ಎಲ್ಲ ಜಿಲ್ಲೆಗಳಲ್ಲಿ ತುಳು ಉಪನ್ಯಾಸ ಆಯೋಜಿಸಲು ಪ್ರಸ್ತಾವ ಸಲ್ಲಿಸಿ : ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ತುಳುವರಿಗೆ ಕನ್ನಡದ ಬಗ್ಗೆ ಗೊತ್ತಿದೆ. ಕನ್ನಡಿಗರಿಗೆ ತುಳುವಿನ ಬಗ್ಗೆ ಗೊತ್ತಾಗಬೇಕು. ಅದಕ್ಕಾಗಿ ಉಡುಪಿ ಮತ್ತು ಮಂಗಳೂರು ಬಿಟ್ಟು ಉಳಿದ ಎಲ್ಲ ಜಿಲ್ಲೆಗಳಲ್ಲಿ ತುಳುಭಾಷೆಯ ಬಗ್ಗೆ ಉಪನ್ಯಾಸ ಆಯೋಜಿಸಲು ಮುಂದಿನ ವರ್ಷದ ಬಜೆಟ್‍ನಲ್ಲಿ ಹಣ ನೀಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದ್ದಾರೆ.
ರವಿವಾರ ನಗರದ ಬಿಎಂಶ್ರೀ ಕಲಾ ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಹಾಗೂ ಋತುಗಾನ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ‘ಕನ್ನಡ ಜಗತ್ತಿಗೆ ತುಳು ಲೋಕದ ಪರಿಚಯ ಮಾಲಿಕೆ-ತುಳು ಪಾಡ್ದನಗಳ ಲೋಕದೃಷ್ಟಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಸಮಾಜ ಹೇಗೆ ಬೆಳೆದಿದೆ ಎಂದರೆ ಒಂದು ಸಮುದಾಯ ಇನ್ನೊಂದು ಸಮುದಾಯದ ಬಗ್ಗೆ ಏನನ್ನು ತಿಳಿದುಕೊಳ್ಳುವುದಿಲ್ಲ. ತುಳುವರು ಮತ್ತು ಕನ್ನಡಿಗರು ಒಟ್ಟಿಗೆ ಬೆಳೆದಿದ್ದೇವೆ. ತುಳುನಾಡು ಕರ್ನಾಟಕದ ಭಾಗವೇ ಆಗಿದೆ. ಆದರೆ ಕನ್ನಡಿಗರು ತುಳುವಿನ ಬಗ್ಗೆ ತಿಳಿದುಕೊಂಡಿರುವುದು ಬಹಳ ಕಡಿಮೆ ಎಂದು ಬೇಸರ ವ್ಯಕ್ತಪಡಿಸಿದರು.
ಯಕ್ಷಗಾನದಂತಹ ದೊಡ್ಡ ಕಲೆಯನ್ನು ಕೂಡ ತುಳು ಭಾಷಿಕರೇ ಹೆಚ್ಚು ನೋಡುತ್ತಾರೆ. ನನ್ನ ಮಾತೃ ಭಾಷೆ ತುಳು ಆದರೂ ಕೂಡ ಕನ್ನಡದಲ್ಲೇ ಎಂಎ ಮಾಡಿದ್ದೇನೆ. ಮಂಜೇಶ್ವರ ಗೋವಿಂದಪೈ, ಕಯ್ಯಾರ ಕಿಞ್ಞಣ್ಣರೈ, ಪಂಜೆ ಮಂಗೇಶರಾಯರು ಸೇರಿ ಅನೇಕ ತುಳುವರು ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ತುಳು ಪಾಡ್ದನಗಳ ಬಗ್ಗೆ ಕನ್ನಡಿಗರಿಗೆ ಹೇಳುವ ಜೊತೆಗೆ ಹೊಸ ತಲೆಮಾರಿನ ತುಳುವರಿಗೂ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪಾಡ್ದನ ಎಂದರೆ ತುಳುನಾಡಿನ ದೈವಗಳ ಕಥನ. ಪಾಡ್ದನಗಳು ಮೌಖಿಕ ರೂಪದಲ್ಲಿ ಬಂದಿವೆ. ಆದ್ದರಿಂದ ಅವುಗಳ ಲೋಕದೃಷ್ಟಿಯೇ ಬೇರೆ. ಪಾಡ್ದನಗಳ ಲೋಕದೃಷ್ಟಿಯಲ್ಲಿ ಹಸಿವು, ಬಡತನ, ಜಾತೀಯತೆಯನ್ನು ಹೇಳಲಾಗಿದೆ. ತುಳುನಾಡಿನಲ್ಲಿ ಅನೇಕ ದೈವಗಳು ಇವೆ. ಎಲ್ಲ ದೈವಗಳ ಪದಕೋಶವನ್ನು ಹೊರತರಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಂಬಾ ಜನರು ತುಳುವಿನಲ್ಲಿ ಏನಿದೆ? ಎಂದು ಕೇಳುತ್ತಾರೆ. ಕನ್ನಡ ಜಗತ್ತಿನಲ್ಲಿ ಏನೇನು ಇದೆಯೋ ಅದೆಲ್ಲವೂ ತುಳುವಿನಲ್ಲಿದೆ. ಕನ್ನಡ ಸಾಹಿತ್ಯದಲ್ಲಿರುವ ಎಲ್ಲ ಪ್ರಕಾರಗಳು ತುಳು ಸಾಹಿತ್ಯದಲ್ಲಿಯೂ ಇವೆ ಎಂದು ತಿಳಿಸಿದರು.
ಹಿರಿಯ ತುಳು ನಾಟಕ ನಿರ್ದೇಶಕ ಸುಧಾಕರ ಬನ್ನಂಜೆ ಮಾತನಾಡಿ, ತುಳುವರು ಕನ್ನಡದ ಅಭಿವ್ಯಕ್ತಿಯಲ್ಲಿ ದೊಡ್ಡ ಪಾತ್ರವಹಿಸಿದ್ದೇವೆ. ನಮ್ಮ ಮಾತೃಭಾಷೆ ತುಳುವಾದರೂ ನಾವು ಶಾಲೆಯಲ್ಲಿ ತುಳು ಮಾತನಾಡಿದರೆ ಶಿಕ್ಷಕರು ಹೊಡೆಯುತ್ತಿದ್ದರು. ತುಳು-ಕನ್ನಡ ಎರಡೂ ಕೂಡ ಏಕರೂಪದಲ್ಲಿ ಬೆಳೆದ ಭಾಷೆಗಳು. ತುಳು ಭಾಷೆಯ ಲಿಪಿಯಿಲ್ಲದ ಒಂದು ಕಾಲದಲ್ಲಿ ಜನರ ಭಾವನೆ ಮತ್ತು ಮನಸ್ಸಿನ ಮಾತುಗಳ ಮೂಲಕ ಇಲ್ಲಿಯ ತನಕ ಉಳಿದಿರುವುದನ್ನು ನೋಡಿದರೆ ತುಳುವಿನ ಮಹತ್ವ ಗೊತ್ತಾಗುತ್ತದೆ ಎಂದು ತಿಳಿಸಿದರು.
ಕನ್ನಡ ಮತ್ತು ತುಳು ಭಾಷೆಗಳು ಮೇರು ಶಿಖರಕ್ಕೆ ಏರುತ್ತಿವೆ. ತುಳುವರು ಯಾವತ್ತಿಗೂ ಸಾಹಸಪ್ರಿಯರು, ಹಾಸ್ಯಪ್ರವೃತ್ತಿವುಳ್ಳವರು. ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸುವ ಕುರಿತು ಅನೇಕ ಪ್ರಯತ್ನಗಳು ಆಗುತ್ತಿವೆ. ಅದರ ಜತೆಗೆ ಕರ್ನಾಟಕದಲ್ಲಿ ತುಳು ರಾಜ್ಯದ ಅಧಿಕೃತ ಭಾಷೆಯಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ಕವಿಗಳಾದ ರುಕ್ಮಿಣಿ ನಾಯರ್, ಆನಂದ ಕುಮಾರ್.ಎಸ್.ಡಿ, ಸಯ್ಯದ್ ಯೇಜಸ್ ಪಾಷ, ಡಾ.ಪದ್ಮಾ ಟಿ.ಚಿನ್ಮಯಿ, ರಾಕೇಶ್ ಎಂ, ಸ್ಮಿತಾ ಬಲ್ಲಾಳ್ ಬೆಂಗಳೂರು ಅವರು ಕವಿತೆ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಸಂಚಾಲಕ ಶೇಖರ್ ಪುತ್ರನ್, ಋತುಗಾನ ಪ್ರತಿಷ್ಠಾನದ ಅಧ್ಯಕ್ಷೆ ವಿಜಯಲಕ್ಷ್ಮಿ ಸತ್ಯಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.







