-

ಸಮಾನತೆಯ ಆಶಯಕ್ಕೆ ಜೀವನ ಸಮರ್ಪಿಸಿದ ಗೇಲ್ ಒಂವೆಡ್ಟ್

-

ಶ್ರೀಮಂತ ರಾಷ್ಟ್ರವೊಂದರ ಬುದ್ಧಿವಂತ ಹೆಣ್ಣುಮಗಳು ತನ್ನ ದೇಶದ ಅನುಕೂಲಗಳನ್ನು ಬಿಟ್ಟುಬಂದು, ಒಂದು ಹಿಂದುಳಿದ ಬಡ ದೇಶದಲ್ಲಿ, ಅಲ್ಲಿನ ಅತ್ಯಂತ ಹೀನಾಯ ಸ್ಥಿತಿಗೆ ದೂಡಲ್ಪಟ್ಟ ಸಮುದಾಯಗಳ ಹಿತಾಸಕ್ತಿಗಾಗಿ ತನ್ನ ಜೀವಮಾನವನ್ನು, ತನ್ನೆಲ್ಲ ಬೌದ್ಧಿಕ ಶ್ರಮವನ್ನು ಮುಡಿಪಾಗಿಡುವುದು ಯಾವ ದೃಷ್ಟಿಕೋನದಿಂದ ನೋಡಿದರೂ ಸಾಧಾರಣ ಸಂಗತಿಯಲ್ಲ. 

ನಮ್ಮದೇ ರೂಪವನ್ನು ಹೋಲುವ, ನಮ್ಮದೇ ಉಡುಗೆ-ತೊಡುಗೆ, ವೇಷಭೂಷಣಗಳುಳ್ಳ, ನಮ್ಮದೇ ಭಾಷೆಯನ್ನಾಡುವ, ನಮ್ಮ ಸುತ್ತಮುತ್ತಲಲ್ಲೇ ವಾಸಿಸುವವರನ್ನು ನಮ್ಮವರೆಂದು ಕಾಣದೇ ದೂರ ಇಡುವ, ಅವಮಾನಿಸುವ, ಶೋಷಿಸುವ, ಅನ್ಯಾಯವೆಸಗುವ ಸಾಮಾಜಿಕ ಸಂರಚನೆಯನ್ನು ಮುತುವರ್ಜಿಯಿಂದ ಕಾಯ್ದುಕೊಂಡು ಬಂದಿರುವ ನಮ್ಮ ಸಮಾಜದಲ್ಲಿ, ಶ್ರೀಮಂತ ರಾಷ್ಟ್ರವೊಂದರ ಬುದ್ಧಿವಂತ ಹೆಣ್ಣುಮಗಳು ತನ್ನ ದೇಶದ ಅನುಕೂಲಗಳನ್ನು ಬಿಟ್ಟುಬಂದು, ಒಂದು ಹಿಂದುಳಿದ ಬಡ ದೇಶದಲ್ಲಿ, ಅಲ್ಲಿನ ಅತ್ಯಂತ ಹೀನಾಯ ಸ್ಥಿತಿಗೆ ದೂಡಲ್ಪಟ್ಟ ಸಮುದಾಯಗಳ ಹಿತಾಸಕ್ತಿಗಾಗಿ ತನ್ನ ಜೀವಮಾನವನ್ನು, ತನ್ನೆಲ್ಲ ಬೌದ್ಧಿಕ ಶ್ರಮವನ್ನು ಮುಡಿಪಾಗಿಡುವುದು ಯಾವ ದೃಷ್ಟಿಕೋನದಿಂದ ನೋಡಿದರೂ ಸಾಧಾರಣ ಸಂಗತಿಯಲ್ಲ. 

ಯಾವ ಕಾಲಮಾನದಲ್ಲಿ ನಮ್ಮ ದೇಶದ ಬುದ್ಧಿವಂತರು ಉಚ್ಚಶಿಕ್ಷಣಕ್ಕಾಗಿ ಅಮೆರಿಕಕ್ಕೆ ಓಡುತ್ತಿದ್ದರೋ, ಅಲ್ಲಿಯ ಆಡಂಬರದ ಬದುಕಿಗಾಗಿ ತಮ್ಮ ಮನೆಮಂದಿ-ಊರುಗಳನ್ನು ತೊರೆದು ಹೋಗುತ್ತಿದ್ದರೋ, ಅಮೆರಿಕದ ಪೌರತ್ವಕ್ಕಾಗಿ ಹಂಬಲಿಸುತ್ತಿದ್ದರೋ, ಆ ಕಾಲಮಾನದಲ್ಲಿ ಆ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಉಚ್ಚಶಿಕ್ಷಣ ಪಡೆದು, ಆ ಅಮೆರಿಕವನ್ನು ಬಿಟ್ಟು, ತಾನು ಯಾವ ಕ್ಷೇತ್ರವನ್ನು ಅಧ್ಯಯನಕ್ಕಾಗಿ ಆಯ್ದುಕೊಂಡಿದ್ದೋ ಅದೇ ಕ್ಷೇತ್ರಕ್ಕೆ ಮರಳಿ, ಅಲ್ಲಿ, ಒಂದು ಹಳ್ಳಿಯಲ್ಲಿ, ಕೃಷಿಕ ಕುಟುಂಬದ ಸದಸ್ಯೆಯಾಗಿ, ಅಲ್ಲಿನ ಬಾಳು-ಚಟುವಟಿಕೆಗಳು-ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ತನ್ನೆಲ್ಲ ಕ್ರಿಯಾಶೀಲತೆಯನ್ನು, ಚಿಂತನೆಯನ್ನು ಅಲ್ಲಿನ ದೀನದಲಿತರ ಹಿತಾಸಕ್ತಿಗಾಗಿ ಮೀಸಲಿಡುವಂತಹ ದೃಢ ಬದ್ಧತೆಯನ್ನು ಹೊಂದಿರುವ ವ್ಯಕ್ತಿತ್ವವನ್ನು ಅಸಾಮಾನ್ಯವೆಂದಲ್ಲದೆ ಹೇಗೆ ತಾನೆ ಕರೆಯುವುದು? ಅಂತಹ ಒಂದು ಅಪರೂಪದ ಜೀವನ ಸಾಗಿಸಿದವರು ಗೇಲ್ ಒಂವೆಡ್ಟ್ (1941-2021).

ಅಗಸ್ಟ್ 2, 1941ರಲ್ಲಿ ಅಮೆರಿಕದ ಮಿನೆಸೋಟಾದಲ್ಲಿ ಜನಿಸಿದ ಗೇಲ್ ಒಂವೆಡ್ಟ್ಟ್, ಮೊದಲ ಬಾರಿ ಭಾರತಕ್ಕೆ ಬಂದದ್ದು 1963ರಲ್ಲಿ. ಆಗ ಅವರಿಗೆ 22ರ ಪ್ರಾಯ. ಒಂವೆಡ್ಟ್ ಓದಿದ್ದು ವಿಯೆಟ್ನಾಮ್ ಯುದ್ಧ-ವಿರೋಧಿ ವಿದ್ಯಾರ್ಥಿ ಚಳವಳಿಗಳು ಅಮೆರಿಕದಲ್ಲಿ ವ್ಯಾಪಕವಾಗಿದ್ದ ಕಾಲದಲ್ಲಿ. ಈ ವಿದ್ಯಾರ್ಥಿ ಚಳವಳಿಗಳು ಯುದ್ಧದ ಹೊರತಾದ ಆರ್ಥಿಕ-ರಾಜಕೀಯ ಅರಿವಿನ ಸ್ವರೂಪವನ್ನೂ ಹೊಂದಿದ್ದವು. ಇದೇ ಕ್ರಾಂತಿಕಾರಿ ನಿಲುವು, ಗೇಲ್ ಅವರಿಗೆ ಭಾರತದ ನಿಮ್ನವರ್ಗಗಳ ಕುರಿತಾದ ಸಂಶೋಧನೆಗೆ ಪ್ರೇರಣೆ ನೀಡಿದ ಅಂಶಗಳಲ್ಲಿ ಒಂದಾಗಿರಬಹುದು. 

ಮುಂದೆ ಅವರು ತಮ್ಮ ಪಿಎಚ್‌ಡಿಗಾಗಿ ಭಾರತಕ್ಕೆ ಸಂಬಂಧಿಸಿದ ವಿಷಯವನ್ನೇ ಆಯ್ದುಕೊಂಡರು. ಆ ಕಾಲದಲ್ಲಿ ಅಂತರ್‌ರಾಷ್ಟ್ರೀಯ ಅಕಾಡಮಿಕ್ ವಲಯಗಳಲ್ಲಿ ಹೆಚ್ಚು ಆಕರ್ಷಣೆಯನ್ನಾಗಲೀ, ಹೆಚ್ಚು ಚಾಲ್ತಿಯನ್ನಾಗಲೀ ಹೊಂದಿರದ ಕ್ಷೇತ್ರವನ್ನು ಆಯ್ದುಕೊಂಡಿದ್ದಲ್ಲದೆ, ಜೀವನದುದ್ದಕ್ಕೂ ಅದೇ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಅವರು ಅಧ್ಯಯನಕ್ಕೆ ಆಯ್ದುಕೊಂಡ ಕ್ಷೇತ್ರವೆಂದರೆ ಭಾರತದ ನಿಮ್ನಜಾತಿವರ್ಗಗಳ ಸಾಂಸ್ಕೃತಿಕ ಸಂಘರ್ಷಗಳ ಅಧ್ಯಯನ. ಅವರ ಪಿಎಚ್‌ಡಿ ಸಂಶೋಧನೆ ಬ್ರಾಹ್ಮಣೇತರ ಚಳವಳಿಗಳ ಕುರಿತಾಗಿತ್ತು ಮತ್ತು ನಿಮ್ನಜಾತಿವರ್ಗಗಳ ಸಾಮಾಜಿಕ ಚಳವಳಿಗಳ ಕುರಿತಾದ ಆರಂಭಿಕ ಸಂಶೋಧನೆಗಳಲ್ಲಿ ಒಂದಾಗಿತ್ತು. ‘ವಸಾಹತುಶಾಹಿ ಭಾರತದಲ್ಲಿ ಸಾಂಸ್ಕೃತಿಕ ಪ್ರತಿರೋಧ: ಪಶ್ಚಿಮ ಭಾರತದ ಬ್ರಾಹ್ಮಣೇತರ ಚಳವಳಿಗಳು, 1873-1930’ ಎಂಬ ಶೀರ್ಷಿಕೆಯಲ್ಲಿ ಅವರು ಈ ಅಧ್ಯಯನವನ್ನು ಮಾಡಿದ್ದರು. ಕ್ಷೇತ್ರಕಾರ್ಯಕ್ಕಾಗಿ ಭಾರತಕ್ಕೆ ಬಂದವರು ಮುಂದೆ ಇಲ್ಲಿಯೇ ನೆಲೆಸಿದರು.

ಪಿಎಚ್‌ಡಿಗಾಗಿ ಆಯ್ದ ಕ್ಷೇತ್ರದಲ್ಲಿ ಕೆಲಸ ಮಾಡಿದರು ಎಂದು ಹೇಳಿದಾಗ, ಅದರರ್ಥ ಸಾಮಾನ್ಯವಾಗಿ, ಕ್ಷೇತ್ರದಲ್ಲಿಯೇ ಹೆಚ್ಚಿನ ಪಾಂಡಿತ್ಯ ಗಳಿಸಿದರು ಎಂದೋ ಅಥವಾ ಹೆಚ್ಚಿನ ಬರವಣಿಗೆ ನಡೆಸಿದರು ಎಂದೋ ಆಗುತ್ತದೆ. ಗೇಲ್ ಒಂವೆಡ್ಟ್ ಅವರ ಅನನ್ಯತೆಗೆ ಕಾರಣವೆಂದರೆ, ತಮ್ಮ ಅಭ್ಯಾಸಕ್ಷೇತ್ರಕ್ಕೆ ಅವರು ತೋರಿದ ಸಮರ್ಪಣೆ. ಅಭ್ಯಾಸಕ್ಷೇತ್ರ ಮತ್ತು ತಮ್ಮ ಜೀವನವನ್ನು ಬೇರೆಬೇರೆ ಇಟ್ಟು ಪಾಂಡಿತ್ಯಪೂರ್ಣ ಕೆಲಸ ಮಾಡುವುದು ಸರ್ವೇಸಾಮಾನ್ಯ. ಗೇಲ್ ತಮ್ಮ ಅಭ್ಯಾಸಕ್ಷೇತ್ರವನ್ನೇ ತಮ್ಮ ಕರ್ಮಕ್ಷೇತ್ರವಾಗಿಸಿಕೊಂಡ ಅಪರೂಪದ ವ್ಯಕ್ತಿ. ಅವರ ಸಂಶೋಧನಾ ಗ್ರಂಥ  1976ರಲ್ಲಿ ಪುಸ್ತಕರೂಪದಲ್ಲಿ ಹೊರಬಂತು. 

ಅವರ ಅಧ್ಯಯನದ ಮೌಲ್ಯವೆಷ್ಟು ಅಂದರೆ ಈಗಲೂ ಈ ಕೃತಿಯ ಆವೃತ್ತಿಗಳು ಮುದ್ರಣ ಕಾಣುತ್ತಿವೆ. ಭಾರತೀಯ ವಿಶ್ವವಿದ್ಯಾನಿಲಯಗಳ ಪಠ್ಯಕ್ರಮಗಳಲ್ಲಿಯೂ ಅವರ ಬರಹಗಳನ್ನು ಸೇರಿಸಲಾಗಿದೆ. ಗೇಲ್ ಅವರ ಹಲವಾರು ಪುಸ್ತಕಗಳು ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ ಮತ್ತು ಬಹಳ ವಿಶಾಲ ಓದುಗವರ್ಗವನ್ನು ಪಡೆದಿವೆ. ಇದಕ್ಕೆ ಒಂದು ಸಾಕ್ಷಿಯೆಂದರೆ, ಅವರ ಪುಸ್ತಕಗಳ ಅನುವಾದಿತ ಆವೃತ್ತಿಗಳು ಬೀದಿಬದಿಯ ಪುಸ್ತಕದಂಗಡಿಗಳಲ್ಲೂ ಮಾರಾಟವಾಗುವ ಪರಿ. ತಮ್ಮ ಮೊದಲನೇ ಕೃತಿಯ ತರುವಾಯ ಮುಂದಿನ ಐದು ದಶಕಗಳಲ್ಲಿ ಒಂವೆಡ್ಟ್ ದಲಿತರ ಚಳವಳಿಗಳಿಗೆ, ಅಂಬೇಡ್ಕರ್‌ವಾದಕ್ಕೆ, ದಮನಿತರ ದನಿಗಳಿಗೆ ಸಂಬಂಧಿಸಿದ ಅಧ್ಯಯನಗಳನ್ನು ಸತತವಾಗಿ ಹೊರತಂದರು. ಇದು ನಿಮ್ನಸಮುದಾಯಗಳ ಕುರಿತು ಅವರಿಗಿದ್ದ ಬದ್ಧತೆಗೆ ಸ್ಪಷ್ಟ ಸಾಕ್ಷಿ.

ಮಹಾರಾಷ್ಟ್ರದ ಸಾಂಗ್ಲಿ ಬಳಿಯ ಕಸೆಗಾಂವ್‌ನ ಸ್ವಾತಂತ್ರ್ಯ ಹೋರಾಟಗಾರರಾದ ಬಾಬೂಜಿ ಪಾಟನ್ಕರ್ ಮತ್ತು ಇಂದುತಾಯಿ ಪಾಟನ್ಕರ್ ಅವರ ಮಗ ಭರತ್ ಪಾಟನ್ಕರ್. ದಲಿತ್ ಪ್ಯಾಂಥರ್ಸ್, ಬಟ್ಟೆಗಿರಣಿ ಕಾರ್ಮಿಕರ ಸಂಘಟನೆ ಸೇರಿದಂತೆ ಹಲವಾರು ರೈತ, ಕಾರ್ಮಿಕ, ದಲಿತಪರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಭರತ್ ಪಾಟನ್ಕರ್ ಮತ್ತು ಗೇಲ್ ಒಂವೆಡ್ಟ್ 1976ರಲ್ಲಿ ಮದುವೆಯಾದರು. ಮುಂದೆ 1983ರಲ್ಲಿ, ಗೇಲ್ ಅಮೆರಿಕದ ಪೌರತ್ವ ತೊರೆದು ಭಾರತೀಯ ಪೌರರಾದರು. ಪೂರ್ಣಕಾಲೀನ ಅಕಾಡಮಿಕ್ ವೃತ್ತಿ ಅವರದ್ದಾಗಿರಲಿಲ್ಲ; ಆದರೆ, ಗೇಲ್ ಪ್ರಾಸಂಗಿಕವಾಗಿ ಕೋಪನ್‌ಹೇಗನ್, ಸೂರತ್, ಪುಣೆ, ದಿಲ್ಲಿಗಳಲ್ಲಿ ವಿಶ್ವವಿದ್ಯಾನಿಲಯ, ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡಿದರು. ಫುಲೆ, ಶಾಹು ಮಹಾರಾಜ್ ಮತ್ತು ಅಂಬೇಡ್ಕರ್ ಅವರ ಜಾತಿವಿರೋಧಿ ಚಟುವಟಿಕೆಗಳ ದಾಖಲೀಕರಣದ ಕೆಲಸ ಮಾಡುತ್ತ, ಗೇಲ್, ಈ ಹಿನ್ನೆಲೆ ಹೇಗೆ ವರ್ತಮಾನದ ಹಲವಾರು ಬಹುಜನ ಮತ್ತು ರೈತರ ಜನಪ್ರಿಯ ಹೋರಾಟಗಳಿಗೆ ಇಂಬಾದವು ಎನ್ನುವುದನ್ನು ದಾಖಲಿಸುವ ಕೆಲಸ ಮಾಡಿದ್ದಾರೆ.

ಒಂದು ಕಾಲದಲ್ಲಿ ಭಾರತದ ಸಮಾಜಶಾಸ್ತ್ರದ ಅಧ್ಯಾಪಕರು, ತಜ್ಞರು, ವಿದ್ಯಾರ್ಥಿಗಳು ಗೇಲ್ ಅವರ ಕೃತಿಗಳನ್ನು ಉಪೇಕ್ಷಿಸಿದ್ದರು. ಅವರ ಬರಹಗಳು ಪ್ರಸ್ತಾಪಿತ ಅಕಾಡಮಿಕ್ ಅಭ್ಯಾಸಗಳ ಮಾದರಿಗಗಳ ಚೌಕಟ್ಟನ್ನು ಮೀರುತ್ತಿರುವುದು ಬಹುಶಃ ಇದಕ್ಕೆ ಕಾರಣವಾಗಿತ್ತು. ಜಾತಿ, ವರ್ಗ, ಲಿಂಗತ್ವ, ಕೃಷಿ ವಿಷಯಗಳು ಗೇಲ್ ಅವರ ಬರಹಗಳಲ್ಲಿ ಪಡೆದಿದ್ದ ಪ್ರಾಧಾನ್ಯ ಅಂದಿನ ಸಮಾಜಶಾಸ್ತ್ರ-ರಾಜಕೀಯಶಾಸ್ತ್ರಗಳ ದೃಷ್ಟಿಕೋನಗಳಿಂದ ಭಿನ್ನವಾಗಿತ್ತು, ಹಲವು ಪ್ರಸಿದ್ಧ ವಿದ್ವಾಂಸರುಗಳ ಅರಿವಿಗೆ ವ್ಯತಿರಿಕ್ತವಾಗಿತ್ತು. ಗೇಲ್ ಒಂವೆಡ್ಟ್ ಅವರ ತರಬೇತಿ ಇದ್ದುದು ಸಮಾಜಶಾಸ್ತ್ರಜ್ಞೆಯಾಗಿ. ಆದರೆ, ತಮ್ಮ ಸಮಕಾಲೀನರ ಹಾಗೆ ಕೇವಲ ಕ್ಷೇತ್ರಕಾರ್ಯ, ಸಮೀಕ್ಷೆ, ವಿಶ್ಲೇಷಣೆಗಳ ಮೇರೆಯಲ್ಲಿ ಬಂದಿಯಾಗದೆ ಐತಿಹಾಸಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಶ್ಲೇಷಣೆಯನ್ನು ಸಹ ಒಳಗೊಂಡ ಸಂಶೋಧನಾ ಬರವಣಿಗೆ ಅವರ ಮಾದರಿಯಾಗಿತ್ತು. 

ಅವರ ಬರಹಗಳು ಓದುಗರನ್ನು ಸಂವಾದಕ್ಕೆ ತೊಡಗಿಸುತ್ತವೆ ಮತ್ತು ಹಾಗಾಗಿಯೇ ಅವರ ಅನೇಕ ಕೃತಿಗಳು ವಿಶಾಲ ಚರ್ಚೆಗೆ ಗ್ರಾಸವಾಗಿದ್ದಾವೆ. ಅವರ ಬರವಣಿಗೆಗಳು, ಅಕಾಡಮಿಕ್ ಪುಸ್ತಕಗಳು, ಸಂಶೋಧನಾ ಪ್ರಬಂಧಗಳು, ಪತ್ರಿಕಾ ಲೇಖನಗಳು, ನಿಮ್ನವರ್ಗಗಳು-ಮಹಿಳಾ ಪ್ರಶ್ನೆಗಳಿಗೆ ಸಂಬಂಧಿಸಿದ ರಾಜಕೀಯ ಆರ್ಥಿಕ ವ್ಯವಸ್ಥೆ, ಪರಿಸರ, ರೈತಾಪಿ ರಾಜಕಾರಣ, ಸಂಪನ್ಮ್ಮೂಲಗಳ ಹಂಚಿಕೆಗಳಂತಹ ವಿಷಯಗಳನ್ನು ಸಮಾಜಶಾಸ್ತ್ರದ ವಿಶ್ಲೇಷಣೆಯ ಪರಿಧಿಯೊಳಗೆ ತಂದಿದ್ದು ವಿಶೇಷವಾಗಿತ್ತು. ಗೇಲ್ ಸಂಶೋಧನೆ ನಡೆಸುತ್ತಿದ್ದ ಕಾಲಮಾನದಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಂರಚನವಾದ, ಉತ್ತರಸಂರಚನವಾದ ಮತ್ತು ಮುಂದೆ ಸಾಂಸ್ಕೃತಿಕ ಅಧ್ಯಯನಗಳು ಮುಂತಾದ ‘ಥಿಯರಿ’ ಎಂದು ಕರೆಯಲ್ಪಟ್ಟ ವಿಶೇಷ ಪ್ರಮೇಯಗಳ ಮತ್ತು ಪದಪ್ರಯೋಗದ ಶೈಲಿ ಅಕಾಡಮಿಕ್ ಕ್ಷೇತ್ರದಲ್ಲಿ ಜನಪ್ರಿಯವಾಗಿತ್ತು. ಆದರೆ ಇವುಗಳನ್ನು ಬಳಸದೆಯೇ ಗೇಲ್ ತಮ್ಮ ವಿಷಯಗಳ ವಿವಿಧ ಆಯಾಮಗಳು ಮತ್ತವುಗಳ ಸಂಕೀರ್ಣತೆಯನ್ನು ಉಪೇಕ್ಷಿಸದಂತೆ ಬರೆಯಬಲ್ಲ ಪಾಂಡಿತ್ಯ ಅವರದ್ದಾಗಿತ್ತು.

ಗೇಲ್ ಅವರು ಬರವಣಿಗೆಗೆ ಪೂರ್ವದಲ್ಲಿ ಮತ್ತು ಅದಕ್ಕೆ ಪೂರಕವಾಗಿ ಕ್ಷೇತ್ರಕಾರ್ಯ ಮತ್ತು ಸಂಶೋಧನೆ ಮಾಡುವ ವಿಧಾನ ಕೂಡ ಅವರನ್ನು ಅದೆಷ್ಟೋ ಅಕಾಡಮಿಕ್ ಸಮಾಜಶಾಸ್ತ್ರಜ್ಞರಿಂದ ಭಿನ್ನರನ್ನಾಗಿಸುತ್ತದೆ. ಉದಾಹರಣೆಗೆ ಅವರ ‘ವಿ ಶಲ್ ಸ್ಮ್ಯಾಶ್ ದಿಸ್ ಪ್ರಿಸನ್: ಇಂಡಿಯನ್ ವಿಮೆನ್ ಇನ್ ಸ್ಟ್ರಗಲ್’ (ಈ ಸೆರೆಮನೆಯನ್ನು ಧ್ವಂಸಮಾಡುತ್ತೇವೆ: ಭಾರತೀಯ ಮಹಿಳೆಯರ ಹೋರಾಟ) ಎಂಬ ಕೃತಿಯನ್ನು ಗಮನಿಸಿದರೆ ನಮಗೆ ಹೇಗೆ ಗೇಲ್ ಅವರು ಮಹಿಳಾ ಸಂಘ, ಸಮುದಾಯ, ಚಳವಳಿಗಳ ಜೊತೆಯಾಗಿದ್ದರು, ಮಹಿಳಾ ಸಿದ್ಧಾಂತಿಗಳು, ಮಹಿಳಾ ಕಾರ್ಮಿಕರು, ವಿದ್ಯಾರ್ಥಿಗಳು, ಮನೆಗೆಲಸದವರು ಮುಂತಾದವರ ಜೊತೆ ಮಾತುಕತೆ ನಡೆಸಿದ್ದರು, ಸಹಚಿಂತನೆ ನಡೆಸಿದ್ದರು ಮತ್ತು ಈ ಎಲ್ಲ ನಿರ್ದಿಷ್ಟ ಮತ್ತು ಮೂಲಾಧಾರವುಳ್ಳ ಅಧ್ಯಯನಗಳ ಮುಖಾಂತರ ತಮ್ಮ ಬರವಣಿಗೆಯನ್ನು ರೂಪಿಸಿಕೊಂಡರು, ತನ್ಮೂಲಕ ಕುಟುಂಬ, ಕಾರ್ಯಕ್ಷೇತ್ರ, ಮತ್ತಿತರ ವಲಯಗಳಲ್ಲಿ ಮಹಿಳೆಯರ ಅಧೀನತೆಗೆ ಸಂಬಂಧಿಸಿದಂತೆ ಅವರು ಎತ್ತಿದ ಅನೇಕ ಮೂಲಭೂತ ಪ್ರಶ್ನೆಗಳು 1980ರ ದಶಕಗಳಲ್ಲಿ ರೂಪುಗೊಳ್ಳುತ್ತಿದ್ದ ಭಾರತೀಯ ಮಹಿಳಾವಾದವನ್ನು ಬಲಪಡಿಸಿದ್ದವು ಎಂಬುದು ತಿಳಿಯುತ್ತದೆ. 

ಗೇಲ್ ಅನಾವರಣಗೊಳಿಸಿದ್ದೆಂದರೆ ಲಿಂಗತ್ವವನ್ನಾಧರಿಸಿದ ಮಹಿಳೆಯರ ಶೋಷಣೆ ಮತ್ತು ಅವರ ಸಾಂಸ್ಕೃತಿಕ ದಬ್ಬಾಳಿಕೆ ಇವೆರಡೂ ವಾಸ್ತವವೇ ಆಗಿದ್ದರೂ ಅವು ಏಕರೀತಿಯವಲ್ಲವೆಂದು. ಮೇಲ್ವರ್ಗ ಮತ್ತು ಸವರ್ಣೀಯ ಮಹಿಳೆಯರ ಮೇಲಿನ ಶೋಷಣೆ ಕೌಟುಂಬಿಕ ನೆಲೆ ಹೊಂದಿದ್ದರೆ, ನಿಮ್ನ ಜಾತಿ, ದಲಿತ ಮತ್ತು ಕಾರ್ಮಿಕ ಮಹಿಳೆಯರು ಅವರೆನ್ನುವಂತೆ ಸಾಮಾಜಿಕ ಗಂಡಾಳಿಕೆಗೆ ಒಳಗಾಗಿ ದ್ದಾರೆ. 1990ರಲ್ಲಿ ಪ್ರಕಟವಾದ ಅವರ ‘ವಯಲೆನ್ಸ್ ಅಗೇನ್ಸ್ಟ್ ವಿಮೆನ್: ನ್ಯೂ ಮೂವ್‌ಮೆಂಟ್ಸ್ ಆ್ಯಂಡ್ ನ್ಯೂ ಥಿಯರೀಸ್ ಇನ್ ಇಂಡಿಯಾ’ ಎಂಬ ಕೃತಿಯಲ್ಲಿ ವಿಷದವಾಗಿ ಚರ್ಚಿಸಿರುವಂತೆ ‘ಸಾಮಾಜಿಕ ಗಂಡಾಳಿಕೆ’ ಎಂಬ ಈ ಪದ ಸೂಚಿಸುವುದೇನೆಂದರೆ, ನಿಮ್ನಜಾತಿ, ದಲಿತ, ಕಾರ್ಮಿಕ ಮಹಿಳೆಯರ ಮೇಲೆ ಇಡೀ ಸಮಾಜವೇ ಗಂಡಾಳಿಕೆಯ ಮಾದರಿಯ ದಬ್ಬಾಳಿಕೆ ನಡೆಸುತ್ತಿರುತ್ತದೆಯೆಂದು. ಈ ಕೃತಿಯಲ್ಲಿ ಗೇಲ್, ಭಾರತೀಯ ಮಹಿಳಾಸಿದ್ಧಾಂತಿಗಳು ಮಹಿಳಾವಾದದ ಸಿದ್ಧ ಮಾದರಿಗಳ ಬದಲು ಭಾರತದ ಸಾಮಾಜಿಕ ವಾಸ್ತವ ತೋರಿಸುವ ಶೋಷಣಾ ಮಾದರಿಗಳನ್ನು ಚರ್ಚಿಸಬೇಕೆಂದು ವಾದಿಸುತ್ತಾರೆ. 

ಚಳವಳಿಯಲ್ಲಿ ಸಹಪಾಲು  

ಅಧ್ಯಯನ, ಸಂಶೋಧನೆ, ಬರವಣಿಗೆಯ ಕೈಂಕರ್ಯಗಳಲ್ಲಿ ಮಾತ್ರ ತೊಡಗಿಕೊಳ್ಳದೆ, ಗೇಲ್ ಒಂವೆಡ್ಟ್ ಸಾಮಾಜಿಕ ಶ್ರೇಣಿಯ ಅಂಚಿನಲ್ಲಿರುವವರ ಪರವಾಗಿ ಹತ್ತುಹಲವು ಚಟುವಟಿಕೆಗಳನ್ನು ಸ್ವತಃ ಎತ್ತಿಕೊಂಡಿದ್ದರಲ್ಲದೆ, ಬದಲಾವಣೆಗಾಗಿ ಸಂಘಟನಾ ಕಾರ್ಯದಲ್ಲಿ ನಿರತರಾದವರ ಜೊತೆನಿಲ್ಲುವ ಬದ್ಧತೆಯನ್ನು ಹೊಂದಿದ್ದರು. ಕಾನ್ಶಿರಾಮ್ ಅವರು ‘ಬಾಮ್ಸೇಫ್’ ಸಂಘಟನೆಯನ್ನು ಕಟ್ಟುತ್ತಿದ್ದ ಸಂದರ್ಭದಲ್ಲಿ ನಾಗಪುರದಲ್ಲಿ 1971ರಲ್ಲಿ ನಡೆದ ಸಮ್ಮೇಳನದಲ್ಲಿಯೂ ಮುಖ್ಯ ಭಾಷಣಕಾರಳಾಗಿ ಗೇಲ್ ಹಾಜರಿದ್ದರು. 

ಡರ್ಬನ್ ಶಹರದಲ್ಲಿ 2001ರಲ್ಲಿ ನಡೆದ ರೇಸ್ (ವರ್ಣ) ಕುರಿತ ಸಂಯುಕ್ತ ರಾಷ್ಟ್ರಗಳ ಅಧಿವೇಶನದಲ್ಲಿ ಜಾತಿಯೂ ಸೇರಬೇಕೆಂಬ ದಲಿತ ಕಾರ್ಯಕರ್ತರ ಬೇಡಿಕೆಯ ಸಂದರ್ಭದಲ್ಲಿ ಕಂಡಂತೆ, ಗೇಲ್ ಈ ಬೇಡಿಕೆಯನ್ನು ಬೆಂಬಲಿಸಿ ಜನಾಭಿಪ್ರಾಯ ಮೂಡಿಸುವುದಕ್ಕಾಗಿ ವಿಸ್ತಾರವಾಗಿ ವಿಷಯದ ಕುರಿತಾಗಿ ಬರೆದರು. 1980ರ ದಶಕಗಳಲ್ಲಿ ತಮ್ಮ ಅತ್ತೆ ಇಂದುತಾಯಿ ಪಾಟನ್ಕರ್ ಅವರನ್ನೂ ಒಳಗೊಂಡು ಅನೇಕ ಸಹಯೋಗಿಗಳ ಜೊತೆ ಸೇರಿ ‘ಶ್ರಮಿಕ್ ಮುಕ್ತಿ ದಲ್’ ಸ್ಥಾಪಿಸುವಲ್ಲಿ ಅವರು ಪಾತ್ರ ವಹಿಸಿದರು. ಈ ಸಂಘಟನೆಯ ಮೂಲಕ ನಡೆಸಿದ ಹೋರಾಟ ಚಟುವಟಿಕೆಗಳ ಮೂಲಕ ಗೇಲ್ ಒಂವೆಡ್ಟ್ ಅವರು ಜಲಸಂಪನ್ಮೂಲಗಳು, ಬರಗಾಲ, ಇತ್ಯಾದಿ ಸಮಸ್ಯೆಗಳು ಎತ್ತಿದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನೆಗಳ ಕುರಿತು ವಿಸ್ತೃತ ತತ್ವಮಂಡನೆ ಮಾಡಿದರು. ಈ ನಿಟ್ಟಿನಲ್ಲಿ ಅವರ ಒಲವು ಚಿಕ್ಕ ಉತ್ಪಾದಕ ವರ್ಗ, ಬಡ ಶ್ರಮಿಕರು, ಮಹಿಳೆಯರ ಕಡೆಗೇ ಇತ್ತು. ಅಲ್ಲದೆ, ಚಳವಳಿಗಳಲ್ಲಿ ನಾಯಕತ್ವದ ಕುರಿತಾಗಿಯೂ ತುಂಬ ಮುಖ್ಯ ಅಂಶಗಳನ್ನು ಅವರು ಸೂಚಿಸಿದರು. 

ಮೇಲ್ಜಾತಿ/ವರ್ಗದ, ನಗರಗಳ ಹಿನ್ನೆಲೆಯ ಸಂಘಟಕರು ಜಾತಿ-ವಿರೋಧಿ, ಆದಿವಾಸಿಗಳ ಸಂಘಟನೆಗಳಲ್ಲಿ ಮುಂದಾಳತ್ವ ವಹಿಸುವ ಬಗೆಗೆ ಅವರ ನಿಲುವು ವಿವಾದವನ್ನು ಸೃಷ್ಟಿಸಿತ್ತು. ನರ್ಮದಾ ಬಚಾವೋ ಆಂದೋಲನದಲ್ಲಿ ಬಾಧಿತರಾದ ಆದಿವಾಸಿಗಳ ಮುಂದಾಳತ್ವವನ್ನು ಮರೆಮಾಚಿದ್ದನ್ನು ಅವರು ತೀವ್ರವಾಗಿ ಟೀಕಿಸಿದರು. ದಮನಿತರ ಏಜೆನ್ಸಿಯ ಕುರಿತು ಅವರು ತೋರುವ ಬದ್ಧತೆಯೆಂದರೆ, ಮುಂದಾಳತ್ವ, ಪ್ರಸಿದ್ಧಿಗಳನ್ನು ಕಿತ್ತುಕೊಳ್ಳದ ಹಾಗೆ ದಮನಿತರ ಚಳವಳಿಗಳಲ್ಲಿ ಪಾತ್ರವಹಿಸಬೇಕಾದ ನೈತಿಕತೆ.

ವಿದ್ವತ್ ಜೀವನ

ಫುಲೆ, ಅಂಬೇಡ್ಕರ್ ಮತ್ತು ಜಾತಿವಿನಾಶದ ಕುರಿತಾಗಿ ಭಾರತದಲ್ಲಿ ದೀರ್ಘಕಾಲದಿಂದ ಚಾಲ್ತಿಯಲ್ಲಿರುವ ಸಂಕಥನಗಳನ್ನು ಜಾಗತಿಕ ವಿದ್ವತ್‌ವಲಯಕ್ಕೆ ಪರಿಚಯಿಸಿದ ಮೂವರು ಬಹುಮುಖ್ಯ ಮಹಿಳಾ ಸಂಶೋಧಕರೆಂದರೆ ಎಲೀನರ್ ಜೆಲಿಯೆಟ್, ರೋಸಲಿಂಡ್ ಓಹ್ಯಾನ್ಲನ್ ಮತ್ತು ಗೇಲ್ ಒಂವೆಡ್ಟ್.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top