ಗ್ರೇಟರ್ ಬೆಂಗಳೂರು ಪ್ರಾಧಿಕಾರ | ಬೆಂಗಳೂರು ಪೂರ್ವ ಪಾಲಿಕೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಪಣ ತೊಡಿ: ಬೈರತಿ ಸುರೇಶ್

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ಬರುವ ಬೆಂಗಳೂರು ಪೂರ್ವ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷದ ಕಾರ್ಯಕರ್ತರು, ಮುಖಂಡರು ಪಣ ತೊಡಬೇಕು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕರೆ ನೀಡಿದರು.
ಮಂಗಳವಾರ ಕೆ.ಆರ್.ಪುರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ಚುನಾವಣೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ಗುಂಪುಗಾರಿಕೆ ಮಾಡಬಾರದು. ಒಂದು ವೇಳೆ ಒಬ್ಬರು, ಮತ್ತೊಬ್ಬರನ್ನು ತುಳಿಯಲು ಪ್ರಯತ್ನಿಸಿದರೆ ಬಿಜೆಪಿ ಗೆಲುವು ಸುಲಭವಾಗುತ್ತದೆ ಎಂದು ಹೇಳಿದರು.
ನಮ್ಮ ನಡುವಿನ ಸಮಸ್ಯೆಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ. 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ 140 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಆದರೆ, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೆ.ಆರ್.ಪುರದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಡಿ.ಕೆ.ಮೋಹನ್ ಅವರಿಗೆ ಒಂದು ತಿಂಗಳು ಮುಂಚಿತವಾಗಿ ಟಿಕೆಟ್ ಕೊಟ್ಟಿದ್ದರೆ ಇಂದು ಅವರು ಶಾಸಕರಾಗಿರುತ್ತಿದ್ದರು ಎಂದು ಸುರೇಶ್ ಅಭಿಪ್ರಾಯಪಟ್ಟರು.
2019ರಲ್ಲಿ ಈ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಬಿಟ್ಟು ಹೋದವರೆಲ್ಲ ಪುನಃ ಪಕ್ಷಕ್ಕೆ ವಾಪಸ್ ಬರುತ್ತಿದ್ದಾರೆ. ಬಡವರ ಪರವಾಗಿ ಇರುವುದು ಕಾಂಗ್ರೆಸ್ ಮಾತ್ರ. ಬಿಜೆಪಿಗೆ ಅಭಿವೃದ್ಧಿ, ಕಾನೂನು ಸುವ್ಯವಸ್ಥೆ ಬೇಡ, ಜಾತಿ ಜನಾಂಗಗಳ ನಡುವೆ ಬೆಂಕಿ ಹಚ್ಚಿ ರಾಜಕಾರಣ ಮಾಡುವುದು ಮಾತ್ರ ಗೊತ್ತು ಎಂದು ಅವರು ಕಿಡಿಗಾರಿದರು.
ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 53 ಸಾವಿರ ಕೋಟಿ ರೂ.ಖರ್ಚು ಮಾಡುತ್ತಿದೆ. ಬಿಜೆಪಿಯವರಿಗೆ ನೈತಿಕತೆ ಅನ್ನೋದೆ ಇಲ್ಲ. ಇನ್ನೂ ನಾಲ್ಕೈದು ತಿಂಗಳಲ್ಲಿ ಜಿಬಿಎ ಪಾಲಿಕೆಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಸುರೇಶ್ ಹೇಳಿದರು.
2013ರಿಂದ ಈವರೆಗೆ ಈ ಕ್ಷೇತ್ರದ ಅಭಿವೃದ್ಧಿಗೆ ಸುಮಾರು 5 ಸಾವಿರ ಕೋಟಿ ರೂ.ಬಿಡುಗಡೆಯಾಗಿದೆ. ಇಷ್ಟೊಂದು ಅನುದಾನದಲ್ಲಿ ಆಗಿರುವ ಅಭಿವೃದ್ಧಿಯಾದರೂ ಏನು? ಪ್ರಶ್ನಿಸಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆಯನ್ನು ಆದ್ಯತೆಯನ್ನಾಗಿಸಿಕೊಳ್ಳಿ. ಯಾರು ಪಕ್ಷಕ್ಕೆ ದುಡಿಯುತ್ತಾರೆ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಮೋಹನ್ ಬಾಬು ಮಾತನಾಡಿ, 2023ರ ಚುನಾವಣೆಯಲ್ಲಿ ನಮ್ಮ ಪಾಲಿಕೆ ಸದಸ್ಯರು, ಮಹಿಳಾ ಘಟಕದ ಅಧ್ಯಕ್ಷೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಾರಾಟವಾದರು. ಅವರು ನಮ್ಮ ಪಕ್ಷದ ಕಾರ್ಯಕರ್ತರನ್ನು ಹಣ ಕೊಟ್ಟು ಖರೀದಿ ಮಾಡಿದರು. ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್ ನವರೇ ಸೋಲಿಸುತ್ತಾರೆ ಅನ್ನೋದು ಆ ಚುನಾವಣೆಯಲ್ಲಿ ನನಗೆ ಅನುಭವವಾಗಿದೆ ಎಂದು ಹೇಳಿದರು.
ಕೆ.ಆರ್.ಪುರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಬೆಂಗಳೂರು ಪೂರ್ವ ಪಾಲಿಕೆಯಡಿ ಕೆ.ಆರ್.ಪುರದಲ್ಲಿ 27 ಹಾಗೂ ಮಹದೇವಪುರ ಕ್ಷೇತ್ರದಲ್ಲಿ 23 ವಾರ್ಡುಗಳು ಸೇರಿ ಒಟ್ಟು 50 ವಾರ್ಡುಗಳನ್ನು ಮಾಡಿದ್ದಾರೆ. ಕೆ.ಆರ್.ಪುರದಲ್ಲಿ 20 ಹಾಗೂ ಮಹದೇವಪುರದಲ್ಲಿ 10 ವಾರ್ಡುಗಳಲ್ಲಿ ಗೆಲ್ಲಲು ನಮಗೆ ಅವಕಾಶವಿದೆ ಎಂದು ಅವರು ಹೇಳಿದರು.
ನಮ್ಮ ಗುರಿ ಜಿಬಿಎ ಚುನಾವಣೆ ಗೆಲ್ಲಬೇಕು. ಅದಕ್ಕಾಗಿ ಈ ರಾಜ್ಯಕ್ಕೆ, ದೇಶಕ್ಕೆ ಕಾಂಗ್ರೆಸ್ ಕೊಟ್ಟಿರುವ ಕೊಡುಗೆಗಳು, ನಮ್ಮ ಸರಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿಸುವ, ಪರಿಚಯಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಮೋಹನ್ ಬಾಬು ಕರೆ ನೀಡಿದರು.
ಮಾಜಿ ಶಾಸಕಿ ಕೆ.ಪೂರ್ಣೀಮಾ ಶ್ರೀನಿವಾಸ್ ಮಾತನಾಡಿ, ಈ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವವರು ಮಾಡಿರುವುದು ಶೂನ್ಯ ಅಭಿವೃದ್ಧಿ. ರಸ್ತೆಗಳಿಗೆ ಡಾಂಬರು, ಚರಂಡಿ ಮಾಡಿರುವುದು ಬಿಟ್ಟರೆ, ಶಾಶ್ವತ ಕೊಡುಗೆ ಕ್ಷೇತ್ರಕ್ಕೆ ಕೊಟ್ಟಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ ಎಂದರು.
ಪಾಲಿಕೆ ಚುನಾವಣೆಯಲ್ಲಿ ನಾವು ಗೆಲ್ಲಲು ನಮ್ಮ ಸರಕಾರದ ಕೆಲಸಗಳು, ಕಳೆದ ಸರಕಾರದ ಲೋಪಗಳು, ಕೇಂದ್ರ ಸರಕಾರದಿಂದ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಜನರಿಗೆ ತಿಳಿಸಬೇಕು. ಜನರ ಧ್ವನಿಯಾಗಿ ಕೆಲಸ ಮಾಡಿದರೆ ಖಂಡಿತವಾಗಿ ಚುನಾವಣೆ ಗೆಲ್ಲಲು ಸಾಧ್ಯವಿದೆ ಎಂದು ಅವರು ಹೇಳಿದರು.
ಆಕಾಂಕ್ಷಿಗಳು ಭ್ರಮೆಯಲ್ಲಿ ಇರಬೇಡಿ. ಪಕ್ಷ ಸಂಘಟನೆ ಮಾಡಿ, ಸಮೀಕ್ಷೆ ಮೂಲಕ ಸಮರ್ಥ ಅಭ್ಯರ್ಥಿಯನ್ನು ಘೋಷಿಸಲಾಗುವುದು. ಪಕ್ಷ ಯಾರಿಗೆ ಅವಕಾಶ ನೀಡುತ್ತದೆಯೋ ಅವರ ಗೆಲುವಿಗಾಗಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಪೂರ್ಣೀಮಾ ಶ್ರೀನಿವಾಸ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ವಿಧಾನಪರಿಷತ್ ಮಾಜಿ ಸದಸ್ಯ ಎಂ.ನಾರಾಯಣಸ್ವಾಮಿ ಮಾತನಾಡಿದರು. ಕೆಪಿಸಿಸಿ ವೀಕ್ಷಕರಾದ ಚಾಂದ್ ಪಾಷ, ರುಕ್ಸಾನಾ, ಕೆಪಿಸಿಸಿ ಉಪಾಧ್ಯಕ್ಷ ಆರ್.ಮಂಜುನಾಥ್, ಬಿಬಿಎಂಪಿ ಮಾಜಿ ಸದಸ್ಯರಾದ ಎನ್.ವೀರಣ್ಣ, ಕಲ್ಕೇರೆ ಶ್ರೀನಿವಾಸ್, ಮುಖಂಡರಾದ ಡಿ.ಎ.ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







