-

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022

ಕನ್ನಡ-ಕನ್ನಡಿಗ-ಕರ್ನಾಟಕದ ಹಿತ ಕಾಪಾಡಲಾರದು

-

‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022’ ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಸಮಗ್ರ ಅಭಿವೃದ್ಧಿಯ ವಿಧೇಯಕವಾಗಬೇಕಿತ್ತು. ವಿಧೇಯಕ, ಕರ್ನಾಟಕದಲ್ಲಿನ ಕನ್ನಡಿಗರ ಹಿತ ಕಾಪಾಡುವ ಜೊತೆಗೆ, ಗಡಿನಾಡು, ಹೊರನಾಡು ಮತ್ತು ಹೊರ ದೇಶದಲ್ಲಿರುವ ಕನ್ನಡಿಗರ ಹಿತ ಕಾಪಾಡಲು ಸಹ ಸಮಗ್ರವಾಗಿ ಚಿಂತಿಸಬೇಕಿತ್ತು. ಕಳೆದ ತಿಂಗಳು ವಿಧಾನ ಸಭೆಯಲ್ಲಿ ಮಂಡನೆಯಾದ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022’ ಸಮಗ್ರ ಎನ್ನುತ್ತಲೇ ಸಂಕುಚಿತವಾಗಿದೆ. ಕಾರಣ, ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಪೂರ್ಣ ಅಭಿವೃದ್ಧಿ ವಿಧೇಯಕದಲ್ಲಿ ಕಾಣುತ್ತಿಲ್ಲ. ನಿಜಕ್ಕೂ ಸಮಗ್ರವಾಗಿದ್ದರೆ, ವಿಧೇಯಕವು ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಸಮಗ್ರ ಅಭಿವೃದ್ಧಿಯ ವಿಧೇಯಕವಾಗಬೇಕಿತ್ತು. ವಿಧೇಯಕ, ಕರ್ನಾಟಕದಲ್ಲಿನ ಕನ್ನಡಿಗರ ಹಿತ ಕಾಪಾಡುವ ಜೊತೆಗೆ, ಗಡಿನಾಡು, ಹೊರನಾಡು ಮತ್ತು ಹೊರ ದೇಶದಲ್ಲಿರುವ ಕನ್ನಡಿಗರ ಹಿತ ಕಾಪಾಡಲು ಹ ಸಮಗ್ರವಾಗಿ ಚಿಂತಿಸಬೇಕಿತ್ತು.

 ವಿಧೇಯಕದ ಮೂಲ ಸ್ವರೂಪದಲ್ಲಿಯೇ ದೋಷವಿದ್ದಂತೆ ಕಾಣುತ್ತದೆ. ಸಮಗ್ರ ಅಭಿವೃದ್ಧಿಯನ್ನು ಎಲ್ಲಾ ಮೂರು ಮುಖ್ಯ ನೆಲೆಗಳಿಂದ; ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ನೆಲೆಯಿಂದ ನೋಡುವ ಸಮಗ್ರ ವಿಧೇಯಕವಾಗಬೇಕಿತ್ತು. ಪ್ರತಿಯೊಂದಕ್ಕೂ ಒಂದು ವಿಶೇಷ ಅಧ್ಯಾಯವಿರಬೇಕಿತ್ತು. ಉದಾಹರಣೆಗೆ, ಭಾಷೆಯನ್ನು ತೆಗೆದುಕೊಂಡರೆ, ಶಿಕ್ಷಣದಲ್ಲಿ ಮಾಧ್ಯಮ, ಶಿಕ್ಷಣದಲ್ಲಿ ಕನ್ನಡ ಭಾಷಾ ಕಲಿಕೆ, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಕನ್ನಡ ಭಾಷೆಯ ಜಾರಿ ಹಾಗೂ ಉಪಯೋಗ, ರಾಜ್ಯದಲ್ಲಿರುವ ಕೇಂದ್ರ ಹಾಗೂ ರಾಜ್ಯಗಳ ಕಚೇರಿ -ಸಂಸ್ಥೆಗಳಲ್ಲಿ ಕನ್ನಡ ಬಳಕೆ ಹಾಗೂ ಉಪಯೋಗ, ರಾಜ್ಯದಲ್ಲಿ ನೆಲೆಸಿರುವ ಕನ್ನಡೇತರರ ಕನ್ನಡ ಕಲಿಕೆ, ಸರಕಾರೇತರ ವಲಯದಲ್ಲಿ ಕನ್ನಡ ಭಾಷಾ ಬಳಕೆ, ಸಿನೆಮಾ, ಮನರಂಜನೆ, ಸಂಸ್ಕೃತಿ, ಪ್ರವಾಸೋದ್ಯಮ ಇತ್ಯಾದಿ ನೆಲೆಯಿಂದ ಸಮಗ್ರವಾಗಿ ಜಾರಿಗೊಳಿಸುವ ಆಶಯ ವಿಧೇಯಕದಲ್ಲಿ ಇರಬೇಕಿತ್ತು. ಇದೇ ಮಾದರಿಯಲ್ಲಿ ಸರಕಾರಿ, ಅರೆಸರಕಾರಿ, ಸರಕಾರಿ ಬೆಂಬಲಿತ ಸಂಸ್ಥೆಗಳು ಮತ್ತು ಖಾಸಗಿ ವಲಯದಲ್ಲಿ ಕನ್ನಡಿಗನ ಉದ್ಯೋಗ ಅವಕಾಶಗಳ ಬಗ್ಗೆ ಮತ್ತು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಒಂದು ಸಮಗ್ರ ಅಧ್ಯಾಯವಿರಬೇಕಿತ್ತು. ಇದಾವುದು ವಿಧೇಯಕದಲ್ಲಿ ಕಾಣುತ್ತಿಲ್ಲ.

ಆದರೆ, ಸಮಗ್ರ ಎನ್ನುತ್ತಲೇ ಸಂಕುಚಿತಗೊಳಿಸಿ ತಿಳಿಗೊಳಿಸುವ ಅನೇಕ ಉದಾಹರಣೆಗಳು ವಿಧೇಯಕದಲ್ಲಿ ಸಿಗುತ್ತವೆ. ಅವುಗಳಲ್ಲಿ, ಕೆಲವನ್ನು ಅವಲೋಕಿಸುವುದಾದರೆ, ಪ್ರಕರಣ 2(ಇ)ರ ಅಡಿಯಲ್ಲಿ ‘ಕನ್ನಡಿಗ’ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಇಲ್ಲೇ ಹುಟ್ಟಿ ಬೆಳೆದ ಕನ್ನಡಿಗ ಮತ್ತು ಹೊರ ರಾಜ್ಯಗಳಿಂದ /ಹೊರ ದೇಶಗಳಿಂದ ಬಂದು ನೆಲೆಸಿದ ಕನ್ನಡದವರಿಗೆ ಬೇೆ ಬಗೆಯ ವರ್ಗೀಕರಣವಿರಬೇಕಿತ್ತು.

ಕನ್ನಡ ಭಾಷೆಯ ಬಳಕೆಗೆ ಸಂಬಂಧಿಸಿದಂತೆ ಪ್ರಕರಣ 4ರ ಅಡಿಯಲ್ಲಿ ಕಲ್ಪಿಸಿರುವ ಅವಕಾಶಗಳು, ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಮಿತಿಗೊಳಿಸಿವೆ. ಪ್ರಕರಣ 4ರ ಪರಂತುವಿನ ಎ, ಬಿ ಮತ್ತು ಸಿ ಅಡಿಯಲ್ಲಿ ಕಲ್ಪಿಸಿರುವ ರಿಯಾಯಿತಿಗಳು ಕನ್ನಡ ಬಳಕೆಗೆ ಒಂದಲ್ಲ ಒಂದು ರೀತಿಯಲ್ಲಿ ಅಡ್ಡಿಯಾಗುತ್ತವೆ. ಉದಾಹರಣೆಗೆ, 4(ಸಿ) ಅಡಿಯಲ್ಲಿ, ವಿಧೇಯಕ ಹೇಳುವಂತೆ, ಆಡಳಿತಾತ್ಮಕ ಕಾರಣಗಳಿಗಾಗಿ ಇಂಗ್ಲಿಷ್ ಭಾಷೆಯನ್ನು ಬಳಸುವುದು ಅನಿವಾರ್ಯವಾಗಿದ್ದಲ್ಲಿ ಅಥವಾ ವೈಜ್ಞಾನಿಕ ಹಾಗೂ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸುವಾಗ ಆಂಗ್ಲ ಭಾಷೆಯನ್ನು ಬಳಸಬಹುದು ಎನ್ನುತ್ತದೆ. ಈ ಅವಕಾಶವು ವಿಧೇಯಕದ ಮೂಲ ಪ್ರಕರಣ 3ರ ಆಶಯವನ್ನು ತಿಳಿಗೊಳಿಸಿ ಆಡಳಿತದಲ್ಲಿ ಮತ್ತೊಮ್ಮೆ ಆಂಗ್ಲ ಭಾಷೆ ರಾರಾಜಿಸಲು ರಹದಾರಿ ನೀಡಿದಂತಾಗಿದೆ. ‘ಅನಿವಾರ್ಯವಾಗಿದ್ದಲ್ಲಿ’ ಎಂಬ ಸವಕಲು ಪದ ಎಲ್ಲೆಡೆ; ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಆಂಗ್ಲ ಭಾಷೆಯನ್ನು ಬಳಸುವ ಅನಿವಾರ್ಯತೆ ಹಾಗೂ ಕಾನೂನಿನ ಅಡಿಯಲ್ಲಿಯೇ ರಕ್ಷಣೆ ಪಡೆಯಲು ಅವಕಾಶ ಕಲ್ಪಿಸುತ್ತದೆ. ಜೊತೆಗೆ, ಭಾಷೆಯೊಂದು ಬೆಳೆಯಬೇಕಾದರೆ, ವೈಜ್ಞಾನಿಕ ಹಾಗೂ ತಾಂತ್ರಿಕ ವಿಷಯಗಳನ್ನು ನಮ್ಮ ತಾಯ್ನುಡಿ ಭಾಷೆಯಲ್ಲಿ ಬಳಸುವಂತಾಗಬೇಕು. ಸರಕಾರ ಅದಕ್ಕೆ ಸೂಕ್ತ ಭೂಮಿಕೆ ಒದಗಿಸಬೇಕು. ಅದು ವೈಜ್ಞಾನಿಕ ಹಾಗೂ ತಾಂತ್ರಿಕ ವಿಷಯವಾದ ಮಾತ್ರಕ್ಕೆ ಆಂಗ್ಲ ಭಾಷೆಗೆ ಮೊರೆ ಹೋಗುವುದಾದರೆ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿಯ ಅರ್ಥವೇನು ಎಂಬ ಮೂಲ ಪ್ರಶ್ನೆ ಕನ್ನಡಿಗನಿಗೆ ಎದುರಾಗುತ್ತದೆ.

ಪ್ರಕರಣ 5ರಲ್ಲಿ ಪ್ರಸ್ತಾಪಿಸಿರುವ ರಾಜಭಾಷಾ ಆಯೋಗದ ಉದ್ದೇಶವಾದರೂ ಏನು ಎಂಬುದು ಯಕ್ಷ ಪ್ರಶ್ನೆಯಾಗುತ್ತದೆ. ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಯ ವಿಧಾನ ನಿವೃತ್ತ ಅಧಿಕಾರಿಳಿಗೆ ಪುನರ್ವಸತಿ ಕಲ್ಪಿಸುವಂತಿದೆ.

   ಪ್ರಕರಣ 7ರಲ್ಲಿ ಭಾಷೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಚಿಸಲು ಪ್ರಸ್ತಾಪಿಸಿರುವ ರಾಜ್ಯಮಟ್ಟದ ಸಮಿತಿಯು ಅನುಷ್ಠಾನಕ್ಕೆ ಇರಬೇಕಾದ ಕನಿಷ್ಠ ರಾಜಕೀಯ ಇಚ್ಛಾಶಕ್ತಿಯನ್ನು ಅಭಿವ್ಯಕ್ತಗೊಳಿಸಬಹುದಾದ ಉನ್ನತ ಮಟ್ಟದ ಸಮಿತಿಯಾಗುವ ಬದಲು ಕೇವಲ ಕಾಟಾಚಾರದ ಸಮಿತಿಯಾದಂತಿದೆ. ಕನ್ನಡ ಅನುಷ್ಠಾನದ ರಾಜಕೀಯ ಕಾಯಕಲ್ಪಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಬೇಕೇ ಹೊರತು ಅದನ್ನು ತಿಳಿಗೊಳಿಸಬಾರದು. ಕನ್ನಡ ಅನುಷ್ಠಾನಕ್ಕಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಪರಿಷತ್ತಿನ ಅಧ್ಯಕ್ಷರು, ಉಪಾಧ್ಯಕ್ಷರುಗಳಾಗಿದ್ದು, ಸರಕಾರದ ಮುಖ್ಯ ಕಾರ್ಯದರ್ಶಿ ಸದಸ್ಯ ಸಂಚಾಲಕರಾದಾಗ ಮಾತ್ರ ಅನುಷ್ಠಾನಕ್ಕೆ ಅಗತ್ಯವಾದ ರಾಜಕೀಯ ಇಚ್ಛಾಶಕ್ತಿ ಅಭಿವ್ಯಕ್ತಗೊಳ್ಳುತ್ತದೆ. ಜೊತೆಗೆ, ಸರಕಾರದ ಹಂಗಿಲ್ಲದೆ ಸ್ವತಂತ್ರವಾಗಿ ಭಾಷೆಯ ಅನುಷ್ಠಾನದ ಬಗ್ಗೆ ನಿರ್ಭಯವಾಗಿ ಮಾತನಾಡಬಲ್ಲ ಸರಕಾರೇತರ ತಜ್ಞ ಸದಸ್ಯರು ಇರಬೇಕಾಗುತ್ತದೆ. ಇದೇ ಬಗೆಯ ಇಚ್ಛಾಶಕ್ತಿ ವ್ಯಕ್ತವಾಗುವ ರೀತಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಸಮಿತಿಗಳು ರಚನೆಯಾಗಬೇಕಾಗುತ್ತದೆ. ಆದರೆ, ಜಿಲ್ಲೆ ಅಥವಾ ತಾಲೂಕು ಎಲ್ಲಿಯೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳು ಮತ್ತು ಕನ್ನಡಕ್ಕಾಗಿ ಕೆಲಸ ನಿರ್ವಹಿಸುತ್ತಿರುವ ಸಂಘಟನೆಗಳ ಪ್ರತಿನಿಧಿಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ಒಳ ಮಾಡಿಕೊಳ್ಳುವ ಪ್ರಯತ್ನವಾದಂತಿಲ್ಲ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಅಭಿವೃದ್ಧಿಯಲ್ಲಿ ಈ ಎಲ್ಲಾ ಮೂಲವಾರಸುಾರರ ಪಾತ್ರ ನಿರ್ಣಾಯಕವಾಗುತ್ತದೆ.

 ಪ್ರಕರಣ 12ರ ಅಡಿಯಲ್ಲಿ ಕನ್ನಡ ಭಾಷಾ ಕಲಿಕಾ ಅಧಿನಿಯಮ 2015ರ ಪ್ರಸ್ತಾಪ ಹೊರತುಪಡಿಸಿದರೆ, ಕನ್ನಡ ಮಾಧ್ಯಮ ಅಥವಾ ಕನ್ನಡ ಶಾಲೆಗಳ ಸಬಲೀಕರಣದ ಬಗ್ಗೆ ಪ್ರಸ್ತಾಪವಾಗಿಲ್ಲ. ನಿಜ ಹೇಳಬೇಕೆಂದರೆ, ಇತ್ತೀಚೆಗೆ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ನಿರಪೇಕ್ಷಣಾ ಪತ್ರ ನೀಡಲು ಮತ್ತು ನಿಯಂತ್ರಣ) ನಿಯಮಗಳು 2022ಕ್ಕೆ ನಿಯಮ 6ರ ಅಡಿಯಲ್ಲಿ ಮಾಡಿದ ತಿದ್ದುಪಡಿ ಕನ್ನಡ ಭಾಷಾ ಕಲಿಕಾ ಅಧಿನಿಯಮ 2015ನ್ನು ದುರ್ಬಲಗೊಳಿಸಿದೆ.

ಇದೇ ಸಂದರ್ಭದಲ್ಲಿ, ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ಕನಿಷ್ಠ ಎಂಟನೇ ತರಗತಿಯವರೆಗೆ ಖಾಸಗಿ ಶಾಲೆಗಳನ್ನೂ ಒಳಗೊಂಡಂತೆ ಮಾಧ್ಯಮ ಮಾತೃಭಾಷೆಯಲ್ಲಿರಬೇಕೆಂದು ಹೇಳುತ್ತದೆ.

………Wherever possible, the medium of instruction until at least Grade

5, but preferably till Grade 8 and beyond, will be the home language/mother

tongue/local language/regional language. Thereafter, the home/local

language shall continue to be taught as a language wherever possible. This

will be followed by both public and private schools….(ಪ್ಯಾರಾ 4.11, ಎನ್‌ಇಪಿ, 2020) ಈ ಅವಕಾಶವನ್ನು ಜಾರಿಗೊಳಿಸಲು ವಿಧೆೀಯಕದಲ್ಲಿ ಯಾವುದೇ ಪ್ರಸ್ತಾಪವಿಲ್ಲ.

ಕನ್ನಡಿಗರಿಗೆ ಉದ್ಯೋಗ ಒಂದು ಮಹತ್ವದ ಪ್ರಶ್ನೆ. ಸದ್ಯದ ಪರಿಸ್ಥಿತಿಯಲ್ಲಿ ಸರಕಾರ ಅಥವಾ ಅರೆಸರಕಾರಿ ಕ್ಷೇತ್ರಗಳಲ್ಲಿ ಉದ್ಯೋಗ ಬಹುತೇಕ ಕ್ಷೀಣಿಸಿದ್ದು, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗದ ಅವಕಾಶ ಮತ್ತು ಭದ್ರತೆಯನ್ನು ಒದಗಿಸುವುದು ಸಮಗ್ರ ಆಭಿವೃದ್ಧಿಗೆ ಒಂದು ಪಮುಖ ವಿಷಯವಾಗಿದೆ. ಇಲ್ಲಿ ಸ್ಥಳಿಯರಾದ ಕನ್ನಡಿಗರಿಗೆ ಉದ್ಯೋಗದ ಮೀಸಲಾತಿ ಮುಖ್ಯವಾಗುತ್ತದೆ. ಅದೇ ರೀತಿಯಲ್ಲಿ ಕನ್ನಡ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗ ಮತ್ತು ಇತರ ರಂಗಗಳಲ್ಲಿ ಮೀಸಲಾತಿ ಕಲ್ಪಿಸಬೇಕೆಂಬ ಕೂಗು ಬಲವಾಗಿಯೇ ಇದೆ. ಇದರಿಂದ ಕನ್ನಡ ಶಾಲೆ ಹಾಗೂ ಕನ್ನಡಕ್ಕೆ ಹೊಸ ಬಗೆಯ ಶಕ್ತಿ ಬರುತ್ತದೆ ಎಂಬುದು ಹಲವರ ಇಂಗಿತ. ಈ ವಿಷಯವನ್ನು ಪರಾಮರ್ಶಿಸಿ ಯಾವ ಬಗೆಯಲ್ಲಿ ಕಾನೂನಿನ ಅಡಿಯಲ್ಲಿ ಅವಕಾಶ ಕಲ್ಪಿಸಬಹುದೆಂದು ಯೋಚಿಸಬಹುದಾದ ಅವಕಾಶವನ್ನು ವಿಧೇಯಕ ಕಳೆದುಕೊಂಡಿದೆ. ಉದಾಹರಣೆಗೆ, ನೆರೆಯ ತಮಿಳುನಾಡಿನಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ವೈದ್ಯಕೀಯ ಶಿಕ್ಷಣದಲ್ಲಿ ಶೇ. 7.5ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಸರಕಾರಿ ಶಾಲೆಗಳಿಗೆ ಹೊಸ ಬಗೆಯ ಕಾಯಕಲ್ಪಕಲ್ಪಿಸಲಾಗಿದೆ. ಆದರೆ, ಅಂತಹ ಪ್ರಯತ್ನಗಳು ಈ ವಿಧೇಯಕದಲ್ಲಿ ಕಾಣುತ್ತಿಲ್ಲ.

ಇದೇ ರೀತಿಯಲ್ಲಿ, ಪ್ರಕರಣ 20 ಮತ್ತು 21ರಲ್ಲಿನ ಉದ್ಯೋಗಕ್ಕೆ ಸಂಬಂಧಿಸಿದ ಅವಕಾಶಗಳು ಅಸ್ಪಷ್ಟವಾಗಿವೆ. ಕನ್ನಡಿಗರಿಗೆ ಯಾವ ಬಗೆಯ ಉದ್ಯೋಗ, ಶೇಕಡಾವಾರು ಅವಕಾಶ ಅಥವಾ ಮೀಸಲಾತಿ, ಸರಕಾರಿ ಕನ್ನಡ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಅಥವಾ ಗ್ರಾಮೀಣ ಭಾಗದಲ್ಲಿ ಕಲಿತ ಕನ್ನಡ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಸಿಗಬಹುದಾದ ವಿಶೇಷ ಅವಕಾಶಗಳ ಬಗ್ಗೆ ಮತ್ತಷ್ಟು ಸ್ಪಷ್ಟತೆ ಹಾಗೂ ಪ್ರೋತ್ಸಾಹದಾಯಕವಾಗಿರಬೇಕಿತ್ತು.

ಕೊನೆಯದಾಗಿ, ಪ್ರಕರಣ 22, 23 ಮತ್ತು ಅಧಿನಿಯಮದ ಉಪಬಂಧಗಳನ್ನು ಪಾಲಿಸಲು ವಿಫಲವಾದಲ್ಲಿ ಉಪಬಂಧಗಳ ಉಲ್ಲಂಘನೆಗಾಗಿ ದಂಡನೆಯನ್ನು ಪ್ರಸ್ತಾಪಿಸಲಾಗಿದೆ. ದಂಡನೆಯ ಸ್ವರೂಪ ಬಹಳ ಹಗುರವಾಗಿದೆ. ಜೊತೆಗೆ ಅಪರಾಧಗಳ ರಾಜಿಗೂ ಅವಕಾಶ ಕಲ್ಪಿಸಲಾಗಿರುವುದರಿಂದ ಅದು ಕೇವಲ ದಂಡನೆ ಹಣಕ್ಕೆ ಉಲ್ಲಂಘನೆ

ಾಜಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಒಟ್ಟಾರೆ, ಸಮಗ್ರ ಎನ್ನುತ್ತಲೇ ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನು ಸಂಕುಚಿತ ಹಾಗೂ ತಿಳಿಗೊಳಿಸುವ ಈ ವಿಧೇಯಕವನ್ನು ಸಮಗ್ರವಾಗಿಯೇ ಪರಾಮರ್ಶಿಸಬೇಕಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top