸವನ್ನು ಹುಡುಕಿಕೊಂಡು ಈ ಪ್ರದೇಶವನ್ನು ತಲುಪಿದ್ದ ಅನೇಕ ಭಾರತೀಯ ಯುವಕರು ಆಗ್ನೇಯ ಏಶ್ಯಾದಲ್ಲಿ ಭಾರತದ ಸ್ವಾತಂತ್ರಕ್ಕಾಗಿ ಹೋರಾಡುತ್ತಿದ್ದ ರಾಜಕೀಯ ಸಂಘಟನೆ ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ನತ್ತ ಆಕರ್ಷಿತರಾಗಿದ್ದರು. ಸುಭಾಶ್ ಚಂದ್ರ ಬೋಸ್ ಅವರು 1943ರಲ್ಲಿ ನಾಯಕತ್ವ ವಹಿಸಿಕೊಳ್ಳುವ ಮುನ್ನ ಕ್ಯಾ.ಮೋಹನ್ ಸಿಂಗ್ ಅವರು ಮುನ್ನಡೆಸುತ್ತಿದ್ದ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್ಎ)ಯು ಲೀಗ್ ನ ಸಶಸ್ತ್ರ ಘಟಕವಾಗಿತ್ತು.

ಯುವಕರನ್ನು ಭರ್ತಿ ಮಾಡಿಕೊಳ್ಳಲು ಮತ್ತು ಅವರನ್ನು ಗುಂಪುಗಳಲ್ಲಿ ಭಾರತಕ್ಕೆ ಕಳುಹಿಸಲು ಲೀಗ್ ನಿರ್ಧರಿಸಿತ್ತು. ಪೆನಾಂಗ್ನಲ್ಲಿಯ ಲೀಗ್ ನ ಇಂಡಿಯನ್ ಸ್ವರಾಜ್ ಇನ್ಸ್ಟಿಟ್ಯೂಟ್ನಲ್ಲಿ 50 ಜನರ ಮೊದಲ ತಂಡಕ್ಕೆ ಒಂದು ತಿಂಗಳು ಜಪಾನೀಯರಿಂದ ತರಬೇತಿಯನ್ನು ನೀಡಲಾಗಿತ್ತು. ಆಗಸ್ಟ್ 1942ರಲ್ಲಿ ಚಲೇಜಾವ್ ಚಳವಳಿ ಆರಂಭಗೊಂಡ ಬಳಿಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಭೂಗತ ಚಟುವಟಿಕೆಗಳಲ್ಲಿ ಸೇರಲು ಈ ತಂಡದ ಸದಸ್ಯರು ರಹಸ್ಯವಾಗಿ ಭಾರತಕ್ಕೆ ಪ್ರಯಾಣಿಸಲಿದ್ದರು. ಆದರೆ ತಮಗೆ ಬೇರೆಯೇ ಆಲೋಚನೆಗಳಿದ್ದವು ಎನ್ನುವುದನ್ನು ಜಪಾನೀಯರು ನಂತರ ತೋರಿಸಿದ್ದರು.

1942ರ ಸೆಪ್ಟಂಬರ್ ಮತ್ತು ಅಕ್ಟೋಬರ್ ನಡುವೆ ಪೆನಾಂಗ್ನಲ್ಲಿಯ 50 ಯುವಕರ ಪೈಕಿ 20 ಜನರು ಮೂರು ತಂಡಗಳಲ್ಲಿ ಭಾರತಕ್ಕೆ ತೆರಳಿದ್ದರು. ಎರಡು ಜಲಾಂತರ್ಗಾಮಿಗಳಲ್ಲಿ 10 ಜನರು ಮತ್ತು ಭೂಮಾರ್ಗವಾಗಿ 10 ಜನರು ಪ್ರಯಾಣಿಸಿದ್ದರು. ಐವರು ಯುವಕರ ಒಂದು ತಂಡವು ರಬ್ಬರ್ ದೋಣಿಯಲ್ಲಿ ಮಲಬಾರ್ ಕರಾವಳಿಯ ತಾನೂರು ಸಮೀಪ ತೀರವನ್ನು ಸೇರಿದ್ದರೆ, ಐವರ ಎರಡನೇ ಗುಂಪು ಗುಜರಾತಿನ ಕಥಿಯಾವಾರ್ ಕರಾವಳಿಯ ದ್ವಾರಕಾ ಸಮೀಪ ಇಳಿದಿತ್ತು. 10 ಯುವಕರ ಮೂರನೇ ಗುಂಪು ಭಾರತ-ಬರ್ಮಾ ಗಡಿಯನ್ನು ದಾಟಿ ದೇಶದೊಳಗೆ ಪ್ರವೇಶಿಸಿತ್ತು.

ಆದರೆ ಈ ಎಲ್ಲರನ್ನು ದೇಶವನ್ನು ಪ್ರವೇಶಿಸಿದ ಬೆನ್ನಲ್ಲೇ ಪತ್ತೆ ಹಚ್ಚಿ ಬಂಧಿಸಲಾಗಿತ್ತು ಮತ್ತು ಮದ್ರಾಸ್ ಜೈಲಿನಲ್ಲಿರಿಸಲಾಗಿತ್ತು. ಈ 20 ಜನರ ವಿರುದ್ಧ ಓರ್ವ ಮಾಫಿ ಸಾಕ್ಷಿದಾರನಾಗಿ ಪರಿವರ್ತನೆಗೊಂಡಿದ್ದ ಮತ್ತು ಇತರ 19 ಜನರನ್ನು 1943ರ ಆರಂಭದಲ್ಲಿ ಜೈಲಿನೊಳಗಿನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆಯ ಅಂತ್ಯದಲ್ಲಿ ಪ್ರಾಥಮಿಕವಾಗಿ ಐವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿತ್ತು ಮತ್ತು ಅವರಿಗೆ ಮರಣ ದಂಡನೆಯನ್ನು ವಿಧಿಸಲಾಗಿತ್ತು. 

ಈ ಐವರು ಇತರರಿಗಿಂತ ಹೆಚ್ಚಿನ ತಪ್ಪನ್ನು ಮಾಡಿರಲಿಲ್ಲ. ಆದರೆ ನ್ಯಾಯಾಧೀಶ ಇ.ಇ.ಮ್ಯಾಕ್ ಅವರು ತನ್ನ ತೀರ್ಪಿನಲ್ಲಿ ಗುಂಪಿನಲ್ಲಿಯ 20 ಜನರು ಭಾರತದ ಎಲ್ಲ ಪ್ರದೇಶಗಳಿಂದ ಬಂದವರಾಗಿದ್ದಾರೆ ಎಂದು ಹೇಳಿದ್ದರು ಮತ್ತು ಅವರಲ್ಲಿ ಎಂಟು ಜನರು ತಾನು ಬಣ್ಣಿಸಿದಂತೆ ‘ಭಾರತೀಯ ಕ್ರೈಸ್ತರು’,ಎಂಟು ಜನರು ಹಿಂದುಗಳು,ಇಬ್ಬರು ಮುಸ್ಲಿಮರು ಮತ್ತು ಓರ್ವ ಸಿಖ್ ಆಗಿರುವುದು ಗಮನಿಸಲು ಅರ್ಹವಾಗಿದೆ ಎಂದು ಬೆಟ್ಟು ಮಾಡಿದ್ದರು.

ನ್ಯಾಯಾಧೀಶರು ಮರಣ ದಂಡನೆ ವಿಧಿಸಲು ಐವರ ನಿರ್ದಿಷ್ಟ ತಂಡವನ್ನು ಏಕೆ ಆಯ್ಕೆ ಮಾಡಿಕೊಂಡಿದ್ದರು ಎನ್ನುವುದು ನಮಗೆ ಗೊತ್ತಿಲ್ಲ,ಕೇವಲ ಊಹಿಸಬಹುದಷ್ಟೇ. ತ್ರಿಪುರಾದ ಸತ್ಯೇಂದ್ರ ಚಂದ್ರ ಬರ್ಧನ್ ಮತ್ತು ಕೇರಳದ ಆನಂದನ್ ಹಿಂದುಗಳಾಗಿದ್ದರೆ, ತಿರುವಾಂಕೂರಿನ ವಕ್ಕಮ್ ನ ಅಬ್ದುಲ್ ಖಾದರ್ ಮುಸ್ಲಿಮ್, ತಿರುವಾಂಕೂರಿನ ಬೊನಿಫೇಸ್ ಪಿರೇರಾ ಕ್ರೈಸ್ತ ಮತ್ತು ಪಂಜಾಬಿನ ಮೆಹ್ಸಾನಾದ ಫೌಜಾ ಸಿಂಗ್ ಸಿಖ್ ಧರ್ಮೀಯರಾಗಿದ್ದರು. ಅಬ್ದುಲ್ ಖಾದರ್ ತನ್ನ ತಂದೆಗೆ ಕಟುವಾದ ಅಂತಿಮ ಪತ್ರವನ್ನು ಬರೆದಿದ್ದ ಯುವಕನಾಗಿದ್ದರು.
                                
ಬೆಕ್ಕಿನ ಪಂಜಗಳು

ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದ ಯುವಕರಿಗೆ ತಮ್ಮ ಉದ್ದೇಶವನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ. ಈ ಯುವಕರ ಪೈಕಿ ಓರ್ವ ಹೇಳಿದ್ದಂತೆ ಅವರೆಲ್ಲ ಜಪಾನಿ ಸೇನೆಯ ‘ಬೆಕ್ಕಿನ ಪಂಜ (ಮುಂಗಾಲು)’ಗಳಾಗಿದ್ದರು ಮತ್ತು ನ್ಯಾ.ಮ್ಯಾಕ್ ಇದೇ ಪದವನ್ನು ಪ್ರತಿಧ್ವನಿಸಿದ್ದರು. ಈ ಯುವಕರು ಭಾರತದಲ್ಲಿಯ ಭೂಗತ ಸ್ವಾತಂತ್ರ ಹೋರಾಟದೊಂದಿಗೆ ಕೈ ಜೋಡಿಸುವುದರಲ್ಲಿ ಜಪಾನೀಯರಿಗೆ ಯಾವುದೇ ಆಸಕ್ತಿಯರಲಿಲ್ಲ. ಅವರು ಈ ಸಣ್ಣ ಗುಂಪು ಶೀಘ್ರವೇ ಅದನ್ನು ಅನುಸರಿಸಲಿರುವ ಆಗ್ನೇಯ ಏಶ್ಯಾದಲ್ಲಿನ ಭಾರೀ ಸಂಖ್ಯೆಯಲ್ಲಿಯ ಭಾರತೀಯರಲ್ಲಿ ಒಂದು ಮಾತ್ರವಾಗಿತ್ತು ಎಂದು ಬಿಂಬಿಸುವ ಮೂಲಕ ಬ್ರಿಟಿಷರಿಗೆ ಸೂಚಿಸಲು ಮತ್ತು ಅವರನ್ನು ಬೆದರಿಸಲು ಬಯಸಿದ್ದರು. ಹೀಗಾಗಿ ಈ 20 ಜನರನ್ನು ತ್ವರಿತವಾಗಿ ಪತ್ತೆ ಹಚ್ಚಿ ಬಂಧಿಸುವಂತೆ ಅವರು ನೋಡಿಕೊಂಡಿದ್ದರು.

ಅಬ್ದುಲ್ ಖಾದರ್ ತನ್ನ ಬಂಧನಕ್ಕೆ ಮುನ್ನ ಕೆಲವೇ ಗಂಟೆಗಳಲ್ಲಿ ತಾನು ಮಾಡಬಹುದಾದ್ದನ್ನು ಮಾಡಿದ್ದರು. (ಫೌಜಾ ಸಿಂಗ್ ಹೀಗೆ ಮಾಡಿದ್ದ ಇನ್ನೋರ್ವರಾಗಿದ್ದರು). ಅವರು ತಾನೂರಿನ ಕೆಲವು ಯುವಕರು ತನ್ನೊಂದಿಗೆ ಸೇರುವಂತೆ ಮಾಡಲು ಪ್ರಯತ್ನಿಸಿದ್ದರು,ಆದರೆ ಶೀಘ್ರವೇ ಬಂಧಿಸಲ್ಪಟ್ಟಿದ್ದರು.
 
ತನ್ನ ಒಡನಾಡಿ ಮತ್ತು ಸ್ನೇಹಿತ ಬೊನಿಫೇಸ್ ಪಿರೇರಾ (ಇವರಿಗೂ ಮರಣ ದಂಡನೆ ವಿಧಿಸಲಾಗಿತ್ತು,ಆದರೆ ತಾಂತ್ರಿಕ ಕಾರಣದಿಂದ ಹಿಂದೆಗೆದುಕೊಳ್ಳಲಾಗಿತ್ತು) ಅವರಿಗೆ ತನ್ನ ಅಂತಿಮ ಪತ್ರದಲ್ಲಿ ಅಬ್ದುಲ್ ಖಾದರ್,‘ನಮ್ಮ ಸಾವಿಗೆ ಮತ್ತು ನಿಮ್ಮ ಸಂಕಷ್ಟಗಳಿಗೆ ಮೌಲಿಕವಾದ ಏನನ್ನಾದರೂ ಮಾಡುವ ಮೊದಲೇ ಅವಕಾಶ ಮತ್ತು ಸಮಯ ನಮ್ಮ ಕೈಗಳಿಂದ ಜಾರುವಂತೆ ಮಾಡಿದ ದುರದೃಷ್ಟವನ್ನು ನಾನು ಶಪಿಸುವುದಿಲ್ಲ,ಆದರೆ ಮೊದಲ ಹೆಜ್ಜೆಯನ್ನಿಡುವ ಮೊದಲೇ ನಾವು ಸೋಲಿನಿಂದ ಕೆಳಕ್ಕೆಸೆಯಲ್ಪಟ್ಟಿದ್ದೇವೆ’ ಎಂದು ಬರೆದಿದ್ದರು.
 
ಫುಟ್ಬಾಲ್ ಪ್ರಿಯರಾಗಿದ್ದ ಕೆಚ್ಚೆದೆಯ ಖಾದರ್,‘ಭಾರತೀಯ ರಾಷ್ಟ್ರೀಯವಾದಿ ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿ ತಂಡಗಳ ನಡುವೆ ಅಂತಿಮ ಪಂದ್ಯ ನಡೆಯುತ್ತದೆ ಮತ್ತು ಭಾರತೀಯ ತಂಡವು ಗೋಲು ಬಾರಿಸುತ್ತದೆ ಎನ್ನುವುದು ನನಗೆ ಖಚಿತವಿದೆ. ನೀನು ಭಾರತದ ಸ್ವತಂತ್ರ ಪುತ್ರನಾಗಬಹುದು ಮತ್ತು ಸ್ವತಂತ್ರ ಭಾರತ ಮಾತೆಯು ನಿನ್ನನ್ನು ತೋಳುಗಳಿಂದ ಅಪ್ಪಿಕೊಳ್ಳುತ್ತಾಳೆ ’ಎಂದೂ ಬರೆದಿದ್ದರು.

1943,ಸೆ.9ರ ಮಧ್ಯರಾತ್ರಿ ಖಾದರ್ ರ ಲಿಖಿತ ಕೊನೆಯ ಪದಗಳು ತನ್ನ ಕುಟುಂಬಕ್ಕೆ ಸಾಂತ್ವನ ಹೇಳಲು ಅವರು ಬರೆದಿದ್ದ ಅಕ್ಷರಗಳಾಗಿದ್ದವು.
 
‘ಇನ್ನೇನು ಮಧ್ಯರಾತ್ರಿ 12 ಗಂಟೆ ಹೊಡೆಯಲಿದೆ. ನನ್ನ ಸಾವಿನ ದಿನದ ಆರಂಭಿಕ ಕ್ಷಣಗಳು ಮುಗಿಯುತ್ತಿವೆ. ನಿಮಗೆ ಹೇಳಲು ನನ್ನ ಬಳಿ ಯಾವುದೇ ಸಾಂತ್ವನವಿಲ್ಲ. ನಾವು ಸ್ವರ್ಗದಲ್ಲಿ ಭೇಟಿಯಾಗೋಣ. ನನಗಾಗಿ ದುಃಖಿಸಬೇಡಿ. ಒಂದಲ್ಲೊಂದು ದಿನ,ನನ್ನ ಸಾವಿನ ಪ್ರತ್ಯಕ್ಷದರ್ಶಿಯಿಂದ ನಾನು ಸಾವನ್ನು ಎಷ್ಟು ಶಾಂತಿಯಿಂದ ಮತ್ತು ಧೈರ್ಯದಿಂದ ಎದುರಿಸಿದ್ದೆ ಎನ್ನುವುದು ನಿಮಗೆ ಗೊತ್ತಾಗಲಿದೆ. ಆಗ ನೀವು ಹೆಮ್ಮೆ ಮತ್ತು ಸಂತೋಷವನ್ನು ಪಡುತ್ತೀರಿ...

ಗಡಿಯಾರದ ಗಂಟೆ ಬಾರಿಸುತ್ತಿದೆ,ಸಾವು ಕಾಯುತ್ತಿದೆ ’

ನಿಮ್ಮ ಪ್ರೀತಿಯ ಮಗ
ಅಬ್ದುಲ್ ಖಾದರ್

ಅಬ್ದುಲ್ ಖಾದರ್ ರನ್ನು ಅವರ ಕುಟುಂಬವಾಗಲೀ ವಕ್ಕಂ ಆಗಲೀ ಮರೆತಿಲ್ಲ. ದಶಕಗಳಿಂದಲೂ ಸಮುದಾಯವು ತನ್ನ ಕೆಚ್ಚೆದೆಯ ಪುತ್ರನ ಸಾವನ್ನು ಸ್ಮಾರಕಗಳು,ಪ್ರತಿ ವರ್ಷ ಅವರ ಮರಣ ದಿನದಂದು ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಉಪಕ್ರಮಗಳೊಂದಿಗೆ ಸ್ಮರಿಸುತ್ತ ಬಂದಿದೆ.

ಫೌಜ್‌ ಸಿಂಗ್‌, ಅಬ್ದುಲ್‌ ಖಾದರ್‌ ಹಾಗೂ ಸತ್ಯೇಂದ್ರ ಬರ್ಧನ್

ಗಲ್ಲಿಗೇರಿದ್ದ ಅಬ್ದುಲ್ ಖಾದರ್,ಸತ್ಯೇಂದ್ರ ಚಂದ್ರ ಬರ್ಧನ್ ಮತ್ತು ಫೌಜಾ ಸಿಂಗ್ ಅವರ ಗೌರವಾರ್ಥ 1998ರಲ್ಲಿ ಅಂಚೆಚೀಟಿಯನ್ನು ಬಿಡುಗಡೆಗೊಳಿಸಲಾಗಿತ್ತಾದರೂ ಪೆನಾಂಗ್ 20 ತ್ವರಿತವಾಗಿ ಮರೆತುಹೋಗಿರುವಂತಿದೆ. ಕೇರಳದಲ್ಲಿ ಪ್ರತಿ ವರ್ಷದ ಸೆಪ್ಟಂಬರ್ನಲ್ಲಿ ಅಬ್ದುಲ್ ಖಾದರ್ ರನ್ನು ಸ್ಮರಿಸಲಾಗುತ್ತಿದೆ. ಆದರೆ ದೇಶದ ಉಳಿದ ಭಾಗದಲ್ಲಿ ತಮ್ಮ ಜೀವಗಳನ್ನು ತ್ಯಾಗ ಮಾಡಿದ್ದ ಈ ಯುವಕರು ಸಾಮೂಹಿಕ ಸ್ಮರಣೆಯಿಂದ ಕಣ್ಮರೆಯಾಗಿದ್ದಾರೆ.

ಈಗ 2020ರಲ್ಲಿ ನಾವು ಏಕೆ ಅಬ್ದುಲ್ ಖಾದರ್ ರನ್ನು ಸ್ಮರಿಸಿಕೊಳ್ಳಬೇಕು ಎನ್ನುವುದಕ್ಕೆ ಕಾರಣವಿದೆ. ಈ ಸಮಯದಲ್ಲಿ ಮುಸ್ಲಿಮರ ಪೌರತ್ವವನ್ನು ಪ್ರಶ್ನಿಸಲಾಗುತ್ತಿರುವಾಗ, ದೇಶಕ್ಕೆ ತನ್ನ ನಿಷ್ಠೆಯನ್ನು ಸಾಬೀತು ಮಾಡುವಂತೆ ಪ್ರತಿಯೊಬ್ಬ ಮುಸ್ಲಿಂ ವ್ಯಕ್ತಿಗೆ ಒತ್ತಾಯಿಸುತ್ತಿರುವಾಗ ಮತ್ತು ತಾವು ಇಲ್ಲಿಗೆ ಸೇರಿದವರಲ್ಲ ಎಂದು ಅವರು ಭಾವಿಸುವಂತೆ ಮಾಡುತ್ತಿರುವಾಗ ನಾವು ಭಾರತಕ್ಕಾಗಿ ತನ್ನ ಪ್ರಾಣವನ್ನೇ ನೀಡಿದ್ದ ಮುಸ್ಲಿಮ್ ಅಬ್ದುಲ್ ಖಾದರ್ ರನ್ನು ನೆನೆಯುವುದು ಅಗತ್ಯವಾಗುತ್ತದೆ.

ಭಾರತದಲ್ಲಿಯ ಮುಸ್ಲಿಮರು ಸಮಾನ ಪ್ರಜೆಗಳಾಗಿದ್ದಾರೆ ಮತ್ತು ಇತರ ಪ್ರಜೆಗಳಷ್ಟೇ ಗೌರವಕ್ಕೆ ಅವರು ಅರ್ಹರಾಗಿದ್ದಾರೆ ಎಂದು ವಾದಿಸಲು ಮುಸ್ಲಿಮರ ಭಾರತೀಯತೆಯ ಉದಾಹರಣೆಯಾಗಿ ಈ ಮುಸ್ಲಿಂ ವ್ಯಕ್ತಿ ಭಾರತದ ಸ್ವಾತಂತ್ರಕ್ಕಾಗಿ ಮಾಡಿದ್ದ ತ್ಯಾಗವನ್ನು ನಾವು ಬಿಂಬಿಸಬೇಕಾಗಿರುವುದು ದುರಂತವಾಗಿದೆ. ಆದರೆ ಎಲ್ಲ ಪ್ರಜೆಗಳು ಸಮಾನ ಹಕ್ಕುಗಳನ್ನು ಹೊಂದಿರುವ ಭಾರತವನ್ನು ಒಂದು ದೇಶವಾಗಿ ನಾಶಗೊಳಿಸಲು ದ್ವೇಷ ಮತ್ತು ವಿಭಜನೆಯ ಶಕ್ತಿಗಳು ಮುಂದಾಗಿರುವಾಗ ಅಬ್ದುಲ್ ಖಾದರ್ ಕಥೆಯನ್ನು ಹೇಳಲೇಬೇಕು,ಮತ್ತೆ ಮತ್ತೆ ಹೇಳಲೇಬೇಕು.

ಕೃಪೆ: Scroll.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top