ಕನ್ನಡಿಗನ ಗರ್ಭದಲ್ಲಿರುವ ಭಾವವೇ ‘ಸರ್ವಜನಾಂಗದ ಶಾಂತಿಯ ತೋಟ’ : ನಟ ಪ್ರಕಾಶ್ ರಾಜ್

ಬೆಂಗಳೂರು : ‘ಕನ್ನಡ ರಾಜ್ಯೋತ್ಸವದ ಸಂಭ್ರಮದ ಗರ್ಭದಲ್ಲಿರುವ ಭಾವ ಬಸವಣ್ಣ ಆಗಿದ್ದು, ಕನ್ನಡಿಗ ಎನ್ನುವ ಗರ್ಭದಲ್ಲಿರುವ ಭಾವ ರಾಷ್ಟ್ರಕವಿ ಕುವೆಂಪು ಅವರು ಪ್ರತಿಪಾದಿಸಿದ ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ನಂಬಿಕೆಯಾಗಿದೆ’ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಕೇವಲ ಭಾಷಾಭಿಮಾನವಲ್ಲ, ಅದರ ಗರ್ಭದಲ್ಲಿ ಏನಿದೆ, ಅದರ ಭಾವ ಏನು ಎಂದು ತಿಳಿಯಬೇಕಾಗುತ್ತದೆ ಎಂದು ನುಡಿದರು.
ರಾಜ್ಯೋತ್ಸವವನ್ನು ನಾವು ಆಚರಿಸುತ್ತೇವೆ ಎಂದರೆ ನಮ್ಮ ನೆಲದ ಸಹಿಷ್ಣುತೆಗೆ, ಎಲ್ಲ ಧರ್ಮ ಮತ್ತು ಎಲ್ಲರನ್ನು ಅಪ್ಪಿಕೊಳ್ಳುವ ನಮ್ಮ ಸೃಜನತೆಗೆ, ನಮ್ಮ ಹಿರಿಯರ ದೊಡ್ಡದೊಡ್ಡ ಮಾತುಗಳಿಗೆ ಸಂಭ್ರಮಿಸುವುದು. ಕನ್ನಡ ಪ್ರೀತಿ ಇರುವುದು ಅಹಂಕಾರದಿಂದ ಅಲ್ಲ, ಕನ್ನಡದ ವೈಶಿಷ್ಟ್ಯತೆಗೆ ಇರುವಂತಹ ನಮ್ಮ ಸಂಭ್ರಮವಾಗಿದೆ ಎಂದು ಅವರು ತಿಳಿಸಿದರು.
ಕುವೆಂಪು ಆಶಯದಂತೆ ನಾವು ವಿಶ್ವಮಾನವರಾಗಬೇಕು. ಈ ಸಂದೇಶವನ್ನು ಸಂಭ್ರಮಿಸುವುದೇ ಕನ್ನಡ ರಾಜ್ಯೋತ್ಸವವಾಗಿದ್ದು, ಪ್ರೀತಿಯಿಂದ ಮಾತ್ರ ಕನ್ನಡಿಗರು ಬದುಕುತ್ತಾರೆ ಎಂಬುದನ್ನು ಸಂಭ್ರಮಿಸೋಣ ಎಂದು ಪ್ರಕಾಶ್ ರಾಜ್ ಹೇಳಿದರು.







