-

ಭಾರತದ ಜಿ20 ಅಧ್ಯಕ್ಷತೆ: ಅವಕಾಶಗಳು ಮತ್ತು ಸವಾಲುಗಳು

-

ಜಾಗತಿಕ ದಕ್ಷಿಣದಲ್ಲಿ ತನ್ನ ನಾಯಕತ್ವವನ್ನು ಪ್ರದರ್ಶಿಸಲು ಭಾರತಕ್ಕೆ ಇದು ಒಂದು ಅವಕಾಶ ಮತ್ತು ಸವಾಲಾಗಿದೆ. ಏಕೆಂದರೆ, ಮುಂದಿನ ಒಂದು ವರ್ಷದಲ್ಲಿ ಭಾರತೀಯ ನಾಯಕತ್ವವು ತನ್ನ ರಾಜತಾಂತ್ರಿಕ ಕೌಶಲ್ಯಗಳನ್ನು ಬಳಸಿಕೊಂಡು ಜಿ20 ಗುಂಪಿನಲ್ಲಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ತನ್ನೊಟ್ಟಿಗೆ ಸೇರಿಸಿಕೊಂಡು ಉಕ್ರೇನ್ ಯುದ್ಧ ಮತ್ತು ಪ್ರಪಂಚದ ಮೇಲೆ ಅದರ ಪ್ರಭಾವದಿಂದಾಗಿರುವ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಬೇಕಾಗುತ್ತದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಆಗುತ್ತಿರುವ ಆರ್ಥಿಕ ಹಿಂಜರಿತ(ರಿಸೆಷನ್,) ಹವಾಮಾನ ಬದಲಾವಣೆ ಇತ್ಯಾದಿ ಗಂಭೀರ ಪರಿಣಾಮಗಳನ್ನು ಎದುರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಭಾರತವು ಅರ್ಥಪೂರ್ಣ ಯೋಜನೆಗಳನ್ನು ಅನುಸರಿಸಬೇಕಾಗುತ್ತದೆ.


ಇಂಡೋನೇಶ್ಯದ ಬಾಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿ20 ಶೃಂಗಸಭೆಯಲ್ಲಿ ಭಾರತ ಬಣದ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿದೆ. ಜಾಗತಿಕ ದಕ್ಷಿಣದಲ್ಲಿ ತನ್ನ ನಾಯಕತ್ವವನ್ನು ಪ್ರದರ್ಶಿಸಲು ಭಾರತಕ್ಕೆ ಇದು ಒಂದು ಅವಕಾಶ ಮತ್ತು ಸವಾಲಾಗಿದೆ. ಏಕೆಂದರೆ, ಮುಂದಿನ ಒಂದು ವರ್ಷದಲ್ಲಿ ಭಾರತೀಯ ನಾಯಕತ್ವವು ತನ್ನ ರಾಜತಾಂತ್ರಿಕ ಕೌಶಲ್ಯಗಳನ್ನು ಬಳಸಿಕೊಂಡು ಜಿ20 ಗುಂಪಿನಲ್ಲಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ತನ್ನೊಂದಿಗೆ ಸೇರಿಸಿಕೊಂಡು ಉಕ್ರೇನ್ ಯುದ್ಧ ಮತ್ತು ಪ್ರಪಂಚದ ಮೇಲೆ ಅದರ ಪ್ರಭಾವದಿಂದಾಗಿರುವ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಬೇಕಾಗುತ್ತದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಆಗುತ್ತಿರುವ ಆರ್ಥಿಕ ಹಿಂಜರಿತ(ರಿಸೆಷನ್,) ಹವಾಮಾನ ಬದಲಾವಣೆ ಇತ್ಯಾದಿ ಗಂಭೀರ ಪರಿಣಾಮಗಳನ್ನು ಎದುರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಭಾರತವು ಅರ್ಥಪೂರ್ಣ ಯೋಜನೆಗಳನ್ನು ಅನುಸರಿಸಬೇಕಾಗುತ್ತದೆ.

ಜಿ20ಯ ಸಂಕ್ಷಿಪ್ತ ಇತಿಹಾಸ:
 1999ರಲ್ಲಿ ಜಿ20 ಅಸ್ತಿತ್ವಕ್ಕೆ ಬಂದಾಗಿನಿಂದ ಅದು ಪಯಣಿಸಿದ ಹಾದಿಯನ್ನು ಸಂಕ್ಷಿಪ್ತವಾಗಿ ಅವಲೋಕಿಸೋಣ. ಜಿ20 ಅಭಿವೃದ್ಧಿ ಹೊಂದಿದ ಉತ್ತರ ಮತ್ತು ಅಭಿವೃದ್ಧಿಶೀಲ ದಕ್ಷಿಣ ದೇಶಗಳನ್ನು ಒಳಗೊಂಡಿರುವ ಒಂದು ವಿಶಿಷ್ಟ ಗುಂಪು/ಬಣ. ಆಸ್ಟ್ರೇಲಿಯಾ, ಕೆನಡಾ, ಇಯು, ಫ್ರಾನ್ಸ್, ಜರ್ಮನಿ, ಟರ್ಕಿ, ರಶ್ಯ, ಯುಕೆ, ಅಮೆರಿಕ ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಅರ್ಜೆಂಟೀನಾ, ಬ್ರೆಜಿಲ್, ಚೀನಾ, ಭಾರತ, ಮೆಕ್ಸಿಕೊ ಮುಂತಾದ ಮುಂದುವರಿಯುತ್ತಿರುವ ರಾಷ್ಟ್ರಗಳನ್ನು ಪ್ರತಿನಿಧಿಸುವ ಜಿ20 ಸದಸ್ಯರ ಗುಂಪು ಪ್ರಪಂಚದಲ್ಲಿ ವಿಶಿಷ್ಟವಾದುದ್ದು. ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಪ್ರತಿನಿಧಿಸುವ ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಸೌದಿ ಅರೇಬಿಯ ಸದಸ್ಯ ರಾಷ್ಟ್ರಗಳು ವಿವಿಧ ರಾಜಕೀಯ ವ್ಯವಸ್ಥೆಗಳು ಮತ್ತು ತಮ್ಮದೇ ಆದ ಸಾಂಸ್ಕೃತಿಕ ಅಸ್ಮಿತೆಗಳನ್ನು ಹೊಂದಿವೆ. ಗಮನಾರ್ಹ ವಿಷಯವೆಂದರೆ ಜಿ20 ಗುಂಪು ಜಾಗತಿಕ ಜಿಡಿಪಿಯ ಸುಮಾರು ಶೇ. 90, ಜಾಗತಿಕ ವ್ಯಾಪಾರದ ಸುಮಾರು ಶೇ. 80 ಮತ್ತು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಪ್ರತಿನಿಧಿಸುತ್ತದೆ.

1990ರ ದಶಕದಲ್ಲಿ ವಿಶ್ವದ ಹಲವಾರು ದೇಶಗಳು ಎದುರಿಸಿದ ಆರ್ಥಿಕ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ಜಿ20 ಗುಂಪನ್ನು ಸ್ಥಾಪಿಸಲಾಯಿತು. ಆದರೆ, ಆರ್ಥಿಕ ಮತ್ತು ಆಡಳಿತ ಸಂಬಂಧಿತ ವಿಷಯಗಳ ಕುರಿತು ಜಾಗತಿಕ ಮಾತುಕತೆಗಳಲ್ಲಿ ಗುಂಪಿಗೆ ಪ್ರತಿನಿಧಿತ್ವ ಸಿಕ್ಕಿರಲಿಲ್ಲ. ಪರಿಸ್ಥಿತಿಯನ್ನು ಸರಿಪಡಿಸಲು, ಡಿಸೆಂಬರ್ 1999ರಲ್ಲಿ, ಹಣಕಾಸು ಮಂತ್ರಿಗಳು ಮತ್ತು ಜಿ20ನ ಸೆಂಟ್ರಲ್ ಬ್ಯಾಂಕ್‌ಗಳ ಗವರ್ನರ್‌ಗಳು ಜರ್ಮನಿಯ ಬರ್ಲಿನ್‌ನಲ್ಲಿ ಆರ್ಥಿಕ ಸ್ಥಿರತೆಯನ್ನು ತರಲು ಹಾಗೂ ವಾಣಿಜ್ಯ ವಲಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಅನೌಪಚಾರಿಕ ಸಂವಾದಕ್ಕಾಗಿ ಭೇಟಿಯಾದರು. ಅಂದಿನಿಂದ, ಇಂತಹ ಸಭೆಗಳು ನಿಯಮಿತವಾಗಿ ನಡೆಯುತ್ತಿವೆ. 2008ರಲ್ಲಿ ಜಿ20 ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು, 2008 ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಅದ್ಯಕ್ಷರು/ ಪ್ರಧಾನ ಮಂತ್ರಿಗಳು ಪ್ರಥಮ ಬಾರಿಗೆ ಭಾಗವಹಿಸಿದರು. ನಾಯಕರು ಜಾಗತಿಕ ಆರ್ಥಿಕ ಸಮಸ್ಯೆಗಳು ಮತ್ತು ಆರ್ಥಿಕ ಬಿಕ್ಕಟ್ಟಿಗೆ ಕಾರಣಗಳನ್ನು ಚರ್ಚಿಸಿದರು. ಮೂರು ಸುತ್ತಿನ ಉದ್ದೇಶಗಳನ್ನು ಕೇಂದ್ರೀಕರಿಸಿದ ಕ್ರಿಯಾ ಯೋಜನೆಯನ್ನು ಕಾರ್ಯಗತಗೊಳಿಸಲು ಒಪ್ಪಿಕೊಂಡರು: ಎ)ಜಾಗತಿಕ ಬೆಳವಣಿಗೆಯನ್ನು ಮರುಸ್ಥಾಪಿಸುವುದು, ಬಿ) ಅಂತರ್‌ರಾಷ್ಟ್ರೀಯ ಹಣಕಾಸು ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಸಿ) ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನು ಸುಧಾರಿಸುವುದು. ನಿಜಕ್ಕೂ ಸೂಕ್ತವಾದ ಉದ್ದೇಶಗಳು. ಆದರೆ, ಅಂದಿನ ಬಿಕ್ಕಟ್ಟುಗಳನ್ನು ಎದುರಿಸಲು ಒಮ್ಮತ ಮೂಡಿಬರಲಿಲ್ಲ.

2009ರಲ್ಲಿ ಲಂಡನ್‌ನಲ್ಲಿ ನಡೆದ ಎರಡನೇ ಶೃಂಗಸಭೆಯು ಸಾಲ ಮತ್ತು ನಿಬಂಧನೆಗಳನ್ನು ಪುನಃಸ್ಥಾಪಿಸಲು 1.1 ಟ್ರಿಲಿಯನ್ ಡಾಲರ್‌ಗಳ ಉತ್ತೇಜಕ ಪ್ಯಾಕೇಜ್‌ಅನ್ನು ಘೋಷಿಸಿತು. ಹಣಕಾಸು ಸ್ಥಿರತೆ, ವೇದಿಕೆಯ ವಿಸ್ತರಣೆ ಮತ್ತು ಬ್ಯಾಂಕಿಂಗ್ ಮೇಲ್ವಿಚಾರಣೆಗಾಗಿ ಬಾಸೆಲ್ ಸಮಿತಿಯ ಸ್ಥಾಪನೆ, ರಕ್ಷಣಾತ್ಮಕ ಪ್ರವೃತ್ತಿಗಳ ವಿರುದ್ಧ ಬದ್ಧತೆಯ ಪುನರಾವರ್ತನೆ ಮತ್ತು ಸುಧಾರಣೆಗೆ ಪೂರಕವಾಗಿ ಬದ್ಧತೆ, ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸುಧಾರಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. 2009ರಲ್ಲಿ ಪಿಟ್ಸ್ ಬರ್ಗ್‌ನಲ್ಲಿ ನಡೆದ ಮೂರನೇ ಶೃಂಗಸಭೆಯು 21ನೇ ಶತಮಾನದಲ್ಲಿ ‘ಸಮತೋಲಿತ ಬೆಳವಣಿಗೆಗೆ’ ಸಂಬಂಧಿಸಿದಂತೆ ಜಿ20ಗೆ ಮಾರ್ಗದರ್ಶನ ನೀಡಲು ಹಾಗೂ ಅಂತರ್‌ರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ‘ಪ್ರೀಮಿಯಂ ಫೋರಂ’ನ ಸ್ಧಾಪನೆಗಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಅಭಿವೃದ್ಧಿಶೀಲ ರಾಷ್ಟ್ರಗಳ ಮತದಾನದ ಶಕ್ತಿಯನ್ನು ಐಎಂಎಫ್‌ನಲ್ಲಿ ಶೇ. 3 ಹೆಚ್ಚಿಸಲು ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ವಿಶ್ವ ಬ್ಯಾಂಕ್ ಮತ್ತು ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕುಗಳು ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸುವುದರ ಪರವಾಗಿ ನಿರ್ಧಾರಗಳನ್ನು ಪ್ರಕಟಿಸಲಾಯಿತು. ಜಿ20 ಇದುವರೆಗೆ 17 ಶೃಂಗಸಭೆಗಳನ್ನು, (ಬಾಲಿಯಲ್ಲಿ ನಡೆದ ಸಭೆಯೂ ಸೇರಿ) ನಡೆಸಿವೆ. ಈ ಶೃಂಗಸಭೆಗಳು, ಇತರ ವಿಷಯಗಳೂ ಸೇರಿದಂತೆ ‘ಸಿಯೋಲ್ ಒಮ್ಮತ ಅಭಿವೃದ್ಧಿ’ ಹಾಗೂ ಬಹು-ವರ್ಷದ ಕ್ರಿಯಾ ಯೋಜನೆಗಳ ರಚನೆಗೆ ದಾರಿ ಮಾಡಿಕೊಟ್ಟವು. ಸರಕುಗಳ ಬೆಲೆ ಏರಿಳಿತವನ್ನು ನಿಯಂತ್ರಿಸುವ ಮತ್ತು ಆಹಾರ ಭದ್ರತೆಯನ್ನು ಹೆಚ್ಚಿಸುವ ಬಗ್ಗೆಯೂ ನಿರ್ಧರಿಸಲಾಯಿತು. 2012ರ ಮೆಕ್ಸಿಕೋ ಶೃಂಗಸಭೆಯು ‘ಸುಸ್ಥಿರ ಅಭಿವೃದ್ಧಿ, ಹಸಿರು ಬೆಳವಣಿಗೆ’ ಮತ್ತು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಉತ್ತೇಜಿಸಲು ಕರೆ ನೀಡಿತು. ಬಾಲಿ ಶೃಂಗಸಭೆಯ ಪ್ರಕಟಣೆಯು ಈ ಕೆಳಗಿನ ವಿಷಯಗಳಿಗೆ ಒತ್ತು ನೀಡಿತು:

1) ಮುಂದುವರಿಯುತ್ತಿರುವ ಉಕ್ರೇನ್ ಯುದ್ಧವನ್ನು ಸಮಾಪ್ತಿಗೊಳಿಸಲು ಜಿ20 ಬಣವು ರಾಜತಾಂತ್ರಿಕ ಮತ್ತು ಸಂಧಾನ ಮಾರ್ಗವನ್ನು ಅನುಸರಿಸಲು ಆದ್ಯತೆ ನೀಡುವಂತೆ ಸೂಚಿಸಿತು. ಜೊತೆಯಲ್ಲಿಯೇ, ಶೃಂಗಸಭೆಯು ಅಂತರ್‌ರಾಷ್ಟ್ರೀಯ ಕಾನೂನು, ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಬಹುಪಕ್ಷೀಯ ವ್ಯವಸ್ಥೆಯನ್ನು ಎತ್ತಿಹಿಡಿಯಲು ಒತ್ತು ನೀಡಿತು. ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಅಥವಾ ಬೆದರಿಕೆಯು ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟಪಡಿಸಿತು. ಇಂದಿನ ಯುಗವು ಯುದ್ಧದಿಂದ ಕೂಡಿರಬಾರದು ಎಂಬ ಭಾರತದ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಸಭೆಯು ಪುನರುಚ್ಚರಿಸಿತು.

2) ಜಾಗತಿಕ ಆರ್ಥಿಕ ಸವಾಲುಗಳು ಹಾಗೂ ಅಮೆರಿಕ ಮತ್ತು ಯುರೋಪ್‌ನಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತದ ಬೆದರಿಕೆ ಮತ್ತು ಅಭಿವೃದ್ಧಿಶೀಲ ಜಗತ್ತಿನ ಮೇಲೆ ಆಗುವ ಅದರ ಪರಿಣಾಮಗಳನ್ನು ಅರಿಯುವಲ್ಲಿ ಶೃಂಗಸಭೆಯು ‘ಸ್ಪಷ್ಟ, ನಿಖರ, ತ್ವರಿತ ಹಾಗೂ ಅಗತ್ಯ’ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆಯನ್ನು ಒತ್ತಿಹೇಳಿತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಸಹಕಾರ ಮತ್ತು ಸಹಯೋಗದ ಮೂಲಕ ಸವಾಲುಗಳನ್ನು ಎದುರಿಸಲು ಕ್ರಮ ಜರುಗಿಸುವಂತೆ ಆಗ್ರಹಿಸಿತು. ಆದರೆ, ವಾಸ್ತವತೆಯನ್ನು ಗಮನಿಸಿದರೆ, ಅಪೇಕ್ಷಿತ ಫಲಿತಾಂಶಗಳನ್ನು ಸುಲಭವಾಗಿ ಕಂಡುಕೊಳ್ಳಲಾಗುವುದಿಲ್ಲ. ಜಿ 20 ಬಣದ ಮುಂದುವರಿದ ಮತ್ತು ಮುಂದುವರಿಯುತ್ತಿರುವ ಸದಸ್ಯ ರಾಷ್ಟ್ರಗಳಲ್ಲಿ ಕಂಡು ಬರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಎಲ್ಲರ ಒಳಿತಿಗಾಗಿ ಕೆಲಸ ಮಾಡುವ ಇಚ್ಛಾ ಶಕ್ತಿಯನ್ನು ಬೆಳಸಿಕೊಳ್ಳುವುದು ಅನಿವಾರ್ಯ. ಇಂಡೋನೇಶ್ಯ ನೀಡಿದ್ದ ‘‘ಒಟ್ಟಿಗೆ ಚೇತರಿಸಿಕೊಳ್ಳಿ, ಬಲಶಾಲಿಯಾಗಿ ಚೇತರಿಸಿಕೊಳ್ಳಿ’’ ಕರೆಯು ಮುಂಬರುವ ದಿನಗಳಲ್ಲಿ ಜಿ20ಯ ಮಾರ್ಗದರ್ಶಿ ತತ್ವವಾಗಬೇಕು.

3) ಬಾಲಿ ಶೃಂಗಸಭೆಯು ಸದಸ್ಯ ರಾಷ್ಟ್ರಗಳ ನಡುವೆ ವ್ಯಾಪಾರ ಮತ್ತು ಬಂಡವಾಳ ಹೂಡಿಕೆಗಳನ್ನು ಉತ್ತೇಜಿಸಲು ಹಾಗೂ ಆಹಾರ ಮತ್ತು ಇಂಧನ ಭದ್ರತೆಯನ್ನು ಉತ್ತೇಜಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿತು. ಆಫ್ರಿಕಾ ಖಂಡದಲ್ಲಿನ ಅನೇಕ ರಾಷ್ಟ್ರಗಳು ಕ್ಷಾಮ ಅಥವಾ ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿರುವ ಕಾರಣದಿಂದಾಗಿ ಆಹಾರ ಭದ್ರತೆಗೆ ಸಂಬಂಧಿಸಿದ ಕೆಲಸಗಳು ತೀವ್ರವಾಗಿ ನಡೆಯಬೇಕಿದೆ. ಈ ಪ್ರಯತ್ನದ ಭಾಗವಾಗಿ, ಜಿ20 ಯುನ್ ಸೆಕ್ರೆಟರಿ ಜನರಲ್‌ರವರ ಆಹಾರ ಭದ್ರತೆ ಮತ್ತು ಜಾಗತಿಕ ಬಿಕ್ಕಟ್ಟು ನಿವಾರಣಾ ಗುಂಪಿನೊಂದಿಗೆ ಸಹಯೋಗದಿಂದ ಕೆಲಸ ಮಾಡಬೇಕೆಂದು ಶೃಂಗ ಸಭೆಯು ಆಗ್ರಹಿಸಿತು.

4) ಸುಸ್ಥಿರ ಅಭಿವೃದ್ಧಿ ಗುರಿಗಳ (SDGs) ಸಾಧನೆಯನ್ನು ಬೆಂಬಲಿಸಲು ಖಾಸಗಿ ಹೂಡಿಕೆಗಳನ್ನು ಒಳಗೊಂಡಂತೆ ನೂತನ ಸಕಾರಾತ್ಮಕ ಹಣಕಾಸು ವಿಧಾನಗಳ ಮೂಲಕ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಸಾಕಷ್ಟು ಹೂಡಿಕೆಯನ್ನು ಖಚಿತಪಡಿಸಿಕೊಳ್ಳಲೂ ಕೂಡ ಕರೆ ನೀಡಿತು. ಖಾಸಗಿ ಹೂಡಿಕೆಗಳನ್ನು ತರುವಲ್ಲಿ ಸರಕಾರಗಳು ಖಾಸಗಿ ಕೈಗಾರಿಕೆಗಳ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಎಚ್ಚರಿಸಲಾಯಿತು.

5) ಅತಿ ಮುಖ್ಯವಾಗಿ, ಶೃಂಗಸಭೆಯು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಎನ್ನುವ 2050ರ ನೋಟವನ್ನು ಸಾಕಾರಗೊಳಿಸುವ ದೃಷ್ಟಿಯಿಂದ ಜಾಗತಿಕ ಜೀವವೈವಿಧ್ಯ ಚೌಕಟ್ಟನ್ನು (GBF) ಅಂತಿಮಗೊಳಿಸಲು ಹಾಗೂ ಅಳವಡಿಸಿಕೊಳ್ಳಲು ವಿಳಂಬ ನೀತಿಯನ್ನು ಅನುಸರಿಸದಂತೆ ಬಣದ ಶ್ರೀಮಂತ ಸದಸ್ಯರಿಗೆ ಮನವಿ ಮಾಡಿತು.

ಅವಕಾಶಗಳು ಮತ್ತು ಸವಾಲುಗಳು

ಶೃಂಗಸಭೆಯ ಮುಕ್ತಾಯದ ಅಧಿವೇಶನದಲ್ಲಿ, ಜಿ 20 ಅಧ್ಯಕ್ಷತೆಯ ಅಧಿಕಾರವನ್ನು ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಆರ್ಥಿಕ ಕುಸಿತ, ಆಹಾರ ಮತ್ತು ಇಂಧನ ಬೆಲೆಗಳು ಮತ್ತು ಕೋವಿಡ್‌ನ ದೀರ್ಘಾವಧಿಯ ದುಷ್ಪರಿಣಾಮಗಳೊಂದಿಗೆ ಹೋರಾಡುವ ಅನಿವಾರ್ಯತೆಯ ಬಗ್ಗೆ ಮಾತನಾಡಿದ್ದಾರೆ. ವಿಶ್ವವು ಜಿ20ಯನ್ನು ಭರವಸೆಯಿಂದ ನೋಡುತ್ತಿದೆ ಎಂದು ಹೇಳಿದ ಮೋದಿ, ಬಣದ ಅಧ್ಯಕ್ಷನಾಗಿ ಭಾರತ ಎಲ್ಲರನ್ನೊಳಗೊಂಡು, ಮಹತ್ವಾಕಾಂಕ್ಷೆಯಿಂದ ನಿರ್ಣಾಯಕ ಮತ್ತು ಕಾರ್ಯ-ಆಧಾರಿತ ರೀತಿಯಲ್ಲಿ ವರ್ತಿಸುವ ಭರವಸೆ ನೀಡಿದ್ದಾರೆ. ಜಿ20 ತನ್ನದೇ ಆದ ಶಾಶ್ವತ ಸಚಿವಾಲಯದ ಮೂಲಕ ಕಾರ್ಯನಿರ್ವಹಿಸುವುದಿಲ್ಲ. ಪ್ರಮುಖ ನಿರ್ಧಾರಗಳನ್ನು ಹಿಂದಿನ, ಪ್ರಸಕ್ತ ಮತ್ತು ಭವಿಷ್ಯದ ಅಧ್ಯಕ್ಷರನ್ನು ಒಳಗೊಂಡಿರುವ ಟ್ರಯೋಕಾ ತೆಗೆದುಕೊಳ್ಳುತ್ತದೆ. ಅವರ ಕೆಲಸದಲ್ಲಿ ಇತರ ಗುಂಪುಗಳೂ ಬೆಂಬಲ ನೀಡುತ್ತವೆ. ಇಂಡೋನೇಶ್ಯ ಹಿಂದಿನ ಅಧ್ಯಕ್ಷರಾಗಿ ಮತ್ತು ಬ್ರೆಝಿಲ್ ಭವಿಷ್ಯದ ಅಧ್ಯಕ್ಷರಾಗಿ ಭಾರತದ ನಾಯಕತ್ವದ ಟ್ರಯೋಕದಲ್ಲಿ ಒಮ್ಮತದಿಂದ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ. ಮೂರೂ ಸದಸ್ಯರು ಅಭಿವೃದ್ಧಿ ಹೊಂದುತ್ತಿರುವ ದಕ್ಷಿಣಕ್ಕೆ ಸೇರಿದ ದೇಶಗಳಾದ್ದರಿಂದ, ಭಾರತ ಒಮ್ಮತದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪೂರಕವಾಗಬಹುದು.

ಭಾರತದ ಮುಂದಿನ ಸವಾಲುಗಳು:
ಯುಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ, ರಶ್ಯ ಮತ್ತು ಉಕ್ರೇನ್ ಬಿಗಿ ನಿಲುವುಗಳನ್ನು ಹೊಂದಿವೆ; ಡಾನ್ಬಾಸ್ ಮತ್ತಿತರ ಪ್ರದೇಶದ ಮೇಲೆ ತನ್ನ ನಿಯಂತ್ರಣವನ್ನು ಬಿಟ್ಟುಕೊಡಲು ರಶ್ಯ ತಯಾರಿಲ್ಲ, ಉಕ್ರೇನ್ ರಶ್ಯ ವಶಪಡಿಸಿಕೊಂಡಿರುವ ತನ್ನ ಪ್ರದೇಶಗಳನ್ನು ಹಿಂಪಡೆಯಲು ಪ್ರತಿಜ್ಞೆ ಮಾಡಿದೆ. ಈ ಪರಿಸ್ಥಿತಿಯ ನಡುವೆಯೂ, ಯಾವುದಾದರೂ ದೇಶ ಉಭಯರನ್ನು ಸಂಧಾನ ಮಾರ್ಗಕ್ಕೆ ತರುವಲ್ಲಿ ಯಶಸ್ಸು ಸಾಧಿಸಬಹುದಾದರೆ, ಬಹುಶಃ ಅದು ಭಾರತಕ್ಕೆ ಮಾತ್ರ ಸಾಧ್ಯ. ಹಾಗಾಗಿ, ಭಾರತೀಯ ನಾಯಕತ್ವ (ವಿಶೇಷವಾಗಿ ವಿದೇಶಾಂಗ ಸಚಿವ ಜೈಶಂಕರ್) ಮಧ್ಯಸ್ಥಿಕೆ ಮಾರ್ಗವನ್ನು ಅನುಸರಿಸಲು, ರಶ್ಯ ಮತ್ತು ಉಕ್ರೇನಿಗೆ ರಾಜತಾಂತ್ರಿಕ ಸಂದೇಶವನ್ನು ರವಾನಿಸಲು ಇದು ಸಕಾಲ. ಉಕ್ರೇನ್‌ನಲ್ಲಿನ ಯುದ್ಧದಿಂದ ಉಂಟಾಗಿರುವ ಆಹಾರ ಮತ್ತು ರಸಗೊಬ್ಬರ ಪೂರೈಕೆಯ ಅಡಚಣೆಗಳನ್ನು ನಿವಾರಿಸುವಲ್ಲಿಯೂ ಭಾರತ ಪ್ರಮುಖ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತದ ನಾಯಕರು ಮುಂದುವರಿದ ದೇಶಗಳ ಸಹಕಾರವನ್ನು ಕೋರುವುದು ಅನಿವಾರ್ಯ. ಬಾಲಿ ಶೃಂಗಸಭೆಯಲ್ಲಿ ಮೋದಿ ಹೇಳಿದಂತೆ, ಇಂದಿನ ರಸಗೊಬ್ಬರ ಬಿಕ್ಕಟ್ಟು ನಾಳಿನ ಆಹಾರ ಬಿಕ್ಕಟ್ಟು. ಆಹಾರ ಪೂರೈಕೆಯನ್ನು ನಿರಂತರವಾಗಿ ಸಾಕಾರಗೊಳಿಸುವುದು ಭಾರತದ ಜಿ20 ನಾಯಕತ್ವದ ಆದ್ಯತೆಯಾಗಬೇಕು.

ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಉಂಟಾಗುತ್ತಿರುವ ಆರ್ಥಿಕ ಹಿಂಜರಿತದ (ರಿಸೆಷನ್) ಪರಿಣಾಮವನ್ನು ನಿವಾರಿಸುವುದೂ ಆದ್ಯತೆಯನ್ನು ಪಡೆಯಬೇಕಾಗಿದೆ. ಭಾರತದ ಪರಿಸ್ಥಿತಿ ಅಮೆರಿಕ ಮತ್ತು ಯೂರೋಪಿಯನ್ ಆರ್ಥಿಕತೆಗಳಿಗಿಂತ ತುಲನಾತ್ಮಕವಾಗಿ ಒಂದಿಷ್ಟು ಉತ್ತಮವಾಗಿದೆ. ಹಾಗಾಗಿ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಜಿ20 ಬಣದಲ್ಲಿ ಒಂದುಗೂಡಿಸಲು ಭಾರತದ ನಾಯಕತ್ವವು ಪ್ರಾಯಶಃ ಅನುಕೂಲಕರ ಸ್ಥಿತಿಯಲ್ಲಿದೆ. ಚೀನಾದ ಆರ್ಥಿಕತೆಯೂ ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಭಾರತ ಈ ನಿಟ್ಟಿನಲ್ಲಿ ಚೀನಾದೊಂದಿಗೆ ಕೆಲಸ ಮಾಡುವ ಸಾಧ್ಯತೆಗಳನ್ನು ಪರಿಗಣಿಸುವುದು ಸೂಕ್ತ. ಐಎಂಎಫ್, ಒಸಿಇಡಿ ಮತ್ತು ಡಬ್ಲೂಟಿಒನಂತಹ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯತಂತ್ರ ರೂಪಿಸುವುದಕ್ಕೆ ಭಾರತ ಆದ್ಯತೆ ನೀಡಬೇಕು. ಜಿ20 ಗುಂಪಿನಲ್ಲಿರುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ‘ಮೃದು ಸಾಲ’ (soft loans) ಮತ್ತು ಇತರ ಕ್ಷೇತ್ರಗಳಲ್ಲಿ ಸಹಕಾರವನ್ನು ಮೂಡಿಸುವುದರತ್ತವೂ ಭಾರತ ಗಮನಹರಿಸಬೇಕು. ಭಾರತದ ಆರ್ಥಿಕ ರಾಜತಾಂತ್ರಿಕತೆಯು ಸಾಮೂಹಿಕ ಆರ್ಥಿಕ ಒಳಿತು ಮತ್ತು ಸದಸ್ಯ ರಾಷ್ಟ್ರಗಳ ನಡುವೆ ಒಮ್ಮತವನ್ನು ಮೂಡಿಸಲು ನೀಲನಕ್ಷೆಯನ್ನು ತಯಾರಿಸಬೇಕಿದೆ.

ಹವಾಮಾನಕ್ಕೆ ಸಂಬಂಧಿಸಿದಂತೆ ಹಣಕಾಸನ್ನು ಒದಗಿಸುವುದು ಕೂಡ ಪ್ರಮುಖ ಕೆಲಸ. ಇದಕ್ಕೆ ಸಂಬಂಧಿಸಿದಂತೆ, ಭಾರತ ಜಿ20 ಬಣದ ಸಮೃದ್ಧ ರಾಷ್ಟ್ರಗಳೊಂದಿಗೆ ಶ್ರಮಿಸಬೇಕಾಗುತ್ತದೆ. ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಮಾರ್ಗಗಳ ಮೂಲಕ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ಹಣಕಾಸು, ತಂತ್ರಜ್ಞಾನ ಮತ್ತು ನೂತನ ಇಂಧನ ಮೂಲಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವರ್ಗಾಯಿಸುವುದಕ್ಕೆ ಒತ್ತಡ ಹೇರಬೇಕಾಗುತ್ತದೆ.
1ನೇ ಡಿಸೆಂಬರ್ 2022 ಮತ್ತು 30ನೇ ನವೆಂಬರ್ 2023ರ ನಡುವಿನ ತನ್ನ ಅಧ್ಯಕ್ಷೀಯ ಅವಧಿಯಲ್ಲಿ, ಭಾರತವು ಅಧಿಕಾರಿಗಳ ಮತ್ತು ಮಂತ್ರಿಗಳ ಮಟ್ಟದಲ್ಲಿ ಸುಮಾರು 200 ಸಭೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳನ್ನು ಹೊಂದಿದೆ. ಜಾಗತಿಕ ದಕ್ಷಿಣದಲ್ಲಿ (global south)ತನ್ನ ನಾಯಕತ್ವವನ್ನು ನಿಭಾಯಿಸಲು ಭಾರತಕ್ಕೆ ಇದು ಒಂದು ಮಹೋನ್ನತ ಅವಕಾಶ.

(ಲೇಖಕರು ರಾಜ್ಯಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾನಿಲಯ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top