-

ಹಿಂದಿ ಹೇರಿಕೆಗೆ ಇದೆ ಒಂದು ಇತಿಹಾಸ

-

ಕೇಂದ್ರ ಸರಕಾರದ ‘ಹಿಂದಿ ಹೇರಿಕೆ’ಯ ಕ್ರಮಗಳ ಬಗ್ಗೆ ಮತ್ತೆ ಚರ್ಚೆ ಜಾರಿಯಲ್ಲಿದೆ. ಈ ಹಿನ್ನ್ನೆಲೆಯಲ್ಲಿ ಮೋದಿ ಸರಕಾರ ತಾನು ಅಧಿಕಾರ ವಹಿಸಿಕೊಂಡ ಆರಂಭದಿಂದಲೂ ಹಿಂದಿ ಹೇರಿಕೆಯ ಬಗ್ಗೆ ಮಾಡುತ್ತಿದ್ದ ಪ್ರಯತ್ನದ ಬಗ್ಗೆ ಪ್ರೊ. ಬರಗೂರು ರಾಮಚಂದ್ರಪ್ಪ ಅವರು 2014ರಲ್ಲಿಯೇ ಬರೆದ ಲೇಖನವನ್ನು ಇಲ್ಲಿ ನೀಡಲಾಗಿದೆ.

ಹಿಂದಿಯನ್ನು ಮೊತ್ತಮೊದಲ ಸ್ಥಾನದಲ್ಲಿ ಸ್ಥಾಪಿಸುವ ಪ್ರಯತ್ನಗಳಿಗೊಂದು ಇತಿಹಾಸವೇ ಇದೆ. ಇಂತಹ ಪ್ರಜ್ಞಾಪೂರ್ವಕ ಪ್ರಯತ್ನಗಳು ಹಿನ್ನೆಲೆಗೆ ಸರಿದು ಸಮತೋಲನದ ವಾತಾವರಣವೊಂದು ಬೆಳೆದು ಬರುತ್ತಿರುವ ಮತ್ತು ಅದಕ್ಕಾಗಿ ಆಶಿಸುತ್ತಿರುವ ಸಂದರ್ಭದಲ್ಲಿ ಮೋದಿಯವರ ಬಿಜೆಪಿ ಸರಕಾರದಿಂದ ಹಿಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆದ್ಯತೆ ಕೊಡಬೇಕೆಂಬ ನಿರ್ದೇಶನ ಬಂದಿದೆ. ಈ ಕ್ರಮವನ್ನು ಭಾಷೆಗೆ ಸಂಬಂಧಿಸಿದ ಒಂದು ‘ಬಿಡಿಕ್ರಮ’ವಾಗಿ ನೋಡಿದರೆ ಸಾಲದು, ಯಾಕೆಂದರೆ ಮೋದಿ ಸರಕಾರವು ಆರಂಭಿಸಿರುವ ಕೇಂದ್ರೀಕೃತ ಆಡಳಿತ ವಿಧಾನದ ಒಂದು ವಿಸ್ತರಣಾ ಕ್ರಮವಾಗಿಯೂ ಹಿಂದಿಯೊಂದಕ್ಕೆ ಕೊಡಮಾಡಲು ಹೊರಟ ಈ ಆದ್ಯತೆಯನ್ನು ಅರ್ಥಮಾಡಿಕೊಳ್ಳಬಹುದು.

 ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಭಾಷೆಗೆ ಆದ್ಯತೆ ಕೊಡಬೇಕೆಂದು ಕೇಂದ್ರ ಸರಕಾರವು ಹೊರಡಿಸಿದ ಸುತ್ತೋಲೆಗೆ ತಮಿಳುನಾಡಿನಿಂದ ಆರಂಭಿಸಿ ದಕ್ಷಿಣಭಾರತದ ವಿರೋಧ ವ್ಯಕ್ತವಾಗಿದೆ. ಜೊತೆಗೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯೂ ದನಿಗೂಡಿಸಿದ್ದಾರೆ. ಆನಂತರ ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ಸಂಬಂಧಿಸಿದ ಸಚಿವರು ಸ್ಪಷ್ಟನೆ ನೀಡಿ- ಇದು ಹಿಂದಿಯು ರಾಜ್ಯ ಭಾಷೆಯೊಳಗಿರುವ ಪ್ರಾಂತಗಳಿಗೆ ಮಾತ್ರ ಸಂಬಂಧಿಸಿದ್ದೆಂದು ಹೇಳಿದ್ದಾರೆ. ಆದರೆ ಸುತ್ತೋಲೆಯಲ್ಲಿ ಈ ಅಂಶ ಇಲ್ಲ ಎನ್ನುವುದು ಸತ್ಯ: ಇದು ಹಿಂದಿ ಹೇರಿಕೆಯ ಒಂದು ಪ್ರಯತ್ನ ಎಂಬುದು ವಾಸ್ತವ. ಆದರೆ ಹಿಂದಿ ಹೇರಿಕೆಯೆನ್ನುವುದು ಈಗಿನ ಸರಕಾರಕ್ಕಷ್ಟೇ ಸೀಮಿತವಾದುದಲ್ಲ. ಸ್ವಾತಂತ್ರ್ಯಾನಂತರದ ಕಾಂಗ್ರೆಸ್ ಸರಕಾರವೂ ಇದಕ್ಕೆ ಹೊರತಾಗಿರಲಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಹಿಂದಿ ಪರವಾದ ಅತ್ಯುತ್ಸಾಹದ ಕ್ರಮಗಳು ಕಾಣಿಸಿಕೊಂಡಾಗೆಲ್ಲ ಪ್ರತಿರೋಧ ವ್ಯಕ್ತವಾಗುತ್ತ ಬಂದದ್ದರಿಂದ ‘ಹೇರಿಕೆ’ಯ ಉತ್ಸಾಹವು ಹಿನ್ನೆಲೆಗೆ ಸರಿದಿತ್ತು. ಈಗ ‘ಮೋದಿ ಸರಕಾರ’ದಿಂದ ಮುನ್ನೆಲೆಗೆ ಬಂದಿದೆ.

ಸ್ವಾತಂತ್ರ್ಯಪೂರ್ವ ರಾಷ್ಟ್ರೀಯ ಚಳವಳಿಗಳ ಪರಿಣಾಮದಿಂದಲೋ ಏನೋ ಸಂವಿಧಾನದಲ್ಲಿ ಇತರ ಭಾರತೀಯ ಭಾಷೆಗಳಿಗಿಂತ ವಿಶೇಷವಾದ ಸ್ಥಾನಮಾನ ಲಭ್ಯವಾಗಿದೆ. ಸಂಯುಕ್ತ ಸರಕಾರದ (ಕೇಂದ್ರ) ಮತ್ತು ರಾಜ್ಯಗಳ ಆಡಳಿತಭಾಷೆ, ಶಿಕ್ಷಣದಲ್ಲಿ ಭಾಷಾ ಅಲ್ಪಸಂಖ್ಯಾತರ ಮಾತೃಭಾಷೆ, ಮತ್ತಿತರ ಭಾಷಾಸಂಬಂಧಿ ವಿಧಿಗಳನ್ನು ಕುರಿತು ಸಂವಿಧಾನದ ಕರಡು ಪರಿಶೀಲನಾ ಸಭೆಯಲ್ಲಿ 1939ರ ಸೆಪ್ಟಂಬರ್ 12, 13, 14ರಂದು ಒಟ್ಟು ಮೂರು ದಿನಗಳ ಕಾಲ ವಿವರವಾಗಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗಿದೆ. ಇದರ ಫಲವಾಗಿ ಅಂತಿಮಗೊಂಡ ಹಿಂದಿ ಸಂಬಂಧಿ ವಿಧಿಗಳು ಹೀಗಿವೆ:

ಸಂವಿಧಾನದ 343ನೇ ವಿಧಿಯು ಸಂಯುಕ್ತ (ಕೇಂದ್ರ) ಸರಕಾರದ ಆಡಳಿತ ಭಾಷೆಯನ್ನು ನಿರ್ಣಯಿಸಿದೆ. 343(1)ರ ಪ್ರಕಾರ ದೇವನಾಗರಿ ಲಿಪಿಯಲ್ಲಿರುವ ಹಿಂದಿಯೇ ಸಂಯುಕ್ತ ಸರಕಾರದ ಆಡಳಿತಭಾಷೆ, ಆದರೆ ಅಂತರ್‌ರಾಷ್ಟ್ರೀಯವಾಗಿ ಒಪ್ಪಿತವಾದ ಅಂಕೆಗಳನ್ನು ಬಳಸಬಹುದು. 343(2)ನೇ ವಿಧಿಯು, ಸಂವಿಧಾನವು ಅಂಗೀಕೃತವಾದ ದಿನದಿಂದ ಹದಿನೈದು ವರ್ಷಗಳವರೆಗೆ ಇಂಗ್ಲಿಷನ್ನು ಆಡಳಿತ ಭಾಷೆಯಾಗಿ ಬಳಸಬಹುದು. ರಾಷ್ಟ್ರಪತಿಗಳು ಇಂಗ್ಲಿಷ್ ಜೊತೆಗೆ ಹಿಂದಿ ಬಳಸಲು ಆದೇಶಿಸಬಹುದು. 343(3)ನೇ ವಿಧಿಯಂತೆ ಹದಿನೈದು ವರ್ಷಗಳ ನಂತರ ಇಂಗ್ಲಿಷನ್ನು ಮುಂದುವರಿಸಲು ಸಂಸತ್ತು ಕಾನೂನು ಮಾಡಬೇಕು; ದೇವನಾಗರಿ ಅಂಕಿಗಳನ್ನು ಬಳಸಲೂ ಕಾನೂನು ಮಾಡಬಹುದು.

ಸಂವಿಧಾನ ಅಂಗೀಕೃತವಾದ ಹದಿನೈದು ವರ್ಷಗಳ ನಂತರ ‘ಹಿಂದಿ ಹೇರಿಕೆ’ ಆರಂಭಗೊಂಡು, ತಮಿಳುನಾಡು ಮತ್ತು ದಕ್ಷಿಣ ರಾಜ್ಯಗಳ ವಿರೋಧ ವ್ಯಕ್ತವಾಗಿದ್ದರಿಂದ 1966ರಲ್ಲಿ ಇಂಗ್ಲಿಷ್ ಮತ್ತು ಹಿಂದಿ ಎರಡೂ ಕೇಂದ್ರ ಸರಕಾರ ಆಡಳಿತ ಭಾಷೆಗಳೆಂಬ ಅಧಿಕೃತತೆ ಲಭ್ಯವಾಯಿತು. ಪ್ರತಿರೋಧ ತಣ್ಣಗಾಯಿತು. ಆದರೆ ಆಡಳಿತ ಭಾಷೆಯ ವಲಯವನ್ನು ಮೀರಿಯೂ ಹಿಂದಿಗೆ ಪ್ರಾಶಸ್ತ್ಯ ಮತ್ತು ಪ್ರೋತ್ಸಾಹ ಕೊಡುವ ವಿಧಿಗಳು ಸಂವಿಧಾನದಲ್ಲೇ ಅಡಕವಾಗಿವೆ. ಈ ಸಂಬಂಧವಾಗಿ ಸಂವಿಧಾನದ 344, 346 ಮತ್ತು 351ನೇ ವಿಧಿಗಳನ್ನು ನೋಡಬಹುದು. 344ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು ಆಯೋಗವೊಂದನ್ನು ರಚಿಸಿ ಶಿಫಾರಸುಗಳನ್ನು ಪಡೆಯಬಹುದು. ಈ ಆಯೋಗವು ಸಂಯುಕ್ತ ಸರಕಾರ ಆಡಳಿತದಲ್ಲಿ ಹಿಂದಿ ಭಾಷಾ ಬಳಕೆಯ ಪ್ರಗತಿಯನ್ನು ಪರಿಶೀಲಿಸುವುದು, ಸಂಯುಕ್ತ ಸರಕಾರದಲ್ಲಿ ಇಂಗ್ಲಿಷ್ ಬಳಕೆಯನ್ನು ನಿಯಂತ್ರಿಸುವ ಕ್ರಮಗಳನ್ನು ತಿಳಿಸುವುದು; 348ನೇ ವಿಧಿಯ ಪ್ರಕಾರ ಉಚ್ಚ ನ್ಯಾಯಾಲಯಗಳಲ್ಲಿ ಬಳಸುವ ಭಾಷೆ ಬಗ್ಗೆ ಪರಿಶೀಲಿಸಿ ಶಿಫಾರಸು ಮಾಡುವುದು; ಸಾರ್ವಜನಿಕ ಸೇವೆಯಲ್ಲಿರುವ ಹಿಂದಿಯೇತರ ಪ್ರದೇಶಗಳ, ವ್ಯಕ್ತಿಗಳ ಹಿತಾಸಕ್ತಿಯನ್ನೂ ಗಮನಿಸುವುದು- ಹೀಗೆ ವಿವಿಧ ಅಂಶಗಳನ್ನು ಒಳಗೊಂಡಿದ್ದರೂ 344ನೇ ವಿಧಿಯ ಅಂಶಗಳು ಸ್ಪಷ್ಟವಾಗಿ ಹಿಂದಿಯ ಪರವಾಗಿರುವುದನ್ನು ಗಮನಿಸಬೇಕು.

ಸಂವಿಧಾನದ 346ನೇ ವಿಧಿಯು ರಾಜ್ಯರಾಜ್ಯಗಳ ನಡುವೆ ಮತ್ತು ರಾಜ್ಯಗಳು ಮತ್ತು ಕೇಂದ್ರ ಸರಕಾರದ ನಡುವೆ ಬಳಸಬೇಕಾದ ಭಾಷೆಯ ಬಗ್ಗೆ ತಿಳಿಸುತ್ತ ಎರಡು ಅಥವಾ ಹೆಚ್ಚು ರಾಜ್ಯಗಳು ಒಪ್ಪಿದಲ್ಲಿ ಹಿಂದಿಯನ್ನು ಬಳಸಬಹುದು ಎಂದು ಸ್ಪಷ್ಟಪಡಿಸುತ್ತದೆ. 343ನೇ ವಿಧಿಯ ಪ್ರಕಾರ ಇಂಗ್ಲಿಷ್ ಮತ್ತು ಹಿಂದಿ ಎರಡೂ ಭಾಷೆಗಳನ್ನು ಕೇಂದ್ರದ ಆಡಳಿತ ಭಾಷೆಗಳೆಂದು ಅಧಿಕೃತಗೊಳಿಸಿರುವಾಗ ಹಿಂದಿಯ ಬಳಕೆಗಾಗಿಯೇ ಮತ್ತೊಂದು ವಿಧಿಯಲ್ಲಿ ಪ್ರತ್ಯೇಕ ಪ್ರಸ್ತಾಪ ಮಾಡಿ ಪ್ರಾಶಸ್ಯ ನೀಡಲಾಗಿದೆಯೆಂಬುದನ್ನು ಗಮನಿಸಬೇಕು. ಇನ್ನು 351ನೇ ವಿಧಿಯು ಹಿಂದಿಯ ಅಭಿವೃದ್ಧಿಗಾಗಿ ವಿಶೇಷ ನಿರ್ದೇಶನವನ್ನು ನೀಡುತ್ತದೆ: ‘‘ಇಂಡಿಯಾದ ಬಹುಸಂಸ್ಕೃತಿಗಳ ಸಮಸ್ತ ಸಂಗತಿಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಗುವಂತೆ ಹಿಂದಿ ಭಾಷೆಯನ್ನು ಅಭಿವೃದ್ಧಿಗೊಳಿಸುವುದು ಮತ್ತು ಪ್ರೋತ್ಸಾಹಿಸುವುದು ಕೇಂದ್ರ (ಸಂಯುಕ್ತ) ಸರಕಾರದ ಕರ್ತವ್ಯ’’- ಇದು ಈ ವಿಧಿಯಲ್ಲಿರುವ ಸ್ಪಷ್ಟ ನಿರ್ದೇಶನ, ಇದರ ಜೊತೆಗೆ ಹಿಂದಿಯನ್ನು ಅದರ ಮೂಲಸ್ವರೂಪಕ್ಕೆ ಧಕ್ಕೆ ತರದಂತೆ ಶ್ರೀಮಂತಗೊಳಿಸಿ ಬೆಳೆಸಬೇಕಾದ ಸೂಚನೆಯನ್ನೂ ಈ ವಿಧಿಯು ನೀಡುತ್ತದೆ.

ಈ ಸಂವಿಧಾನಾತ್ಮಕ ನಿರ್ದೇಶನದಂತೆ 1960ರಲ್ಲೇ ‘ಹಿಂದಿ ಕೇಂದ್ರೀಯ ನಿರ್ದೇಶನಾಲಯ’ವನ್ನು ಸ್ಥಾಪಿಸಲಾಗಿದೆ. ಈ ನಿರ್ದೇಶನಾಲಯದ ಮೂಲಕ ದೇಶೀಯರು ಮತ್ತು ವಿದೇಶೀಯರಿಗೆ ಹಿಂದಿಯನ್ನು ಕಲಿಸುವ, ಪ್ರಸಾರ ಮಾಡುವ, ಪುಸ್ತಕ ಪ್ರಕಟಿಸುವ, ಪ್ರಶಸ್ತಿ ನೀಡುವ, ಹಿಂದಿಪರ ಸಂಸ್ಥೆಗಳಿಗೆ ಧನಸಹಾಯ ಮಾಡುವ ಕೆಲಸಗಳನ್ನು ಮಾಡುತ್ತ ಬರಲಾಗಿದೆ. ಕೇಂದ್ರ ಸರಕಾರದಿಂದ ಸ್ಥಾಪಿತವಾದ ‘ವಿಜ್ಞಾನ ಮತ್ತು ತಂತ್ರಜ್ಞಾನ ಪಾರಿಭಾಷಿಕ ಆಯೋಗ’ವು ಎಲ್ಲ ಭಾರತೀಯ ಭಾಷೆಗಳನ್ನು ಒಳಗೊಳ್ಳಬೇಕಾಗಿದ್ದರೂ ಹಿಂದಿ ಕೇಂದ್ರಿತವಾಗಿ ಕೆಲಸ ಮಾಡುತ್ತ ಬಂದಿದೆ. ಹಿಂದಿಯಲ್ಲಿ ಪಾರಿಭಾಷಿಕ ಗ್ರಂಥಗಳ ಪ್ರಕಟಣೆಗೆ ಪಾಶಸ್ತ್ಯ ನೀಡಿದೆ, ಅಪರೂಪಕ್ಕೆಂಬಂತೆ ಪ್ರಾದೇಶಿಕ ಪಾರಿಭಾಷಿಕ ಪುಸ್ತಕಗಳನ್ನು ಹೊರತರಲಾಗಿದೆ. ದೇಶದ ಎರಡನೇ ಪಂಚವಾರ್ಷಿಕ ಯೋಜನೆಯಲ್ಲೇ ಸಂವಿಧಾನದ 351ನೇ ವಿಧಿಯ ಪ್ರಕಾರ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯನ್ನು ನೆಲೆಯೂರಿಸಲು, ಬೆಳೆಸಲು ನೂರಕ್ಕೆ ನೂರು ಧನಸಹಾಯ ಮಾಡಲು ತೀರ್ಮಾನಿಸಲಾಗಿದೆ. ಹಿಂದಿಯಲ್ಲದೆ ಇಂಗ್ಲಿಷ್, ಉರ್ದು ಮತ್ತು ಪ್ರಾದೇಶಿಕ ಭಾಷೆಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸಿದ್ದರೂ ಹಿಂದಿಗೆ ಸಂವಿಧಾನಾತ್ಮಕ ಬೆಂಬಲವಿದೆ ಯೆಂಬುದನ್ನು ಮುಂದುಮಾಡಿ ಯಥೇಚ್ಛ ಯೋಜನೆಗಳನ್ನು ರೂಪಿಸಲಾಗಿದೆ. ಹಿಂದಿಯನ್ನು ಬಿಟ್ಟರೆ ಸಂಸ್ಕೃತಕ್ಕೆ ಈ ಸ್ಥಾನಮಾನ ಮತ್ತು ಧನ ಲಭ್ಯವಾಗಿದೆ.

ಹೀಗೆ, ಹಿಂದಿಯನ್ನು ಮೊತ್ತಮೊದಲ ಸ್ಥಾನದಲ್ಲಿ ಸ್ಥಾಪಿಸುವ ಪ್ರಯತ್ನಗಳಿಗೊಂದು ಇತಿಹಾಸವೇ ಇದೆ. ಇಂತಹ ಪ್ರಜ್ಞಾಪೂರ್ವಕ ಪ್ರಯತ್ನಗಳು ಹಿನ್ನೆಲೆಗೆ ಸರಿದು ಸಮತೋಲನದ ವಾತಾವರಣವೊಂದು ಬೆಳೆದು ಬರುತ್ತಿರುವ ಮತ್ತು ಅದಕ್ಕಾಗಿ ಆಶಿಸುತ್ತಿರುವ ಸಂದರ್ಭದಲ್ಲಿ ಮೋದಿಯವರ ಬಿಜೆಪಿ ಸರಕಾರದಿಂದ ಹಿಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆದ್ಯತೆ ಕೊಡಬೇಕೆಂಬ ನಿರ್ದೇಶನ ಬಂದಿದೆ. ಈ ಕ್ರಮವನ್ನು ಭಾಷೆಗೆ ಸಂಬಂಧಿಸಿದ ಒಂದು ‘ಬಿಡಿಕ್ರಮ’ವಾಗಿ ನೋಡಿದರೆ ಸಾಲದು, ಯಾಕೆಂದರೆ ಮೋದಿ ಸರಕಾರವು ಆರಂಭಿಸಿರುವ ಕೇಂದ್ರೀಕೃತ ಆಡಳಿತ ವಿಧಾನದ ಒಂದು ವಿಸ್ತರಣಾ ಕ್ರಮವಾಗಿಯೂ ಹಿಂದಿಯೊಂದಕ್ಕೆ ಕೊಡಮಾಡಲು ಹೊರಟ ಈ ಆದ್ಯತೆಯನ್ನು ಅರ್ಥಮಾಡಿಕೊಳ್ಳಬಹುದು. ವಿದೇಶಿ ಪ್ರತಿನಿಧಿಗಳ ಜೊತೆಯೂ ಹಿಂದಿಯಲ್ಲೇ ಸಂವಾದಿಸುವ ಮೋದಿಯವರ ಭಾಷಾಬದ್ಧತೆ, ಹಿಂದಿಗೆ ಆದ್ಯತೆ ಕೊಡಬೇಕೆಂಬ ಸುತ್ತೋಲೆ ಮತ್ತು ಕೇಂದ್ರೀಕೃತಗೊಳ್ಳುತ್ತಿರುವ ಆಡಳಿತ ವಿಧಾನಗಳಿಗೂ ಪರಸ್ಪರ ಸಂಬಂಧವಿದೆ. ವಿಕೇಂದ್ರೀಕರಣ ವಿರೋಧಿಯಾದ ಮನೋಧರ್ಮ ಮತ್ತು ತಾತ್ವಿಕತೆಯೊಂದು ಇಲ್ಲಿ ಕೆಲಸಮಾಡುತ್ತಿರಬಹುದೇ ಎಂಬ ಆಧಾರಪೂರ್ವಕ ಅನುಮಾನವನ್ನು ಪರಿಶೀಲಿಸಬೇಕಾಗಿದೆ.

ಯಾವುದೇ ಸರಕಾರದ ಬಗ್ಗೆ ಒಂದು ತಿಂಗಳ ಆಡಳಿತದ ಆಧಾರದಲ್ಲಿ ಅಂತಿಮ ನಿರ್ಣಯಕ್ಕೆ ಬರುವುದು ಸಾಧುವಲ್ಲ. ಆದರೆ ಒಂದು ತಿಂಗಳ ಅವಧಿಯಲ್ಲಿ ಕೈಗೊಂಡ ನಿರ್ಣಯಗಳಿಂದ ಕೆಲವು ಸ್ಪಷ್ಟ ಸುಳುಹುಗಳನ್ನು ಕಂಡುಕೊಳ್ಳುವುದು ಸಾಧ್ಯವಿದೆ. ಮೋದಿಯವರು ಅಧಿಕಾರಕ್ಕೆ ಬಂದಕೂಡಲೇ ಮಾಡಿದ ಒಂದು ಮುಖ್ಯ ಕೆಲಸ ಸಂಪುಟ ಕಾರ್ಯದರ್ಶಿಯನ್ನು ಸುಗ್ರೀವಾಜ್ಞೆ ಮೂಲಕ ನೇಮಿಸಿಕೊಂಡದ್ದು. ಈ ಹುದ್ದೆಗೆ ಬಂದ ನಿರ್ದಿಷ್ಟ ವ್ಯಕ್ತಿಯನ್ನು ಅಸ್ತಿತ್ವದಲ್ಲಿರುವ ನಿಯಮಗಳ ಅನ್ವಯ ನೇಮಿಸಿಕೊಳ್ಳುವಂತಿರಲಿಲ್ಲ. ಅವರು ಹಿಂದಿನ ಉನ್ನತ ಹುದ್ದೆಯಿಂದ (TRAI) ನಿವೃತ್ತರಾದ ನಂತರ ಐದು ವರ್ಷಗಳ ಕಾಲ ಬೇರಾವ ಹುದ್ದೆಯನ್ನೂ ಸ್ವೀಕರಿಸುವಂತಿರಲಿಲ್ಲ. ಆದರೆ ಮೋದಿಯವರು ಅದೇ ವ್ಯಕ್ತಿ ಬೇಕೆಂದು ಸುಗ್ರೀವಾಜ್ಞೆ ಮೂಲಕ ನೇಮಿಸಿಕೊಂಡರು, ನಿರ್ದಿಷ್ಟ ಉದ್ದೇಶಕ್ಕಾಗಿ ಅಸ್ತಿತ್ವದಲ್ಲಿದ್ದ ನೇಮಕಾತಿ ನಿಯಂತ್ರಣವನ್ನು ಮೀರಿದರು. ಅಧಿಕಾರ ವಹಿಸಿಕೊಂಡ ಒಂದೇ ವಾರದೊಳಗೆ ಒಬ್ಬ ಸಚಿವರು ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ರದ್ದು ಮಾಡುವ ಬಗೆಗಿನ ಚರ್ಚೆಗೆ ‘ಪ್ರಧಾನಿಯವರ ಆಶಯ’ದಂತೆ ಚಾಲನೆ ನೀಡಿದರು. ಮತ್ತೊಬ್ಬ ಸಚಿವರು ಏಕರೂಪ ನಾಗರಿಕ ಸಂಹಿತೆಯ ಪ್ರಸ್ತಾಪ ಮಾಡಿದರು. ಹಿಂದಿನ ಸರಕಾರವು ರೂಪಿಸಿದ್ದ ‘ಸಚಿವರ ತಂಡ’ಗಳ ಪದ್ಧತಿಯನ್ನು ಮೋದಿಯವರು ರದ್ದುಗೊಳಿಸಿದರು. ವಿವಿಧ ವಿಷಯಗಳ ಕೂಲಂಕುಷ ಪರಿಶೀಲನೆಗಾಗಿ ಒಂದೊಂದು ವಿಷಯಕ್ಕೂ ನಾಲ್ಕೈದು ಜನ ಸಚಿವರ ತಂಡಗಳನ್ನು (G.O.M.) ರಚಿಸುವ ಪದ್ಧತಿಯು ಚಾಲ್ತಿಯಲ್ಲಿತ್ತು. ಇವರು ನಿರ್ದಿಷ್ಟ ವಿಷಯಗಳನ್ನು ಚರ್ಚಿಸಿದ ನಂತರ ಸಂಪುಟದ ಚರ್ಚೆಗೆ ಟಿಪ್ಪಣಿ ಸಿದ್ಧವಾಗುತ್ತಿತ್ತು. ಈ ಪದ್ಧತಿಯ ಸಾಧಕ ಬಾಧಕಗಳೇನೇ ಇರಲಿ, ಮೋದಿಯವರು ಬಂದ ಕೂಡಲೇ ಸಚಿವರ ತಂಡ ರಚನೆಯ ಪರಿಕಲ್ಪನೆಗೆ ತಿಲಾಂಜಲಿ ನೀಡಿ ಎಲ್ಲ ಸಚಿವರೂ ನೇರವಾಗಿ ತನಗೇ ವಿಷಯ ತಿಳಿಸಬೇಕೆಂದು ಆದೇಶಿಸಿದರು. ಸಚಿವರು ತಮ್ಮ ಆಪ್ತಕಾರ್ಯದರ್ಶಿಗಳನ್ನು ಸ್ವತಂತ್ರವಾಗಿ ನೇಮಿಸಿಕೊಳ್ಳದಂತೆ ನಿರ್ಬಂಧಿಸಿದರು. ಜಾತಿ, ಸ್ವಹಿತಾಸಕ್ತಿಯ ಕಾರಣಕ್ಕಾಗಿ ನೇಮಕ ಮಾಡಿಕೊಳ್ಳುವುದು ಬೇಡವೆಂದು ಸೂಚಿಸುವುದು ಸರಿ. ಆದರೆ ಅದರಾಚೆಗೂ ನಿರ್ಬಂಧ ವಿಧಿಸಿ ತನ್ನ ಒಪ್ಪಿಗೆಯನ್ನು ‘ಕಡ್ಡಾಯ’ಗೊಳಿಸುವ ಕ್ರಮ ಸರಿಯೆ? ರಕ್ಷಣಾ ಇಲಾಖೆಯಲ್ಲಿ ನೂರಕ್ಕೆ ನೂರು ನೇರ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕೊಡುವ ಏಕಪಕ್ಷೀಯ ಹೇಳಿಕೆ ಸೂಕ್ತವೇ?

ಒಟ್ಟಾರೆಯಾಗಿ ಈ ಎಲ್ಲ ಅಂಶಗಳಲ್ಲಿ ಕಾಡುವುದು- ಕೇಂದ್ರೀಕೃತ ಆಡಳಿತ ವಿಧಾನದ ಸೂಚನೆ. ಅನೇಕದಿಂದ ಏಕದ ಕಡೆ ಸಾಗುತ್ತಿರುವ ಚಲನೆ. ಈ ಮನೋಧರ್ಮ ಮತ್ತು ತಾತ್ವಿಕತೆಯ ವಿಸ್ತರಣೆಯು ಭಾಷಾ ವಿಷಯಕ್ಕೂ ಬಂದಂತೆ ಕಾಣುತ್ತದೆ. ಇದರ ಫಲವಾಗಿಯೇ ಹಿಂದಿ ಕೇಂದ್ರಿತ ಆದ್ಯತೆಯ ಸುತ್ತೋಲೆಯನ್ನು ಇಷ್ಟು ಶೀಘ್ರವಾಗಿ ಹೊರಡಿಸಲಾಗಿದೆ. ಮೋದಿ ಸರಕಾರದ ಈ ಸುತ್ತೋಲೆಯನ್ನು ಸಂವಿಧಾನ ವಿರೋಧಿ ಎಂದು ಏಕಾಏಕಿ ಹೇಳಲಾಗುವುದಿಲ್ಲ. ಹಾಗೆ ಹೇಳಿದಾಗ ಮೋದಿ ಸರಕಾರವು ಸಂವಿಧಾನದ 351ನೇ ವಿಧಿಯನ್ನು ತೋರಿಸಬಹುದು. ಹೀಗಾಗಿ ಮೋದಿ ಸರಕಾರವು ಸಂವಿಧಾನ ವಿರೋಧದ ಆರೋಪದಿಂದ ತಪ್ಪಿಸಿಕೊಳ್ಳಬಹುದಾದರೂ ಬಲವಂತದ ಹಿಂದಿ ಹೇರಿಕೆಯ ವಿರುದ್ಧವಾಗಿ ನಡೆದ ಆಂದೋಲನಗಳಿಂದ ಮೂಡಿದ, ಅರಿವಿನ ಗುರುವಾದ ಅಲಿಖಿತ ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸಿದ ಆರೋಪದಿಂದ ತಪ್ಪಿಸಿಕೊಳ್ಳಲಾಗದು.

ಈ ದೃಷ್ಟಿಯಿಂದ ಮೋದಿ ಸರಕಾರದ ಸುತ್ತೋಲೆಯನ್ನು ನಾವು ವಿರೋಧಿಸಬೇಕು, ಜೊತೆಗೆ ಈ ತಾತ್ಕಾಲಿಕ ವಿರೋಧವನ್ನು ಮೀರಿದ ತಾತ್ವಿಕತೆಯತ್ತ ಸಾಗಬೇಕು. ಸಾಮಾಜಿಕ-ಆರ್ಥಿಕ ಸಮಾನತೆಯ ಅದ್ಭುತ ಸಂವಿಧಾನವನ್ನು ನೀಡಿದ ಡಾ. ಅಂಬೇಡ್ಕರ್ ಅವರು ತಿದ್ದುಪಡಿಯ ಪ್ರಜಾಸತ್ತಾತ್ಮಕ ಅವಕಾಶವನ್ನೂ ಕಲ್ಪಿಸಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು, ಸಂವಿಧಾನದಲ್ಲಿರುವ ಹಿಂದಿಕೇಂದ್ರಿತ ವಿಧಿಗಳನ್ನು ಎಲ್ಲ ಭಾರತೀಯ ಭಾಷೆಗಳಿಗೂ ವಿಸ್ತರಿಸುವಂತೆ ಹೋರಾಟ ಕಟ್ಟಬೇಕು, ಅಷ್ಟೇ ಅಲ್ಲ, ಭಾಷಾ ಸಂಬಂಧಿತ ವಿಧಿಗಳನ್ನು ಒಟ್ಟಾಗಿ ಚರ್ಚಿಸಿ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ವಾಸ್ತವಗೊಳಿಸುವ ನಿರ್ಣಯಗಳಿಗೆ ಕಾರಣವಾಗಬೇಕು. ಈ ಮೂಲಕ ಸರ್ವಭಾಷಾ ಸಮಾನತೆಯು ಸಂವಿಧಾನದ ಭಾಗವಾಗಬೇಕು. ಇದು ಕೇಂದ್ರ ಸರಕಾರದ ನೀತಿಯಾಗಬೇಕು, ಮೋದಿಯವರ ಸರಕಾರಕ್ಕೆ ಇದನ್ನು ಮನವರಿಕೆ ಮಾಡಿಕೊಡಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top