‘ಕೆಎಂಡಿಸಿ ವತಿಯಿಂದ ಸಮುದಾಯ ಆಧಾರಿತ ತರಬೇತಿ ಯೋಜನೆ ಆರಂಭ’

ಬೆಂಗಳೂರು : ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ವತಿಯಿಂದ ಸಮುದಾಯ ಆಧಾರಿತ ಉಚಿತ ತರಬೇತಿ ಯೋಜನೆಯನ್ನು ಆರಂಭಿಸಿದ್ದು, ಆಸಕ್ತ ಅಲ್ಪಸಂಖ್ಯಾತ ಸಮುದಾಯದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ನ.15ರೊಳಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಕೆಎಂಡಿಸಿ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು: ಪಾರ್ಸ್‍ಪೋರ್ಟ್ ಅಳತೆ ಭಾವಚಿತ್ರ, ವಯಸ್ಸಿನ ಪುರಾವೆಯಾಗಿ ಎಸೆಸೆಲ್ಸಿ ಅಂಕಪಟ್ಟಿ, ಹೆಚ್ಚುವರಿ ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರಗಳು(ಆಯ್ಕೆ ಮಾಡಿದ ಕೋರ್ಸ್ ಪ್ರಕಾರ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್. ಈ ದಾಖಲೆಗಳೊಂದಿಗೆ ನಮ್ಮ ಪೋರ್ಟಲ್ https://kmdconline.karnataka.gov.in/portal/home ಮೂಲಕ ಅರ್ಜಿ ಸಲ್ಲಿಸಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.
ಕೋರ್ಸ್‍ಗಳ ವಿವರ: ರಿಮೋಟ್ ಪೈಲಟ್ ಏರ್ ಕ್ರಾಫ್ಟ್(15 ದಿನಗಳ ತರಬೇತಿ, ವಿದ್ಯಾರ್ಹತೆ ಎಸೆಸೆಲ್ಸಿ), ಡ್ರೋನ್ ಸಿಸ್ಟಮ್ಸ್ ಅಂಡ್ ಕಂಟ್ರೋಲ್ ಇಂಜಿನಿಯರಿಂಗ್, ಕ್ವಾಂಟಮ್ ಕಂಪ್ಯೂಟಿಂಗ್ ಹಾಗೂ ಎಐ, ಎಂ.ಎಲ್, ಸೈಬರ್ ಸುರಕ್ಷತೆ, ಕ್ಲೌಡ್ ಕಂಪ್ಯೂಟಿಂಗ್ ಕುರಿತು ಮೂರು ತಿಂಗಳ ತರಬೇತಿ ನೀಡಲಾಗುವುದು(ವಿದ್ಯಾರ್ಹತೆ ಇಂಜಿನಿಯರಿಂಗ್ ಪದವಿ). ಈ ಕೋರ್ಸುಗಳಲ್ಲಿ ತರಬೇತಿ ಪಡೆಯುವವರಿಗೆ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಲ್ತಾಫ್ ಖಾನ್ ಹೇಳಿದ್ದಾರೆ.
ಎಲಿವೇಟರ್(ಲಿಫ್ಟ್) ಟೆಕ್ನಿಶೀಯನ್ ಕೋರ್ಸ್(ವಿದ್ಯಾರ್ಹತೆ ಪಿಯುಸಿ, ಐಟಿಐ, ಡಿಪ್ಲೋಮಾ). ಮೂರು ತಿಂಗಳು ತರಬೇತಿ ಹಾಗೂ ಕಂಪೆನಿಗಳಲ್ಲಿ ಪ್ರಶಿಕ್ಷಣಾರ್ಥಿಯಾಗಿಯೂ ಕೆಲಸ ಮಾಡಲು ಅವಕಾಶ. ಹೊಟೇಲ್ ಮ್ಯಾನೇಜ್‍ಮೆಂಟ್ ಕೋರ್ಸ್, ಸೋಲಾರ್ ಪಿವಿ ಅಳವಡಿಸುವ ತರಬೇತಿ(ವಿದ್ಯಾರ್ಹತೆ ಎಸೆಸೆಲ್ಸಿ), ಮೇಕಪ್ ತರಬೇತಿ(ಮಹಿಳೆಯರಿಗೆ ಮಾತ್ರ) ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ರಕ್ತದ ಮಾದರಿ ಸಂಗ್ರಹ ಹಾಗೂ ಪ್ರಯೋಗಾಲಯ ಸಹಾಯಕ ತರಬೇತಿ(ವಿದ್ಯಾರ್ಹತೆ ಪಿಯುಸಿ-ವಿಜ್ಞಾನ), ಜಿಎಸ್‍ಟಿ, ಆದಾಯ ತೆರಿಗೆ, ಇಎಸ್‍ಐ, ಪಿಎಫ್ ಸೇರಿದಂತೆ ಇನ್ನಿತರ ತೆರಿಗೆಗಳ ಕುರಿತು ಸಮಾಲೋಚನೆ ನಡೆಸುವ ತರಬೇತಿ(ವಿದ್ಯಾರ್ಹತೆ ಬಿ.ಕಾಂ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಹಾಗೂ ಪೂರ್ಣಗೊಳಿಸಿರುವವರು). ಗ್ರಾಫಿಕ್ ವಿನ್ಯಾಸ(ಕೋರೆಲ್, ಫೋಟೋಶಾಪ್ ಇತ್ಯಾದಿ) ಕೋರ್ಸ್‍ಗೆ ಎಸೆಸೆಲ್ಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು ಎಂದು ಅಲ್ತಾಫ್ ಖಾನ್ ತಿಳಿಸಿದ್ದಾರೆ.
ಈ ಸಂಬಂಧ ಅಭ್ಯರ್ಥಿಗಳಿಗೆ ಹೆಚ್ಚಿನ ಮಾಹಿತಿ ಅಥವಾ ಸಹಾಯದ ಅಗತ್ಯವಿದಲ್ಲಿ ಮೊಬೈಲ್ ಸಂಖ್ಯೆ 8277799990, ಇಮೇಲ್ ವಿಳಾಸ kmdc.ho.info@gmail.com ಅನ್ನು ಸಂಪರ್ಕಿಸಬಹುದು ಎಂದು ಅಲ್ತಾಫ್ ಖಾನ್ ಪ್ರಕಟಣೆಯಲ್ಲಿ ಕೋರಿದ್ದಾರೆ.







