ಬೆಂಗಳೂರಿನಲ್ಲಿ ‘ಸುರಂಗ ರಸ್ತೆ ಯೋಜನೆ ವಿರೋಧಿಸಿ’ ಬಿಜೆಪಿ ಸಹಿ ಸಂಗ್ರಹ ಅಭಿಯಾನ

ಬೆಂಗಳೂರು, ನ.2: ರಾಜ್ಯ ಸರಕಾರ ಉದ್ದೇಶಿತ ಸುರಂಗ ರಸ್ತೆ (ಟನಲ್) ಯೋಜನೆ ವಿರೋಧಿಸಿದ ಬಿಜೆಪಿ ನಾಯಕರು, ಸಹಿ ಸಂಗ್ರಹ ಜಾಗೃತಿ ಅಭಿಯಾನವನ್ನು ನಡೆಸಿದರು.
ರವಿವಾರ ಇಲ್ಲಿನ ಲಾಲ್‍ಬಾಗ್‍ನಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ನಾಯಕರು, ಕಾರ್ಯಕರ್ತರು, ಲಾಲ್‍ಬಾಗ್ ಉದ್ಯಾನವನದಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ಕೈಬಿಡಿ ಎಂದು ಘೋಷಣೆ ಕೂಗಿ, ಬೆಂಗಳೂರು ರಕ್ಷಿಸಿ ಎಂದು ಸಹಿ ಸಂಗ್ರಹ ಮಾಡಿದರು.
ಸುರಂಗ ರಸ್ತೆ ಯೋಜನೆ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರವಲ್ಲ. ಸುರಂಗ ರಸ್ತೆಗಳು ನಗರಗಳಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದಿಲ್ಲ, ಬದಲಿಗೆ ಖಾಸಗಿ ಸಾರಿಗೆಯ ಮೇಲೆ ಹೆಚ್ಚು ಅವಲಂಬನೆ ಮತ್ತು ಸಾರ್ವಜನಿಕ ಸಾರಿಗೆಯ ಕೊರತೆ ಎಂಬ ಮೂಲ ಕಾರಣವನ್ನು ಪರಿಹರಿಸದೆ, ಕೇವಲ ಒಂದು ಜಂಕ್ಷನ್‍ನಿಂದ ಇನ್ನೊಂದಕ್ಕೆ ಸಂಚಾರವನ್ನು ಸ್ಥಳಾಂತರಿಸುತ್ತವೆ ಎಂದು ಬಿಜೆಪಿ ನಾಯಕರು ಟೀಕಿಸಿದರು.
ಈ ಯೋಜನೆಯು ಸೂಕ್ತವಾದ ಪರಿಸರ ಅಥವಾ ಭೂವೈಜ್ಞಾನಿಕ ಪರಿಣಾಮಗಳ ಅಧ್ಯಯನವಿಲ್ಲದೆ ಮುಂದುವರೆದಿರುವುದರಿಂದ, ಲಾಲ್‍ಬಾಗ್‍ನ ಪರಿಸರ ಮತ್ತು 3000 ದಶಲಕ್ಷ ವರ್ಷಗಳಷ್ಟು ಹಳೆಯದಾದ ಪೆನಿನ್ಸುಲಾರ್ ಬಂಡೆ ಎಂಬ ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕಕ್ಕೆ ಶಾಶ್ವತ ಹಾನಿ ಉಂಟು ಮಾಡುವ ಆತಂಕ ಇದೆ ಎಂದು ಆರೋಪಿಸಿದರು.
ಈ ಯೋಜನೆಗೆ ಸಾವಿರಾರು ಕೋಟಿಗಳನ್ನು ಖರ್ಚು ಮಾಡುವ ಬದಲು, ರಾಜ್ಯ ಸರಕಾರವು ಸುಸ್ಥಿರವಾದ, ದೀರ್ಘಕಾಲೀನ ಸಾರಿಗೆ ಪರಿಹಾರಗಳಲ್ಲಿ ಹೂಡಿಕೆ ಮಾಡಿ, ಎಲ್ಲರಿಗೂ ಸುಲಭವಾಗಿ ಮತ್ತು ಸಮರ್ಥವಾಗಿ ಲಭ್ಯವಿರುವ ಸಾರ್ವಜನಿಕ ಸಂಚಾರಕ್ಕಾಗಿ ಮೆಟ್ರೋ, ಉಪನಗರ ರೈಲು ಮತ್ತು ಬಿಎಂಟಿಸಿ ಜಾಲಗಳನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಶಾಸಕರಾದ ಕೆ.ಸಿ.ರಾಮೂರ್ತಿ, ಉದಯ್ ಗರುಡಾಚಾರ್, ವಿಧಾನ ಪರಿಷತ್ತಿನ ಸದಸ್ಯ ಗೋಪಿನಾಥ್ ರೆಡ್ಡಿ ಸೇರಿದಂತೆ ಪ್ರಮುಖರು ಇದ್ದರು.
ವಾರಕ್ಕೆ 20 ಸಾವಿರ ರೂ.ಬೇಕು: ನಗರದ ರಸ್ತೆ ಗುಂಡಿ ಮುಚ್ಚಲು ಸಿಎಂ ಸಿದ್ದರಾಮಯ್ಯ ಒಂದು ವಾರ ಗಡುವು ನೀಡಿದ್ದರೂ ಅದಕ್ಕೆ ಅಧಿಕಾರಿಗಳು ಸ್ವಲ್ಪವೂ ಬೆಲೆ ನೀಡಿಲ್ಲ. ಈ ಬಗ್ಗೆ ಗಮನ ಕೊಡದೆ ಸುರಂಗ ಯೋಜನೆ ರೂಪಿಸಲಾಗುತ್ತಿದೆ. ಯಾವುದೇ ಯೋಜನೆಗೆ ವರ್ಷಗಟ್ಟಲೆ ಅವಧಿ ಬೇಕಾಗುತ್ತದೆ. ಸುರಂಗ ಮಾಡಲು ಹೊರಟರೆ ಮುಂದಿನ ಪೀಳಿಗೆಗೆ ಆ ಯೋಜನೆ ಸಿಗಬಹುದು. ಒಬ್ಬ ಚಾಲಕ ಒಂದು ವಾರ ಸುರಂಗ ರಸ್ತೆಯಲ್ಲಿ ಹೋದರೆ, 20 ಸಾವಿರ ರೂ. ಶುಲ್ಕ ಪಾವತಿಸಬೇಕಾಗುತ್ತದೆ’
-ಆರ್.ಅಶೋಕ್, ವಿಪಕ್ಷ ನಾಯಕ, ವಿಧಾನಸಭೆ
ಸಹಿ ಸಂಗ್ರಹದಲ್ಲಿ ಕನ್ನಡ: ಸಹಿ ಸಂಗ್ರಹ ಸಂದರ್ಭದಲ್ಲಿ ಮೊದಲಿಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಫಲಕದ ಮೇಲೆ ‘ಬೆಂಗಳೂರು ರಕ್ಷಿಸಿ’ ಎಂಬ ವಾಕ್ಯ ಬರೆದು ಇದು ಸರಿಯಿದೆಯೇ ಎಂದು ಪತ್ರಕರ್ತರನ್ನು ಪ್ರಶ್ನಿಸಿದ ಪ್ರಸಂಗ ಜರುಗಿತು. ಅನಂತರ, ಕನ್ನಡದಲ್ಲಿ ಲಾಲ್‍ಬಾಗ್ ರಕ್ಷಿಸಿ ಬರೆಯುವಂತೆ ಸಂಸದ ತೇಜಸ್ವಿ ಸೂರ್ಯಗೆ ಅಶೋಕ್ ಸೂಚಿಸಿದರೂ, ಟೆನಲ್ ರೋಡ್ ಎಂದು ಇಂಗ್ಲಿಷ್‍ನಲ್ಲಿ ಬರೆದು ರಕ್ಷಿಸಿ ಪದ ಮಾತ್ರ ಕನ್ನಡದಲ್ಲಿ ಬರೆದರು.







