-

ಮಹಿಷ ಮಂಡಲ ಮತ್ತು ಬೌದ್ಧ ಪರಂಪರೆ

-

ರಾಜಪ್ರಭುತ್ವದ ಸಂದರ್ಭದಲ್ಲಿ, ರಾಜ್ಯದ ಎಲ್ಲಾ ಜನರಿಗೂ ತಾನು ತಿಳಿಯಬೇಕು ಹಾಗೂ ಅವರು ಸಹ ತನ್ನನ್ನು ನೋಡಲಿ ಎಂದು ಮೈಸೂರಿನಲ್ಲಿ ನಡೆಯುತ್ತಿದ್ದ ದಸರಾದ ಅಂಬಾರಿಯಲ್ಲಿ ಕುಳಿತು ಹೋಗುತ್ತಿದ್ದರು. ಆ ಕಾಲಘಟ್ಟಕ್ಕೆ ರಾಜರೇ ಸರ್ವನಾಗಿದ್ದರಿಂದ ರಾಜರು ತಮ್ಮ ಆಳ್ವಿಕೆಯಲ್ಲಿ ಹಾಗೆ ಹೋಗುತ್ತಿದ್ದರು. ರಾಜಪ್ರಭುತ್ವದ ನಂತರ ಬಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಸರಾ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹವನ್ನು ಕೂರಿಸಿಕೊಂಡು ಹೋಗುವ ಮೂಲಕ ದಸರಾ ಆಚರಣೆ ಮಾಡಲಾಗುತ್ತಿದೆ. ರಾಜಮನೆತನದವರು ಚಾಮುಂಡೇಶ್ವರಿ ತಮ್ಮ ಅದಿದೇವತೆ ಎನ್ನುತ್ತಾರೆ, ವೈದಿಕರು ಮಹಿಷ ಎಂಬ ದುಷ್ಟನನ್ನು ಕೊಂದಿದ್ದು ತಮ್ಮ ಚಾಮುಂಡೇಶ್ವರಿ ಎನ್ನುತ್ತಾರೆ. ಇನ್ನು ಕೆಲವರು ಮಹಿಷ ಒಬ್ಬ ರಾಜ, ಸಂಚು ಮಾಡಿ ಆತನನ್ನು ಕೊಲ್ಲಲಾಗಿದೆ ಎಂದು ಅಭಿಪ್ರಾಯಿಸುತ್ತಾರೆ. ಹೀಗೆ ಹಲವು ಕಾರಣಗಳಿಂದ ದಸರಾಗೆ ಪರ್ಯಾಯವಾಗಿ ಮಹಿಷ ದಸರಾ ಕೂಡ ಕೆಲವು ವರ್ಷಗಳಿಂದ ಆಚರಣೆಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಷ ದಸರಾ ನಿಷೇಧಿಸಲು ಜನಪ್ರತಿನಿಧಿಗಳು ಮುಂದಾಗಿದ್ದಾರೆ.

ಮೈಸೂರು ಎಂಬ ಹೆಸರು ಬಂದಿರುವುದೇ ಇದು ಮಹಿಷ ಮಂಡಲವಾಗಿತ್ತು ಎಂಬ ಕಾರಣಕ್ಕೆ. ಇಲ್ಲೊಬ್ಬ ಆದಿದೊರೆ ಮಹಿಷಾಸುರ ಮಹಿಷ ಮಂಡಲವನ್ನು ಆಳ್ವಿಕೆ ಮಾಡಿದ ಪರಂಪರೆಯಿಂದಲೇ ಮೈಸೂರು ಖ್ಯಾತಿಗೊಳಗಾಗಿದೆ. ಆದರೆ ಇದೇ ಮಹಿಷಾಸುರನನ್ನು ಅವನೊಬ್ಬ ದುಷ್ಟ, ಕಾಮಾಂಧ, ಜನವಿರೋಧಿ ಈತನ ಸಂಹಾರಕ್ಕಾಗಿಯೇ ಪಾರ್ವತಿಯು ಚಾಮುಂಡೇಶ್ವರಿಯ ಅವತಾರವೆತ್ತಿ ಬಂದಳು. ಆಕೆ ಕೊಂದದ್ದು ಜನರಿಗಾಗಿ, ಜನಧರ್ಮಕ್ಕಾಗಿ ಎಂಬಂತೆ ಹೇಳಲಾಗಿದೆ. ಇದರಲ್ಲಿ ಯಾವುದು ಸತ್ಯ? ಯಾವುದು ಕಪೋಲಕಲ್ಪಿತವಾಗಿದೆ? ಎಂಬುದನ್ನು ಅರಿಯಬೇಕಿದೆ.

ಮಹಿಷ ಮಂಡಲವನ್ನು ಹಿಂದೆ ಎರಮೈನಾಡು ಎಂದು ಕರೆಯಲಾಗುತ್ತಿತ್ತು. ಎರಮೈನಾಡು ಎಂದರೆ ಎಮ್ಮೆಗಳ ನಾಡು ಎಂದರ್ಥ. ಈ ಭಾಗದಲ್ಲಿ ಇಲ್ಲಿನ ಮೂಲನಿವಾಸಿಗಳು ಎಮ್ಮೆ ಸಾಕಣೆಯಲ್ಲಿ ಮುಂದಿದ್ದರಲ್ಲದೆ ಎಮ್ಮೆಯನ್ನೇ ತಮ್ಮ ಕುಲಚಿಹ್ನೆಯನ್ನಾಗಿ ಬಳಸುತ್ತಿದ್ದರು. ಇಂದಿಗೂ ಹಳೆ ಮೈಸೂರು ಪ್ರಾಂತದಲ್ಲಿ ಜನಸಮೂಹವು ಎಮ್ಮೆಯ ತಲೆಯ ಆಕಾರದ ಚಿತ್ರವನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಂಡಿರುತ್ತಾರೆ. ಆ ಮೂಲಕ ತಮ್ಮ ಮೂಲಪರಂಪೆಯನ್ನು ಕಾಯ್ದುಕೊಂಡು ಬಂದಿದ್ದಾರೆ.

ಎರಮೈನಾಡು ನಂತರ ಈ ಭೂ ಪ್ರದೇಶ ಮಹಿಷಾ ಮಂಡಲವಾಗಿದೆ. ಬಹುಶಃ ಮಹಿಷಾಸುರನ ಆಳ್ವಿಕೆಯ ಪ್ರಾರಂಭದ ನಡುವೆ ಎರಮೈನಾಡು ಹೋಗಿ ಮಹಿಷ ಮಂಡಲ ಎಂದು ಮರುನಾಮಾಂಕಿತವಾಗಿರಬೇಕು. ಉತ್ತರದಲ್ಲಿ ಕುರು, ಪಾಂಚಾಲ, ಮಗಧ, ಕೋಸಲ, ನಾಗ ಎಂಬ ಜನಪದ ಆಳ್ವಿಕೆಯ ಕುಲಗಳಿದ್ದಂತೆ, ದಕ್ಷಿಣದಲ್ಲಿಯೂ ನಾಗ, ಚೇರ, ವೆಂಗಿ, ಮಹಿಷ ಮಂಡಲ ಆಳ್ವಿಕೆಯ ಕುಲಗಳಾಗಿದ್ದವು. ಮಹಿಷ ಮಂಡಲವು ನಾಗ ಜನರಿಂದಲೇ ಆನಂತರ ಕರೆಯಲ್ಪಟ್ಟದ್ದು. ಮಹಿಷ ಮಂಡಲದಲ್ಲಿ ಮಹಿಷಾಸುರ ಎಮ್ಮೆಯ ತಲೆಯ ಚಿಹ್ನೆಯನ್ನಿಟ್ಟುಕೊಂಡು ಆಳ್ವಿಕೆ ಮಾಡುತ್ತಿದ್ದ ರಾಜ. ಆತನ ಆಳ್ವಿಕೆಯಲ್ಲಿ ಎಲ್ಲರನ್ನೂ ಕಾಯ್ದುಕೊಳ್ಳುತ್ತಿದ್ದ. ಜನರನ್ನು ರಕ್ಷಿಸುವುದರ ಜೊತೆಗೆ ಮೂಲ ಂಸ್ಕೃತಿಯ ರಕ್ಷಕನೂ ಕೂಡ ಆಗಿದ್ದ.

ಭಾರತದ ಮೂಲನಿವಾಸಿ ಅಸುರ ಮನೆತನಗಳನ್ನು ಸಂಸ್ಕೃತಿ ಇಲ್ಲದವರು, ಕೀಳು ಜನರು, ಯೋಗ್ಯರಲ್ಲದವರು ಎಂಬಂತೆ ಚರಿತ್ರೆಕಾರರು ಸೃಷ್ಟಿಸಿದ್ದಾರೆ. ಆದರೆ ವಾಸ್ತವವಾಗಿ ಹರಪ್ಪ -ಮೊಹೆಂಜೊದಾರೋ ಎಂಬ ಬೃಹತ್ ನಾಗರಿಕತೆಯನ್ನು ಕಟ್ಟಿದವರೇ ಅಸುರರು. 1922ರಲ್ಲಿ ಆರ್.ಡಿ. ಬ್ಯಾನರ್ಜಿ ಅವರು ಬೌದ್ಧ ಸ್ಥೂಪಗಳ ಉತ್ಖನನ ಮಾಡುವಾಗ ಈ ಭವ್ಯನಗರದ ಕುರುಹುಗಳು ಸಿಕ್ಕಿದವು. ಈಜಿಪ್ಟ್ ಮತ್ತು ಮೆಸಪೊಟೋಮಿಯ ನಾಗರಿಕತೆಗೆ ಸಮವಾಗಿ ಅಂದು ನಮ್ಮ ಹರಪ್ಪ-ಮೊಹೆಂಜೊದಾರೋ ನಗರಗಳು ಬೆಳೆದಿದ್ದವು. ಅಂದಿನ ಕಾಲಘಟ್ಟದಲ್ಲಿ ಜನರು ತಂತ್ರಜ್ಞಾನ, ವಿಜ್ಞಾನ ಹಾಗೂ ಮುಂತಾದ ವಿಷಯಗಳಲ್ಲಿ ಮುಂದಿದ್ದರು. ಕ್ರಿ.ಪೂ.3000 ವರ್ಷಗಳ ಹಿಂದಿನ ಈ ಭವ್ಯ ನಾಗರಿಕ ಪರಂಪರೆ ಆರ್ಯರ ಆಗಮನದ ನಂತರ ನಾಶವಾದವು ಎಂದು ಅಭಿಪ್ರಾಯ ಪಡುತ್ತಾರೆ. ಭವ್ಯ ನಾಗರಿಕತೆಯನ್ನು ನಾಶಪಡಿಸಿದ ಆರ್ಯ ಜನಾಂಗವು, ಆನಂತರದಲ್ಲಿ ತಲೆ ಎತ್ತಿದ ಮೂಲಜನರ ಆಳ್ವಿಕೆ ಸಂಸ್ಥಾನಗಳನ್ನು ನಾಶಮಾಡುತ್ತಾ ಬಂದಿತು. ಅವರ ಅಸಮಾನತೆ ಹಾಗೂ ಮೌಢ್ಯ ಸಿದ್ಧಾಂತವನ್ನು ಯಾರು ಒಪ್ಪಿಕೊಳ್ಳುತ್ತಾರೋ ಅಂತಹ ಸಾಮ್ರಾಜ್ಯವನ್ನು ಬೆಳೆಯಲು ಬಿಟ್ಟು, ಯಾರು ಅವರ ಸಿದ್ಧಾಂತವನ್ನು ಒಪ್ಪುವುದಿಲ್ಲವೋ ಅಂತಹ ಆಳ್ವಿಕೆ ಪರಂಪರೆಯನ್ನು ನಾಶ ಮಾಡಿದ್ದಾರೆ. ಹೀಗೆ ಉತ್ತರದಲ್ಲಿ ತಮ್ಮ ಅಸಮಾನತೆಯನ್ನು ಭಿತ್ತಿ ಮೂಲನಿವಾಸಿಗಳ ಪ್ರಜಾಪ್ರಭುತ್ವ ರಾಜಾಳ್ವಿಕೆಯನ್ನು ಕಸಿದುಕೊಂಡು ಆನಂತರ ಬಂದದ್ದು ಕ್ಷಿಣ ಭಾರತದ ಮಹಿಷ ಮಂಡಲಕ್ಕೆ.

ಮಹಿಷ ಮಂಡಲವು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದ ಪ್ರದೇಶ. ಕೆಲವರು ಮಹಿಷನನ್ನು ಬುದ್ಧಪೂರ್ವ ಎಂದು ಹೇಳುತ್ತಾರೆ. ಹಲವರು ಅಶೋಕನ ನಂತರ ಎಂದು ಕರೆಯುತ್ತಾರೆ. ಕ್ರಿ.ಪೂ.3ನೇ ಶತಮಾನದಲ್ಲಿ ಸಾಮ್ರಾಟ ಅಶೋಕ ಬೌದ್ಧ ಸಮ್ಮೇಳನವೊಂದನ್ನು ಆಯೋಜಿಸಿದ್ದ. ಆ ಸಮ್ಮೇಳನದ ಅಧ್ಯಕ್ಷತೆಯನ್ನು ಮೊಗ್ಗಾಲಿತಿಸ್ಸ ಎಂಬವರು ವಹಿಸಿಕೊಂಡರು. ಅದೇ ಸಂದರ್ಭದಲ್ಲಿ ಬೌದ್ಧಧರ್ಮ ಪ್ರಚಾರಕ್ಕಾಗಿ ಕರ್ನಾಟಕದಲ್ಲಿ ಬನವಾಸಿಗೆ ತೇರಾರಕ್ಕಿತರನ್ನು, ಮಹಿಷಾ ಮಂಡಲ(ಮೈಸೂರು)ಕ್ಕೆ ಹರಿಹಂತ್ ಮಹದೇವಾ ತೇರಾ ಎಂಬವರನ್ನು ಕಳುಹಿಸಿಕೊಟ್ಟಿದ್ದರೆಂದು ಅಶೋಕನ ಶಾಸನದಲ್ಲಿಯೇ ದಾಖಲಾಗಿದೆ. ಇದಲ್ಲದೆ ದೀಪವಂಶ ಹಾಗೂ ಮಹಾವಂಶ ಕೃತಿಯಲ್ಲಿಯೂ ಕೂಡ ಮಹಿಷ ಮಂಡಲದ ದಾಖಲೆ ಇದೆ. 1910ರಲ್ಲಿ ಜೆ.ಎಫ್. ಫ್ಲೀಟ್ ಎನ್ನುವ ವಿದ್ವಾಂಸರು ಇದರ ಕುರಿತು ಲೇಖನವನ್ನು ಪ್ರಕಟಿಸಿದ್ದರು. ಮಧ್ಯಪ್ರದೇಶದ ಸಾಂಚಿ ಸ್ಥೂಪದ ಮೇಲಿರುವ ಮಹಿಸತಿ, ಮಾಹಿಸ್ಮತಿ ಮಹಿಷ ಮಂಡಲವನ್ನು ಹೆಸರಿಸುತ್ತವೆ ಎಂಬುದನ್ನು ಸಂಶೋಧಕರಾದ ಷ. ಶೆಟ್ಟರ್ ಅಭಿಪ್ರಾಯಿಸುತ್ತಾರೆ.

ಮಹಿಷ ಮಂಡಲವನ್ನು ಆಳ್ವಿಕೆ ಮಾಡಿದ್ದು ತೋಡ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಷಾಸುರ. ತೋಡ ಜನಾಂಗವೇ ಭಾರತದ ಮೂಲ ಬೌದ್ಧರು. ಆರ್ಯರು ಹಸುಗಳೊಂದಿಗೆ ಮಹಿಷ ಪ್ರಾಂತವನ್ನು ಪ್ರವೇಶಿಸಿದರು. ಆರ್ಯರು ಹಸುವನ್ನು ಶ್ರೇಷ್ಠ ಎಂದು ಭಾವಿಸಿದರೆ, ಮೈಸೂರು ಪ್ರಾಂತದವರು ಎಮ್ಮೆಗಳನ್ನು ಶ್ರೇಷ್ಠ ಎಂದು ಕರೆಯುತ್ತಿದ್ದರು. ಸಂಪತ್ತು ಮತ್ತು ಶ್ರೇಷ್ಠತೆಯನ್ನು ಇವರು ಪ್ರಾಣಿಗಳ ಮೂಲಕ ಅಳತೆ ಮಾಡಿಕೊಳ್ಳುತ್ತಿದ್ದರು. ಎಮ್ಮೆ ಮತ್ತು ಹಸುವಿನ ಕಾರಣಕ್ಕಾಗಿಯೇ ಇಲ್ಲಿ ಆರ್ಯರು ಮತ್ತು ತೋಡ ಜನಾಂಗಕ್ಕೂ ಯುದ್ಧ ಘಟಿಸಿದೆ. ಈ ಯುದ್ಧದಲ್ಲಿ ಮಹಿಷನನ್ನು ಕೊಂದಿದ್ದಾರೆ ಎಂದು ಅಭಿಪ್ರಾಯಿಸಲಾಗುತ್ತಿದೆ. ಆದರೆ ಯುದ್ಧದ ತರುವಾಯ ತೋಡ ಜನಾಂಗ ಮಹಿಷ ಮಂಡಲದಿಂದ ಉದಕ ಮಂಡಲಕ್ಕೆ (ಅಂದರೆ ಇಂದಿನ ಊಟಿಗೆ) ಪಲಾಯನವಾಯಿತು. ಇಂದಿಗೂ ಪಲಾಯನಗೊಂಡ ಬುಡಕಟ್ಟು ತೋಡ ಸಮುದಾಯ ಅಲ್ಲಿಯೇ ನೆಲೆಸಿದೆ. ಇಂದಿಗೂ ಅವರು ನಾವು ಮಹಿಷನ ವಂಶಸ್ಥರು ಎಂದೇ ಕರೆದುಕೊಳ್ಳುತ್ತಾರೆ. ಹಾಗಾಗಿ ಮಹಿಷ ಮಂಡಲ ಬೌದ್ಧರ ಕೇಂದ್ರವಾಗಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಮಹಿಷ ಮಂಡಲದಲ್ಲಿ ಮಹಿಳೆಯರು ಯುದ್ಧದಲ್ಲಿ, ಗಿಡಮೂಲಿಕೆ ಔಷಧಿಯಲ್ಲಿ ಹೆಸರುವಾಸಿಯಾಗಿದ್ದರು. ಗಂಡಸರು ಹೊರಗಿನಿಂದ ದುಡಿದು ಬಂದರೆ, ಮಹಿಳೆಯರು ಮನೆಯಲ್ಲಿ ಜಾನುವಾರು, ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಹಾಗೆಯೇ ಸಂದರ್ಭ ಬಂದಾಗ ಯುದ್ಧದಲ್ಲಿ ಪಾಲ್ಗೊಳ್ಳುವುದು, ಔಷಧೋಪಚಾರ ಮಾಡುವುದು ಮುಂತಾದವುಗಳಲ್ಲಿ ಇವರ ಪಾಲ್ಗೊಳ್ಳುವಿಕೆ ಇತ್ತು. ಅಂತಹವರನ್ನು ಅಮ್ಮಂದಿರು ಎಂದು ಕರೆಯುತ್ತಿದ್ದರು. ಮಹಿಷ ಮಂಡಲದಲ್ಲಿ ಐದು ರೀತಿಯ ಅಮ್ಮಂದಿರು ಬರುತ್ತಾರೆ. ಶತ್ರು ಪಡೆಯ ವಿರುದ್ಧ ದಂಡೆತ್ತಿ ಹೋದವಳನ್ನು ದಂಡಿನ ಮಾರಿ, ಕೋಟೆ ಕಾಯುತ್ತಿದ್ದವಳನ್ನು ಕೋಟೆ ಮಾರಮ್ಮ, ಸಿಡುಬು ರೋಗಕ್ಕೆ ಗಿಡಮೂಲಿಕೆ ಔಷಧಿ ಕೊಡುತ್ತಿದ್ದವಳನ್ನು ಸಿಡುಬು ಮಾರಮ್ಮ, ಬಂಡಿ ಏರಿ ಯುದ್ಧಕ್ಕೆ ಹೋದವಳನ್ನು ಬಂಡಿಕಾಳಮ್ಮ, ಶತ್ರು ಪಡೆಯಿಂದ ಶೀಲ ರಕ್ಷಿಸಿಕೊಂಡವಳು ಹಾಗೂ ಕೆರೆ ಕಟ್ಟೆ ತುಂಬಿಸಲು ಪ್ರಾಣತ್ಯಾಗ ಮಾಡಿದವಳನ್ನು ಕಟ್ಟೆ ಮಾರಮ್ಮ ಈ ಐವರು ಪ್ರಸಿದ್ಧರು. ಇವರನ್ನು ನಮ್ಮ ಮೂಲನಿವಾಸಿಗಳು, ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಜನರು ಇಂದಿಗೂ ಚೌಡಮ್ಮಂದಿರು, ಚಾಮುಂಡಮ್ಮಂದಿರು ಎಂದು ಕರೆಯುತ್ತಾರೆ. ಆ ಸಂದರ್ಭದ ಕಾಲಘಟ್ಟದಲ್ಲಿ ಅನ್ಯಾಯದ ವಿರುದ್ಧ ಬಂಡಾಯವೇಳುವ ಹೆಣ್ಣು ಮಕ್ಕಳನ್ನು ಚಾಮುಂಡಿ ಎಂು ಕರೆಯುತ್ತಿದ್ದ ವಾಡಿಕೆಯೂ ಇತ್ತು.

ಮಹಿಷನನ್ನು ಕೊಂದಿದ್ದು ಚಾಮುಂಡೇಶ್ವರಿ ಎನ್ನುವುದು ಒಂದು ಕಡೆಯ ವಾದವಾದರೆ, ಚಾಮುಂಡೇಶ್ವರಿಯು ಮೈಸೂರು ರಾಜಮನೆತನದ ಅದಿದೆೀವತೆ ಎಂಬುದು ಮತ್ತೊಂದು ವಾದ. ಮೈಸೂರಿನ ರಾಜರಿಗೂ ಉಮ್ಮತ್ತೂರಿನ ಅರಸರಿಗೂ ಆಗಾಗ ಯುದ್ಧ ಸಂಭವಿಸುತ್ತಲೇ ಇತ್ತು. ಒಂದು ದಿನ ಮೈಸೂರಿನ ರಾಜನಿಗೂ ಉಮ್ಮತ್ತೂರಿನ ರಾಜನಿಗೂ ಯುದ್ಧ ಪ್ರಾರಂಭವಾದಾಗ, ಮೈಸೂರಿನ ಸೈನ್ಯದ ಪಕ್ಕದಲ್ಲಿ ಮಾಂಸ ಮಾರುವ ಹೆಂಗಸೊಬ್ಬಳು ಯುದ್ಧ ನೋಡಲು ಹೋಗಿ ಮೈಸೂರಿನ ಸೈನ್ಯದೊಂದಿಗೆ ಆಕೆಯೂ ಯುದ್ಧ ಮಾಡಿದಳು. ಆ ಹೆಂಗಸು ಯುದ್ಧದಲ್ಲಿ ಪಾಲ್ಗೊಂಡ ಮೇಲೆ ಮೈಸೂರಿನ ಅರಸರು ಯುದ್ಧ ಜಯಿಸಿದ್ದರಿಂದ ಚಾಮುಂಡಿ ಎಂದು ಆಕೆಯನ್ನು ಕರೆದಿದ್ದಾರೆ. ಯಾಕೆಂದರೆ ಮೈಸೂರು ಭಾಗದಲ್ಲಿ ಯುದ್ಧಕ್ಕೆ ಹೋಗುವ ಹೆಣ್ಣು ಮಗಳನ್ನು ಚಾಮುಂಡಿ ಎಂದು ಕರೆಯುತ್ತಿದ್ದರು. ಈ ಕಾರಣಕ್ಕಾಗಿಯೇ ಮೈಸೂರು ಸಂಸ್ಥಾನದ ಪ್ರಮುಖ ದೇವತೆಯಾಗಿ ಚಾಮುಂಡಿ ಕಾಣಿಸಿಕೊಂಡಿದ್ದಾಳೆ ಎಂಬ ವಾದವಿದೆ.

ಹಳೆ ಮೈಸೂರು ಭಾಗದಲ್ಲಿ ನಡೆಯುವ ಪಿತೃಪಕ್ಷ ಹಬ್ಬದಾಚರಣೆಯ ಮೂಲಕ ಜನಪದೀಯ ನೆಲೆಗಳ ಮೂಲಕವೇ ಮಹಿಷನನ್ನು ಕಂಡುಕೊಳ್ಳುವ ಅಗತ್ಯವಿದೆ. ಮಹಾಲಯ ಅಮಾವಾಸ್ಯೆ ದಿನ ಈ ಹಬ್ಬ ಜರುಗುತ್ತದೆ. ಮಹಾಲಯ ಅಮಾವಾಸ್ಯೆ ಎಂದರೆ ದೊಡ್ಡ ಮಟ್ಟದ ಕಗ್ಗತ್ತಲು ಆವರಿಸಿತು ಎಂದರ್ಥ. ಮಹಿಷ ಮಡಿದ ದಿನವನ್ನು ಕಗ್ಗತ್ತಲ ದಿನ ಎಂದು ಆಚರಿಸಲಾಗುತ್ತದೆ. ಪಿತೃಪಕ್ಷ ಎನ್ನುವುದು ಅಲ್ಲಿಂದಲೇ ಪ್ರಾರಂಭವಾಗಿದೆ ಎಂಬುದನ್ನು ಜನಪದ ಆಚರಣೆಗಳು ಅಂದಾಜಿಸುತ್ತವೆ. ಪಿತೃಪಕ್ಷ ಎಂದರೆ ಸತ್ತ ತಂದೆಗೆ ಸಾವಿನ ನೆನಪಿನಾರ್ಥಕವಾಗಿ ಎಡೆ ಹಿಡುವುದು. ಆ ದಿನ ಮಾಂಸದ ಅಡುಗೆ ಮಾಡಿ ಎಡೆ ಹಿಡುವ ಪದ್ಧತಿ ಇದೆ. ಮಹಿಷನನ್ನು ತಂದೆ ಸಮಾನ ಎಂದುಕೊಂಡಿದ್ದ ಮಹಿಷ ಮಂಡಲದ ಜನರು ಶೋಕದ ಭಾಗವಾಗಿ ಅದನ್ನು ಮಾಡುತ್ತಾರೆ. ನಮ್ಮ ಆಚರಣೆಗಳಲ್ಲಿಯೇ ನಮ್ಮ ಚರಿತ್ರೆಗಳನ್ನು ಕಂಡುಕೊಳ್ಳಬೇಕಿದೆ. ಮಹಿಷ ಮಂಡಲದಲ್ಲಿ ಬೌದ್ಧರ ನಾಶದ ಹಿಂದೆ ಒಂದು ಚಾರಿತ್ರಿಕ  ವಂಚನೆಯನ್ನು ಗ್ರಹಿಸಬೇಕಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top