-

ಇಂದು ಗಾಂಧಿ ಜಯಂತಿ

ದ್ವೇಷಾಸೂಯೆಗಳ ಮನಸ್ಥಿತಿಯನ್ನು ನಿಷೇಧಿಸೋಣ

-

ಒಂದು ಸಮಾಜವನ್ನು ಕಟ್ಟಿ ಬೆಳೆಸುವ ಹೊಣೆ 75 ವರ್ಷಗಳ ಸ್ವತಂತ್ರ ಭಾರತದ ಮತ್ತು ಶ್ರೇಷ್ಠ ಸಂವಿಧಾನದ ಫಲಾನುಭವಿಗಳ ಮೇಲಿದೆ. ನಾವು ಎಡವಿದ್ದೇವೆ ಇನ್ನು ಎಡವುವುದು ಬೇಡ ಎಂಬ ಎಚ್ಚರಿಕೆ ನಮ್ಮನ್ನು ಜಾಗೃತವಾಗಿರಿಸಿದರೆ ಇಂದು ನಾವು ಬಾಪು ಗಾಂಧಿಗೆ ಸಲ್ಲಿಸುವ ನಮನಗಳೂ ಸಾರ್ಥಕವಾದೀತು.

ಇಂದು ಭಾರತ ಮತ್ತೊಂದು ಗಾಂಧಿ ಜಯಂತಿಯನ್ನು ಆಚರಿಸುತ್ತಿದೆ. ಶಾಂತಿ, ಸೌಹಾರ್ದತೆ, ಸಮನ್ವಯ, ಸಹಿಷ್ಣುತೆ ಮತ್ತು ಸಮ ಸಮಾಜದ ಕನಸು ಕಂಡ ಗಾಂಧಿ ವರ್ತಮಾನದ ಭಾರತಕ್ಕೆ ಬಿ.ಆರ್. ಅಂಬೇಡ್ಕರ್ ಮತ್ತು ಕಾರ್ಲ್‌ಮಾರ್ಕ್ಸ್ ಅವರಷ್ಟೇ ಪ್ರಸಕ್ತ ಎನಿಸುತ್ತಾರೆ. ಪೂನಾ ಒಪ್ಪಂದ ಮತ್ತಿತರ ರಾಜಕೀಯ ಬೆಳವಣಿಗೆಗಳನ್ನು ಬದಿಗಿಟ್ಟು ನೋಡಿದಾಗ, ಡಾ. ಬಿ.ಆರ್. ಅಂಬೇಡ್ಕರ್ ಭಾರತವನ್ನು ಸಮ ಸಮಾಜವಾಗಿ ರೂಪಿಸುವಲ್ಲಿ ಗಾಂಧಿ ಅನುಸರಿಸಿದ ಅಹಿಂಸಾ ಮಾರ್ಗವನ್ನು ಪ್ರತಿರೋಧದ ನೆಲೆಯಲ್ಲಿ ಅನುಸರಿಸುವುದನ್ನು ಗುರುತಿಸಬಹುದು. ಮಹಾತ್ಮಾ ಗಾಂಧಿಯಲ್ಲಿ ಕಾಣದ ತಳಸ್ಪರ್ಶಿ ಸಂವೇದನೆ ಅಂಬೇಡ್ಕರ್ ಅವರಲ್ಲಿ ಪ್ರಧಾನವಾಗಿ ಕಾಣುವುದರಿಂದಲೇ, ಶತಮಾನಗಳ ಶೋಷಣೆಗೊಳಗಾದ ಭಾರತದ ಬಹುಸಂಖ್ಯಾತ ಜನಸಮುದಾಯಗಳ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಅಭ್ಯುದಯಕ್ಕಾಗಿ ಅಂಬೇಡ್ಕರ್ ಸಾಂವಿಧಾನಿಕ ಮಾರ್ಗಗಳನ್ನು ಸೂಚಿಸಿ, ಸಂವಿಧಾನದ ಚೌಕಟ್ಟಿನ ಒಳಗೇ ಪ್ರತಿರೋಧದ ನೆಲೆಗಳನ್ನು ಕಾಪಾಡಿಕೊಳ್ಳುವ ಮೂಲಕ ನೈಜ ಪ್ರಜಾಸತ್ತೆಗೆ ಅಡಿಪಾಯ ಹಾಕುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಮುಖಾಮುಖಿಯಾಗಿಸಿ, ಇಬ್ಬರ ನಡುವೆ ಗೋಡೆಗಳನ್ನು ಕಟ್ಟುವುದಕ್ಕಿಂತಲೂ ಮುಖ್ಯವಾಗಿ ಇಂದು ಈ ಇಬ್ಬರು ನಾಯಕರು ಅನುಕರಿಸಲಿಚ್ಛಿಸಿದ ಶಾಂತಿ- ಸಹಿಷ್ಣುತೆಯ ಮಾರ್ಗಗಳ ಪುನರಾವ ಲೋಕನ ಮಾಡುವುದು ಅತ್ಯವಶ್ಯವಾಗಿದೆ.

ಕಳೆದ ಮೂರು ನಾಲ್ಕು ದಶಕಗಳಲ್ಲಿ ಭಾರತದ ಅಧಿಕಾರ ರಾಜಕಾರಣ ಮತ್ತು ಸಾಂಸ್ಕೃತಿಕ ವಾತಾವರಣವು ಬೆಳೆದಿರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಾವು ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ವಿಸ್ಮತಿಯ ಸೆರೆಮನೆಯಲ್ಲಿ ಬಂಧಿಸಿದ್ದೇವೆ ಎನಿಸುತ್ತದೆ. ವ್ಯಕ್ತಿ ಜೀವನದಲ್ಲಿ ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ ಮತ್ತು ಸಹಿಷ್ಣುತೆಯನ್ನು ಬಯಸಿದ ಗಾಂಧಿ, ಸಾಮಾಜಿಕ ನೆಲೆಯಲ್ಲಿ ಇದೇ ಆದರ್ಶಗಳೊಂದಿಗೆ ಸಾಂವಿಧಾನಿಕ ನಿಷ್ಠೆ ಮತ್ತು ನೈತಿಕತೆಯನ್ನು ಬಯಸಿದ ಅಂಬೇಡ್ಕರ್ ಇಂದು ನಮ್ಮ ನಡುವೆ ಇರುವುದೇ ಆದರೆ ನಾವು ಸಮಾಜವನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕಿದೆ. ಅಧಿಕಾರ ರಾಜಕಾರಣದ ಲಾಲಸೆಗಳಿಗೆ ಬಲಿಯಾಗಿ ವ್ಯಕ್ತಿನಿಷ್ಠೆಯನ್ನು ಪಕ್ಷನಿಷ್ಠೆಯಾಗಿ ಮಾರ್ಪಡಿಸಿರುವ ಪ್ರಾತಿನಿಧಿಕ ಆಡಳಿತ ವ್ಯವಸ್ಥೆಯನ್ನು ನಾವು ಪೋಷಿಸಿಕೊಂಡು ಬಂದಿದ್ದೇವೆ. ತತ್ಪರಿಣಾಮ ಸಾಂಸ್ಕೃತಿಕವಾಗಿ ವ್ಯಷ್ಟಿ ಮತ್ತು ಸಮಷ್ಟಿಯ ನಡುವಿನ ಅಂತರ ಕಡಿಮೆಯಾಗುತ್ತಿದೆ. ಸಮಾಜದ ಒಳಿತು ಕೆಡಕುಗಳು ಯಾವುದೋ ಒಂದು ನಿರ್ದಿಷ್ಟ ಜಾತಿ, ಧರ್ಮ, ಮತ ಅಥವಾ ಭಾಷಿಕ ನೆಲೆಗಳಲ್ಲಿ ನಿಷ್ಕರ್ಷೆಗೊಳಪಡುತ್ತಿರುವುದರಿಂದ ‘ಸಮಾಜಘಾತುಕತೆ’ ಎನ್ನುವುದೂ ಸಹ ಸಾಪೇಕ್ಷತೆಯನ್ನು ಪಡೆದುಕೊಳ್ಳುತ್ತಿದೆ.

ಸಮಾಜ ಏನು ಬಯಸುತ್ತಿದೆ ಮತ್ತು ಈ ದೇಶದ ಆಡಳಿತ ವ್ಯವಸ್ಥೆ ಎಂತಹ ಸಮಾಜವನ್ನು ಅಪೇಕ್ಷಿಸುತ್ತಿದೆ ಎಂಬ ಜಟಿಲ ಪ್ರಶ್ನೆಗಳು ಎದುರಾದಾಗ ನಮಗೆ ವಿಘಟಿತ ಭಾರತದ ಚಿತ್ರಣ ಎದುರಾಗುತ್ತದೆ. ಗಾಂಧಿ ಮತ್ತು ಅಂಬೇಡ್ಕರ್ ಬಯಸಿದ ಬಹುತ್ವ ಭಾರತದ ಆಶಯಗಳು ಹಂತಹಂತವಾಗಿ ಮಣ್ಣುಪಾಲಾಗುತ್ತಿರುವುದರೊಂದಿಗೇ, ಜಾತಿದ್ವೇಷ, ಮತದ್ವೇಷ ಮತ್ತು ಲಿಂಗ ತಾರತಮ್ಯಗಳು ಸಾಮಾಜಿಕ ಸಂಬಂಧಗಳನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿವೆ. ವ್ಯಕ್ತಿ ದ್ವೇಷದ ನೆಲೆಗಳು ವಿಸ್ತರಿಸುತ್ತಾ, ಸಂಘಟಿತ ರೂಪ ಪಡೆದಂತೆಲ್ಲಾ ದೇಶದ ಸಾಂಸ್ಕೃತಿಕ ನೆಲೆಗಳು ಸಾಂಸ್ಥಿಕವಾಗಿಯೇ ದ್ವೇಷಾಸೂಯೆಗಳ ನೆಲೆಬೀಡುಗಳಾಗಿ ಪರಿವರ್ತನೆ ಹೊಂದುತ್ತಿವೆ. ವರ್ಣಾಶ್ರಮಧರ್ಮದ ಕಠಿಣ ಬೇಲಿಗಳನ್ನು ಭೇದಿಸಲು ನಿರಾಕರಿಸಿ, ಜಾತಿ ವ್ಯವಸ್ಥೆಯನ್ನು ಕಾಪಾಡಿಕೊಂಡೇ ಅಸ್ಪೃಶ್ಯತೆಯಂತಹ ಅಮಾನುಷ ಪದ್ಧತಿಯನ್ನು ವಿರೋಧಿಸುವ ಮೂಲಕ ಗಾಂಧಿ, ಸಮಾಜದಲ್ಲಿ ಸ್ವಯಂಪ್ರೇರಿತ ಸಹಿಷ್ಣುತೆ ಮತ್ತು ಸಮನ್ವಯತೆಯನ್ನು ಸಾಧಿಸಲು ಪ್ರಯತ್ನಿಸಿದ್ದರು. ಅಂಬೇಡ್ಕರ್ ಜಾತಿವ್ಯವಸ್ಥೆಯ ಮೂಲವನ್ನೇ ಪ್ರಶ್ನಿಸುವುದರ ಮೂಲಕ, ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನೇ ಧಿಕ್ಕರಿಸಿ, ಅಸ್ಪೃಶ್ಯತೆಯ ವಿರುದ್ಧ ಮತ್ತು ಜಾತಿ ವಿನಾಶಕ್ಕಾಗಿ ಸಾಮಾಜಿಕ ಕ್ರಾಂತಿಯ ಮಾರ್ಗವನ್ನು ಅನುಸರಿಸಿದ್ದರು. ಅಕ್ಟೋಬರ್ 2ರಂದು ಗಾಂಧಿ ಸ್ಮರಣೆ ಮಾಡುವ ಮುನ್ನ, ಈ ಉದಾತ್ತ ಆಶಯಗಳು ಮತ್ತು ನಿರೀಕ್ಷೆಗಳು ನಮ್ಮ ಮನದಲ್ಲಿರಬೇಕು.

ಈ ಎರಡೂ ಆಶಯಗಳಲ್ಲಿ ನಾವು ಕಾಣಬೇಕಿರುವುದು ‘‘ಮನುಜ ಸೂಕ್ಷ್ಮತೆ, ಮಾನವೀಯ ಸ್ಪಂದನೆ ಮತ್ತು ಸಾಮಾಜಿಕ ಸಂವೇದನೆಯನ್ನು’’. ಈ ಮೂರೂ ಉದಾತ್ತ ಲಕ್ಷಣಗಳನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿರುವ ಭಾರತ ಇಂದು ದ್ವೇಷಾಸೂಯೆಗಳ ಆಗರವಾಗುತ್ತಿದೆ. ಮನುಜ ಪ್ರೀತಿಯನ್ನು ಪೋಷಿಸಿ ಬೆಳೆಸಬೇಕಾದ ಸಾಂಸ್ಥಿಕ, ಸಾಂಸ್ಕೃತಿಕ ನೆಲೆಗಳು ಜಾತಿ-ಧರ್ಮಗಳ ಸಂಕುಚಿತತೆಗೆ ಒಳಗಾಗಿ ಮನುಷ್ಯರ ನಡುವೆ ಶಾಶ್ವತ ಗೋಡೆಗಳನ್ನು ನಿರ್ಮಿಸುವ ಒಂದು ವಿಕೃತ ಪ್ರಕ್ರಿಯೆಗೆ ನಾವು ಸಾಕ್ಷಿಯಾಗಿ ನಿಂತಿದ್ದೇವೆ. ಕಳೆದ ಹಲವು ದಶಕಗಳ ರಾಜಕಾರಣ ಮತ್ತು ಸಾಮಾಜಿಕ ಬೆಳವಣಿಗೆಗಳು ಜನಸಾಮಾನ್ಯರಿಗೆ ದ್ವೇಷಿಸುವ ಕಲೆಯನ್ನು ಕಲಿಸುತ್ತಾ ಬಂದಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸಲು ಯಾವುದೇ ಕಾರಣಗಳು ಬೇಕಿಲ್ಲ. ಮಾನವತೆ ಒಂದಿದ್ದರೆ ಸಾಕು. ಆದರೆ ದ್ವೇಷಿಸಲು ಕಾರಣಗಳು ಬೇಕಾಗುತ್ತವೆ. ಈ ಕಾರಣಗಳನ್ನು ‘ಅನ್ಯ’ ಮತ್ತು ‘ಬಾಹ್ಯ’ದ ಪರಿಕಲ್ಪನೆಗಳ ಮೂಲಕ ಜಾತಿ-ಮತಗಳಲ್ಲಿ ಶೋಧಿಸುತ್ತಿದ್ದೇವೆ. ಜಾತಿ ಶ್ರೇಷ್ಠತೆ ಮತ್ತು ಪಾರಮ್ಯ ಅಸ್ಪೃಶ್ಯತೆಯಂತಹ ಅಮಾನುಷ ಪದ್ಧತಿಯನ್ನು ಇನ್ನೂ ಜೀವಂತವಾಗಿರಿಸಿದೆ. ಮತಧರ್ಮ ಶ್ರೇಷ್ಠತೆಯ ಮೇಲರಿಮೆ ‘ಅನ್ಯಮತ ದ್ವೇಷ’ದ ನೆಲೆಗಳನ್ನು ವಿಕೇಂದ್ರೀಕರಣಗೊಳಿಸಿ, ದ್ವೇಷ ಭಾವನೆಗಳನ್ನು ಸಾಂಸ್ಥೀಕರಿಸಿ, ಘನೀಕರಿಸಿ ತಳಮಟ್ಟದ ಜನಸಮುದಾಯಗಳ ನಡುವೆಯೂ ಮನೆ ಮಾಡಿದೆ.

ಹಾಗಾಗಿಯೇ ಇಂದು ‘ಸಾವು ಮತ್ತು ನೋವು’ ಎರಡೂ ಸಾಪೇಕ್ಷತೆ ಯನ್ನು ಪಡೆದಿವೆ. ನಮ್ಮ ನಡುವೆ ನಿರಂತರವಾಗಿ ನಡೆಯುತ್ತಿರುವ ಸಾವುಗಳು ನಮ್ಮನ್ನು ವಿಚಲಿತಗೊಳಿಸುವುದಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ವಾಗಿ ವಿಘಟಿತಗೊಳಿಸುತ್ತಿವೆ. ಏಕೆಂದರೆ ನಮಗೆ ಸಾವು ಪ್ರಧಾನ ಎನಿಸುವುದಿಲ್ಲ, ಸಾವಿಗೀಡಾದ ಅಥವಾ ಸಾವಿಗೆ ಕಾರಣನಾದ ವ್ಯಕ್ತಿಯ ‘ಜಾತಿ-ಮತದ ಅಸ್ಮಿತೆ’ ಪ್ರಧಾನ ಎನಿಸುತ್ತದೆ. ಸಾವು ಸಂಭ್ರಮಿಸಲ್ಪಡುತ್ತದೆ. ಹತ್ಯೆಗಳು ಸ್ವೀಕಾರಾರ್ಹವಾಗುತ್ತವೆ. ಅತ್ಯಾಚಾರ, ದೌರ್ಜನ್ಯ, ಥಳಿತ ಮತ್ತು ಹಿಂಸಾತ್ಮಕ ದಾಳಿಗಳು ಅಪೇಕ್ಷಿತವಾಗಿಬಿಡುತ್ತವೆ. ಹಂತಕರು, ಅತ್ಯಾಚಾರಿಗಳು, ದೌರ್ಜನ್ಯದ ಹರಿಕಾರರು ಆರಾಧನೆಗೊಳಪಡುತ್ತಾರೆ. ವೈಭವೀಕರಿಸಲ್ಪಡುತ್ತಾರೆ. ಹತ್ಯೆಗೀಡಾಗುವ ವ್ಯಕ್ತಿ, ಅತ್ಯಾಚಾರಕ್ಕೀಡಾಗುವ ಮಹಿಳೆ, ಅಸ್ಪೃಶ್ಯತೆಗೀಡಾಗುವ ಸಮುದಾಯ ಇವೆಲ್ಲವೂ ಸಾಮಾಜಿಕವಾಗಿ ಒಪ್ಪಿತವಾಗುವಂತಹ ಒಂದು ವಿಷಮ ಸನ್ನಿವೇಶದಲ್ಲಿ ನಾವಿದ್ದೇವೆ. ಅಮಾಯಕ ವ್ಯಕ್ತಿಯ ಹತ್ಯೆ ಅಥವಾ ಮಹಿಳೆಯ ಮೇಲಿನ ಅತ್ಯಾಚಾರ ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಕಲಕುವುದೇ ಅಲ್ಲದೆ, ಏಕೆ ಹೀಗಾಗುತ್ತಿದೆ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕು. ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಮತ್ತು ಸಾಂಸ್ಥಿಕ ಸಾಂಸ್ಕೃತಿಕ ನೆಲೆಗಳು ಈ ಪ್ರಶ್ನೆಗೆ ಉತ್ತರವನ್ನು ಶೋಧಿಸುವಂತಾಗಬೇಕು. ದುರಂತ ಎಂದರೆ ಇಂದು ನಮಗೆ ‘ಯಾರು ಅಥವಾ ಯಾರಿಂದ’ ಎಂಬುದೇ ಪ್ರಧಾನವಾಗಿ ಕಾಣುತ್ತಿದೆ. ಒಂದು ಹತ್ಯೆಯಿಂದ, ಅತ್ಯಾಚಾರದಿಂದ ಸೃಷ್ಟಿಯಾಗುವ ಸಂತ್ರಸ್ತರು ನಗಣ್ಯರಾಗುತ್ತಾರೆ, ಫಲಾನುಭವಿಗಳು ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಸಂಘಟನಾತ್ಮಕವಾಗಿ ಮುನ್ನೆಲೆಗೆ ಬರುತ್ತಾರೆ. ಈ ಸಾಮಾಜಿಕ ಕ್ರೌರ್ಯ ಮತ್ತು ಸಾಂಸ್ಕೃತಿಕ ಅಸೂಕ್ಷ್ಮತೆಗೆ ಕಾರಣ ನಾವೇ ಪೋಷಿಸಿಕೊಂಡು ಬಂದಿರುವ ದ್ವೇಷಾಸೂಯೆಗಳ ಸಾಂಸ್ಥಿಕ ನೆಲೆಗಳು.

ಜಾತಿ-ಮತಗಳ ಅಸ್ಮಿತೆಗಳಿಗಾಗಿ ಸಮಾಜದಲ್ಲಿ ದ್ವೇಷಾಸೂಯೆಗಳ ಬೀಜ ಬಿತ್ತುವ ಸಂಘಟನೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಸಾಮಾಜಿಕ ಉತ್ತರದಾಯಿತ್ವವೇ ಇಲ್ಲದ ಈ ಸಂಘಟನೆಗಳಿಗೆ ರಾಜಕೀಯ ಅಂಕುಶಗಳೂ ಇಲ್ಲದಿರುವುದನ್ನು ಕೆಲವು ಸಂದರ್ಭಗಳಲ್ಲಿ ಗಮನಿಸುತ್ತಲೇ ಬಂದಿದ್ದೇವೆ. ಕೆಲವೇ ವರ್ಷಗಳ ಹಿಂದೆ ವ್ಯಕ್ತಿಗತ ವೈಷಮ್ಯಗಳಿಗೆ ಸಾಮಾಜಿಕ ನೆಲೆಯಲ್ಲಿ ನ್ಯಾಯ ಪಡೆಯುವ ಒಂದು ಧೋರಣೆ ನಮ್ಮ ನಡುವೆ ಜೀವಂತವಾಗಿತ್ತು. ತಾರತಮ್ಯಕ್ಕೊಳಗಾದವರು, ಸಾಲ ಕೊಟ್ಟವರು, ವಂಚನೆಗೊಳಗಾದವರು ನ್ಯಾಯದ ಮೊರೆ ಹೋಗುತ್ತಿದ್ದರು. ನೊಂದವರು ಸಮಾಜದ ಮೊರೆ ಹೋಗುತ್ತಿದ್ದರು. ಸಾಲ ಮಾಡಿದವರು ಸಾಂತ್ವನದ ನೆಲೆಗಳನ್ನು ಅರಸುತ್ತಿದ್ದರು. ಆದರೆ ಇಂದು ವ್ಯಕ್ತಿಗತ ವೈಷಮ್ಯಗಳು ಹತ್ಯೆಗಳಲ್ಲಿ ಅಂತ್ಯವಾಗುತ್ತಿವೆ. ಏಕೆ ಹೀಗಾಗುತ್ತಿದೆ ಎಂದು ಯೋಚಿಸುವ ವ್ಯವಧಾನವನ್ನು, ಸೂಕ್ಷ್ಮ ಸಂವೇದನೆಯನ್ನು ನಾವು ಕಳೆದುಕೊಂಡಿದ್ದೇವೆ.

ಸಾವು ನೋವಿಗೆ ಸ್ಪಂದಿಸುವಂತಹ ಸೂಕ್ಷ್ಮ ಸಂವೇದನೆಯ ಸಮಾಜವನ್ನು ಈ 75 ವರ್ಷಗಳಲ್ಲಿ ನಾವು ನಿರ್ಮಿಸಿದ್ದರೆ ನಮ್ಮ ದೇಶ ಇಂದು ಅಂಬೇಡ್ಕರ್-ಗಾಂಧಿ ಕನಸಿನ ಸರ್ವಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸುತ್ತಿತ್ತು. ಸಾಹಿತ್ಯಕ ಹಾಗೂ ಕಲಾಭಿವ್ಯಕ್ತಿಗಳ ಮೂಲಕ ಈ ಪ್ರಯತ್ನಗಳು ಸತತವಾಗಿ ನಡೆಯುತ್ತಲೇ ಇದ್ದರೂ, ಅಧಿಕಾರ ರಾಜಕಾರಣದ ಮತೀಯ ನೆಲೆಗಳು, ಸ್ವಾರ್ಥ ಮತ್ತು ಸಂಪತ್ತು ಕ್ರೋಡೀಕರಣದ ಲೋಭ ಈ ಅಭಿವ್ಯಕ್ತಿ ಮಾಧ್ಯಮಗಳನ್ನು ಕೊಲ್ಲುತ್ತಲೇ ಬರುತ್ತಿದೆ. ನಾವು ಹರಡುತ್ತಿರುವ ದ್ವೇಷಾಸೂಯೆಗಳಿಗೆ ಚಾರಿತ್ರಿಕ ಬುನಾದಿಗಳನ್ನು ಉತ್ಖನನ ಮಾಡುತ್ತಲೇ, ವರ್ತಮಾನದ ವಾಸ್ತವಗಳಿಗೆ ವಿಮುಖವಾಗುತ್ತಿದ್ದೇವೆ. ಹಾಗಾಗಿಯೇ ವಿಸ್ಮತಿಗೆ ಜಾರಬೇಕಾದ ಚಾರಿತ್ರಿಕ ವಿಕೃತಿಗಳನ್ನು ಭವಿಷ್ಯದ ಮಾರ್ಗಗಳಾಗಿ ರೂಪಿಸುವಂತಹ ಸಾಂಸ್ಕೃತಿಕ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸುವುದರ ಮೂಲಕವೇ ತಮ್ಮ ಅಧಿಕಾರ ಕೇಂದ್ರಗಳನ್ನು ಸಂರಕ್ಷಿಸಲು ಹೆಣಗಾಡುತ್ತಿರುವ ರಾಜಕೀಯ ಶಕ್ತಿಗಳು ಈ ಪ್ರಯತ್ನಗಳಿಗೆ ಒಂದು ತಾತ್ವಿಕ ನೆಲೆಯನ್ನು ಒದಗಿಸುತ್ತಿರುವುದೇ ಅಲ್ಲದೆ, ಸಾಂಸ್ಕೃತಿಕ ಭೂಮಿಕೆಯನ್ನೂ ಸಿದ್ಧಪಡಿಸುತ್ತಿವೆ.

ಈ ಭೂಮಿಕೆಯಲ್ಲೇ ಪರಸ್ಪರ ಪ್ರೀತಿಸುವ ಮನಸ್ಸುಗಳ ನಡುವೆ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ವ್ಯಕ್ತಿಗತ ನೆಲೆಯ ಮತಶ್ರದ್ಧೆಯಾಗಲೀ, ಧಾರ್ಮಿಕ ನಂಬಿಕೆಗಳಾಗಲೀ ಸಮಾಜದ ಸ್ವಾಸ್ಥ್ಯವನ್ನು ಕದಡುವುದಿಲ್ಲ. ಆದರೆ ಈ ಶ್ರದ್ಧೆ ನಂಬಿಕೆಗಳು ಶ್ರೇಷ್ಠತೆಯ ವ್ಯಸನಕ್ಕೊಳಗಾದಾಗ ನಮ್ಮೊಳಗಿನಿಂದಲೇ ‘ಅನ್ಯರು’ ಸೃಷ್ಟಿಯಾಗುತ್ತಾರೆ. ‘ಆಂತರಿಕ’ ಆಗಿರುವುದೆಲ್ಲವೂ ‘ಬಾಹ್ಯ’ ಆಗತೊಡಗುತ್ತದೆ. ಶ್ರೇಷ್ಠತೆಯ ವ್ಯಸನ ಸೃಷ್ಟಿಸುವ ಈ ಅಹಮಿಕೆಯೇ ದ್ವೇಷಾಸೂಯೆಗಳಿಗೆ ಎಡೆಮಾಡಿ ಕೊಡುತ್ತದೆ. ಶತಮಾನಗಳಿಂದಲೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವ ಮತಧರ್ಮಗಳು, ಜಾತಿಯ ನೆಲೆಗಳು ಮತ್ತೊಬ್ಬರಿಂದ ಅಪಾಯಕ್ಕೊಳಗಾಗಿದೆ ಎಂಬ ಕಪೋಲಕಲ್ಪಿತ ಭೀತಿ ಈ ದ್ವೇಷಾಸೂಯೆಗಳನ್ನು ಹಿಂಸಾತ್ಮಕ ಪ್ರತಿಕ್ರಿಯೆಗಳಾಗಿ ಪರಿವರ್ತಿಸುತ್ತವೆ. ಈ ಭೀತಿಯೇ ಸಮಾಜಘಾತುಕ ಶಕ್ತಿಗಳಿಗೆ, ವಿಘಟನೆಯ ಹರಿಕಾರರಿಗೆ, ದ್ವೇಷ ರಾಜಕಾರಣದ ವಾರಸುದಾರರಿಗೆ ಪ್ರಧಾನ ಅಸ್ತ್ರವಾಗುತ್ತದೆ. ತಳಮಟ್ಟದ ಕಟ್ಟಕಡೆಯ ವ್ಯಕ್ತಿಯನ್ನೂ ಆವರಿಸಿರುವ ಈ ಭೀತಿ ಸಾಂಸ್ಕೃತಿಕ ಅಥವಾ ಮತಧಾರ್ಮಿಕ ಸ್ವರೂಪವನ್ನು ಪಡೆದಾಗ ಸಮುದಾಯಗಳು ಕೋಮುಗಳಾಗಿ ಪರಿವರ್ತನೆಯಾಗುತ್ತವೆ. ನಿತ್ಯ ಜೀವನದ ಒಡನಾಟದಲ್ಲಿ ಒಂದರೊಳಗೊಂದಾಗಿ ಬದುಕುವ ಸಮುದಾಯಗಳೂ ಸಹ ತಮ್ಮದೇ ಆದ ಕೋಮು ದೃಷ್ಟಿಕೋನವನ್ನು ಬೆಳೆಸಿಕೊಂಡು, ಶ್ರೇಷ್ಠತೆಯ ಕವಚಗಳನ್ನೂ ಧರಿಸಿಕೊಂಡು, ಪ್ರತ್ಯೇಕತೆಯ ಗೋಡೆಗಳನ್ನೂ, ದ್ವೇಷದ ಪರದೆಗಳನ್ನೂ ಸೃಷ್ಟಿಸಿಕೊಳ್ಳಲಾರಂಭಿಸುತ್ತವೆ.

ಈ ಗೋಡೆಗಳನ್ನು ಮತ್ತಷ್ಟು ಗಟ್ಟಿಗೊಳಿಸಲು, ದ್ವೇಷದ ಪರದೆಗಳನ್ನು ಮತ್ತಷ್ಟು ಅಪಾರದರ್ಶಕವಾಗಿಸಲು ಮತ್ತು ದ್ವೇಷಾಸೂಯೆಗಳ ಮನಸ್ಸುಗಳನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸಲು ಮತಾಂಧ, ಮೂಲಭೂತವಾದಿ ಸಂಘಟನೆಗಳು ಶ್ರಮಿಸುತ್ತಲೇ ಇರುತ್ತವೆ. ಏಕೆಂದರೆ ಅವುಗಳಿಗೆ ಇದು ಅಸ್ತಿತ್ವದ ಪ್ರಶ್ನೆ. ಆದರೆ ಮಾನವ ಸಮಾಜಕ್ಕೆ ಇದು ಅಗತ್ಯವಿಲ್ಲ. ನಾವು ಕೆಡವಿ ಕಟ್ಟುವುದೇ ಆದರೆ, ಪ್ರಾಚೀನ ಅವೈಚಾರಿಕತೆಯ ಗೋಡೆಗಳನ್ನು, ತಾರತಮ್ಯಗಳ ಕೋಟೆಗಳನ್ನು, ಶೋಷಣೆಯ ಬುನಾದಿಯನ್ನು ಕೆಡವಿ, ವೈಚಾರಿಕ ಪ್ರಜ್ಞೆಯ, ವೈಜ್ಞಾನಿಕ ಮನೋಭಾವದ, ಸಾಮಾಜಿಕಾರ್ಥಿಕ ಸಮಾನತೆಯ ದೃಷ್ಟಿಕೋನದ ಭವ್ಯ ಮಹಲುಗಳನ್ನು ಕಟ್ಟಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ನಮಗೆ ಗಾಂಧಿ-ಅಂಬೇಡ್ಕರ್-ಮಾರ್ಕ್ಸ್ ಮತ್ತು ಅನೇಕ ಮಹನೀಯರು ದಾರಿದೀಪವಾಗಲು ಸಾಧ್ಯ. ದುರದೃಷ್ಟವಶಾತ್ ನಾವು ಈ ಮಹಾನ್ ಚೇತನಗಳನ್ನು ಪ್ರತಿಮೆಗಳಲ್ಲಿ ಬಂಧಿಸಿಟ್ಟಿದ್ದೇವೆ. ಸಮಾಧಿಗಳಲ್ಲಿಟ್ಟು ಆರಾಧಿಸತೊಡಗಿದ್ದೇವೆ. ಅವರ ಚಿಂತನೆಗಳ ಅನುಕರಣೆಗೂ ವರ್ತಮಾನದ ವಾಸ್ತವ ಜಗತ್ತಿನಲ್ಲಿ ಅವುಗಳನ್ನು ಅಳವಡಿಸಿ, ಪ್ರಸಕ್ತ ಸಮಾಜಕ್ಕೆ ಹೊಸ ಮಾರ್ಗಗಳನ್ನು ಕಲ್ಪಿಸುವುದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸಲು ನಾವು ವಿಫಲರಾಗಿದ್ದೇವೆ.

ತಾವು ಪ್ರತಿನಿಧಿಸುವ ಸಮುದಾಯವು ಶತಮಾನಗಳ ಶೋಷಣೆ ಅನುಭವಿಸಿದ್ದರೂ ಈ ಸಂಕೋಲೆಗಳಿಂದ ವಿಮೋಚನೆ ಪಡೆಯಲು ಶಾಂತಿ-ಸಹನೆ-ಸಮಾನತೆಯ ಹಾದಿಯನ್ನು ಅನುಸರಿಸಿದ ಅಂಬೇಡ್ಕರ್ ಹಾಗೂ ತಾವು ಸ್ವೀಕರಿಸಿ ಆರಾಧಿಸುವ ಧಾರ್ಮಿಕ ಸಮುದಾಯದಲ್ಲಿರುವ ಅಮಾನುಷ ಪದ್ಧತಿಗಳನ್ನು ವಿರೋಧಿಸುತ್ತಲೇ ಮನಃಪರಿವರ್ತನೆಯ ಮೂಲಕ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಗಾಂಧಿ, ವರ್ತಮಾನದ ಸಂದರ್ಭದಲ್ಲಿ ಎರಡು ಧ್ರುವಗಳಲ್ಲಿ ನಿಂತರೂ, ಈ ಇಬ್ಬರ ಆಶಯಗಳು ಒಂದೇ ಆಗಿವೆ. ‘‘ಅಹಿಂಸಾತ್ಮಕ, ಶಾಂತಿಯುತ, ಸಮಾನತೆಯ, ಶೋಷಣೆ ಮುಕ್ತ, ದೌರ್ಜನ್ಯ ಮುಕ್ತ’’ ಭಾರತವನ್ನು ಕಟ್ಟುವುದೇ ಈ ಆಶಯದ ಅಂತಃಸತ್ವವೂ ಆಗಿದೆ. ಈ ಭಾರತವನ್ನು ಕಟ್ಟಲು ಭಾರತದ ಪ್ರತೀ ಪ್ರಜೆಯೂ ದ್ವೇಷ, ಅಸೂಯೆ, ಈರ್ಷೆ ಮತ್ತು ಅಮಾನವೀಯತೆಗೆ ಸ್ವಯಂ ನಿಷೇಧ ಹೇರಿಕೊಳ್ಳಬೇಕಿದೆ. ಇಂತಹ ಒಂದು ಸಮಾಜವನ್ನು ಕಟ್ಟಿ ಬೆಳೆಸುವ ಹೊಣೆ 75 ವರ್ಷಗಳ ಸ್ವತಂತ್ರ ಭಾರತದ ಮತ್ತು ಶ್ರೇಷ್ಠ ಸಂವಿಧಾನದ ಫಲಾನುಭವಿಗಳ ಮೇಲಿದೆ. ನಾವು ಎಡವಿದ್ದೇವೆ ಇನ್ನು ಎಡವುವುದು ಬೇಡ ಎಂಬ ಎಚ್ಚರಿಕೆ ನಮ್ಮನ್ನು ಜಾಗೃತವಾಗಿರಿಸಿದರೆ ಇಂದು ನಾವು ಬಾಪು ಗಾಂಧಿಗೆ ಸಲ್ಲಿಸುವ ನಮನಗಳೂ ಸಾರ್ಥಕವಾದೀತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top