-

ಇಂದು ಗಾಂಧಿ ಜಯಂತಿ

ಗಾಂಧೀಜಿ ಮತ್ತು ‘ಹೆಣ್ತನ’

-

ಹೋರಾಟದ ದಾರಿಯಲ್ಲಿ ಬರುವ ಎಲ್ಲ ಎಡರು ತೊಡರುಗಳನ್ನು ನಿಭಾಯಿಸಲು, ನುಗ್ಗುವ, ಅಬ್ಬರಿಸುವ, ಸಂದರ್ಭ ಬಂದರೆ ರಕ್ತ ಹರಿಸಬಲ್ಲ ಗಂಡೆದೆಯ ವೀರರನ್ನು ನಿರೀಕ್ಷಿಸುತ್ತದೆ. ಬಹಳ ಕುತೂಹಲದ ಸಂಗತಿಯೆಂದರೆ, ಮಹಾತ್ಮಾ ಗಾಂಧಿಯವರು ಈ ಮನಸ್ಥಿತಿಗೆ ವ್ಯತಿರಿಕ್ತವೆಂಬಂತೆ, ಭಾರತದ ಸ್ವಾತಂತ್ರ್ಯ ಹೋರಾಟದ ಮುಂದಾಳುತ್ವ ವಹಿಸಿಕೊಂಡಾಗ ಬಳಸಿದ್ದು ಹೆಣ್ಣು ಗುಣಗಳನ್ನು ಪೌರುಷಕ್ಕೆ ಬದಲಾಗಿ ಸಾತ್ವಿಕವಾದ ಸತ್ಯಾಗ್ರಹ, ರೋಷಕ್ಕೆ ಬದಲಾಗಿ ತಾಳ್ಮೆ, ಹಿಂಸೆಯ ಬದಲಿಗೆ ಅಹಿಂಸೆಯನ್ನು ಅವರು ಆಯ್ಕೆ ಮಾಡಿಕೊಂಡರು. ವೈಯಕ್ತಿಕವಾಗಿ ತಾನು ಈ ಹೆಣ್ತನವನ್ನು ರೂಢಿಸಿಕೊಂಡದ್ದಲ್ಲದೆ ತಾನು ಕೆಲಸ ಮಾಡುತ್ತಿದ್ದ ಸಾರ್ವಜನಿಕ ಕ್ಷೇತ್ರವನ್ನೇ ಅವರು ಮೃದುಗೊಳಿಸಿದರು ಎಂಬುದು ಬಹಳ ಮಹತ್ವದ ಸಂಗತಿ.

ಅಹಿಂಸಾತ್ಮಕ ಮಾರ್ಗಗಳು ಶಕ್ತಿಯುತ ಎಂಬುದನ್ನು ಗಾಂಧಿ ತಮ್ಮ ಮನೆಯ ಹೆಂಗಸರಿಂದಲೇ ಕಂಡುಕೊಂಡಿದ್ದರು, ಪುರುಷ ಪ್ರಧಾನ ಸಮಾಜ ಹೆಣ್ಣನ್ನು ದುರ್ಬಲಳನ್ನಾಗಿಸಿದೆ. ಹಾಗಾಗಿ ಅಹಿಂಸಾ ಮಾರ್ಗ ಆಕೆಗೆ ಅನಿವಾರ್ಯ. ದುರ್ಬಲರಾದವರು ಬಳಸುವ ಅಹಿಂಸಾ ಮಾರ್ಗವನ್ನು ಸಬಲರೆನಿಸಿಕೊಂಡವರೂ ತಮ್ಮ ಕಾರ್ಯ ಯೋಜನೆಯ ಮಾರ್ಗವಾಗಿಸಿಕೊಂಡರೆ ಅದು ಇನ್ನಷ್ಟು ಪ್ರಬಲ ಶಕ್ತಿಯಾಗುತ್ತದೆ ಎಂಬುದು ಗಾಂಧೀಜಿಯ ನಂಬಿಕೆಯಾಗಿತ್ತು. ಅಹಿಂಸೆ ದೌರ್ಬಲ್ಯದ ಶಿಶುವಲ್ಲ, ನಿರ್ಭಯನಾದವನು ಮಾತ್ರ ಹೆಚ್ಚು, ಅಹಿಂಸಾವಾದಿಯಾಗಿರುವುದು ಸಾಧ್ಯ ಎಂಬ ಅವರ ಕಾಣ್ಕೆೆಯ ಫಲವೇ ಅವರು ತಮ್ಮ ಸ್ವಾತಂತ್ರ ಹೋರಾಟಕ್ಕಾಗಿ ಶೋಧಿಸಿಕೊಂಡ ತಂತ್ರಗಳು - ಸತ್ಯಾಗ್ರಹ, ಉಪವಾಸ, ಮೌನ ವ್ರತ ಮುಂತಾದವು. ಇಂತಹದ್ದೊಂದು ಅಪೂರ್ವವಾದ ಅಹಿಂಸಾ ಮಾರ್ಗದ ಹೋರಾಟದ ಸಾಧ್ಯತೆಯನ್ನು ಹೇಗೆ ಈ ಜಗತ್ತೇ ಬೆರಗಿನಿಂದ ನೋಡಿತು ಮತ್ತು ಈ ಹೊಸ ಮಾದರಿಯನ್ನು ಅನುಸರಿಸುವ ಪ್ರಯತ್ನ ಮಾಡಿತು ಎಂಬುದು ಈಗ ಇತಿಹಾಸ.

ಗಾಂಧೀಜಿಯವರು ಸತ್ಯಾಗ್ರಹವೆಂಬ ಆಯುಧದ ಶೋಧನೆಯಲ್ಲಿ ಅವರ ತಾಯಿ ಪುತಲೀಬಾಯಿಯವರ ಪಾತ್ರ ಬಹಳ ದೊಡ್ಡದು. ವ್ರತ ನಿಷ್ಠೆಯಾದ ತಾಯಿ ರಾತ್ರಿ ಚಂದ್ರನನ್ನು ನೋಡದೆ ಹನಿ ನೀರನ್ನೂ ಕುಡಿಯಳು. ಖಾಯಿಲೆಯಿಂದ ನರಳುತ್ತಿರುವ ಆಕೆ ದಣಿದಾಳು ಎಂದು ಸಂಕಟಪಡುವ ಬಾಲಕ ಮೋಹನದಾಸ ತಾನು ಚಂದ್ರನನ್ನು ಕಂಡೆ ಎಂದು ತಾಯಿಗೆ ಸುಳ್ಳು ಹೇಳಿ ಆಕೆ ಊಟ ಮಾಡುವಂತೆ ಒತ್ತಾಯಿಸುತ್ತಾನೆ. ಆದರೆ ಆ ತಾಯಿ ತಾನೇ ಹೊರ ಬಂದು ಆಕಾಶ ನೋಡಿ ಅಲ್ಲಿ ಚಂದ್ರನಿಲ್ಲದ್ದನ್ನು ಕಂಡು ‘‘ವ್ರತ ಮುಗಿಯಬೇಕಾದರೆ ನಾನೇ ಚಂದ್ರನನ್ನು ಕಾಣಬೇಕು. ಸತ್ಯ, ನನ್ನ ಸ್ವಂತ ಅನುಭವಕ್ಕೆ ಬಂದಾಗ ಮಾತ್ರ ಅದು ಸತ್ಯ ಎನ್ನಿಸಿಕೊಳ್ಳುತ್ತದೆ’’ ಎಂದು ಹೇಳಿ ಊಟ ಮಾಡಲು ನಿರಾಕರಿಸುತ್ತಾರೆ. ಆಗಲೇ ಬಾಲಕ ಮೋಹನದಾಸನಿಗೆ, ನನ್ನ ಸತ್ಯವನ್ನು ನಾನೇ ಕಂಡುಕೊಳ್ಳಬೇಕು! ಎಂಬ ಸತ್ಯದ ದರ್ಶನವಾಗುವುದು. ನಂತರ ತಮ್ಮ ಬದುಕನ್ನು ಸತ್ಯದ ಅನ್ವೇಷಣೆಯನ್ನಾಗಿಸಿಕೊಂಡವರು. ಹಾಗೆ ಬದುಕಿದ್ದಕ್ಕೆ ‘‘ನನ್ನ ಬದುಕೇ ನನ್ನ ಸಂದೇಶ’’- ಎಂದು ಸಾರುವ ಛಾತಿಯನ್ನು ಗಾಂಧಿ ಗಳಿಸಿದರು.

ಗಾಂಧಿ ಕಂಡುಕೊಂಡ ‘ಅಹಿಂಸೆ’ ಎಂಬ ಪರಿಕಲ್ಪನೆಗೆ ‘ಹಿಂಸೆ’ ಇಲ್ಲದ್ದು ಎಂಬ ಸೀಮಿತ ಅರ್ಥ ಮಾತ್ರವಲ್ಲ. ಬಹಳ ವಿಶಾಲವಾದ ಕ್ಯಾನ್ವಾಸಲ್ಲಿ ಅದನ್ನವರು ಗ್ರಹಿಸಿದ್ದರು. ಅಹಿಂಸೆ ಎಂದರೆ ಪ್ರೀತಿ ಸತ್ಯದ ಹುಡುಕಾಟಕ್ಕೆ ನಮಗೆ ನೆರವಾಗುವ ಬಹಳ ಶಕ್ತಿಶಾಲಿಯಾದ ಮಾರ್ಗ ಅದು ಎಂಬುದನ್ನು ಅವರು ಸಾಬೀತು ಪಡಿಸಿದ್ದರು. ಅಹಿಂಸೆಯೇ ಏಕೆ ಬೇಕು ಎಂಬುದಕ್ಕೂ ಅವರಲ್ಲಿ ತರ್ಕಬದ್ಧವಾದ ಕಾರಣಗಳಿದ್ದವು. ಮೊದಲನೆಯದಾಗಿ, ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಕಿಡಿಯಷ್ಟಾದರೂ ದೈವತ್ವವಿರುತ್ತದೆ. ಹಾಗಾಗಿ ಆತನಿಗೆ ಹಿಂಸೆ ನೀಡಿದರೆ ಆ ದೈವಕ್ಕೆ ಅಪಚಾರ ಮಾಡಿದಂತೆ. ಎರಡನೆಯದು, ಯಾವ ಮನುಷ್ಯನೂ ತನಗೆ ಆತ್ಯಂತಿಕ ಸತ್ಯದ ಅರಿವಿದೆ ಎಂದು ಹೇಳಿಕೊಳ್ಳುವುದು ಸಾಧ್ಯವಿಲ್ಲ. ಹಾಗಾಗಿ ಆತನಿಗೆ ಇತರರನ್ನು ಹಿಂಸಿಸುವ ಅಧಿಕಾರವಿರುವುದಿಲ್ಲ. ಮೂರನೆಯ ಕಾರಣ, ಹಿಂಸೆ ನಾವು ಅಪೇಕ್ಷಿಸಿದ ಪ್ರತಿಫಲವನ್ನು ಕೊಟ್ಟ ಉದಾಹರಣೆ ಇತಿಹಾಸದಲ್ಲಿ ಇಲ್ಲವೇ ಇಲ್ಲ. ನಾಲ್ಕನೆಯ ಮತ್ತು ಬಹಳ ಮುಖ್ಯ ಕಾರಣ, ಹಿಂಸೆ ನಮ್ಮ ನೈತಿಕತೆ, ವೈಚಾರಿಕತೆ ಮತ್ತು ಭಾವನೆಗಳ ನಡುವೆ ಬಿರುಕನ್ನು ತರುತ್ತದೆ. ಹೀಗೆ ಗಾಂಧೀಜಿಗೆ ಅಹಿಂಸೆ ಎನ್ನುವುದು ರಾಜಕೀಯ ತಂತ್ರ ಮಾತ್ರವಲ್ಲ, ಅದೊಂದು ಯೋಚನಾ ಕ್ರಮ, ಮಾನವನ ಬದುಕಿನ ಕ್ರಮ.

ಅವರು ಪಾಲಿಸುತ್ತಿದ್ದ ಬ್ರಹ್ಮಚರ್ಯಕ್ಕೂ ಅಹಿಂಸಾವಾದಕ್ಕೂ ಅವಿನಾಭಾವ ಸಂಬಂಧ ಇದೆ. ಹೆಣ್ಣಿನ ಒಪ್ಪಿಗೆಯಿಲ್ಲದೆ ನಡೆವ ಅದೆಷ್ಟೋ ದೈಹಿಕ ಸಂಬಂಧಗಳು ಉಂಟುಮಾಡುತ್ತಿದ್ದ ಹಿಂಸೆ, ಬಾಲವಿಧವೆಯರ ಮೇಲಾಗುತ್ತಿದ್ದ ದೌರ್ಜನ್ಯ ಬೀದಿ ವೇಶ್ಯೆಯರ ಬವಣೆ ಇವೆಲ್ಲವಕ್ಕೂ ಮೂಲ ಕಾರಣ, ಗಂಡಿಗೆ ತನ್ನ ದೇಹ ಮತ್ತು ಮನಸ್ಸುಗಳ ಮೇಲೆ ನಿಯಂತ್ರಣವಿಲ್ಲದಿರುವುದು, ಸಂಯಮವಿರದಿರುವುದು. ಈ ಅರ್ಥದಲ್ಲಿ ಲೈಂಗಿಕತೆಯೂ ಹಿಂಸೆಯೇ. ಹಾಗಾಗಿ ಬ್ರಹ್ಮಚರ್ಯವೆನ್ನುವುದು, ದೈಹಿಕವಾಗಿ, ಮಾನಸಿಕವಾಗಿ ಪರಿಶುದ್ಧನಾಗಲು ತೀರಾ ಅಗತ್ಯ ಎಂಬುದು ಅವರ ಗಟ್ಟಿ ನಿಲುವು.

‘ಬಾಪೂ ಮೈ ಮದರ್’ - ಇದು ಅವರ ಮೊಮ್ಮಗಳು, ಮನುಬೆಹನ್ ಗಾಂಧಿ ಬರೆದ ಪುಸ್ತಕ. ಆಶ್ರಮದಲ್ಲಿ ತಾಯಿಯಿಲ್ಲದ ಆಭಾ ಮತ್ತು ಮನು ಇಬ್ಬರನ್ನೂ ಗಾಂಧೀಜಿ ಸಲಹಿದ, ಆರೈಕೆ ಮಾಡಿದ ಪರಿಯನ್ನು ಕಣ್ಣಿಗೆ ಕಟ್ಟುವಂತೆ ಆಕೆ ಇಲ್ಲಿ ವರ್ಣಿಸಿದ್ದಾರೆ. ಆಶ್ರಮಕ್ಕೆ ಬರುವ ಸತ್ಯಾಗ್ರಹಿಗಳ ಜತೆಗಿನ ಚರ್ಚೆಯ ಜತೆ ಜತೆಗೇ ಗಾಂಧಿ ಮೊಮ್ಮಕ್ಕಳಿಗೆ ಎಣ್ಣೆ ಹಾಕಿ ತಲೆ ಬಾಚುವುದನ್ನೂ ಮಾಡುತ್ತಿರುತ್ತಾರೆ. ರಾಜಕೀಯ ದೊಡ್ಡದು, ಮನವಾರ್ತೆ ಸಣ್ಣದು ಎಂಬ ಭೇದವೇ ಅಲ್ಲಿಲ್ಲ. ಕೆಲಸ ಕಾರ್ಯದ ಒತ್ತಡದಲ್ಲಿ ಆಶ್ರಮದಿಂದ ದೂರವಿದ್ದಾಗಲೂ ಆಶ್ರಮದ ಹೆಂಗಸೊಬ್ಬಳಿಗೆ ಪತ್ರ ಬರೆಯುತ್ತಾರೆ. -ಮುಟ್ಟಿನ ತೊಂದರೆಯನ್ನು ಅಲಕ್ಷಿಸಬಾರದು, ಹೇಗೆ ಶುಚಿತ್ವ ಕಾಪಾಡಿಕೊಳ್ಳಬೇಕು, ವೈದ್ಯರೊಡನೆ ಮುಜುಗರ ಪಟ್ಟುಕೊಳ್ಳದೆ ಸಲಹೆ ಪಡೆಯುವುದು ಎಷ್ಟು ಮುಖ್ಯ ಎಂಬುದನ್ನೆಲ್ಲಾ ಬರೆಯುವ ಸಹನೆ, ಅಕ್ಕರೆ ಮತ್ತು ಗೌರವ ಅವರಲ್ಲಿ ಕೊನೆಗಾಲದವರೆಗೂ ಇತ್ತು.

ತಂದೆ ಕರಮಚಂದ ಗಾಂಧಿಯನ್ನು ಅವರ ಕಡೆಗಾಲದಲ್ಲಿ ಅತ್ಯಂತ ಶ್ರದ್ಧೆಯಿಂದ ಆರೈಕೆ ಮಾಡಿದ ಮೋಹನದಾಸನ ದಾದಿ ಗುಣವನ್ನು ಅವರ ಜೀವನದುದ್ದಕ್ಕೂ ಕಾಣಬಹುದು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಹೆಂಡತಿಗೆ ತಾನೇ ಹೆರಿಗೆ ಮಾಡಿಸಿ ಬಾಣಂತನ ಮಾಡಿದ್ದು, ಸಮಯವಿದ್ದಾಗ ಆಸ್ಪತ್ರೆಯೊಂದರಲ್ಲಿ ಸ್ವಯಂಸೇವಕನಾಗಿ ರೋಗಿಗಳ ಆರೈಕೆ ಮಾಡುತ್ತಿದ್ದುದು, ಮೊದಲ ಮಹಾ ಯುದ್ಧದಲ್ಲಿ ಸೈನಿಕರ ಶುಶ್ರೂಷೆೆಗೆ ಸ್ವಯಂಸೇವಕನಾಗಿ ಕೆಲಸ ಮಾಡಿದ್ದು, ಆಶ್ರಮದಲ್ಲಿ ರೋಗಿಗಳ ಚಾಕರಿ ಮಾಡುತ್ತಿದ್ದುದು, ಕಸ್ತೂರ್ಬಾ ಪದೇ ಪದೇ ಕಾಯಿಲೆಯಿಂದ ನರಳುತ್ತಿದ್ದಾಗ ಆಕೆಯ ಸಹಾಯಕನಂತಿದ್ದುದು, ಕೊನೆಗೆ ಕಸ್ತೂರ್ಬಾ ತೀರಿಕೊಂಡಾಗ ಇಡೀ ರಾತ್ರಿ ಚಿತೆಯ ಮುಂದೆಯೇ ಕುಳಿತು ಬೆಳಗಿನ ತನಕ ಮೌನವಾಗಿದ್ದುದು.. ಹೀಗೆ ಇಂತಹ ಅನೇಕ ಜೀವಪರ ಚಿತ್ರಗಳು ಗಾಂಧಿಯವರ ವಾತ್ಸಲ್ಯಮಯಿ ವ್ಯಕ್ತಿತ್ವದ ದರ್ಶನ ಮಾಡಿಸುತ್ತದೆ.

ಆಶ್ರಮದಲ್ಲಿ ಗಾಂಧಿ ಕಸಬರಿಕೆ ಹಿಡಿದು ಗುಡಿಸಿದರು, ಅಡುಗೆ ಮಾಡಿದರು, ಶೌಚಾಲಯವನ್ನು ಸ್ವಚ್ಛಗೊಳಿಸಿದರು, ಮೊಮ್ಮಕ್ಕಳಿಗೆ ಗುಜರಾತಿ ಸೀರೆ ಉಡುವ ಕ್ರಮವನ್ನು ವಿವರಿಸಿದರು, ಚರಕದಿಂದ ನೂಲು ತೆಗೆದರು. ಹೀಗೆ ಹೆಂಗಸರ ಕೆಲಸಗಳೆಂದು ತಾತ್ಸಾರಕ್ಕೊಳಪಟ್ಟ ಎಲ್ಲವೂ ಘನತೆಯಿರುವ ಕಸುಬು ಎಂದು ಸಾಬೀತು ಪಡಿಸಿದರು. ಪರಿಣಾಮವಾಗಿ, ದೇಶಕ್ಕೆ ದೇಶವೇ ಈ ‘ಹೆಣ್ಣು, ಕಲಸ’ಗಳನ್ನು ಮಾಡುತ್ತಾ, ಇದು ಸ್ಪರಾಜ್ಯ ಸ್ಥಾಪನೆಗೆ ತಾವೆಲ್ಲಾ ಮಾಡಲೇಬೇಕಾದ ಸೇವೆ ಎಂದುಕೊಳ್ಳುವಂತಾಯಿತು!

ಮಕ್ಕಳನ್ನು ಹೊರುವ, ಹೆರುವ ಮತ್ತು ಪಾಲಿಸುವ ಹೆಣ್ಣೊಬ್ಬಳಿಗೆ ತ್ಯಾಗ ಮತ್ತು ಅಹಿಂಸೆ ತುಂಬ ಸಹಜವಾದುದು, ಆಕೆಗೆ ಅಧಿಕಾರ ಸಿಕ್ಕರೆ ಈ ಪ್ರಪಂಚದ ಗತಿಯೇ ಬೇರಾಗಬಲ್ಲುದು ಎಂದು ಗಾಂಧೀಜಿ ಸದಾ ಕನವರಿಸಿದವರು!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top