-

ಸಂವಿಧಾನದ ಹೆಸರಿನಲ್ಲಿ ಜಾತಿ ಪದ್ಧತಿಯ ವೈಭವೀಕರಣ ಮತ್ತು ಚಾತುರ್ವರ್ಣ ವ್ಯವಸ್ಥೆಯ ಜಾರಿ

-

ಕೇವಲ 75 ವರ್ಷಗಳ ಹಿಂದೆ ಪ್ರಜಾಪ್ರಭುತ್ವ ಜಾರಿಗೊಂಡ ಈ ದೇಶದಲ್ಲಿ 'ಭಾರತ ಪ್ರಜಾಪ್ರಭುತ್ವದ ತಾಯಿ' ಎನ್ನುವ ಭಾವನಾತ್ಮಕ ಅಂಶವನ್ನು ಬಳಸಿಕೊಂಡು 'ಭಾರತೀಯತ್ವ ಆಡಳಿತ ಮಾದರಿ' ಎನ್ನುವ ಊಹಾತ್ಮಕ ಕಲ್ಪನೆಯನ್ನು ತೇಲಿ ಬಿಡಲಾಗುತ್ತಿದೆ. 15, ಆಗಸ್ಟ್ 1947ರ ನಂತರ ಭಾರತ ಪ್ರಜಾಪ್ರಭುತ್ವ ದೇಶವಾಯಿತು. 73 ವರ್ಷಗಳ ಹಿಂದೆ ಸಂವಿಧಾನ ಜಾರಿಗೊಳಿಸಲಾಯಿತು. ಆದರೆ ಐಸಿಎಚ್‌ಆರ್ ಸಂಸ್ಥೆಯು ಪ್ರಜಾಪ್ರಭುತ್ವದ ಬೇರುಗಳನ್ನು ಪ್ರಾಚೀನ ಭಾರತದಲ್ಲಿ ಹುಡುಕುತ್ತದೆ. ಗುರುಕುಲ ಪದ್ಧತಿ, ಚಾತುರ್ವರ್ಣ ವ್ಯವಸ್ಥೆ ಮತ್ತು ರಾಜಾಡಳಿತದಲ್ಲಿ ಪ್ರಜಾಪ್ರಭುತ್ವದ ಬೇರುಗಳಿದ್ದವು ಎನ್ನುವ ಸುಳ್ಳುಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತಲು ಹೊರಟಿದೆ.


ಇತ್ತೀಚೆಗೆ ಭಾರತದ ಕೇಂದ್ರ ಶಿಕ್ಷಣ ಇಲಾಖೆಯು ಇಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ 'ಇತಿಹಾಸ ಸಂಶೋಧನೆಯ ಭಾರತೀಯ ಪರಿಷತ್ (ಐಸಿಎಚ್‌ಆರ್)' ರೂಪಿಸಿರುವ 'ಭಾರತ: ಲೋಕತಂತ್ರದ ಜನನಿ' ಎನ್ನುವ ವಿಷಯದ ಮೇಲೆ ನವೆಂಬರ್ 26ರ ಸಂವಿಧಾನ ದಿನವನ್ನು ಆಚರಿಸಬೇಕೆಂದು ಸುತ್ತೋಲೆ ಹೊರಡಿಸಿತ್ತು. ಯುಜಿಸಿಯು ಈ ಐಸಿಎಚ್‌ಆರ್ ಕಲ್ಪನೆಯ 'ಭಾರತ : ಲೋಕತಂತ್ರದ ಜನನಿ'ಯ ಅಡಿಯಲ್ಲಿ 15 ವಿಷಯಗಳ ಮೇಲೆ ವಿಚಾರ ಸಂಕಿರಣ, ಉಪನ್ಯಾಸ ನಡೆಸಬೇಕೆಂದು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದೆ. ಈ ಪರಿಕಲ್ಪನೆಯು ಆರೆಸ್ಸೆಸ್‌ನ ಆರ್ಯನ್ - ಚಾತುರ್ವರ್ಣ-ಬ್ರಾಹ್ಮಣೀಕರಣ ಸಿದ್ಧಾಂತಗಳನ್ನು ಒಳಗೊಂಡಿದೆ ಮತ್ತು ಎಂದಿನಂತೆ ಹಿಂದುತ್ವದ ಛದ್ಮವೇಷದಲ್ಲಿದೆ. ಮೋದಿ ನೇತೃತ್ವದ ಬಿಜೆಪಿ ಬಹುಮತ ಪಡೆದುಕೊಂಡು ಅಧಿಕಾರ ಬಂದ ಸಂದರ್ಭದಲ್ಲಿ ಆರೆಸ್ಸೆಸ್ ಸಂಘಟನೆಯು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಸಂಪೂರ್ಣ ಕಬ್ಜಾ ಮಾಡಿಕೊಂಡಿರುವುದಕ್ಕೆ ಮತ್ತು ಅದು ನಿರಂತರವಾಗಿ ಜಾರಿಯಲ್ಲಿರುವುದಕ್ಕೆ ಈ ಸುತ್ತೋಲೆ ಇತ್ತೀಚಿನ ಉದಾಹರಣೆಯಾಗಿದೆ. ''ಅತಿ ಪುರಾತನ ಕಾಲದಿಂದಲೂ ((immemorial) ಭಾರತೀಯರು ಜಗತ್ತಿನಾದ್ಯಂತ ಹರಡಿಕೊಂಡಿದ್ದಾರೆ'' ಎನ್ನುವ ಸುಳ್ಳಿನೊಂದಿಗೆ ಪ್ರಾರಂಭವಾಗುವ ಈ ಪರಿಕಲ್ಪನೆಯ ಕರಡು ಈ ಕಾರಣಕ್ಕಾಗಿ 'ಭಾರತ ಮತ್ತು ಲೋಕತಂತ್ರ'ವು ಜಾಗತಿಕ ನಾಗರಿಕತೆಯ ಮೇಲೆ ಪ್ರಭಾವ ಬೀರಿದೆ ಮತ್ತು ದೊಡ್ಡ ಸಮಾಗಮಕ್ಕೂ ಕಾರಣವಾಗಿದೆ ಎನ್ನುವ ಶರಾ ಬರೆಯುತ್ತಾರೆ. ಇದು ಚಾರಿತ್ರಿಕವಾಗಿ ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತೀಯತೆಯ ವೈಭವೀಕರಣದ, ಇತಿಹಾಸವನ್ನು ತಿರುಚಿದ ಈ ಸುಳ್ಳುಗಳನ್ನು ಆರೆಸ್ಸೆಸ್‌ನ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಚ್ಛನ್ನವಾಗಿ ಬೋಧಿಸಲಾಗುತ್ತಿದೆ. ಆದರೆ ಈ ಪಠ್ಯಗಳು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿಯೂ ಸ್ಥಾನ ಪಡೆದುಕೊಂಡಿರುವುದು ಕಳವಳಕಾರಿ ಸಂಗತಿಯಾಗಿದೆ.

ಪ್ರಜಾತಂತ್ರ, ಜನತಂತ್ರ ಮತ್ತು ಲೋಕತಂತ್ರದ ನಡುವಿನ ವ್ಯತ್ಯಾಸಗಳನ್ನು ಉದ್ಧರಿಸುತ್ತಾ ಈ ಮೂರು ಆಯಾಮಗಳ ವ್ಯವಸ್ಥೆಯನ್ನು, ಜನಾಡಳಿತ ಕ್ರಮವನ್ನು, ಆಡಳಿತ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎಂದು ಹೇಳಿಕೆ ಕೊಡುತ್ತಾರೆ. ವೇದ ಕಾಲದಿಂದಲೂ ರಾಜರು ಮತ್ತು ಜನಪದರು ಎನ್ನುವ ಎರಡು ಪ್ರಭುತ್ವಗಳು ಆಸ್ತಿತ್ವದಲ್ಲಿತ್ತು ಎಂದು ಈ ಕರಡು ವಿವರಿಸುತ್ತದೆ. ''ಗ್ರಾಮ ಸಮುದಾಯಗಳು, ಸ್ವ-ಆಡಳಿತದ, ಸ್ವಾಯತ್ತತೆ ಪಡೆದಿದ್ದವು. ಗ್ರಾಮ, ಖಾಪ್ ಪಂಚಾಯತ್‌ನಂತಹ ಸ್ವ-ನಿಯಂತ್ರಣದ ಶ್ರೇಣೀಕರಣದ ವ್ಯವಸ್ಥೆ ಹೊಂದಿದ್ದವು. ರಾಜ ವಂಶಗಳು ಬದಲಾದರೂ, ದಾಳಿಕೋರರು ಆಕ್ರಮಣ ಮಾಡಿದಾಗಲೂ ಸಹ ಈ ವ್ಯವಸ್ಥೆಯು ಅಬಾಧಿತವಾಗಿತ್ತು'' ಎಂದು ಈ ಕರಡುವಿನಲ್ಲಿ ವಿವರಿಸಲಾಗಿದೆ. ಇತಿಹಾಸ ಶಿಕ್ಷಕ ರಾಜೇಶ್ ಸುಬ್ರಮಣ್ಯಂ ಅವರು ''ಭಾರತದ ಗ್ರಾಮ ಸಮುದಾಯದ ಈ ಸ್ವಾಯತ್ತತೆಯ ಕಲ್ಪನೆಯು ನೇರವಾಗಿ ಬ್ರಿಟಿಷ್ ಇತಿಹಾಸಕಾರರಾದ ಚಾರ್ಲ್ಸ್ ಮೆಟ್‌ಕಾಲ್ಪೆ, ಮಿಲ್ಸ್, ಮೌಂಟಸ್ಟಾಟ್ ಎಲ್ಫಿಸ್ಟೋನ್, ಹೆನ್ರಿ ಮೈನ್ ಮುಂತಾದವರಿಂದ ಎರವಲು ಪಡೆದುಕೊಂಡಿದ್ದಾರೆ. ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಇತಿಹಾಸವಿಲ್ಲದ ನಮ್ಮ ಕಾಲದ ಈ ಹಿಂದುತ್ವ ಚಾಂಪಿಯನ್ನರು 18-19ನೇ ಶತಮಾನದ ವಸಾಹತುಶಾಹಿ ಇತಿಹಾಸಕಾರರ ಅರೆಬೆಂದ ಇತಿಹಾಸದಲ್ಲಿ ಆಶ್ರಯ ಪಡೆದುಕೊಳ್ಳುತ್ತಾರೆ'' ಎಂದು ಬರೆಯುತ್ತಾರೆ.

ಆರೆಸ್ಸೆಸ್‌ನ ಸಿದ್ಧಾಂತದ ಮೂಲ ಬೇರು ಇರುವುದು ಆರ್ಯನ್ ಮೂಲ ನಿವಾಸಿಗಳು ಎನ್ನುವ ಸುಳ್ಳಿನಲ್ಲಿ. ಇದರ ಮೂಲವಿರುವುದು ಬ್ರಾಹ್ಮಣರ ಶ್ರೇಷ್ಠತೆಯಲ್ಲಿ. ಇದರ ಮೂಲವಿರುವುದು ಚಾತುರ್ವರ್ಣ ಪದ್ಧತಿಯಲ್ಲಿ. ಆದರೆ ಆರ್ಯನ್ನರು ಹೊರಗಿನಿಂದ ಬಂದವರು ಎನ್ನುವ ಇತಿಹಾಸವು ಇತ್ತೀಚೆಗೆ ವಂಶಾವಳಿಯ, ತಳಿ ವಿಜ್ಞಾನದ ಸಂಶೋಧನೆಯ ಮೂಲಕ ಸಾಬೀತಾಗಿದೆ. ಇದನ್ನು ಅಲ್ಲಗಳೆಯಲು ಮತ್ತೊಮ್ಮೆ ಸುಳ್ಳುಗಳ ಮೊರೆ ಹೋಗಿರುವ ಈ ಹಿಂದುತ್ವವಾದಿಗಳು ಈ 'ಆರ್ಯನ್ ಗ್ರಾಮಗಳ' ಊಹಾತ್ಮಕ ಕಲ್ಪನೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಬ್ರಾಹ್ಮಣರು ಮತ್ತು ವೇದಗಳಲ್ಲಿ ತಮ್ಮ ಸಾಂಸ್ಕೃತಿಕ ಐಡೆಂಟಿಟಿಯನ್ನು ಹೊಂದಿರುವ ಈ ಹಿಂದುತ್ವವಾದಿಗಳು ಅದನ್ನು ಶಾಶ್ವತಗೊಳಿಸಲು ಇತಿಹಾಸವನ್ನು ತಿರುಚಲು ಮುಂದಾಗಿದ್ದಾರೆ. ಆ ಕಾಲದ ಭಾರತದಲ್ಲಿ ಅವೈದಿಕ ಪರಂಪರೆ, ಶ್ರಮಣ ಸಂಸ್ಕೃತಿಯು ಈ ಬ್ರಾಹ್ಮಣ-ವೇದ ಪರಂಪರೆಗೆ ಸೆಡ್ಡು ಹೊಡೆದ ಇತಿಹಾಸವನ್ನು ಮರೆ ಮಾಚಲು ಹಿಂದೂಗಳ ಮೇಲೆ ಅನ್ಯರ, ವಿದೇಶಿಯರ ಆಕ್ರಮಣದ ನಿರೂಪಣೆಯನ್ನು ಪ್ರಚಾರ ಮಾಡುತ್ತಾರೆ. ಐಸಿಎಚ್‌ಆರ್‌ನ 'ಲೋಕತಂತ್ರ ಜನನಿ' ಎನ್ನುವ ಪರಿಕಲ್ಪನೆಯೂ ಈ ಆಯಾಮವನ್ನು ಆಧರಿಸಿದೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಡೀಮ್ಡ್ ವಿವಿಗಳಲ್ಲಿ ವಿಚಾರ ಸಂಕಿರಣ ನಡೆಸಲು, ಬೋಧಿಸಲು ಐಸಿಎಚ್‌ಆರ್ ಹದಿನೈದು ವಿಷಯಗಳನ್ನು ಆಯ್ಕೆ ಮಾಡಿಕೊಂಡಿದೆ. ಅದರಲ್ಲಿ ಮೊದಲನೆಯದನ್ನು ಚರ್ಚೆ ಮಾಡೋಣ

ಪುರಾತತ್ವ ಶಾಸ್ತ್ರದ ಸಾಕ್ಷಿಗಳು ಮತ್ತು ಭಾರತದ ಪ್ರಜಾಪ್ರಭುತ್ವ ಬೇರುಗಳು

ಮಿಥ್ಯೆ: ಆರೆಸ್ಸೆಸ್‌ನ ಗೋಳ್ವಾಲ್ಕರ್ ಅವರು "We Or Our Nationhood Defined' ಪುಸ್ತಕದಲ್ಲಿ ''ನಾವು ಹಿಂದೂಗಳು 8-10 ಸಾವಿರ ವರ್ಷಗಳವರೆಗೆ ಈ ನೆಲದ ಏಕಮೇವದ್ವಿತೀಯ, ವಿವಾದಾತೀೀತ ಹಕ್ಕುದಾರರಾಗಿದ್ದೆವು. ನಂತರ ವಿದೇಶಿಯರು ನಮ್ಮ ಮೇಲೆ ಅಕ್ರಮಣ ನಡೆಸಿದರು.. ಆರ್ಯನ್ನರು ಮತ್ತು ಹಿಂದೂಗಳು ಒಂದೇ.. '' ಎಂದು ಬರೆಯುತ್ತಾರೆ. ಇದು ಆರೆಸ್ಸೆಸ್‌ನ ನಿಲುವು ಸಹ. ಆರೆಸ್ಸೆಸ್ ಸಂಘಟನೆಯು ಆಡಳಿತದಲ್ಲಿರುವ ಬಿಜೆಪಿಯ ಮೂಲಕ ಸಾರ್ವಜನಿಕ ಶಿಕ್ಷಣ ಮತ್ತು ಸಾಂಸ್ಕೃತಿಕ ಮತ್ತು ಇತಿಹಾಸ ಸಂಶೋಧನೆಯ ಸಂಸ್ಥೆಗಳನ್ನು ಬಳಸಿಕೊಂಡು ಆರ್ಯನ್ ಮೂಲ ನಿವಾಸಿಗಳು ಮತ್ತು ಚಾತುರ್ವರ್ಣ ಪದ್ಧತಿಯನ್ನು ಪಠ್ಯಗಳನ್ನಾಗಿ ರಚಿಸಲು ಮುಂದಾಗಿದೆ

'ಪುರಾತತ್ವ ಶಾಸ್ತ್ರದ ಸಾಕ್ಷಿಗಳು ಮತ್ತು ಭಾರತದ ಪ್ರಜಾಪ್ರಭುತ್ವದ ಬೇರುಗಳು' ಎನ್ನುವ ವಿಷಯದ ಮೂಲಕ ಆರೆಸ್ಸೆಸ್ ಸಿದ್ಧಾಂತವನ್ನು ಶೈಕ್ಷಣಿಕ ವಲಯದಲ್ಲಿ ಜಾರಿಗೊಳಿಸಲು ಮುಂದಾಗಿರುವ ಐಸಿಎಚ್‌ಆರ್ ಸಂಸ್ಥೆ ಮತ್ತು ಅದಕ್ಕೆ ಬೆಂಬಲ ಕೊಡುತ್ತಿರುವ ಯುಜಿಸಿ ಇಡೀ ಇತಿಹಾಸದ ಅಧ್ಯಯನವನ್ನೇ ಮತೀಯವಾದೀಕರಣ ಮತ್ತು ಬ್ರಾಹ್ಮಣೀಕರಣಗೊಳಿಸುತ್ತಿದೆ. ಆದರೆ ಈ ಸುಳ್ಳುಗಳು ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಅಧಿಕೃತವಾಗುವ ಅಪಾಯವಿರುವುದರಿಂದ ಸತ್ಯವನ್ನು ಮತ್ತೆ ಮತ್ತೆ ನಿರೂಪಿಸುವ ಹೊಣೆಗಾರಿಕೆ ಇಲ್ಲಿನ ಪ್ರಜ್ಞಾವಂತರ ಮೇಲಿದೆ. ವೈಜ್ಞಾನಿಕ ಸಂಶೋಧನೆಗಳು ಮಂಡಿಸುವ ಸಾಕ್ಷಿ, ಪುರಾವೆಗಳು, ತಳಿ ವಿಜ್ಞಾನ ಮತ್ತು ವಂಶವಾಹಿನಿ ಅಧ್ಯಯನದ ಮೂಲಕ ಈ ವಲಸೆ ಪ್ರಕ್ರಿಯೆಯನ್ನು, ಆರ್ಯನ್ನರು ವಿದೇಶಿಯರು ಎನ್ನುವ ಸತ್ಯವನ್ನು ಕೂಲಂಕಷವಾಗಿ ಅರಿಯಲು ಪ್ರಯತ್ನಿಸೋಣ.

ಸತ್ಯ: 

1920ರ ದಶಕದಲ್ಲಿ ದಯಾ ರಾಮನ್ ಸಾಹ್ನಿ ಮತ್ತು ಆರ್. ಡಿ. ಬ್ಯಾನರ್ಜಿ ಎನ್ನುವ ಪುರಾತತ್ವ ಶಾಸ್ತ್ರಜ್ಞರು ಮರೆತು ಹೋದ ಕಬ್ಬಿಣ ಯುಗದ ಕಾಲದ ಹರಪ್ಪನಾಗರಿಕತೆ ಮತ್ತು ಇಂಡಸ್ ಕಣಿವೆ ನಾಗರಿಕತೆಯನ್ನು ಪತ್ತೆ ಹಚ್ಚಿದರು. ಸಾವಿರಾರು ವರ್ಷಗಳ ಕಾಲ ಜೀವಿಸಿದ್ದ ಈ ನಾಗರಿಕತೆಗಳು ಹಿಂಸಾತ್ಮಕ ಆಕ್ರಮಣದಿಂದ ನಶಿಸಿ ಹೋದವು. ಸಾಹ್ನಿ ಮತ್ತು ಬ್ಯಾನರ್ಜಿಯವರ ಸಂಶೋಧನೆ ಆಧರಿಸಿ ಹೇಳುವುದಾದರೆ ಈ ಹಿಂಸಾತ್ಮಕ ಆಕ್ರಮಣ ನಡೆಸಿದವರು ಆರ್ಯನ್ನರು ಎಂದು ಸಹ ಸಾಬೀತಾಗಿದೆ. ಜರ್ಮನ್ ತತ್ವಶಾಸ್ತ್ರಜ್ಞ, ಸಂಸ್ಕೃತ ಪಂಡಿತ ಮ್ಯಾಕ್ಸ್‌ಮುಲ್ಲರ್ 'ಆರಂಭದ ವೇದ ಕಾಲದ ಜನರು ಅರೆ-ಅಲೆಮಾರಿಗಳು, ಅವರು ವಾಯುವ್ಯ ದಿಕ್ಕಿನಿಂದ ಭಾರತವನ್ನು ಪ್ರವೇಶಿಸಿದರು ಮತ್ತು ಇಲ್ಲಿನ ಮೂಲ ನಿವಾಸಿಗಳೊಂದಿಗೆ ಯುದ್ಧ ನಡೆಸಿದರು' ಎಂದು ಬರೆಯುತ್ತಾರೆ. ಋಗ್ವೇದದಲ್ಲಿ ಬರುವ ಇಂದ್ರನ ಮತ್ತೊಂದು ಹೆಸರು ಪುರಂದರ, ಅಂದರೆ ನಗರಗಳನ್ನು ನಾಶ ಮಾಡುವವ ಎಂದರ್ಥ. ಸೆಪ್ಟಂಬರ್ 2019ರ ಮೊದಲ ವಾರದಲ್ಲಿ 'ಸೆಲ್ ಮತ್ತು ಸೈನ್ಸ್' ಎನ್ನುವ ವೈಜ್ಞಾನಿಕ, ಪರಿಸರ ಜರ್ನಲ್‌ಗಳಲ್ಲಿ ಪ್ರಕಟವಾದ ಸಂಶೋಧನಾತ್ಮಕ ಬರಹಗಳ ಪ್ರಕಾರ 'ಇಂಡಸ್ ಕಣಿವೆಯ ನಾಗರಿಕತೆಯು ವೇದ ಪೂರ್ವದ್ದು ಮತ್ತು ಈ ನಾಗರಿಕತೆ ಕ್ಷೀಣಿಸಿದ ಕಾಲಘಟ್ಟದಲ್ಲಿ ವಾಯುವ್ಯ ದಿಕ್ಕಿನಿಂದ ಬಂದ ವಲಸೆಗಾರರಿಂದ ಸಂಸ್ಕೃತ ಭಾರತವನ್ನು ಪ್ರವೇಶಿಸಿತು' ಎಂದು ಹೇಳಿದ್ದಾರೆ.

ಈ ಸಂಶೋಧನೆಯ ಅನುಸಾರ ವೇದಗಳ ಕಾಲವು ಗರಿಷ್ಠ 3,500 ವರ್ಷಗಳಷ್ಟು ಹಳೆಯದು. ಈ ಸಂಶೋಧನೆಯು ಹಿಂದುತ್ವವಾದಿಗಳು ಪ್ರತಿಪಾದಿಸುವ ವೇದ ಕಾಲವು 5,000 ವರ್ಷಗಳಷ್ಟು ಹಳೆಯದು ಎನ್ನುವ ಸಿದ್ಧಾಂತವನ್ನು ತಿರಸ್ಕರಿಸುತ್ತದೆ. ಹರ್ಯಾಣದ ರಾಖೀಗರಿಯಲ್ಲಿ ದೊರೆತ ಇಂಡಸ್ ಕಣಿವೆಯ ನಾಗರಿಕತೆಯ ಅನುವಂಶಿಕ ರಚನೆಯನ್ನು ಅಧ್ಯಯನ ನಡೆಸಿದ ಪುರಾತತ್ವ ಶಾಸ್ತ್ರಜ್ಞರು 'ಹರಪ್ಪ ನಾಗರಿಕತೆಯ ಆನುವಂಶಿಕ ರಚನೆಯಲ್ಲಿ ಪಶುಪಾಲಕರ ಪೂರ್ವಜರ ಅಥವಾ ಇರಾನಿನ ರೈತರ ವಂಶವಾಹಿನಿ ಕಂಡು ಬರುತ್ತಿಲ್ಲ' ಎಂದು ವಿವರಿಸಿದ್ದಾರೆ. ಗಿರೀಶ್ ಸಹಾನೆಯವರು ''ಈ ಸಂಶೋದನೆಯಿಂದ ಕೃಷಿ ಪದ್ಧತಿಯು ಜ್ಞಾನ ಪ್ರಸಾರದ ಮೂಲಕ ಬಂದಿರಬಹುದು ಅಥವಾ ಇಲ್ಲಿನ ಮೂಲನಿವಾಸಿಗಳೇ ಕಂಡುಹಿಡಿದಿರಬಹುದು. ಆದರೆ ವಲಸೆಗಾರರ ಮೂಲಕ ಈ ಖಂಡಕ್ಕೆ ಪ್ರವೇಶಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಇಂಡಸ್ ಕಣಿವೆಯಲ್ಲಿ ಸ್ಟೆಪ್ಪಿಪಶುಪಾಲಕರ ಪೂರ್ವಜರ ವಂಶವಾಹಿನಿ ತಳಿಗಳು ಇಲ್ಲದಿರುವುದು ಸಹ ಮುಖ್ಯವಾಗುತ್ತದೆ. ಹಾಗಿದ್ದ ಪಕ್ಷದಲ್ಲಿ ಈ ಸ್ಟೆಪ್ಪಿಪಶುಪಾಲಕರ ವಂಶವಾಹಿಯು ಯಾವಾಗಿನಿಂದ ಭಾರತದಲ್ಲಿ ಪ್ರತ್ಯಕ್ಷವಾಯಿತು? ಸೈನ್ಸ್ ಜರ್ನಲ್‌ನಲ್ಲಿ ಪ್ರಕಟಗೊಂಡ ಎರಡನೇ ಸಂಶೋಧನೆಯ ಪ್ರಕಾರ ''ದಕ್ಷಿಣ ಏಶ್ಯದ ಸ್ವಾಟ್ ಕಣಿವೆಯ ಉತ್ತರ ಧ್ರುವದ ಪ್ರಾಚೀನರ ಕುರಿತಾದ ದತ್ತಾಂಶವನ್ನು ಅಧ್ಯಯನ ಮಾಡಿದಾಗ ಎರಡು ಸಾವಿರ ವರ್ಷಗಳ ಹಿಂದೆ ಸ್ಟೆಪ್ಪಿ ಪೂರ್ವಜರು ದಕ್ಷಿಣದ ಒಳಭಾಗದಲ್ಲಿ ಪ್ರವೇಶಿಸಿರುವುದು ಖಾತರಿಯಾಗಿದೆ.

ದಕ್ಷಿಣ ಏಶ್ಯದ ಸ್ಟೆಪ್ಪಿ ಪೂರ್ವಜರ ವಂಶವಾಹಿನಿಯು ಕಬ್ಬಿಣ ಯುಗದ ಪೂರ್ವ ಯುರೋಪಿನವರೊಂದಿಗೆ ಸಾಮ್ಯತೆ ಹೊಂದಿರುವುದು ಕಂಡುಬರುತ್ತದೆ'' ಎಂದು ಬರೆಯುತ್ತಾರೆ. ಅಂದರೆ ಕ್ರಿ.ಪೂ. 2000-ಕ್ರಿ.ಪೂ.1500ರ ಕಾಲಘಟ್ಟದಲ್ಲಿ ಸಂಸ್ಕೃತ ಮಾತನಾಡುವ ಸ್ಟೆಪ್ಪಿಪಶುಪಾಲಕರು ದಕ್ಷಿಣ ಏಶ್ಯ ಖಂಡವನ್ನು ಪ್ರವೇಶಿರುವುದು ಖಚಿತವಾಗುತ್ತದೆ. 'ಔಟ್ ಆಫ್ ಆಫ್ರಿಕಾ' ಸಂಶೋಧನೆಯು ಸದ್ಯಕ್ಕೆ ಲಭ್ಯವಿರುವ ಅಧಿಕೃತ ಆಕರ ಅಧ್ಯಯನವಾಗಿದೆ. ಇದರ ಮುಂದುವರಿದ ಭಾಗವಾಗಿ ಹೊಸ ತಳಿ ವಿಜ್ಞಾನದ ಸಂಶೋಧನೆಯಿಂದ ದೊರಕಿದ ದಾಖಲೆಗಳ ಪ್ರಕಾರ ಆರ್ಯನ್ನರು ಪೂರ್ವ ಯುರೋಪಿನಿಂದ ಬಂದ ವಲಸಿಗರು, ಕುದುರೆಗಳು ಮತ್ತು ರಥಗಳ ಪಳಯುಳಿಕೆಗಳು ಮತ್ತು ಮೂಲವು ಪೂರ್ವ ಯುರೋಪ್ ಮತ್ತು ಮಧ್ಯ ಏಶ್ಯದಲ್ಲಿ ಪತ್ತೆಯಾಗಿದೆ. ಇದಕ್ಕೆ ದಕ್ಷಿಣ ಏಶ್ಯದ ಮೂಲವಲ್ಲ, ಕ್ರಿ.ಪೂ. 2000 ವರ್ಷಗಳ ನಂತರ ವಾಯುವ್ಯ ಭಾಗದಿಂದ ವಲಸೆ ಪ್ರಾರಂಭವಾಗಿದೆ ಎಂದು ಸಾಬೀತಾಗಿದೆ. ಇದನ್ನು ಅಲ್ಲಗಳೆಯಲು ಬಲಪಂಥೀಯ ಇತಿಹಾಸಕಾರರು, ಪುರಾತನಶಾಸ್ತ್ರಜ್ಞರು ಮತ್ತು ಸಂಘ ಪರಿವಾರವು ಹಿಂದುತ್ವ ಭಾವುಕತೆಯನ್ನು ಉಪಯೋಗಿಸಿಕೊಂಡು 'ಔಟ್ ಆಫ್ ಇಂಡಿಯಾ' ಎನ್ನುವ ಸುಳ್ಳು ಪುರಾಣವನ್ನು ಪ್ರಚಾರ ಮಾಡಿತು.

ಈ ವಂಶವಾಹಿನಿ ಮತ್ತು ತಳಿಶಾಸ್ತ್ರವನ್ನು ಆಳವಾಗಿ ಸಂಶೋಧನೆ ಮಾಡಿದ ಟೋನಿ ಜೋಸೆಫ್ ಬರೆದಿರುವ 'ಅರ್ಲಿ ಇಂಡಿಯನ್ಸ್' ಪುಸ್ತಕವು ಆರ್ಯನ್ ಸಿದ್ಧಾಂತಕ್ಕೆ ಸಮಗ್ರ ಉತ್ತರವನ್ನು ಕೊಡುತ್ತದೆ. ಒಟ್ಟು ಸಾರಾಂಶದಲ್ಲಿ ''ಪಿಜ್ಜಾ ದೇಶವನ್ನು ಉದಾಹರಣೆಯಾಗಿ ವಿವರಿಸುವುದಾದರೆ 'ಔಟ್ ಆಫ್ ಆಪ್ರಿಕಾ'ದಿಂದ 65,000 ವಷಗಳ ಹಿಂದೆ ವಲಸೆ ಬಂದ ಮೊದಲ ಭಾರತೀಯರು ಪಿಜ್ಜಾದ ಮೂಲ ಧಾತು ಇದ್ದಂತೆ. ನಂತರ 9,000 ವರ್ಷಗಳ ಹಿಂದೆ ಪಶ್ಚಿಮ ಏಶ್ಯದಿಂದ ಬಂದ ವಲಸಿಗರು ಮತ್ತು ಮೊದಲ ಭಾರತೀಯರ ಮಿಶ್ರಣವಾದ ಹರಪ್ಪನ್ನರು ಈ ಪಿಜ್ಜಾ ದೇಶದ ಗೊಜ್ಜು ಇದ್ದಂತೆ. ನಂತರ ಕ್ರಿ.ಪೂ. 2,000-ಕ್ರಿ.ಪೂ. 1,000 ಕಾಲಘಟ್ಟದಲ್ಲಿ (3,000-4,000 ವರ್ಷಗಳ ಹಿಂದೆ) ಮಧ್ಯ ಏಶ್ಯದ ಸ್ಟೆಪ್ಪಿ ಭೂಭಾಗದಿಂದ ಬಂದ ಆರ್ಯನ್ನರು ಗಿಣ್ಣು ಇದ್ದಂತೆ.'' ಎಂದು ವಿವರಿಸುತ್ತಾರೆ. ಆರ್ಯನ್ನರು ಭಾರತದ ಉತ್ತರ ಭಾಗದಲ್ಲಿ ನೆಲೆ ನಿಂತರು. ಇವರು ಹರಪ್ಪ ನಾಗರಿಕತೆಯ ಅವಸಾನದ ನಂತರ ಬಂದವರು. ಹರಪ್ಪ ನಾಗರಿಕತೆಯು ವೇದ ಪೂರ್ವ ಕಾಲದ್ದು. ಅಂಬೇಡ್ಕರ್ ಅವರು 'ನಾಗ ಮತ್ತು ಆರ್ಯನ್ನರು ಎರಡು ಭಿನ್ನ ಜನಾಂಗಗಳು... ಪ್ರಸಕ್ತ ಭಾರತದಲ್ಲಿ ಕುಲಗಳು ಮತ್ತು ಜಾತಿಗಳು ವರ್ಣಸಂಕರಗೊಂಡಿವೆ... ಋಗ್ವೇದದಲ್ಲಿ ಆರ್ಯನ್‌ರ ದೇವತೆ ಇಂದ್ರನ ಶತೃ ಅಹಿ ವಿತ್ರ ರೂಪದಲ್ಲಿ ನಾಗ ದೈವವನ್ನು ಪರಿಚಯಿಸಲಾಗುತ್ತದೆ. ಈ ಅಂಶವು ಆರಂಭದ ವೇದ ಸಾಹಿತ್ಯದಲ್ಲಿ ಪ್ರಸ್ತಾವಗೊಂಡಿರಲಿಲ್ಲ... ನಾಗ ಅತಿ ಪ್ರಾಚೀನ ಸಮುದಾಯ ಮತ್ತು ವೇದದಲ್ಲಿ ವಿವರಿಸಿದಂತೆ ಅವರು ಅನಾಗರಿಕರಲ್ಲ. ಇತಿಹಾಸದ ದಾಖಲೆಗಳ ಪ್ರಕಾರ ಮಹಾರಾಷ್ಟ್ರದವರಾದ ನಾಗ ಸಮುದಾಯ ಭಾರತದ ಬಹು ಭಾಗದಲ್ಲಿ ಆಡಳಿತ ನಡೆಸಿದ್ದಾರೆ... ಉತ್ತರದ ನಾಗ ಸಮುದಾಯ ಮತ್ತು ದಕ್ಷಿಣದ ದ್ರಾವಿಡ ಸಮುದಾಯ ಎರಡರ ಮೂಲವೂ ಒಂದೇ... ದ್ರಾವಿಡರು ಮತ್ತು ನಾಗ ಜನಾಂಗದವರ ಪೂರ್ವಜರು ಹರಪ್ಪನ್ನರು...'' ಎಂದು ಬರೆಯುತ್ತಾರೆ. (ಅಂಬೇಡ್ಕರ್ ಬರಹ ಮತ್ತು ಭಾಷಣಗಳು ಸಂಪುಟ 7, ಅಸ್ಪಶ್ಯರು ಯಾರು? ಯಾಕೆ ಅಸ್ಪಶ್ಯರಾದರು? -ಪುಸ್ತಕ)

ಸಾಹಿತ್ಯದಲ್ಲಿ ಲೋಕತಾಂತ್ರಿಕ ಪರಂಪರೆಯ ಉದಾಹರಣೆಗಳು, ಋಗ್ವೇದ ಮತ್ತು ಭಾರತೀಯ ಲೋಕತಂತ್ರ ಪರಂಪರೆ ಇತ್ಯಾದಿ ವಿಷಯಗಳ ಜೊತೆಗೆ ಖಾಪ್ ಪಂಚಾಯತ್ ಮತ್ತು ಲೋಕತಂತ್ರ ಪರಂಪರೆ ಕುರಿತು ಸಹ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಪೋಷಿಸುವ, ಅಂತರ್ಜಾತಿ ವಿವಾಹವಾಗುವ ತಮ್ಮ ಮಕ್ಕಳನ್ನು ಕೊಲೆ ಮಾಡಲು ಫತ್ವ ಹೊರಡಿಸುವ ಈ ಖಾಪ್ ಪಂಚಾಯತನ್ನು ಭಾರತದ ಪ್ರಜಾಪ್ರಭುತ್ವದ ಹೆಸರಿನಲ್ಲಿ ಬೋಧಿಸಲು ಮುಂದಾಗಿರುವುದು ಮುಂಬರುವ ಕರಾಳ ದಿನಗಳಿಗೆ ಮುನ್ಸೂಚನೆಯಂತಿದೆ. ಸಂವಿಧಾನದ ಹೆಸರಿನಲ್ಲಿ ಈ ಬಗೆಯ ಜಾತಿ ಶ್ರೇಷ್ಠತೆಯ ವೈಭವೀಕರಣಕ್ಕೆ ಮುಂದಾಗಿರುವ ಕೇಂದ್ರ ಶಿಕ್ಷಣ ಇಲಾಖೆ ಆ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ನಾಶಪಡಿಸುತ್ತಿದೆ. ಭಾರತದ ಸಮಾಜದೊಳಗಿನ ಚಾತುರ್ವರ್ಣ ಪದ್ಧತಿ ಮತ್ತು ಶ್ರೇಣೀಕೃತ ಜಾತಿ ವ್ಯವಸ್ಥೆಯ ಕಾರಣಕ್ಕೆ ಇಲ್ಲಿ ಅಸ್ಪಶ್ಯತೆ ಮತ್ತು ಜಾತಿ ಪ್ರತ್ಯೇಕತೆ, ತಾರತಮ್ಯವನ್ನು ಆಚರಿಸಲಾಗುತ್ತಿದೆ. ಆದರೆ ಈ ವಾಸ್ತವವನ್ನು ಮುಚ್ಚಿಡಲು ಪ್ರಯತ್ನಿಸುತ್ತಿರುವ ಸಂಘ ಪರಿವಾರ ವಿದೇಶಿಯರ ದಾಳಿಯಿಂದ ಇಲ್ಲಿನ ಜಾತಿ ಪದ್ಧತಿ ಹುಟ್ಟಿಕೊಂಡಿದೆ ಎನ್ನುವ ಸಿದ್ಧಾಂತವನ್ನು ಸಂವಿಧಾನದ ಹೆಸರಿನಲ್ಲಿ ಬಿತ್ತಲು ಮುಂದಾಗಿದೆ. ಕೇವಲ 75 ವರ್ಷಗಳ ಹಿಂದೆ ಪ್ರಜಾಪ್ರಭುತ್ವ ಜಾರಿಗೊಂಡ ಈ ದೇಶದಲ್ಲಿ 'ಭಾರತ ಪ್ರಜಾಪ್ರಭುತ್ವದ ತಾಯಿ' ಎನ್ನುವ ಭಾವನಾತ್ಮಕ ಅಂಶವನ್ನು ಬಳಸಿಕೊಂಡು 'ಭಾರತೀಯತ್ವ ಆಡಳಿತ ಮಾದರಿ' ಎನ್ನುವ ಊಹಾತ್ಮಕ ಕಲ್ಪನೆಯನ್ನು ತೇಲಿ ಬಿಡಲಾಗುತ್ತಿದೆ. 15, ಆಗಸ್ಟ್ 1947ರ ನಂತರ ಭಾರತ ಪ್ರಜಾಪ್ರಭುತ್ವ ದೇಶವಾಯಿತು. 73 ವರ್ಷಗಳ ಹಿಂದೆ ಸಂವಿಧಾನ ಜಾರಿಗೊಳಿಸಲಾಯಿತು.

ಆದರೆ ಐಸಿಎಚ್‌ಆರ್ ಸಂಸ್ಥೆಯು ಪ್ರಜಾಪ್ರಭುತ್ವದ ಬೇರುಗಳನ್ನು ಪ್ರಾಚೀನ ಭಾರತದಲ್ಲಿ ಹುಡುಕುತ್ತದೆೆ. ಗುರುಕುಲ ಪದ್ಧತಿ, ಚಾತುರ್ವರ್ಣ ವ್ಯವಸ್ಥೆ ಮತ್ತು ರಾಜಾಡಳಿತದಲ್ಲಿ ಪ್ರಜಾಪ್ರಭುತ್ವದ ಬೇರುಗಳಿದ್ದವು ಎನ್ನುವ ಸುಳ್ಳುಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತಲು ಹೊರಟಿದೆ. ಅಂಬೇಡ್ಕರ್ ಅವರು 'ಪ್ರಜಾಪ್ರಭುತ್ವವೆಂದರೆ ಕೇವಲ ಸರಕಾರದ ರಚನೆಯಲ್ಲ, ಎಲ್ಲರನ್ನೂ ಒಳಗೊಳ್ಳುವ, ಎಲ್ಲರ ಹಕ್ಕುಗಳನ್ನು ರಕ್ಷಿಸುವ, ಪ್ರತಿಯೊಬ್ಬರ ಘನತೆ ಕಾಪಾಡುವ ಮನಸ್ಥಿತಿಯ ಸಮಾಜವನ್ನು ಪ್ರಜಾಪ್ರಭುತ್ವ ಎಂದು ಕರೆಯಬಹುದು' ಎಂದು ವಿವರಿಸುತ್ತಾರೆ. ಆದರೆ ಜಾತಿ ತಾರತಮ್ಯವನ್ನು ಜಾರಿಯಲ್ಲಿಟ್ಟು ದ್ವೇಷದ ಭಾವನೆಗಳನ್ನು ಬಿತ್ತಿ ಆ ಮೂಲಕ ಚುನಾವಣೆಗಳಲ್ಲಿ ಗೆಲ್ಲುವುದನ್ನು ಮಾತ್ರ ಪ್ರಜಾಪ್ರಭುತ್ವ ಎಂಬಂತಹ ವಾತಾವರಣ ನಿರ್ಮಿಸಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರವು ಮತ್ತು ಆಡಳಿತ, ಅಂಬೇಡ್ಕರ್ ಚಿಂತನೆಗಳಿಗೆ ಸಂಪೂರ್ಣ ವಿರುದ್ಧವಾಗಿವೆ. ಇವರ ನಿಯಂತ್ರಣದಲ್ಲಿರುವ ಯುಜಿಸಿಯ ಈ ಲೋಕತಂತ್ರ ಜನನಿ ಉಪನ್ಯಾಸ ಮಾಲಿಕೆಯು 'ಪ್ರಜಾಪ್ರಭುತ್ವದ ತಾಯಿ' ಎನ್ನುವ ಹುಸಿ ಆಚರಣೆಯ ನೆಪದಲ್ಲಿ ಇವ ನಮ್ಮವ, ಇವ ನಮ್ಮವ ಎನ್ನುವ ತತ್ವವನ್ನೇ ಧಿಕ್ಕರಿಸುವ, ಪ್ರಜೆಗಳ ಹಕ್ಕುಗಳನ್ನು ಮೊಟಕುಗೊಳಿಸುವ ಸಿದ್ಧಾಂತಗಳನ್ನು ಜಾರಿಗೊಳಿಸುತ್ತಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top