-

2024ರ ಲೋಕಸಭಾ ಚುನಾವಣೆ ವಿರೋಧ ಪಕ್ಷಗಳ ಗೆಲುವಿನ ಸಾಧ್ಯತೆಗಳು

-

ಹೆಚ್ಚಿನ ವಿರೋಧ ಪಕ್ಷಗಳಿಗೆ ಮತ್ತು ಅವುಗಳ ನಾಯಕರಿಗೆ ಇಂದು ಅಳಿವು ಉಳಿವಿನ ಪ್ರಶ್ನೆ. ಅವರ ಮೇಲೆ ನಿರಂತರ ಆಗುತ್ತಿರುವ ಈ.ಡಿ./ಸಿಬಿಐ/ಐಟಿ ದಾಳಿ, ಪಕ್ಷ ವಿಭಜನೆ ಪ್ರಯತ್ನಗಳು, ರಾಜ್ಯಗಳ ಸ್ವಾಯತ್ತೆಯ ಮೇಲೆ ಆಗುತ್ತಿರುವ ಪ್ರಹಾರ ಮತ್ತು ರಾಜ್ಯಪಾಲ ಹುದ್ದೆಯ ದುರ್ಬಳಕೆ ವಿರೋಧ ಪಕ್ಷಗಳ ಒಗ್ಗೂಡುವಿಕೆಗೆ ಸಮಾನ ನೆಲೆಯನ್ನು ಒದಗಿಸಬಹುದು. ಇವೆಲ್ಲವೂ 2024ರ ಚುನಾವಣೆಯಲ್ಲಿ ವಿರೋಧ ಪಕ್ಷಗಳ ನಡುವೆ ಹೆಚ್ಚಿನ ಹೊಂದಾಣಿಕೆ ಮತ್ತು ಸಹಕಾರ ಸಾಕಾರಗೊಳ್ಳುವುದಕ್ಕೆ ಕಾರಣವಾಗಬಲ್ಲವು.


ಇನ್ನೊಂದು ವರ್ಷದಲ್ಲಿ ದೇಶ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಲಿದೆ. ಮೋದಿ ಮತ್ತು ಬಿಜೆಪಿ ಸರಕಾರ ಎರಡು ಅವಧಿಯ ಆಡಳಿತ ಮುಗಿಸಿ ಇನ್ನೊಮ್ಮೆ ಜನಾದೇಶಕ್ಕಾಗಿ ಮತದಾರರ ಮುಂದೆ ಹೋಗುವ ಸಮಯವದು. ಅಂತೆಯೇ ವಿರೋಧ ಪಕ್ಷಗಳಿಗೆ ಮೋದಿ ಸರಕಾರವನ್ನು ಕೆಳಗಿಳಿಸಿ ತಮ್ಮದೇ ಆದ ಪರ್ಯಾಯ ಸರಕಾರ ರಚಿಸುವ ಅವಕಾಶವೂ ಹೌದು. ಚುನಾವಣೆಗೆ ಇನ್ನೂ ಒಂದು ವರ್ಷವಿದ್ದರೂ ಆ ಕುರಿತು ಜಿಜ್ಞಾಸೆ ಮತ್ತು ಕಳವಳ ಜನರಲ್ಲಿ ಮತ್ತು ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಶುರುವಾಗಿದೆ.

ಇತ್ತೀಚಿನ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದ ಅಭೂತಪೂರ್ವ ಗೆಲುವನ್ನು ಕೆಲವರು ರಾಷ್ಟ್ರಮಟ್ಟದಲ್ಲಿ ಮುಂಬರಲಿರುವ ಬದಲಾವಣೆಯ ಮುನ್ಸೂಚಿ ಎಂದರೆ, ಕೆಲವರು ಇದನ್ನು ನಿರಾಕರಿಸುತ್ತಾರೆ. ಅವರ ಪ್ರಕಾರ ಇದು ಕೇವಲ ಒಂದು ರಾಜ್ಯಕ್ಕೆ ಸೀಮಿತವಾದ ಫಲಿತಾಂಶ, ಇದನ್ನು ರಾಷ್ಟ್ರಮಟ್ಟಕ್ಕೆ ಅನ್ವಯಿಸಲಾಗದು. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮತದಾರರು ಬೇರೆಯೇ ಮಾನದಂಡದಲ್ಲಿ ಮತದಾನ ಮಾಡುತ್ತಾರೆ, ಹಿಂದೆ ಹಲವಾರು ಬಾರಿ ಹೀಗೆ ಆಗಿದೆ ಎನ್ನುವುದು ಅವರ ವಾದ.

ಕೆಲವು ವಿಶ್ಲೇಷಕರ ಪ್ರಕಾರ ಮೋದಿ ಮತ್ತು ಬಿಜೆಪಿಯನ್ನು ರಾಷ್ಟ್ರೀಯ ಚುನಾವಣೆಯೊಂದರಲ್ಲಿ ಸೋಲಿಸುವುದು ಕಷ್ಟಕರ. ರಾಷ್ಟ್ರೀಯ ಚುನಾವಣೆಯಲ್ಲಿ ಪ್ರಧಾನವಾಗುವ ರಾಷ್ಟ್ರಮಟ್ಟದ ವಿಷಯ ಮತ್ತು ಸಮಸ್ಯೆಗಳು ಚುನಾವಣೆ ಮೇಲೆ ಪರಿಣಾಮ ಬೀರುತ್ತವೆ ಮತ್ತು ಚುನಾವಣಾ ಫಲಿತಾಂಶ ಅದಕ್ಕನುಗುಣವಾಗಿ ಬದಲಾಗುತ್ತದೆ. ಮೋದಿಯವರ ವೈಯಕ್ತಿಕ ವರ್ಚಸ್ಸು ಬಿಜೆಪಿ ಪರ ಇರುವ ಇನ್ನೊಂದು ಪ್ರಬಲ ಅಂಶ ಎಂಬುದು ಈ ವಿಶ್ಲೇಷಕರ ವಾದ. ಮೇಲ್ನೋಟಕ್ಕೆ ಈ ತರ್ಕ ಒಪ್ಪಬಹುದೇನೋ ಎನ್ನುವಂತಿದ್ದರೂ, ಕೂಲಂಕಷವಾಗಿ ನೋಡಿದಾಗ ಅದರಲ್ಲಿ ಅಡಕವಾಗಿರುವ ನ್ಯೂನತೆಗಳನ್ನು ಗಮನಿಸಬಹುದು ಮತ್ತು ಮೋದಿ ಹಾಗೂ ಬಿಜೆಪಿಯ ಸೋಲು ಅಸಾಧ್ಯವಲ್ಲ ಎಂಬುದನ್ನು ಮನಗಾಣಬಹುದು.

ಪ್ರತೀ ಚುನಾವಣೆಯ ಹಿನ್ನೆಲೆ ಭಿನ್ನವಾಗಿರುತ್ತದೆ. ಹಾಗೆಯೇ ಪ್ರತೀ ಚುನಾವಣೆಯ ಫಲಿತಾಂಶದ ಮೇಲೆ ಬೇರೆ ಬೇರೆ ಅಂಶಗಳು ಪ್ರಭಾವ ಬೀರುತ್ತವೆ. ಉದಾಹರಣೆಗೆ 1977ರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸೇತರ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆ ಚುನಾವಣೆಯ ಸಂದರ್ಭ ತೀರಾ ವಿಭಿನ್ನವಾಗಿತ್ತು. ಆಗ ಇಂದಿರಾ ಗಾಂಧಿ ಅನುಷ್ಠಾನಗೊಳಿಸಿದ್ದ ತುರ್ತುಪರಿಸ್ಥಿತಿ ಮತ್ತು ಆ ಸಮಯದಲ್ಲಿ ನಡೆದಿತ್ತೆನ್ನಲಾದ ಆಡಳಿತಾತ್ಮಕ ಅತಿರೇಕಗಳು ಒಂದು ಕಡೆಯಲ್ಲಾದರೆ, ಜಯಪ್ರಕಾಶ್ ನಾರಾಯಣರ ಮುಂದಾಳತ್ವದಲ್ಲಿ ಕಾಂಗ್ರೆಸ್ ವಿರುದ್ಧ ರಾಷ್ಟ್ರಮಟ್ಟದಲ್ಲಿ ನಡೆದ ಪ್ರತಿಭಟನೆ, ಚುನಾವಣಾ ಸಂದರ್ಭದಲ್ಲಿ ಪ್ರತಿಪಕ್ಷಗಳು ಜನತಾ ಪಕ್ಷದ ರಚನೆಯೊಂದಿಗೆ ಸಾಧಿಸಿದ ಮೈತ್ರಿ ಮತ್ತು ಅದರ ಫಲಶ್ರುತಿಯಾಗಿ ಕಾಂಗ್ರೆಸ್‌ನ ವಿರುದ್ಧ ನಡೆದ ಒಮ್ಮತದ ಹೋರಾಟ ಇವು ಇನ್ನೊಂದು ಕಡೆ 1977ರ ಅಭೂತಪೂರ್ವ ಫಲಿತಾಂಶಕ್ಕೆ ಕಾರಣವಾದವು.

ಅಲ್ಲಿಂದ ಇಲ್ಲಿಯ ವರೆಗಿನ ಎಲ್ಲಾ ಚುನಾವಣೆಗಳನ್ನು ನಾನು ಇಲ್ಲಿ ಸ್ಥಳಾವಕಾಶ ಕೊರತೆಯಿಂದಾಗಿ ವಿಶ್ಲೇಷಿಸ ಬಯಸುವುದಿಲ್ಲ. ನೇರವಾಗಿ 2019ರ ಸಾರ್ವತ್ರಿಕ ಚುನಾವಣೆ ವಿಷಯಕ್ಕೆ ಬರುವುದಾದರೆ, ಆ ಚುನಾವಣೆಯ ಮೊದಲು ರಾಷ್ಟ್ರಮಟ್ಟದಲ್ಲಿನ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳನ್ನು ಹಾಗೂ ಕೆಲವು ಪ್ರಮುಖ ರಾಜ್ಯಗಳ (ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ, ಕರ್ನಾಟಕ, ಗುಜರಾತ್ ಸೇರಿದಂತೆ) ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ಗಮನದಲ್ಲಿಟ್ಟು ನೋಡಿದಲ್ಲಿ 2019ರಲ್ಲಿ ಬಿಜೆಪಿ ಸೋಲುವ ಅಥವಾ ತೀವ್ರ ಪ್ರತಿಸ್ಪರ್ಧೆ ಎದುರಿಸುವ ಎಲ್ಲಾ ಸಾಧ್ಯತೆಗಳಿದ್ದುವು. ಆದರೆ ಕೊನೆ ಕ್ಷಣದಲ್ಲಿ ಚಿತ್ರಣ ಸಂಪೂರ್ಣ ಬದಲಾದದ್ದು ಆ ವರ್ಷ ನಡೆದ ಪುಲ್ವಾಮಾ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಮೋದಿ ನಡೆಸಿದ ‘‘ಮನೆ ನುಗ್ಗಿ ಹೊಡೆಯುತ್ತೇವೆ’’ ಘೋಷ ವಾಕ್ಯ ಆಧರಿತ ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್‌ನಿಂದಾಗಿ. ಆನಂತರ ಮೋದಿ ಮತ್ತು ಬಿಜೆಪಿ ನಡೆಸಿದ ರಾಷ್ಟ್ರೀಯತೆ ಮತ್ತು ರಾಷ್ಟ್ರ ಭದ್ರತೆ ವಿಷಯ ಕೇಂದ್ರೀಕೃತ ಪ್ರಭಾವಿ ಚುನಾವಣಾ ತಂತ್ರಗಾರಿಕೆ ಮತ್ತು ತೀವ್ರತೆಯ ಪ್ರಚಾರ, ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ವಿರೋಧ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲದಿದ್ದದ್ದು ಮತ್ತು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನಡೆಸಿದ ನಿಸ್ತೇಜದಾಯಕ ಚುನಾವಣಾ ಅಭಿಯಾನ ಬಿಜೆಪಿಯ ದೊಡ್ಡ ಪ್ರಮಾಣದ ಬಹುಮತದ ವಿಜಯಕ್ಕೆ ಕಾರಣವಾಯಿತು. ಈಗ 2024ರ ಚುನಾವಣಾ ಸಂದರ್ಭಕ್ಕೆ ಬರುವುದಾದರೆ, ನನ್ನ ದೃಷ್ಟಿಯಲ್ಲಿ ಈ ಬಾರಿಯ ಚುನಾವಣೆಯ ಮೇಲೆ ಪ್ರಭಾವ ಬೀರುವ ಅಂಶಗಳು ಈ ಕೆಳಗಿನವು:

ಮೊದಲನೆಯದಾಗಿ, ಬಹಳ ಪ್ರಬಲವಾದ ಪರಿಣಾಮ ಬೀರಬಹುದಾದ ಆಡಳಿತ ವಿರೋಧಿ ಅಲೆ. ಈ ಸಂದರ್ಭದಲ್ಲಿ ಮೋದಿ ಆಡಳಿತ ಹತ್ತು ವರ್ಷಗಳ ವಿಸ್ತೃತ ಎರಡು ಅವಧಿ ಮುಗಿಸುತ್ತಿರುವುದನ್ನು ಗಮನದಲ್ಲಿಡಬೇಕು. ಸ್ವಾತಂತ್ರ್ಯದ ಆರಂಭಿಕ ವರ್ಷಗಳಲ್ಲಿ ನೆಹರೂ ಮುಂದಾಳತ್ವದ ಸರಕಾರ ಮೂರು ನಿರಂತರ ಅವಧಿಗೆ ಆಯ್ಕೆಯಾಗಿರುವುದು ನಿಜ. ಆದರೆ ಅಂದಿನ ರಾಜಕೀಯ ಮತ್ತು ಸಾಮಾಜಿಕ ಸನ್ನಿವೇಶ, ಜನಸಂಖ್ಯೆ/ಮತದಾರ ವಿಶೇಷಣಗಳು ಮತ್ತು ಜನರ ಆಶೋತ್ತರಗಳು/ನಿರೀಕ್ಷೆಗಳು ಬಹಳಷ್ಟು ಭಿನ್ನವಾಗಿದ್ದುವು.

ರಾಜಕೀಯ ಮತ್ತು ಆಡಳಿತ ಪ್ರಕ್ರಿಯೆಯಲ್ಲಿ ಗುಣಾತ್ಮಕ ಬದಲಾವಣೆ ನಿರೀಕ್ಷಿಸಿದ್ದ ಜನತೆಯಲ್ಲಿ ಭ್ರಮನಿರಸನ ಉಂಟಾಗಿರುವುದು, ಹೆಚ್ಚು ಹೆಚ್ಚಾಗಿ ನಾವು ಕಾಣುವ ಅದೇ ಹಳೆ ರೀತಿಯ ರಾಜಕೀಯ ಮತ್ತು ರಾಜಕೀಯ ಸಂಸ್ಕೃತಿ, ಸ್ವಾಯತ್ತ/ಸರಕಾರಿ ಸಂಸ್ಥೆಗಳ ದುರ್ಬಳಕೆ, ರಾಜ್ಯಪಾಲರ ಹುದ್ದೆಯ ವ್ಯಾಪಕ ದುರುಪಯೋಗ, ಉತ್ತರದಾಯಿತ್ವದ ಕೊರತೆ, ಹೆಚ್ಚುತ್ತಿರುವ ಆಪ್ತ ಬಂಡವಾಳಶಾಹಿತ್ವ (crony capitalism), ಎದ್ದು ಕಾಣುವ ಸರ್ವಾಧಿಕಾರಿ ಧೋರಣೆಗಳು, ಇತ್ಯಾದಿ ಮೋದಿಯವರ ವಿರುದ್ಧ ಕಾರ್ಯನಿರ್ವಹಿಸಬಹುದಾದ ಪ್ರಮುಖ ಅಂಶಗಳು. ಇವೆಲ್ಲದರ ಜೊತೆಗೆ ಮನಃಶಾಸ್ತ್ರೀಯ ನೆಲೆಯಲ್ಲಿ ಹೇಳುವುದಾದರೆ ಮೋದಿ ಭಾಷಣ ಮತ್ತು ಕಾರ್ಯವೈಖರಿಯ ದೀರ್ಘ ಕಾಲದ ಏಕತಾನತೆ ಮತ್ತು ಅವರ ವರ್ಚಸ್ಸಿನ ಇಳಿಮುಖ ಸೀಮಾಂತ ತುಷ್ಟಿಗುಣ (diminishing marginal utility) ಕೂಡ ನೇತ್ಯಾತ್ಮಕ ಪರಿಣಾಮ ಬೀರಬಹುದು!

ಎರಡನೆಯದಾಗಿ, 21ನೇ ಶತಮಾನದ ನವ ಪೀಳಿಗೆಯ ಆಶೋತ್ತರಗಳ ಕಡೆಗಣನೆ ಮೋದಿ ವಿರುದ್ಧ ಕಾರ್ಯ ನಿರ್ವಹಿಸಬಹುದಾದ ಇನ್ನೊಂದು ಪ್ರಮುಖ ಅಂಶ. ವಾಸ್ತವದ ವರ್ತಮಾನ ಮತ್ತು ಆಶಾದಾಯಕ ಭವಿಷ್ಯದ ಬದಲು ‘ಇತಿಹಾಸ’ ಕೇಂದ್ರಿತ ಹಾಗೂ ವೈಷಮ್ಯ ಮತ್ತು ದ್ವೇಷಾಧಾರಿತ ಸಾಂಸ್ಕೃತಿಕ ಮತ್ತು ಸಾಮಾಜಿಕ ಧೋರಣೆಗಳು, ಉದ್ಯೋಗ ಮತ್ತು ಶಿಕ್ಷಣ ರಂಗದ ಕಡೆಗಣನೆ, ಧರ್ಮಾಧಾರಿತ ವಿಭಜನಾತ್ಮಕ ರಾಜಕೀಯ ಪ್ರಕ್ರಿಯೆಗಳು, ಇತ್ಯಾದಿ ಅಂಶಗಳು ಯುವಪೀಳಿಗೆಯನ್ನು ಮೋದಿ ಆಕರ್ಷಣೆಯಿಂದ ದೂರ ಸರಿಸಬಲ್ಲುವು. ಇದು ಇತ್ತೀಚಿನ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಹೀನಾಯ ಸೋಲಿಗೆ ಕಾರಣವಾಗಿರಲೂಬಹುದು. ಮುಂಬರುವ ವರ್ಷಗಳಲ್ಲಿ ಯುವಜನರ ಬೇಕು ಬೇಡಗಳನ್ನು ಅರಿಯದ ಮತ್ತು ಅದಕ್ಕೆ ಪೂರಕವಾಗಿ ಸ್ಪಂದಿಸದ ಯಾವುದೇ ಪಕ್ಷ ಈ ವರ್ಗದ ಮನ್ನಣೆ ಪಡೆಯುವುದು ಅಸಾಧ್ಯ.

ಮೂರನೆಯದಾಗಿ, ಜನಸಾಮಾನ್ಯರು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳು. ಮೇಲೆ ತಿಳಿಸಿರುವ ಅಂಶಗಳು ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಬಿಜೆಪಿಗೆ ವಿರುದ್ಧ್ಧವಾಗಬಹುದಾದರೆ, ದೈನಂದಿನ ಜೀವನದ ವಾಸ್ತವಾಂಶಗಳಾದ ನಿರಂತರ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಜೀವನ ನಿರ್ವಹಣೆ ವೆಚ್ಚ, ಉಲ್ಬಣಿಸುತ್ತಿರುವ ಆರ್ಥಿಕ ಅಸಮಾನತೆ, ಕುಂಠಿತ ದರದ ಆರ್ಥಿಕ ಅಭಿವೃದ್ಧಿ, ಕೃಷಿ ಕ್ಷೇತ್ರದ ಮುಗ್ಗಟ್ಟು ಮತ್ತು ಆದಾಯ ಕುಸಿತ ಇತ್ಯಾದಿ ಅಂಶಗಳು ಜನರನ್ನು ಬಿಜೆಪಿಯಿಂದ ವಿಮುಖರಾಗಿಸಿದರೆ ಅಚ್ಚರಿ ಪಡಬೇಕಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 100 ರೂ. ದಾಟಿರುವುದು, ಗ್ಯಾಸ್ ಸಿಲಿಂಡರ್ ಬೆಲೆ ರೂ. 1,000 ದಾಟಿರುವುದು ಮತ್ತು ದೈನಂದಿನ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಜನರಲ್ಲಿ ಹತಾಶೆ ಮೂಡಿಸಿರುವುದು ನಿಸ್ಸಂದೇಹ. ಮೋದಿ ಮತ್ತು ಬಿಜೆಪಿ ಇದೇ ಅಂಶಗಳ ಮೇಲೆ ಅಂದಿನ (2014ರ ಮೊದಲಿನ) ಯುಪಿಎ ಸರಕಾರವನ್ನು ನಿರಂತರವಾಗಿ ಟೀಕಿಸುತ್ತಾ, ಮೂದಲಿಸುತ್ತ ಅಧಿಕಾರಕ್ಕೇರಿದ್ದು ಜನರಿನ್ನೂ ಮರೆತಂತಿಲ್ಲ. ಅಂದು ಬಿಜೆಪಿ ನೀಡಿದ ‘ಅಚ್ಛೇ ದಿನ್’ ಆಶ್ವಾಸನೆ ಇಂದಿಗೂ ಮರೀಚಿಕೆಯಾಗಿಯೇ ಉಳಿದಿರುವುದು ಸರ್ವವೇದ್ಯ! ನಾಲ್ಕನೆಯದಾಗಿ, ವಿರೋಧ ಪಕ್ಷಗಳ ಒಗ್ಗಟ್ಟಿನ ಪ್ರಮಾಣ 2024ರ ಚುನಾವಣೆ ಫಲಿತಾಂಶ ನಿರ್ಧರಿಸಬಲ್ಲ ಇನ್ನೊಂದು ಪ್ರಮುಖ ಅಂಶ. ಮೇಲೆ ತಿಳಿಸಿದಂತೆ 2019ರಲ್ಲಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಹೊಂದಾಣಿಕೆ ಮಾಡಿಕೊಳ್ಳಲು ವಿಫಲವಾದದ್ದು ಮತ್ತು ಅದರ ಪರಿಣಾಮವಾಗಿ ಮತಗಳು ವಿಭಜನೆಗೊಂಡದ್ದು, ಇತರ ಕಾರಣಗಳೊಂದಿಗೆ, ಬಿಜೆಪಿಗೆ ಅಭೂತಪೂರ್ವ ಜಯ ದೊರಕುವುದಕ್ಕೆ ಮುಖ್ಯ ಕಾರಣವಾಗಿತ್ತು. ಆದರೆ ಇಂದು ಪರಿಸ್ಥಿತಿ ಬಹಳಷ್ಟು ಮಟ್ಟಿಗೆ ಭಿನ್ನವಾಗಿದೆ. ಪ್ರಸಿದ್ಧ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಇತ್ತೀಚೆಗೆ ಹೇಳಿರುವಂತೆ ಎಲ್ಲೆಲ್ಲ ಹೊಂದಾಣಿಕೆ ಸಾಧ್ಯವೋ ಅಲ್ಲೆಲ್ಲ ಹೊಂದಾಣಿಕೆ ಈಗಾಗಲೇ ಏರ್ಪಟ್ಟಿದೆ.

ಅವರು ಮಹಾರಾಷ್ಟ್ರ, ತಮಿಳ್ನಾಡು, ಬಿಹಾರ, ಆಂಧ್ರ ಪ್ರದೇಶ, ಮತ್ತು ಜಾರ್ಖಂಡ್ ಬಗ್ಗೆ ಹೇಳುತ್ತಿರುವುದು. ಹಾಗೆಯೇ ಕೆಲವು ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಧಾನ ಪಕ್ಷವಾಗಿರುವುದರಿಂದ ಅಲ್ಲಿ ಹೊಂದಾಣಿಕೆ ಪ್ರಶ್ನೆ ಉದ್ಭವಿಸುವುದಿಲ್ಲ. ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್, ಛತ್ತೀಸ್‌ಗಡ, ಕರ್ನಾಟಕ, ಕೇರಳ, ಹಿಮಾಚಲ ಪ್ರದೇಶ, ಪಂಜಾಬ್, ಗೋವಾ ಮತ್ತು ಕೆಲವು ಸಣ್ಣ ರಾಜ್ಯಗಳು ಈ ವರ್ಗದಲ್ಲಿ ಬರುತ್ತವೆ. ಉತ್ತರಪ್ರದೇಶ, ಪಶ್ಚಿಮ ಬಂಗಾಲ, ತೆಲಂಗಾಣ, ಒಡಿಶಾ ಮತ್ತು ದಿಲ್ಲಿ ಉಳಿಯುವ ರಾಜ್ಯಗಳು. ಇವುಗಳಲ್ಲಿ ಒಡಿಶಾ ಹೊರತು ಪಡಿಸಿ ಉಳಿದ ರಾಜ್ಯಗಳಲ್ಲಿ ಹೊಂದಾಣಿಕೆ ಇನ್ನೂ ಸಾಧ್ಯ. ಆ ದಿಶೆಯಲ್ಲಿ ಶರದ್ ಪವಾರ್, ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್‌ರವರು ಕಾಂಗ್ರೆಸ್‌ನ ಸಹಯೋಗದೊಂದಿಗೆ ಪ್ರಯತ್ನಿಸುತ್ತಿದ್ದಾರೆ ಮತ್ತು ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ದೊರಕುತ್ತಿರುವುದು ಗಮನಾರ್ಹ. ಒಂದು ವೇಳೆ ಒಂದು ಅಥವಾ ಎರಡು ರಾಜ್ಯಗಳಲ್ಲಿ ಚುನಾವಣಾ ಪೂರ್ವ ಹೊಂದಾಣಿಕೆ ಅಸಾಧ್ಯವಾದರೆ ಚುನಾವಣಾ ನಂತರವೂ ಆ ದಿಶೆಯಲ್ಲಿ ಚಿಂತನೆ/ ಪ್ರಯತ್ನ ನಡೆಸಬಹುದು. ಈ ಹಿಂದೆಯೂ ಇಂತಹ ಪ್ರಯೋಗಗಳು ನಡೆದಿರುವುದನ್ನು ಇಲ್ಲಿ ಗಮನಿಸಬಹುದು.

ಉದಾಹರಣೆಗೆ 1989ರಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷ ನಿಚ್ಚಳ ಬಹುಮತ ಪಡೆಯದೆ ಇದ್ದಾಗ ಜನತಾದಳದ ನಾಯಕತ್ವದಲ್ಲಿ ನ್ಯಾಷನಲ್ ಫ್ರಂಟ್ ಸರಕಾರ ಬಿಜೆಪಿ ಮತ್ತು ಕಮ್ಯುನಿಸ್ಟ್ ಪಕ್ಷಗಳ ಬಾಹ್ಯ ನೆರವಿನೊಂದಿಗೆ ಕಾಂಗ್ರೆಸೇತರ ಸರಕಾರ ರಚಿಸಲಾಗಿತ್ತು. ಹೆಚ್ಚಿನ ವಿರೋಧ ಪಕ್ಷಗಳಿಗೆ ಮತ್ತು ಅವುಗಳ ನಾಯಕರಿಗೆ ಇಂದು ಅಳಿವು ಉಳಿವಿನ ಪ್ರಶ್ನೆ. ಅವರ ಮೇಲೆ ನಿರಂತರ ಆಗುತ್ತಿರುವ ಈ.ಡಿ./ಸಿಬಿಐ/ಐಟಿ ದಾಳಿ, ಪಕ್ಷ ವಿಭಜನೆ ಪ್ರಯತ್ನಗಳು, ರಾಜ್ಯಗಳ ಸ್ವಾಯತ್ತೆಯ ಮೇಲೆ ಆಗುತ್ತಿರುವ ಪ್ರಹಾರ ಮತ್ತು ರಾಜ್ಯಪಾಲ ಹುದ್ದೆಯ ದುರ್ಬಳಕೆ ವಿರೋಧ ಪಕ್ಷಗಳ ಒಗ್ಗೂಡುವಿಕೆಗೆ ಸಮಾನ ನೆಲೆಯನ್ನು ಒದಗಿಸಬಹುದು. ಇವೆಲ್ಲವೂ 2024ರ ಚುನಾವಣೆಯಲ್ಲಿ ವಿರೋಧ ಪಕ್ಷಗಳ ನಡುವೆ ಹೆಚ್ಚಿನ ಹೊಂದಾಣಿಕೆ ಮತ್ತು ಸಹಕಾರ ಸಾಕಾರಗೊಳ್ಳುವುದಕ್ಕೆ ಕಾರಣವಾಗಬಲ್ಲವು.

ಈ ಮೇಲಿನ ಅಂಶಗಳಿಂದಾಗಿಯೇ 2024ರ ಚುಣಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಮತ್ತು ಬಿಜೆಪಿಯೇತರ ವಿರೋಧ ಪಕ್ಷಗಳು ಗೆಲ್ಲುತ್ತವೆ ಎಂಬುದು ಇಲ್ಲಿನ ವಾದವಲ್ಲ. ಆದರೆ ಅವು ಈ ಸಾಧ್ಯತೆಗಳನ್ನು ಈ ಹಂತದಲ್ಲಿಯೇ ಅಲ್ಲಗಳೆಯಲಾಗದು ಎಂಬುದನ್ನು ಸೂಚಿಸುತ್ತವೆ ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆ ಫಲಿತಾಂಶ ಈಗಾಗಲೇ ನಿರ್ಧರಿತ ಎಂಬ ಕೆಲವರ ವಾದವನ್ನು ನಿರಾಕರಿಸುತ್ತವೆ. ನನಗನ್ನಿಸುವಂತೆ 2024ರ ಸಾರ್ವತ್ರಿಕ ಚುನಾವಣೆಯ ಸಾಧ್ಯಾಸಾಧ್ಯತೆಗಳು ಇನ್ನೂ ಅನಿರ್ಧರಿತ ಮತ್ತು ಅನಿರೀಕ್ಷಿತ ಫಲಿತಾಂಶ ಹೊರಹೊಮ್ಮಿದಲ್ಲಿ ಯಾರೂ ಆಶ್ಚರ್ಯ ಪಡಬೇಕಾಗಿಲ್ಲ!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top