ಸರಕಾರಿ ಹುದ್ದೆಗಳು ಭ್ರಷ್ಟಾಚಾರಕ್ಕೆ ಪರವಾನಗಿಯಂತಾಗಿವೆ : ನ್ಯಾ.ಬಿ.ವೀರಪ್ಪ

ಬೆಂಗಳೂರು : ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿ ಗೌರವದಿಂದ ಬದುಕುವಂತೆ ಮಾಡಿದೆ. ಆದರೆ ಜನರು ಕರ್ತವ್ಯ ಪಾಲಿಸಲು ಮರೆತಿದ್ದಾರೆ. ಸರಕಾರಿ ಹುದ್ದೆಗಳು ಭ್ರಷ್ಟಾಚಾರಕ್ಕೆ ಪರವಾನಗಿಯಂತಾಗಿವೆ. ಈ ಕ್ಯಾನ್ಸರ್ ಅನ್ನು ಶಮನಗೊಳಿಸಲು ಎಲ್ಲರೂ ಮನಸ್ಸು ಮಾಡದಿದ್ದರೆ ದೇಶ ಮತ್ತೊಮ್ಮೆ ಗುಲಾಮಗಿರಿಯತ್ತ ಸಾಗಬೇಕಾಗುತ್ತದೆ ಎಂದು ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ರಾಜ್ಯ ಸರಕಾರಿ ನೌಕರರ ಸಂಘದ ಎನ್‍ಜಿಒ ಸಭಾಂಗಣದಲ್ಲಿ ‘ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ’ ಮತ್ತು ‘ಮಾನವ ಹಕ್ಕುಗಳು ಹಾಗೂ ಭ್ರಷ್ಟಾ ಚಾರ ವಿರೋಧಿ ಸಂಸ್ಥೆ’ಯು ಆಯೋಜಿಸಿದ್ದ ರಾಜ್ಯಮಟ್ಟದ ಕಾನೂನು ಜಾಗೃತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ದೇಶದ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ವ್ಯಾಪಿಸಿದ್ದು, ಅದರ ವಿರುದ್ಧ ಮಾಧ್ಯಮಗಳು ಗಟ್ಟಿ ಧ್ವನಿ ಎತ್ತಬೇಕಾಗಿದೆ. ಸ್ವಾತಂತ್ರ್ಯ ಪಡೆದಾಗ ಶೇ.18 ರಷ್ಟು ಮಂದಿಗೆ ಮಾತ್ರ ಸಾಕ್ಷರತೆ ಇತ್ತು. ಈಗ ಸಾಕ್ಷರತೆ ಶೇ.80ಕ್ಕೆ ತಲುಪಿದೆ. ಆದರೆ, ವಿದ್ಯಾವಂತ ಮೋಸಗಾರರಿಂದಲೇ ಭ್ರಷ್ಟಾಚಾರ ಹೆಚ್ಚಾಗಿದೆ. ಮಕ್ಕಳಿಗೆ ನೀಡುವ ಮೊಟ್ಟೆಯನ್ನೂ ಅಂಗನವಾಡಿ ಶಿಕ್ಷಕರು ಕಸಿದು ಮಾರಾಟ ಮಾಡುವಷ್ಟು ಅಕ್ರಮವು ಹರಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜಾತಿ ಹೆಸರಿನಲ್ಲಿ ಅಸ್ಪೃಶ್ಯತೆ ಆಚರಿಸುವ ಬದಲು ಭ್ರಷ್ಟಾಚಾರಿಗಳನ್ನು ಅಸ್ಪೃಶ್ಯರನ್ನಾಗಿಸಬೇಕು. ಮದುವೆ ಸಮಾರಂಭಗಳಿಗೂ ಕರೆಯಬಾರದೆಂಬ ಸಂಕಲ್ಪ ಮಾಡಬೇಕು. ಅಪ್ರಾಮಾಣಿಕ ಸಂಪಾದನೆಯಿಂದ ಕೊಡಿಸಿದ ಆಭರಣ, ಆಸ್ತಿಯನ್ನು ತಾಯಿ, ಪತ್ನಿ, ಮಕ್ಕಳು ನಿರಾಕರಿಸಬೇಕು. ಮನೆಯಿಂದಲೇ ಈ ಹೋರಾಟ ಆರಂಭವಾಗಬೇಕು ಎಂದು ವೀರಪ್ಪ ಕರೆ ನೀಡಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ಮಾತನಾಡಿ, ಅನ್ಯಾಯ, ಅಪರಾಧ, ಹಗರಣಗಳು ನಡೆದಾಗ ಯುವ ಸಮುದಾಯ ಪ್ರಶ್ನಿಸಬೇಕು. ಕಾನೂನು ಮಾಹಿತಿಗಳನ್ನು ಪಡಡೆದು ಹೋರಾಟ ನಡೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ ವಲಯ ನಿರ್ದೇಶಕ ಸಚಿನ್ ಘೋರ್ಪಡೆ, ಎನ್‍ಫೋಲ್ಡ್ ಪ್ರೊ ಆ್ಯಕ್ಟೀವ್ ಹೆಲ್ತ್ ಟ್ರಸ್ಟ್‍ನ ನಿರ್ದೇಶಕಿ ಖುಷಿ ಕುಶಾಲಪ್ಪ, ಪ್ರಾಧಿಕಾರದ ಸದಸ್ಯ ಮೋಹನ್ ರಾವ್ ಘೋರ್ಪಡೆ ಸೇರಿದಂತೆ ಹಲವರು ಭಾಗವಹಿಸಿದ್ದರು.






