ತಾವು ತಿರಸ್ಕೃತರಾಗುವಾಗ ಜನರನ್ನೇ ತಿರಸ್ಕರಿಸುವ ಸರಕಾರ ಇದು: ಕವಿತಾ ಕೃಷ್ಣನ್ | Vartha Bharati- ವಾರ್ತಾ ಭಾರತಿ

--

ತಾವು ತಿರಸ್ಕೃತರಾಗುವಾಗ ಜನರನ್ನೇ ತಿರಸ್ಕರಿಸುವ ಸರಕಾರ ಇದು: ಕವಿತಾ ಕೃಷ್ಣನ್

  ಯಾರು ಸಂಘಪರಿವಾರ ಅಥವಾ ಬಿಜೆಪಿಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆಯೋ ಅವರನ್ನು ಗುರಿಯಾಗಿಸಿ ಅವರ ವೆುೀಲೆ ಹಲ್ಲೆ ನಡೆಯುತ್ತಿದೆ, ಅವರ ಕೊಲೆ ನಡೆಯುತ್ತಿದೆ. ಇವು ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ಕೃತ್ಯಗಳಾಗಿವೆ. ಜುನೈದ್, ಅಖ್ಲಾಕ್, ಪೆಹ್ಲ್ಲೂಖಾನ್, ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿಯನ್ನು ಕೊಲ್ಲುವ ಮೂಲಕ ಭೀತಿಯ ವಾತಾವರಣ ಸೃಷ್ಟಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಈ ರೀತಿಯ ಕೃತ್ಯ ನಡೆಸುವ ಮೂಲಕ ಅವರ ವಿರುದ್ಧ ಧ್ವನಿ ಎತ್ತುವವರಿಗೆ ನಾಳೆ ನಿಮಗೂ ಈ ರೀತಿ ಆಗಬಹುದು ಎನ್ನುವ ಭಯ ಸೃಷ್ಟಿಸುವ ಉದ್ದೇಶವಿದು.

ವಾರ್ತಾಭಾರತಿ: ದೇಶದಲ್ಲಿ ಒಂದೆಡೆ ಪ್ರಧಾನಿ ‘ಬೇಟಿ ಬಚಾವೋ’ಎನ್ನುವ ಘೋಷಣೆ ಮಾಡುತ್ತಿದ್ದಾರೆ. ಇನ್ನೊಂದೆಡೆ ತಮ್ಮ ಹಕ್ಕುಗಳಾಗಿ ಹೋರಾಡುತ್ತಿರುವ ವಿದ್ಯಾರ್ಥಿನಿಯರ, ಮಹಿಳೆಯರ ಮೇಲೆ ಲಾಠಿ ಪ್ರಹಾರ ನಡೆಯುತ್ತಿದೆ. ಈ ರೀತಿಯ ವಿಪರ್ಯಾಸದ ಬಗ್ಗೆ ನಿಮ್ಮ ಅಭಿಪ್ರಾಯ?

ಕವಿತಾ ಕೃಷ್ಣನ್:  ದೇಶದ ಹಿಂದಿನ ಚರಿತ್ರೆಯನ್ನು ಗಮನಿಸಿದಾಗ ಇದು ಹೊಸತೇನಲ್ಲ. ನಮ್ಮ ಸಮಾಜದಲ್ಲಿ ವಿಸ್ತರಿಸಿರುವ ಅಸಮಾನತೆ, ಜಾತಿ ಪದ್ಧತಿಯ ಶ್ರೇಣೀಕೃತ ವ್ಯವಸ್ಥೆ, ದಲಿತರ ಶೋಷಣೆ ಇದರ ಜೊತೆಗೆ ಬಂದಿರುವ ಕೋಮುವಾದ, ಹಿಂಸೆಯ ಪ್ರವೃತ್ತಿ ಮುಂದುವರಿದುಕೊಂಡು ಬಂದಿದೆ. ಕಳೆದ 70ವರ್ಷಗಳಿಂದಲೂ ಇವುಗಳ ವಿರುದ್ಧ ನಿರಂತರ ಚಳವಳಿಗಳು ನಡೆದುಕೊಂಡು ಬಂದಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಮಾತ್ರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಜಾತಿ ಪದ್ಧತಿಯ ಶ್ರೇಣೀಕೃತ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದಿರುವ, ದಲಿತರ ಶೋಷಣೆಗೆ ಕಾರಣವಾಗಿರುವ, ಮಹಿಳೆಯರ ಸ್ವಾತಂತ್ರವನ್ನು ನಿರಾಕರಿಸುತ್ತಾ ಬಂದಿರುವ ಶಕ್ತಿಗಳು ಮೇಲ್ಪಂಕ್ತಿಗೆ ಬಂದು ಅಧಿಕಾರ ಹಿಡಿದಿವೆ. ಅವರ ಪ್ರಕಾರ ಜಾತಿ ಪದ್ಧತಿ. ಕೋಮುವಾದದ ವಿರುದ್ಧ ಹೋರಾಡುವವರು ರಾಷ್ಟ್ರ ವಿರೋಧಿಗಳು. ಈ ಶಕ್ತಿಗಳು ಪ್ರತಿಪಾದಿಸುವ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಅಲ್ಪ ಸಂಖ್ಯಾತರಿಗೆ ಸ್ಥಾನವಿಲ್ಲ. ರಾಷ್ಟ್ರೀಯತೆ ಎಂದರೆ ದಲಿತರನ್ನು ದಮನಿಸುವುದು, ಮಹಿಳೆಯರನ್ನು ನಿರ್ಬಂಧಿಸುವುದು, ಜಾತಿ ಪದ್ಧತಿಯ ಶ್ರೇಣೀಕೃತ ವ್ಯವಸ್ಥೆಯನ್ನು ಪೋಷಿಸುವುದು ಎಂದು ಭಾವಿಸಿದ್ದಾರೆ.

      ಬನಾರಸ್ ಹಿಂದೂ ಯುನಿವರ್ಸಿಟಿಯಲ್ಲಿ ಅಲ್ಲಿನ ಉಪಕುಲಪತಿ ಕ್ಯಾಂಪಸ್ಸಿನ ಒಳಗಡೆ ಭಾಷಣ ಮಾಡುತ್ತಾ, ‘‘ವಿದ್ಯಾರ್ಥಿನಿಯರು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ ನಡೆಸುವುದು ತಮ್ಮ ಘನತೆಗೆ ಕುಂದು ತಂದು ಕೊಂಡಂತೆ, ತಮ್ಮ ಆಸ್ಮಿತತೆಯನ್ನು ಬಝಾರಿನಲ್ಲಿ ಮಾರಾಟ ಮಾಡಿದಂತೆ. ಉತ್ತಮ ಗುಣ ನಡತೆಯ ವಿದ್ಯಾರ್ಥಿನಿಯರು, ಮಹಿಳೆಯರು ಲೈಬ್ರರಿಯಲ್ಲಿಯೂ ಕುಳಿತು ಕೊಳ್ಳುವುದು ಸರಿಯಲ್ಲ. ಮಾಂಸಾಹಾರ ಸೇವನೆ ಮಾಡಬಾರದು. ಆ ರೀತಿ ನಡೆದುಕೊಂಡರೆ ಅವರ ನಡತೆ ಸರಿಯಿಲ್ಲ’’ ಎನ್ನುವ ಮಾತುಗಳನ್ನು ಹೇಳುತ್ತಾರಂತೆ. ಇದು ‘ಖಾಪ್’ ಪಂಚಾಯತ್‌ನ ಪ್ರತಿನಿಧಿಗಳು ಹೇಳುವ ಮಾತುಗಳು . ಈ ರೀತಿಯ ಧೋರಣೆ ಹೊಂದಿರುವ ವ್ಯಕ್ತಿ ಖಾಪ್ ಪಂಚಾಯತ್ ಪ್ರತಿನಿಧಿಸಲು ಯೋಗ್ಯ ವ್ಯಕ್ತಿಯೇ ಹೊರತು ವಿಶ್ವ ವಿದ್ಯಾನಿಲಯದ ನಾಯಕತ್ವ ವಹಿಸುವುದು ಸರಿಯಲ್ಲ. ಇವು ಓರ್ವ ವಿಶ್ವ ವಿದ್ಯಾನಿಲಯದ ಉಪಕುಲಪತಿಗಳು ಹೇಳುವ ಮಾತುಗಳಲ್ಲ. ಬನಾರಸ್ ಹಿಂದೂ ವಿಶ್ವ ವಿದ್ಯಾನಿಲಯದ ಉಪ ಕುಲಪತಿಯನ್ನು ಕೈ ಹಿಡಿದು ತಂದು ಆ ಸ್ಥಾನದಲ್ಲಿ ಕೂರಿಸಲಾಗಿದೆ. ಬಿಎಚ್‌ಯು ಹಿಂದೂರಾಷ್ಟ್ರ ಪ್ರತಿಪಾದನೆ ಮಾಡುತ್ತಿರುವ ಶಕ್ತಿಗಳ ಒಂದು ಚಿಕ್ಕ ಘಟಕ. ಆ ಕಾರಣದಿಂದ ಅಲ್ಲಿ ವಿದ್ಯಾರ್ಥಿನಿಯರ ಮೇಲೆ ಲಾಠಿಚಾರ್ಚ್ ನಡೆದಿದ್ದರೂ, ಈಗಲೂ ಆರೆಸ್ಸೆಸ್, ಆಡಳಿತ ನಡೆಸುವ ಸರಕಾರ ಉಪಕುಲಪತಿಯನ್ನು ಸಮರ್ಥಿಸುತ್ತಿದೆ.

 ವಾ.ಭಾ: ನಾಪತ್ತೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ. ಇದನ್ನು ಸರಕಾರದ ವೈಫಲ್ಯ ಎನ್ನಬಹುದೋ ? ಅಥವಾ ನಿರ್ಲಕ್ಷವೇ ?

ಕವಿತಾ ಕೃಷ್ಣನ್:   ಜೆಎನ್‌ಯು ಅದರ ಆಡಳಿತ ವ್ಯವಸ್ಥೆ ಹಾಗೂ ಸರಕಾರ ಅದರೊಂದಿಗೆ ಇರುವ ಪೊಲೀಸ್ ವ್ಯವಸ್ಥೆ ಉದ್ದೇಶಪೂರ್ವಕವಾಗಿಯೇ ನಾಪತ್ತೆಯಾಗಿರುವ ನಜೀಬ್‌ನ ಪತ್ತೆಗೆ ಪ್ರಯತ್ನಿಸುತ್ತಿಲ್ಲ. ದೇಶದ ರಾಜಧಾನಿಯಾದ ದಿಲ್ಲಿಯ ಜೆಎನ್‌ಯು ಕ್ಯಾಂಪಸ್‌ನಲ್ಲಿ ನಜೀಬ್ ಮೇಲೆ ಎಬಿವಿಪಿ ವಿದ್ಯಾರ್ಥಿಗಳಿಂದ ಹಲ್ಲೆ ನಡೆದ ಕೆಲವೇ ಗಂಟೆಗಳಲ್ಲಿ ಆತ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ತನಿಖೆ ನಡೆದರೆ ಮೊದಲು ಆತನ ಮೇಲೆ ಹಲ್ಲೆ ನಡೆಸಿದವರ ವಿಚಾರಣೆಯಾಗ ಬೇಕಿತ್ತು. ಆದರೆ ಪೊಲೀಸರಿಂದ ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆದಿಲ್ಲ. ಇದು ದೇಶದ ರಾಜಧಾನಿಯಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಒಳಗೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ, ರಕ್ಷಣೆ ಇಲ್ಲ ಎನ್ನುವುದಕ್ಕೆ ಉದಾಹರಣೆ. ನಜೀಬ್ ರಾತ್ರಿ ಹಲ್ಲೆಗೊಳಗಾಗುತ್ತಾನೆ. ಮರುದಿನ ನಾಪತ್ತೆಯಾಗುತ್ತಾನೆ ಆದರೆ ಆತನ ಪತ್ತೆಗೆ ಯಾರಿಂದಲೂ ಗಂಭೀರ ಪ್ರಯತ್ನ ನಡೆಯದಿರುವುದು ನಮ್ಮ ಮುಂದಿರುವ ಗಂಭೀರ ಪ್ರಶ್ನೆಯಾಗಿದೆ.

ವಾ.ಭಾ: ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಮೊದಲಾದ ವಿಚಾರವಾದಿಗಳ ಹತ್ಯೆಯ ಬಳಿಕ ಪತ್ರಕರ್ತೆ ಗೌರಿಯ ಹತ್ಯೆಯಾ ಗಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಈ ರೀತಿ ರಕ್ತಸಿಕ್ತವಾಗಿ ಗುಂಡಿನ ಮೂಲಕ ಹತ್ತಿಕ್ಕುವ ವಿಕೃತಿ ಎಲ್ಲಿಗೆ ತಲುಪಬಹುದು ..?

ಕವಿತಾ ಕೃಷ್ಣನ್:   ಇದು ವಿಚಾರವಾದಿಗಳ ಅಥವಾ ಪತ್ರಕರ್ತರ ಪ್ರಶ್ನೆಯಲ್ಲ. ಯಾರು ಸಂಘಪರಿವಾರ ಅಥವಾ ಬಿಜೆಪಿಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆಯೋ ಅವರನ್ನು ಗುರಿಯಾಗಿಸಿ ಅವರ ವೆುೀಲೆ ಹಲ್ಲೆ ನಡೆಯುತ್ತಿದೆ, ಅವರ ಕೊಲೆ ನಡೆಯುತ್ತಿದೆ. ಇವು ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ಕೃತ್ಯಗಳಾಗಿವೆ. ಜುನೈದ್, ಅಖ್ಲಾಕ್, ಪೆಹ್ಲ್ಲೂಖಾನ್, ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿಯನ್ನು ಕೊಲ್ಲುವ ಮೂಲಕ ಭೀತಿಯ ವಾತಾವರಣ ಸೃಷ್ಟಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಈ ರೀತಿಯ ಕೃತ್ಯ ನಡೆಸುವ ಮೂಲಕ ಅವರ ವಿರುದ್ಧ ಧ್ವನಿ ಎತ್ತುವವರಿಗೆ ನಾಳೆ ನಿಮಗೂ ಈ ರೀತಿ ಆಗಬಹುದು ಎನ್ನುವ ಭಯ ಸೃಷ್ಟಿಸುವ ಉದ್ದೇಶವಿದು. ಈ ರೀತಿಯ ಕೊಲೆ, ಹಲ್ಲೆ ನಡೆಸುವ ಮೂಲಕ ಅವರು ಕೇಸರಿ ರಾಷ್ಟ್ರ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಆ ಕಾರಣದಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಕಾರ್ಮಿಕರು, ಮಹಿಳೆಯರು, ದಲಿತರು, ವಿಚಾರವಾದಿಗಳು, ಸಾಮಾಜಿಕ ಕಾರ್ಯಕರ್ತರನ್ನು ಸಂಘಪರಿವಾರವನ್ನು ಪ್ರಶ್ನಿಸುವವರನ್ನು ಗುರಿಯಾಗಿಸಿ ಹಲ್ಲೆ, ಕೊಲೆ ಗಳು ನಡೆಯುತ್ತಿವೆೆ ಇದು ವಾಸ್ತವ. ಆದರೆ ಅವರ ನಿರೀಕ್ಷೆಗಿಂತ ಭಿನ್ನವಾಗಿ ದೇಶದಲ್ಲಿ ಅವರ ಈ ರೀತಿಯ ಧೋರಣೆಗಳ ವಿರುದ್ಧ ವ್ಯಾಪಕ ಹೋರಾಟಗಳು ನಡೆಯುತ್ತಲೇ ಇವೆ.

  ವಾ.ಭಾ: ದೇಶದಲ್ಲಿ ನಡೆಯುತ್ತಿರುವ ವಿಚಾರವಾದಿಗಳ ಹತ್ಯೆ,ಗೋರಕ್ಷಣೆಯ ಹೆಸರಿನಲ್ಲಿ ದೌರ್ಜನ್ಯ, ಗೌರಿ ಹತ್ಯೆ ಈ ಎಲ್ಲಾ ವಿಚಾರಗಳ ಬಗ್ಗೆ ಪ್ರಧಾನಿ ವೌನವಹಿಸಿದ್ದಾರೆ ಎಂಬ ಬಗ್ಗೆ ನಿಮ್ಮ ಅಭಿಪ್ರಾಯ?

ಕವಿತಾ ಕೃಷ್ಣನ್:  ಅವರು ಗೌರಿ ಹತ್ಯೆಯ ಬಗ್ಗೆ ಮಾತ್ರ ವೌನವಹಿಸಿರುವುದಲ್ಲ. ರೈತರ ಹತ್ಯೆ ನಡೆದಾಗಲೂ ವೌನವಾಗಿದ್ದರು. ದಲಿತರ ಮೇಲೆ ಸಾರಂಗಪುರದಲ್ಲಿ ಹಲ್ಲೆ ನಡೆದಾಗಲೂ ವೌನವಾಗಿದ್ದರು. ಪ್ರಧಾನಿ ತಮ್ಮ ಕ್ಷೇತ್ರದಲ್ಲಿ ಮಹಿಳೆಯರ, ವಿದ್ಯಾರ್ಥಿನಿಯರ ಮೇಲೆ ಹಲ್ಲೆ, ಎಬಿವಿಪಿ ಕಾರ್ಯಕರ್ತರಿಂದ ಹಲ್ಲೆ ನಡೆದಾಗಲೂ ವೌನವಹಿಸಿದ್ದರು.ಅವರು ಗೌರಿ ಹತ್ಯೆಯನ್ನು ಸಂಭ್ರಮಿಸುತ್ತಿರುವವರನ್ನು, ಪತ್ರಕರ್ತರಾದ ರವೀಶ್ ಕುಮಾರ್ ಹಾಗೂ ಇತರ ಪತ್ರಕರ್ತರಿಗೆ ಮತ್ತು ಮಹಿಳಾ ಸಾಮಾಜಿಕ ಕಾರ್ಯ ಕರ್ತರಿಗೆ ಬೆದರಿಕೆ ಒಡ್ಡುತ್ತಿರುವುವವರನ್ನು ಟ್ವಿಟರ್‌ನಲ್ಲಿ ಫಾಲೊ ಮಾಡುತ್ತಿದ್ದಾರೆ. ಮೋದಿಯವರು ನಾಯಕರು. ಅವರು ಹಿಂಬಾಲಕರನ್ನು ಸರಿಯಾಗಿ ಮುನ್ನಡೆಸಬೇಕಾಗಿತ್ತು. ಅವರು ಟ್ವಿಟರ್‌ನಲ್ಲಿ ರೇಪಿಸ್ಟ್, ಕೊಲೆಗಾರ ಮನೋಸ್ಥಿತಿ ಯವರನ್ನು ಫಾಲೊ ಮಾಡುತ್ತಿದ್ದಾರೆ ಇಂತಹ ಘಟನೆಗಳು ದೇಶಾದ್ಯಂತ ಕಂಡು ಬರುತ್ತಿವೆ.

 ವಾ.ಭಾ: ನಿಮ್ಮ ಅಭಿಪ್ರಾಯದಲ್ಲಿ ಜನಸಾಮಾನ್ಯರ ಮೇಲೆ ನೋಟು ಅಮಾನ್ಯಗೊಳಿಸಿದ ನಡೆ, ಬೆಲೆ ಏರಿಕೆ, ಸರಕಾರದಿಂದ ಜಿಎಸ್‌ಟಿ ಹೇರಿಕೆ ಯಾವ ರೀತಿಯ ಪರಿಣಾಮ ಬೀರಿದೆ..?

ಕವಿತಾ ಕೃಷ್ಣನ್: ನೋಟು ರದ್ದತಿ ಸಂದರ್ಭದಲ್ಲಿ ನಕಲಿ ನೋಟುಗಳನ್ನು ಎಸೆಯಲಾಗುತ್ತದೆ ಎಂದು ಭಾವಿಸಿದ್ದರು. ಆದರೆ ಪ್ರಸಕ್ತ ಆರ್‌ಬಿಐಯ ಹೇಳಿಕೆಯ ಪ್ರಕಾರ ರದ್ದಾದ ಶೇ. 99 ನೋಟುಗಳು ವಾಪಸ್ ಬಂತು. ಜೊತೆಗೆ ಸರಕಾರಕ್ಕೆ ಏನೂ ಲಾಭ ಆಗಲಿಲ್ಲ. ಬದಲಾಗಿ ನಷ್ಟವೇ ಆಯಿತು. ಸಾಕಷ್ಟು ಜನರಿಗೆ ಉದ್ಯೋಗ ನಷ್ಟವಾಯಿತು. ಜೀವಹಾನಿಯಾಯಿತು, ಬೆಲೆ ಏರಿಕೆಯಾಯಿತು. ಅದರ ಬೆನ್ನಿಗೆ ಜಿಎಸ್‌ಟಿ ಜಾರಿಯಾಯಿತು. ದೊಡ್ಡ ಉದ್ಯಮಿಗಳು ಇದನ್ನು ಸ್ವಾಗತಿಸಿದರು. ಬಹುತೇಕ ಸಣ್ಣ ವ್ಯಾಪಾರಿಗಳು, ರೈತರು, ಕಾರ್ಮಿಕರು ದೊಡ್ಡ ಪ್ರಮಾಣದ ನಷ್ಟಕ್ಕೆ ಒಳಗಾದರು. ಮೋದಿ ಹೇಳುತ್ತಿದ್ದಾರೆ ‘‘ನಾನು ಬಡತನವನ್ನು ಹತ್ತಿರದಿಂದ ಕಂಡವನು’’ ಎಂದು. ಮೋದಿ ಬಡವರ ಪರವಾಗಿಲ್ಲ, ಶ್ರೀಮಂತರ ಪರವಾಗಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ. ‘‘ಮೋದಿ ಬಡತನವನ್ನು ಹತ್ತಿರದಿಂದ ಕಂಡಿದ್ದೇನೆ ಎನ್ನುತ್ತಾ ಇಡೀ ದೇಶದ ಜನರು ಬಡತನವನ್ನು ಹತ್ತಿರದಿಂದ ಕಾಣುವಂತೆ ಮಾಡುತ್ತಿದ್ದಾರೆ’’ ಎಂದು ಅವರದೇ ಪಕ್ಷದ ಹಿರಿಯ ನಾಯಕ ಯಶವಂತ್ ಸಿನ್ಹಾ ಹೇಳುತ್ತಿದ್ದಾರೆ.

  ವಾ.ಬಾ:ನಿಮ್ಮ ಅಭಿಪ್ರಾಯದ ಪ್ರಕಾರ ಭಾರತಕ್ಕೆ ಬುಲೆಟ್ ಟ್ರೈನ್‌ಗಿಂತ ಹೆಚ್ಚು ಅಗತ್ಯ ಯಾವುದು ?

ಕವಿತಾ ಕೃಷ್ಣನ್:     ಬುಲೆಟ್ ಟ್ರೈನ್ ಆರಂಭಿಸುವ ಯೋಜನೆ ಗಿಂತ ಜನರು ಅದರ ಬಗ್ಗೆ ಏನು ಯೋಚಿಸುತ್ತಾರೆ ಎನ್ನುವುದು ಮುಖ್ಯ. ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ದೇಶದ ಎಲ್ಲಾ ಜನರಿಗೂ ಲಭ್ಯವಾಗುವಂತಾಗಬೇಕು. ದೇಶದಲ್ಲಿ ಸಾಕಷ್ಟು ಜನರಿಗೆ ರೈಲ್ವ್ವೆಯಲ್ಲಿ ಬೇಕಾದಷ್ಟು ನೇಮಕಾತಿ ಆಗುತ್ತಿಲ್ಲ.ಕೆಲಸಗಾರರ ಸಮಸ್ಯೆ ಎದುರಿಸುತ್ತಿರುವಾಗ, ಅಪಘಾತಗಳನ್ನು ತಡೆಯುವುದು ಸಾಧ್ಯವಾಗದೆ ಇರುತ್ತಿರುವಾಗ ಬುಲೆಟ್ ಟ್ರೈನ್ ಕಣ್ಣಿಗೆ ಮಣ್ಣೆರಚುವ ತಂತ್ರ.

ವಾ.ಭಾ:ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ರಾಷ್ಟ್ರ ದ್ರೋಹಿ, ಕೆಲವರಿಗೆ ರಾಷ್ಟ್ರ ಭಕ್ತ ಪಟ್ಟ ನೀಡುವ ಪರಿಪಾಠ ಬೆಳೆಯುತ್ತಿದೆ ಈ ಬಗ್ಗೆ ನಿಮ್ಮ ಅಭಿಪ್ರಾಯ.?

ಕವಿತಾ ಕೃಷ್ಣನ್:   ಬಿಜೆಪಿ ಹಾಗೂ ಅವರ ವಿಚಾರ ಧಾರೆಗೆ ವಿರುದ್ಧ ಮಾತನಾಡುವವರು ರಾಷ್ಟ್ರ ದ್ರೋಹಿಗಳು, ಬಿಜೆಪಿಯನ್ನು ಎಲ್ಲಾ ರೀತಿಯಿಂದ ಬೆಂಬಲಿಸುತ್ತಿರುವವರು ರಾಷ್ಟ್ರ ಭಕ್ತರು ಎನ್ನುವ ಪಟ್ಟ ಕಟ್ಟಲಾಗುತ್ತಿದೆ. ಇತ್ತೀಚೆಗೆ ಒಬ್ಬರು ಬಿಜೆಪಿಯ ಸದಸ್ಯರು ತಮ್ಮ ಪಕ್ಷದ ಇನ್ನೊಬ್ಬ ಸದಸ್ಯರೊಂದಿಗೆ ರೊಹಿಂಗ್ಯಾ ನಿರಾಶ್ರಿತರ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿ ಆ ನಿರಾಶ್ರಿತರ ಬಗ್ಗೆ ಅವರು ಭಯೋತ್ಫಾದಕರಲ್ಲ ಎಂದು ಮಾನವೀಯ ನೆಲೆಯಲ್ಲಿ ಅನುಕಂಪ ವ್ಯಕ್ತ ಪಡಿಸುತ್ತಾರೆ. ಆಗ ಇನ್ನೋರ್ವ ಬಿಜೆಪಿ ಸದಸ್ಯ ‘‘ನಿಮ್ಮ ಮಾತುಗಳು ನಿಜವಾದ ದೇಶಭಕ್ತರಾಡುವ ಮಾತುಗಳಲ್ಲ’’ ಎನ್ನುವ ಮೂಲಕ ಅವರ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ. ಇದೊಂದು ಉದಾಹರಣೆ. ಇದೀಗ ಅವರ ಗುಂಪಿನ ಸದಸ್ಯರಾದ ಯಶವಂತ್ ಸಿನ್ಹಾ, ವರುಣ್ ಗಾಂಧಿ ಸರಕಾರವನ್ನು ಟೀಕಿಸುತ್ತಿದ್ದಾರೆ. ಅವರಿಗೆ ಯಾವ ಪಟ್ಟ ನೀಡುತ್ತಾರೆ. ಇದನ್ನು ಗಮನಿಸಿದಾಗ ಬ್ರೆಕ್ಟ್ ಹೇಳಿದಂತೆ ‘‘ಒಂದು ಸರಕಾರ ಜನರ ವಿಶ್ವಾಸವನ್ನು ಕಳೆದುಕೊಂಡಾಗ (ಜನರು ಸರಕಾರವನ್ನು ತಿರಸ್ಕಾರ ಮಾಡುವ ಬದಲು) ಜನರನ್ನೇ ತಿರಸ್ಕಾರ ಮಾಡಲು ಸರಕಾರ ಹೊರಟಿದೆ.’’

ವಾ.ಭಾ: ದೇಶದಲ್ಲಿ ಮಹಿಳೆಯರ ಹಕ್ಕುಗಳ ರಕ್ಷಣೆಗೆ ನಿಮ್ಮ ಪ್ರಕಾರ ಯಾವ ಕ್ರಮಗಳನ್ನು ಕೈ ಗೊಳ್ಳಬೇಕಾಗಿದೆ..?

ಕವಿತಾ ಕೃಷ್ಣನ್:      ದೇಶದಲ್ಲಿ ಮಹಿಳೆಯರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಮೃದುವಾದ ಧೋರಣೆ ತೆಗೆದುಕೊಳ್ಳಲಾಗುತ್ತಿದೆ. ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ. ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗಲೂ ನಮ್ಮ ಹೋರಾಟ, ಹಕ್ಕೊತ್ತಾಯ ನಡೆದಿತ್ತು. ಆದರೆ ಈಗ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಿದೆ. ಈಗಿನ ಸರಕಾರ ನಡೆಸುವವರಿಗೆ ಮನುಸ್ಮತಿಯನ್ನೇ ಭಾರತದ ಸಂವಿಧಾನವನ್ನಾಗಿ ಮಾಡುವ ಇಂಗಿತವಿದೆ. ಅದರ ಪ್ರಕಾರ ಮಹಿಳೆ ಪ್ರತೀ ಹಂತದಲ್ಲಿಯೂ ಪುರುಷನ ನಿಯಂತ್ರಣದಲ್ಲಿಯೇ ಇರಬೇಕು ಆಕೆ ಸ್ವತಂತ್ರಳಲ್ಲ ಎನ್ನುವ ಧೋರಣೆಯನ್ನು ಹೊಂದಿದೆ. ನಮ್ಮ ದೇಶದ ಆಡಳಿತ ನಡೆಸುವವರ ಪ್ರಧಾನ ವಿಚಾರಧಾರೆ ಮಹಿಳಾ ವಿರೋಧಿಯಾಗಿದೆ. ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಿಳೆಯರಿಗೆ ಸ್ವಾತಂತ್ರ ನೀಡಿದರೆ, ಸಮಾನವಾಗಿ ಕಂಡರೆ ಅವರು ರಾಕ್ಷಸರಂತಾಗುತ್ತಾರೆ ಎನ್ನುವ ಧೋರಣೆಯನ್ನು ವ್ಯಕ್ತಪಡಿಸಿದ್ದಾರೆ. ಪರಿಣಾಮವಾಗಿ ದೇಶದಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಇದ್ದ ಯೋಜನೆಗಳಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆ (ಐಸಿಡಿಎಸ್), ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ಎಂಎನ್‌ಆರ್‌ಇಜಿ ), ನಿರ್ಭಯ ನಿಧಿಗೂ ಅನುದಾನ ಕಡಿತಮಾಡಲಾಗುತ್ತಿದೆ. ‘ಬೆೇಟಿ ಬಜಾವೋ’ ಯೋಜನೆಯ ಮೂಲಕ ಯಾವುದೇ ಹೊಸ ಶೈಕ್ಷಣಿಕ ಅವಕಾಶಗಳನ್ನು ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿಲ್ಲ. ಕೇವಲ ಘೋಷಣೆಯಾಗಿದೆ. ಉತ್ತರ ಪ್ರದೇಶದ ನ್ಯಾಯಾಲಯ ವೊಂದರಲ್ಲಿ ಮಹಿಳೆಯೋರ್ವಳ ಮೇಲೆ ನಡೆದ ಹಲ್ಲೆ ಹಾಗೂ ದೇಶದ ವಿವಿಧ ಕಡೆಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಗಮನಿಸಿದಾಗ ಮಹಿಳಾ ಸ್ವಾತಂತ್ರ ಮತ್ತು ಹಕ್ಕುಗಳ ಮೇಲೆ ಆಡಳಿತ ನಡೆಸುತ್ತಿರುವ ಸರಕಾರದ ಬೆಂಬಲದೊಂದಿಗೇ ಮುಕ್ತವಾಗಿ ದಾಳಿ ನಡೆಯುತ್ತಿದೆ.

 ವಾ.ಭಾ: ಲೋಕಸಭೆ ಹಾಗೂ ವಿಧಾನ ಸಭೆಗಳ ಸದಸ್ಯತ್ವದಲ್ಲಿ ಮಹಿಳಾ ಮೀಸಲಾತಿಯ ಬಗ್ಗೆ ನಿಮ್ಮ ಅಭಿಪ್ರಾಯ..?

ಕವಿತಾ ಕೃಷ್ಣನ್:  ಲೋಕ ಸಭೆ, ವಿಧಾನ ಸಭೆಗಳಲ್ಲಿ ಮಹಿಳಾ ಮೀಸಲಾತಿ ನೀಡಬೇಕೆನ್ನುವುದು ಬಹುದಿನದ ಹಿಂದಿನ ಬೇಡಿಕೆ ಯಾಗಿದೆ. ಆದರೆ ಇದುವರೆಗೂ ಈಡೇರಿಲ್ಲ. ಈ ನಿಟ್ಟಿನಲ್ಲಿ ಎಡಪಕ್ಷದ ನಾಯಕಿ ಗೀತಾ ಮುಖರ್ಜಿಯೊಂದಿಗೆ ಸೇರಿ ನಾವು ಹೋರಾಟ ಮಾಡಿದ್ದೇವೆ. ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಉಮಾಭಾರತಿಯ ವಿರೋಧದಿಂದ ಈ ಪ್ರಸ್ತಾಪ ಬಿದ್ದು ಹೋಗಿತ್ತು. ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ರಾಜ್ಯಸಭೆಯಲ್ಲಿ ಈ ಕರಡು ಮಸೂದೆಗೆ ಅನುಮೋದನೆ ದೊರೆತಿದ್ದರೂ ಲೋಕ ಸಭೆಯಲ್ಲಿ ಯೋಗಿ ಆದಿತ್ಯನಾಥ್‌ರಂತಹ ಸಂಸದರು ಮಸೂದೆಯನ್ನು ಬೆಂಬಲಿಸಲು ವಿರೋಧಿಸಿದ ಕಾರಣ ಅನುಮೋದನೆಗೊಂಡಿಲ್ಲ. ಆದರೆ ಈಗ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಪೂರ್ಣ ಪ್ರಮಾಣದ ಬಹುಮತ ಇರುವುದರಿಂದ ಈ ಮಸೂದೆಯನ್ನು ಜಾರಿ ಮಾಡಲು ಯಾವುದೇ ಅಡ್ಡಿ ಇಲ್ಲ.

ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಅಖಿಲ ಭಾರತ ಪ್ರಗತಿ ಪರ ಮಹಿಳಾ ಸಂಘದ ಕಾರ್ಯದರ್ಶಿ (ಎಐಪಿಡಬ್ಲ್ಯುಎ) ಕವಿತಾ ಕೃಷ್ಣನ್‌ರವರು ‘ವಾರ್ತಾಭಾರತಿ’ಯ ಜೊತೆ ನಡೆಸಿದ ಸಂದರ್ಶನದಲ್ಲಿ ದೇಶದ ಸಾಮಾಜಿಕ ಪರಿಸ್ಥಿತಿ ಹಾಗೂ ಸದ್ಯದ ಸ್ಥಿತಿಗತಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top