ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದ ವಜಾ : ಡಾ.ಜಿ.ಪರಮೇಶ್ವರ್

ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದಲೇ ವಜಾಗೊಳಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರ ಭ್ರಷ್ಟಚಾರವನ್ನು ಸಹಿಸುವುದಿಲ್ಲ. ಪೊಲೀಸ್ ಇಲಾಖೆ ಮಾತ್ರವಲ್ಲದೆ ಸರಕಾರದ ಯಾವುದೇ ಇಲಾಖೆಯಲ್ಲಾದರೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚ ಪಡೆದಿದ್ದರೆ ಅದನ್ನು ಸಹಿಸುವುದಿಲ್ಲ, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪ್ರಮುಖವಾಗಿ ಪೊಲೀಸ್ ಇಲಾಖೆಯಲ್ಲಿ ಲಂಚ ಪಡೆದಿದ್ದರೆ ಅದು ಸಾವಿರ ಇರಲಿ, ಐದುನೂರೆ ಇರಲಿ ತಕ್ಷಣವೇ ಅಮಾನತಿನಂತಹ ಕ್ರಮ ಕೈಗೊಂಡು ಇಲಾಖೆಯ ವಿಚಾರಣೆ ನಡೆಸಲಾಗುವುದು. ತನಿಖೆಯಲ್ಲಿ ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದಲೇ ವಜಾಗೊಳಿಸಲಾಗುತ್ತದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಲಂಚ ಸ್ವೀಕಾರದಂತಹ ಪ್ರಕರಣಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದರೆ ತಕ್ಷಣವೇ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ಸಮಾವೇಶ ಹಾಗೂ ಇತರ ಸಭೆಗಳಲ್ಲಿ ಸೂಚನೆ ನೀಡಿದ್ದೇವೆ. ಮುಖ್ಯಮಂತ್ರಿಯವರು ಕೂಡ ಸ್ಪಷ್ಟ ಆದೇಶ ನೀಡಿದ್ದಾರೆ. ಭ್ರಷ್ಟಚಾರವನ್ನು ಯಾವುದೇ ಹಂತದಲ್ಲೂ ತಾವು ಬೆಂಬಲಿಸುವುದಿಲ್ಲ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.







