-

ಮಣಿ ಬಾಲೆ: ಒಂದು ವಿಭಿನ್ನ ಸಾಂಸ್ಕೃತಿಕ ಪಯಣ

-

ಈ ಹೆಬ್ಬೊತ್ತಿಗೆ ಓದು ಕೇವಲ ಓದಲ್ಲ. ಅದೊಂದು ಸಾಂಸ್ಕೃತಿಕ ಪಯಣ. ಮಂದ ಮಾರುತವಿರಲಿ, ಮರಿ ದುಂಬಿಯಿರಲಿ ಎಂಬಂತೆ ಹೇಮಾವತಿಯ ಮೇಲಣ ತಂಗಾಳಿಗೆ ಮೈಒಡ್ಡಿಕೊಂಡಂತೆ, ಮಣಿಬಾಲೆ ಎಂಬ 'ಮರಿದುಂಬಿ'ಯೊಂದಿಗಿನ ಈ ಪಯಣದಲ್ಲಿ ಗ್ರಾಮೀಣ ಸಂಸ್ಕೃತಿಯ ಗಂಧದೌತಣ, ರಸದೌತಣ ಸಮೃದ್ಧವಾಗಿ ಅನುಭವಕ್ಕೆ ಬರುತ್ತದೆ, ನಮ್ಮ ಅನುಭವ ಲೋಕವನ್ನು ವಿಸ್ತರಿಸುತ್ತದೆ.


   ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅನನ್ಯವಾದುದು. ನಮ್ಮ ಬಹುತೇಕ ಲೇಖಕಿಯರು ತಮ್ಮ ಸೃಜನಶೀಲ ಪ್ರತಿಭೆಯನ್ನು ಪಣಕ್ಕಿಟ್ಟು ಸಾಹಿತ್ಯ ರಚಿಸಿರುವುದು ಕಾದಂಬರಿ, ಸಣ್ಣ ಕಥೆ, ಕಾವ್ಯ, ನಾಟಕ, ಲಲಿತ ಪ್ರಬಂಧಗಳಲ್ಲಿ. ಸುಮಿತ್ರಾಬಾಯಿ, ಆಶಾದೇವಿ, ಪುಷ್ಪಾ ಅವರುಗಳಂಥ ಕೆಲವರು ವಿಮರ್ಶಾ ಕ್ಷೇತ್ರದಲ್ಲಿ ಗಣನೀಯ ಕೆಲಸಮಾಡಿದ್ದಾರೆ. ಆದರೆ ಜಾನಪದ ಮತ್ತು ಮಾನವಿಕಗಳಲ್ಲಿ ಕೃತಿಗಳನ್ನು ರಚಿಸಿದ ಮಹಿಳೆಯರು ವಿರಳ. ಅಂಥ ವಿರಳರಲ್ಲಿ ವಿರಳರು ಶ್ರೀಮತಿ ಎಚ್.ಆರ್. ಸುಜಾತ. 'ನೀಲಿ ಮೂಗಿನ ನತ್ತು' ಅನುಭವ ಕೇಂದ್ರಿತ ಲೇಖನಗಳಿಂದ ಹಾಗೂ 'ಜೇನು ಮಲೆಯ ಹೆಣ್ಣು' ಕಾವ್ಯಗುಚ್ಛದಿಂದ ರಸಿಕರ ಹೃನ್ಮನ ಸೆಳೆದಿದ್ದ ಶ್ರೀಮತಿ ಎಚ್.ಆರ್. ಸುಜಾತ ಅವರ ಹೊಸ ಕೃತಿ 'ಮಣಿ ಬಾಲೆ'. ಹಲವು ದೃಷ್ಟಿಗಳಿಂದ ಒಂದು ಗಮನಾರ್ಹ ಕೃತಿ ಇದು.

  'ನೀಲಿ ಮೂಗಿನ ನತ್ತು' ಗ್ರಾಮೀಣ ಜನಪದದ ಸಂಕಥನ. 'ಮಣಿ ಬಾಲೆ'ಯೂ ನಮ್ಮ ಹಳೆಯ ಮೈಸೂರಿನ ಹಾಸನ ಜಿಲ್ಲೆಯ ಜನಪದದ ಸಂಕಥನವೇ. ಇವೆರಡೂ ಅನನ್ಯ ರೀತಿಯ ಶಾಸ್ತ್ರೀಯ ಕೃತಿಗಳು. ಇವೆರಡೂ ಕೃತಿಗಳು ಗ್ರಾಮೀಣ ಜನಪದದ ಬದುಕನ್ನು ಮಾನವೀಯ ಆಸಕ್ತಿಯ ಅಧ್ಯಯನದ ಜೊತೆಗೇ ಆಧುನಿಕ ಸಂವೇದನೆಯ ಹುಡುಕಾಟಗಳು, ಅನ್ವೇಷಣೆಗಳು ಸೇರಿಕೊಳ್ಳುವು ದರಿಂದ ನಾನು ಈ ಕೃತಿಗಳನ್ನು ಶಾಸ್ತ್ರೀಯ ಕೃತಿಗಳು ಎಂದೇ ಪರಿಭಾವಿಸುತ್ತೇನೆ. ಇಲ್ಲಿ ಶಾಸ್ತ್ರೀಯ ಎಂದಾಗ ಒಂದು ಜನಾಂಗದ ಶಾಸ್ತ್ರೀಯ ಅಧ್ಯಯನ ಎಂದಷ್ಟೇ ಅಲ್ಲದೆ 'ಕ್ಲಾಸಿಕ್' ಎನ್ನುವ ಅರ್ಥದ ನೆಲೆಗೂ ಅದು ಚಾಚಿಕೊಳ್ಳುತ್ತದೆ.

'ಮಣಿಬಾಲೆ'ಯನ್ನು ಒಂದು ಕಾದಂಬರಿ ಎಂದೂ ಭಾವಿಸಬಹುದು, ಏಕೆಂದರೆ ಕಾದಂಬರಿಯಂತೆ ಓದಿಸಿಕೊಳ್ಳುವ ಉತ್ಕೃಷ್ಟ ಗುಣವಿದೆ. ಇನ್ನೊಂದು ನೆಲೆಯಲ್ಲಿ ಒಂದು ಜಾನಪದೀಯ ಅಧ್ಯಯನವಾಗಿಯೂ ಒಂದು ಮಾನವ ಕುಲ ಶಾಸ್ತ್ರೀಯ ಗ್ರಂಥವನ್ನಾಗಿಯೂ ಓದಿಕೊಳ್ಳಬಹುದು. ಹೀಗೆ ಒಂದಕ್ಕಿಂತ ಹೆಚ್ಚಿನ ಆಯಾಮಕ್ಕೆ ಚಾಚಿಕೊಳ್ಳುವ 'ಮಣಿಬಾಲೆ' ಐದು ನೂರು ಪುಟಗಳ ಹೆಬ್ಬೊತ್ತಿಗೆ. ತೂಕದ ಕೃತಿ. ಹಾಸನ ಜಿಲ್ಲೆಯ ಒಂದು ಗ್ರಾಮ ಸಮಾಜವೇ ಅವತಾರವೆತ್ತಿ ತನ್ನ ವಿರಾಡ್ರೂಪ ದರ್ಶನ ಮಾಡಿಸುತ್ತಾ ವಿಮರ್ಶೆಯ 'ತಕ್ಕಡಿ'ಯಲ್ಲಿ ಬಂದು ಕೂತಿದೆ. ಇಷ್ಟು ವಜನ್ನಿನ ಕೃತಿಯನ್ನು 'ತ್ರಾಸು' ತಡೆದುಕೊಂಡೀತೆ? ಹೇಗಪ್ಪ ಇದನ್ನು ತೂಗುವುದು ಯಾವ ಮಾನದಂಡ ಅನುಸರಿಸುವುದು ಎಂದು ಸ್ವಲ್ಪ ಯೋಚಿಸಬೇಕಾಯಿತು.
'ಮಣಿ ಬಾಲೆ'ಯನ್ನು ಓದುತ್ತಾ ಹೋದಂತೆ ಥಟ್ಟನೆ ನಮ್ಮ ನೆನಪಿಗೆ ಬರುವುದು ಡಿ.ವಿ.ಜಿ.ಯವರ-
ನರನರೀ ಚಿತ್ರಗಳು, ನಾಟಕದ ಪಾತ್ರಗಳು
ಪರಿಪರಿಯ ವೇಷಗಳು, ವಿವಿಧ ಭಾಷೆಗಳು
ಬರುತಿಹವು ಬೆರಗೆನಿಸಿ ಮೆರೆಯುವವು, ತೆರಳುವುವ
ಮೆರವಣಿಗೆಯೋ ಲೋಕ ಮಂಕುತಿಮ್ಮ
-ಇಂಥ, ಬೆರಗೊಗೊಳಿಸುವ ಒಂದು ಅದ್ಭುತರಮ್ಯ ಪ್ರಪಂಚ 'ಮಣಿಬಾಲೆ'ಯಲ್ಲಿ ನಮಗೆ ಪ್ರತ್ಯಕ್ಷವಾಗುತ್ತದೆ. ಇಲ್ಲಿ ಏನುಂಟು?ಏನಿಲ್ಲ?

ಗ್ರಾಮೀಣ ಜಗತ್ತಿನ ಜೀವಧಾರೆಯೆಲ್ಲ ನದಿ. ಉಪನದಿಗಳಾಗಿ ಹರಿದುಬಂದು ಒಂದು ಪುಟ್ಟ ಗ್ರಾಮಸಮುದ್ರವಾಗಿ ಮಡುಗಟ್ಟಿ ನಿಂತಿದೆ. ಇಲ್ಲಿ ಏನಿಲ್ಲ ಎನ್ನುವುದನ್ನು ಆ ಮೇಲೆ ನೋಡೋಣ. ಈ ಹೆಬ್ಬೊತ್ತಿಗೆ ಓದು ಕೇವಲ ಓದಲ್ಲ. ಅದೊಂದು ಸಾಂಸ್ಕೃತಿಕ ಪಯಣ. ಮಂದ ಮಾರುತವಿರಲಿ, ಮರಿ ದುಂಬಿಯಿರಲಿ ಎಂಬಂತೆ ಹೇಮಾವತಿಯ ಮೇಲಣ ತಂಗಾಳಿಗೆ ಮೈಒಡ್ಡಿಕೊಂಡಂತೆ, ಮಣಿಬಾಲೆ ಎಂಬ 'ಮರಿದುಂಬಿ'ಯೊಂದಿಗಿನ ಈ ಪಯಣದಲ್ಲಿ ಗ್ರಾಮೀಣ ಸಂಸ್ಕೃತಿಯ ಗಂಧದೌತಣ, ರಸದೌತಣ ಸಮೃದ್ಧವಾಗಿ ಅನುಭವಕ್ಕೆ ಬರುತ್ತದೆ, ನಮ್ಮ ಅನುಭವ ಲೋಕವನ್ನು ವಿಸ್ತರಿಸುತ್ತದೆ. ಸುಜಾತ ಅವರಿಗೆ ಕಣ್ಣು ಬಲು ಚುರುಕು, ಬುದ್ಧಿಯೂ ಅಷ್ಟೆ. ಕಂಡದ್ದನ್ನೆಲ್ಲ, ಕೇಳಿದ್ದನ್ನೆಲ್ಲ ಯಾವುದೇ ಪೂರ್ವಾಗ್ರಹವಿಲ್ಲದೆ ಶುದ್ಧಾಂಗವಾಗಿ ಗ್ರಹಿಸುತ್ತಾರೆ. ಅವರ ಗ್ರಹಣ ಶಕ್ತಿ, ಸಂವೇದನಾಶೀಲ ಮನಸ್ಸುಗಳಷ್ಟೆ ಅವರ ಪ್ರತಿಭೆಯ ಹಾಸು-ಬೀಸು ದೊಡ್ಡದು. ಕಂಡದ್ದನ್ನು, ಗ್ರಹಿಸಿದ್ದನ್ನು, ಅನುಭವಿಸಿದ್ದನ್ನು ಮರುಸೃಷ್ಟಿಸುವುದರಲ್ಲಿ ಅವರ ವರ್ಣನಶಕ್ತಿ, ಚಿತ್ರಕ ಶಕ್ತಿ, ಭಾಷಾ ಸಂಪದ ಶ್ಲಾಘನೀಯವಾದುದು.ಎಷ್ಟು ಬಗೆಯ ಜನರು, ಎಷ್ಟು ಬಗೆಯ ಜೀವನ ಶೈಲಿ, ಎಷ್ಟೆಲ್ಲ ಸಂಪ್ರದಾಯಗಳು, ಹಬ್ಬಹರಿದಿನ ಇತ್ಯಾದಿ ಆಚರಣೆಗಳು ಸುಜಾತ ಅವರ ಬರವಣಿಗೆಯ ಬನಿಯಲ್ಲಿ ಅರ್ಥಪೂರ್ಣವಾಗಿ ಮೆರವಣಿಗೆಯೋಪಾದಿ ಚಿತ್ರವತ್ತಾಗಿ ನಮ್ಮ ಕಣ್ಮನಗಳನ್ನು ಆವರಿಸಿಕೊಳ್ಳುತ್ತವೆ. ಈ ಪರಿಯಾಗಿ ಹೊಸಹಳ್ಳಿ ಎಂಬ ಗ್ರಾಮ ಸಜೀವ ಅಭಿವ್ಯಕ್ತಗೊಂಡಂತೆ ಪುಟಪುಟದಲ್ಲೂ ಗ್ರಾಮೀಣ ಸಂಸ್ಕೃತಿ, ರೈತಾಪಿ ಸಂಸ್ಕೃತಿ ಅಥವಾ ಒಕ್ಕಲುತನ ತನ್ನೆಲ್ಲ ವೈಭವಗಳೊಂದಿಗೆ, ನೋವುನಲಿವುಗಳೊಂದಿಗೆ ವಿಜೃಂಭಿಸುತ್ತದೆ.

ಸುಜಾತ ಅವರು ಈ ಗ್ರಾಮೀಣ ಸಂಸ್ಕೃತಿಯ ದರ್ಶನ ಮಾಡಿಸಲು ಆಯ್ದುಕೊಂಡಿರುವುದು ಕಥನಮಾರ್ಗವನ್ನು. ಹೊಸಹಳ್ಳಿಯಲ್ಲಿ ಎಷ್ಟು ಬಗೆಯ ಜಾತಿಗಳಿವೆಯೋ, ಎಷ್ಟು ಬಗೆಯ ಜನರಿದ್ದಾರೋ, ಎಷ್ಟು ಬಗೆಯ ಸ್ವಭಾವಗಳಿದ್ದಾವೆಯೊ, ಎಷ್ಟು ಬಗೆಯ ಕೊಂಕುಡೊಂಕುಗಳಿದ್ದಾವೆಯೋ ಅಷ್ಟೂ ಬಗೆಯ ಕಥನಗಳು ಇಲ್ಲಿವೆ. ಹಾಗೆ ನೋಡಿದರೆ ಇದೊಂದು ಕಥೆಗಳ ಕಣಜ. ಇಲ್ಲಿ ಜನಸಾಮಾನ್ಯರ ಕಥೆ ಇದೆ, ದೇವರುಗಳ ಕಥೆ ಇದೆ, ದೆವ್ವಗಳ ಕಥೆ ಇದೆ. ಅಸಂಗತ ಎನ್ನಬಹುದಾದ ಕಥೆಗಳಿವೆ. ಕುಂತಕುಂತಲ್ಲೇ ಕಥೆ ಕಟ್ಟುವ ಮಾಯಕಾತಿಯರಿದ್ದಾರೆ.ಲೇಖಕಿ ಹೊಸಹಳ್ಳಿಯ ಸಂಸ್ಕೃತಿಯನ್ನು ಕಥೆಗಳಲ್ಲಿ ಸೂರೆಗೊಂಡಿದ್ದಾರೆ.

ಗ್ರಾಮೀಣ ಬದುಕಿನ ಮುಖ್ಯ ಭಾಗವಾದ ರೈತಾಪಿ ಸಮುದಾಯದ ಸಂಸ್ಕೃತಿ, ಕೆಳಗಣ ಕೇರಿಯ ಶ್ರಮಿಕ ಸಂಸ್ಕೃತಿ, ಅಸ್ಪಶ್ಯ ಸಂಸ್ಕೃತಿ ಇವುಗಳ ಕಥನದಲ್ಲಿ ವಾಸ್ತವಿಕತೆ ಇದೆ, ಮಾಯಾ ವಾಸ್ತವಿಕತೆಯೂ (ಮ್ಯಾಜಿಕಲ್ ರಿಯಲಿಸಮ್) ಇದೆ. ಜನ ಬದುಕುವ ರೀತಿ, ಮದುವೆ, ಹಬ್ಬಹರಿದಿನ , ಜಾತ್ರೆ -ಸಂತೆ, ಆಹಾರ ಪದ್ಧತಿ, ಅಭಿರುಚಿ ಇವೆಲ್ಲವನ್ನೂ ತುಂಬ ವಾಸ್ತವಿಕವಾಗಿ ಚಿತ್ರಿಸಿದ್ದಾರೆ. ಮದುವೆಯ ಸಿದ್ಧತೆ, ಸಡಗರ-ಸಂಭ್ರಮಗಳು ಉಜ್ವಲವಾಗಿವೆ. ಇನ್ನು ನದಿ, ಕೆರೆಗಳಲ್ಲಿ ಎಷ್ಟು ಬಗೆಯ ಮೀನುಗಳುಂಟು, ಈ ಮೀನುಗಳ ಸಾರು ಸೇರಿದಂತೆ ಎಷ್ಟು ಬಗೆಯ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಬಹುದು. ಸಾಬರ ಮನೆಯ ಬಾಡೂಟ ಹೇಗೆ ಸ್ವಾದಿಷ್ಟ, ಒಕ್ಕಲಿಗರ ಮನೆಯ ಬಾಡೂಟ ಹೇಗೆ ಭಿನ್ನ ಇತ್ಯಾದಿ ರೆಸಿಪಿಯೂ ಇಲ್ಲಿದ್ದು ಮಾಂಸಾಹಾರಿಗಳು ಓದುತ್ತೋದುತ್ತ ಬಾಯಿಚಪ್ಪರಿಸುವಂತಾಗುತ್ತದೆ. ಇವೆಲ್ಲದರ ಮಧ್ಯೆ, ಸಂಪಿಗೆ-ರಂಗಣ್ಣಿ ಎಂಬ ಯುವ ಪ್ರೇಮಿಗಳು, ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದಂತೆ ನಡೆಸುವ ಪ್ರೇಮಾನುಸಂಧಾನಗಳು, ಚಕ್ಕಂದಗಳು ಓದಿನ ಮುದಕ್ಕೆ ಕಚಗುಳಿ ಇಡುತ್ತವೆ.
ಇನ್ನು ಸುಜಾತ ಅವರ ಕಥನ ತಂತ್ರವನ್ನು ಸ್ವಲ್ಪಗಮನಿಸೋಣ. ಗ್ರಾಮೀಣ ಬದುಕು, ಆಚಾರ-ವಿಚಾರ, ಸಂಪ್ರದಾಯಗಳನ್ನು ಚಿತ್ರಿಸುವಾಗ ಸುಜಾತ ವಾಸ್ತವ ಮಾರ್ಗವನ್ನೇ ಅನುಸರಿಸಿದ್ದಾರೆ, ಭಾಷೆಯಂತೂ ಅಪ್ಪಟ ಒಕ್ಕಲಿಗರ ಭಾಷೆ. ಆದರೆ ಹಳೇ ಮೈಸೂರಿನ ಒಕ್ಕಲಿಗರ ಭಾಷೆಯಲ್ಲೂ ಪ್ರತ್ಯೇಕವಾದ ಭಾಷಾ ಪ್ರಭೇದ ಇಲ್ಲಿದೆ. ನಮ್ಮ ಮೈಸೂರು, ರಾಮನಗರ, ಚನ್ನಪಟ್ಟಣ, ಮಾಗಡಿಗಳ ಭಾಷೆಗಿಂತ ಭಿನವಾದ ಹಾಸನ ಜಿಲ್ಲೆಯ ಒಕ್ಕಲಿಗರ ಭಾಷಾಪ್ರಭೇದ ಇಲ್ಲಿ ನಮಗೆ ಪರಿಚಯವಾಗುತ್ತದೆ.

ತಂತ್ರದ ದೃಷ್ಟಿಯಲ್ಲೂ ವಾಸ್ತವ ಮಾರ್ಗದ ಜೊತೆ ಮಾಯಾ ವಾಸ್ತವ ತಂತ್ರಕ್ಕೂ (ಮ್ಯಾಜಿಕಲ್ ರಿಯಲಿಸಂ) ಲೇಖಕಿ ಮೊರೆಹೋಗಿದ್ದಾರೆ.)ಕೆಲವೊಂದು ಸಮುದಾಯಗಳ, ವಿಶೇಷವಾಗಿ ಒಕ್ಕಲಿಗ ಸಮುದಾಯದ ಆಚಾರ-ವಿಚಾರ, ನಂಬಿಕೆ-ರೂಢಿಗಳನ್ನು ನಿರೂಪಿಸುವಲ್ಲಿ ಸುಜಾತ ವಾಸ್ತವಿಕ ಮಾರ್ಗದಲ್ಲಿ ಕೃತಿಯನ್ನು ನಡೆಸುತ್ತಾರೆ.

ಅದೇ ಮನುಷ್ಯರ ಮನಸ್ಸು, ಸ್ವಭಾವ, ಆಸಕ್ತಿ, ಮೂಲ ಪ್ರವೃತ್ತಿಗಳಾದ ಕಾಮ-ಕಾಮನೆಗಳ ಬಾಬ್ತು ಬಂದಾಗ ಕೃತಿ ಮಾಯಾ ವಾಸ್ತವದಲ್ಲಿ ನಡೆಯುತ್ತದೆ. ಇದಕ್ಕೆ ಉದಾಹರಣೆಯಾಗಿ 'ಗಾಳಿ ಬಸುರು' ಪ್ರಸಂಗವನ್ನು ನೋಡಬಹುದು. ಮಹಿಳೆಯರು ಒಂಟಿಯಾಗಿ ಬೆಟ್ಟಗುಡ್ಡಗಳ ನೆತ್ತಿಯಲ್ಲಿ ಅಂಗಾತ ಮಲಗಿದರೆ, ಗಾಳಿ ಎನ್ನುವ ಶಕ್ತಿ ಅವರ ಮೈಯೊಳಕ್ಕೆ ಪ್ರವೇಶಿಸುವುದಂತೆ.ಆಗ ಅವರು ಗರ್ಭಿಣಿಯಾಗುವರಂತೆ. 'ಗಾಳಿ' ಎಂಬುದಕ್ಕೆ ಗ್ರಾಮೀಣ ಪ್ರದೇಶದಲ್ಲಿ ದೆವ್ವಪಿಶಾಚಿ ಎನ್ನುವ ಅರ್ಥವೂ ಇದೆ ಎಂಬುದನ್ನು ಮರೆಯಲಾಗದು. ಪುರುಷ ಸಂಯೋಗರಹಿತವಾದ ಈ 'ಗಾಳೀ ಬಸುರು' ಕಥೆ ಹಾಸನಕ್ಕೆ ಮಲಯಾಳಿಯಿಂದ ಆಮದಾದುದು. ಹಳ್ಳಿಯ ಮುಗ್ಧ ಜನರು ಇದನ್ನು ಎಷ್ಟರ ಮಟ್ಟಿಗೆ ನಂಬಿದ್ದಾರೆ ಎಂದರೆ...ಹೊಸಹಳ್ಳಿಯ ಬಾಲೆಯೊಬ್ಬಳು ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದಾಳೆ. ಇದರ ಕಾರಣ ಕರ್ತ ಯಾರು? ಪಂಚಾಯತ್ ಸೇರುತ್ತದೆ.ಅಮಾಯಕ ಬಾಲಕಿಗೆ ನ್ಯಾಯ ಒದಗಿಸುವುದು ಪಂಚಾಯತ್‌ನ ಕಳಕಳಿ. ಯಾರು ಎಂದು ಪರಿಪರಿಯಾಗಿ ಕೇಳಿದರೂ ಬಾಲಕಿಯದು ಒಂದೇ ಉತ್ತರ: 'ಗಾಳಿ'. 'ಗಾಳಿ ತಬ್ಬಿಕೊಂಡದ್ದಷ್ಟೆ ಬಾಲಕಿಗೆ ಗೊತ್ತಿರುವುದು.

ಪ್ರಸಂಗ ಇಲ್ಲಿಗೇ ಮುಗಿಯುವುದಿಲ್ಲ. ಕಳೇ ಕೀಳುವಾಗಲೋ ನಾಟಿ ಮಾಡುವಾಗಲೋ ಹೆಂಗಸರ ಬಾಯಲ್ಲಿ ಮುಂದುವರಿಯುತ್ತೆ, ಮಾಯಾ ವಾಸ್ತವ ತಂತ್ರದಲ್ಲಿ.'ಗಾಳಿ ಬಸುರಿನ' ಬಗ್ಗೆ ಮಾತನಾಡುತ್ತಲೇ 'ಪೋಲಿ ಹೆಂಗಸರು' ಪುರುಷಾಮೃಗದ ಅವತಾರಗಳನ್ನು ವರ್ಣಿಸುತ್ತಾರೆ. ಅಂತಹುದರಲ್ಲಿ ಒಂದು ನನಗೆ ಪ್ರಸಿದ್ಧ ಚಿತ್ರಕಾರ ಪಾಬ್ಲೋ ಪಿಕಾಸೋನ ವರ್ಣಚಿತ್ರ ಸಂಬಂಧಿತ ಕಥೆಯನ್ನು ನೆನಪಿಗೆ ತರುತ್ತಿದೆ. ವಾಸ್ತವಿಕ ಶೈಲಿಯನ್ನು ಟೀಕಿಸುವ, ವಿಡಂಬಿಸುವ ವಿಕಟ ಮಾರ್ಗ ಸರ್ರಿಯಲಿಸಮ್ ಅಥವಾ ಮ್ಯಾಜಿಕಲ್ ರಿಯಲಿಸಮ್. ಪುರುಷ ಪಾರಮ್ಯ, ಪುರುಷಾಮೃಗದ ಕ್ರೌರ್ಯವನ್ನು ವಿಡಂಬಿಸಲು ಪಿಕಾಸೋ ತನ್ನದೊಂದು ಚಿತ್ರದಲ್ಲಿ ಪುರುಷಾಮೃಗದ ರೂಪಕವಾದ ಶಿಶ್ನವನ್ನು ಗಂಡಸಿನ ಭ್ರುಕುಟಿಗಳ ಮಧ್ಯೆಚಿತ್ರಿಸಿ ಭಾರೀ ವಿವಾದಕ್ಕೊಳಗಾಗಿದ್ದನಂತೆ. ಅಂಥದೇ ಒಂದು ಪ್ರಸಂಗ ಇಲ್ಲಿ ಬರುತ್ತದೆ-'ಗಂಡಸಿನ ಗಂಟೆ'ಯಾಗಿ.

 ಏಕಕಾಲಕ್ಕೆ ನಗೆಯನ್ನೂ ಭೀಭತ್ಸವನ್ನೂು ಉಂಟುಮಾಡುವ ಈ ಪ್ರಸಂಗ, ಜೀವಪರವಾಗಬೇಕಿದ್ದ, ಜೀವಚೈತನ್ಯವಾಗಬೇಕಿದ್ದ 'ಕಾಮ', ಇಲ್ಲಿ ಮಾರಕವಾಗಿ ಬದುಕಿನ ಅಕರಾಳತೆ-ವಿಕೃತಿಗಳನ್ನು, ಅಸಂಗತತೆಯನ್ನು ಬಿಂಬಿಸಿ ಬೆಚ್ಚಿಬೀಳುವಂತೆ ಮಾಡುತ್ತದೆ. ಇದು ಪ್ರಕೃತಿಯ ಚೋದ್ಯವೋ ವಿಧಿವಿಲಾಸವೋ? ಇಲ್ಲಿ ನಾವು, ಹೆಂಡತಿ ಅಥವಾ ಗಂಡ ಯಾರ ಬಗ್ಗೆ ಅನುಕಂಪ ಪಡಬೇಕೋ? ಆದರೆ ಈ ವಿಕೃತಿಯನ್ನು ವರ್ಣಿಸುತ್ತಲೇ ಲೇಖಕಿ ಪುರುಷ ಪಾರಮ್ಯ ವ್ಯವಸ್ಥೆಯ ವಿಡಂಬನೆಗೆ ಮಾಯಾ ವಾಸ್ತವ ತಂತ್ರವನ್ನು ಸಮರ್ಥವಾಗಿ ಬಳೆಸಿದ್ದಾರೆ. ಹಾಗೆಯೇ ಅವರೆ ಹುಳ ರಾಜಕುಮಾರಿ ಆಗಿ ಅಜ್ಜಿ ಮನೆ ಅರಮನೆಯಾಗುವಂಥ ಕಥೆಗಳೂ ಇಲ್ಲಿವೆ.

ಹೊಸಹಳ್ಳಿಯಲ್ಲಿ ಸಾಮರಸ್ಯದ ಬದುಕಿದೆ. ಕಲಾಯಿ ಸಾಬಿ, ಬಳೆಗಾರ ಶೆಟ್ಟಿ, ತಳಗಿನ ಕೇರಿಯವರು ಎಲ್ಲರೂ ಎಲ್ಲರ ಮನೆಯಲ್ಲೂ ಊಟತಿಂಡಿ ಮಾಡುವಷ್ಟು ಸಲುಗೆ, ಹೊಕ್ಕು ಬಳಕೆ ಇದೆ. ಅದೇ ನೀತಿ ಪಶ್ನೆ ಬಂದಾಗ ಮಾನದಂಡ ಬದಲಾಗುತ್ತದೆ. 'ದೊಡ್ಡೋರ ಮನೆ ತೂತು ಮುಚ್ಕಳ್ತದೆ, ಬಡವರದುಬಗ್ಗರದು ಕಾಣಿಸಿಕೊಳ್ತದೆ'. ಹೀಗಾಗಿ 'ಗಾಳಿಗೆ' ಬಸುರಾದ ಹುಡುಗಿಗೆ ಪಂಚಾಯತ್ ದಂಡ ಹಾಕುತ್ತದೆ. ದೊಡ್ಡ ವಂಶದ ಹುಡುಗಿಯೊಬ್ಬಳು ಹೊಲೇರ ಮಗನ ಜೊತೆ ಕೂಡಿ ಬಸುರಾದಾಗ ಆ ಹೊಲೇರ ವಂಶವನ್ನೇ ಕೊಚ್ಚಿಕತ್ತರಿಸಿ ರಕ್ತದ ಹೊಳೆ ಹರಿಸ್ತಾರೆ ಮೇಲಣ ಕೇರಿಯವರು. ಇಲ್ಲಿಗೆ ನಿಲ್ಲಲ್ಲ. ಮೇಲಜಾತಿಯವರನ್ನು ಪಾಪಪ್ರಜ್ಞೆ ಕಾಡುತ್ತೆ. ಹೊಲೇರ ಹೆಣ್ಣುಮಗಳೊಬ್ಬಳನ್ನು ಬಾಣಂತನಕ್ಕೆ ತೌರು ಮನೆಗೆ ಕಳಹಿಸಿಕೊಟ್ಟು ಪಾಪಪ್ರಜ್ಞೆಯಿಂದ ಮುಕ್ತವಾಗುತ್ತದೆ ಇಲ್ಲಿನ ಕುಲೀನ ಸಮಾಜ.

ಸುಜಾತ ಅವರ ಈ ಕೃತಿ ಒಂದಕ್ಕಿಂತ ಹೆಚ್ಚಿನ ಆಯಾಮಗಳನ್ನುಳ್ಳ, ಹಲವಾರು ಸಾಧ್ಯತೆಗಳಿಗೆ ಚಾಚಿಕೊಳ್ಳುವ ಜೀವನಾನುಭವ. ಇದನ್ನುಓದುವುದೇ ಒಂದು ಅನುಭವ. ಸಮಾಜಶಾಸ್ತ್ರೀಯ ಕೃತಿಯನ್ನಾಗಿಯೂ ಮಾನವ ಶಾಸ್ತ್ರ ಕೃತಿಯನ್ನ್ನಾಗಿಯೂ ಓದಬಹುದಾಗಿದೆ, ಅರ್ಥೈಸಬಹುದಾಗಿದೆ. ವೇದ ಮೂಲದ ವೈದಿಕ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ ಎನ್ನುವ ನಂಬಿಕೆ ನಮ್ಮಲ್ಲಿ ಇನ್ನೂ ಗಟ್ಟಿಯಾಗಿಯೇ ಉಳಿದಿದೆ. ಆದರೆ ಬಹುಮುಖಿ ಭಾರತ ಹಲವುಹನ್ನೊಂದು ಬುಡಕಟ್ಟುಗಳನ್ನೂ ಸಮುದಾಯಗಳನ್ನೂ ಹೊಂದಿರುವ ದೇಶ. ಇಲ್ಲಿ, ಒಂದೊಂದು ಸಮುದಾಯವೂ ತನ್ನದೇ ಆದ ಸಂಸ್ಕಾರ, ಸಾಂಸ್ಕೃತಿಕ ಅಸ್ಮಿತೆ, ಅನನ್ಯತೆ, ವಿಭಿನ್ನತೆ ಮತ್ತು ವೈವಿಧ್ಯತೆಗಳನ್ನು ಹೊಂದಿರುವ ವೈಶಿಷ್ಟ್ಯ ಢಾಳವಾಗಿ ನಮ್ಮ ಕಣ್ಣಿಗೆ ಗೋಚರಿಸುತ್ತದೆ. ಒಂದೊಂದು ಸಮುದಾಯವೂ ಸಾಮರಸ್ಯದಿಂದ ಬಾಳ್ವೆ ನಡೆಸುತ್ತಿರುವುದು ಇನ್ನೊಂದು ವಿಶೇಷ.ಆದರೆ ಸುಜಾತ ಅವರ ಕೃತಿಯಲ್ಲಿ ಒಕ್ಕಲಿಗ ಸಮುದಾಯವೇ ಪ್ರಧಾನ ಭೂಮಿಕೆಯಲ್ಲಿದ್ದು ಉಳಿದ ಸಮುದಾಯಗಳ ಉಪಸ್ಥಿತಿ ತೋರಗಾಣಿಕೆಗೂ ಸಿಗುವುದಿಲ್ಲ. ಒಂದು ಹಳ್ಳಿಯನ್ನೇ ತೆಗೆದುಕೊಂಡರೂ ಲಿಂಗಾಯತ ಸಮುದಾಯ, ಬ್ರಾಹ್ಮಣ ಸಮುದಾಯ, ಬಡಗಿ, ಕಮ್ಮಾರ ಹೀಗೆ ಹಲವಾರು ಸಮುದಾಯಗಳಿರುತ್ತವೆ. ಈ ಸಮುದಾಯಗಳು ಗ್ರಾಮ ಜೀವನದಲ್ಲಿ ಹಾಸುಹೊಕ್ಕಾಗಿ ಪರಸ್ಪರ ನಡೆದುಕೊಳ್ಳುತ್ತಾರೆ.

ಮದುವೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ, ಕಣದ ಪೂಜೆಯಂಥ ಸಮಾರಂಭಗಳಲ್ಲಿ ಬ್ರಾಹ್ಮಣ ಪುರೋಹಿತ ಅಥವಾ ಲಿಂಗಾಯತರ ಅಯ್ನೋರು ಇದ್ದೇ ಇರುತ್ತಾರೆ. ಹಾಗೆಯೇ ಕಣದ ಪೂಜೆಯಲ್ಲಿ ಬೆಳೆಯ ರಾಶಿಯಲ್ಲಿ ಮೊದಲ ಪಾಲನ್ನು ಬ್ರಾಹ್ಮಣ-ಐಯ್ನೋರಿಗೆ ಸಲ್ಲಿಸುವ ಪದ್ಧತಿ ಈಗಲೂ ಕೆಲವು ಹಳ್ಳಿಗಳ ಸಂಪ್ರದಾಯಸ್ಥ ಕುಟುಂಬಗಳಲ್ಲಿವೆ. ಸುಜಾತ ಅವರ ಹೊಸಹಳ್ಳಿಯಲ್ಲಿ ಈ ಸಮುದಾಯಗಳೇ ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಉಳಿದ ಈ ಸಮುದಾಯಗಳು ಒಕ್ಕಲಿಗ ಸಮುದಾಯದೊಂದಿಗೆ ಸಂಬಂಧವಿರಿಸಿಕೊಂಡಿರುವ, ಹಾಸುಹೊಕ್ಕಾಗಿ ಬೆರೆಯುವ ಸ್ಥಿತಿಯೇ ಕಾಣ ಸಿಗುವುದಿಲ್ಲ.ಅಥವಾ ಈ ಸಮುದಾಯಗಳ ಉಪಸ್ಥಿತಿ ಮಣಿಬಾಲೆಯ ಪ್ರಜ್ಞೆಗೆ ತಾಕುವುದೇ ಇಲ್ಲವೇನೋ. ಕಲಾಯಿ ಸಾಬಿಯಂಥವರು ಬಂದುಹೋಗುತ್ತಾರಷ್ಟೆ. ಯಾವುದೇ ಸಮಾಜದ ಅಖಂಡತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳು ತರುವುದು ಸಮುದಾಯಗಳ ಒಳಗೊಳ್ಳುವಿಕೆಯಲ್ಲಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top