-

ಅತ್ಯಂತ ಹಿಂದುಳಿದ (ಪ್ರವರ್ಗ-1)ವರ್ಗದ ಮೀಸಲಾತಿ ಕೋಟಾ ಹೆಚ್ಚಿಸುವ ಆವಶ್ಯಕತೆ ಯಾಕೆಂದರೆ...

-

ಪ್ರವರ್ಗ -1ರಲ್ಲಿರುವ ಅತ್ಯಂತ ಹಿಂದುಳಿದ ವರ್ಗಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಗಣನೀಯ ಪ್ರಾತಿನಿಧ್ಯ ಪಡೆದು, ಸರ್ವತೋಮುಖ ಅಭಿವೃದ್ಧಿಯ ಪಥದಲ್ಲಿ ಸಾಗುವಂತಾಗಲು ಸರಕಾರ ಮುಂದಿನ ಕೆಲ ದಿನಗಳಲ್ಲಿ ಕರೆಯುವ ಸರ್ವಪಕ್ಷಗಳ ಸಭೆಯಲ್ಲಿಯೇ ಮೀಸಲಾತಿ ಕೋಟಾವನ್ನು ಕನಿಷ್ಠ ಶೇ.7ರಷ್ಟಕ್ಕೆ ಹೆಚ್ಚಿಸಲು ನಿರ್ಣಯ ಕೈಗೊಂಡು, ಕಳೆದೆರಡು ದಶಕಗಳಿಂದ ಆ ವರ್ಗಕ್ಕೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಬೇಕಾಗಿದೆ.

ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಬಿಕ್ಕಟ್ಟೊಂದು ಪರಿಹಾರ ಕಂಡುಕೊಳ್ಳುವತ್ತ ಸಾಗುತ್ತಿರುವುದು ಗೋಚರಿಸುತ್ತಿದೆ. ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ಕೋಟಾ ಹೆಚ್ಚಿಸಲು ಸರಕಾರ ಕಡೆಗೂ ಉದ್ದೇಶಿಸಿದೆ ಎಂಬ ಅಂಶ ಹೊರಬಿದ್ದಿದೆ. ಮುಖ್ಯಮಂತ್ರಿ ಈ ವಿಷಯದಲ್ಲಿ ಸರ್ವಪಕ್ಷಗಳ ಸಭೆ ಕರೆಯುವುದಾಗಿ ವಿಧಾನಸಭೆಯ ಕಲಾಪದ ಕೊನೆಯದಿನದಂದು ಹೇಳುವುದರ ಮೂಲಕ ಸಾರ್ವಜನಿಕರ ಗಮನ ಸೆಳೆದಿರುವ, ಸರಕಾರದ ಈ ನಡೆ ಸ್ವಾಗತಾರ್ಹ ಕೂಡ.

ಪರಿಶಿಷ್ಟ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದ ನಿಮಿತ್ತ ಮೀಸಲಾತಿ ಕೋಟಾ ಹೆಚ್ಚಿಸಬೇಕೆಂಬ ಕೂಗು ನಿನ್ನೆ ಮೊನ್ನೆಯದಲ್ಲ. 2007-8ರ ಸಮಯದಲ್ಲಿ ನ್ಯಾ. ಕುಲದೀಪ್ ಸಿಂಗ್ ಆಯೋಗ, ಶಾಸನಸಭಾ ಕ್ಷೇತ್ರಗಳ ಮರುವಿಂಗಡಣೆ ಸಂದರ್ಭದಲ್ಲಿ ಜನಸಂಖ್ಯಾನುಸಾರ ಪರಿಶಿಷ್ಟ ಜಾತಿ-ಪಂಗಡಗಳಿಗೆ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳನ್ನು ಹೆಚ್ಚಿಸಿತು. ಎರಡು ಇದ್ದ ಪರಿಶಿಷ್ಟ ಪಂಗಡದ ವಿಧಾನಸಭಾ ಕ್ಷೇತ್ರಗಳು 15ಕ್ಕೆ ಹೆಚ್ಚಿದವು. ಅಷ್ಟು ಮಾತ್ರ ಅಲ್ಲ, ಎರಡು ಲೋಕಸಭಾ ಕ್ಷೇತ್ರಗಳು ಕೂಡಾ ಹೊಸದಾಗಿ ಮೀಸಲಾತಿಗೆ ಒಳಪಟ್ಟವು.ಆದರೆ, ಶಿಕ್ಷಣ ಮತ್ತು ಉದ್ಯೋಗಕ್ಕೆ ಅನ್ವಯಿಸುವಂತೆ ಮೀಸಲಾತಿ ಕೋಟಾ ಮಾತ್ರ ಶೇ.3ರಷ್ಟಿದ್ದು, ಅದು ಇಂದಿಗೂ ಮುಂದುವರಿದಿದೆ. ಪರಿಶಿಷ್ಟ ಪಂಗಡದ ಜನ ಮತ್ತು ಆ ಪಂಗಡದ ಕುಲಗುರುಗಳು ಶೇ.7.5ರಷ್ಟು ಮೀಸಲಾತಿ ಕೋಟಾವನ್ನು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಿಗೂ ವಿಸ್ತರಿಸಬೇಕೆಂದೂ ಆ ಲಾಗಾಯ್ತಿನಿಂದ ಹೋರಾಟದಲ್ಲಿ ನಿರತರಾಗಿರುವರು. ಕಡೆಗೂ ಕಣ್ತೆರೆದ ಸರಕಾರ ಆ ದಿಕ್ಕಿನತ್ತ ಹೆಜ್ಜೆ ಇಟ್ಟಿದೆ.

ಆದರೆ, ಈ ಎಚ್ಚೆತ್ತ ಸರಕಾರದ ದೃಷ್ಟಿ ಮಾತ್ರ ಅತ್ಯಂತ ಹಿಂದುಳಿದ ಜಾತಿಗಳೆಂದು ಪರಿಗಣಿಸಿ, ಪ್ರವರ್ಗ-1 ಎಂದು ವರ್ಗೀಕರಿಸಿರುವ ಜಾತಿಗಳ ಕಡೆ ಬೀಳದಿರುವುದು ದುರದೃಷ್ಟಕರ. ಆ ವರ್ಗದ ಜನ ಎಂದೂ ಬೀದಿಗೆ ಬಂದು ತಮಗಾಗಿರುವ ಅನ್ಯಾಯವನ್ನು ಹೇಳಿಕೊಂಡವರೇ ಅಲ್ಲ. ಅದು ಅವರ ಅಸಹಾಯಕತನ ಹಾಗೂ ಅರಿವಿನ ಕೊರತೆ. ಈ ವರ್ಗದವರದ್ದು ಯಾತನೆ. ಅದು ಕಾಣಿಸುವುದಿಲ್ಲ, ಅದು ಅನುಭವಿಸಿದವರಿಗಷ್ಟೇ ಗೊತ್ತು. ಸಿಗಬೇಕಾದ ಮೀಸಲಾತಿಯ ಕೋಟಾ ಪ್ರಮಾಣದ ಪರಿಜ್ಞಾನವಿಲ್ಲದ ಇವರಿಗೆ ಸಿಗಬೇಕಾದ ಶೈಕ್ಷಣಿಕ ಹಾಗೂ ಉದ್ಯೋಗದ ಸ್ಥಾನಮಾನಗಳೂ ಸಿಕ್ಕಿಲ್ಲ ಎಂಬುದು ಹೇಗಾದರೂ ತಿಳಿದೀತು. ಮತ್ತೆ ರಾಜಕೀಯ ಸ್ಥಾನಮಾನಗಳ ಬಗ್ಗೆ ಹೇಳುವುದೇ ಬೇಡ. ಇನ್ನು ರಾಜಕೀಯ ಪ್ರಾತಿನಿಧ್ಯ ಪಡೆದ ಕೆಲವರಿದ್ದರೂ ಅವರೆಂದೂ ಶಾಸನಸಭೆಯಲ್ಲಿ ಈ ವರ್ಗದ ಪುರೋಭಿವೃದ್ಧಿ ಸಂಬಂಧಿತ ವಿಷಯಗಳ ಮೇಲೆ ಸರಕಾರದ ಗಮನಸೆಳೆಯುವಲ್ಲಿ ಎಂದೂ ಮುಂದೆ ಬಂದವರಲ್ಲ. ಅವರದ್ದು ಯಾವತ್ತೂ ನಿಸ್ಸೀಮ ನಿರ್ಲಕ್ಷ್ಯತನ. ಹೀಗಾಗಿ ಈ ವರ್ಗಗಳದ್ದು ಮೂಕ ವೇದನೆ.

ಪ್ರಸಕ್ತ, ರಾಜ್ಯದಲ್ಲಿ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ನ್ಯಾ.ಚಿನ್ನಪ್ಪರೆಡ್ಡಿ ಆಯೋಗದ ವರದಿ ಆಧರಿಸಿದುದಾಗಿದೆ. ನ್ಯಾ.ಚಿನ್ನಪ್ಪರೆಡ್ಡಿ ಅವರು ತಮ್ಮ ವರದಿಯಲ್ಲಿ ಹಿಂದುಳಿದ ವರ್ಗಗಳನ್ನು ಎರಡು ಪ್ರವರ್ಗಗಳಾಗಿ ವಿಂಗಡಿಸಿದ್ದರು. ಅತ್ಯಂತ ಹಿಂದುಳಿದವು ಎಂದು 52 ಜಾತಿಗಳು ಹಾಗೂ ಅವುಗಳ ಉಪಜಾತಿಗಳನ್ನು ಪ್ರವರ್ಗ-1ರಲ್ಲಿ ಸೇರಿಸಿ ಅವುಗಳ ಜನಸಂಖ್ಯಾನುಸಾರ ಶೇ.5ರಷ್ಟು ಮೀಸಲಾತಿ ಕೋಟಾ ನಿಗದಿಪಡಿಸಿದ್ದರು. ಆದರೆ, ಸರಕಾರ ವರದಿಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಅತ್ಯಂತ ಹಿಂದುಳಿದ ಜಾತಿಗಳೆಂದು ಪರಿಗಣಿತವಾಗಿದ್ದ ಪ್ರವರ್ಗ-1ರಲ್ಲಿ ಸ್ಥಾನಪಡೆಯಲು ಅರ್ಹತೆ ಹೊಂದಿದ್ದ ಇನ್ನೂ 43 ಜಾತಿಗಳು ಮತ್ತು ಅವುಗಳ ಉಪಜಾತಿಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿತು.ಅವುಗಳ ಸೇರ್ಪಡೆಯಿಂದ ಪ್ರವರ್ಗ-1ರಲ್ಲಿ 95 ಜಾತಿ ಮತ್ತು ಉಪಜಾತಿಗಳು ಸ್ಥಾನ ಪಡೆದುಕೊಂಡ ಪ್ರಯುಕ್ತ ಅವುಗಳ ಜನಸಂಖ್ಯೆಯೂ ಗಣನೀಯವಾಗಿ ಹೆಚ್ಚಾಯಿತು. ಹಾಗೆ, ಹೊಸದಾಗಿ ಸೇರಿದ ಕೆಲ ಅರ್ಹ ಜಾತಿಗಳೆಂದರೆ- ಗೊಲ್ಲ(ಗಣನೀಯ ಜನಸಂಖ್ಯೆ ಹೊಂದಿದೆ), ಬಗ್ಗರು, ಬವಂದಿ, ಜಂಗಾಲ, ನಾಯರಿ, ಬೈಲ್ ಪತರ್, ಬಜನಿಯ, ಬಾಲಸಂತೋಷಿ, ಚಾರ, ಚಪ್ಪರ್ ಬಂದ್, ದರ್ವೇಸು, ದುರ್ಗಾ ಮುರ್ಗಿ, ಗೋಂದಲಿ, ಫುಲ್ ಮಾಲಿ, ಬೆಂಡರ್, ಬಂಜರಿ, ಗಿರಣಿ ವಡ್ಡರ್, ಭೋಯಿ, ಕ್ರೈಸ್ತ ಧರ್ಮಕ್ಕೆ ಬಂದ ಪರಿಶಿಷ್ಟ ಜಾತಿಗಳು.

ನ್ಯಾ. ಚಿನ್ನಪ್ಪರೆಡ್ಡಿ ಆಯೋಗ 1990ರಲ್ಲಿಯೇ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದರೂ, ಅದು ಜಾರಿಗೆ ಬಂದದ್ದು ಮಾತ್ರ 1994ರಲ್ಲಿ. ಆಯೋಗದ ವರದಿಯನ್ನು ಯಥಾಪ್ರಕಾರ ಜಾರಿಗೊಳಿಸಲು ವರದಿಯಲ್ಲಿ ಸೇರಿಲ್ಲದ ಜಾತಿಗಳ ತೀವ್ರ ಒತ್ತಡದ ಕಾರಣ ಸಾಧ್ಯವಾಗಲಿಲ್ಲ. ಪ್ರತ್ಯೇಕವಾಗಿ ಮೂರನೇ ಪ್ರವರ್ಗ ಒಂದನ್ನು ಸೃಜಿಸಿ, ಮತ್ತೆ ಆ ಪ್ರವರ್ಗವನ್ನು 3ಎ ಮತ್ತು 3ಬಿ ಎಂದೂ ವಿಭಾಗಿಸಿ, ಆಯೋಗ ಹಿಂದುಳಿದ ವರ್ಗಗಳೆಂದು ಪರಿಗಣಿಸದ ಜಾತಿಗಳೆಲ್ಲವನ್ನೂ ಸರಕಾರ ಈ ಪ್ರವರ್ಗದಲ್ಲಿ ಸೇರಿಸುವ ಔದಾರ್ಯ ಮೆರೆಯಿತು! ಪರಿಶಿಷ್ಟ ವರ್ಗಗಳೂ ಸೇರಿದಂತೆ ಕರ್ನಾಟಕದ ಜನಸಂಖ್ಯೆಯಲ್ಲಿ ಅಂದಾಜು ಶೇ.95ರಷ್ಟನ್ನು ಮೀಸಲಾತಿಗೆ ಒಳಪಡಿಸಿ ಸರಕಾರ ದಾಖಲೆ ನಿರ್ಮಿಸಿದೆ. ಪ್ರವರ್ಗಗಳಿಗೆ ಶೇಕಡಾವಾರು ಮೀಸಲಾತಿ ಕೋಟಾ ನಿಗದಿಪಡಿಸುವಲ್ಲಿ, ಸರಕಾರ ಸರ್ವೋಚ್ಚ ನ್ಯಾಯಾಲಯದ ಆದೇಶದ ಗರಿಷ್ಠ ಮಿತಿಯನ್ನೂ ಮೀರಿ ಹೋಗಿ ಶೇ.73 ರಷ್ಟನ್ನು ಪರಿಶಿಷ್ಟ ವರ್ಗಗಳೂ ಸೇರಿದಂತೆ ಎಲ್ಲಾ ಪ್ರವರ್ಗಗಳಿಗೂ ಅಸಮರ್ಥನೀಯ ಹಾಗೂ ಅವೈಜ್ಞಾನಿಕವಾಗಿ ಮೀಸಲಾತಿ ಕೋಟಾ ನಿಗದಿ ಮಾಡಿ ಕೈತೊಳೆದುಕೊಂಡುಬಿಟ್ಟಿತು (ಹೆಚ್ಚಿನ ವಿವರಕ್ಕಾಗಿ ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಇದೇ ಲೇಖಕನ ದಿನಾಂಕ 13.7.21ರ ಲೇಖನ ‘ಮೀಸಲಾತಿಯ ಕೋಟಾ ಮತ್ತು ಶೇ.50ರ ಮಿತಿಯ ಕಟ್ಟಾಜ್ಞೆ!’ ನೋಡಿ).

ಯಾವುದೇ ಮಾನದಂಡಗಳಿಗೂ ನಿಲುಕದ ಮೀಸಲಾತಿ ಕೋಟಾ ನಿಗದಿಗೊಳಿಸಿರುವುದರ ವಿರುದ್ಧ ನಿರೀಕ್ಷೆಯಂತೆ ನ್ಯಾಯಾಲಯಗಳಲ್ಲಿ ರಿಟ್ ದಾಖಲಾದವು. ಸರಕಾರದ ಅಸಮರ್ಥ ಮತ್ತು ನ್ಯಾಯೋಚಿತವಲ್ಲದ ಮೀಸಲಾತಿ ಕೋಟಾವನ್ನು ಅನೂರ್ಜಿತಗೊಳಿಸಿ ಸರ್ವೋಚ್ಚ ನ್ಯಾಯಾಲಯ ಶೇ.50ರಷ್ಟಕ್ಕೆ ಸೀಮಿತಗೊಳಿಸಲು ಕಟ್ಟುನಿಟ್ಟಿನ ಆದೇಶ ನೀಡಿತು. ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸದೆ ಅನ್ಯದಾರಿಯೇ ಇರಲಿಲ್ಲ. ಇಂತಹ ಜಟಿಲ ಪರಿಸ್ಥಿತಿಯಲ್ಲಿಯೂ, ಹಿಂದುಳಿದ ವರ್ಗಗಳೆಂದೂ ಪರಿಗಣಿತವಾಗದ ಹಾಗೂ ಮೀಸಲಾತಿ ಪಡೆಯಲು ಅರ್ಹತೆಯಿಲ್ಲದ ಜಾತಿಗಳನ್ನು ಪಟ್ಟಿಯಿಂದ ಕೈಬಿಡಲು ಸರಕಾರ ಕಠಿಣ ನಿಲುವು ತಾಳದೆ, ಮತ ರಾಜಕೀಯ ಕಾರಣಗಳಿಗಾಗಿ, ಅಂಥವುಗಳನ್ನು ಮೀಸಲಾತಿ ಪಟ್ಟಿಯೊಳಗೇ ಇಟ್ಟುಕೊಂಡು, ಕೋಟಾ ನಿಗದಿಪಡಿಸಿ ಅರ್ಹ ಹಿಂದುಳಿದ ವರ್ಗಗಳಿಗೆ ಪರಮ ಅನ್ಯಾಯವೆಸಗಿತು. ಸರಕಾರದ ಈ ಅನುಚಿತ ಕೃತ್ಯದಿಂದ ಘನ ಹಾನಿಗೆ ಒಳಗಾದದ್ದು ಮಾತ್ರ ಅತ್ಯಂತ ಹಿಂದುಳಿದ ವರ್ಗವೆಂದು ಪರಿಗಣಿತವಾದ ಪ್ರವರ್ಗ-1.

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮೀಸಲಾತಿ ಕೋಟಾವನ್ನು ಪುನರ್ನಿಗದಿಗೊಳಿಸುವ ಸಂದರ್ಭದಲ್ಲಿ ಶೇ.7ರಷ್ಟಿದ್ದ ಪ್ರವರ್ಗ-1ರ ಕೋಟಾವನ್ನು ಅತಾರ್ಕಿಕ ಮತ್ತು ಅಮಾನವೀಯವಾಗಿ ಶೇ.4ರಷ್ಟಕ್ಕೆ ಇಳಿಸಲಾಯಿತು. ಮತ್ತೆ ಪ್ರವರ್ಗ-2ಎ ಗೆ ನಿಗದಿಗೊಳಿಸಿದ್ದ ಶೇ.20ರಷ್ಟು ಕೋಟಾವನ್ನು ಶೇ.15ರಷ್ಟಕ್ಕೆ ಮರು ನಿಗದಿಗೊಳಿಸಲಾಯಿತು. ಒಂದು ಸರಳ ಗಣಿತ ಸೂತ್ರ ಅನ್ವಯಿಸಿ ಹೇಳುವುದಾದರೆ ಶೇ.20 ರಷ್ಟನ್ನು, ಶೇ.15 ರಷ್ಟಕ್ಕೆ ಇಳಿಸುವುದಾದರೆ, ಶೇ.7ರಷ್ಟಿದ್ದದ್ದನ್ನು ಕನಿಷ್ಠ ಶೇ.5.5ರಷ್ಟಕ್ಕಾದರೂ ನಿಗದಿಗೊಳಿಸಬೇಕಾಗಿತ್ತು. ಮರುನಿಗದಿ ಸಂದರ್ಭದಲ್ಲಿ ಸರಳ ಗಣಿತ ತರ್ಕವನ್ನು ಮಾತ್ರ ಅನುಸರಿಸಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಅತ್ಯಂತ ಹಿಂದುಳಿದ ಜಾತಿಗಳ ಸಮೂಹದಿಂದ ಕೂಡಿರುವ ಪ್ರವರ್ಗ-1ಕ್ಕೆ, ಪ್ರಾಮುಖ್ಯತೆಯ ಕಾರಣ, ವೇಯ್ಟೇಜ್ ಕೊಡುವ ಅಗತ್ಯತೆಯೂ ಇತ್ತು. ಹೊಸ ಜಾತಿಗಳ ಸೇರ್ಪಡೆಯಿಂದ ಹೆಚ್ಚಾದ ಜನಸಂಖ್ಯೆಯ ಕಾರಣ ಮೀಸಲಾತಿ ಪ್ರಮಾಣವನ್ನು ಶೇ.7ರಷ್ಟನ್ನೇ ನಿಗದಿಗೊಳಿಸಬೇಕಾಗಿತ್ತು. ಸರಕಾರ ನ್ಯಾಯವಲ್ಲದ ಕೃತ್ಯ ಅನುಸರಿಸಿ ಈ ಪ್ರವರ್ಗಕ್ಕೆ ಶೇ.4ರಷ್ಟು ಕೋಟಾ ನಿಗದಿಮಾಡಿರುವುದು ಎಷ್ಟು ಮಾತ್ರಕ್ಕೂ ಸಮಂಜಸವಲ್ಲ.

ಪ್ರವರ್ಗ-1ರಲ್ಲಿ ಪ್ರಸಕ್ತ 95 ಜಾತಿಗಳಿವೆ. ನ್ಯಾ. ಚಿನ್ನಪ್ಪರೆಡ್ಡಿಯವರು, ಅತ್ಯಂತ ಹಿಂದುಳಿದವು ಎಂದು ನಿರ್ಧರಿಸಿ 52 ಜಾತಿಗಳನ್ನು ಪ್ರವರ್ಗ-1ರಲ್ಲಿ ಸೇರಿಸಿದ್ದರು. ಆ ನಂತರ ಸರಕಾರ 43 ಜಾತಿಗಳನ್ನು ಪ್ರವರ್ಗ-1ಕ್ಕೆ ಸೇರಿಸಿದೆ ಎಂಬ ಅಂಶವನ್ನು ಮೇಲೆ ಹೇಳಿದೆ. ಈ ಪ್ರವರ್ಗದಲ್ಲಿ ಸದ್ಯ 46 ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳು ಸೇರಿವೆ. ಅವೆಂದರೆ - ಬೈರಾಗಿ, ಬುಡುಬುಡುಕಿ, ದೊಂಬರಿ, ಘಿಸಾಡಿ, ಹೆಳವ, ಜೋಗಿ, ನಂದಿವಾಲಾ, ನಾಥಪಂಥಿ, ಗೊಲ್ಲ, ಬುಂಡೆ ಬೆಸ್ತ, ದೊಂಬಿದಾಸ ಮುಂತಾದವು. ಒಂದು ನಿರ್ದಿಷ್ಟ ಜನಸಮೂಹವು ಆಹಾರಕ್ಕಾಗಿ ಮತ್ತು ಜೀವನಕ್ಕಾಗಿ ಒಂದು ಸ್ಥಳದಲ್ಲಿ ನಿರಂತರವಾಗಿ ನೆಲೆಯೂರದೆ ನಿಯತವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವಿಕೆಯನ್ನು ಅಲೆಮಾರಿತನ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿರುವ ಜನಸಮೂಹವು ಆಧುನಿಕತೆಗೆ ಒಳಪಡದಿರುವುದರಿಂದ, ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿವೆ. ಹೀಗಾಗಿ ಶಿಕ್ಷಣ ಇವರಿಗೆ ದೊರಕದಾಗಿದೆ. ನೆಲೆ-ಆಚಾರ-ವಿಚಾರಗಳಿಂದಾಗಿ ಇವರ ಸಾಮಾಜಿಕ ಸ್ಥಿತಿಯಂತೂ ಕೆಳಮಟ್ಟದ್ದಾಗಿದೆ. ಇವರು ಅತ್ಯಂತ ಅನಿಶ್ಚಿತ ಆರ್ಥಿಕ ಮೂಲಗಳನ್ನೇ ನಂಬಿ ಬದುಕು ಕಟ್ಟಿಕೊಂಡಿರುವುದರಿಂದ, ಶಿಕ್ಷಣ ಸೌಲಭ್ಯ ಇಲ್ಲದ ಕಾರಣ ಸರಕಾರದ ಉದ್ಯೋಗದಲ್ಲಿ ಸಿಗಬೇಕಾದ ಪ್ರಾತಿನಿಧ್ಯ ಇವರಿಗೆ ಸಿಕ್ಕಿಲ್ಲ. ಹಾಗೆಯೇ, ಈ ಪ್ರವರ್ಗದಲ್ಲಿ ಸೇರಿರುವ ಇತರ ಜಾತಿಗಳ ಸಾಮಾಜಿಕ ಸ್ಥಿತಿ ಮತ್ತು ಅವು ದೊರಕಿಸಿಕೊಂಡಿರುವ ಶಿಕ್ಷಣ ಹಾಗೂ ಗಳಿಸಿರುವ ಸರಕಾರಿ ಹುದ್ದೆಗಳ ಪ್ರಾತಿನಿಧ್ಯ ಕುರಿತ ಅಂಕಿಅಂಶಗಳನ್ನು ನ್ಯಾ.ಚಿನ್ನಪ್ಪರೆಡ್ಡಿ ಆಯೋಗ ತನ್ನ ವರದಿಯಲ್ಲಿ ಸಾದರಪಡಿಸಿದೆ. ಇವೇ ಮುಂತಾದ ಕಾರಣಗಳಿಂದ ಪ್ರವರ್ಗ-1ರಲ್ಲಿ ಪಟ್ಟಿಮಾಡಿರುವ ಜಾತಿ-ಉಪಜಾತಿಗಳು ಅತ್ಯಂತ ಹಿಂದುಳಿದವು ಎಂದು ಆಯೋಗ ಪರಿಗಣಿಸಿದೆ.

ಪ್ರವರ್ಗ -1 ರಲ್ಲಿರುವ ಅತ್ಯಂತ ಹಿಂದುಳಿದ ವರ್ಗಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಗಣನೀಯ ಪ್ರಾತಿನಿಧ್ಯ ಪಡೆದು, ಸರ್ವತೋಮುಖ ಅಭಿವೃದ್ಧಿಯ ಪಥದಲ್ಲಿ ಸಾಗುವಂತಾಗಲು ಸರಕಾರ ಮುಂದಿನ ಕೆಲ ದಿನಗಳಲ್ಲಿ ಕರೆಯುವ ಸರ್ವಪಕ್ಷಗಳ ಸಭೆಯಲ್ಲಿಯೇ ಮೀಸಲಾತಿ ಕೋಟಾವನ್ನು ಕನಿಷ್ಠ ಶೇ.7ರಷ್ಟಕ್ಕೆ ಹೆಚ್ಚಿಸಲು ನಿರ್ಣಯ ಕೈಗೊಂಡು, ಕಳೆದೆರಡು ದಶಕಗಳಿಂದ ಆ ವರ್ಗಕ್ಕೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top