ಕಳೆದ 75 ವರ್ಷಗಳಲ್ಲಿ ತೀವ್ರಗೊಂಡಿರುವ ಭಾರತದ ಬುಡಕಟ್ಟು ಸಮುದಾಯಗಳ ಸಂಕಷ್ಟಗಳು

-

Photo: Koustav2007/CC BY-SA 3.0/thewire.in

ಹಿಂದಿನ ಕಾಲದಲ್ಲಿ ಜಲ,ಅರಣ್ಯಗಳು ಮತ್ತು ಭೂಮಿಯ ಸಂರಕ್ಷಣೆಯಲ್ಲಿ ಆದಿವಾಸಿ (Adivasi) ಮತ್ತು ಸ್ಥಳೀಯ ಕೃಷಿ ಸಮುದಾಯಗಳು ವಹಿಸಿದ್ದ ಅದ್ಭುತ ಪಾತ್ರಕ್ಕೆ ಇತಿಹಾಸವು ಸಾಕ್ಷಿಯಾಗಿದೆ. ಅವರು ಕ್ರೂರ ಪ್ರಾಣಿಗಳೊಂದಿಗೆ ಹೋರಾಡಿದ್ದರು,ಪೊದೆಗಳಿಂದ ಕೂಡಿದ್ದ ಅರಣ್ಯ ಪ್ರದೇಶಗಳನ್ನು ತೆರವುಗೊಳಿಸಿದ್ದರು,ಗ್ರಾಮಗಳನ್ನು ನಿರ್ಮಿಸಿದ್ದರು ಮತ್ತು ಆ ಪ್ರದೇಶಗಳಲ್ಲಿ ವಾಸವಾಗಿದ್ದರು. ಆದಿವಾಸಿಗಳು(Tribal Communtiy) ಮತ್ತು ಸ್ಥಳೀಯ ಸಮುದಾಯಗಳ ಭಾಷಾ ಮತ್ತು ಸಾಂಸ್ಕೃತಿಕ ಅನನ್ಯತೆಯು ಈ ಅರಣ್ಯಗಳು,ನದಿಗಳು ಮತ್ತು ಪರ್ವತಗಳ ಮಧ್ಯೆ ನಿಸರ್ಗದ ಮಡಿಲಲ್ಲಿ ವಿಕಸನಗೊಂಡಿದೆ.

1908ರ ಛೋಟಾ ನಾಗ್ಪುರ ಟೆನೆನ್ಸಿ ಕಾಯ್ದೆ ಮತ್ತು 1949ರ ಸಂತಾಲ ಪರಗಣ ಟೆನೆನ್ಸಿ ಕಾಯ್ದೆಗಳನ್ನು ಬುಡಕಟ್ಟು ಮತ್ತು ಸ್ಥಳೀಯ ಸಮುದಾಯಗಳ ನಡುವಿನ ಸಂಬಂಧ ಹಾಗೂ ಅವರ ನೈಸರ್ಗಿಕ ಮತ್ತು ಪರಿಸರಪರ ಜೀವನ ಮೌಲ್ಯಗಳನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಏಕೈಕ ಉದ್ದೇಶದೊಂದಿಗೆ ಅಂಗೀಕರಿಸಲಾಗಿತ್ತು. ಇದರೊಂದಿಗೆ ಸಂವಿಧಾನದ ಐದನೇ ಪರಿಶಿಷ್ಟ ಮತ್ತು 1996ರ ಪಂಚಾಯತ್(ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯ್ದೆ ಇವು ಖುಂಟಕಟ್ಟಿ ವ್ಯವಸ್ಥೆಯಡಿ ನೀರು ಮತ್ತು ಅರಣ್ಯದ ಮೇಲೆ ಬುಡಕಟ್ಟು ಸಮುದಾಯಗಳಿಗೆ ಹಕ್ಕುಗಳನ್ನು ಒದಗಿಸಿವೆ,ಅಲ್ಲದೆ ಇತರ ಸಾಂಪ್ರದಾಯಿಕ ಹಕ್ಕುಗಳನ್ನೂ ಈ ಸಮುದಾಯಗಳು ಹೊಂದಿವೆ.

ಬುಡಕಟ್ಟು ಸಮುದಾಯಗಳು ವಾಸವಾಗಿರುವ ಅರಣ್ಯ ಭೂಮಿ,ಅವರ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆರ್ಥಿಕ ನೆಲೆಯನ್ನು ರಕ್ಷಿಸಲು ಮತ್ತು ಅಭಿವೃದ್ಧಿಗೊಳಿಸಲು ಭಾರತೀಯ ಸಂವಿಧಾನದಲ್ಲಿ ವಿಶೇಷ ಕಾನೂನು ಅವಕಾಶಗಳನ್ನು ಕಲ್ಪಿಸಲಾಗಿದೆ ಎನ್ನುವುದು ತಿಳಿದಿರುವ ವಿಷಯವಾಗಿದೆ. ಗ್ರಾಮದ ಒಳಗಿನ ಮತ್ತು ಹೊರಗಿನ ನೈಸರ್ಗಿಕ ಸಂಪನ್ಮೂಲಗಳು ಗ್ರಾಮದ ಸಾಮುದಾಯಿಕ ಆಸ್ತಿಯಾಗಿದೆ ಮತ್ತು ಎಲ್ಲ ಗ್ರಾಮಸ್ಥರು ಪ್ರದೇಶದ ಮೇಲೆ ಸಮುದಾಯ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
 
ಈ ಎಲ್ಲ ಸಮುದಾಯ ಹಕ್ಕುಗಳು ವಿವಿಧ ಕಾಯ್ದೆಗಳಡಿ ಕಾನೂನಿನ ಮಾನ್ಯತೆಯನ್ನು ಹೊಂದಿವೆ. ಬಿರ್ಸಾ ಮುಂಡಾ,ತಿಲ್ಕಾ ಮಾಂಝಿ,ಸಿಂದ್ರಾಯಿ ಮಾಂಕಿ ಮತ್ತು ಜತ್ರಾ ತಾನಾ ಭಗತ್ ಸೇರಿದಂತೆ ಹಲವರ ಸುದೀರ್ಘ ಹೋರಾಟ ಮತ್ತು ಬಲಿದಾನದ ಬಳಿಕ ಬುಡಕಟ್ಟು ಸಮುದಾಯಗಳು ಈ ಹಕ್ಕುಗಳನ್ನು ಪಡೆದುಕೊಂಡಿವೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿ ಸಮುದಾಯಗಳು ವಹಿಸಿದ್ದ ನಿರ್ಣಾಯಕ ಪಾತ್ರ ಇತಿಹಾಸದಲ್ಲಿ ಅಚ್ಚೊತ್ತಿದೆ.
 
ದುರಂತವೆಂದರೆ ಸ್ವಾತಂತ್ರಾನಂತರವೂ ಬುಡಕಟ್ಟು ಸಮುದಾಯಗಳು ತಮ್ಮ ನೆಲ,ಜಲ,ಅರಣ್ಯ,ಭಾಷೆ,ಸಂಸ್ಕೃತಿ ಮತ್ತು ಅನನ್ಯತೆಯ ಮೇಲಿನ ಅತಿಕ್ರಮಣದ ವಿರುದ್ಧ ನಿರಂತರವಾಗಿ ಹೋರಾಡುತ್ತಿವೆ. ಅರಣ್ಯ ಮತ್ತು ನೆಲದ ರಕ್ಷಣೆಗಾಗಿ ಬುಡಕಟ್ಟು ಮತ್ತು ಸ್ಥಳೀಯ ಸಮುದಾಯಗಳು ಜಾತಿ,ಧರ್ಮ ಮತ್ತು ರಾಜಕೀಯವನ್ನು ಮೀರಿ ನಿಂತು ಯಶಸ್ವಿ ಸಾಮೂಹಿಕ ಚಳವಳಿಗಳನ್ನು ನಡೆಸಿದ್ದವು. ಪಲಾಮು-ಗುಮ್ಲಾ ಪ್ರದೇಶದಲ್ಲಿ 256 ಗ್ರಾಮಗಳ ಸ್ಥಳಾಂತರವನ್ನು ತಡೆಯಲು ಕೇಂದ್ರೀಯ ಜನಸಂಘರ್ಷ ಸಮಿತಿಯು 45 ವರ್ಷಗಳ ಸುದೀರ್ಘ ಹೋರಾಟ ನಡೆಸಿತ್ತು. ಕೋಯೆಲ್ ಮತ್ತು ಕಾರೋ ನದಿಗಳಿಗೆ ಜಲಾಶಯ ನಿರ್ಮಾಣದಿಂದಾಗಿ 245 ಗ್ರಾಮಗಳ ನಾಶಕ್ಕೆ ಕಾರಣವಾದ ಜಲವಿದ್ಯುತ್ ಯೋಜನೆಯ ವಿರುದ್ಧ ಕೋಯೆಲ್ ಕಾರೋ ಜನತಾ ಆಂದೋಲನವು ಕಳೆದ 40 ವರ್ಷಗಳಿಂದಲೂ ನಡೆಯುತ್ತಿದೆ.

2000,ನ.15ರಂದು ಜಾರ್ಖಂಡ್ ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬರುವುದರೊಂದಿಗೆ ಆಗಿನ ಬಿಜೆಪಿ ಸರಕಾರವು ಪ್ರಮುಖ ಹೂಡಿಕೆದಾರರನ್ನು ರಾಜ್ಯಕ್ಕೆ ಆಹ್ವಾನಿಸಲು ಆರಂಭಿಸಿತ್ತು. ಮುಂದಿನ ನಾಲ್ಕು ವರ್ಷಗಳಲ್ಲಿ ಸರಕಾರವು 150ಕ್ಕೂ ಅಧಿಕ ಕಂಪನಿಗಳೊಂದಿಗೆ ಒಡಂಬಡಿಕೆಗಳಿಗೆ ಸಹಿ ಹಾಕಿತ್ತು. ಆಗ ಇದರ ವಿರುದ್ಧ ಆದಿವಾಸಿ ಮತ್ತು ಸ್ಥಳೀಯ ಸಮುದಾಯಗಳು ಸಂಘಟಿತ ಶಕ್ತಿಯಾಗಿ ಎದ್ದುನಿಂತಿದ್ದವು. ರಾಜ್ಯದ ಹಲವಾರು ಬುಡಕಟ್ಟು ಪ್ರದೇಶಗಳಲ್ಲಿ ಭಾರೀ ಕೈಗಾರಿಕೆಗಳ ಸ್ಥಾಪನೆಗೆ ಯಶಸ್ವಿಯಾಗಿ ತಡೆಯೊಡ್ಡಲಾಗಿತ್ತು.
  
ಕಳೆದ 75 ವರ್ಷಗಳಲ್ಲಿ ಆದಿವಾಸಿ ಸಮುದಾಯವು ಗಳಿಸಿದ್ದೇನು ಮತ್ತು ಕಳೆದುಕೊಂಡಿದ್ದೇನು ಎನ್ನುವುದು ವೌಲ್ಯಮಾಪನ ಅಗತ್ಯವಿರುವ ವಿಷಯವಾಗಿದೆ. ದೇಶಕ್ಕೆ ಸ್ವಾತಂತ್ರ ಲಭಿಸಿದಾಗಿನಿಂದ ಅಭಿವೃದ್ಧಿಯ ಹೆಸರಿನಲ್ಲಿ ವಿವಿಧ ಯೋಜನೆಗಳಿಗಾಗಿ 22 ಲಕ್ಷ ಎಕರೆಗಳಿಗೂ ಅಧಿಕ ಅರಣ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. 

ನಗರೀಕರಣಕ್ಕಾಗಿ ಪ್ರತಿ ವರ್ಷ ಬುಡಕಟ್ಟು ಸಮುದಾಯಗಳಿಂದ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ರಾಜ್ಯದಲ್ಲಿಯ ಲಕ್ಷಾಂತರ ಭೂ ಮಾಲಿಕರು ಈಗ ಹೊಟ್ಟೆಪಾಡಿಗಾಗಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಎರಡು ಕೋಟಿಗೂ ಅಧಿಕ ಆದಿವಾಸಿಗಳು,ಸ್ಥಳೀಯ ನಿವಾಸಿಗಳು ಮತ್ತು ದಲಿತರು ನಿರಾಶ್ರಿತರಾಗಿದ್ದು,ಯಾವುದೇ ಜೀವನೋಪಾಯವಿಲ್ಲದೆ ಪರದಾಡುತ್ತಿದ್ದಾರೆ. ತನ್ನದೇ ಸ್ವಂತ ರಾಜ್ಯದಲ್ಲಿ ಬುಡಕಟ್ಟು ಸಮುದಾಯವು ಶೇ.26.2ರಷ್ಟು ಅಲ್ಪಸಂಖ್ಯಾತ ಸ್ಥಾನಕ್ಕೆ ಕುಸಿದಿದೆ ಮತ್ತು ಇದು ಮುಂದಿನ ಜನಗಣತಿಯವರೆಗೆ ಇನ್ನಷ್ಟು ಕುಸಿಯುವ ನಿರೀಕ್ಷೆಯಿದೆ. 

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಬುಡಕಟ್ಟು ಪ್ರದೇಶಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಬುಡಕಟ್ಟು ಉಪ-ಯೋಜನೆಯಡಿ ಮಂಜೂರಾದ ಹಣವನ್ನು ಜೈಲುಗಳು,ರಸ್ತೆಗಳು ಮತ್ತು ವಿಮಾನ ನಿಲ್ದಾಣ ನಿರ್ಮಾಣಗಳಂತಹ ಅನ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಪರಿಣಾಮವಾಗಿ ಬುಡಕಟ್ಟು ಸಮುದಾಯವು ಅಭಿವೃದ್ಧಿಯ ಬಿಸಿಯನ್ನು ಅನುಭವಿಸುತ್ತಿದೆ. ಜಾರ್ಖಂಡ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಾಸವಿರುವ ಆದಿವಾಸಿಗಳು ಸರ್ನಾ ಆದಿವಾಸಿ ಧರ್ಮ ಸಂಹಿತೆಗಾಗಿ ತಮ್ಮ ಬೇಡಿಕೆಯನ್ನು ತೀವ್ರಗೊಳಿಸಿದ್ದಾರೆ. 

2011ರ ಜನಗಣತಿಯಂತೆ ದೇಶಾದ್ಯಂತ 44,51,753 ಜನಸಂಖ್ಯೆಯನ್ನು ಹೊಂದಿರುವ ಜೈನ ಸಮುದಾಯವು ಪ್ರತ್ಯೇಕ ಧರ್ಮ ಸಂಹಿತೆಯನ್ನು ಹೊಂದಿರಬಹುದಾದರೆ,10,42,81,034 ಜನಸಂಖ್ಯೆಹೊಂದಿರುವ ಪ್ರಕೃತಿ ಆರಾಧಕ ಆದಿವಾಸಿಗಳು ಏಕೆ ಪ್ರತ್ಯೇಕ ಧರ್ಮ ಸಂಹಿತೆಯನ್ನು ಹೊಂದಿರಬಾರದು ಎಂದು ಅವರು ಪ್ರತಿಪಾದಿಸುತ್ತಿದ್ದಾರೆ. ಜಾರ್ಖಂಡ್ ರಚನೆಯಾದಾಗಿನಿಂದ ಬುಡಕಟ್ಟು ಜನಸಂಖ್ಯೆ 30 ಲಕ್ಷಗಳಷ್ಟು ಕಡಿಮೆಯಾಗಿದೆ ಮತ್ತು ತಮ್ಮನ್ನು ಯಾವ ಧರ್ಮದಡಿ ವರ್ಗೀಕರಿಸಲಾಗಿದೆ ಎನ್ನುವುದು ಅವರಲ್ಲಿ ಯಾರಿಗೂ ಗೊತ್ತಿಲ್ಲ. 

ಜಾರ್ಖಂಡ್ನಲ್ಲಿಯ ಎಲ್ಲ ರಾಜಕೀಯ ಪಕ್ಷಗಳು ಸರ್ನಾ ಧರ್ಮ ಸಂಹಿತೆಯನ್ನು ಬೆಂಬಲಿಸುತ್ತಿವೆ,ಆದರೆ ಕಳೆದ 17 ವರ್ಷಗಳಿಂದ ಅದನ್ನು ಜಾರಿಗೊಳಿಸಲು ಯಾವುದೇ ಪಕ್ಷವು ಯಾವುದೇ ಉಪಕ್ರಮವನ್ನು ಕೈಗೊಂಡಿಲ್ಲ. ಅದರ ಜಾರಿಯೊಂದಿಗೆ ಬುಡಕಟ್ಟು ಸಮುದಾಯವು ಗುರುತನ್ನು ಪಡೆದುಕೊಳ್ಳುತ್ತದೆ ಮತ್ತು ಬುಡಕಟ್ಟು ಸಮುದಾಯಗಳ ನಡುವೆ ಧರ್ಮದ ಹೆಸರಿನಲ್ಲಿ ಕೋಮುವಾದವು ನಿಲ್ಲುತ್ತದೆ.

2014ರ ನಂತರ ಸಾರ್ವಜನಿಕ ಹಕ್ಕುಗಳಿಗೆ ಸಂಬಂಧಿಸಿದ ಸಾಂವಿಧಾನಿಕ ನೀತಿಗಳಲ್ಲಿ ಬದಲಾವಣೆಗಳು ಆದಿವಾಸಿಗಳು,ಸ್ಥಳೀಯರು,ದಲಿತರು ಮತ್ತು ಕಠಿಣ ಪರಿಶ್ರಮಿ ಕಾರ್ಮಿಕ ಸಮುದಾಯಗಳ ಹಕ್ಕುಗಳ ಮೇಲೆ ದಾಳಿ ಮಾಡಿವೆ. ಜಾಗತಿಕ ನೀತಿಗಳು,ಜಾಗತಿಕ ಬಂಡವಾಳ ಮತ್ತು ಜಾಗತಿಕ ಮಾರುಕಟ್ಟೆಗಳು ಈಗ ಸಮುದಾಯದ ಸಾಂಪ್ರದಾಯಿಕ ಹಕ್ಕುಗಳ ಜಾಗದಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳನ್ನು ನೆಲೆಗೊಳಿಸಿವೆ. ಆದಿವಾಸಿ ಮತ್ತು ಸ್ಥಳೀಯ ಸಮುದಾಯಗಳು ಈ ನೀತಿ ಬದಲಾವಣೆಗಳ ವಿರುದ್ಧ ಹೊಸ ಹೋರಾಟದ ಹಂತವನ್ನು ಪ್ರವೇಶಿಸಿವೆ. ದೇಶದಲ್ಲಿ ಸಾರ್ವಜನಿಕ ರಾಜಕೀಯದ ಜಾಗವನ್ನು ಜಾತಿ ಮತ್ತು ಧರ್ಮ ಆಕ್ರಮಿಸಿದ್ದು,ಇದು ಬುಡಕಟ್ಟು ಸಮುದಾಯದ ಮೇಲೆ ಆಳವಾದ ಪರಿಣಾಮವನ್ನು ಬೀರಿದೆ.

ಇಂದು ಸಾರ್ವಜನಿಕ ಕಾಳಜಿ,ಸಾಂವಿಧಾನಿಕ ಹಕ್ಕುಗಳು,ಮಾನವ ಹಕ್ಕುಗಳು, ಅರಣ್ಯಗಳು, ಭೂಮಿ, ಶಿಕ್ಷಣ ಮತ್ತು ಆರೋಗ್ಯದ ಹಕ್ಕುಗಳಿಗಾಗಿ ಧ್ವನಿಯೆತ್ತುವವರಿಗೆ ‘ಕಲ್ಯಾಣ’ ಸರಕಾರವು ದೇಶದ್ರೋಹಿಗಳು ಎಂಬ ಹಣೆಪಟ್ಟಿಯನ್ನು ಅಂಟಿಸುತ್ತಿದೆ ಮತ್ತು ಅವರನ್ನು ಜೈಲಿಗೆ ತಳ್ಳುತ್ತಿದೆ. ಪ್ರಸ್ತುತ ಹೋರಾಟದಲ್ಲಿ ಆದಿವಾಸಿಗಳು ಒಂದಲ್ಲ,ಸಾವಿರಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ.
 
ಆದಿವಾಸಿಗಳ ಅಭ್ಯುದಯಕ್ಕಾಗಿರುವ ಎಲ್ಲ ಕಾಯ್ದೆಗಳು ಕೇವಲ ಕಾಗದದಲ್ಲಿ ಮಂದುವರಿದಿವೆ ಮತ್ತು ಪ್ರಾಯೋಗಿಕವಾಗಿ ನಿಷ್ಪರಿಣಾಮಕಾರಿಯಾಗಿವೆ. ಪರಿಶಿಷ್ಟ ಪ್ರದೇಶಗಳನ್ನು ಹಿಂದುಳಿದ ಪ್ರದೇಶಗಳನ್ನಾಗಿ ಘೋಷಿಸಲಾಗಿದೆ. ಭೂ ದಾಖಲೆಗಳ ಡಿಜಿಟಲೀಕರಣದೊಂದಿಗೆ ಭೂ ದಾಖಲೆಗಳಲ್ಲಿ ನಿಜವಾದ ಭೂ ಮಾಲಿಕರ ಹೆಸರುಗಳು ಮಾಯವಾಗುತ್ತಿವೆ ಹಾಗೂ ಆದಿವಾಸಿಗಳು,ರೈತರು ಮತ್ತು ದಲಿತರ ಭೂಮಿಯನ್ನು ಬಲವಂತದಿಂದ ಕಿತ್ತುಕೊಳ್ಳಲಾಗುತ್ತಿದೆ ಮತ್ತು ಇತರರಿಗೆ ಹಸ್ತಾಂತರಿಸಲಾಗುತ್ತಿದೆ. 

ಕೇಂದ್ರ ಸರಕಾರದ ಹಾಲಿ ಮಾಲಕತ್ವ ಯೋಜನೆಯಡಿ ಈ ಸಮುದಾಯಗಳು ವಿವಿಧ ಕಾಯ್ದೆಗಳಡಿ ಅರಣ್ಯ,ನೀರು ಮತ್ತು ಭೂಮಿಯ ಮೇಲೆ ಹೊಂದಿದ್ದ ಹಕ್ಕುಗಳನ್ನು ಅತಿಕ್ರಮಿಸಲಾಗುತ್ತಿದೆ ಮತ್ತು ಸರಕಾರವು ಅದನ್ನು ತನ್ನ ಆಸ್ತಿಯಾಗಿ ಕಿತ್ತುಕೊಳ್ಳುತ್ತಿದೆ. ಶೀಘ್ರ ಸಾಂಪ್ರದಾಯಿಕ ಬುಡಕಟ್ಟು ಗ್ರಾಮಗಳು ಸಂಪೂರ್ಣವಾಗಿ ಮಾಯವಾಗಲಿವೆ ಮತ್ತು ಅವರ ಸಾಂಪ್ರದಾಯಿಕ ವ್ಯವಸ್ಥೆ ಹಾಗೂ ಅಧಿಕಾರ ಸಂಪೂರ್ಣವಾಗಿ ನಾಶಗೊಳ್ಳಲಿವೆ. ನಿರ್ದಿಷ್ಟ ಧರ್ಮವೊಂದರ ರಕ್ಷಣೆಯ ಹೆಸರಿನಲ್ಲಿ ಗುಂಪಿನಿಂದ ಹತ್ಯೆಗಳನ್ನು ರಾಜಾರೋಷ ನಡೆಸಲಾಗುತ್ತಿದೆ. ಮತಾಂತರವನ್ನು ತಡೆಯುವ ಹೆಸರಿನಲ್ಲಿ ಸಮುದಾಯದಲ್ಲಿ ಧರ್ಮಾಂಧತೆಯನ್ನು ಉತ್ತೇಜಿಸಲಾಗುತ್ತಿದೆ.

ಈ ನಡುವೆ ಸಮುದಾಯವನ್ನು ಜಾತಿ ಮತ್ತು ಧರ್ಮವನ್ನು ಆಧರಿಸಿ ವಿಭಜಿಸಲಾಗುತ್ತಿದೆ. ಸಾಮೂಹಿಕ ಚಳವಳಿಗಳು,ದೇಶದ ಒಕ್ಕೂಟ ರಚನೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಹತ್ತಿಕ್ಕಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ರಾಜ್ಯದ ಮತ್ತು ದೇಶದ ಎಲ್ಲ ಶೋಷಿತ ವರ್ಗಗಳು ಒಂದೇ ವೇದಿಕೆಯಲ್ಲಿ ಒಗ್ಗಟ್ಟಾಗಿ ಶೋಷಿತ ಸಮುದಾಯಗಳ ಸಂಘಟಿತ ಆಂದೋಲನಕ್ಕೆ ಪುಷ್ಟಿ ನೀಡುವುದೊಂದೇ ಪರಿಹಾರವಾಗಿದೆ. 2020 ಮತ್ತು 2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ನರಳುತ್ತಿದ್ದಾಗ, ಸಾಯುತ್ತಿದ್ದಾಗ ದೇಶದ ಸರಕಾರಿ ಯಂತ್ರ,ರಾಜಕೀಯ ಯಂತ್ರ,ಸಶಸ್ತ್ರ ಪಡೆಗಳು ಮತ್ತು ರಾಜತಾಂತ್ರಿಕ ಯಂತ್ರ ಮೂಕಪ್ರೇಕ್ಷಕರಾಗಿ ಉಳಿದಿದ್ದವು. ಜನರ ಬಳಿ ಹಣವಿದ್ದರೂ ಆಮ್ಲಜನಕವನ್ನು ಒದಗಿಸುವಲ್ಲಿ ಸರಕಾರದ ವೈಫಲ್ಯದಿಂದಾಗಿ ಸಾವನ್ನಪ್ಪಿದ್ದರು. ಇದನ್ನು ನಾವೆಂದಿಗೂ ಮರೆಯಕೂಡದು.

ನೀರು,ಅರಣ್ಯ ಮತ್ತು ಭೂಮಿಯ ಸಂರಕ್ಷಣೆಯಲ್ಲಿ ಮಾದರಿ ಪಾತ್ರವನ್ನು ಹೊಂದಿರುವ ಬುಡಕಟ್ಟು ಸಮುದಾಯಗಳನ್ನು ಬಲಗೊಳಿಸಲು ನಾವು ಒಂದಾಗಿ ಪ್ರಯತ್ನಿಸಬೇಕು ಮತ್ತು ಇಡೀ ಮಾನವ ಜನಾಂಗಕ್ಕಾಗಿ ನಾವು ಪ್ರಕೃತಿ ಮತ್ತು ಸುತ್ತಲಿನ ವಾತಾವರಣದೊಂದಿಗೆ ಅವರ ಸಂಬಂಧಗಳಿಂದ ಪಾಠ ಕಲಿಯಬೇಕು.

ಕೃಪೆ: Thewire.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top