-

ಈ ವಾರ

-

‘ಗಡಿ’ಬಿಡಿ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಗಂಭಿರ ಸ್ಥಿತಿ ಮುಟ್ಟತೊಡಗಿದೆ. ಈಚೆಗೆ, ಕರ್ನಾಟಕದೊಳಗಿನ ಮರಾಠಿ ಮಾತನಾಡುವ ಮಂದಿಗೆ ಕೆಲವು ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಮಹಾರಾಷ್ಟ್ರ ನಾಯಕರುಗಳು ಹೇಳಿಕೆ ಕೊಟ್ಟ ಬಳಿಕ, ಅದಕ್ಕೆ ಕರ್ನಾಟಕವೂ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರಿಂದ ಇದು ಮತ್ತೆ ಭುಗಿಲೆದ್ದಿದೆ. ಈ ನಡುವೆ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ್ ಹಾಗೂ ಶಂಭುರಾಜ್ ದೇಸಾಯಿ ಬೆಳಗಾವಿಗೆ ಬರಲು ತಯಾರಾಗಿರುವುದು ಬಿಕ್ಕಟ್ಟಿನ ಸನ್ನಿವೇಶಕ್ಕೆ ಎಡೆಮಾಡಿಕೊಡುವಂತಿದೆ. ಅದಕ್ಕೆಂದೇ, ಈ ತ್ವೇಷಮಯ ವಾತಾವರಣವಿರುವ ಹೊತ್ತಿನಲ್ಲಿ ಭೇಟಿ ಬೇಡ ಎಂಬ ಸಲಹೆಯನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಆದರೆ ಡಿಸೆಂಬರ್ 6ರಂದು ಬಂದೇ ತೀರುತ್ತೇವೆ ಎಂದು ಮಹಾರಾಷ್ಟ್ರ ಸಚಿವರು ಸವಾಲು ಹಾಕಿದ್ದಾರೆ. ತಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ಅವರೆಂದರೆ, ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ವಿವಾದವನ್ನು ಇನ್ನಷ್ಟು ರಾಜಕೀಯಗೊಳಿಸುವ ಮಹಾರಾಷ್ಟ್ರದ ಈ ‘ಗಡಿ’ಬಿಡಿ ಸಮರ್ಥನೀಯವಂತೂ ಅಲ್ಲ. ಆದರೆ, ಮರಾಠಿಗರ ದೃಷ್ಟಿಯಲ್ಲಿ ಹೀರೊಗಳಾಗುವ ಉದ್ದೇಶದ ಈ ಹಠ, ಪ್ರಚೋದನೆಗೆ ಕಾರಣವಾಗದಿದ್ದರೆ ಸಾಕು. ರಾಜಕೀಯ ಮೇಲಾಟಗಳು ಜನರ ನೆಮ್ಮದಿಯನ್ನು ಕದಡಬಾರದು, ಅಷ್ಟೆ.

ಇದೆಂಥ ಪರಿಷ್ಕರಣೆ?

ರಾಜ್ಯಾದ್ಯಂತ ಲಕ್ಷಾಂತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆಘಾತಕಾರಿ ವಿಚಾರ ಬಯಲಾಗಿದೆ. ಮತ್ತಿದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡುವಂಥ ಬೆಳವಣಿಗೆ. ಚಿಲುಮೆ ಎಂಬ ಎನ್‌ಜಿಒ ಮೂಲಕ ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಗರಣ ಹೊರಬಿದ್ದ ಬೆನ್ನಿಗೆ, ರಾಜ್ಯಾದ್ಯಂತ 5 ಲಕ್ಷಕ್ಕೂ ಅಧಿಕ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಮಾತ್ರವಲ್ಲದೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 92,516, ಉಡುಪಿಯಲ್ಲಿ 1 ಲಕ್ಷ, ಮೈಸೂರು ಜಿಲ್ಲೆಯಲ್ಲಿ 1,45,908 ಹೀಗೆ ಮತದಾರರ ಹೆಸರುಗಳನ್ನು ಕೈ ಬಿಡಲಾಗಿರುವ ಕುರಿತು ರಾಜ್ಯದ ವಿವಿಧ ಪಕ್ಷಗಳ ಮುಖಂಡರು ದಾಖಲೆ ಸಮೇತ ಆರೋಪಿಸಿದ್ದಾರೆ. ಬಿಜೆಪಿ ಶಾಸಕರಾಗಿರುವ ಅರವಿಂದ ಬೆಲ್ಲದ್ ಕೂಡ, ಮತದಾರರ ಹೆಸರುಗಳು ಕಾಣೆಯಾಗಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಮತದಾರರ ಮಾಹಿತಿ ಕಳವು ಪ್ರಕರಣ ಕೇವಲ ಬೆಂಗಳೂರಿಗೆ ಸೀಮಿತವಾದಂತಿಲ್ಲ. ರಾಮನಗರ, ಮಂಡ್ಯ, ಕಲಬುರ್ಗಿ ಸೇರಿದಂತೆ ಇತರ ಜಿಲ್ಲೆಗಳಿಗೂ ವ್ಯಾಪಿಸಿದೆ. ಇದನ್ನು ಬಹಳ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಮತದಾರರ ಹೆಸರು ಕಾಣೆಯಾಗಿರುವ ಆರೋಪಗಳು ತೀವ್ರಗೊಳ್ಳುತ್ತಿದ್ದಂತೆಯೇ ‘ಲೋಪಗಳನ್ನು ಸರಿಪಡಿಸಲು ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಮತದಾರರ ಮಾಹಿತಿ ಕಳವು ಪ್ರಕರಣ ನಡೆದ ಬೆನ್ನಲ್ಲೇ ಇತರ ಭಾಗಗಳಲ್ಲೂ ಅಂಥ ಪ್ರಯತ್ನಗಳು ನಡೆದಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ನಿಜವಾಗಿಯೂ ಏನಾಗುತ್ತಿದೆ ಎಂಬುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ರಾಜ್ಯವ್ಯಾಪಿ ದೊಡ್ಡ ಜಾಲವೇ ಹರಡಿರುವಂತಿದೆ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಅರ್ಹ ಮತದಾರರು ಪಟ್ಟಿಯಲ್ಲಿ ಇಲ್ಲವಾಗುತ್ತಿರುವುದು ಭಾರೀ ಸಂಶಯಕ್ಕೆ ಕಾರಣವಾಗುತ್ತಿದೆ.

ರೌಡಿ ರಾಜಕೀಯ

ರಾಜ್ಯದಲ್ಲಿ ಈ ವಾರವೆಲ್ಲ ಬಹಳ ಚರ್ಚೆಯಾದ ಮತ್ತೊಂದು ವಿಚಾರ, ರೌಡಿ ರಾಜಕೀಯ. ರೌಡಿಶೀಟರ್ ಸೈಲೆಂಟ್ ಸುನೀಲ್‌ಗಾಗಿ ಸಿಸಿಬಿ ಪೊಲೀಸರು ಹುಡುಕಾಡುತ್ತಿದ್ದರೆ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅದೇ ಸಿಸಿಬಿ ಕಚೇರಿಯ ಸಮೀಪವೇ ಆತ ರಕ್ತದಾನ ಶಿಬಿರ ಆಯೋಜಿಸಿ, ಬಿಜೆಪಿ ಸಂಸದರು ಮತ್ತು ಶಾಸಕರ ಜೊತೆ ವೇದಿಕೆಯಲ್ಲಿದ್ದ. ಆತ ಬಿಜೆಪಿ ಸೇರಲಿದ್ದಾನೆಂಬ ಸುದ್ದಿಯಿತ್ತು. ಇನ್ನೊಂದೆಡೆ ಅದಾಗಲೇ ಫೈಟರ್ ರವಿ ಎಂಬ ಮತ್ತೊಬ್ಬ ರೌಡಿಶೀಟರ್ ಬಿಜೆಪಿಯನ್ನು ಸೇರಿಯಾಗಿದೆ. ನಾಗಮಂಗಲದಲ್ಲಿ ಅವನನ್ನು ಕಣಕ್ಕಿಳಿಸುವ ಆಲೋಚನೆಯೂ ಬಿಜೆಪಿಗಿದೆ ಎಂಬ ಸುದ್ದಿಯಿದೆ. ಇದರ ನಡುವೆಯೇ ಇನ್ನೋರ್ವ ರೌಡಿಶೀಟರ್ ಬೆತ್ತನಗೆರೆ ಶಂಕರ ಬಿಜೆಪಿ ನಾಯಕರ ಜೊತೆಗೆ ಕಾಣಿಸಿಕೊಳ್ಳತೊಡಗಿದ್ದಾನೆ. ಬಿಜೆಪಿ ಸೇರಿ, ಎಚ್‌ಡಿ ಕೋಟೆಯಲ್ಲಿ ಜಿ.ಪಂ. ಚುನಾವಣೆ ಮೂಲಕವೇ ರಾಜಕೀಯ ಪ್ರವೇಶಕ್ಕೆ ತಯಾರಿ ನಡೆಸಿದ್ದಾನೆ ಎಂಬ ಮಾತುಗಳಿವೆ. ಇವೆಲ್ಲದರ ಬೆನ್ನಲ್ಲೇ ವಿಲ್ಸನ್ ಗಾರ್ಡನ್ ನಾಗ ಎಂಬ ರೌಡಿಶೀಟರ್ ಸಚಿವ ಸೋಮಣ್ಣನವರ ಮನೆಗೆ ಬಂದಿದ್ದ ಎಂಬ ಸುದ್ದಿ ಹಬ್ಬಿದೆ. ಆದರೆ ಅದನ್ನು ಸೋಮಣ್ಣ ನಿರಾಕರಿಸಿದ್ದಾರೆ. ಈ ನಡುವೆಯೇ, ಆನೇಕಲ್ ಪುರಸಭೆ ಸದಸ್ಯನನ್ನಾಗಿ ರೌಡಿಶೀಟರ್ ಮಂಜುನಾಥ್ ಎಂಬಾತನನ್ನು ನಾಮನಿರ್ದೇಶನ ಮಾಡಿ ಸರಕಾರ ಆದೇಶ ಹೊರಡಿಸಿರುವುದು ಕೂಡ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ರೌಡಿನಂಟಿನ ಕುರಿತ ಟೀಕೆಗಳಿಗೆ ಪ್ರತಿಕ್ರಿಯಿಸುವ ಭರದಲ್ಲಿ ಸಮರ್ಥಿಸಿಕೊಳ್ಳುವ ರೀತಿಯಲ್ಲಿಯೂ ಕೆಲ ಬಿಜೆಪಿ ನಾಯಕರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿಯವರೇ, ಕಾಂಗ್ರೆಸ್‌ನಲ್ಲಿ ಎಷ್ಟು ಮಂದಿ ರೌಡಿಗಳಿದ್ದಾರೆ ಎಂಬುದನ್ನು ಲೆಕ್ಕ ಹಾಕಲಿ ಎಂದು ಹೇಳಿರುವುದು ಇದಕ್ಕೊಂದು ಉದಾಹರಣೆ. ರೌಡಿಸಂ ಬಿಟ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿರುವವರಿದ್ದರೆ ಅವರ ಬಗ್ಗೆ ಖಂಡಿತ ಈ ಸಮಾಜ ಒಳ್ಳೆಯ ಭಾವನೆ ಬೆಳೆಸಿಕೊಳ್ಳುತ್ತದೆ. ಆದರೆ ರಾಜಕೀಯ ಪ್ರವೇಶಿಸುವ ಅವರ ಇರಾದೆಯ ಹಿಂದಿನ ಉದ್ದೇಶ ಮಾತ್ರ ಅನುಮಾನ ಮೂಡಿಸದೇ ಇರುವುದಿಲ್ಲ. ಕ್ರಿಮಿನಲ್ ಹಿನ್ನೆಲೆಯವರು ಜನಪ್ರತಿನಿಧಿಗಳಾಗುವುದು ಹೆಚ್ಚುತ್ತಿರುವ ಈಚಿನ ದಿನಗಳಲ್ಲಿ, ರೌಡಿಗಳೊಂದಿಗಿನ ರಾಜಕೀಯ ಪಕ್ಷಗಳ ನಂಟು ಇನ್ನಷ್ಟು ಆತಂಕ ಮೂಡಿಸುತ್ತದೆ.

ಈ ನೋವು ಸಣ್ಣದೇ?

ಪ್ರಾಧ್ಯಾಪಕರೊಬ್ಬರು ತರಗತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದು ನಿಂದಿಸಿದ ಅತ್ಯಂತ ಹೇಯ ವರ್ತನೆ ಮತ್ತದನ್ನು ವಿದ್ಯಾರ್ಥಿಯು ತೀವ್ರವಾಗಿ ಪ್ರತಿಭಟಿಸಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆಯಿತು. ಮಾಹೆಯ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಂಜಿನಿಯರಿಂಗ್ ವಿಭಾಗದ ತರಗತಿಯಲ್ಲಿ ಪ್ರಾಧ್ಯಾಪಕ ರವೀಂದ್ರನಾಥ್ ನಡೆಯನ್ನು ವಿದ್ಯಾರ್ಥಿ ಹಂಝಾ ಪ್ರಶ್ನಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದುದರಿಂದ ಈ ಘಟನೆ ಬೆಳಕಿಗೆ ಬಂತು. ಕಸಬ್ ಹೆಸರಿನಲ್ಲಿ ತನ್ನನ್ನು ಕರೆದಿದ್ದನ್ನು ವಿದ್ಯಾರ್ಥಿ ಆಕ್ಷೇಪಿಸುತ್ತಿದ್ದಂತೆಯೇ, ತಮಾಷೆಗೆ ಹಾಗೆಂದೆ ಎಂದಿದ್ದಾರೆ ಪ್ರಾಧ್ಯಾಪಕ. ಆದರೆ, ನವೆಂಬರ್ 26ರ ಮುಂಬೈ ದಾಳಿ ನಿಮಗೆ ತಮಾಷೆಯ ವಿಷಯವೇ ಎಂದು ವಿದ್ಯಾರ್ಥಿ ಪ್ರಶ್ನಿಸುತ್ತಾನೆ. ನೀನು ನನ್ನ ಮಗನ ಸಮಾನ ಎಂದಿದ್ದಕ್ಕೆ, ನಿಮ್ಮ ಮಗನನ್ನು ಹೀಗೆ ನಡೆಸಿಕೊಳ್ಳುತ್ತೀರಾ? ಉಗ್ರಗಾಮಿಯೊಬ್ಬನ ಹೆಸರಿನಿಂದ ಅವನನ್ನು ಕರೆಯುತ್ತೀರಾ ಎಂದು ವಿದ್ಯಾರ್ಥಿ ಪ್ರಶ್ನಿಸುವುದು ವೀಡಿಯೊದಲ್ಲಿದೆ. ಕಡೆಗೆ ಪ್ರಾಧ್ಯಾಪಕ ಕ್ಷಮೆ ಕೇಳಿದ್ದಾರೆ. ನಿಮ್ಮ ಕ್ಷಮೆಯಿಂದ ನೀವು ಯೋಚಿಸುವ ರೀತಿ ಬದಲಾಗದು ಎಂದು ವಿದ್ಯಾರ್ಥಿ ಪ್ರತಿಕ್ರಿಯಿಸಿದ್ದಾನೆ.

ಘಟನೆ ಸಂಬಂಧ ಆಡಳಿತ ಮಂಡಳಿ, ಆ ಪ್ರಾಧ್ಯಾಪಕರನ್ನು ಅಮಾನತು ಮಾಡಿದೆ. ಆದರೆ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಮಾತ್ರ ಪ್ರಾಧ್ಯಾಪಕನ ವರ್ತನೆ ‘ಸಣ್ಣ ವಿಚಾರ’ವಾಗಿ ಕಂಡಿದೆ. ಸಚಿವರ ದೃಷ್ಟಿಯೂ ಸೇರಿ, ಈ ಒಟ್ಟು ವಿಚಾರ ಯಾವುದು ನಮ್ಮ ವ್ಯವಸ್ಥೆಯನ್ನು ಸುಂದರವಾಗಿ ರೂಪಿಸಬೇಕೋ ಆ ವ್ಯವಸ್ಥೆಯೇ ಕಲುಷಿತವಾಗಿರುವ, ಕೊಳಕಾಗಿರುವ ಸನ್ನಿವೇಶವನ್ನು ಸೂಚಿಸುವಂತಿದೆ. ವಿದ್ಯಾರ್ಥಿಗಳನ್ನು ಈ ದೇಶದ ಸೆಕ್ಯುಲರ್ ನೆಲೆಯಲ್ಲಿ ರೂಪಿಸಬೇಕಾಗಿರುವ ಪ್ರಾಧ್ಯಾಪಕರ ಮನಃಸ್ಥಿತಿಯೇ ಹೀಗೆ ಅಸಹಿಷ್ಣತೆಯಿಂದ ಕೂಡಿದೆಯೇ ಎಂಬ ಪ್ರಶ್ನೆ ಕಾಡುವಂತಾಗಿದೆ. ಕಸಬ್ ಎಂದು ಕರೆಸಿಕೊಂಡಿರುವ ವಿದ್ಯಾರ್ಥಿಯ ಪ್ರತಿಕ್ರಿಯೆ ಆತನ ಮನಸ್ಸಲ್ಲಿರುವ ನೋವನ್ನು, ತನ್ನ ಸುತ್ತಲಿರುವವರೇ ತನ್ನನ್ನು ಇಂಥದೊಂದು ಕ್ರೂರ ದೃಷ್ಟಿಯಿಂದ ನೋಡುತ್ತಿದ್ದಾರಲ್ಲ ಎಂಬ ಭಾವನೆಯನ್ನು ವ್ಯಕ್ತಗೊಳಿಸಿದೆ. ಇದು ಒಬ್ಬ ಹಂಝಾ ಅನುಭವಿಸಿದ ನೋವಂತೂ ಅಲ್ಲ ಎಂಬುದು ಕೂಡ ನಿಜ.

ಹೀಗೂ ಒಂದು ದಮನ

ದೇಶದ ಪತ್ರಿಕೋದ್ಯಮದಲ್ಲಿ, ಅದರಲ್ಲೂ ವಿದ್ಯುನ್ಮಾನ ಮಾಧ್ಯಮದಲ್ಲಿ ವಿಭಿನ್ನ ಧ್ವನಿಯಾಗಿದ್ದ ಎನ್‌ಡಿಟಿವಿಯನ್ನು ಆಕ್ರಮಿಸಿಕೊಳ್ಳುವ ನಿಟ್ಟಿನಲ್ಲಿ ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಪ್ರಕ್ರಿಯೆಗಳನ್ನು ಹೆಚ್ಚುಕಡಿಮೆ ಮುಗಿಸಿದೆ. ಎನ್‌ಡಿಟಿವಿಯಲ್ಲಿ ಶೇ. 29.18 ಪಾಲು ಹೊಂದಿರುವ, ಎನ್‌ಡಿಟಿವಿಯ ಪ್ರವರ್ತಕ ಸಮೂಹ ಸಂಸ್ಥೆಯಾದ ಆರ್‌ಆರ್‌ಪಿಆರ್ ಹೋಲ್ಡಿಂಗ್‌ನ್ನು ಅದಾನಿ ಸಮೂಹ ಸ್ವಾಧೀನಪಡಿಸಿಕೊಂಡಿದೆ. ಎನ್‌ಡಿಟಿವಿ ಸುದ್ದಿವಾಹಿನಿಯ ಸಂಸ್ಥಾಪಕರು ಮತ್ತು ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಅವರು ಆರ್‌ಆರ್‌ಪಿಆರ್‌ಎಚ್ ನಿರ್ದೇಶಕರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಯ್ ದಂಪತಿ ರಾಜೀನಾಮೆ ಬೆನ್ನಲ್ಲೇ ಎನ್‌ಡಿಟಿವಿ ಹಿಂದಿ ವಾಹಿನಿಯ ಹಿರಿಯ ಕಾರ್ಯನಿರ್ವಾಹಕ ಸಂಪಾದಕ, ತಮ್ಮ ದಿಟ್ಟ ನಿಲುವಿನಿಂದಾಗಿ ದೇಶವಿದೇಶಗಳಲ್ಲಿ ಖ್ಯಾತರಾಗಿರುವ ರವೀಶ್ ಕುಮಾರ್ ಕೂಡ ಹೊರನಡೆದಿದ್ದಾರೆ.

ದೇಶದ ಬಹುಪಾಲು ಮಾಧ್ಯಮ ಪ್ರಭುತ್ವದ ತುತ್ತೂರಿಯಾಗಿದ್ದಾಗ ವಿಭಿನ್ನವೆನ್ನಿಸಿಕೊಂಡಿದ್ದ ಎನ್‌ಡಿಟಿವಿ ಇನ್ನು ಮುಂದೆ ಹಾಗಿರುವುದಿಲ್ಲ. ಅದು ಕೂಡ ಗೋದಿ ಮೀಡಿಯಾಗಳ ಸಾಲಿನಲ್ಲಿ ಸೇರಿಹೋಗುತ್ತದೆ. ಪ್ರಶ್ನಿಸುವವರನ್ನು ದಮನಿಸುವ ವ್ಯವಸ್ಥಿತ ಕೆಲಸವೊಂದು ಬೇರೆ ಬೇರೆ ಮಾರ್ಗಗಳ ಮೂಲಕ ಆಗುತ್ತಿರುವುದು ಮತ್ತು ಇದೆಲ್ಲದರ ಅಂತಿಮ ಪರಿಣಾಮವಾಗಿ, ಈ ದೇಶದ ಜನಸಾಮಾನ್ಯರು ದನಿ ಕಳೆದುಕೊಳ್ಳುವಂತಾಗುವುದು ನಮ್ಮೆದುರಿಗಿರುವ ಕರಾಳತೆ. 

ಕೊಲಿಜಿಯಂ ವಿಚಾರ

ನ್ಯಾಯಾಧೀಶರುಗಳ ನೇಮಕಕ್ಕಿರುವ ಕೊಲಿಜಿಯಂ ವಿಚಾರದಲ್ಲಿ ಕೇಂದ್ರ ಸರಕಾರದ ತಕರಾರನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಕೊಲಿಜಿಯಂ ಶಿಫಾರಸುಗಳ ಕುರಿತು ನಿರ್ಧಾರ ಪ್ರಕಟಿಸುವಲ್ಲಿ ಕೇಂದ್ರದ ವಿಳಂಬ ನೀತಿಯನ್ನು ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿದೆ. ಕೊಲಿಜಿಯಂ ಕುರಿತು ಕೆಲವರಿಗೆ ಅಸಮಾಧಾನ ಇರಬಹುದಾದರೂ ಅದು ಈ ನೆಲದ ಕಾನೂನು ಎಂಬುದು ನಿಜ ಎಂದು ಅವರು ಹೇಳಿದ್ದಾರೆ. ಕೊಲಿಜಿಯಂ ಈ ದೇಶದ ಸಂವಿಧಾನಕ್ಕೆ ಪರಕೀಯವಾಗಿದೆ ಎಂಬ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟೀಕೆಯ ಬಗ್ಗೆ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಈ ನಡುವೆ, ಕೊಲಿಜಿಯಂ ಶಿಫಾರಸುಗಳ ಕಡತವನ್ನು ಕೇಂದ್ರವು ಮರಳಿಸಿರುವುದಾಗಿ ವರದಿಯಾಗಿದೆ. ಕೊಲಿಜಿಯಂ ಶಿಫಾರಸು ಮಾಡಿರುವ ಪಟ್ಟಿಯಲ್ಲಿ ಹಿರಿಯ ವಕೀಲ ಸೌರಭ್ ಕೃಪಾಲ್ ಅವರ ಹೆಸರೂ ಇದೆಯೆನ್ನಲಾಗಿದೆ. ನಿವೃತ್ತ ಸಿಜೆಐ ಬಿ.ಎನ್.ಕೃಪಾಲ್ ಅವರ ಪುತ್ರರಾಗಿರುವ ಅವರು, ತಾನು ಸಲಿಂಗಿಯಾಗಿರುವುದರಿಂದ ಭಡ್ತಿ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಶಿಫಾರಸು ಕಡತಗಳನ್ನು ಈಗ ಕೇಂದ್ರ ಮರಳಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೆಗೆದುಕೊಳ್ಳಲಿರುವ ನಿಲುವು ಕುತೂಹಲ ಕೆರಳಿಸಿದೆ.

ಕಾಶ್ಮೀರ್ ಫೈಲ್ಸ್ ಕಥೆ

ಬಲಪಂಥೀಯ ವಿಚಾರಧಾರೆಯುಳ್ಳ, ಕಾಶ್ಮೀರ ಮುಸ್ಲಿಮರ ವಿರುದ್ಧ ದ್ವೇಷ ಹರಡುವಂಥದ್ದೆಂದು ಸಿಂಗಾಪುರದಂಥ ದೇಶಗಳು ನಿರ್ಬಂಧಿಸಿದ್ದ ವಿವಾದಾತ್ಮಕ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಇಸ್ರೇಲಿ ಚಲನಚಿತ್ರ ನಿರ್ದೇಶಕ ನಡಾವ್ ಲ್ಯಾಪಿಡ್ ಮಾಡಿದ ಟೀಕೆ ರಾಜಕೀಯ ಬಣ್ಣ ಪಡೆದುಕೊಂಡದ್ದು ಮತ್ತೊಂದು ಮಹತ್ವದ ಬೆಳವಣಿಗೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಇದು ಪರಿಣಾಮ ಬೀರಿತು. ‘ದಿ ಕಾಶ್ಮೀರ್ ಫೈಲ್ಸ್’ ಒಂದು ಅಸಭ್ಯ ಚಿತ್ರ ಎಂದಿದ್ದ ಲ್ಯಾಪಿಡ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಭಾರತದಲ್ಲಿನ ಇಸ್ರೇಲ್ ರಾಯಭಾರಿ ನೋರ್ ಗಿಲೋನ್ ಭಾರತದ ಕ್ಷಮೆ ಯಾಚಿಸಿದರು. ಇಸ್ರೇಲ್ ರಾಯಭಾರಿಯ ಈ ನಡೆಯ ಬಳಿಕವೂ ಲ್ಯಾಪಿಡ್ ತಮ್ಮ ನಿಲುವಿಗೆ ಬದ್ಧರಾಗಿರುವುದಾಗಿ ಹೇಳಿದರು. ಮಾತ್ರವಲ್ಲ, ಸತ್ಯ ಹೇಳಲು ಹಿಂಜರಿಯುವ ದೇಶದಲ್ಲಿ ಯಾರಾದರೂ ಮಾತನಾಡಲೇಬೇಕಿದೆ ಎಂದರು. ಅಷ್ಟಾಗಿಯೂ, ತಮ್ಮ ಹೇಳಿಕೆ ತಪ್ಪಾಗಿ ವ್ಯಾಖ್ಯಾನಿಸಲ್ಪಟ್ಟಿದ್ದರೆ ಕ್ಷಮೆ ಯಾಚಿಸುವೆ ಎಂದೂ ಅವರು ಹೇಳಿದ್ದಾರೆ.

ಭಾರತದ 53ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ತೀರ್ಪುಗಾರರ ಮುಖ್ಯಸ್ಥ ಲ್ಯಾಪಿಡ್ ಮಾಡಿದ್ದ ಟೀಕೆ, ಭಾರತದೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವ ಇಸ್ರೇಲ್‌ಗೆ ಆಘಾತ ತಂದಿತ್ತು. ಈ ಚಿತ್ರ ಕಾಶ್ಮೀರದ ಬಗೆಗಿನ ಭಾರತದ ನಿಲುವನ್ನು ಹೇಳುತ್ತದೆ ಮತ್ತು ಫ್ಯಾಸಿಸ್ಟ್ ಅಂಶಗಳನ್ನು ಒಳಗೊಂಡದ್ದಾಗಿದೆ ಎಂಬ ಮಾತುಗಳನ್ನು ಈ ರಾಜಕಾರಣ ಸಹಿಸಲಾರದು ಎಂಬುದು ಗೊತ್ತಿದ್ದೇ ಲ್ಯಾಪಿಡ್ ಆಡಿದ್ದ ಮಾತುಗಳವು. ರಾಜತಾಂತ್ರಿಕ ನೆಲೆಯಲ್ಲಿ ಯಾವುದನ್ನೆಲ್ಲ ನಿಯಂತ್ರಿಸಲು ಯತ್ನಿಲಾಗುತ್ತದೆ ಎಂಬುದಕ್ಕೆ ಈ ಬೆಳವಣಿಗೆ ಒಂದು ನಿದರ್ಶನ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top