ಕೆಪಿಎಸ್ ಶಾಲೆಗಳಿಗೆ 2,500 ಕಂಪ್ಯೂಟರ್ ಸೈನ್ಸ್ ಶಿಕ್ಷಕರ ನೇಮಕ

ಬೆಂಗಳೂರು : ರಾಜ್ಯದ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳಲ್ಲಿ(ಕೆಪಿಎಸ್) ಮಾಹಿತಿ ತಂತ್ರಜ್ಞಾನ ಶಿಕ್ಷಣವನ್ನು ಬಲಪಡಿಸುವ ಉದ್ದೇಶದಿಂದ ಪ್ರತ್ಯೇಕ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ವೃಂದವನ್ನು ಸ್ಥಾಪಿಸಿ, 2,500 ಹೊಸ ಹುದ್ದೆಗಳನ್ನು ಮಂಜೂರು ಮಾಡಲು ರಾಜ್ಯ ಸರಕಾರವು ಆದೇಶ ಹೊರಡಿಸಿದೆ.
2026–27ನೇ ಸಾಲಿನಿಂದ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ಪರಿಚಯಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 200 ಶಾಲೆಗಳು ಹಾಗೂ ರಾಜ್ಯದ ಊಳಿದ 500 ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳಾಗಿ ಉನ್ನತೀಕರಿಸಲ್ಪಟ್ಟಿದ್ದು, ಹೆಚ್ಚುವರಿ ಮೂಲಭೂತ ಸೌಕರ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಶಿಕ್ಷಣವನ್ನು ನೀಡಲು ಸಿದ್ಧತೆ ನಡೆದಿದೆ. ಈ ಹಿನ್ನೆಲೆಯಲ್ಲಿ, ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಮರುಹಂಚಿಕೆ ಮಾಡಿದ 6,117 ಹುದ್ದೆಗಳಲ್ಲಿ 2,500 ಹುದ್ದೆಗಳನ್ನು ಮಾಹಿತಿ ತಂತ್ರಜ್ಞಾನ ಶಿಕ್ಷಕರ ಹುದ್ದೆಗಳಾಗಿ ಪರಿವರ್ತಿಸಲಾಗಿದೆ.
ಈ ಹುದ್ದೆಗಳ ವೇತನ ಶ್ರೇಣಿ 44,425 ರೂ.ಗಳಿಂದ 83,700 ರೂ.ವರೆಗೆ ನಿಗದಿಪಡಿಸಲಾಗಿದ್ದು, ಇದರಿಂದ ಸರಕಾರಕ್ಕೆ ವಾರ್ಷಿಕವಾಗಿ 11.41 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ. 2024ರಲ್ಲಿ 6,117 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಮೀಸಲಾಗಿದ್ದವು. ಈಗ ಅದರಲ್ಲಿ 2,500 ಹುದ್ದೆಗಳನ್ನು ಕಂಪ್ಯೂಟರ್ ಶಿಕ್ಷಕರ ಹುದ್ದೆಗಳಾಗಿ ಪರಿವರ್ತಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.




