-

ಇಂದು ಬೋರಣ್ಣ ಗೌಡರ ಜನ್ಮದಿನ

ಮರೆಯಬಾರದ ‘ಮಲೆನಾಡ ಗಾಂಧಿ’ ಬೋರಣ್ಣ ಗೌಡ

-

ದೇಶದೆಲ್ಲೆಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ನಮ್ಮ ದೇಶದ ಸ್ವಾತಂತ್ರ್ಯವನ್ನು ಹುತಾತ್ಮರ ರಕ್ತದಿಂದ ಖರೀದಿಸಿದ್ದು, ಅದಕ್ಕೆ ಬೆಲೆ ಕಟ್ಟಲಾಗದು. ಸಾವಿರಾರು ಜನ ಸ್ವಾತಂತ್ರ್ಯ ಸೇನಾನಿಗಳು ತಮ್ಮ ವಾಹಿನಿಯನ್ನು ಸುರಿದು, ಭಾರತದ ಜೀವವಾಹಿನಿಯನ್ನು ರಕ್ಷಿಸಿದ್ದಾರೆ. ಕೆಲವರು ಲಾಠಿ, ಗುಂಡೇಟುಗಳಿಂದ ಪ್ರಾಣ ಬಿಟ್ಟರೆ, ಅನೇಕರು ಪಾಶಿಕಂಬ ಏರಿ ಪ್ರಾಣ ಬಿಟ್ಟಿದ್ದಾರೆ. ಅಂಡಮಾನ್‌ನಲ್ಲಿ ಗಾಣ ಎಳೆದು ಹರಿಸಿದ ನೆತ್ತರಿಗೆ, ಸುರಿಸಿದ ಕಣ್ಣೀರಿಗೆ ಬೆಲೆ ಕಟ್ಟಲಾಗದು. ಈ ಸ್ವಾಭಿಮಾನದ ಸಮರದಲ್ಲಿ ಸಾವಿರಾರು ಜನ ಅಮರರಾದರು. ಅವರ ತ್ಯಾಗ, ಬಲಿದಾನಗಳ ಫಲವಾಗಿ ಭಾರತದಲ್ಲಿ ಸ್ವತಂತ್ರ ಸೂರ್ಯ ಉದಯಿಸಿದ್ದಾನೆ.

ಇಂತಹ ಪ್ರಮುಖರಲ್ಲಿ ಕರ್ನಾಟಕ ಕಂಡ ಅಪರೂಪದ ವೀರ ಸ್ವಾತಂತ್ರ್ಯ ಸೇನಾನಿ ಮುಗಳವಳ್ಳಿ ಬೋರಣ್ಣ ಗೌಡ ಒಬ್ಬರು. ಮಹಾತ್ಮಾ ಗಾಂಧಿಯವರಿಂದ ಹಿಡಿದು ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನದವರೆಗೂ ಸ್ವಾತಂತ್ರಕ್ಕಾಗಿ ಹೋರಾಡಿದ ಅಪ್ಪಟ ದೇಶಭಕ್ತ. ‘ನಾರಿಮನ್ ಗಲಾಟೆ’ ಚಳವಳಿಯಿಂದ ಕ್ವಿಟ್ ಇಂಡಿಯಾ ಚಳವಳಿಯವರೆಗೆ ಪಾಲ್ಗೊಂಡು ಯೌವನದ ಬಹುಭಾಗ ಜೀವನವನ್ನು ಕಾರಾಗೃಹ ಶಿಕ್ಷೆ ಅನುಭವಿಸಿದವರು. ಮೂರು ಬಾರಿ ಶಾಸಕರಾಗಿ, ಹನ್ನೆರಡು ವರ್ಷಗಳ ಕಾಲ ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಒಟ್ಟು ಶುದ್ಧ ಹಸ್ತದ ರಾಜಕಾರಣಿಯಾಗಿ, ಸಂಸದೀಯ ಕಾರ್ಯಕಲಾಪಗಳಿಗೆ ಅನನ್ಯ ಕೊಡುಗೆ ನೀಡಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೂರಾರು ನಿಷ್ಠಾವಂತ ಸೇನಾನಿಗಳನ್ನು ಸಂಘಟಿಸಿದ ಶ್ರೇಷ್ಠ ಸಂಘಟಕರು. ತನಗಾಗಿ, ತನ್ನ ಸುಖಕ್ಕಾಗಿ ಏನನ್ನೂ ಹಾರೈಸದ ತನ್ನ ಪೂರ್ಣ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟ ತ್ಯಾಗಮೂರ್ತಿ ಮುಗಳವಳ್ಳಿ ಬೋರಣ್ಣ ಗೌಡರು. ಇವರ ಸರಳತೆ, ವ್ಯಕ್ತಿ ಸಮಗ್ರತೆ, ವಚನಬದ್ಧತೆ, ಪಕ್ಷಪಾತ ಮತ್ತು ಪರಿಪಕ್ವತೆಯನ್ನು ಹತ್ತಿರದಿಂದ ಕಂಡಿದ್ದ ಅವರ ಒಡನಾಡಿಗಳು ಇವರನ್ನು ಪ್ರೀತಿಯಿಂದ ‘ಮಲೆನಾಡ ಗಾಂಧಿ’ ಎಂದೇ ಕರೆಯುತ್ತಿದ್ದರು, ಇವರಷ್ಟು ದೀರ್ಘ ಕಾಲ ಅಂತರಂಗ-ಬಹಿರಂಗ ಶುದ್ಧಿಯಿಂದ ರಾಜಕಾರಣದಲ್ಲಿ ತೊಡಗಿಸಿಕೊಂಡವರು ಇಡೀ ದೇಶದಲ್ಲಿಯೇ ಅಪರೂಪ. ಬೋರಣ್ಣ ಗೌಡರ ತ್ಯಾಗ, ಹೋರಾಟದ ಕರೆಯು ಕರುನಾಡಿನ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದಲ್ಲಿ ದೇದೀಪ್ಯಮಾನ ಅಧ್ಯಾಯವೆನಿಸಿದೆ.

 ಬೋರಣ್ಣ ಗೌಡರು ಜನಿಸಿದ್ದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮುಗಳವಳ್ಳಿ ಗ್ರಾಮದಲ್ಲಿ. ಸಾಮಾನ್ಯ ರೈತ ಕುಟುಂಬದಲ್ಲಿ ಅಕ್ಟೋಬರ್ 16, 1907ರಂದು ನಿಂಗೇಗೌಡ-ದ್ಯಾವಮ್ಮ ದಂಪತಿಯ ಮಗನಾಗಿ ಜನಿಸಿದರು.

1927, ಆಗಸ್ಟ್‌ನಲ್ಲಿ ಗಾಂಧೀಜಿಯವರು ಹಾಸನಕ್ಕೆ ಭೇಟಿ ನೀಡಿದಾಗ ಮಹಾರಾಜ ಪಾರ್ಕ್‌ನಲ್ಲಿ ಗಾಂಧೀಜಿಯವರ ದರ್ಶನಕ್ಕೆ ಲಕ್ಷಾಂತರ ಜನರು ಸೇರಿದ್ದರು. ಗಾಂಧೀಜಿಯವರ ದೇಶಪ್ರೇಮದ ಭಾಷಣ ಕೇಳಿ ಪ್ರಭಾವಿತರಾದ ಬೋರಣ್ಣಗೌಡರು, ಅಂದಿನಿಂದಲೇ ಗಾಂಧೀಜಿಯವರ ಸರಳ ಆದರ್ಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ‘ಗಾಂಧಿ ಹುಚ್ಚು’ ಹಿಡಿಸಿಕೊಂಡರು.

ಗಾಂಧೀಜಿ ಅಸಹಕಾರ ಚಳವಳಿಯನ್ನು ಪ್ರಾರಂಭಿಸಿದಾಗ ಬೋರಣ್ಣ ಗೌಡರು ಬೆಂಗಳೂರಿನಲ್ಲಿ 2ನೇ ವರ್ಷದ ಬಿ.ಎ. ಆನರ್ಸ್ ವ್ಯಾಸಂಗ ಮಾಡುತ್ತಿದ್ದರು. ಇದೇ ಸಮಯಕ್ಕೆ ‘‘ದೇಶಕ್ಕೆ ನಿನ್ನ ಸೇವೆ ಬೇಕಾಗಿದೆ, ನೀನು ಸಾಯುವುದಕ್ಕೆ ಸಿದ್ಧನಾಗು, ಮಾತ್ರವಲ್ಲದೆ ಸಾಯುವುದಕ್ಕೆ ನೀನೇ ಮೊದಲಿಗನಾಗಬೇಕು, ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸು’’ ಎಂದು ಮಹಾತ್ಮಾರಿಂದ ಪತ್ರ ಬಂತು, ಮೊದಲೇ ಮಹಾತ್ಮಾರ ಮಾತುಗಳಿಗೆ ಮನಸ್ಸು ಒಪ್ಪಿಸಿದ್ದ ಬೋರಣ್ಣಗೌಡರು, ಈ ಬಿಳಿಯರ ವಿದ್ಯೆ ಇನ್ನು ಸಾಕೆಂದು, ಖಾದಿ ತೊಟ್ಟು ಆಂದೋಲನದಲ್ಲಿ ಧುಮುಕಿದರು.

ದೇಶದ ಸ್ವಾತಂತ್ರ್ಯ ಸಂಪಾದನೆಗಾಗಿ ಬೋರಣ್ಣ ಗೌಡರು ಮನೆ, ಮಡದಿ, ಮಕ್ಕಳ ಯೋಗಕ್ಷೇಮವನ್ನು ನಿರ್ಲಕ್ಷಿಸಿದರು. ತಮ್ಮ ಹರೆಯದ ಬಹುಭಾಗವನ್ನು ಹೋರಾಟ, ಜನಸಂಘಟನೆ ಮತ್ತು ತುರಂಗವಾಸದಲ್ಲಿ ಕಳೆದರು. ಆರಂಭದಲ್ಲಿ ಗುಪ್ತ ಸೇವಾ ಸಂಸ್ಥೆಯಲ್ಲಿ ಸುದ್ದಿವಾಹಕರಾಗಿ ಸೇವೆ ಸಲ್ಲಿಸಿದ ಬೋರಣ್ಣಗೌಡರು ಸೈಮನ್ ಕಮಿಶನ್ ಬಹಿಷ್ಕರಿಸಿ ರಹಸ್ಯ ಸ್ಥಳದಲ್ಲಿ ಪತ್ರಗಳನ್ನು ಮುದ್ರಿಸಿ ದೇಶದ ನಾನಾ ಭಾಗಗಳಿಗೆ ರವಾನಿಸುವ ಜವಾಬ್ದಾರಿಯನ್ನು ನಿರ್ವಹಿಸಿದರು. ಇಡೀ ರಾಷ್ಟ್ರವನ್ನು ತಲ್ಲಣಗೊಳಿಸಿದ ನಾರಿಮನ್ ಗಲಭೆಯಲ್ಲಿ ಬೋರಣ್ಣ ಗೌಡರನ್ನು ಹಾಸನ ಜಿಲ್ಲೆಯಲ್ಲಿ ಪ್ರಥಮ ಅಪರಾಧಿಯನ್ನಾಗಿ ಬಂಧಿಸಲಾಯಿತೆಂದು ‘ಸ್ವಾತಂತ್ರ್ಯ ಚಳವಳಿ’ ಕೃತಿಯಲ್ಲಿ ಎಚ್. ಎಸ್. ದೊರೆಸ್ವಾಮಿಯವರು ದಾಖಲು ಮಾಡಿದ್ದಾರೆ.

ಬೋರಣ್ಣ ಗೌಡರು ಹಾಸನ ಜಿಲ್ಲೆಯ ರೈತರನ್ನು ಲೇವಿಸಂಗ್ರಹದ ವಿರುದ್ಧ ಸಂಘಟಿಸಿದರು. ಅಂದಿನ ಜಿಲ್ಲಾಧಿಕಾರಿ ಬರಗಾಲದಲ್ಲೂ ರೈತರನ್ನು ಹಿಂಸಿಸಿ ಭತ್ತ, ರಾಗಿಯನ್ನು ಲೇವಿರೂಪದಲ್ಲಿ ಸಂಗ್ರಹಿಸುತ್ತಿದ್ದರು. ಜಿಲ್ಲೆಯಲ್ಲಿ ಲೇವಿ ಕೊಡಬಾರದೆಂದು ಉಗ್ರ ಚಳವಳಿ ನಡೆಯಿತು, ಶ್ರವಣಬೆಳಗೊಳದಲ್ಲಿ ಗೋಲಿಬಾರಾಗಿ ಆರುಜನ ರೈತರು ಹತರಾದರು. ಬೋರಣ್ಣ ಗೌಡರು ಜಿಲ್ಲೆಯ ನೂರು ಜನ ರೈತರೊಂದಿಗೆ ಬೆಂಗಳೂರಿನಲ್ಲಿ ಮಹಾರಾಜರನ್ನು ಮತ್ತು ದಿವಾನರನ್ನು ಭೇಟಿ ಮಾಡಿದರು. ರೈತರಿಂದ ಲೇವಿ ಸಂಗ್ರಹಿಸದಂತೆ ಆಣೆ ಮಾಡಿಸಿ, ಅದೇ ದಿನ ಹಾಸನದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿಸಿದರು.

1940ರಲ್ಲಿ ಬೋರಣ್ಣ ಗೌಡರನ್ನು ಬಂಧಿಸಿ ರಾಜದ್ರೋಹದ ಆಪಾದನೆಯಲ್ಲಿ ಚಿಕ್ಕಮಗಳೂರು ಜೈಲಿಗೆ ದೂಡಲಾಯಿತು. ಅಧಿಕಾರಿಗಳು ಯಾರೋ ಕೊಟ್ಟಿದ್ದ ಹರಿದ ಬಟ್ಟೆಗಳನ್ನು ತೊಡಲು ತಾಕೀತು ಮಾಡಿದರು. ಇದನ್ನು ನಿರಾಕರಿಸಿ ಹೊಸಬಟ್ಟೆ ಕೊಡುವವರೆಗೆ ಸುಮಾರು ಹತ್ತು ದಿನಗಳವರೆಗೆ ಕೇವಲ ಕೌಪೀನದಲ್ಲಿಯೇ ದಿನ ಕಳೆದರು. ಜೈಲಿನ ಅಧಿಕಾರಿಗಳಿಗೆ ಬ್ರಿಟಿಷರ ಬೂಟು ನೆಕ್ಕುವ ನಾಯಿಗಳೆಂದು ಹೀನಾಯವಾಗಿ ನಿಂದಿಸಿದರು. ಬೋರಣ್ಣ ಗೌಡರ ಉಪಟಳವನ್ನು ಸಹಿಸಲಾಗದ ಬ್ರಿಟಿಷ್ ಅಧಿಕಾರಿಗಳು ಅವರನ್ನು ಬೆಂಗಳೂರಿನ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಿದರು.

ಬೋರಣ್ಣ ಗೌಡರ ಉದ್ಧಟತನ ಮಟ್ಟಹಾಕಲು ಪ್ರತೀ ದಿನ 36 ಸೇರು ರಾಗಿ ಬೀಸುವ ಶಿಕ್ಷೆ ನೀಡಲಾಯಿತು. ಉಗ್ರರೂಪ ತಾಳಿದ ಬೋರಣ್ಣ ಗೌಡರು ನಾಲ್ಕು ರಾಗಿ ಕಲ್ಲುಗಳನ್ನು ಒಡೆದಿದ್ದರು. ರಾಗಿಬೀಸುವ ಕಲ್ಲಿನ ಎದುರು ಕುಳಿತು ಬ್ರಿಟಿಷ್ ಅಧಿಕಾರಿಗೆ, ‘‘ಇಡೀ ದಿನ ನಾನೊಬ್ಬನೇ ರಾಗಿ ಬೀಸಲು ಬೇಸರವಾಗುತ್ತೆ ನನ್ನೆದುರು ರಾಗಿಕಲ್ಲಿನ ಪದ ಹೇಳಲು ವಿಕ್ಟೋರಿಯ ರಾಣಿಯನ್ನು ಕಳಿಸು’’ ಎಂದರು. ಸೆರೆಮನೆ ಕೈದಿಯಿಂದ ಇಂತಹ ಮಾತುಗಳನ್ನು ನಿರೀಕ್ಷೆ ಮಾಡದ ಜೈಲು ಅಧಿಕಾರಿಗಳು ಬೂಟುಗಾಲಿನಿಂದ ಬೋರಣ್ಣ ಗೌಡರ ಮುಖಕ್ಕೆ ಒದ್ದಾಗ ಹಲ್ಲು ಮುರಿದಿತ್ತು. ಪ್ರತಿಭಟಿಸಿದರೆ ಬೀಳುವ ಛಡಿಏಟು ಬೋರಣ್ಣ ಗೌಡರನ್ನು ನಿತ್ರಾಣರನ್ನಾಗಿ ಮಾಡಿದವು. ಬೋರಣ್ಣ ಗೌಡರು 2379 ದಿನ ಸೆರೆವಾಸ ಅನುಭವಿಸಿದರು. 1947ರಿಂದ 1962ರ ವರೆಗೆ ಮೂರು ಬಾರಿ ಬೇಲೂರಿನ ಶಾಸಕರಾಗಿ ಸೇವೆ ಸಲ್ಲಿಸಿದರೂ ಮತ್ತು ನಲವತ್ತು ವರ್ಷದಷ್ಟು ದೀರ್ಘಕಾಲ ಸಾರ್ವಜನಿಕ ಜೀವನದಲ್ಲಿದ್ದರೂ ಅವರು ಸಂಪತ್ತನ್ನು ಸಂಗ್ರಹಿಸುವ ವ್ಯಾಮೋಹ ಹೊಂದಿರಲಿಲ್ಲ.

ಇಂದು ಅದೆಷ್ಟು ಜನ ಮಂತ್ರಿ ಪದವಿಗಾಗಿ ದುಂಬಾಲು ಬಿದ್ದು ಬೇಡಿಕೊಳ್ಳುತ್ತಾರೆ. ಆದರೆ ಬೋರಣ್ಣಗೌಡರು ಅಂತಹ ದೋಷಗಳಿಂದ ದೂರವಿದ್ದರು. ಕೆಂಗಲ್ ಹನುಮಂತಯ್ಯ ಮತ್ತು ಕೆ.ಸಿ.ರೆಡ್ಡಿಯವರ ಜೊತೆ ಒಂದೇ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡಿ ಆಪ್ತರಾಗಿದ್ದರು. ಆದರೆ ಅವರ ಸ್ನೇಹ ಸಂಬಂಧಗಳನ್ನು ಅಧಿಕಾರಕ್ಕಾಗಿ ಬಳಸಿಕೊಳ್ಳಲಿಲ್ಲ. ಕೆಂಗಲ್ ಸಚಿವ ಸ್ಥಾನ ನೀಡಲು ಮುಂದಾದರೂ, ಬೋರಣ್ಣ ಗೌಡರು ನನಗಿಂತ ಪ್ರಬುದ್ಧರಿಗೆ ಕೊಡಿ ಎಂದು ಸಚಿವ ಸ್ಥಾನವನ್ನು ನಿರಾಕರಿಸಿದರು. ಹೀಗೆ ಸಚಿವ ಸ್ಥಾನವನ್ನು ನಿರಾಕರಿಸಿದ ಅಪರೂಪದ ರಾಜಕಾರಣಿ ಬೋರಣ್ಣ ಗೌಡರು. ಅವರು ಅಧಿಕಾರ ಮತ್ತು ನಯವಂಚನೆಯಿಂದ ದೂರವುಳಿಯುವುದನ್ನು ಇಷ್ಟ ಪಟ್ಟಿದ್ದರು, ಅವರು ಜಾತ್ಯತೀತತೆ, ನೈತಿಕತೆ ಮತ್ತು ಸರಳತೆಗಳ ಸಂಗಮವಾಗಿದ್ದರು. ಹಿಂದೂ-ಮುಸ್ಲಿಮ್ ಐಕ್ಯತೆ ಮತ್ತು ಬಡತನ ನಿವಾರಣೆ ಅವರ ಉಸಿರಾಗಿತ್ತು.

ಬೋರಣ್ಣ ಗೌಡರು 2 ಆಗಸ್ಟ್ 1974ರಂದು ಹೃದಯಾಘಾತದಿಂದ ಆಸ್ತಂಗತರಾದರು. ಅವರ ಅಂತಿಮಯಾತ್ರೆಯಲ್ಲಿ ಸಾಗಿದ ಜನರ ಸಾಲು ಸುಮಾರು 2 ಕಿಮೀ.ಗಳಷ್ಟು ಉದ್ದಕ್ಕೆ ಬೆಳೆದಿತ್ತು. ಅನೇಕ ಮಂದಿ ದುಃಖ ತಡೆಯಲಾರದೆ ಬಿಕ್ಕಿಬಿಕ್ಕಿ ಅಳುತ್ತಿದ್ದರು.

ಬೋರಣ್ಣ ಗೌಡರ ಸರಳತೆ ಮತ್ತು ಸತ್ಯದ ನಡೆಗಳು ನಮಗೆ ಅನುಕರಣೀಯ, ಆದರ್ಶವಾಗಬೇಕು. ಅಂತಹವರ ಪ್ರಾಮಾಣಿಕತೆಯನ್ನು ಉಳಿಸಿಕೊಂಡು ಉತ್ತಮ ರಾಜಕಾರಣಿ ಗಳನ್ನು ಸಂಸತ್ ಮತ್ತು ವಿಧಾನಸಭೆಗೆ ಕಳುಹಿಸುವುದು ನಮ್ಮ ಕರ್ತವ್ಯ ಎನ್ನುವುದು ಮತದಾರರಿಗೆ ಮನವರಿಕೆಯಾಗಬೇಕು. ಗಾಂಧೀಜಿಯವರ ಇಂತಹ ಅಪ್ಪಟ ಶಿಷ್ಯನನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನೆಯ ಬೇಕಾದುದು ಕನ್ನಡಿಗರ ಧರ್ಮ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top