ಬೆಂಗಳೂರು | ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ಆರೋಪ: ಖಾಸಗಿ ಕಂಪೆನಿ ಉದ್ಯೋಗಿಯ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕಿರುತೆರೆ ನಟಿಯೊಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ 41 ವರ್ಷದ ನಟಿಯೊಬ್ಬರು ನೀಡಿದ ದೂರಿನನ್ವಯ ಕೆ.ನವೀನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪೆನಿಯೊಂದರ ಡೆಲಿವರಿ ಮ್ಯಾನೇಜರ್ ಆಗಿರುವ ಆರೋಪಿ, ಸಾಮಾಜಿಕ ಜಾಲತಾಣದ ಮೂಲಕ ನಟಿಗೆ ನಿರಂತರವಾಗಿ ಅಶ್ಲೀಲ ಫೋಟೋ, ವಿಡಿಯೋಗಳನ್ನು ಕಳಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕನ್ನಡ ಹಾಗೂ ತೆಲುಗು ಭಾಷೆಯ ಕಿರುತೆರೆ ನಟಿಗೆ ಮೂರು ತಿಂಗಳ ಹಿಂದೆ ಫೇಸ್ಬುಕ್ ಮೂಲಕ ಆರೋಪಿ ನವೀನ್ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಆದರೆ, ದೂರುದಾರೆ ಆತನ ರಿಕ್ವೆಸ್ಟ್ ಸ್ವೀಕರಿಸಿರಲಿಲ್ಲ. ಅಂದಿನಿಂದ ದೂರುದಾರೆಗೆ ನಿತ್ಯವೂ ಮೆಸೆಂಜರ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳಿಸಲಾರಂಭಿಸಿದ್ದ. ಆರೋಪಿಗೆ ಆರಂಭದಲ್ಲಿಯೇ ದೂರುದಾರೆ ತಿಳಿ ಹೇಳಿ, ಎಚ್ಚರಿಕೆ ಸಹ ನೀಡಿದ್ದರು.
ಆದರೂ ಆರೋಪಿಯ ಕಾಟ ಹೆಚ್ಚಾದಾಗ ಆತನ ಪ್ರೊಫೈಲ್ ಬ್ಲಾಕ್ ಮಾಡಿದ್ದರು. ಅದಾದ ಬಳಿಕವೂ ಬೇರೆ ಬೇರೆ ಪ್ರೊಫೈಲ್ ಮೂಲಕ ದೂರುದಾರರಿಗೆ ಅಶ್ಲೀಲ ಸಂದೇಶಗಳು, ಗುಪ್ತಾಂಗದ ಫೋಟೋ, ವಿಡಿಯೋಗಳನ್ನು ಕಳಿಸಲಾರಂಭಿಸಿದ್ದ. ನವೆಂಬರ್ 1ರಂದು ನಾಗರಭಾವಿ 2ನೇ ಹಂತದಲ್ಲಿರುವ ಖಾಸಗಿ ಹೋಟೆಲ್ವೊಂದಲ್ಲಿ ಆರೋಪಿಯನ್ನು ನೇರವಾಗಿ ಭೇಟಿಯಾಗಿದ್ದ ನಟಿ ಬುದ್ಧಿವಾದ ಹೇಳಿದ್ದರು. ಬಳಿಕ ಆರೋಪಿಯ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ನವೀನ್ನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಿರುವುದಾಗಿ ಮಾಹಿತಿ ನೀಡಿದ್ದಾರೆ.







